Tuesday, February 15, 2011

ನೀ ಬಂದ ದಾರಿ

ನೀ ಬಂದ ದಾರಿಯಲಿ
ಕಲ್ಲುಮುಳ್ಳು ಸಹಿತ ಕೆಂಪು ಮಣ್ಣು
ಮುಂದಡಿಯಿಟ್ಟಲ್ಲಿ
ಹಸಿರೆಲೆಗಳ ನಡುವೆ ಪುಟ್ಟಗೆ ಹಳದಿಯಾಗಿ
ಅರಳಿದ ನೆಲದಾವರೆ,
ಎಡವಿದ ಬೆರಳಿನ ನೆತ್ತರಿನ ಕಿರುಹನಿ
ಕುಂಕುಮದಂತೆ ಹಳದಿಎಸಳ ಸೋಂಕಿ
ಅವಡುಗಚ್ಚಿದ ಮುದ್ದುಬಾಯಿಗಳ
ಕೊನೆಗೆ ಸುಕ್ಕು
ಮಿನುಗು ಕಣ್ಣಂಚಲ್ಲಿ ಹೊಳೆದ ಹನಿಯಲ್ಲಿ
ನೆತ್ತಿಯ ಮೇಲಿನ ಬಿಸಿಲ ಪ್ರತಿಫಲನ
ಕನಸುಗಳೆಲ್ಲ ಹಾದಿಗೂಡಿ ಹೊರಟ
ಪಯಣದಿ ಸಿದ್ದಿಸಿದ ಧನ್ಯತೆ ನೀನೇನಾ?!!
ಬಿರುಬಿಸಿಲ ಬಯಲಲ್ಲಿ ಬೀಸಿದ ತಂಪು
ತಣ್ಣೆಳಲ ನೆಲೆಯಲ್ಲಿ ಮಂಜಾಗುತ್ತ
ಅಸಹನೆಯೆಬ್ಬಿಸುವುದೇಕೋ?
ಬದಲಾವಣೆಯ ಬದುಕಿನ
ನಾಗರಿಕತೆಯ ತೊಟ್ಟಿಲಿನ
ಮಹಿಮೆ ಬಣ್ಣಿಸಲಸದಳ!
ಸಾಕ್ಸು ಸುತ್ತುವರಿದು
ಬಿಳುಪೇರಿದ ಪಾದಗಳ ಆವರಿಸಿದ
ಬ್ರಾಂಡೆಡ್ ಶೂಗಳಲ್ಲಿ
ಎಡವಿ ಬೆರಳೊಡೆಯುವ ಅವಕಾಶವಿಲ್ಲ!
ಹೆಚ್ಚೆಂದರೆ
ನುಣುಪು ಮಾರ್ಬಲಿನಲ್ಲಿ ಜಾರಿಬಿದ್ದು
ಸ್ಪ್ರೈನ್ ಆಗಿ ಒಂದೆರಡು ವಾರ
ಮನೆಯಿಂದ ಕೆಲಸ ಮಾಡಬಹುದು-
ನನ್ನ ಆಹ್ ನಿನಗೆ ಏನೂ ಅನ್ನಿಸದ ಹಾಗೆ.
ನೀ ಬಂದ ದಾರಿ ಅದೇ ಅಲ್ಲಿದೆ
ಗಾಜುಗೋಡೆಗಳಾಚೆ.
ಇಲ್ಲೆ ನಿಲ್ಲುವುದು ಅನುಕೂಲವೇನೋ ನಿಜ
ಆದರೂ..
ಹೋಗಲಿ ಬಿಡು..
ನನ್ನ ಕಂಗಾಲುಗಣ್ಣಿಗೆ ಬೆಳಕ ಹರಿಸಿದ
ಶುಕ್ರತಾರೆಯೇ
ಈಗೇಕೆ ಹೆದರಿಕೆ?
ಆ ಪುಟ್ಟ ಪಚ್ಚೆಮೊಳಕೆ
ಅಷ್ಟು ಚೆಂದಕೆ ಹೊಳೆದಿದ್ದು
ಏರುಹಾದಿಯ ಬೆಟ್ಟತುದಿಯ
ಬಿರುಕು ಕಲ್ಲಿನ ನಡುವೆ
ನಸುಕಿನ ಚಳಿಯ ಚದುರಿಸಿ
ತೂರಿದ ಹೊನ್ನಬೆಳಕಲ್ಲಿ ಅಲ್ಲವೆ!

Wednesday, January 19, 2011

ಅಚಾನಕ್ ಖುಶಿ ಕೊಟ್ಟ ಫೇಸ್ಬುಕ್..!

ಇದ್ದಕ್ಕಿದ್ದಂಗೆ ಒಂದಿನ

ಚಳಿಗಾಲದ ಮಧ್ಯಾಹ್ನ

ಕೀ ಚಿಟುಕಿಸಿ ಜಾಲಕಿಟಕಿ ತೆರೆದರೆ

ಅಲ್ಲಿತ್ತೊಂದು ಕೊಂಡಿ

ಕುತೂಹಲದಿಂದ ಹಿಂಬಾಲಿಸಿ ಹೊರಟರೆ

ಬಂದು ನಿಂತಿದ್ದು ಕೆರೆಶಾಲೆಯ ನೆನಪಿನಂಗಳದಲ್ಲಿ

ಜೊತೆಜೊತೆಗೇ ಬೆಂಚಲ್ಲಿ ಕೂತು

ಎಂದೂ ಮಾತನಾಡಿಸಿರದ

ಆಗ ಅಕಸ್ಮಾತ್ತಾಗಿ ಎದುರು ಸಿಕ್ಕರೆ ನಾಚಿ,ಬೆಚ್ಚಿ, ಇರುಸು ಮುರುಸಾಗಿ

ತಿರುಗಿ ಸಾಗಿದ್ದ ಇಬ್ಬರೂ

ಇವತ್ತು

ಕಳೆದ ಗಂಟನ್ನು ಜೋಪಾನವಾಗಿ

ಎತ್ತಿಟ್ಟಂತೆ,

ಮರೆಯದಂತೆ, ಆಗೀಗ ಸಿಗುವಂತೆ

ಕಳೆದ ಕಾಲದ ಅಸಮಾನತೆಯನ್ನೆಲ್ಲ

ಸಪಾಟಾಗಿಸಿ ಒಬ್ಬರಿಗಿನ್ನೊಬ್ಬರ ಸಿಗಿಸಿ

ಹಳೆ ನೆನಪಿನ ಕೆರೆಯ ಅರಳು ಮೊಗ್ಗುಗಳನ್ನ

ಹರವಿ ಕೂರಿಸಿರುವುದು

ಫೇಸ್ಬುಕ್ಕು ಎಂಬ ಜಾಲಂಗಳ!

ನವೀನ,ರಘುರಾಮ,ದಿನೇಶ,ಶಶಿ..ಪೂರ್ಣಿಮಾ

ಇವರೆಲ್ಲರ ಬೆಂಗಡೆಯಲ್ಲಿ ಅನಾಮತ್ತು ಏಳು ವರ್ಷದ ಬಾಲ್ಯ

ಮತ್ತು ಅದು ಕಟ್ಟಿಕೊಟ್ಟ ಈ ಬದುಕು!

Friday, December 10, 2010

ಹನಿ

ಹಸಿರೆಲೆ ತುದಿ ಮುದ್ದಿಸುವ
ಹನಿ
ಇನ್ನೇನು ಜೀಕಿ ಇಳಿದು
ನೆಲದನ್ನೆಯ ಕೆನ್ನೆ ಸೋಕಿ
ಇಂಗಲಿದೆ
ಕೆಂಪು ಕೆಂಪು
ಧರಣಿಯ ಬಿಸಿಯೊಡಲಲಿ
ಸೋಸಿ ಆವಿಯಾಗಿ
ಮುಗಿಲ ತೆಕ್ಕೆಯ ಸೇರಲಿದೆ
ತಿಳಿಗಂದು ಮೋಡವದು
ಉದಾಸೀನದಲಾ
ಜೀವಸೆಲೆಯ ಹೀರಿ
ನೀಲ ಗಗನದಿ
ಮತ್ತೆ ಬೆಳ್ಳಿಯಂಚು ಹೊದ್ದು
ಕಪ್ಪಗೆ ಮೆರೆದು
ಒಣಗಿ ಉದುರಿದ ಹಳದಿಎಲೆಗೆ
ಅವರ್ಣ
ಕಂಬನಿ ಮಿಡಿದು
ಹಸಿರೆಲೆ ತುದಿಯಲ್ಲಿ
ಮುದ್ದು ಮುದ್ದಾಗಿ ಮತ್ತೆ ಕೂರಲಿದೆ
ಅದ ನೋಡ ನೋಡುತ
ದಿನಗಳು ತುಂಬುತಿವೆ
ಕಾಲನ ಬಿಂದಿಗೆ
ತುಂಬಿ ತುಳುಕಿ ಬರಿದಾಗುತ ಸಾಗಿದೆ
ತುಂಬಿದ್ದೆಲ್ಲ ತುಳುಕಲೆಬೇಕು
ತುಳುಕಿ ಕಳೆಯದೆ
ಹೊಸದು ತುಂಬಲು ಜಾಗವೆಲ್ಲಿದೆ
ತುಂಬಿ ತುಳುಕಿ
ಬಸಿದು ಆವಿಯಾಗಿ
ತುಂಬಿಕೊಳ್ಳುವ ವಿಧಾನವ
ಕಲಿಸುವ ಹನಿಯೇ
ನಿನ್ನ ನೋಡುತ ನೋಡುತ
ನನ್ನ ದಿನಗಳು ತುಂಬುತಿವೆ.

(ಹಸಿರಿನ ಬಣ್ಣದ ಚಿಗುರೆಲೆ ನೋಡಿ ನಲಿದಾಡುವೆ ನೀನು;ಹಳದಿಯ ಬಣ್ಣದ ಹಣ್ಣೆಲೆ ನೋಡಿ ಹನಿಗೂಡುವೆ ನಾನು.. - ಕಣವಿಯರ ಕವಿಸಾಲು ಅಂತ ನೆನಪು. ಸರಿಯಾದ ಮೂಲ ತಿಳಿದಿದ್ದರೆ ತಿಳಿಸಿ.)

Monday, November 22, 2010

ಸಾಗರ್ ಕಿನಾರೇ..

ರಜೆಯಲ್ಲಿ ಊರಿಗೆ ಹೋಗಿದ್ವಿ.ಹೋಗುತ್ತಾ ದಾರಿಯಲ್ಲಿ ಗೆಳೆಯರ ಊರು ಸುತ್ತಿ ಅವರ ಕುಟುಂಬವನ್ನು ಕಂಡು ನಲಿದು, ಗೆಳೆತನದ ಕಿನಾರೆಯಲ್ಲಿ ಒಂದು ಹೊತ್ತು ಕಳೆದು ಹೋದೆವು. ಆ ಸವಿಕ್ಷಣಗಳ ಮೆಲುಕನ್ನು ನನ್ನ ಮಗಳು ಸೃಷ್ಟಿ ಪದ್ಯ ಬರೆದಿದ್ದರೆ ಹೀಗೆ ಬರೆಯುತ್ತಿದ್ದಳೇನೋ ಎಂದು ಅವಳಮ್ಮನ ಕನವರಿಕೆ!

ಫೋಟೋಗಳ ಮುನ್ನೆಲೆಯಲ್ಲಿ ಸೃಷ್ಟಿ, ಅವಳ ಗೆಳತಿ ನೇಹಲ್, ಕಡಲು ಮತ್ತು ದಂಡೆ , ಅಲ್ಲಲ್ಲಿ ಗೆಳೆಯ ರಾಜೇಶ್ ನಾಯಕ್, ಅವರ ಪತ್ನಿ ಲೀನಾ, ಮತ್ತು ನಾನು,ನನ್ನ ಬಾಳಸಂಗಾತಿ. ಫೋಟೋ ತೆಗೆದವರು ನನ್ನವರು ಮತ್ತು ಲೀನಾ.
*******

ನಂಗೆ ಕೊಂಕಣಿ ಗೊತ್ತಿಲ್ಲ,
ನಿಂಗೆ ಕನ್ನಡ ಬರೋಲ್ಲ,
ಆದ್ರೇನಾಯ್ತು ನಮ್ಮಮ್ಮ ನಿಮ್ಮಪ್ಪ ಫ್ರೆಂಡ್ಸ್ ಅಲ್ವಾ,
ನಾವೂ ಆಟ ಆಡೋಣ,
ಜತೆಜತೆಗೇ ನಲಿಯೋಣ.
ನನ್ ಬಾಲ್ ತಗೋಬೇಡಾ ನೀನು
ನಿನ್ ಸೈಕಲ್ ತಗೋತೀನಿ ನಾನು -
ಸರಿ ಜಗಳ ಮುಗೀತೀಗ,
ಬಾ ಸುತ್ತು ತುಳಸಿಯ ಕಟ್ಟೆ,
ಕೆಮೆರಾಕ್ಕಿದೋ ಫೋಸ್ ಕೊಟ್ಟೆ!
ಅಂಬಲಪಾಡಿಯ ರಸ್ತೆಯಲ್ಲಿಳಿದ
ಬೈಕಿನ ದಾರಿ ಕಡಲಿನ ತಡಿಗೆ..
ಹೂಡಿಬೆಂಗ್ರೆಯ ಮರಳಿನಂಗಳದೆಡೆಗೆ
ನಿಮ್ಮನೆ ಹಿತ್ತಲ ಸಮುದ್ದದ ನೀರು
ಉಲಿಯುತಲಿಹುದು ಲುಲುಲುಲುಲು...



ಈ ಸಲ ನೀರು ಮೊಣಕಾಲ್ ನೆಕ್ಕಿತು,
ಮತ್ತಿದೋ ಈಗ ಸೊಂಟದ ನೇರ,
ಆಆಆಅ ಈಗ ಕುತ್ತಿಗೆ ಮುಚ್ಚಿ,
ಬಾಯಿ ತುಂಬ ಉಪ್ಪಿನ ರುಚಿ.

ಬಂದೂ ಬಂದೂ ಕಾಲನು ತೋಯಿಸಿ
ಮರಳುವ ನೀರು ಎಷ್ಟುಳಿದಿದೆ
ತಿಳಿಯಲು ಎಂದು ಮುಳುಗಲು ಹೊರಟ
ಸೂರಿಯಾ ಮಾಮ.


ಜತೆಗೇ ತೇಲುತ
ನಾವೆಯ ಹಾಯಿ,
ಸುತ್ತಲು ಹಾರುವ ಹಕ್ಕಿಯ ಸಾಲು,
ಓ... ಚಂದದ ಊರಿದು,
ಚಂದದ ಕಡಲು.



ಅಮ್ಮ ಅಂತಾಳೆ ಕತ್ತಲಾಯಿತು,
ಮಾಮ ಹೇಳಿದ್ರು ಹೋಗುವ ಬನ್ನಿ,
ಅಪ್ಪ ಇನ್ನೂ ಕೆಮೆರಾ ಹಿಂದೆ.



ಕತ್ತಲೆ ಕವಿಯಲು ಬೆಳಕೇ ಇಲ್ಲ,
ದಂಡೆಯ ಮೇಲೆ ಏಡಿಯ ದಂಡು,
ಅಲ್ಲೆಲ್ಲೋ ಕೆಂಪಿ ಕಣ್ಣು,
ಅಮ್ಮ ಯಾಕೋ ಹೆದರ್ಸುವಳಲ್ಲ,
ಹೋಗಲಂತೂ ಮನಸೇ ಇಲ್ಲ,
ಕರೆವುದು ನೀರು ಇನ್ನೂ ಆಡು.
ನಾಳೆ ಬರುವುದು ನಿಜನಾ ಸುಳ್ಳಾ?

ಉಡುಪಿಯಲಿರುವನು ಕಡಗೋಲ್ ಕಿಶ್ಣ
ರಾಧೆಯೇ ಇಲ್ಲದೆ
ಒಬ್ಬನೆ ಪಾಪ,
ನೀಡಲು ಕಾಸು
ಸೊಂಡಿಲು ಇಡುವ
ಮಠದಾ ಆನೆ,
ಕೊಟ್ಟಿಗೆಯೊಳಗೆ
ಅಂಬಾ ಬೂಚಿ, ಪುಟ್ಟೀಕರ,
ಗೆಳತಿಯ ಮನೆಯ
ಹಿತ್ತಲ ದಂಡೆಲಿ
ಮೊರೆಯುವ ಕಡಲು..
ಹೀಗಿದೆ ನನ್ನ ಉಡುಪಿಯ ಪಯಣ-
ಏನೇ ಆದರೂ ಎಲ್ಲೇ ಹೋದರೂ
ನೆನೆವುದು ಮನವು ಸಮುದ್ದವನ್ನೆ
ಅಲೆಅಲೆಅಲೆಯೂ
ಲುಲುಲುಲುಲುಲು
ಎಂದುಲಿಯುತ ಕರೆವುದು ನನ್ನನ್ನೆ!

ಬಿಡುವೆನೆ ನಾನು, ಬರುವೆನು ಮತ್ತೆ,
ಕಾಯುತಲಿರು ನೇವಲ್ ನೀನು, (ಹ ಅನ್ನಲು ನಾಲಿಗೆ ಹೊರಳೋಲ್ಲ. ಗೆಳತಿಯ ಹೆಸರು ನೇಹಲ್!)
ಕೊಂಕಣಿಯನು ಕಲಿಯುವೆ ನಾನು,
ಕನ್ನಡವ ಕಲಿತಿರು ನೀನು ,
ಆಡುವ ಮತ್ತೆ ಮರಳತೀರದಲಿ,
ನೀರನು ಎರಚಿ ಕಾಲನು ಮುಳುಗಿಸಿ
ಕೈಕೈಹಿಡಿದು ಅಲೆಯುವ ನಾವೂ ಅಲೆಗಳ ಜತೆಗೆ !

ಬಂದೇ ಬರುವಳು ಗೆಳತಿಯು ಮತ್ತೆ
ಕಾಯಲೆ ಬೇಕು ನೋಡು ಮತ್ತೆ!
"ಬಾಇಲ್ಲಿ" ಎನ್ನಲು ನೀನು
" ಆಯಿಲೋ "ಎನ್ನುತ ಬರುವೆನು ನಾನು
ಬೆಂಗಳೂರಿಗೆ ವಾಪಸ್ ಬಂದು
ಕರೆಯುವೆ ನಿನ್ನ "ಹಂಗ್ಯೋ" ಎಂದು.

Monday, October 25, 2010

ಮಹೇಶ ಇನ್ನು ನೆನಪು!!


ಬದುಕಿಗೆಷ್ಟೊಂದು
ಭಾಷ್ಯ ಬರೆಯಬಹುದು..
ಇದು ಇದೇ, ಇದು ಇದಲ್ಲ
ಎಂಬ ತರ್ಕವ ಮಣಿಸಿ, ಜಯಿಸಿ,
ನಾಳೆಯು ನನ್ನದೆಂಬ
ಭರವಸೆಯ ಬೆನ್ನತ್ತಿ
ಇಂದು ಕನಸಿನಲ್ಲಿ ಜಾರುತ್ತಾ
ಆಹ್
ಸಾವಿಗೊಂದೇ ಸಾಲು
ತರ್ಕಕ್ಕೆ ಮೀರಿದ್ದು
ಚರಮಗೀತೆ.
ಕುವೆಂಪುರ ವಾಲಿಯೆಂದ ಮಾತಿನ ನೆನಪು
ಸಾವ್ ಗಾಳಿ ತೂರಲರಿವಪ್ಪುದಯ್...
ನಾವು ಗಟ್ಟಿಯೆಂದರಿತುದು ಜೊಳ್ಳು
ಜೊಳ್ಳೆಂದರಿತುದೇ ಗಟ್ಟಿ!

ಆತ್ಮೀಯ ಮಹೇಶನಿಗೆ ಕೊಡದೆ ಉಳಿದ ಅಪ್ಪುಗೆಯೊಂದಿಗೆ, ಆಡದೆ ಉಳಿದ ಮಾತುಗಳೊಂದಿಗೆ, ಹಂಚಿಕೊಳ್ಳದೆ ಉಳಿದ ನಗೆಯೊಂದಿಗೆ, ನಮ್ಮೆಲ್ಲ ನಲ್ಮೆಯ ಕ್ಷಣಗಳನ್ನು ತೋಯಿಸಿಯೇ ತೀರುವೆನೆಂಬ ಹಟ ತೊಟ್ಟಿರುವ ದುಃಖದೊಂದಿಗೆ ಈ ಸಾಲುಗಳ ಅರ್ಪಣೆ.

ಮಾತೆತ್ತಿದ್ದರೆ ಮನೆಗೆ ಕರೆವವರು
ಉಂಡು ಹೋಗಿರೆಂದವರು
ಚಟುವಟಿಕೆಗೆ ಕೊನೆಮೊದಲಿಲ್ಲದವರು
ಮಲಗಿದ್ದಾರಿಲ್ಲಿ ಮಿಸುಕಾಡದೆ
ಕಣ್ಣು ಮುಚ್ಚಿಹರಂತೆ,
ಚೈತನ್ಯಶೀಲ ಬದುಕಿನ
ದಾರಿಯದು
ಇದ್ದಕಿದ್ದಂತೆ ತುಂಡರಿಸಿ
ಆವರಿಸಿತೆಲ್ಲ ಮೌನ,ಕತ್ತಲು,ಜಡತೆ, ಸಾವು
ಇದು ಅನ್ಯಾಯ.
ಚಂದ ಚಿತ್ರವ ಕೊರೆದು ಕತ್ತರಿಸಿ
ಫ್ರೇಮಲ್ಲಿಟ್ಟು ಕೊಟ್ಟ ಕೈಗಳ
ಕಟ್ಟಿ ಮಲಗಿಸಿ ಚೌಕಟ್ಟಿ-
ನೊಳಗೆ ನೂಕಿದ ವಿಧಿಯೆ
ಇದೂ ಒಂದು ವಿಧಾನವೆ?

ನೋವು,ಶೂನ್ಯಗಳಲ್ಲಿ ಮುಳುಗಿರುವ ಅವನ ಕುಟುಂಬಕ್ಕೆ ಧೈರ್ಯ ಮತ್ತು ಸ್ಥೈರ್ಯವನ್ನು ಬಯಸುತ್ತಾ
ಪ್ರೀತಿಯಿಂದ,
ಸಿಂಧು

Friday, October 15, 2010

ಅಂಗೈಯಲ್ಲಿನ ನಕ್ಷತ್ರ

ಮಬ್ಬುಗತ್ತಲ ಇಳಿಸಂಜೆ
ಪುಟ್ಟಕಣ್ಣಿನ ದೀಪ
ಸೊರಗಿದ್ದೂ ಸೊಗಯಿಸಿದ
ಬಿಳಿಬಿಳಿ ಅಂಗೈಯನ್ನು
ನಿನ್ನ ತಿಳಿಗೆಂಪು ಬೆರಳುಗಳ
ಮಿಂಚಲ್ಲಿ ತೋಯಿಸುತ್ತ
ಅಂದೆ ನೀನು
ತಾರಗೆಯೊಂದು ಬಿದ್ದಿಹುದು
ಅಂಗೈಯೊಳಗೆ
ಆ ಕ್ಷಣದ ರಮ್ಯತೆಗೆ
ಅದರೊಳಗಣ ಆರ್ದ್ರತೆಗೆ
ಅರಳಿದ ಭಾವ
ಧನ್ಯತೆಯೊಂದೇ
ಇಳಿಸಂಜೆಗಳ ಕಾಲವಳಿದು
ರಾತ್ರಿಕಳೆದು
ಮುಂಜಾವಗಳು ನಿದ್ದೆಯಲ್ಲಿಳಿದು
ಈಗ ಬಿರುಬೇಸಗೆಯ ಹಗಲು

ಬಾನೆದೆಯ ಕತ್ತಲಲ್ಲಿ ಮಿನುಗುವ ತಾರಗೆಯ
ನೋಡಿ
ಬೆಳಕಿನ ಲೋಕದ ಅಂಗೈಗೆ
ಬಿದ್ದವಳ ನೆನಕೆ,
ಮಿಂಚು ಹೊಳೆವುದೇ ಕತ್ತಲಲ್ಲಿ
ನೆರವೇರಿದ್ದ್ದಕ್ಕಿಂತಲೂ
ನಿರೀಕ್ಷೆಯಲ್ಲೇ ಸುಖ
ಎಲ್ಲ ನವ್ಯ ನವ್ಯೋತ್ತರಗಳಿಗೂ
ಅಡಿಗರ ಮೋಹನ ಮುರಳಿಯದೇ ಭಾಷ್ಯ!

ಸುಯ್ದು ನಿಟ್ಟುಸಿರು
ಸೋತ ಕತ್ತನ್ನ ಹಗೂರ ಎತ್ತುತ್ತ
ಕಣ್ದೆರೆದರೆ
ಮಳೆನಿಂತ ಕಪ್ಪುನೀಲಿ ಬಾನೊಡಲಲಿ
ಹೊಳೆ ಹೊಳೆವ ತಾರೆ
ರಸ್ತೆಯಂಚಲಿ
ಘಮಘಮಿಸಿ ಇಳಿಬಿದ್ದ
ಆಕಾಶ ಮಲ್ಲಿಗೆ!