Thursday, June 26, 2008

ಅಶ್ರುತ ಅನುರಣನ.

ಹಸಿರು, ಮಳೆ, ಗುಡ್ಡ, ಹಿನ್ನೀರು
ಹಣ್ಣು,ಜೇನು,ಗಾಳಿ,ಮಳೆ, ಬೆಳದಿಂಗಳ ಬಾಲ್ಯ,
ಮಾವನೊಡನೆ ಮುನಿಸು, ಅತ್ತೆಯೊಡನೆ ಸೊಗಸು,
ಅಜ್ಜನ ಕತೆ, ಅಮ್ಮಮ್ಮನ ಕೊಂಡಾಟ,
ರಜೆಯ ಮಜದ ಮೂರ್ತ ರೂಪ
ನನ್ನದೇ ಊರೆನಿಸಿದ್ದು
ಇವತ್ತು
ನನ್ನದಲ್ಲ, ...!!?? :( :(

ಅದೇ ಹಸಿರು, ಕೊಂಚ ಧೂಳುಬಡಿದಿದೆ
ಅದೇ ಮಳೆ, ಏನೋ ಸ್ವಲ್ಪ ಹಿಂಚು ಮಿಂಚು
ಅದೇ ಗುಡ್ಡ, ಅಲ್ಲಲ್ಲಿ ಬೋಳಾಗಿದೆ
ಅದೇ ಹಿನ್ನೀರು, ಸ್ವಲ್ಪ ಸವುಳಾಗಿದೆ
ಹಣ್ಣು ಜೇನು ಗಾಳಿ ಮಳೆ ಬೆಳದಿಂಗಳು
ಹಾಗೇ ಇರಬಹುದೇನೋ
ಹೋಗಿ ರುಚಿ ನೋಡುವವರು ಯಾರು,ಯಾವಾಗ?


ಸಂಬಂಧಗಳು ರೇಷಿಮೆಯಂತೆ-
ಅಜ್ಜನ ಕತೆಯದೇ ರೂಪಕ;
ಬಾಲ್ಯದ ಜೋಕಾಲಿ ಜೀಕಿ ಮುಗಿಸಿ,
ಬದುಕಿನ ಏರು ಹತ್ತುತ್ತಾ
ಉಸಿರುಬಿಡುತ್ತಿರುವವಳಿಗೀಗ ಹೌದೇಹೌದೆನಿಸುತ್ತಿದೆ:
ಸಂಬಂಧಗಳು ರೇಷಿಮೆಯಂತೆ-
ಸುಲಭವಾಗಿ ಸಿಕ್ಕಾಗುತ್ತವೆ,
ಕಡಿದ ಮೇಲೆ ಜೋಡಿಸಲಾಗದು.
ಮೊನ್ನೆ ಮೊನ್ನೆ
ನಕ್ಕಂತೆ ಅನಿಸಿದ ನಗು,
ಆಡಿದ ಮಾತು, ನೋಡಿದ ನೋಟ
ಎಲ್ಲ ಯಾವಾಗ ಹೇಗೆ ಬದಲಾಯಿತು,
ಗೊತ್ತಾಗುತ್ತಿಲ್ಲ!
ಕೂತು ಕತೆಹೇಳಿ ತರ್ಕಿಸಲು ಅಜ್ಜನಿಲ್ಲ,
ಅಮ್ಮಮ್ಮ ಅವನ ಹಿಂದೆಯೇ ಹೊರಟ ಹಾಗಿದೆ,

ಉಳಿದೆಲ್ಲರೂ ಬದಲಾಗುವ ಕಾಲದ
ಮುಳ್ಳು ಹಿಡಿದು ನೇತಾಡುತ್ತಾ
ಮನದ ತುಂಬ
ಪ್ರೀತಿಯ ಬಂಧವೊಂದರ ಸೂತಕ.


ಮನುಷ್ಯರು ಬದಲಾಗಬಹುದು
ನಿನ್ನೆಯಿದ್ದವರು ಇಂದಿಲ್ಲ,
ಇಂದಿನ ನಾವು ನಾಳೆಗೆ ಸಲ್ಲ,
ಮರ,ಗುಡ್ಡ,ಮಳೆ, ಕಾಡು ಹಾಗಲ್ಲವಲ್ಲ..
ಸೂತಕದ ಒಳಮನೆಯಲ್ಲಿ
ನೆನಪಿನ ದೀಪದ ಮಂದ ಬೆಳಕು!
ಅಲ್ಲಿ ಬೇಕೆಂದಾಗ
ಹೊರಗಿನ ಹಂಗಿಲ್ಲದ
ಅಜ್ಜ,ಅಮ್ಮಮ್ಮ,ಕಾಡು,ಕತೆ,ತಿರುಗಾಟ,
ಅಕ್ಕರೆಯ ಬಂಧದ ಅಶ್ರುತ ಅನುರಣನ.