Wednesday, April 2, 2014

ಕರವಸ್ತ್ರದಂತ ಕವಿತೆ!

ಹುಲ್ಲು ಮುಚ್ಚಿದ
ಹೆಜ್ಜೆ ಮೂಡದ
ಹಾದಿ.

ನೀಲಿಯಲಿ ನೆಲೆಸಿ,
ನೆತ್ತಿ ಸುಡುವವನ
ತಪ್ಪಿಸಿ,
ನೇವರಿಸಿದ
ಮರಹೊದಿಕೆಯ
ಕಡುಹಸಿರು
ನೆರಳು,

ಆರೋಹದ
ನಡುವೆ
ತಿಳಿಹಳದಿ,ಗುಲಾಬಿ
ನೀಲಿ, ಬಿಳಿ, ನೇರಳೆ
ಹೂ ಹೊದ್ದ
ಬಯಲು.

ಬೆವರಿಳಿದು
ಉರಿಯಾಗಿ
ಕಿರಿಹಿಡಿದ ಕಣ್ಣಿಗೆ
ಕಂಡ ಪಯಣದ ಸೊಗಸೇ
ಸೊಗಸು!

ಕಳೆದಿದ್ದು ಎಲ್ಲಿ
ಗಮ್ಯವೆಂದುಕೊಂಡ
ನಿಲುಗಡೆಯಲ್ಲೇ?

ಅದೇಕೋ
ಕಣ್ಣುರಿ,
ಹನಿ ಹೊರಬರದಂತೆ
ತಡೆದು.
ನೆನಪಿನ ಕರವಸ್ತ್ರಕ್ಕೆ
ಸದಾ ಕೆಲಸ,
ಒದ್ದೆಯಾದಷ್ಟೂ
ಒಣಗಿಸುತ್ತದೆ

ಬೆಂಗಳೂರಿನ ಬಿಸಿಲು.

Tuesday, April 1, 2014

ಇಫ್ ವಿಂಟರ್ ಕಮ್ಸ್... ಕೆನ್ ಸ್ಪ್ರಿಂಗ್ ಬೀ ಫಾsssರ್ ಬಿಹೈಂಡ್...? - ಶೆಲ್ಲಿ.

ಅರ್ಧಕ್ಕೆ ಮಡಿಚಿಟ್ಟ ಪುಸ್ತಕ ಸೆಳೆಯುತ್ತದೆ.
ಆದರೇನು ಮಾಡಲಿ ಒಗ್ಗರಣೆಯ ಸಾಸಿವೆ ಸಿಡಿದ ಮೇಲೇ ಪಾತ್ರೆ ಮುಚ್ಚಿಟ್ಟು ಆ ಬದಿಗೆ ಹೊರಳಬೇಕು.
ಅಷ್ಟರಲ್ಲಿ ಇವಳಿಗೆ ಕಕ್ಕ ಬಂದು ಅಮ್ಮಾ ಆsssssತೂ... ತೊಳೆದು, ಕೈತೊಳೆದು, ಅವಳ ಕೈತೊಳೆಸಿ, ಈ ಕಡೆಗೆ ಬರುವಾಗ ಅಕ್ಕನೆಂದರೆ ಪ್ರೀತಿಯ ತಮ್ಮನ ಚಡ್ಡಿಯಲ್ಲಿ ಸುಸ್ಸೂ ಆಗಿಬಿಟ್ಟಿದೆ.
ಚಡ್ದಿ ತೆಗೆದು ನೆಲ ಒರೆಸಿ ಬೇರೆ ಚಡ್ಡಿ ಬದಲಾಯಿಸುವಷ್ಟರಲ್ಲಿ ಇವನಿಗೆ ಟೀ ಕುಡಿಯುವ ಸಮಯ.
ಟೀ ಮುಗಿಯುವಾಗ ಗೆಳತಿಯ ಫೋನು ಬೆಳಗ್ಗಿಂದ ಮೂರು ಸಲಿ ಮಿಸ್ ಕಾಲ್ ಆಗಿಯೂ ಈಗ ಎತ್ತದಿದ್ದರೆ ಎಂಬ ಹಿಂಜರಿಕೆಯಲ್ಲಿ ಮಾತು ಶುರು.
ಮಾತು ಮುಗಿಯುವಾಗ ಕುಕ್ಕರಿನಲ್ಲಿ ಅನ್ನ ಬೆಂದಿದೆ. ಓಹ್ ಮಜ್ಜಿಗೆ ಕಡೆಯಲು ಮರೆತು ಹೋಗಿದೆ.
ಕಡೆದ ಮಜ್ಜಿಗೆಗೆ ಶುಂಠಿ ಚೂರು ಜಜ್ಜಿ, ಕರಿಬೇವೆನೆಸಳು ಸೇರಿಸಿ, ದಿವಾನೆಯ ಮೇಲೆ ಬಿದ್ದುಕೊಂಡಿರುವ ಸಾಪ್ತಾಹಿಕ ಪುರವಣಿಯ ಪುಸ್ತಕ ವಿಮರ್ಶೆಯಲ್ಲಿ ಒಂದು ಮುಗಿಯುವಷ್ಟರಲ್ಲಿ ಮಧ್ಯಾಹ್ನದ ಗಿರಣಿ ಶುರು.
ಎಳೆಯದಕ್ಕೆ ಮಮ್ಮು ನುರಿದು, ತುಸು ಬೆಳೆದವಳಿಗೆ ಕಲೆಸಿಟ್ಟು ಬಾಯಿ ಕಳೆಸಿ ಊಟ ಮುಗಿಯುವಷ್ಟರಲ್ಲೀ ಟಾಮ್ ಅಂಡ್ ಜೆರೀ ಎಪಿಸೋಡೇ ಮುಗಿದಿದೆ.
ಈಗ ದೊಡ್ಡವನ, ಮಕ್ಕಳ ಅಪ್ಪನ ಬಾರಿ. ಭಾನುವಾರವಾದರೂ ಹಪ್ಪಳ ಮುರಿಯದೆ ಉಣ್ಣುವುದು ಹೇಗೆ ಎಂದರೂ ಗೊತ್ತೆನಗೆ.
ಈ ನಿನ್ನಡಿಗೆಯ ಚಂದಕ್ಕೆ ಹಪ್ಪಳವಾದರೂ ಇದ್ದರೆ ಹೇಗೋ ಒಳಗೆ ತಳ್ಳಬಹುದು ಎಂಬ ಅಂದಾಜು ಅವನದೆಂದು. :)
ಎಲ್ಲರ ಊಟ ಮುಗಿದು ಚಿಕ್ಕದನ್ನು ಹೇಗೆ ಹೇಗೋ ಮಂಚಾಲೆಗೆ ಹತ್ತಿಸಿ ಒಂದು ಪುಟೀ ನಿದ್ದೆಯನ್ನೂ ಮುಗಿಸಿ ಬಂದು, ನನ್ನ ಊಟ ಮಾಡುವಾಗ.. ಆಹಾ ಏಮಿ ರುಚಿ.. (ಕುಂವೀ ಟೈಟಲ್ಲು ಕದ್ದರೇ ಆ ರುಚಿ ಸಿಗುವುದು, ಹೇಗೂ ಸೃಜನಶೀಲ ಕದಿಯುವಿಕೆಯೇ ಸೊಗಸು) ಯಾಕಂದರೆ ನನ್ನ ಊಟಕ್ಕೆ ಜೊತೆಗಿರುವುದು ಇಡೀ ಪುರವಣಿ, ಮತ್ತು ಅಕಸ್ಮಾತ ಮುಗಿದು ಹೋದರ ಅದೇ ಅರ್ಧಕ್ಕೆ ಮಡಿಚಿಟ್ಟ ಪುಸ್ತಕ.
ಹೀಗೆಲ್ಲ ಇರುವಾಗ, ಓದಿ ಅದರ ಬಗ್ಗೆ ಬರೀ ಎಂದರೆ ಹೇಗೆ???
ಹೆಚ್ಚೆಂದರೆ ಸ್ಟೇಟಸ್ ಹಾಕಬಹುದು.
ಹಾಗಂತ ಕತೆ ಒಳಗಿಳಿದಿಲ್ಲವೆಂದುಕೋಬೇಡಿ. ಅದಿದೆ ಹೊರಳಾಡುತ್ತ ಒಳಗಿನ ಮನದ ಮೆತ್ತೆಯ ಮೇಲೆ.
ಅಲ್ಲಲ್ಲಿ ತಿವಿಯುತ್ತ ಇನ್ನಲ್ಲಲ್ಲಿ ಮುದಗೊಳಿಸುತ್ತಾ, ಬರಿಯ ಕಾಗದದ ಮೇಲಿನ ಇಂಕಲ್ಲ ಅದು. ಮಾತನಾಡುವ ಭಾವಗಳು. ಎಲ್ಲಿ ಓದಿದ ಮನವು ಮಾತ ಹೊರಡಿಸುವುದೋ ಅಲ್ಲಿ ಕಿವಿಯಾಗುವ ಭಾವಗಳು.
ಚಳಿ ಮುಗಿದು ಬೇಸಿಗೆಯ ಬಿರುವಿಗೆ ಸೂಸುವ ಹೊಂಗೆ ಮರದ ನೆರಳಿನ ಗಾಳಿಯ ಕುಳಿರುಗಳು.
ಹೌದು. ಚೈತ್ರ ವೈಶಾಖ ವಸಂತವನ್ನ ನಾನು ಓದಿದ್ದು ಹೀಗೇ. ಎರಡು ಗಂಟೆಯಲ್ಲಿ ಒಂದೇ ಸಲಕ್ಕೆ ಬಿಡುಬೀಸಾಗಿ ಮುಗಿಸಿದ ಮೊದಲ ಓದನ್ನು ವಾರಗಟ್ಟಲೆಯ ಮರುಓದಾಗಿಸಿ ಅನುಭವಿಸಿದ್ದು.
ಓದಿ ಮುಗಿದ ಮೇಲೆ ಅನ್ನಿಸಿದ್ದು - ಹಾಡಿ ಹಾಡಿ ಬೇಸರಾಗಿ ನೆಲಕೆಸೆದಳು ಕೊಳಲನು.. - ಎಂಬ ಮಾತು ಗಂಡು,ಹೆಣ್ಣು, ಮಾಲೀಕ-ಕೆಲಸಗಾರ, ಬರಹಗಾರ, ಓದುಗ, ಮತ್ತು ಎಲ್ಲ ಪೂರಕ ಸಂಬಂಧಗಳಿಗೂ ಅನ್ವಯಿಸುತ್ತದೆ. ಜೋಗಿ ಕತೆಯ ಎಲ್ಲ ಚಾಪ್ಟರುಗಳಿಗೆ ಇಂತಹುದೇ ಕವಿಸಾಲುಗಳನ್ನ ಶೀರ್ಷಿಕೆಯಾಗಿಟ್ಟಿದ್ದಾರೆ.
ಹಾಗೆಂದೇ ಕತೆ ತನ್ನ ಸಾಲುಗಳಲ್ಲಿ ಮಾತ್ರ ನಿಲ್ಲದೆ ಅದನ್ನು ಮೀರಿದ ಭಾವೋತ್ಕರ್ಷವನ್ನು ಹುಟ್ಟಿಸುತ್ತದೆ.
ಕೊಳ್ಳುಬಾಕ ಸಂಸ್ಕೃತಿಯ ಮುಖವನ್ನ ಹೊತ್ತೂ ಅದರೊಳಗಿನ ಶಚೀತೀರ್ಥವನ್ನ, ಕೊಳದಿ ಮುಳುಗಿದ ಉಂಗುರವನ್ನ, ಉಂಗುರವ ನುಂಗಿದ ಮೀನನ್ನ, ತೋರಲು ದಂಡೆಯ ಮೇಲೇ ಕೂತೇ ಕಪ್ಪೆಕಲ್ಲು ಎಸೆಯುತ್ತಿರುವ ಕತೆಗಾರಿಕೆಯ ಸೊಗಸನ್ನ ಕಟ್ಟಿಕೊಡುತ್ತದೆ.
ಚಿಟ್ಟೆಯಾಗಿ ಮಸಿಯಿಲ್ಲದ ಅಡುಗೆ ಮನೆಯೊಳಗೆ ಬರುವ ಭಾವಭೃಂಗವನ್ನ ಒಳಾಂಗಣ ಗಿಡದ ವೊಲು ಕಾತರಿಸುವ, ಕಥಾನಾಯಕಿ ಹಂಬಲಿಸುವ ಪರಿ ಎಲ್ಲೂ ನಡೆದೀತು. ಮಲೆನಾಡಿನ ಮಕ್ಕಳು ಬಾರದ ಹಳೆಮುದುಕಿಗೂ ಅನಿಸೀತು. ಅಥವಾ ಐಟಿ ಕ್ಯೂಬಿನ ಇಂಗ್ಲಿಷ್ ಪಲುಕಿನ ನಡುವಯದವಳಿಗೂ, ಮಕ್ಕಳು ಮನೆ ಆಫೀಸುಗಳ ನಡುವೆ ದೊಂಬರಾಟ ನಡೆಸುವ ನನ್ನಂತವಳಿಗೂ... ಬೇರು ಕತ್ತರಿಸಿ, ಬೊನ್ಸಾಯ್ ಕುಂಡದ ಆಕೃತಿಗೆ ಹೊಂದಿ ಬೆಳೆದ ಎಲ್ಲ ಚಿಗುರುವಿಕೆಗಳಿಗೂ ಅನಿಸುವ ಹಾಗೆ. ಹುಡುಗಿಗೆ ಮಾತ್ರವೇ ಅಲ್ಲ ಇದು ಹುಡುಗನೊಳಗೂ ಹೊಕ್ಕು ಕಾಡುವ ಹಾಗೆ...
ಹಂಬಲ,ತಲ್ಲಣ ಮತ್ತು ಪ್ರತೀಕ್ಷೆಗಳ ಬದುಕಿಗೆ.. ಊಹೆಗೆ ಮೀರಿದ ಅಂತ್ಯವನ್ನ ಭರಿಸಲು ತತ್ತರಿಸುವ ಎಲ್ಲ ಭಾವಸ್ಪಂದ ಮನಸುಗಳಿಗೆ ಕಲಕುವ ಹಾಗೆ
ಚೈತ್ರ-ವೈಶಾಖ... ವಸಂತ. ಹೌದು ಎಲ್ಲ ಹಿಮಂತಗಳ ಕೊನೆಗೆ ಚಿಗುರೆಬ್ಬಿಸುವ ವಸಂತವಿದೆ ಎನ್ನುವ ಮಾತನ್ನೇ ಬೈಂಡಿಂಗ್ ವೈರಿನ ಹಾಗೆ ಹೊಲಿದುಕೊಂಡ ಕತೆ ಬಲು ಬೇಗ ಮುಗಿಯಿತು. ಬಹುಶಃ ಕತೆಯಾಚೆಗಿನದ್ದನ್ನು ನಾನು ಧ್ಯಾನಿಸುತ್ತ ಕೂರಲು ಸಮಯ ಸಿಗಲಿ ಎಂದಿರಬೇಕು.
ಕತೆಗಾರನಿಗೆ ಕರುಣೆ ಜಾಸ್ತಿ. ಕ್ರೌರ್ಯಕ್ಕಿಂತ ಒಂದು ನೂಲು ಕರುಣೆಯೇ ಜಾಸ್ತಿ.
ಅರ್ಧಕ್ಕೆ ಮಡಿಚಿಟ್ಟ ಪುಸ್ತಕ ಪೂರ್ತಿ ಮುಗಿದಿದೆ. ಈ ಭಾನುವಾರ ಅರ್ಧ ಮಡಿಚಿಟ್ಟ ಪುಸ್ತಕವಿಲ್ಲದೆಯೆ ಅದದೇ ಕೆಲಸ ಪುನರಾವರ್ತನೆಯೊಡನೆ ನಡೆಯಿತು. ಮುಗಿದ ಪುಸ್ತಕ ಒಳಗೊಳಗೇ ನನ್ನನ್ನು ಓದುತ್ತಿರುವ ಪರಿಗೆ ಸ್ವಲ್ಪ ಕಂಗಾಲು ಬಿದ್ದಿರುವುದು ಈ ಕ್ಷಣದ ಸತ್ಯ.

ನಗುವ ಪುರಂದರ ವಿಠಲ ಬರಬಹುದೆಂದು ಕಾಯುತ್ತಾ..