Friday, July 6, 2007

ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

..ಚಡಪಡಿಕೆ ಶುರುವಾಗಿತ್ತು..ರುಟೀನ್ ಇರೋದೇ ಮುರಿಯಕ್ಕೆ ಎನ್ನುವ ಧ್ಯೇಯವಾಕ್ಯದ ಗೆಳೆಯರ ಪುಟ್ಟ ಗುಂಪು ನಮ್ಮದು. ಮುರಿಯುವ ದಾರಿ - ಗಜಿಬಿಜಿಯಿಂದ ದೂರಕ್ಕೆ, ಹಸಿರು ಹೊದ್ದ ಕಾಡಿನ ಮಡಿಲಿಗೆ ಹೋಗಿ, ಇಲ್ಲ ನಂಗೇನೂ ಗೊತ್ತಾಗ್ತಾ ಇಲ್ಲ, ಅಲ್ಲಿ ಏನ್ ನಡೀತಾ ಇದೆ - ಸರಿಯಾಗಿ ಕೆಲಸ ಮಾಡದ ಕೋಡ್, ಪೂರ್ತಿ ಮುಗಿಸಿರದ ರಿಪೋರ್ಟ್, ಹಾಗೇ ಉಳಿಸಿದ ಬಗ್, ಬಗೆಹರಿಯದ ಬಜೆಟ್ ಅನಲಿಸಿಸ್, ಎಲ್ಲ ಏನೋ ಗೊತ್ತಿಲ್ಲ, ಅಂತ ಕಣ್ಣು ಮುಚ್ಚಿಕೊಂಡು ಹಾಲುಕುಡಿವಂತೆ, ನಾವು ಕಾಡಿನ ಮಡಿಲು ಹುಡುಕಿ ಹೊರಡುತ್ತೇವೆ. ಅದೇನು ಕಡಿದಾದ ಬೆಟ್ಟದ ಕಷ್ಟಸಾಧ್ಯ ಚಾರಣವೇ ಆಗಬೇಕಿಲ್ಲ. ಎಲ್ಲಿ ಸರಳ ದಿನಚರಿಯ, ಹಸಿರ ನೆರಳೋ ಅಲ್ಲಿಗೆ ನಾವು.. ಒಂದು ದೀರ್ಘ ಪ್ರಯಾಣ, ಬೆಳಗಾ ಮುಂಚೆಯ ಬಸ್ ಸ್ಟಾಂಡ್ ಹೋಟೆಲಿನ ಗಬ್ಬು ಆದರೆ ಬಿಸಿಯಾದ ಕಾಫಿ, ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಶಟ್ಲಿನಲ್ಲಿ, ಎದ್ದೆದ್ದು ಹಾರಿ ಕೂರುತ್ತ, ಊರಿಂದ ದೂರಾಗಿ ಮನೆಯಲ್ಲೇ ಊರಿರುವ ಹಳ್ಳಿಯ ತಪ್ಪಲು ಸೇರುವುದು ನಮ್ಮನ್ನು ಸದಾ ಹಿಡಿದಿಟ್ಟ ಆಕರ್ಷಣೆ.. ಅಲ್ಲಿ ಬೆಟ್ಟವಿದ್ದರೆ, ದಟ್ಟ ಕಾನಿದ್ದರೆ, ಜಲಪಾತವಿದ್ದರೆ ಮುಗಿದೇ ಹೋಯಿತು.. ಹೋಗಲೇಬೇಕು.. ಮಳೆಯಾ, ಬಿಸಿಲಾ, ಚಳಿಯಾ ಅದೇನಡ್ದಿಲ್ಲ ಬಿಡಿ, ಮಳೆಯಲ್ಲಿ ಒದ್ದೆಯಾಗಿ ನಡೆದು ಬಂದು, ಬೆಚ್ಚಗೆ ಬಟ್ಟೆ ಬದಲಾಯಿಸಿ ಕೂರದಿದ್ದರೆ, ಮಳೆಯ ಮಜಾ, ಹೋಗಲಿ ಬೆಚ್ಚಗಿರುವುದರ ಮಜಾ ಹ್ಯಾಗೆ ಗೊತ್ತಾಗುತ್ತದೆ..?! ಅದಿರಲಿ, ಚಳಿಯಲ್ಲಿ ನಡುಕ ಬರುವಾಗ, ಕಾಲಿಗೆ ಸಾಕ್ಸ್ ಹಾಕಿ, ಬೆಚ್ಚನೆ ಸ್ವೆಟರ್, ಟೋಪಿ ಧರಿಸಿ ಕೂತು ಚಳಿಯನ್ನೇ ಸಿಪ್ ಮಾಡುವ ಮಜಾ.. ಬಿಸಿಲಲ್ಲಿ ಬೆವರಿಳಿದು, ಉಸಿರು ಭಾರವಾಗಿ, ಉಪ್ಪುಪ್ಪು ಬೆವರು ಕಣ್ಣಿಗಿಳಿದು ಉರಿಯಾಗಿ, ಬೆನ್ನ ಹೊರೆಯನ್ನ ಹೊರಲಾರದೆ ಹೊತ್ತು ಆ ಬೆಟ್ಟದ ತುದಿ ಸೇರಿ ಬೀಸಿ ಬರುವ ತಂಗಾಳಿಗೆ ಒಪ್ಪಿಸಿಕೊಂಡು, ಸುತ್ತಲ ಚಂದದಲ್ಲಿ ಮಾತು ಹೊರಡದೆ ಕೂತು ಹಗುರಾಗುವ ಕ್ಷಣದ ಖುಶಿ.. ಇದೆಲ್ಲದರ ಮುಂದೆ ಇನ್ನೇನಿದೆ..? ಅಬ್ಬಬ್ಬಾ ಅಂತ ಹಾಯಾಗಿ ಕೂತ ಕ್ಷಣದಲ್ಲಿ, ಇದನ್ನ ಇವತ್ತು ಇಷ್ಟೊತ್ತಿಗೆ ಮುಗಿಸಿ ರಿಪೋರ್ಟ್ ಕಳಿಸಬೇಕು ಎನ್ನುವ ಧಾವಂತವಿಲ್ಲ.. ಅಲ್ಲದೆ, ಪ್ರಕೃತಿಯ ಶಕ್ತಿ ಮತ್ತು ಭವ್ಯತೆಗೆ ಮಣಿದು ಮೆತ್ತಗಾದ ಕ್ಷಣಗಳಲ್ಲಿ ಎಲ್ಲ ಖಾಲಿಯಾಗಿ ಮತ್ತೆ ಎಲ್ಲ ತುಂಬಿಕೊಂಡ ಅದ್ವೈತ ಭಾವ..

ಹಾಗೇ ಕಳೆದ ವಾರ ನಾವು ನಾಲ್ವರು ಮುತ್ತೋಡಿ - ಭದ್ರಾ ಅಭಯಾರಣ್ಯ, ಚಿಕ್ಕಮಗಳೂರಿಗೆ ಹೊರಟೆವು.. ತುಂಬು ಮಳೆ, ಚಂದ ಕಾಡು, ಅಲ್ಲಲ್ಲಿ ಹೊಳವಾದಾಗ ಮರದಿಂದ ಮರಕ್ಕೆ ಉಲಿಯುತ್ತ ಹಾರುವ ಥರಾವರಿ ಹಕ್ಕಿಗಳು.. ನೆಂದು ಹೊಳೆವ ಹಸಿರ ಜೀವಗಳು..ಕೆಂಪಗೆ ತುಂಬಿ ಹರಿವ ಸೋಮವಾಹಿನಿ, ಅದರಲ್ಲಿ ಅದ್ದಿ ತೇಲಿ ಬರುತ್ತಿರುವ ದೊಡ್ಡ ದೊಡ್ಡ ಮರದ ಚಿಕ್ಕ ದೊಡ್ಡ ಕಾಂಡಗಳು.. ಸೋರುತ್ತಿದ್ದ ಕಾಟೇಜುಗಳು, ನೀಟಾಗಿ ಆಹ್ವಾನಿಸುತ್ತಿದ್ದ ಜಗುಲಿಯ ಮೇಲೆ ಬೆತ್ತದ ಖುರ್ಚಿಗಳು, ಯುನಿಫಾರ್ಮಿನ ಮೇಲೆ ಅರ್ಧ ತೋಳಿನ ಸ್ವೆಟರ್ ಹಾಕಿ, ತಲೆಗೆ ಮಳೆಟೊಪ್ಪಿಗೆ ಹಾಕಿದ ಫಾರೆಸ್ಟ್ ಆಫೀಸಿನವರು.., ಅಲ್ಲಿದ್ದ ಊಟದ ಮನೆಯಿಂದ ಬೆಚ್ಚಗೆ ಹೊರಹೋಗುತ್ತಿದ ಕಟ್ಟಿಗೆ ಒಲೆಯ ಹೊಗೆ, ಹೊಗೆ ಮಾತ್ರ ಯಾಕಮ್ಮ ನಾನೂ ಹೋಗ್ ಬೇಕ್ ಅಂತ ಮೈ ತುಂಬ ಸ್ವೆಟರ್ ತೊಟ್ಟ ಇನ್ನೂ ಮಾತು ಬರದ ಕಂದನೊಂದು ಹೊಸ್ತಿಲ ದಾಟಲು ಮಾಡುತ್ತಿರುವ ಕಸರತ್ತು, ಅಲ್ಲಿ ಸುತ್ತ ಬೆಳೆದಿದ್ದ ಹೂಗಿಡಗಳ ರಸಕುಡಿಯಲು ಮಳೆ ಕಡಿಮೆಯಾದ್ ಕೂಡಲೆ ಹಾರಿ ಬಂದು ಬಗ್ಗಿ ಕೂತು ಹೂವೊಳಗೆ ಕೊಕ್ಕಿಟ್ಟ ಪುಟಾಣಿ ಹಕ್ಕಿ.. ಯಾವ ರಸವನ್ನ ಸವಿಯುವುದು.. ಯಾವುದನ್ನ ಬಿಡುವುದು.. ಅಲ್ಲ ಬಿಡಲಿಕ್ಕೆ ಆದೀತಾ? ನೋಡುತ್ತ ನೋಡುತ್ತ ಸವಿಯುತ್ತ ನಾವು ಜಾರಿ ಹೋಗಿ ಮಾಯಾಲೋಕ ಸೇರಿದ್ದೆವು.. ನಾಳೆ ಊರಿಗೆ ವಾಪಸಾಗಲೇಬೇಕು ಎಂಬ ಎಚ್ಚರದ ಜಗುಲಿಯ ಮೇಲೆ ನಾವು ಆ ಚಂದದ ಜಾಗದ ಸೊಗದಲ್ಲಿ ನೇಯ್ದ ಮಾಯಾಚಾಪೆ ಹಾಸಿ ಕೂತಿದ್ದೆವು.. ನಮ್ಮ ತೇಲುವಿಕೆಯ ಸಮಗ್ರ ನೋಟವನ್ನು ಮತ್ತೆ ಕಟ್ಟಲು ಅಸಾಧ್ಯವಾದರೂ ಕೆಲ ಹಕ್ಕಿನೋಟಗಳನ್ನು ಹೇಗಾದರೂ ಮಾಡಿ ಬರೆದಿಟ್ಟು ಮತ್ತೆ ಮತ್ತೆ ಮೆಲುಕು ಹಾಕಬೇಕೆಂಬ ಸ್ವಾರ್ಥ...

ಪ್ರಕೃತಿಯ ಚಂದ ಮತ್ತು ಗಂಭೀರ ನಿಲುವನ್ನ ಪದರಪದರವಾಗಿ ಬಿಡಿಸಿಟ್ಟ ಹಾಗಿನ ಮುತ್ತೋಡಿ ಕಾಡು, ಚಿಕ್ಕಮಗಳೂರಿನಿಂದ ಸುಮಾರು ೪೦-೪೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಹೋಗುವಾಗ ಬಸ್ಸಲ್ಲಿ ಹೋದರೆ, ನಮಗೆ ಅಲ್ಲಿನ ಚಂದ ಕಾಡಿನ ಜೊತೆಗೆ, ಅಲ್ಲಿ ಹಳ್ಳಿಯಲ್ಲಿ ದುಡಿದು ಬದುಕುವ ಎತ್ತರದ ಜೀವಗಳ ಕಿರುನೋಟ ಸಿಕ್ಕೀತು. ಕಾಡೆಂದರೆ ಬರೀ ಕಾಡಲ್ಲ ಅಲ್ಲಿ ಕಾಡು, ಹಳ್ಳಿ, ದುಡಿಮೆ, ಕಷ್ಟ, ತಂಪು ಮಳೆ, ಏರು ತಗ್ಗಿನ ಹಾದಿ ಎಲ್ಲ ಸೇರಿದ ಬದುಕಿನ ಹಾಡು.. ನೋಡಲು ಚಣಕಾಲ ನಿಂತರೆ ಕೇಳಿಸೀತು.. ಇಂಗ್ಲಿಷ್ ಹೆಸರೊಂದರಲ್ಲಿ ಜನಪ್ರಿಯವಾದ ನಮ್ಮದೇ ಕಾಡಿನ ಬಣ್ಣದ ಹಕ್ಕಿಯನ್ನು ನೋಡುವ ನಿಶ್ಚಲ ರೀತಿಯಲ್ಲಿ, ಅಲುಗಾಡದೆ, ಅದರದ್ದೇ ಒಂದು ಭಾಗವಾಗಿ, ಅಲ್ಲಿನ ಹೊಂದಿಕೆ ಕೆಡಿಸದೆ, ನೋಡ ಹೊರಟರೆ ಕಣ್ಣಿಗೆ ಸಿಕ್ಕುವ ನೋಟಗಳು, ಬರೆದಿಡಲಾಗದ್ದು.. ಅಲ್ಲಲ್ಲಿ ಕಾಫಿ ಎಸ್ಟೇಟುಗಳು, ಸುರಿಮಳೆಯಲ್ಲೂ ಉಟ್ಟ ಸೀರೆಯ ಮೇಲೆ ತುಂಬು ತೋಳಿನ ದೊಗಲೆ ಅಂಗಿ, ಹಾಳೆ ಟೋಪಿ, ಬಿಗಿಯಾಗಿ ಹಿಡಿದ ಪುಟ್ಟಕತ್ತಿಯೊಡನೆ, ಬಸ್ಸು ಹತ್ತಿ ಮುಂದಿನೂರಿನ ಎಸ್ಟೇಟ್ ಕೆಲಸಕ್ಕೆ ಹೊರಟ ಹೆಂಗಳೆಯರನ್ನು ನೋಡಿ ನಾನು ಬೆರಗಾದೆ. ಬೆಚ್ಚಗೆ ಮನೆಯಲ್ಲೆದ್ದು, ಬಿಸಿನೀರು ಸ್ನಾನ ಮಾಡಿ, ಎಲ್ಲ ಒಳ್ಳೆಯ ಬೆಚ್ಚನೆ ಅಂಗಿ ಹಾಕಿ, ಮನೆ ಮುಂದೆ ಬರುವ ಕ್ಯಾಬ್ ಹತ್ತಿ ಎ.ಸಿ.ಆಫೀಸಿನ ಮುಂದೆ ಇಳಿಯುವ ಸೌಲಭ್ಯದಲ್ಲಿ ಇದಿಲ್ಲ ಅದಿಲ್ಲ ಅಂತ ಕೊಂಕು ತೆಗೆಯುವ ನಮ್ಮ ನಡವಳಿಕೆ ನೆನಪಾಗಿ ನಾಚಿಕೆಯಾಯಿತು. ಓಹ್ ಎಷ್ಟು ಕಷ್ಟ ಅಂತ ಅನುಕಂಪದ ನನ್ನ ನೋಟವನ್ನ ಕತ್ತರಿಸಿ ಬಿಸಾಕಿದ್ದು ನನ್ನ ಪಕ್ಕ ಕೂತ ಅವಳ ಜೋರುನಗೆ. ಅದು ಬಸ್ಸೆಲ್ಲ ಹರಡಿ, ಸುತ್ತ ನಿಂತ ಜೊತೆಗಾತಿಯರ ನಗುವಿನಲ್ಲಿ ಮಾರ್ದನಿಸಿ, ಕಂಡಕ್ಟರನ ಕೀಟಲೆಯಲ್ಲಿ ಮೊಗ್ಗೊಡೆದಿತ್ತು.. ಕಷ್ಟ ಈಚೆ ದಡದಲ್ಲಿ ನಿಂತವರಿಗೆ.. ಅನುಕೂಲಗಳು ಹುಟ್ಟಿದಾಗಿನಿಂದ ಅಭ್ಯಾಸವಾದವರಿಗೆ, ಆಚೆ ದಡದ ಅವರಿಗದು ಸಹಜ ಬದುಕು, ಅಲ್ಲೂ ನಗು, ಕೀಟಲೆ, ಸಮಾಧಾನ, ಪ್ರೀತಿಯ ಮೊಗ್ಗು, ಅಲ್ಲೊಂದು ಇಲ್ಲೊಂದು ಬಿಕ್ಕು, ಶೀತ ಜ್ವರ, ಕಂತ್ರಾಟುದಾರನ ಹತ್ತಿರ ಬೈಗುಳ.. ಎಲ್ಲ ಸಹಜವಾಗಿ.. ನಮ್ಮ ರಾಜಧಾನಿಯಲ್ಲಿ ನಡೆವಂತೆ ಇಲ್ಲಿ ಮೇಕಪ್ಪಿಲ್ಲ, ಬಿನ್ನಾಣವಿಲ್ಲ, ಸೋಗಿನ ಭಾವಪ್ರದರ್ಶನವಿಲ್ಲ... ಕಪ್ಪು ಮೋಡ, ತಂಪು ಮಳೆ, ಕುಳಿರು ಚಳಿ, ಚುರು ಚುರು ಬಿಸಿಲು, ಕಾಲಕ್ಕೆ ತಕ್ಕಂತೆ ಹೊಂದಿ ನಡೆವ, ಅಳಲೂ ನಗಲೂ ಹೊತ್ತು ಗೊತ್ತಿಲ್ಲದ ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

ನಾವು ಬಸ್ಸಿಳಿದು ಮುತ್ತೋಡಿ ಸೇರಿ ಹಕ್ಕಿಯ ಪ್ರಾರ್ಥನಾ ಗೀತೆಗೆ ತಲೆಯಾಡಿಸಿ, ಮಧ್ಯಾಹ್ನದ ಊಟವನ್ನು ಗೊತ್ತು ಮಾಡಿ ಅಲ್ಲಿ ಹೊಳೆಯಂಚಿನ ಕಾಟೇಜಿನ ಜಗುಲಿಯಲ್ಲಿ ಕೂತೆವು.. ಸೌಂದರ್ಯದ ಪ್ರತಿಫಲಿತ ಬಿಂಬಗಳು ಎಲ್ಲೆಲ್ಲೂ.. ಯಾವ ರಾಗಕ್ಕೂ ಸೇರದ ಮಧುರ ಉಲಿಗಳು ಸುತ್ತೆಲ್ಲೂ.. ಊಟವಾಗಿ ಮಳೆ ಕಡಿಮೆಯಾಗಿ, ನಾವು ಬೆಟ್ಟದ ಮೇಲಿನ ತಂಗುದಾಣಕ್ಕೆ ಹೊರಟೆವು.. ದಾರಿಯಲ್ಲಿ ಆನೆ ನಡೆದ(ದ್ದೇ) ದಾರಿ.. ಮಳೆಯ ನೂಲಿಗೆ ಹಕ್ಕಿಗೊರಳ ರಾಗದೆಳೆ ಸೇರಿಸಿ ನೇಯ್ದ ಹಸಿರು ಉಡುಗೆಯ ತೊಟ್ಟ ಕಾಡು.. ಅಲ್ಲಲ್ಲಿ ಕೆಂಪು ಚಿಗುರಿನ ಚಿತ್ತಾರ, ಕಂದು ತೊಗಟೆಯ ಅಂಚು.. ಯಾವ ಸೂಪರ್ ಮಾಲ್ ನ, ಫ್ಯಾಷನ್ ಡಿಸೈನರ್ ನೇಯಬಲ್ಲಳು ಇದನ್ನ?


ಬೆಟ್ಟದ ಮೇಲೆ ಒಂಟಿ ಮನೆಯಂತಹ ತಂಗುದಾಣ. ಕರೆಂಟಿಲ್ಲ, ಮೊಬೈಲ್ ಸಿಗ್ನಲ್ ಸಿಗುವುದಿಲ್ಲ.. :) ಬೆಚ್ಚನೆ ವರಾಂಡದಲ್ಲಿ ಹಾಕಿದ ಆರಾಮಕುರ್ಛಿಯಲ್ಲಿ ಕೂತು, ಉದ್ದುದ್ದ ಕಿಟಕಿಗಳ ಗಾಜಿನಿಂದ ಮಳೆಯ ಕುಣಿತ, ನೆಲದ ಜೀವಿಗಳ ಏರಿಳಿತ, ಸ್ಪಂದನಗಳನ್ನ ನೋಡುತ್ತಾ ಸಂಜೆ ಕಳೆದೆವು. ಮಳೆ ನಿಂತಾಗೆಲ್ಲ ಹಕ್ಕಿ ಹಾಡು.. ಮುಗಿಯುವಷ್ಟರಲ್ಲಿ ಮಳೆಯ ತಾನ.. ಯಾವ ಕಚೇರಿಯಲ್ಲೂ ಕೇಳಿರದ ಗಾನಸುಧೆ ಸವಿದೆವು. ಸೂರ್ಯನ್ನ ಯಾರಿಗೂ ಗೊತ್ತಾಗದ ಹಾಗೆ ಮನೆಗೆ ಕಳಿಸಿದ ಸಂಜೆ, ಇಂಚಿಂಚೇ ಕತ್ತಲೆಯನ್ನ ನಮ್ಮಂಗಳಕ್ಕೆ ದೂಡುತ್ತಿತ್ತು.. ನೋಡನೋಡುತ್ತ ಪೂರ್ತಿ ಆವರಿಸಿದ ಕತ್ತಲ ಚೆಲುವನ್ನ ಇಮ್ಮಡಿಸಲು ಮೋಡದ ಮರೆಯಲ್ಲೇ ಕೂತು ಕಿರ್‍ಅಣ ಹಾಯಿಸುವ ಚಂದ್ರ, ಇವತ್ತು ರಜಾ ಅಂತ ಕಣ್ಣಿಗೆ ಕಾಣದ ಹಾಗೆ ಬಾನಿನೂರಿನ ಮೋಡಮನೆಗಳಲ್ಲಿ ಬೆಚ್ಚಗೆ ಕೂತ ಚಿಕ್ಕೆರಾಶಿ.. ಕಂಡಿದ್ದು, ಕಾಣದ್ದು, ಕಾಣಬೇಕೆಂದು ಬಯಸಿದ್ದು, ಕಾಣಲಾಗದೆ ಹೋಗಿದ್ದು.. ಎಲ್ಲವೂ ತುಂಬ ಚಂದ ಇತ್ತು.. ಕತ್ತಲೆಯೇ ಆದ್ಮೇಲೆ ಇನ್ನೇನು ಅಂತ ನಗೆದೀಪದ ಕುಡಿ ಬೆಳಗಿದ ಗೆಳೆಯನಿಗೆ ಜೊತೆಯಾಗಿ ನಾವು ಮೂವರೂ ಜೋಕಿನ ಎಣ್ಣೆ ಸುರಿದು, ಸುತ್ತಲೂ ನಗೆಹಬ್ಬದ ಬೆಳಕಿನೋಕುಳಿ..
ಹಂಚಿನ ಮೇಲೆ ಬೋಲ್ ನುಡಿಸುವ ಮಳೆಯನ್ನು ಕೇಳುತ್ತಾ ರಾತ್ರಿ ಬೆಚ್ಚಗೆ ಮಲಗಿ, ಬೆಳಿಗ್ಗೆ ಏಳುವಾಗ, ಮೂಡಣದಲ್ಲಿ ಬೆಳಕಿನ ಘರಾನಾದ ಪೂರ್ವಿ ರಾಗ.. ನಾವೆನು ಕಡಿಮೆ ಅಂತ ಉಲಿದುಲಿದು ತೇಲುವ ಹಕ್ಕಿಗೊರಳಿನ ಪಹಾಡೀ.... ನೋಡುತ್ತ ನೋಡುತ್ತ ಪೂರ್ವಿ, ಕಲ್ಯಾಣಿಯಾಗಿ, ಮಲ್ಹಾರದ ಮಳೆ ಸುರಿದು, ನಾವು ರಾಗಗಳ ಅವರೋಹಣದಲ್ಲಿ ಸೇರಿ ಕೆಳಗೆ ಅರಣ್ಯ ಕಛೇರಿಗೆ ಇಳಿದು ಬಂದೆವು.. ಮತ್ತೆ ಕೆಲಸಮಯದಲ್ಲಿ ಸಹಜಯಾನದ ತುಂಗಾ ಎಕ್ಸ್ ಪ್ರೆಸ್, ಹತ್ತಿ ಕುಲುಕಾಡಿ, ಚಿಕ್ಕಮಗಳೂರಿನ ಗಿಜಿಗುಟ್ಟುವ ಬಸ್ ಸ್ಟಾಂಡಿಗೆ ಕಾಲಿಡುವಾಗ ಮಳೆ ನಿಂತು ಬಿಸಿಲೇರಿ, ಓಹ್ ಒಂದ್ಗಂಟೆಗೆ ಬಸ್ ಸಿಕ್ಕಿದ್ರೆ ಬೇಗ ಮನೆಗ್ ಹೋಗಿ, ಮಲಗೆದ್ದು ಬೆಳಿಗ್ಗೆ ಬೇಗ ಆಫೀಸಿಗೆ ಹೊರಟು ಆ ರಿಪೋರ್ಟ್ ಒಂದು ಮುಗಿಸ್ ಬಿಟ್ರೆ ಆಯ್ತಪ್ಪಾ .. ಎಲ್ಲ ರಾಗಗಳೂ ಕಳೆದು ಬೆಳಕಿನ ರಾಜಧಾನಿಯ ಝಗಮಗ, ಜೀವನಯೋಗ.. (ಜೀವನ ದೊಂಬರಾಟ ಅಂತ ಬರೆಯಬೇಕೆನ್ನಿಸಿತು.. ಹಾಗೆ ಬರೆದರೆ ಬರೆದ ಪ್ರಾಸಕ್ಕೆ ಮತ್ತು ಆದರಿಸಿ ತೆಕ್ಕೆಗೆಳೆದುಕೊಂಡ ಬದುಕಿನ ಪ್ರೀತಿಗೆ ಮೋಸವಾಗಬಹುದೆನ್ನಿಸಿ.. )

Tuesday, July 3, 2007

ದೀಪಗಳು..

ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗೆ ಆಟ ಸಾಮಾನು, ಕತೆ ಪುಸ್ತಕ ಕೊಳ್ಳಬೇಕಿತ್ತು. ಗಡಿಬಿಡಿಯಲ್ಲಿ ಪಾರ್ಕ್ ಮಾಡಿ, ಇಳಿದು ಪುಸ್ತಕದಂಗಡಿ ಹೊಕ್ಕರೆ ಅಲ್ಲಿ ಕುರ್ಚಿಯಲ್ಲಿ ಪುಸ್ತಕವೊಂದನ್ನು ಹಿಡಿದು ಏನೋ ಮಾತಾಡುತ್ತ ಕುಳಿತ ನನ್ನ ಪ್ರೀತಿಯ ಕತೆಗಾರ. ಅಲ್ಲಲ್ಲಿ ಜನರಿದ್ದರು. ಹೇಗೆ ಮಾತಾಡುವುದೆಂಬ ಸಂಕೋಚದಲ್ಲಿ, ಆಚೆ ಬದಿಯಾಸಿ ಪುಸ್ತಕ ಆರಿಸಿ, ನಿದಾನವಾಗಿ ಗಲ್ಲೆಯ ಕಡೆ ಬಂದು ಅವರ ಕಣ್ಣೋಟಕ್ಕೆ ಸಿಕ್ಕಿಬಿದ್ದೆ.


ನನ್ನ ಮನದೊಳಗಣ ಖುಷಿ, ಮೈಯೆಲ್ಲ ಆವರಿಸಿ, ಮುಖಮಂಡಲದಲ್ಲಿ ನಗೆಹೂವಿನ ಗೊಂಚಲರಳಿ ತುಂಬ ದಿನಗಳ ಬಳಿಕ ನೋಡಲು ಸಿಕ್ಕಿದ ಅವರನ್ನು ವಿಷ್ ಮಾಡಿತು. ಅವರೋ ಕಡಲತೀರದವರಲ್ಲವಾ, ಪ್ರೀತಿಯ ರಾಶಿ; ಅಲೆಅಲೆಯಾಗಿ ನುಗ್ಗಿಬಂದ ಹಿಗ್ಗು ಅವರ ಮಿಂಚುಕಣ್ಣಿಂದಿಳಿದು, ಕನ್ನಡಕ ತೆಗೆಸಿ, ಹತ್ತಿರ ಬಂದು ಬಳಸಿ ಹಿಡಿಯಿತು.

ನನಗೆ ಟೇಬಲ್ ಮೇಲೆ ಕುಳಿತು ಅಜ್ಜನ ಕತೆ ಕೇಳುತ್ತಾ ಬೇರೆ ಲೋಕಕ್ಕೆ ತೇಲಿ ಹೋದ ಹಾಗೆ, ತುಂಬ ಇಷ್ಟವಾದ ಅಣ್ಣನ ತೋಳತೆಕ್ಕೆಗೆ ಸಿಕ್ಕಿದ ಹಾಗೆ, ತುಂಬದಿನಗಳಿಂದ ದೂರದೂರಲ್ಲಿದ್ದ ಗೆಳತಿ ಅಚಾನಕ್ ಸಿಕ್ಕಿ ಮಾತುಕತೆಯಾಡಿದ ಹಾಗೆ, ಈಗಷ್ಟೇ ಮಳೆ ನಿಂತು, ಬಿಸಿಲು ಹರಡಿ ಕಾಮನ ಬಿಲ್ಲು ಮೂಡಿದ ಹಾಗೆ.. ಎಲ್ಲ ಆಪ್ತ ಅನುಭವಗಳ ಒಟ್ಟಂದದ ಹಾಗೆ... ಮಾತು ಬರದೆ ಬರಿದೆ ನಕ್ಕೆ. ಮಾತ ಬದಲು ಅವರು ನಕ್ಕರು. ಹಾಗೆ ಒಂದಷ್ಟು ಅವರ ತಿಳಿವಿನ ಸವಿ ಸವಿದು, ನಾಲ್ಕೆಂಟು ಹಿತಮಾತನಾಡಿ, ಸುತ್ತರಿದಿದ್ದ ಯಾವ್ಯಾವುದೋ ಸೀರಿಯಸ್ ವಿಷಯಗಳಿಂದ ಕೆಲಕ್ಷಣಗಳ ಮಟ್ಟಿಗೆ ಮರೆಯಾಗಿ ಹಗುರ್‍ಆಗಿ.. ಹೇಗೆ ಹೇಳಲಿ ಆ ಕ್ಷಣಗಳ ಮಾಧುರ್ಯವನ್ನು..
ಇಳಿಸಂಜೆಯಲ್ಲಿ ಪುಟ್ಟ ದೀಪವೊಂದು ದೇವರಗೂಡಿನಲ್ಲಿ ಬೆಳಗಿ ಕತ್ತಲನ್ನ ಇಂಚಿಂಚೇ ತಳ್ಳಿದಂತ ಹಿತವಾದ ಬೆಳಕಲ್ಲಿ ಅದ್ದಿ ಹೋದೆ.



ಅದಾಗಿ ಮಾರನೆಯ ದಿನ, ಮನೆಯಲ್ಲಿ ಗಂಡನೊಡನೆ ಕೂತು ಬಿಸಿಬಿಸಿ ಕಾಫಿ ಕುಡಿಯುತ್ತಾ, ಚಾನಲ್ ತಿರುಗಿಸುತ್ತಿದ್ದಾಗ ಅಚಾನಕ್ ಆಗಿ ಮನಸು ಗಾಂಧಿ ಬಜಾರು ಅಂತ ಬರೆದ ಪ್ರೀತಿಯ ಕವಿ ನಿಸಾರ್ ಅಹಮದ್ ಕಂಡರು. ಅಲ್ಲೆ ನಿಂತು ಅವರನ್ನು ಸವಿದೆವು. ಅಸ್ಖಲಿತ ಕನ್ನಡ, ಎಲ್ಲೂ ಗ್ರಂಥಸ್ಥವೆನ್ನಿಸದೆ ಆದರೆ ಕವಿತೆಯ ಸೊಗದಿಂದ ಹೊರಬರುವ ಸಹಜ ಮಾತುಗಳು, ಅವರ ಹಲವೆಂಟು ಕವಿತೆಗಳಲ್ಲಿ ಮಿಂದು ಬಂದ ಅನುಭವ. ಆ ಕಾರ್ಯಕ್ರಮ ನಡೆಸಿಕೊಟ್ಟವರು ಯಾರೋ ತಿಳಿಯಲಿಲ್ಲ ಗಬ್ಬಾಗಿ ಮಾತಾಡಿದರು. ನಿಸಾರ್ ಅಂತಹ ಹಿರಿಯ ಚೇತನದ ಮಾತನ್ನು ಅವರು ಅಲ್ಲಲ್ಲಿ ತಡೆಹಿಡಿದು ಪಾತಿ ಮಾಡಿ ಹರಿಯಬಿಡುತ್ತಿದ್ದರು. ತುಂಬ ಇರಿಟೇಟ್ ಆಗುತ್ತಿತ್ತು ನೋಡುತ್ತಿದ್ದ ನನಗೆ.. ಅಷ್ಟರಲ್ಲೆ ಅವರು ಏನೇ ಮಾಡಿದರೂ ಸರಳವಾಗಿ, ನೇರವಾಗಿ ಮಾತಾಡುತ್ತಿದ್ದ ನಿಸಾರರ ಹಿರಿತನದ ಮಾತುಗಳು ಮನಕ್ಕೆ ತಂಪೆರೆಯುತ್ತಿದ್ದವು. ಕಾರ್ಯಕ್ರಮದ ಉದ್ದೇಶ ತುಂಬ ಗೊಂದಲಮಯವಾಗಿತ್ತು, ಆದರೆ ಚಾನಲ್ ತಿರುಗಿಸದೆ ಕೂತು ನೋಡುವಂತೆ ಮಾಡಿದ್ದು ಕವಿವರ್ಯರೇ. ನಿರ್ವಾಹಕ ಎಲ್ಲೂ ಮಧ್ಯದಲ್ಲಿ ಮಾತಾಡದೆ, ಅವರಿಗೇ ಮಾತಾಡಲು ಬಿಟ್ಟಿದ್ದರೆ ಚೆನ್ನಾಗಿತ್ತು ಅನ್ನುವಷ್ಟು ಚೆನ್ನಾಗಿ ನಡೆಸಿಕೊಟ್ಟರು. ನಿಸಾರರು ಹೇಗೆ ಮುಸ್ಲಿಂ ಸಂವೇದನೆ ಎಂಬ ಜಾಡಿಗೆ ಬೀಳದೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕವಿತೆ ಬರೆದರು ಅನ್ನುವುದು ಹಿಗ್ಗಾಡಿ ಜಗ್ಗಾಡಿ ಕೇಳಿದ ಕಾರ್ಯಕ್ರಮ ನಿರ್ವಾಹಕನ ಪ್ರಶ್ನೆಗಳ ಸಾರಾಂಶ. ಮತ್ತದೇ ಬೇಸರದ ಪ್ರಶ್ನೆಗೆ ನಿಸಾರರು ಬೆಣ್ಣೆ ಕದ್ದ ಕೃಷ್ಣನ ಹಾಡು ಬರೆದಂತೆ ನವಿರಾಗಿ, ಮೇಲೆಸೆದ ಕಲ್ಲು ಮತ್ತೆ ಕೆಳಗೆ ಬೀಳುವಷ್ಟು ಸಹಜವಾಗಿ ಉತ್ತರಿಸಿದರು. ಕುಲವನ್ನಾಧರಿಸಿ ಕವಿಯನ್ನು, ಕವಿತೆಯನ್ನು ಅಳೆಯುವ ಮಾಪನದ ಬಗ್ಗೆ ಅವರಿಗೆ ಕಿರಿಕಿರಿಯಾಗಿತ್ತು. ಬೆಳೆದ ವಾತಾವರಣವನ್ನು ಸಹಜವಾಗಿ ತಂದರೆ ಆ ಬಗ್ಗೆ ಕುಹಕವಾಡುವ ಸಧ್ಯದ ಸಾಹಿತ್ಯ ಪರಿಸ್ಥಿತಿಯ ಬಗ್ಗೆ ನೋವಿತ್ತು. ಹಳೆಯ ದಿನಗಳ ಧೀಮಂತ ಚರ್ಚೆ ವಿಮರ್ಶೆಗಳ ಬಗ್ಗೆ ಪ್ರೀತಿಯಿತ್ತು.
ನಾನು ಏನು ಹೇಳಲು ಹೊರಟೆ ಅಂದರೆ, ಇಲ್ಲಿಯವರೆಗೆ ಒಂದು ದಿನಕ್ಕೂ, ಅವರ ಕವಿತೆ ಓದಿದಾಗ, ಹಾಡು ಕೇಳಿದಾಗ ನಾನು ಅವರನ್ನು ನಿಸಾರ್ ಎಂದು ಅನುಭವಿಸಿದ್ದೆನೇ ಹೊರತು, ಆಹಾ ಎಷ್ಟು ಚಂದ ಕನ್ನಡದಲ್ಲಿ ಬರೆವ ಮುಸ್ಲಿಂ ಕವಿ ಎಂದಲ್ಲ. ಇದು ನಾವು ಬಹುಪಾಲು ಕನ್ನಡಿಗರ ಅನುಭವ ಕೂಡಾ. ಹೀಗಿದ್ದೂ ಮತ್ತೆ ಮತ್ತೆ ಅವರನ್ನು ಈ ಭೂಮಿಕೆಗೆ ಎಳೆತರುವ ಸಣ್ಣತನ ಬೇಸರ ತಂದಿತು.



ಅವರು ಸ್ವಲ್ಪ ಕಿರಿಕಿರಿಯಾಗಿದ್ದರೂ, ಲೋಕವೇ ಹೀರದಿರು ದುಂಬಿಯೊಲು ಹೂವ ಎಂದು ಕೇಳುವ ಒಲವಿನ ಬಳ್ಳಿಯಂತೆ ಮೈದುಂಬಿ ನಮಗಾಗಿ ಮಾತಾಡುತ್ತಿದ್ದರು, ನಿರ್ವಾಹಕರ ಪ್ರಶ್ನೆಯ ರಗಳೆಗೆ ಮತ್ತೆ ಸಿಕ್ಕಿಬೀಳುವ ಅರಿವಿದ್ದೂ, ಗಾಳಿಯಲಿ ಗಂಧದಂತೆ ತೇಲುವ ಚೇತನವಾಗಿ..


ಈ ಎರಡೂ ಭಿನ್ನ ದರ್ಶನಗಳು. ಒಂದು ಮನದ ಕತ್ತಲಲ್ಲಿ ಬೆಚ್ಚಗೆ ಮಿನುಗಿದ ದೀಪ, ಇನ್ನೊಂದು ಬುದ್ಧಿಯ ಕತ್ತಲೆಯಲ್ಲಿ ಹೊಳೆದು ಬೆಳಗಿದ ದೀಪ. ಎರಡೂ ಬೆಳಕುಗಳನ್ನುಂಡು ಇಲ್ಲಿ ಈಗ ಸ್ವಲ್ಪ ಬೆಳಕಿದೆ. ಆರದಂತೆ ಕಾಯುತ್ತ ಆ ಬೆಳಕನ್ನು ಅಕ್ಷರವಾಗಿಸುವ ನಮ್ರ ಪ್ರಯತ್ನ. ಆ ಚೇತನಗಳ ಬೆಳಕು ಸೋಂಕಿ ನನ್ನ ಚೈತನ್ಯ ಪುಳಕಿತಗೊಂಡಿದೆ.