Tuesday, September 26, 2023

 ಬರೆಯುವಾಗ ಇರಬೇಕಾದ ಎಚ್ಚರ


ಕತೆಗಾರನಿಗೆ ತನಗೆ ಬರೆಯಲು ಇರುವ ವಿಪುಲ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಈ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದೆಂಬುದರ ವಿವೇಕಪೂರ್ಣ ಜವಾಬ್ದಾರಿಯ ಸೂಕ್ಷ್ಮವೂ ಇರಬೇಕು ಎಂಬ ಮಾತು ನಮಗೆಲ್ಲರಿಗೆ ಅಪ್ಲೈ ಆಗುತ್ತದೆ. ಎದುರು ಕಾಣಿಸುವ/ಕಟ್ಟಿರುವ ಸಂಗತಿಗೆ ಅದಷ್ಟೇ ಅಲ್ಲದೆ, ನಮಗೆ ಗೋಚರಿಸುವದಷ್ಟೇ ಅಲ್ಲದೆ ಇರುವ ಹಲವು ಆಯಾಮಗಳ ಬಗೆಗೆ ಒಂದು ಎಚ್ಚರ ಇರಬೇಕು ಅಂತ ಬಲವಾಗಿ ಅನಿಸಿತು. ನನ್ನ ಧಾಟಿ ಪುರಾತನವಾಯಿತೋ ಏನೋ ಕ್ಷಮಿಸಿ. ಮತ್ತು ನನ್ನ ಊದುವಿಕೆ ಸಾಕು. ಕುರ್ತಕೋಟಿಯವರ ಮಾತುಗಳನ್ನೇ ಓದಿ.

" ಮಾಸ್ತಿಯವರ ಒಂದು ಕತೆ "ಬಿಳಿಗಿರಿ ರಂಗ" ಇದು ತನ್ನ ರಹಸ್ಯವನ್ನು ಬೇಗನೆ ಬಿಟ್ಟುಕೊಡುವುದಿಲ್ಲ. ರಂಗಪ್ಪ ಎಂಬ ಒಬ್ಬ ಭಕ್ತ ತನ್ನ ಮನೆದೇವರಾದ ಬಿಳಿಗಿರಿ ರಂಗನಿಗೆ ಆನೆಯ ಉತ್ಸವವನ್ನು ಮಾಡಲು ಹರಕೆ ಹೊತ್ತಿದ್ದಾನೆ. ಅವನ ತಂದೆ ಸಾಯುವಾಗ ಈ ಹರಕೆಯ ವಿಷಯವನ್ನು ಹೇಳಿದ್ದ. ಇಪ್ಪತ್ತು ವರ್ಷಗಳವರೆಗೆ ಹಣವನ್ನು ಕೂಡಿಟ್ಟು ಕೊನೆಗೆ ಒಂದು ದಿನ ಉತ್ಸವವನ್ನು ನಡೆಸಲು ನಿಶ್ಚಯಿಸುತ್ತಾನೆ. ತನ್ನ ತಾಯಿ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೆಟ್ಟದ ಬುಡದ ಒಂದು ಮಂಟಪದಲ್ಲಿ ಒಂದು ರಾತ್ರಿ ಉಳಿಯುತ್ತಾನೆ. ಆದರೆ ತಾಯಿಗೆ ವಾಂತಿ ಬೇಧಿ ಶುರುವಾಗಿ ಬೆಟ್ಟವನ್ನು ಹತ್ತುವುದು ಆಗುವುದಿಲ್ಲ. ಅವಳನ್ನು ಅಲ್ಲಿಯೇ ಬಿಟ್ಟು ಉಳಿದವರು ಬೆಟ್ಟವನ್ನೇರಿ ಹೋಗುತ್ತಾರೆ. ಸಂಜೆಗೆ ಇನ್ನೇನು ಉತ್ಸವ ಮುಗಿಯಬೇಕು ಎನ್ನುವಷ್ಟರಲ್ಲಿ ತಾಯಿಯ ಸ್ಥಿತಿ ಚಿಂತಾಚಜನಕವಾಗಿದೆಯೆಂದು ಸುದ್ದಿ ಬರುತ್ತದೆ. ಮಗ ಅಲ್ಲಿಯೇ ಇರಲಾರದೆ ಬೆಟ್ಟವಿಳಿದು ಬರುತ್ತಾನೆ. ಜೊತೆಗೆ ಒಬ್ಬ ಸೋಲಿಗರ ಹುಡುಗ ಬರುತ್ತಾನೆ. ಅವನ ಹೆಸರು ರಂಗ. ಅವರಿಬ್ಬರೂ ಬರುವಾಗ ಜೊತೆಯಲ್ಲಿ ಒಂದು ಆನೆಯೂ ಬರುತ್ತದೆ. ರಂಗಪ್ಪನಿಗೆ ಹೆದರಿಕೆ. ಆದರೆ ಹುಡುಗ ಧೈರ್ಯ ಹೇಳುತ್ತಾನೆ. ಕೆಳಗಿಳಿದು ಬಂದ ಮೇಲೆ ತಾಯಿ ಸ್ವಲ್ಪ ಹುಶಾರಾಗುತ್ತಿರುತ್ತಾಳೆ. ಅದನ್ನು ತಿಳಿದು ಸಮಾಧಾನವಾಗುತ್ತದೆ. ಅಷ್ಟರಲ್ಲಿ ಆನೆಯೂ ಅಲ್ಲಿಗೆ ಬರುತ್ತದೆ. ಸೋಲಿಗರ ಹುಡುಗ ಇನ್ನು ತಾನು ಹೋಗುತ್ತೇನೆಂದು ಆನೆಯನ್ನೇರಿ ಕುಳಿತು ಹೊರಡುತ್ತಾನೆ. ತಾಯಿಗೆ ಆನೆಯ ಮೇಲೆ ಸೋಲಿಗರ ಹೆಣ್ಣಿನೊಡನೆ ಕುಳಿತ ಬಿಳಿಗಿರಿ ರಂಗನೇ ಕಾಣಿಸಿ ಕೈ ಮುಗಿಯುತ್ತಾಳೆ. ಆ ಸ್ಥಳಕ್ಕೆ ಅಂದಿನಿಂದ ಆನೆ ರಂಗನ ಹುಂಡಿ ಎಂದು ಹೆಸರಾಗುತ್ತದೆ.

ಮೇಲುನೋಟಕ್ಕೆ ಇದು ಪಾರಮಾರ್ಥಿಕ ಅನುಭವವನ್ನು ಪ್ರಕಟಿಸುವ ಕಥೆಯೆಂದೇ ಕಾಣುತ್ತದೆ. ರಂಗನ ವಿಗ್ರಹವನ್ನು ಆನೆಯ ಮೇಲೆ ಕಂಡವಳು ತಾಯಿ ಮಾತ್ರ. ಅವಳು ಬೆಟ್ಟದ ಮೇಲೆ ಹೋಗಲಿಲ್ಲ. ದೇವರೇ ಬೆಟ್ಟವಿಳಿದು ಬಂದು ಅವಳಿಗೆ ದರ್ಶನವಿತ್ತ. ಕತೆಯ ಕೊನೆಯ ಭಾಗದಲ್ಲಿ " ಬಹಳ ಜನಕ್ಕೆ ಈ ಕತೆಯಲ್ಲಿ ನಂಬಿಕೆ ಇಲ್ಲ" ಎಂಬ ಮಾತು ಬರುತ್ತದೆ. "ದೇವರು ಯಾವ ಹೊತ್ತಿನಲ್ಲಿ, ಯಾವ ರೂಪದಲ್ಲಿ ಬರುವನೋ ಹೇಳುವಂತಿಲ್ಲ" ಎಂಬ ಮಾತೂ ಬರುತ್ತದೆ. ನಂಬುವದು ಬಿಡುವುದು ಅವರವರ ಸಂಸ್ಕಾರದ ಫಲ. ತಾಯಿ ಮಲಗಿದ್ದ ಆ ಸ್ಥಳವನ್ನು ಮಗ ಕೊಂಡುಕೊಂಡು ಮುಂದೆ ಅಲ್ಲಿ ಅವಳ ನೆನಪನ್ನು ಸ್ಥಿರವಾಗಿಸಿದ.

ತಾಯಿಯ ಕಣ್ಣಿಗೆ ಆನೆಯ ಮೇಲೆ ಬಿಳಿಗಿರಿ ರಂಗನ ರೂಪ ಕಂಡಿತು. ಆದರೆ ಉಳಿದವರಿಗೆ ಅದು ಕಾಣುವುದಿಲ್ಲ. ಉಳಿದವರ ಕಣ್ಣಿಗೆ ಕಂಡದ್ದೆಂದರೆ ಸೋಲಿಗರ ಹುಡುಗ ಅಳಿಲಮರಿಯಂತೆ ಅನೆಯ ಮೇಲೆ ಏರಿ ಹೋದದ್ದು. ಮಗನಿಗೆ ಬೆಟ್ಟವಿಳಿಯುವಾಗ ಭಯ. ಸೋಲಿಗರ ಹುಡುಗನಿದ್ದದ್ದರಿಂದ ಧೈರ್ಯ ಬಂದಿತ್ತು. ಆದರೆ ಮಗನಿಗೆ ಬಿಳಿಗಿರಿರಂಗನ ದರ್ಶನವಾಗಲಿಲ್ಲ. ಅವನು ಬೆಟ್ಟದಿಂದ ಇಳಿದು ಬರುವಾಗ ಜೊತೆಯಲ್ಲಿ ಬಂದ ಆನೆಯ ಹೆಜ್ಜೆಗಳ ಸಪ್ಪಳ ಅವನಿಗೆ ಭೀತಿಯನ್ನು ತಂದಿತ್ತು. ಸೋಲಿಗರ ಹುಡುಗ ಜೊತೆಯಲ್ಲಿ ತಾನಿದ್ದೇನೆ ಎಂದು ಹೇಳಿದ್ದರೂ ಅವನಿಗೆ ಒಳಗಿಂದೊಳಗೆ ಭಯವಿತ್ತು. ಆನೆ ಬರುತ್ತಿದೆಯೆಂದು ಗೊತ್ತಾಯಿತೇ ಹೊರತು ಆನೆ ಬರುತ್ತಿರುವುದರ ಉದ್ದೇಶ ಅವನಿಗೆ ಗೊತ್ತಿರಲಿಲ್ಲ. ಇಲ್ಲಿ ಪ್ರಶ್ನೆ ಎಂದರೆ ಆನೆ ಅವನ ರಕ್ಷಕ ದೈವವಾಗಿ ಬಂದಿತೇ ಇಲ್ಲವೇ ಎನ್ನುವುದು. ನಮಗೆಲ್ಲ ಕಾಡಿನ ಭಯ. ಕಾಡಿನ ಭಯವೆಂದರೆ ಅಜ್ಞಾತದ ಭಯ. ದೇವರ ಭಯವೂ ಹೆಚ್ಚೂ ಕಡಿಮೆ ಅದೇ ರೀತಿಯ ಭಯ. ಈ ಭಯದಿಂದ ನಮ್ಮ ಮತ್ತು ದೇವರ ನಡುವಿನ ಸಂಬಂಧ ಸಹಜವಾಗಿರುವುದಿಲ್ಲ. ಕತೆಯಲ್ಲಿರುವ ತಾಯಿಗೆ ಮಾತ್ರ ಆನೆಯ ಮೇಲೆ ಕುಳಿತವನು ರಂಗನೇ ಹೊರತು ಬೇರೆ ಯಾರೂ ಅಲ್ಲ. ಆ ಹುಡುಗ ಹಾವಿನ ತಲೆಯ ಮೇಲೆ ಮೆಟ್ಟಿ ಕುಣಿದಿದ್ದೇನೆ ಎಂದು ಹೇಳಿದರೂ ಮಗನಿಗೆ ನಂಬಿಕೆ ಬರಲಿಲ್ಲ. ತಾಯಿಗೆ ಸೋಲಿಗರ ಹುಡುಗನಲ್ಲಿ ರಂಗ ಕಂಡ ಮೇಲೆ ಮಗ ಆ ಘಟನೆಯ ಬಗ್ಗೆ ಯೋಚಿಸಲು ತೊಡಗಿದ. ಸೋಲಿಗರ ಹುಡುಗ ಬೆಟ್ಟವನ್ನು ಇಳಿಯುವಾಗ ಆಡಿದ ಮಾತುಗಳನ್ನು ಕುರಿತು ಯೋಚಿಸಿದ. ಬಹುಶಃ ತನ್ನೊಡನೆ ಬಂದವನು ರಂಗನೇ ಇರಬೇಕು ಎಮ್ದು ಸಾವಕಾಶವಾಗಿ ಮನದಟ್ಟು ಮಾಡಿಕೊಂಡ.

ಇಷ್ಟಾಗಿಯೂ ಈ ಕತೆಯ ಮೂಲ ಸಮಸ್ಯೆ ದೇವರ ಸಮಸ್ಯೆ ಅಲ್ಲವೆಂದು ಅನಿಸುತ್ತದೆ. ದೇವರ ಅಸ್ತಿತ್ವದ ಸಮಸ್ಯೆಯನ್ನು ಒಂದು ಕತೆಯ ಮೂಲಕವಾಗಿ ಪರಿಹರಿಸುವುದು ಅಸಾಧ್ಯ. ಇನ್ನೂ ಒಮ್ದು ಮಾತೆಂದರೆ ಈ ಕತೆಗೆ ದೇವರ ಬಗ್ಗೆ ನಂಬಿಕೆ ಇದೆಯೇ ಹೊರತು ಸಂಶಯವಿಲ್ಲ. ತಾಯಿಗೆ ಕಾಣುವ ದೇವರು ಮಗನಿಗೆ ಕಾಣುವುದಿಲ್ಲವೆಂಬ ಸಂಗತಿಯೂ ವಿವಾದಗ್ರಸ್ತವಲ್ಲ. ದೇವರಿದ್ದಾನೆ, ಜಗತ್ತು ಇದೆ. ಆದರೆ ದೇವರು ಜಗತ್ತಿನಲ್ಲಿ ಕಾಣುವ ಬಗೆ ಮಾತ್ರ ಸಂದಿಗ್ಧವಾಗುತ್ತದೆ. ಬೆಟ್ಟವಿಳಿಯುವಾಗ ಜೊತೆಯಲ್ಲಿ ನಡೆದು ಬಂದ ಆನೆಯನ್ನು ದೇವರ ಕೃಪೆ ಎಂದು ತಿಳಿಯುವುದು ಹೇಗೆ.ಬೆಟ್ಟ, ಆನೆ, ತಿಳಿನೀರಿನ ಕೊಳ ಇವೆಲ್ಲ ಪ್ರತ್ಯೇಕವಾಗಿ ಅರ್ಥವಾಗುತ್ತವೆ. ಜೊತೆಯಲ್ಲಿ ಬಂದ ಸೋಲಿಗರ ಹುಡುಗ ಆನೆಗಳ ಬಗ್ಗೆ ಮಾತನಾಡುತ್ತಾನೆ. ಹಾವುಗಳ ಬಗ್ಗೆ ಮಾತನಾಡುತ್ತಾನೆ. ಹಾವುಬಂದರೆ ತಲೆ ಮೆಟ್ಟಬೇಕು, ಬಾಲವನ್ನಲ್ಲ ಎಂದು ಎಚ್ಚರಿಕೆ ಕೊಡುತ್ತಾನೆ. ಹಾವುಗಳನ್ನು ಮೆಟ್ಟಿ ಕುಣಿದಿದ್ದೇನೆ ಎನ್ನುತ್ತಾನೆ. ಇದೆಲ್ಲ ಅರ್ಥವಾಗುವ ಮಾತು ನಿಜ. ಆದರೆ ಪ್ರತ್ಯೇಕವಾಗಿ ಇವು ಯಾವುದೂ ದೇವರ ಕೃಪೆಯಲ್ಲ. ಅಂದ ಮೇಲೆ ಒಟ್ಟಿಗೆ ಕೂಡಿದಾಗ ಅದು ದೇವರ ಕೃಪೆ ಎಂದು ಹೇಗೆ ಅರ್ಥವಾಗುತ್ತದೆ? ದೇವರು ಯಾವ ಹೊತ್ತಿನಲ್ಲಿ ಯಾವ ರೂಪದಲ್ಲಿ ಬರುತ್ತಾನೋ ಹೇಗೆ ಹೇಳುವದು? ಕತೆ ಹೇಳುವವನು ಆಡಿದ ಮಾತಿದು. ನಡೆದ ಘಟನೆಯನ್ನೆಲ್ಲ ಒಂದು ವಾಕ್ಯ ಇಎಂದು ತಿಳಿದರೂ ಈ ವಾಕ್ಯದಲ್ಲಿ "ದೇವರ ಕೃಪೆ" ಎಂದು ಅರ್ಥವನ್ನು ಸ್ಫುರಿಸುವ ಪ್ರತಿಭೆ ಯಾವದು? ಕತೆ ಇದರ ಬಗ್ಗೆ ಮೌನವಾಗಿದೆ. ಬಹುಶಃ ಈ ಮೌನದ ಅರ್ಥವೆಂದರೆ ಹೀಗೆ ನಡೆದಿರುವ ಘಟನೆಗಳ ಹಿಂದೆ ಅವ್ಯಕ್ತವಾಗಿ ದೇವರ ಕೃಪೆ ವಾಕ್ಯದ ಸತ್ಯವಾಗಿ ಓಡಾಡುತ್ತದೆ. ವಾಕ್ಯ ಅಧೀನವಾಗಿದೆ. ಆದರೂ ತಾನು ಅಧೀನನಾಗಿರುವದು ವಾಕ್ಯಕ್ಕೆ ಗೊತ್ತಿಲ್ಲವೆಂದು (ಗೊತ್ತಿಲ್ಲದೆಇರುವುದರಿಂದ) ಅದು ಸ್ವತಂತ್ರವಾಗಿಯೂ ಇದೆ.

ಬಿಳಿಗಿರಿ ರಂಗನ ಬೆಟ್ಟ ಒಂದು ಬೆಟ್ಟ. ಬೆಟ್ಟವೆಂದ ಮೇಲೆ ಕಾಡು, ಕಾಡಿನಲ್ಲಿ ಆನೆಗಳು ಮತ್ತು ತಿಳಿನೀರಿನ ಕೊಳ. ಅಲ್ಲಿಯೇ ಹುಟ್ಟಿ ಬೆಳೆದ ಸೋಲಿಗರು. ಇವರೆಲ್ಲ ರಂಗನನ್ನು ಅರ್ಥ ಮಾಡಿಕೊಂಡಿರುವವರು ಎಂದು ನಮಗೆ ಅರ್ಥವಾದರೂ ಅರ್ಥವಾಗದೆ ಇರುವ ಇನ್ನೊಂದು ಸಂಗತಿ ಇದೆ. ಆ ಸಂಗತಿ ಎಂದರೆ ತನ್ನ ಅಭಿವ್ಯಕ್ತಿಗಾಗಿ ದೇವರು ಈ ಸ್ಥಳವನ್ನು ಆಯ್ದುಕೊಂಡಿರುವುದು. ಈ ಸ್ಥಲದ ಬಗ್ಗೆ ದೇವರಿಗೆ ಒಂದು ಪಕ್ಷಪಾತವಿದೆ. ಹುಟ್ಟಿ ಸಾಯುವ ಸೋಲಿಗರ ನಡುವೆ ಪರಮಾತ್ಮ ತಾನು ಇರಬೇಕೆನ್ನುತ್ತಾನೆ. ಮದ್ದಾನೆಗಳನ್ನೂ ಹಾವುಗಳನ್ನೂ ಮೆಟ್ಟಿ ಅವುಗಳನ್ನು ಪಳಗಿಸಿದ್ದಾನೆ. ಎಲ್ಲಕ್ಕೂ ಹೆಚ್ಚಾಗಿ ಸೋಲಿಗರ ಹೆಣ್ಣನ್ನು ಮದುವೆಯಾಗಿದ್ದಾನೆ. ಅವನು ಮದುವೆಯಾಗಿರದಿದ್ದರೆ ನಿಸ್ಸಂಗನಾದ ದೇವರಿಗೆ ಸಂಸಾರ ಹೇಗೆ ಅರ್ಥವಾಗಬೇಕು? ಸೃಷ್ಟಿಯೆಲ್ಲ ಅವನ ಅಧೀನವಾಗಿದೆ. ಆನೆಗಳು, ಹಾವುಗಳು, ಅವನ ಮಾತು ಕೇಳುತ್ತವೆ. ಅವನ ಅಪ್ಪಣೆಯಿಲ್ಲದೆ ತೃಣ ಕೂಡ ಅಲುಗಾಡುವುದಿಲ್ಲ. ಆದರೆ ದೇವರಿಗೂ ತೃಣ ಅರ್ಥವಾಗಬೇಕಾದ ಅವಶ್ಯಕತೆಯಿದೆ. ತಿಳಿದುಕೊಳ್ಳಬೇಕಾದರೆ ಸ್ವಂತವಿದ್ದದ್ದು ಇತರ ಆಗಬೇಕು. ದೇವರು ಸ್ವಂತವಾದರೆ ಪ್ರಕೃತಿ ಇತರ; ಅದರಂತೆಯೇ ಪ್ರಕೃತಿ ಸ್ವಂತವಾದರೆ ದೇವರು ಇತರ. ದೇವರು ಅಂತರ್ಯಾಮಿಯಾಗುವುದು ಬಹುಶಃ ಇದಕ್ಕಾಗಿ. ದೇವರು ಸ್ವಂತ ಆದರೆ ನಮ್ಮ ಮೂಲಕ ತನ್ನನ್ನೇ ನೋಡಿಕೊಳ್ಳುತ್ತಾನೆ. ತಾಯಿಯ ಕಣ್ಣಿಗೆ ಒಳಗಿದ್ದ ದೇವರು ಆನೆಯ ತಲೆಯ ಮೇಲೆ ಸೋಲಿಗರ ಹೆಣ್ಣಿನೊಂದಿಗೆ ಕಂಡ. ಇದಕ್ಕೆ ಕಾರಣವೆಂದರೆ ಅವನು ಅಲ್ಲಿ ಬಂದದ್ದು ಸೋಲಿಗರ ರಂಗನಾಗಿ.

ಮಾಸ್ತಿಯವರ ಕತೆಗಳಲ್ಲಿನ ಪ್ರಾದೇಶಿಕತೆ. ಬಿಳಿಗಿರಿ ರಂಗನ ಬೆಟ್ಟ ಕೂದ ಅಂತ ಒಂದು ನಿರ್ದಿಷ್ಟವಾದ ಪ್ರದೇಶ. ಈ ಪ್ರದೇಶದಲ್ಲಿ ನಡೆದ ಒಂದು ಸಂಗತಿಯ ಅರ್ಥವೇನು ಎಂದು ಕೇಳುವ ಸ್ವಾತಂತ್ರ್ಯವನ್ನು ಈ ಕತೆ ಇಟ್ಟುಕೊಂಡಿದೆ. ಈ ಸಂಗತಿಯನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ವಿವರಣೆಯ ಸ್ವಾತಂತ್ರ್ಯ ಅಪಾರವಾಗಿದೆ. ಮಾಸ್ತಿಯವರ ಪ್ರತಿಭೆಯ ವೈಶಿಷ್ಟ್ಯವೆಂದರೆ ಈ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದೆಂಬ ಧರ್ಮ ಸೂಕ್ಷ್ಮ, ಮತ್ತು ಸ್ವಾತಂತ್ರ್ಯವನ್ನು ಉಪಯೋಗಿಸುವ ಜವಾಬ್ದಾರಿ." - as quoted by Shri Kurthukoti

ವಿವೇಕಪೂರ್ಣವಾದ ಬರವಣಿಗೆ ಯಾವುದೆಂದರೆ ಸ್ವಾತಂತ್ರ್ಯದ ಉಪಯೋಗದಿಂದ ಸತ್ಯದ ರೂಪರೇಷೆಗಳು ವಿಕೃತವಾಗಬಾರದು ಎಂಬ ಎಚ್ಚರದಿಂದ ಕೂಡಿದ ಬರವಣಿಗೆ. 

No comments: