Thursday, December 13, 2007

ಚಾಂದ್ ಸೀ ಮೆಹಬೂಬಾ

ಚಾಂದ್ ಸೀ ಮೆಹಬೂಬಾ ಹೋ ತುಮ್ ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ...

ತುಂಬು ಚಂದಿರನಂತ ಹುಡುಗಿಯಿರಬಹುದೆ ಅವಳು ಅಂದುಕೊಂಡಿದ್ದೆ ಅವತ್ಯಾವತ್ತೋ ಅಮ್ಮ ತಂದಿಟ್ಟುಕೊಂಡ ಭಾವಗೀತೆಯ ಕ್ಯಾಸೆಟ್ಟಿನಲ್ಲಿ ಬಾರೆ ನನ್ನ ದೀಪಿಕಾ ಕೇಳಿದಾಗ.. ನನಗೆ ಆಡುವ ವಯಸ್ಸು..ಮತ್ಯಾವತ್ತೋ ಹೈಸ್ಕೂಲಿನ ಕ್ಲಾಸ್ ಮೇಟಿಗೆ ನೋಟ್ ಬುಕ್ಕು ಕೊಟ್ಟಿದ್ದು ನೋಡಿದ ಗೆಳೆಯರು ಚುಡಾಯಿಸಿದಾಗ ನಕ್ಕು ಸುಮ್ಮನಾಗಿದ್ದೆ ಗೊತ್ತಿತ್ತು ಇವಳಲ್ಲ ಅವಳು ಅಂತ. ಕಾಲೇಜಿಗೆ ಹೋಗುವಾಗ ಎಲ್ಲರೂ ಕಣ್ಣೆತ್ತಿ ನೋಡಬೇಕೆಂದು ಚಂದವಾಗಿ ಟ್ರಿಮ್ಮಾಗಿ ಹೋಗಿದ್ದು ಹೌದು, ಆದ್ರೆ ಅವಳು ಸಿಗಲೇಬೇಕೆಂದೇನೂ ಅಲ್ಲ.. ರಜೆಯಲ್ಲಿ ಊರಲ್ಲಿ ಅಕ್ಕತಂಗಿಯರು ಚುಡಾಯಿಸುವಾಗ, ಅಣ್ಣ ಅವನ ಇಂಜಿನಿಯರಿಂಗ್ ಗೆಳತಿಯರ ವಿಷಯ ಹೇಳುವಾಗ ಮನದಲ್ಲಿ ಪ್ರೀತಿಗೂಡಿನ ಮೊದಲ ಕಡ್ಡಿ.. ಅಮ್ಮ ಆಗಾಗ ತಂದಿಡುವ ಹೊಸ ಹೊಸ ಭಾವಗೀತಗಳಿಂದ ಅಲ್ಲಲ್ಲಿ ಕಡ್ಡಿ ಕದ್ದು ಗೂಡು ಒಂದು ಶೇಪಿಗೆ ಬರುತ್ತಿತ್ತು.. ಕನಸೆಲ್ಲ ಕಣ್ಣಲ್ಲಿ ನೆಲೆಯಾಗಿ ಬಂದ ಗಳಿಗೆಯಂತೋ ಏನೋ ಅಲ್ಲೆ ಮನೆ ಮಾಡಿ ಸುಬ್ಬಾ ಭಟ್ಟರ ಮಗಳಿಗೆ ಕಾಯತೊಡಗಿದೆ!

ಅವತ್ತು ಕಾರಿಡಾರಲ್ಲಿ ಜೋರು ಜೋರಾಗಿ ಬೀಸು ಹೆಜ್ಜೆ ಬೀಸುಗೈ ಮಾಡುತ್ತ ನಡೆದವನ ನೋಟ್ ಬುಕ್ಕಿಗೆ ನಿನ್ನ ದಾವಣಿ ಸಿಕ್ಕಿದ್ದು ಹ್ಯಾಗೆ. ಸಿಕ್ಕ ದಾವಣಿಯನ್ನು ಬಿಡಿಸಿಕೊಳ್ಳುತ್ತ ಸಿಡುಕುಗಣ್ಣಲ್ಲಿ ನೋಡಿದ ನಿನ್ನ ನೋಟ ನನ್ನ ಸಿಕ್ಕಿಸಿಹಾಗಿದ್ದು ಹೇಗೆ? ಯಾರು ಹೇಳಬಲ್ಲರು ಇದನ್ನ..
ಅಂತೂ ಇಂತೂ ಜೋಪಾನ ಮಾಡಿ ಕಟ್ಟಿದ ಗೂಡಲ್ಲಿ ನಿನ್ನೆಡೆಗಿನ ಪ್ರೀತಿಮೊಟ್ಟೆ.. ಕಾವು ಕೊಡುತ್ತೀಯಾ ನೀನು? ಹೇಗೆ ಕೇಳಲಿ ಅಂತ ಗೊತ್ತಾಗದೆ ಒಂದ್ವಾರ ಒದ್ದಾಡಿದೆ..ಬೆಳಿಗ್ಗೆ ಕ್ರಿಕೆಟ್ ಪ್ರಾಕ್ಟೀಸಿಗೆ ಹೋದ್ರೆ ಎಲ್ಲಾ ಬಾಲುಗಳೂ ವೈಡೇ..ಬ್ಯಾಟಿಂಗಲ್ಲಿ ಪ್ರತಿಸಲವೂ ಮೊದಲ ಬಾಲಿಗೇ ಔಟು.. ಕೋಚ್ ಗೆ ಸಿಟ್ಟು ಏನಪ್ಪಾ ಕ್ಯಾಪ್ಟನ್ ಆಗಿ ಹೀಗ್ ಮಾಡಿದ್ರೆ ಹೇಗೆ? ಏನಂತ ಹೇಳಲಿ ನಾನು.. ನನ್ನ ಗುರಿಯೆ ತಪ್ಪೋಗಿದೆ ಅಂತಲೆ ಗುರಿಯೊಂದು ಹೊಸತಾಗಿ ಮೂಡಿದೆ ಅಂತಲೆ? ಡಿಫೆನ್ಸೇ ಇಲ್ಲದೆ ಬರಿಗೈಯಲ್ಲಿ ನಿಂತಿದೀನಿ ಅವಳಿಗಾಗಿ, ಭ್ಯಾಟಿಂಗ್ ಹೆಂಗ್ ಮಾಡಲಿ ಅಂತಲೇ?
ಏನೋ ಒಟ್ಟು ಆ ವಾರ ಕಳೆದೆ.

ಮುಂದಿನ ವಾರ ಅವಳೇ ಬರಬೇಕಾ. ಲೈಬ್ರರಿಯಲ್ಲಿ ನಾನು ತಗೊಂಡ ಪುಸ್ತಕವೇ ಅವಳಿಗೆ ಬೇಕಿತ್ತಂತೆ. ಲೈಬ್ರರಿಯನ್ ಕೊಟ್ಟ ಡೀಟೈಲ್ಸ್ ತಗೊಂಡು ನನ್ನತ್ರ ಬಂದಿದ್ದಳು..
ಓಹ್ ನೀನಾ ಅನ್ನುವ ಅನ್ನುವ ಅಚ್ಚರಿತುಂಬಿದ ಕಣ್ಣುಗಳ ಆಳಕ್ಕೆ ಇಳಿದವನಿಗೆ ಮತ್ತೆ ಮೇಲೆ ಬರಲಾಗಲಿಲ್ಲ. ನಾನೇನೂ ಹೇಳದೆ ಅವಳಿಗೆ ಗೊತ್ತಾಗಿಹೋಗಿತ್ತು. ಅವಳ ಕೆನ್ನೆಕೆಂಪು ನಂಗೆ ಅದನ್ನೇ ಸಾರಿ ಸಾರಿ ಹೇಳಿತು.. ತಗೋಳಿ ಅಂತ ನೋಟ್ ಬುಕ್ ಕೊಡಕ್ಕೆ ಹೋದೆ - ಅವಳು ಎಳೆಚಿಗುರಿನಂತ ಬೆರಳುಗಳಲ್ಲಿ ಆ ಮುದ್ದಾದ ಬಾಯಿ ಮುಚ್ಚಿಕೊಂಡು ನಗುನಗುತ್ತ ತಲೆಯಾಡಿಸಿ ಹೊರಟು ಹೋದ ಮೇಲೆ ಗೊತ್ತಾಯಿತು. ಅವಳಿಗೆ ಬೇಕಿರುವುದು ನನ್ನ ನೋಟ್ ಬುಕ್ಕಲ್ಲ ಲೈಬ್ರರಿಯಲ್ಲಿ ತಗೊಂಡು ಎರಡು ವಾರ ಡ್ಯೂ ಆಗಿರೋ ಪುಸ್ತಕ ಅಂತ.. ಏನ್ ಮಚ್ಚಾ ಅಂತ ಗೆಳೆಯರು ಕಂಬಕಂಬಗಳ ಸಂದಿಯಿಂದ ಹೊರಬರುತ್ತಿದ್ದರೆ ಏನು ಉತ್ತರ ಕೊಡಲೂ ಹೊಳೆಯುತ್ತಿಲ್ಲ. ಕುಳಿತಲ್ಲಿ ಅವಳು, ನಿಂತಲ್ಲಿ ಅವಳು, ನೋಡಿದಾ ಕಡೆಯೆಲ್ಲ ಅವಳೇ ಅವಳು.. ವೈದೇಹಿ ಏನಾದಳೋ ಎಂದು ಪರಿತಪಿಸುವ ರಾಮನಿಗಾದರೂ ಗೊತ್ತಿತ್ತು ಅವಳು ಎಲ್ಲಿ ಹೋಗಿದ್ದರೂ ನನ್ನವಳೇ, ನನಗಾಗೇ ಕಾಯುವಳೆಂದು.. ನಾನು ಅವಳು ಮಿಂಚುಕಣ್ಣನ್ನ ಮಿಂಚಿಸಿ ಅಲ್ಲಲ್ಲಿ ಓಡಾಡುವಾಗ ಆ ಕಣ್ಣ ಮಿಂಚು ನಂಗೇನಾ ಇನ್ಯಾರಿಗಾದ್ರೂ ತಾಗುತ್ತಿದೆಯಾ ಅಂತ ನೋಡಬೇಕಿತ್ತು.

ಇಷ್ಟೆಲ್ಲ ಆಗಿ ಇನ್ನೇನೇನೋ ಆಗಿ ಮಿಂಚುಕಣ್ಣಿನ ತಂಪು ತಿಂಗಳಿನ ಅವಳು ಹೂಗೊಪ್ಪಲಿನ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ಸೀತೆಯಂತ ಗೊತ್ತಾಯಿತು. ಅತ್ರಿಯವರ ಹಾಡು ಕಿವಿಯಲ್ಲಿ ಗುನುಗುತ್ತಿದ್ದರೆ, ನಾನು ಅವಳಷ್ಟೇ ಬೆಳ್ಳಗಿದ್ದೇನಾ, ಎಲ್ಲಾದರೂ ಅವಳ ಕೂದಲಿಗೆ ಹೋಲಿಸಿಕೊಂಡುಬಿಟ್ಟರೆ ಅಂತ ದಿಗಿಲಾಗುತ್ತಿತ್ತು.. ಸಧ್ಯ ನಮ್ದು ಜೋಯಿಸರ ಮನೆಯಲ್ವಲ್ಲಾ ಅಂತ ಸಮಾಧಾನ..

ಆಮೇಲೆ ನಡೆದಿದ್ದು ನಾನು ಬದುಕಿಡೀ ನೆನಪಿನಲ್ಲಿ ಸವಿಯಬಹುದಾದ ಮಾಧುರ್ಯದ ದಿನಗಳು. ಬೈಕಿರಲಿಲ್ಲ, ಒಂದೊಂದ್ಸಲ ಎರಡು ಕಾಫಿಗೆ ದುಡ್ಡಿರ್ತಿರಲಿಲ್ಲ, ಸಿನಿಮಾಕ್ಕೆ ಊರಲ್ಲಿ ಹೋಗುವಂತಿರಲಿಲ್ಲ, ಬೇರೆ ಊರಿಗೆ ಜೊತೆಯಾಗಿ ಹೋಗಿಬರುವ ಪಯಣದ ಬಸ್ ಸ್ಟಾಂಡಿಗೆ ಇಬ್ಬರೂ ಜೊತೆಯಾಗಿ ಹೋಗಿ ಬಸ್ ಹತ್ತುವಂತಿಲ್ಲ, ಸಂಜೆ ನೆನಪಾದರೆ ಮೆಸೇಜು ಕುಟ್ಟಲು ಮೊಬೈಲ್ ಇರಲಿಲ್ಲ, ಮನೆಯ ಫೋನಿಗೆ ಕರೆಮಾಡಲು ಧೈರ್ಯವಿರಲಿಲ್ಲ, ಎಲ್ಲೂ ನನ್ನ ಪ್ರೀತಿಯ ಮೊಟ್ಟೆಗೆ ಕಾವು ಸಿಕ್ಕಿ ಮರಿಯಾಗುತ್ತಿರುವ ಸುಳಿವನ್ನೂ ಬಿಟ್ಟುಕೊಡುವಂತಿರಲಿಲ್ಲ.. ಆದರೆ ಆ ಕಾವು - ಆಹ್ ಎಷ್ಟು ಹಿತ.. ಕಾರಿಡಾರಿನಲ್ಲಿ ನಡೆಯುತ್ತ ಅಲ್ಲಿ ನನ್ನೆಡೆ ಹೊರಳುವ ಮಿಂಚುನೋಟದಲ್ಲಿ - ಹಗಲಿನಲಿ ಕಾಣುವುದು ನಿಮ್ಮಾ ಕನಸೂ, ಇರುಳಿನಲಿ ಕಾಡುವುದು ನಿಮ್ಮ ನೆನಪೂ - ರತ್ನಮಾಲಾರ ದನಿ ಉಲಿಯುತ್ತಿತ್ತು.. ನಿನದೇ ನೆನಪೂ ದಿನವೂ ಮನದಲ್ಲೀ ಅಂತ ಗುಂಯ್ ಗುಡುವ ಪಿ.ಬಿ.ಶ್ರೀನಿವಾಸರ ದನಿಯ ಹಾಡು ನನ್ನ ಮನಸು.. ಮಳೆಗಾಲದಲ್ಲಿ ಬೆಚ್ಚಗೆ ಒಲೆಮುಂದೆ ಕೂತಂತೆ, ಉರಿಬೇಸಿಗೆಯಲ್ಲಿ ನೇರಳೆಮರದ ಅಡಿಯಲ್ಲಿ ಕೂತು ಹೆಕ್ಕಿ ತಿಂದ ಹಣ್ಣರುಚಿಯಂತೆ, ತಂಪಿನಂತೆ, ಮಾಗಿಚಳಿಯ ಬೆಳಗಲ್ಲಿ ಮೈಸುತ್ತಿಕೊಂಡ ಕಂಬಳಿಯಂತೆ - ಹೀಗೇ ಅಂತ ಹೇಗೆ ಹೇಳಲಿ..

ಈಗೇನ್ ಗೊತ್ತಾ, ಬೇಕೆಂದಾಗ ಸುತ್ತಲು ಬೈಕಿದೆ, ಸಂಜೆ ಯಾವ ರೆಸ್ಟುರಾದಲ್ಲಿ ಬೇಕಾದರೂ ಕೂತು ತಿನ್ನಬಹುದಾದ ಬ್ಯಾಲನ್ಸಿದೆ,ಕೆಲಸವಿದೆ, ಯಾರು ನೋಡಿ ಕೇಳಿದರೂ ಉತ್ತರಿಸುವ ಧೈರ್ಯವಿದೆ," ಯಾಕೋ ನಿಂಗೆ ಯಾರೂ ಇಷ್ಟ ಆಗ್ತಿಲ್ಲ,ಹೋಗ್ಲಿ ನೀನೇ ಹುಡುಕ್ಕೋ" ಅಂತ ಹೇಳುವ ಅಮ್ಮ ಇದಾಳೆ.. ಆದ್ರೇನ್ ಮಾಡಲಿ

ನನ್ನ ಸೀತಾದೇವಿ ಬೇರೆ ರಾಮನನ್ನೇ ಹುಡುಕಿಕೊಂಡುಬಿಟ್ಟಿದ್ದಾಳೆ! ಕಾರಣ ಅವಳು ಹೇಳಲಿಲ್ಲ , ಹೇಳುವುದಿಲ್ಲ. ನನಗೆ ಬೇಡವೂ ಬೇಡ.

ಪಿಲಿಯನ್ ತುಂಬುವುದಿಲ್ಲ, ರೆಸ್ಟುರಾ ತಿಂಡಿ ಯಾವತ್ತಿಗೂ ಇನ್ನೊಂದ್ಸ್ವಲ್ಪ ಹೊತ್ತಿರಲಿ, ಈಗ್ಲೇ ಖಾಲಿಯಾಗುವುದು ಬೇಡ ಅನ್ನಿಸುವುದಿಲ್ಲ, ಸಿನಿಮಾಗೆ ಕ್ಯೂ ನಿಂತು ಅಡ್ವಾನ್ಸ್ ಟಿಕೆಟ್ ಖರೀದಿಸುವ ಉತ್ಸಾಹವಿಲ್ಲ, ಯಾರು ನೋಡಿದರೇನು ಬಿಟ್ಟರೇನು ಅನ್ನುವ ಅಸಡ್ಡಾಳತನ.. ಅಮ್ಮನ ಸಲಹೆಗೆ ಹುಂ ಅನ್ನುವ ಬಿಗುಮಾನದ ಹೊರತಾಗಿ ಇನ್ನೇನಿದೆ.. ನನ್ನ ಹಕ್ಕಿ ಮೊಟ್ಟೆ ಮರಿಯಾದ ಕೂಡಲೇ ಪುರ್ರಂತ ಹಾರಿಹೋಗಿದೆ. ಮರಿಗೆ ನನ್ನ ನೆನಪಿನ ತುತ್ತಿನೂಟ.. ಗೂಡಿನ ಕಡ್ಡಿ ಒಂದೊಂದೇ ಬೀಳುತ್ತಿದೆ. ಚಳಿಗಾಲಕ್ಕೆ ಬೆಚ್ಚಗಿರಿಸಲು ಹತ್ತಿಪುರುಳೆ ತರಬೇಕೆನಿಸುತ್ತಿಲ್ಲ.. ಈಗ ಭಾವಗೀತೆಗಳ ಮೆರವಣಿಗೆ ಮುಗಿದು ಗಝಲುಗಳ ಸಂಜೆಪಯಣ.. ಚಮಕ್ತೇ ಚಾಂದ್ ಕೋ ಟೂಟಾ ಹುವಾ ತಾರಾ ಬನಾಡಾಲಾ..

ಇಲ್ಲ ನನಗೆ ಸಿಟ್ಟಿಲ್ಲ ದುಃಖವಿಲ್ಲ, ಏನೂ ಇಲ್ಲದ ಭಾವವನ್ನು ಭರಿಸುವ ತಾಕತ್ತಿಲ್ಲ. ಹೊಸದೊಂದು ಗೂಡಿನ ನೆನಪು ಮೈಯನ್ನು ಮುಳ್ಳಾಗಿಸುತ್ತದೆ. ದೇವಾನಂದನ ತರ - ತೇರೇ ಘರ್ ಕೇ ಸಾಮ್ನೇ - ಅಂತ ಅವಳ ಮನೆ ಮುಂದೇನೇ ಮನೆ ಮಾಡ್ಕೊಂಡ್ ಬಿಡಲಾ ಅಂತ ಯೋಚಿಸಿ ನನ್ನಷ್ಟಕ್ಕೆ ನಾನೆ ನಗುತ್ತೇನೆ.. ಉಂಹುಂ ನನ್ನ ದಾರಿಯಲ್ಲ ಅದು..

ಅವಳ ಗೂಡು ಬೆಚ್ಚಗಿರಲಿ.

ನಾನು ಮುಸಾಫಿರ್ ಹುಂ ಯಾರೋ.. ಅಂತ ಗುನುಗುವ ಕಿಶೋರನ ಉಲಿಯಾಗಿದ್ದೇನೆ. ಗೂಡಿನ ಯೋಚನೆ ಇಲ್ಲದೆ ಹಾಯಾಗಿದ್ದೇನೆ..

ಚಾಂದ್ ಸೀ ಮೆಹಬೂಬಾ ಹೈ ವೋ - ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ.. ಆದ್ರೆ.. ಚಂದಿರನಷ್ಟೇ ದೂರ.. ಚಂದಿರನಷ್ಟೇ ಹತ್ತಿರ..

(ತಪ್ಪು ತಿದ್ದಿದ ತ್ರಿವೇಣಿಯಕ್ಕನಿಗೆ ಆಭಾರಿ)

Tuesday, December 11, 2007

ವೈಶಾಲಿಯಲ್ಲಿ...

ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ ಕನಸಿನಂತಹ ದಿನಗಳ ನೆರಳು ಬಿದ್ದಿರುವ ಜಾಗದ ಗಾಳಿಯನ್ನೊಮ್ಮೆ ಉಸಿರೊಳಗೆ ಸೇರಿಸಬೇಕೆಂದು..

ಇಲ್ಲ ಅಯ್ಯೋ ಇದಲ್ಲ ಇದಲ್ಲ ಅದು...

ನಿನ್ನೆ ಕೆಲಸ ಮುಗಿಸಿ ಹಗುರಾದವಳು ಕೆಲಕ್ಷಣಗಳ ಮಟ್ಟಿಗೆಂದು ಟೀವಿ ಹಾಕಿ ಹೈರಾಣಾಗಿ ಹೋದೆ. ಆ ನನ್ನ ವೈಶಾಲಿಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಟ್ರಾಕ್ಟರಿಲ್ಲ, ಎತ್ತಿಲ್ಲ ಅಂತ ಹೇಳಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದರು. ಹಿಂದೆ ಅವರನ್ನು ಮ್ಯಾನೇಜ್ ಮಾಡುತ್ತ ನಿಂತಿದ್ದ ಅಜ್ಜನಂತ ರೈತ.. ಅವನ ಮನೆಯಲ್ಲೂ ಮಕ್ಕಳಿರಬಹುದು! ಅವನಿಗದು ಬೇಕಿಲ್ಲ. ಮಾಲೀಕ ಕೊಟ್ಟ ಜೀತದ ಮಕ್ಕಳನ್ನು ಮನುಷ್ಯರಂತೆ ನೋಡಬೇಕೆಂದಿಲ್ಲ.. ಮಾಲಿಕ ಖುಶಿಯಾಗಬೇಕು. ನೆಲ ಉತ್ತಬೇಕು. ಫಸಲು ಬೆಳೆಯಬೇಕು..ಮನೆಯಲ್ಲಿ ತುತ್ತಿನ ಚೀಲ ತುಂಬಬೇಕು. ಆ ಪುಟ್ಟ ಜೀವಗಳು..ಅಪ್ಪ ಅಮ್ಮರೆಂದೋ ಮಾಡಿದ ಸಾಲಕ್ಕೆ ಅಕ್ಷರಶಃ ನೊಗ ಹೊರುತ್ತಿದ್ದಾರೆ. ಅವರಪ್ಪ ಅಮ್ಮ ಆರಿಸಿ ಕಳಿಸಿದ ನೇತಾ ಯೂನಿಯನ್ ಮಿನಿಸ್ಟರ್ (ರೂರಲ್ ಡೆವಲಪ್ ಮೆಂಟ್ ಬೇರೆ) ಆಗಿ ಮನೆಯಲ್ಲಿ ಕ್ರಿಸ್ಮಸ್ ರಜೆಗೆ ಯಾವ ರೆಸಾರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಲೆಂದು ಯೋಚನೆ ಮಾಡುತ್ತಿರುತ್ತಾನೆ. ಅವನ ತಮ್ಮನೇ ಆದ ಜಮೀನ್ದಾರ ನಡೆಸುವ ಈ ಅಮಾನುಷ ಕೃತ್ಯ ಅವನಿಗೆ ಗೊತ್ತೇ ಇಲ್ಲ. ಮೀಡಿಯಾ ಪ್ರಶ್ನೆ ಮಾಡಿದರೆ - ಇಲ್ಲಪ್ಪ ನನ್ ತಮ್ಮ ಊರಲ್ಲಿ ಏನು ಕೆಲಸ ಮಾಡುತ್ತಿರುತ್ತಾನೋ ಇಲ್ಲಿ ದಿಲ್ಲಿಯಲ್ಲಿ ಕೂತ ನನಗೇನು ಗೊತ್ತು.. ನನಗೇನು ಸಂಬಂಧ? ಇದೆಲ್ಲ ಪ್ರತಿಪಕ್ಷದವರ ಕುತಂತ್ರ ಅಂತ ಸಬೂಬು ಹೇಳುತ್ತಾನೆ..

ಮಕ್ಕಳು ಎಳೆಯಲಾರದ ನೇಗಿಲನ್ನು, ಎಳೆದುಕೊಂಡು ಮುನ್ನಡೆಯುತ್ತಿದ್ದಾರೆ, ಹಿಂದೆ ಹಸಿವಿನ ಚೀಲ ತುಂಬಬೇಕಾಗಿರುವ ಇನ್ಯಾವನೋ ರೈತ ಕೈಯಲ್ಲಿ ಬಾರುಕೋಲು ಹಿಡಿದು ತುತ್ತಿನ ಚೀಲ ತುಂಬಹೊರಟಿದ್ದಾನೆ, ಇವರನ್ನೆಲ್ಲ ಬಳಸಿಕೊಂಡ ಜಮೀನುದಾರ ಇಲ್ಲಿ ಟ್ರಾಕ್ಟರ್ ಬರೋಲ್ಲ, ಎತ್ತು ಇಲ್ಲ, ಇರುವ ಆಳುಮಕ್ಕಳನ್ನ ಬಳಸದೆ ಇನ್ನೇನ್ ಮಾಡಲಿ, ಅವರಿಗೆ ಸಂಬಳ ಕೊಡ್ತೇನಲ್ಲ ಅಂತ ನಿರ್ಲಜ್ಜನಾಗಿ ಹೇಳುತ್ತಾ ಮೀಸೆ ಸವರುತ್ತಿದ್ದಾನೆ..

ಹುಲಿಯಂತ ಹುಲಿಯೂ ಹಸಿವಾದಾಗ ಆಕ್ರಮಣ ಮಾಡುತ್ತದೆಯಲ್ಲವೆ! ಇವನು ಯಾವ ಜಾತಿ?!(species)

ಎಲ್ಲೂ ನಡೆಯಬಾರದ ಕ್ರೌರ್ಯದ ಪರಮಾವಧಿ - ವೈಶಾಲಿಯಲ್ಲಿ, ಬುದ್ಧನ ಊರಲ್ಲಿ, ಗಣತಂತ್ರದ ಮೊದಲ ಉಲಿ ಹಬ್ಬಿದಲ್ಲಿ.. ನಾವೆತ್ತ ಹೋಗುತ್ತಿದ್ದೇವೆ?!

ನನಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ :(

Monday, December 10, 2007

ಹೂವಿನಂತ ಕವಿತೆ

ಹೂವಿನಂತ ಕವಿತೆ
ಹಕ್ಕಿಯಾಗಿ ಹಾರಿಬಂದು
ಚೀಂವ್ ಗುಟ್ಟಿದ ಸಂಜೆ
ನೀಲಿ ಆಗಸದಲ್ಲಿ
ಕೆಂಪಿ ಸೂರ್ಯ ಮುಳುಗಿ
ಚಳಿಯ ಹೊದಿಕೆಯಿಂದಿಣುಕಿ
ನಗುವ ತಾರಾವಳಿ;


ಹಬೆಯಾಡುವ ಕಾಫಿ ಗ್ಲಾಸಿನಲ್ಲಿ
ಮತ್ತೆ
ಹೂವಿನಂತ ಕವಿತೆ
ಬೆಚ್ಚನೆ ನೆನಪಾಗಿ ಪಿಸುಗುಟ್ಟಿ
ರಸ್ತೆ ತುಂಬೆಲ್ಲ ಬೆಳಕಾಗಿ
ಪಾದಪಥದ ನಸುಗತ್ತಲಲ್ಲಿ
ಗೆಳೆಯರ ನಗುವಿನ ಗೀತಾವಳಿ;


ಹಕ್ಕಿ ಹಾರಿ ಹೋಗಿ
ನೆನಪು ಮಸುಕಾಗಿ
ಹೂವಿನಂತ ಕವಿತೆ
ಪದಗಳಷ್ಟೇ ಆಗಿ..
ಅಷ್ಟೇ ಮತ್ತೇನಿಲ್ಲ..
ಕಾಯುತ್ತಿದ್ದೇನೆ ಹೂವಿನಂತ ಕವಿತೆ
ಹಕ್ಕಿ ಹಾಗೆ ಹಾರಿ ಬರಬಹುದಾದ ಸಂಜೆಗೆ!