Friday, July 9, 2010

ನೆನಪು ನೇವರಿಕೆ

ಅಮ್ಮನಿಲ್ಲದೆ ನಿದ್ದೆ ಬರಲೊಲ್ಲದೆಂಬವಳ
ಮಗ್ಗುಲಿಗೆ ಅವುಚಿ ಮಲಗಿಸಿ;
ಶಾಲೆಯಂಗಳದ ಧೂಳು
ಹೊದ್ದು ಮನೆಗೆ ಬರುವವಳ
ಬಾಯಿ ಬಡಿಗೆಗೆ
ಎರಡು ಹಿಡಿ ಅವಲಕ್ಕಿ
ಮೇಲೆ ಮೊಸರು ಬೆಲ್ಲ ಕರುಣಿಸಿ;
ರಾತ್ರಿಯಿಡೀ ಯಕ್ಷಗಾನ ನೋಡಿ
ತಲೆನೋವು ಬಂತೇ
ಅರ್ಧ ಕಡಿ ನಿಂಬೆಹಣ್ಣೂ
ಎರಡು ಚಮಚ ಕೊಬ್ರಿ ಎಣ್ಣೆ
ಹಚ್ಚಿ ತಿಕ್ಕಿ,
ಬಿಸಿ ಬಿಸಿ ಸುರಿನೀರ ತಲೆಸ್ನಾನ;
ಕುಣಿಕುಣಿದು ನಲಿದ ಕಾಲು ನೋವೆ
ರಬ್ನಿಸಾಲ್ ಹಚ್ಚಿ ತಿಕ್ಕಿ,
ಹಳೆಸೀರೆಯಿಂದ ಕಿತ್ತ ಫಾಲ್ಸ್
ಸುತ್ತಿ;
ಇವತ್ತು ಪರೀಕ್ಷೆ,
ಬೆಳಗಿಂಜಾವಕ್ಕೆದ್ದು
ಓದುತ್ತ ಕೂತವಳ
ಕೈಗೆ ಬಿಸಿಬಿಸಿ ಚಾ ಹಿಡಿಸಿ;
ಮಧ್ಯಾಹ್ನದ ಊಟ ಗಡದ್ದಾಯಿತೇ
ಮಡಿಚಿ ರೆಡಿ ಮಾಡಿಟ್ಟ
ಕವಳದಲ್ಲರ್ಧ ಸಲ್ಲಿಸಿ;
ಬೆಳೆಸಿದವಳು,
ಬೆಳೆದು ನಿಂತ ಮೇಲೆ
ಅರೆಬೆರಗು,ಅರೆಮೆಚ್ಚುಗೆ,ಉಳಿದೆಲ್ಲ ಪ್ರೀತಿ
ಎರೆದವಳು,
ವರ್ಷವೆರಡರ ಹಿಂದೆ
ಯಾತ್ರೆ ಮುಗಿಸಿ ಹೋಗಿಬಿಟ್ಟಳು.
ಬಿಳಿಬಿಳಿ ಕಣ್ಣು,ಪುಟ್ಟ ಜಡೆ,
ಸುಕ್ಕು ಮೈ, ಮುಗ್ಧ ನಗು
ಎಲ್ಲ ಪ್ರೀತ್ಯಾದರಗಳ
ನೆನಪಿನಂಚಿಗೆ ಹೊಳೆದು
ನಿಲ್ಲುವುದು
ಹೊರಡುವ ಮೊದಲು
ಕಿರಿಹಿಡಿದು ನೋಡಿದ ನೋಟ
ಏನು ಹೇಳಬೇಕಿತ್ತು ಅಮ್ಮಮ್ಮಾ?!
ನನಗೆ ಈಗ ಅನ್ನಿಸುತ್ತಿರುವುದೆಲ್ಲ
ನೀನು ಹೇಳದೆ ಉಳಿದಿದ್ದಾ!
ಆಚೆಮೊನ್ನೆ ತಿಥಿಯಾಯಿತು,
ನಿನ್ನೆ ವಡೆ,ಸಿಹಿ ಸಿಕ್ಕಿತು.

ಹತ್ತಕ್ಕೆ ಕಳಕೊಂಡ ಮುಗ್ಧತೆಯ
ಸಾವಿನಂಚು ಮರಳಿ ಕೊಟ್ಟಿತೆ?
ಆಟವಾಡುವ ಮನಸ ಜಗ್ಗಿ ನಿಲ್ಲ್ಲಿಸಿ
ಕೆಲಸಕೆಳೆದ ಕೈಯನ್ನ
ವೃದ್ಧಾಪ್ಯ ಕ್ಷಮಿಸಬಹುದೆ?
ಬದುಕು ಸಲ್ಲಿಸದೆ ಹೋಗಿದ್ದನ್ನು
ತಿಥಿಯಲ್ಲಿ ಪಡೆಯಬಹುದೆ?
ಎಲ್ಲ ವಿಶೇಷ ಸಿಟ್ಟು,ದ್ವೇಷಗಳು
ಕೊನೆಯ ದಿನಗಳಲ್ಲಿ
ನಿನ್ನ "ಹೋಕ್ಯಳ್ಲಿ ಬಿಡು"ವಿನಲ್ಲಿ
ಒಂದೊಂದಾಗಿ ಕಳಚಿಕೊಂಡಾಗ
ಹೀಗಂದುಕೊಂಡೆ,
ಕಾಲ ಮಾಗುತ್ತಾ ಕಳೆಯುತ್ತದೆ!