Saturday, June 18, 2016

ಯಾವುದು ಬೇಕೋ ಅದು ಬೇಡ.

ಪುಡಿಯಾದರೆ, ಮುಂದೆ ದಾರಿ,
ಇಲ್ಲದೆ ಇದ್ದರೆ ದರಿ -
ಎಂದ ಹಾಗಿತ್ತು ಅವರು;
ಅಥವಾ ನನಗೆ ಹಾಗೆ ಕೇಳಿದ್ದಿರಬಹುದು;
ಯಾವುದನ್ನೂ ಹಚ್ಚಿಕೊಳ್ಳದ ನನಗೆ
ಈ ಮಾತ್ಯಾಕೋ ಪಥ್ಯವಾಗಿ
ಪುಡಿಯಾಗುವ ಹಂಬಲ.
ಆದರದು ಬರಿಯ ಹಂಬಲ,
ಚಂಚಲ,
ಎಚ್ಚರದ ನಡೆ ಎಡಬಲ.

ಪೆಟ್ಟು ಬಿದ್ದಾಗಲೆಲ್ಲ
ಮುಲುಗುಟ್ಟುವ ಕಲ್ಲು,
ಪುಟಿದೇಳುವ ಸಿಟ್ಟು,
ಕುಟ್ಟಬಹುದೆ ಹೀಗೆ?!
ಹೇಳಬಹುದೆ ಹಾಗೆ?!
ಅಡ್ರಿನಲೈನ್ ಸ್ರಾವ
ಕಡಿಮೆಯಾಗುತ್ತಾ ಬಂದ ಹಾಗೆ
ಇನ್ನೊಂಚೂರು ಗಟ್ಟಿ ಕುಟ್ಟಲೇನಾಗಿತ್ತು ಧಾಡಿ
ಕಬ್ಬಿಣ ಕಾದಾಗಲೆ ಬಡಿ
ಪುಡಿಗಟ್ಟಿಸಲೆಂದೆ ಕಟ್ಟಿದ ಜೋಡಿ
ಇರಬಹುದೆ ಇದೇ ಗುರುವಿನ ಮೋಡಿ
ಅಂತೆಲ್ಲ ಅನ್ನಿಸುತ್ತದೆ..

ಆದರೇನು..
ಬಿಟ್ಟ ಬಿರುಕು ಕೂಡಿ
ಕಲ್ಲು ಮೊದಲಿಗಿಂತ ಗಟ್ಟಿ
ಮತ್ತೊಂದು ಪೆಟ್ಟಿಗೆ
ಇನ್ನಷ್ಟು ತೀಕ್ಷ್ಣ ಪ್ರತಿಕ್ರಿಯೆ
ಎಷ್ಟೇ ಒಡ್ಡಿ ಕೊಳ್ಳ ಬಯಸಿಯೂ
ಬಯಲಿಗೆ ಬಿದ್ದ ಕೂಡಲೆ
ಕಾಪಿಟ್ಟುಕೊಳ್ಳಲು ಬಯಸುವ
ಶತಶತಮಾನದ ಕ್ರಿಯೆ ಮತ್ತು ಕರ್ಮ-
ಒರಟಾಗಿದೆಯೆಂದು ಭಾವಿಸಿರುವ ಸೂಕ್ಷ್ಮ ಚರ್ಮ.

Wednesday, June 15, 2016

ಸ್ಥಾವರವೇ ಜಂಗಮವಾದ ಹಾಗೆ...

[[ಈಗೆರಡು ವಾರಗಳ ಹಿಂದೆ ವಿಶ್ವವಾಣಿಯ ವಿರಾಮ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ ]]

ಕೂಊಊಊಊ ಚುಕ್ ಚುಕ್..ಕೂಊಊಊಊಊಊಊಊಊ ಚುಕ್ ಚುಕ್...ಬರುತಿದೆ ರೈಲು. ಚುಕುಬುಕು ಚುಕುಬುಕು
ಅಕ್ಕನ ಸೊಂಟಕ್ಕೆ ಕಟ್ಟಿದ ಅಮ್ಮನ ವೇಲು ಹಿಡಿದು ಅವಳ ಹಿಂದೆ ವೃತ್ತದಲ್ಲಿ ಸುತ್ತುವ ಪುಟಾಣಿ ಪುಟ್ಟ. ಅಲ್ಲಲ್ಲಿ ಕುಳಿತಿರುವ ಪುಟ್ಟ ಗೆಳೆಯ ಗೆಳತಿಯರು ಅವರವರ ನಿಲ್ದಾಣದಲ್ಲಿ ಹತ್ತುತ್ತಿರುವರು. ಮಧ್ ಮಧ್ಯೆ ಸಿಳ್ಳೆ... ಒಂದೆರಡು ಸುತ್ತು ಸುತ್ತುವಷ್ಟರಲ್ಲಿ ಒಂದಿಬ್ಬರು ಮರಿ ಪ್ರಯಾಣಿಕರಿಗೆ ತಲೆ ಸುತ್ತಿ ನಿಲ್ದಾಣ ಬರುವ ಮುಂಚೆಯೆ ಇಳಿದು ಕುರ್ಚಿಯ ಮೇಲೆ ಸುಮ್ಮನೆ ಕೂತು ಮುಂದಕ್ಕೆ ಮುಂದಕ್ಕೆ ಸುತ್ತುತ್ತಿರುವ ಬಂಡಿ ನೋಡುತ್ತಿರುವರು. ತಮ್ಮನು ರೈಲ್ ಎಕ್ಸ್ ಪರ್ಟ್ ಆಗಿದ್ದರಿಂದ ಇದೊಂದು ಆಟಕ್ಕೆ ಅವನೇ ಇಂಜಿನ್... ಅಕ್ಕನದ್ದು ಬರೀ ಕೂಊಊಊಊಊಊಊ ಸಿಳ್ಳೆ ಹಾಕುವ ಕೆಲಸ. ಇದನ್ನೆಲ್ಲ ಅಡಿಗೆ ಮನೆಯಿಂದ ನೋಡುತ್ತಿರುವ ಅಮ್ಮನಿಗೆ ನೋಟದ ಸವಾರಿಯ ಮಜ. ಮಕ್ಕಳ ಸಿಳ್ಳೆಗೆ ಕುಕ್ಕರ್ ಸಾತ್ ಕೊಟ್ಟು ಮುಗಿಸಿದ ಮೇಲೆ ಈಗೊಂದಿಷ್ಟು ಹೊತ್ತು ಒಳಪಯಣದ ಹೊತ್ತು.

ಹೊರಗೆ ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು.. ಪುಟಾಣಿ ರೈಲು,
ಒಳಗೆ ಶ್...... ಮಹಾಪಯಣ:

ಪಕ್ಕಕ್ಕೇ ಹರಿದು ಜತೆಗೆ ಕೂಡದ, ನೋಡಿದಲ್ಲಿ ಶುರುವಾಗಿ.. ನೋಡಲಾಗದೆಡೆಯವರೆಗೂ ಹರಿದಿರುವ ರೇಲ್ವೆ ಹಳಿಗಳು ಅನಂತವಾಗಿ ಹಬ್ಬಿ ಮಲಗಿವೆ. ಕಂಡ ನೋಟಗಳು, ನಿಲ್ಲದ ನಿಲ್ದಾಣಗಳು, ಬದಲಿಸಿದ ದಾರಿಗಳು, ಕಾಯ್ದು ನಿಂತ ಕೈಮರ, ಕಾದ ಎಂಜಿನ್ನಿಗೆ ನೀರು ತುಂಬುವ ನಿಲ್ದಾಣದಾಚೆಯ ಟ್ಯಾಂಕು, ಆನೆಸೊಂಡಿಲ ಪೈಪು.. ದಿನವೂ ನೋಡಿಯೂ ಅಷ್ಟೇನೂ ಪರಿಚಯವಿಲ್ಲದ ಸ್ಟೇಷನ್ ಮಾಸ್ಟರುಗಳು..ನಿಲ್ದಾಣದ ಕೊನೆಯ ಕಲ್ಲುಚೌಕದ ಮೇಲೆ ಬಾವುಟ ಹಾರಿಸುತ್ತ ನಗೆಸೂಸುವವರು, ಎಲ್ಲೋ ಬೆಟ್ಟತಿರುವಿನ ಹಾದಿಯಲ್ಲಿ ಅಚಾನಕ್ಕಾಗಿ ಕೆಂಪುಬಾವಟಗಳ ಅಡ್ಡವಿರಿಸಿ ಹಳಿ ಜೋಡಿಸುತ್ತಿರುವ ಲೈನುಮನ್ನುಗಳು, ಹತ್ತಿರಹತ್ತಿರವಾಗುತ್ತಿದ್ದ ಹಾಗೆ ಓಡಿಬಂದು ಪಥ ಬದಲಿಸುತ್ತಿರುವ ಜಂಕ್ಷನ್ ಸಿಬ್ಬಂದಿ, ಹರಿಯುತ್ತಿರುವ ಪುಟ್ಟ ಹಳ್ಳದಾಚೆಯ ಗದ್ದೆ ಬದುವಿನ ಮೇಲೆ ಕಾದು ಕೂತು ಕೈಯಾಡಿಸುತ್ತಿರುವ ಯಾವಯಾವದೋ ಊರಿನ ಮಕ್ಕಳು, ಟ್ರ್ಯಾಕಿನ ಬದಿಯಲ್ಲಿರುವ ಮೈದಾನದಲ್ಲಿ ಕ್ಷಣ ಮಾತ್ರಕೆ ಆಟ ಸ್ತಬ್ಧವಾಗಿ ಓಡುತ್ತಿರುವ ಬಂಡಿನ್ನೇರಿದ ನೋಟಗಳು, ಊರದಾರಿಯ ಕತ್ತರಿಸಿ ಓಡುವಲ್ಲಿ ಗೇಟು ತೆರೆಯುವುದನ್ನೇ ಕಾಯುತ್ತ ನಿಂತ ಪಥಿಕರು, ಸವಾರರು, ದೂರ ದಾರಿಯ ಸುಸ್ತಿನ ಕೈಯನ್ನು ನೀವಿಕೊಳ್ಳುತ್ತ ಕುಂತ ಲಾರಿಚಾಲಕರು, ತೆರೆದ ಕೂಡಲೆ ನುಗ್ಗಲು ಹಾದಿಹುಡುಕುತ್ತಿರುವ ಧಾವಂತ ಲೋಕದ ಮಂದಿ, ಬೆಳಗಾತ ಹಳಿಯ ಬಳಿ ಪ್ರಾಕೃತಿಕ ಕರೆ ಮುಗಿಸಿ ಒರೆಸಿಕೊಂಡು ಹೋಗುತ್ತಿರುವ ಜನಸಾಮಾನ್ಯರು, ಗೇಟಿರದ ಲೆವೆಲ್ ಕ್ರಾಸಿಂಗಿನ ಬಳಿ ದೂರಕ್ಕೆ ಕಣ್ಣು ನೆಟ್ಟು ಅಂದಾಜಿನ ಮೇಲೆ ದಾಟುತ್ತಿರುವ ಪಯಣಿಗರು, ಯಾವಾಗಲೋ ಒಂದೊಂದು ಸಂಜೆ ಅಥವಾ ಬೆಳಿಗ್ಗೆ ಈ ಲೋಕದ ಪಯಣ ಸಾಕೆಂದು ಹಳಿಗೆ ಬೆನ್ನುಕೊಟ್ಟು ಚೂರಾದವರು, ಉದೂದ್ದಕ್ಕೆ ಹರಿದ ಕಬ್ಬಿಣದ ಹಳಿಗೆ ಜೊತೆಯಾಗಿಯೋ ಸಡ್ದು ಹೊಡೆದೋ ತೊನೆಯುತ್ತಿರುವ ಹಸಿರು ತೆನೆ ಗದ್ದೆಗಳು, ಗುಡ್ಡದೆದೆ ಬಗೆದು ಬಾಯ್ ತೆರೆದು ಕುಳಿತ ಸುರಂಗಗಳು, ಕೆಳಗೆ ನೋಡಿದರೆ ತಲೆತಿರುಗುವ ಹಾಗಿನ ಉದೂದ್ದ ಸೇತುವೆಗಳ ಕೆಳಗೆ ಎಲ್ಲ ರಭಸಕ್ಕೂ ಸವಾಲೊಡ್ದುವ ನದೀರಾಣಿಯ ಹರಿವು, ಬ್ರಿಟಿಷ ಕಾಲದಿಂದಲೂ ಹಳಿ ಹೊತ್ತು ನಿಂದ ಹಳೆ ಹಳೆ ಸೇತುವೆಗೆ ಬಿಳಿ ಸುಣ್ಣ ಹೊಡೆಯುತ್ತಿರುವವರು...ಕಿಟಕಿಬದಿ ಸೀಟಲ್ಲಿ ಹಟ ಮಾಡಿ ಕುಳಿತವಳ ಕುಳಿರು ಕೆದರಿ, ಎದುರುಗಾಳಿಗೆ ಕಣ್ಣು ಕೆಂಪು. ಪಕ್ಕದಲಿ ಇರುವವರ ಪರಿವೆಯಿಲ್ಲ.. ಕಣ್ಣು ಮನಸ್ಸು ಎರಡೂ ಪಯಣವೇ ಆದ ಹಾಗಿದೆಯಲ್ಲ. ಕೂಊಊಊಊಊಊಊಊಊಊ ಚುಕ್. ಚುಕ್. ಇದೇನೋ ಯಾರೋ ಚೈನು ಜಗ್ಗಿದ ಹಾಗೆ... ಅಮ್ಮಾ ಸ್ಟೇಶನ್ನಿಗೆ ಬಂದಿದೀವಿ ತಿಂಡಿ ಕೊಡಮ್ಮಾ...ಚೂಡಿಯ ಜಗ್ಗುತ್ತಿರುವ ಮಕ್ಕಳು. ಪಯಣಕೊಂದು ತಾತ್ಕಾಲಿಕ ನಿಲುಗಡೆ ಅಥವಾ ಪಯಣವೋ ನಿಲುಗಡೆಯೋ ತಿಳಿಯದ ಹಾಗೆ..ಡಬ್ಬಿಯೊಳಗಿಂದ ಚಕ್ಕುಲಿ ತೆಗೆಯುವ ಬಂಗಾರವಿಲ್ಲದ ಬೆರಳು, ಹಾಲು ಹದಮಾಡಿ ಲೋಟಕೆ ಹನಿಸುವ ತಾಯಿ ಕರುಳು.

ಈ ರೈಲು ಮತ್ತು ಪಯಣ ಧ್ವನಿಸುವ ಅನಂತ ಸಾಧ್ಯತೆ, ಸಾಮ್ಯತೆ ಮತ್ತು ಉಪಮೆಗಳನ್ನ ನೋಡುತ್ತ ಕೂತರೆ ಎಂತಹ ಯಾಂತ್ರಿಕ ಅವಿಷ್ಕಾರವೊಂದು ಮನುಷ್ಯ ಸಮುದಾಯದ ಇರವನ್ನು ಪ್ರಭಾವಿಸಿದ ಪರಿ...ಗಡಿ,ಮಿತಿಗಳನ್ನು ಮೀರಿ ಪ್ರಭಾವಿಸಿದ ಪರಿ ಅಚ್ಚರಿ ಹುಟ್ಟಿಸುತ್ತದೆ. ಭೌಗೋಳಿಕ ಗಡಿ ವಿಸ್ತಾರದಲ್ಲೂ.. ಮಾನಸಿಕ ಪಯಣದ ಹಾದಿಯಲ್ಲೂ.. ಈ ರೈಲು ನೀರೊಳಗಿದ್ದೂ ನೀರುಮುಳುಗದ ಕಮಲದ ಒಲು..ನಿಲ್ದಾಣಗಳಿಗಾಗೆ ಓಡುತ್ತಲೇ ಎಲ್ಲಿಯೂ ನಿಂತುಬಿಡದ ಸ್ಥಾವರವೇ ಜಂಗಮವಾದ ಒಂದು ಅದ್ಭುತ ರೂಪಕವೆನಿಸುವುದಿಲ್ಲವೇ ನಿಮಗೆ.
ದಕ್ಷಿಣ ರೇಲ್ವೆಯ ತುತ್ತತುದಿಯ ಪುಟ್ಟ ಊರಿನ ಕೊನೆ ನಿಲ್ದಾಣದ ಅಂಗಳದಲ್ಲಿ ಕಳಿಸಿಕೊಟ್ಟ ರೈಲು ಭಾರತದುದ್ದಕ್ಕೂ ಕಾವೇರಿಯ ಮೇಲಾಸಿ, ಗೋದಾವರಿಯವರೆಗೂ.. ಅಕೋ ಅದನೂ ದಾಟಿ ಬ್ರಹ್ಮಪುತ್ರೆಯ ಮೇಲೂ..ಓಡಾಡಿ ಬರುತ್ತದೆ. ಎಡಕುಮೇರಿಯ ಸ್ವರ್ಗಸದೃಶ ಕಣಿವೆಯಲ್ಲಿ ಓಲಾಡಿ ಸರಿಯವ ರೈಲು ಬಯಲು ನಾಡಿನ ಭತ್ತಗದ್ದೆಗಳ ನಡುವೆ ನಾಗಾಲೋಟ, ಕಡಲ ತೀರದ ಗುಂಟ ಭೋರ್ಗರೆದು ಸಾಗುತ್ತ, ಕಲ್ಲು ಬೆಟ್ಟಗಳ ಸುರಂಗದಾರಿಯಲ್ಲಿ ಭಾರೀ ದಂಶಕದ ಹಾಗೆ ತೊನೆತೊನೆದು ಹೋಗುವುದು. ಭರತಖಂಡ ತೀರ್ಥಯಾತ್ರೆಯ ಸಾರ್ಥಕ ವಾಹನವಾದ ರೈಲೇ, ತುರಂತ ವೇಗದಲ್ಲಿ ದೂರದೂರಿನ ಬದುಕನ್ನ ಇನ್ನೊಂದೂರಿನ ಅನ್ನದ ತಟ್ಟೆಗೆ ಸೇರಿಸಿ ನೇಯುತಿರುವುದು. ಮಹಾರಾಜರ ಪಯಣಕ್ಕೆ ಸುಖವಾಸಿನಿ ಸುವರ್ಣವಾಹಿನಿ ರೈಲೇ, ದಿನದಿನದ ಪ್ಯಾಸೆಂಜರು ಗೂಡ್ಸ್ ಗಾಡಿಯೂ ಹೌದು. ಹೆಸರು ಮರೆತು ಮಲಗಿದ ಊರುಗಳನೆಲ್ಲ ರಾಷ್ಟ್ರವ್ಯಾಪೀ ಮ್ಯಾಪಿನಲ್ಲಿ ಒಂದು ಚುಕ್ಕಿಯಾಗಿಸಿದ ರೈಲುದಾರಿ...ಕೆಲವೊಮ್ಮೆ ಬೆಳಗ್ಗೆ ಮುಂಚೆ ಇನ್ನೂ ಪೂರ್ತಿ ಕಣ್ಣು ಬಿಟ್ಟಿರದೆ ಅಪ್ಪ=ಅಮ್ಮನ ಅಚ್ಚೆಯಲಿ ಯುನಿಫಾರ್ಮ್ ಸಿಕ್ಕಿಸಿಕೊಂಡು ಶಾಲೆಗೆ ಹೊರಟ ಮಕ್ಕಳವಾಹನದ ಮೃತ್ಯುದೂತನಾಗಿದ್ದೂ ಉಂಟು. ಯಾರೋ ವಿಧ್ವಂಸಕರ ರೋಷದ ಬೆಂಕಿಗೆ ಸುಟ್ಟು ಕರಕಲಾಗಿದ್ದೂ ಉಂಟು.ಗಡಿ ದಾಟಿ ಹೊರಟ ಯಾತ್ರೆಯ ಅನಿಶ್ಚಿತ ಪಯಣದ ಹರಿಕಾರ ರೈಲು. ಚರಿತ್ರೆಯ ಪುಟಗಳ ರಕ್ತಸಿಕ್ತ ದಾರಿಯ ಪಯಣದ ಗಾಯವಿನ್ನೂ ಹಸಿಯಾಗಿಯೇ ಉಳಿದರೂ ಇದು ಸುರಗಂಗೆಯ ದಡದ ಕಾಶೀಯಾತ್ರೆಯ ವಾರ್ಧಕ್ಯ ಸಾರ್ಥಕ್ಯದ ರೈಲು. ಹೊಸ ದಾರಿಗಳ ತೆರೆದು ಸಾಗುವ ಬದುಕಿನ ಮಹಾದ್ವಾರದೊಳಗೆ ದಿನದಿನವೂ ತೂರುವ ರೈಲು.

ಹೀಗೆಲ್ಲ ನಿಜದಲ್ಲಿ, ಬರಿದೆ ಅಂದುಕೊಳ್ಳುವುದರಲ್ಲಿ, ನಿಜವಲ್ಲದಲ್ಲಿ, ತೋರುಗಾಣಿಕೆಯಲ್ಲಿ, ದಪ್ತರಗಳಲ್ಲಿ, ಸಿಗ್ನಲುಗಳಲ್ಲಿ, ಸಿಗ್ನಲ್ ಬೀಳುವುದಕ್ಕೆ ಕಾಯುವುದರಲ್ಲಿ.. ಪಯಣ ಮತ್ತು ಬಂಡಿಯ ತೆಳು ಗೆರೆ ಅಳಿಸಿದಂತೆ ಅನಿಸುವಲ್ಲಿ...ಓಡುತ್ತಿರುವ, ನಿಂತಿರುವ ಮತ್ತೆ ಹೊರಡಲು ಕಾಯುತ್ತಿರುವ ಪಯಣ ಸನ್ನದ್ದ ರೈಲುಗಳು ಕವಿಗಳ ಸಾಹಿತಿಗಳ, ಸಿನಿಮಾಗಳ ಮೂಸೆಯಲ್ಲಿ ಪರಿಪರಿಯಾಗಿ ಬಂದಿದೆ. ಈ ನಿಜಲೋಕದ ಓಟದ ಬಂಡಿ ಕಲ್ಪನೆಯ ಪಯಣಕ್ಕೂ ಸೈ. ಓದಿನ ಪಯಣಕ್ಕೂ ರೈಲಿಗೂ ಎಡೆಬಿಡದ ನಂಟು. ಅದಕ್ಕೇ ಮರುದನಿಸುತ್ತದೆ ಚುಕ್ಕು ಬುಕ್ಕು. ಚುಕ್ಕು ಬುಕ್ಕು.

ಹಲವು ಜನಪ್ರಿಯ ಸಿನಿಮಾಗಳ ಪ್ರೇಮ ರೈಲಿಗೆ ಕೃತಜ್ಞವಾಗಿರುತ್ತದೆ. ಹುಡುಗಿಯನ್ನ ಪಟಾಯಿಸುವುದಕ್ಕೂ, ಹಾರಿಸಿಕೊಂಡು ಹೋಗುವುದಕ್ಕೂ, ಕೈ ಬೀಸಿ ಕಣ್ತುಂಬಿ ಹೊರಡುವುದಕ್ಕೂ.. ಕಾಯುತ್ತ ನಿಲ್ಲುವುದಕ್ಕೂ.. ಅಚಾನಕ್ ಜಂಕ್ಷನ್ ಭೇಟಿಗಳಿಗೂ ರೈಲು ಮತ್ತು ನಿಲ್ದಾಣಗಳೇ ಆಸರೆ. ಆಂಗ್ರಿ ಯಂಗ್ ಸಿನಿಮಾಗಳೆಲ್ಲ ಒಂದು ಕಾಲದಲ್ಲಿ ಶುರುವಾಗುತ್ತಿದ್ದೇ ರೈಲ್ವೇ ಸ್ಟೇಷನ್ ಫೈಟಿಂಗಿಂದ ಅಥವಾ ಮುಗಿಯುತ್ತಿದ್ದಿದ್ದದ್ದು ಓಡುವ ರೈಲಿನ ಮೇಲಿನ ಫೈಟಿಂಗುಗಳಿಂದ. ರೈಲು ಬಿಡದೆ ಸಿನಿಮಾ ಓಡುವುದಾದರೂ ಹೇಗೆ ಅಲ್ಲವೆ?

ತಾಯಿ-ಮಗಳ ಮಾತುಕತೆ ಬೀಳ್ಕೊಡುಗೆಯಲ್ಲಿ ಜನಪದವನ್ನೇ ಕಟ್ಟಿಕೊಟ್ಟ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳಲ್ಲಿ ಮರುಕಳಿಸುವ ರೂಪಕವಾದ ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ ಮೈಸೂರ ಸೇರುವುದ ಎಲ್ಲರೂ ಬಲ್ಲರು. ಪಕ್ಕದಲ್ಲಿ ಕೂತು ಹಿಂದಿನ ನಿಲ್ದಾಣದಲ್ಲಿಳಿದವರ ಹೆಸರ ಕೇಳಲೆ ಇರುವ ನಮ್ಮ ಸ್ವಕೇಂದ್ರಿತ ಪಯಣದ ಹಲಚಿತ್ರಗಳು ಅವರ ಮಲ್ಲಿಗೆ ಮಾಲೆಯಲ್ಲಿವೆ. 
ನವೋದಯದ ಭೂಮಿಯಗೆದು ನವ್ಯದ ಅನಂತ ಆಕಾಶವನ್ನು ಅಕ್ಷರಕ್ಕಿಳಿಸಿದ ಅಡಿಗರ ಹಿಮಗಿರಿಯ ಕಂದರದ ಹಿಮ್ಮುಖ ರೈಲು ಆಚೆ ದಡದ ನಿಲ್ದಾಣದಲ್ಲಿದೆ. ಭಗ್ನ ಸೇತುವೆಯ ದಾಟಿ ಹೋಗುವವರು ಯಾರು? ಕಂದರಕ್ಕಿಳಿವ ಛಾತಿ ಉಳ್ಳವರೇ ಆಗಿರಬೇಕು. ಸದಾ ಮುಂದೋಡುವ ಬದುಕಿನಲ್ಲಿರುವವರು ಕ್ಷಣ ನಿಂತು ಹಿಮ್ಮುಖದ ಈ ಬೋಗಿ ಹತ್ತಬಹುದೆ? ಎಲ್ಲರೂ ಹೊಸ ಮಂದಿ ಹೊಸ ತೊಡುಪು ಹೊಸ ಹೊಸ ತೀರ ನಿಲ್ದಾಣಗಳ ಹೊಸದಿಕ್ಕು. ಮುರಿದ ಸೇತುವೆಯಾಚೆ ಇನ್ನೇನು ಹೊರಡಲು ಕಾದಿರಬಹುದಾದ ಹಿಮ್ಮುಖ ದಿಕ್ಕಿನ ಈ ಪಯಣ ಯಾರಿಗೆ ಬೇಕು?
ದಿಕ್ಕು ಕೆಟ್ಟ ಅರಿವು ಬರುವವರೆಗ ಈ ಸೇತುವೆ ಕಟ್ಟುವವರಿಲ್ಲ. ಟಿಕೆಟ್ಟಿಲ್ಲದ ಈ ದಾರಿಗೆ ಪಯಣಿಗರೂ ಹೆಚ್ಚಿಗಿಲ್ಲ. ವಿಮಾನದ ರೆಕ್ಕೆ ಹತ್ತಿ ಕೂತವರು, ದಿಕ್ಕುಗಳನ್ನೆ ಕಲಸಿದವರು, ನಡೆದ ದಾರಿಯ ಹಿಂತಿರುಗಿ ನೋಡದವರು, ಹತ್ತುವುದೆ ಗುರಿಯಾದವರು, ಎಲ್ಲರಿಗೂ ಈಗ ಆನ್ ಲೈನ್ ಬುಕಿಂಗ್ ತೆರೆದಿದೆ. ಕೂ ಚುಕ್ ಚುಕ್ ಎಂದು ಉದ್ಘರಿಸುವ ನಿಲ್ದಾಣದ ದಂಡೆ ಸದಾ ಗಜಿಬಿಜಿ...ಮುರಿದ ಸೇತುವೆಯಾಚೆಯ ಈ ಹಳೆಯ ಹಿಮ್ಮುಖಬಂಡಿಯ ಎಂಜಿನ್ ಸಿದ್ಧವಿದೆ. ಕಲ್ಲಿದ್ದಲ ಬೆಂಕಿ ಹೂಗಳು ಕಣ್ಣು ಕೋರೈಸುತಿವೆ. ಒಂದೆರಡೇ ಬೋಗಿ. ಅದೂ ಖಾಲಿ... ಎಲ್ಲ ಸಿಗ್ನಲ್ಲುಗಳೂ ಹಸಿರಾಗಿಯೂ ಬಂಡಿ ಕಾಯುತ್ತಲೆ ಇದೆ..ಹತ್ತುವವರೆ ಇಲ್ಲ. ಹಿಮಗಿರಿಯ ಕಂದರ ದಾಟುವವರಿಲ್ಲ.

ಅದೋ ನೋಡಿ ನಿಶ್ಚಿಂದಿಪುರದ ಲೆವೆಲ್ ಕ್ರಾಸಿಂಗಿನ ಬದುವಿನ ಮೇಲೆ ರೈಲಿಗೆ ಕೈಬೀಸಲು ಕಾಯುತ್ತಿರುವ ಪುಟ್ಟ ಬಾಲೆ ದುರ್ಗಾ ಮತ್ತವಳಜೊತೆಗೆ ತಮ್ಮ ಅಪೂ... "ನಿಶ್ಚಿಂದಿ" ಪುರದ ಸಾವಧಾನದಿಂದ ಹೊರಟ ಈ ಪಯಣದ ದಿಕ್ಕು ವ್ಯವಧಾನವೇ ಇರದ ಗೊಂದಲಪುರವೇ ಇರಬಹುದು. ಅದಕ್ಕೇ ಇರಬಹುದು ವಿಭೂತಿ ಭೂಷಣ ಚಟ್ಟೋಪಾಧ್ಯಾಯರ ಈ ಕಥೆಯ ಹೆಸರು ಮಹಾಯಾತ್ರಿಕ. ಯಾತ್ರಿಕನಿಲ್ಲದೆ ಪಯಣವೆಲ್ಲಿಯದು...ಕೂಊಊಊಊಊಊಊಊಊ ಚುಕ್ ಚುಕ್.. ಚುಕ್... ಚುಕ್... ಚು..ಕ್..ಚು..ಕ್..ಕ್..ಕ್.....

Monday, June 13, 2016

ಮರುಕನಸು

ನಾನು:
ಹೀಗ್ ಹೀಗೆಲ್ಲಾ ಆಯ್ತು.
ಮನಸ್ಸು ಬಿಮ್ಮನೆ.
ಬಿಗಿದು.. ಹನಿಯೊಡೆಯದ ಮುಗಿಲು

ಅವಳು:
ಹೌದಾ. ಹೋಗಲಿ ಬಿಡು
ಇದ್ಬಿಡು ಸುಮ್ಮನೆ,
ಕನಸು... ನಿಜವಾಗದ ಹಂಬಲು

ಕನಸಿನನುಭವಕೆ ನಿಜದ ಚೌಕಟ್ಟು
ಇಡಹೊರಡುವವರದೇ ತಪ್ಪು,
ಕನಸಿನೇರಿ ಹತ್ತಿ ಇಳಿದು
ಈಗ
ಮಳೆಬಾರದ ಹಾಗೆ ಜೋಪಾನದಲ್ಲಿ
ಕೊಡೆಹಿಡಿದು ಕತ್ತೆತ್ತದೆ ನಡೆವ ನಾಜೂಕು ದಾರಿ.
ಸ್ವಪ್ನವಿರದ ದೋಷಪೂರಿತ ಇರುಳು,
ದಿಂಬಿಗೆ ತಲೆ ಕೊಡುವ ಮೊದಲೇ ನಿದ್ದೆ

ಕನಸುಗಳಿರುವುದು ಕಾಣಲಿಕ್ಕೆ,
ನಿಜವಾಗಿಸಲಿಕ್ಕೆ,
ನನಸಾದ ಕನಸುಗಳ ಕೆನ್ನೆ ನೇವರಿಸಲಿಕ್ಕೆ.
ಎಲ್ಲ ಸರಿ -
ಬೋಧನೆಗೆ.

ಕೇದಾರದ ಕನಸು ಕಾಣುವವರಿಗೆ
ಕೋಳಿವಾಡವೇ ನಿಲುಕುತ್ತಿಲ್ಲ
ಹೆಜ್ಜೆ ಒದ್ದರೆ ಅಳಿದುಳಿದ ಮಡಕೆಯೊಡೆಯುವುದು
ಗೊತ್ತಿದ್ದೂ ಕನಸನ್ನೆ ಭಾವಿಸುವುದು ತಪ್ಪುತ್ತಿಲ್ಲ.

ಅದೋ ದೂರದಲ್ಲಿ ರಾಜನಂಬಾರಿ
ಸೊಂಡಿಲಲ್ಲಿ ಅಲುಗಾಡುವ ಹಾರ ಭಾರಿ.