skip to main |
skip to sidebar
ಮರುಭೂಮಿಯ ರಾತ್ರಿಗಳಲ್ಲಿ
ಬೆಳದಿಂಗಳು ಚಂದವಿರಬಹುದೆಂದು
ನನ್ನ ಅಸೆ ಮತ್ತು ನಂಬಿಕೆ;ಮರಳುಗಾಡಿಗೇ ಬರುವ ಧೈರ್ಯ ಮಾಡಿದವನು
ಕೃಷ್ಣಪಕ್ಷ ಕಳೆದು
ಇಂಚಿಂಚೇ ನಗಲಾರೆಯಾ?ಎಂದು ಬರಲಿದೆ ಪಾಡ್ಯ?
ನನಗೆ ಬಿದಿಗೆಯೆಂದರೆ,
ಬಿದಿಗೆಯಲ್ಲಿ ಪುಟ್ಟಗೆ ನಗುವ ನೀನೆಂದರೆ
ತುಂಬ ಪ್ರೀತಿ.
ಅದಕ್ಕೇ ಕಾದಿದ್ದೇನೆ ಇದು ಮರಳುಗಾಡೆಂದು ಗೊತ್ತಿದ್ದರೂ.
ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಮನದುಂಬಿ ಹೀಗೊಂದು ಅಕ್ಷರ(೨) ದುಃಖ ನಿವೇದನೆ.ಹಚ್ಚಿದ ದೀಪ ಆರಲೇಬೇಕು,
ಮುಡಿದ ಹೂವು ಬಾಡಲೇಬೇಕು,
ಮತ್ತೆ ಮತ್ತೆ ನೆನಪಾಗಿಯೂ
ನಿನ್ನ ಮರೆಯಲೇಬೇಕು..ಒಂಟಿ ನಾನು,
ನೀನು ಬರುವ ಮುಂಚೆ;
ಒಂಟಿ ನಾನು,
ನೀನು ಹೋದ ಮೇಲೆ ಕೂಡಾ;
ನೀನು ಬಂದರೇನು, ಬರದಿದ್ದರೇನು..ಬಂದರೆ ಅರೆಘಳಿಗೆ ನಲಿವಲ್ಲಿ ಅದ್ದಿ ತೆಗೆದೀತು ಜೀವ,
ಹೊರಟ ಮೇಲೆ ಕೆಲ ದಿನಗಳು ಸವೆಯುತ್ತವೆ
ಹಸಿ ಗಾಯದಂತೆ,
ಬೇಸರವಿಲ್ಲ, ಉರಿ ಗೊತ್ತಾಗುವುದಿಲ್ಲ
ನಿನ್ನ ಕನಸು ತುಂಬುತ್ತದೆ ಗಾಯಕ್ಕೆ ರಂಗು.
....ಆಮೇಲೆ
ಇದ್ದೇ ಇದೆಯಲ್ಲ,
ದೀಪವಾರಿ, ಹೂಗಳುದುರಿ,
ಮರೆಯಲಿಕ್ಕೆಂದೇ ನೀನು ನೆನಪಾಗುವುದು..ಇಲ್ಲ ಇದನ್ನು ಬರೆಯುವಾಗ ನಾನು ಅಳುತ್ತಿಲ್ಲ,
ನೀನು ನೆಮ್ಮದಿಯಿಂದ ಮಲಗು.
ಇಷ್ಟಕ್ಕೆಲ್ಲ ಅಳುತ್ತಾರೆಯೇ,
ನಿನ್ನ ಕಳೆದುಕೊಂಡಾಗಲೂ ಕಣ್ಣು ತುಸು ನೆನೆದಿತ್ತಷ್ಟೆ.
ನಿನ್ನೆ ಈ ರುಚಿಯನ್ನ ಹಂಚಿಕೊಂಡ ಮೇಲೆ ಸುಶ್ರುತನ ಹತ್ತಿರ ಚೆನ್ನಾಗಿ ಬಯ್ಯಿಸಿಕೊಂಡೆ. ಶ್ರೀನಿಧಿ ಮುಖ ಚಪ್ಪೆ ಮಾಡಿದ. ಬರೆಯುವಾಗ ನನಗೆ ತಾನಾಗಿ ಮೂಡಿ ಮುಂದರಿಯುತ್ತಿದ್ದ ಸಾಲುಗಳಲ್ಲಿ ನನ್ನಿಷ್ಟದ ಜಯಂತರ ಶೈಲಿಯ ನೆರಳು ಬಿದ್ದಂತನಿಸಿತು. ಆದರೆ ಅವತ್ತು ರಾತ್ರಿ ಲೇಟಾಗಿ ನಾನು ಮೊಸರು ತರಲು ನಮ್ಮ ಏರಿಯಾದ ಬಸ್ ಸ್ಟಾಪಿಗೆ ಹೋದಾಗ ಕಣ್ಣಿಗೆ ಬಿದ್ದ ಸೊಪ್ಪಿನವಳು, ತರಕಾರಿ ಸಾಬರು, ಮತ್ತು ದೇವತೆಯಂತ ಹೂವಾಡಗಿತ್ತಿ ಅಜ್ಜಿ ನನ್ನ ಮನಃಪಟಲದಲ್ಲಿ ಅಚ್ಚೊತ್ತಿದ ಬಗೆ ತಾನೇ ತಾನಾಗಿ ಸ್ಫುರಿಸಿ ಬರುತ್ತಿದ್ದರೆ, ಇದು ಜಯಂತರ ಸಾಲು, ಇಲ್ಲಿ ನನ್ನ ಕವಿಗುರುವಿನ ಹೆಜ್ಜೆ, ಇದು ನನಗಿಷ್ಟವಾದ ಕತೆಯೊಂದರ ನೆರಳು.. ಉಂಹೂಂ ನನಗೆ ಹಾಗನ್ನಿಸಲಿಲ್ಲ, ತಡೆಯದೆ ಬರುತ್ತಿರುವ ಭಾವವನ್ನ ಜಗ್ಗಿ ಬೇರೆ ಚಿತ್ತಾರದಲ್ಲಿ ತುಂಬಿಸಲಾಗಲಿಲ್ಲ.
ಇಷ್ಟಕ್ಕೂ ಬರಹವೊಂದರ ಸತ್ವ, ನೋಟ ಅದರ ಶೈಲಿಯಲ್ಲಷ್ಟೇ ಪ್ರತಿಬಿಂಬಿಸಬೇಕೆ? ಎಷ್ಟೋ ಸಲ ಸುಶ್ರುತ ನಾನು ಚಾಟಿಕೊಂಡಿದ್ದೇವೆ. ಕನ್ನಡದ ಯುವಸತ್ವದ ಬರಹರೂಪದಂತಹ ಭಾವುಕ ಬರಹಗಾರ ಅವನು. ಅವನ ಬರಹ ಓದುವಾಗ ನನಗೆ ಅಚ್ಚರಿ, ಹಿತ ಮತ್ತು ಮೆಚ್ಚುಗೆ. ಇಲ್ಲೆ ಪುಟ್ಟಗೆ ನಾಚಿಕೊಂಡು ನಿಂತ ಹುಡುಗ, ಅಲ್ಲೆ ಹಿರಿದಾಗಿ, ನಿರ್ಬಿಢವಾಗಿ ಅಕ್ಷರಗಳಲ್ಲಿ ಹರಡಿಕೊಳ್ಳುವ ಪರಿ ನನಗೆ ಸೋಜಿಗದ ಖುಷಿ. ಅವನು ಬರೆದಾಗೆಲ್ಲ ಕಣ್ಣಿಟ್ಟು ನೋಡಿ ಶೈಲಿಯ ಬಗ್ಗೆ (ಅವಳು ಅವನ ಪ್ರೀತಿಯ ಹುಡುಗಿ!) ಮಾತಾಡುವ ನಾನು, ನನ್ನ ಶೈಲಿಯನ್ನೇಕೆ ಗಮನಿಸುತ್ತಿಲ್ಲ ಅಂತ ಯೋಚನೆ ಮಾಡಿದೆ. ಅವನಾದರೆ ಯುವ ಬರಹಗಾರ ಬರೆಯಲಿಕ್ಕಿದೆ ನನಗನ್ನಿಸಿದ್ದನ್ನು ಹೇಳಬಹುದು. ಚಂದಕೆ ಬರದ್ದೆ, ಇದಕ್ಕೆ ಇಲ್ಲಿ ಚಮಕಿ ಹಚ್ಚು, ಕೆನ್ನೆ ಸರಪಳಿ ಭಾರ - ಆಚೆ ತಿರುಗಿಸು, ನತ್ತಿಗಿನ್ನೊಂದು ಮುತ್ತಿನ ಮಣಿ ಹಾಕು ಅಂತ ಅವನ ಮದುವಣಗಿತ್ತಿ ಬರಹವನ್ನು ಸಿಂಗರಿಸಬೇಕಿದೆ.
ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ ಪ್ರೌಢತೆ, ಎಲ್ಲಿಯೂ ಸಲ್ಲದ ಹೊಳೆಬದಿಯ ಹಕ್ಕಿಕೂಗು, ಅದು ಇವತ್ತು ತನ್ನಂತೆ ಕೂಗೀತು, ನಾಳೆ ಕೋಗಿಲೆಯಂತೆ ಚಣಕಾಲ ಅಣಕಿಸೀತು, ನಾಡಿದ್ದು ಕೂಗಲರಿಯದೆ ಸುಮ್ಮನುಳಿದೀತು, ಕೇಳುವವರು ಯಾರು ಅನ್ನಿಸಿತ್ತು.ಆದರೆ ಇಲ್ಲ ಇದು ಅದಷ್ಟೆ ಅಲ್ಲ. ಅವನಿಗನ್ನಿಸಿದ್ದನ್ನ ಹೊಳೆಬದಿಯ ಹಕ್ಕಿಯ ಕೂಗೆ ಇರಲಿ, ಅವನು ಹೇಳಿದಾಗ ಕೇಳದೆ ಹೋದರೆ ಅದು ಹೇಗೆ ಹಕ್ಕಿಯಾದೀತು, ಹೇಗೆ ಅಕ್ಕನಾದೇನು? ಬರಹದಲ್ಲಿ ಬದುಕು ಎಲ್ಲಿ ಉಳಿಯುತ್ತದೆ? ಅದಕ್ಕೇ, ಯಾಕೆ ಹಾಗೆ ಬರದೆ ಅಂತ ಅವನಿಗೆ ಹೇಳಬೇಕಲ್ಲವೆ.
ನನ್ನ ಪ್ರೀತಿಯ ಲೇಖಕರ ಸ್ಟೈಲನ್ನ ಚಾಚೂ ತಪ್ಪದೆ ಅನುಸರಿಸುವ ಸೊಗಕ್ಕೆ ಹಾಗೆ ಮಾಡಿದೆ ಅಂತ ಹೇಳಿ ತಮಾಷಿಯಲ್ಲಿ ಮುಗಿಸಬಹುದಾದ ಮಾತು.ಉಂಹುಂ ಅದಲ್ಲ.
ನುಗ್ಗಿ ಬಂದ ಭಾವವೊಂದಕ್ಕೆ ಹೀಗೀಗೇ ಅಂತ ಕೈ ಹಿಡಿದು ನಡೆಸದೆ, ನೀನು ಹರಿದಂತೆ ಬರೆಯುವೆ ಎಂದು ತಲೆಬಾಗಿದೆನಷ್ಟೆ. ಯಾವಾಗಲೂ ಬರಹದ ದೇವರೊಂದಿಗೆ ಗುಟ್ಟು ಅನುಸಂಧಾನ ಮಾಡಿ, ಹಟಮಾಡಿ ನನಗೆ ಬೇಕೆಂದಂತೆ ನೇಯುವ ಆಟ ಬಿಟ್ಟು ಸುಮ್ಮನೆ ಶರಣಾದೆ. ಏನ ಮಾಡಲಿ, ಅದು ನನ್ನ ಅಪ್ರಜ್ಞಾವಸ್ಥೆಯಲ್ಲಿ ಶರಣುಹೋದ ಶೈಲಿಯನ್ನು ಹಿಂಬಾಲಿಸಿದೆ.. :)
ವಿನಂತಿ ಏನೆಂದರೆ ಓದುವ ನೀವು ಗಮನಿಸಲೇಬೇಕು ಅಂತ ನನಗನ್ನಿಸಿರುವುದು - ಸುಸ್ತಾಗಿ ಮನೆಗೆ ಹೋಗುವ ಮುನ್ನ, ಸೊಸೆಗೆ ಸಿಟ್ಟು ಬರುವುದೆಂಬ ಅರಿವಿನಲ್ಲೂ ಮರೆಯದೆ ಪುಟ್ಟ ಪೂರಿಯನ್ನು ಮೊಮ್ಮಗುವಿಗೆ ತಗೊಂಡು ಮನೆಗೆ ಹೊರಟ ಅಜ್ಜಿಯನ್ನು, ಅವಳ ಮಿನುಗುವಿಕೆಯಲ್ಲಿ ಹೊಳೆಯುವ ನಿಮ್ಮ/ನನ್ನ ಹಲವು ನೆನಪುಗಳನ್ನು. ಅದು ಬರೆದ ನನಗೆ ಖುಷಿ. ಓದುವ ನಿಮಗೆ ಹಿತವೆನ್ನಿಸಿದರೆ ಇನ್ನೂ ಖುಷಿ.ನಾನು ತುಂಬ ಇಷ್ಟ ಪಡುವ ಮತ್ತು ಗೌರವಿಸುವ ಪಂಡಿತರ :) ಸಲಹೆಯ ಮೇರೆಗೆ ಈ ಪ್ರಯತ್ನ. ಅಂಗಡಿಗಳೆಲ್ಲ ಬಾಗಿಲು ಹಾಕುವ,
ಸುಸ್ತಾದ ರಾತ್ರಿಯ ಚರಣದಲ್ಲಿ,
ಉಳಿದ ಸೊಪ್ಪನ್ನ ಸೊಗಯಿಸುತ್ತ ಮನೆಗೆ ಹೊರಟ ಹೆಂಗಸು,
ಇಂದಿನ ತರಕಾರಿ ಬಿಕರಿಯಾದ ಸಾಬರ ಹುಮ್ಮಸ್ಸು,
ಎಲ್ಲ ಜನಗಳ ದಿನದ ಕೊನೆ-
ಒಳಹಿತದ ಯಾವುದೊ ಮೊನೆ,
ನಡೆವ ನನ್ನ ಹಿತವಾಗಿ ಚುಚ್ಚಿ ಹಿಡಿದು,
ಅತ್ತ ತಿರುಗಿದರೆ
ಹೂವಾಡಗಿತ್ತಿ ಅಜ್ಜಿ
-ಯ ಕೈಯಲ್ಲಿ ವ್ಯಾಪಾರ ಮುಗಿಸಿ ಹಿಡಿದ
ಮಸಾಲಪುರಿಯ ಬಟ್ಟಲು.
ಹಬೆಯಲ್ಲಿ ಆವಿಯಾಗುತ್ತಿರುವ ದಣಿವು,
ಮಸಾಲೆಯೊಡನೆ ತೂಗುತ್ತಿರುವ ಮೊಗ್ಗಿನ ಘಮ
ಪೋಣಿಸುವ ಬೆರಳೋ, ಪುರಿಯ ಮುರಿ ಮುರಿದು
ಬಾಯಿಗೆಸೆದು,
ಕೊರಳ ಶಂಖದಿಂದ ದಿನದ ಸುಸ್ತು
ತೇಗಿನ ಪುಟ್ಟ ದನಿಯಾಗಿ
ಇಲ್ಲಿ ನಡೆದು ಹೊರಟ ನನ್ನ ಸೋಕಿ,
ಆಹ.. ರುಚಿ ರುಚಿ ರುಚಿ
ಅವನೊಡನೆ ತಿಂದ ಸ್ಪೆಷಲ್ ಚಾಟ್
ಮಳೆಯ ನೆರಳಲ್ಲಿ ತಿಂದ ಚುರುಮುರಿ,
ಬಿಸಿಲ ಹೊದ್ದು ತಿಂದ ಮಸಾಲೆ ದೋಸೆ
ಉಂ ಹೂಂ, ಇದು ಎಲ್ಲಕ್ಕಿಂತ ಸವಿ..
ಸವಿದದ್ದು ಅಜ್ಜಿಯ ನಾಲಗೆ
ರುಚಿ ಕಂಡದ್ದು ನನ್ನ ಕಣ್ಣು!
ಬ್ಯಾಗು ತುಂಬಿ ಮನೆಗೆ ಹೊರಡುವ ಭರದಲ್ಲು
ಬಾಗಿಲಲಿ ಕಾಯುವ ಪುಟ್ಟ ಮೊಮ್ಮಗನ
ನೆನಪಾಗಿ ಎರಡು ಪುಟ್ಟ ಪೂರಿಗಳು
ಅವಳ ಪರ್ಸೊಳಗೆ ಸೇರಿ
ಓ ಪರವಾಇಲ್ಲ ಸೊಸೆ ಬೈದರೇನಂತೆ..ಅಜ್ಜಿಯ ಬೆಚ್ಚನೆ ಹಿಡಿತದಲ್ಲಿರುವ ಪರ್ಸಲ್ಲಿ
ಯಾವ ರೋಗಾಣು ನುಗ್ಗೀತು?!
ನಿಜ, ಅಜ್ಜ ನನ್ನ ಬಾಲ್ಯದಲ್ಲಿ
ತಂದಿತ್ತ ಕೊಳಕು ಬೇಕರಿಯ
ಕಾರರೊಟ್ಟಿಯಿಂದ
ನನಗೆಂದೂ ಬರದ ಕಾಯಿಲೆಯಂತೆ!
ಅಜ್ಜಿ ಮಿನುಗುತ್ತಿದ್ದಾಳೆ,
ಚಂದ್ರನಿರದ ರಾತ್ರಿಯಲ್ಲಿ,
ಗಬ್ಬು ಊರಿನ ನಾರುವ ನಾಳಗಳ ಮಧ್ಯೆ!
ನನ್ನ ನೆನಪಲ್ಲಿ
ಹಲವು ರುಚಿಗಳ ಪರಿಮಳ..
ಲೋಕೋ ಭಿನ್ನ ರುಚಿಃ!
ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.
ಸೊಪ್ಪು ಮಾರುವ ಹೆಂಗಸು, ಉಳಿದ ಕೊತ್ತಂಬರಿ ಕಟ್ಟನ್ನು ಬಾಳೆಯೆಲೆಯಲ್ಲಿ ಜೋಪಾನವಾಗಿ ಸುತ್ತಿಟ್ಟು, ಉಳಿದ ಸೊಪ್ಪನ್ನ ಹಾಗೆ ಒದ್ದೆಯ ಗೊಣಿಬಟ್ಟೆಯಲ್ಲಿ ಮುಚ್ಚಿ ಮಂಕರಿಗೆ ತುಂಬಿ, ನೋಟು ಚಿಲ್ಲರೆಗಳನ್ನು ಎಣಿಸಿ, ತನ್ನ ಪುಟ್ಟ ಪರ್ಸಿಗೆ ತುಂಬಿ, ಮತ್ತೊಂದ್ಸಲ ಆ ಜಾಗವನ್ನೆಲ್ಲ ನೋಡಿ, ಮನೆಗೆ ಹೊರಟಿದ್ದಾಳೆ.
ತಳ್ಳು ಗಾಡಿಯ ತರಕಾರಿ ಸಾಬರಿಗೆ ತುಂಬ ಖುಶಿ, ಇವತ್ತು ತಂದ ಟೊಮೆಟೊ ಎಲ್ಲ ಖಾಲಿ. ಉಳಿದ ಕೆಲವು ಕೊಳೆತ ಟೊಮೆಟೊಗಳನ್ನು ಅಲ್ಲಿ ಚರಂಡಿಯ ಬದಿಗಿದ್ದ ಅಗಲ ಕಲ್ಲಿನ ಮೇಲೆ ಸುರಿದು, ಖಾಲಿಯಾಗಿ ಹಗುರಾದ ಗಾಡಿಯನ್ನು, ತುಂಬಿಕೊಂಡು ಭಾರವಾದ ಜೋಬಿನ ಹಿತದಲ್ಲಿ ತಳ್ಳುತ್ತಿದ್ದಾರೆ.. ಬೀಬಿ ಏನಡಿಗೆ ಮಾಡಿರಬಹುದು ಅನ್ನುವ ಯೋಚನೆ ಈಗ ಗಾಡಿ ಖಾಲಿಯಾದ ಮೇಲೆ ಬಂತು. ಈವತ್ತು ಶುಕ್ರವಾರ, ಸುರಮಾ ಹಚ್ಚಿದ ಅವಳ ಕಣ್ಣುಗಳು ಪರದೆಯೊಳಗಿಂದ ಎಂದಿಗಿಂತ ಹೆಚ್ಚು ಪ್ರೀತಿಯಿಂದ ಮಿನುಗುವುದನ್ನು ನೆನಪಿಸಿಕೊಂಡು ಮನಸ್ಸು ನವಿರೆದ್ದಿತು. ಅಲ್ಲೆ ಬರುತ್ತಿದ್ದ ನನಗೆ ಅದು ಅವರ ಮಿರುಗುವ ಕಪ್ಪು ಗಡ್ಡದಲ್ಲಿ, ತುಟಿಯ ಹತ್ತಿರ ಕೊಂಚವೆ ಅರಳಿದ್ದ ಹೂನಗುವಿನಲ್ಲಿ ಇಣುಕಿ ಕಾಣುತ್ತಿತ್ತು.
ಅಲ್ಲಿ ತಿರುವಿನಲ್ಲಿ ಮಲ್ಲಿಗೆ ಹೂ, ಬಾಳೆಹಣ್ಣು ಮಾರುವ ಅಜ್ಜಿ, ದಿನದ ವ್ಯಾಪಾರ ಮುಗಿದ ಸಮಾಧಾನದಲ್ಲಿ, ರಸ್ತೆಯಾಚೆಗಿನ ಗಾಡಿಯಿಂದ ಮಸಾಲಪುರಿ ತಗೊಂಡು ಸವಿಯುತ್ತ ಕೂತಿದ್ದಳು. ಸವಿದದ್ದು ಅವಳ ನಾಲಗೆ, ರುಚಿ ಕಂಡದ್ದು ನನ್ನ ಕಣ್ಣು..
ಪುಟ್ಟ ಮೆಲಮೈನ್ ತಟ್ಟೆಯಿಂದ ಹಬೆಯಾಡುತ್ತಿರುವ ಮಸಾಲೆಯಲ್ಲಿ ಅವಳ ದಿನದ ದಣಿವು ಆವಿಯಾಗುತ್ತಿತ್ತು. ಗಾಢವಾಗಿ ಬರುವ ಮಸಾಲೆ ಪರಿಮಳದಲ್ಲಿ, ಮಲ್ಲಿಗೆ ಮೊಗ್ಗು ಪೋಣಿಸಿದ ಬೆರಳ ಘಮ ಉಯ್ಯಾಲೆಯಾಡುತ್ತಿತ್ತು. ಅಲ್ಲಿ ಗಾಡಿಯ ಬದಿಯಲ್ಲಿ ಬಾಲ ಮಡಚಿ, ಅವಳನ್ನೆ ನೋಡುತ್ತ ಕೂತಿದ್ದ ಬೀದಿನಾಯಿಯ ಬಾಯಿಗೆ ಸಿಗುವಂತೆ ಒಂದು ಪುರಿ ತುಂದನ್ನು ಎಸೆಯುತ್ತ, ಲೋಕದ ಹಣ್ಣೆಲ್ಲವನ್ನು ಸವಿದವರ ಭಾವದಲ್ಲಿ ಅಜ್ಜಿ ಅ ತಿಂಡಿಯನ್ನು ಸವಿಯುತ್ತಿದ್ದಳು.
ಆ ಮಸಾಲ ಪುರಿ ಎಷ್ಟು ರುಚಿಯಾಗಿತ್ತಂದರೆ, ಅವನ ಜೊತೆ ಇನ್ನೇನು ಮಳೆ ಬೀಳಲಿದೆ ಅನ್ನುವ ಸಂಜೆಯಲ್ಲಿ ಗಾಂಧಿಬಜಾರಿನ ಫ್ಲೈ ಓವರಿನ ಪಕ್ಕದ ಕಟ್ಟೆಯಲ್ಲಿ ಕೂತು ತಿನ್ನುವ ಸ್ಪೆಶಲ್ ಮಸಾಲಪುರಿಗಿಂತ ರುಚಿಯಾಗಿ, ಮಳೆ ಹನಿಯುವಾಗ ಬ್ಯೂಗಲ್ ರಾಕಿನ ಮಂಟಪದ ನೆರಳಲ್ಲಿ ಜೊತೆಯಾಗಿ ಕೂತು ತಿನ್ನುವ ಚುರುಮುರಿಗಿಂತ ಹಿತವಾಗಿ, ಬೇಸಗೆಯ ಸಂಜೆಯಲ್ಲಿ ಮೆಚ್ಚಿನ ಹೋಟೆಲಿನಲ್ಲಿ ತಿನ್ನುವ ಮಸಾಲೆ ದೋಸೆಗಿಂತಲು ಸ್ವಾದಿಷ್ಟವಾಗಿ ಇತ್ತು.. ಅವಳ ತೃಪ್ತಿ ತುಂಬಿದ ಮುಖ, ಸಂತುಷ್ಟಗೊಂಡ ಕಣ್ಣು, ಕೊರಳ ಶಂಖದಿಂದ ಬಂದ ಪುಟ್ಟ ತೇಗಿನಲ್ಲಿ ದಾಟಿ ಹೊರಹೋದ ದಿನದ ಸುಸ್ತು, ಎಲ್ಲವೂ ಆ ರುಚಿಯನ್ನ ನನಗೆ ದಾಟಿಸಿ ಹೇಳಿದವು.
ಅವಳು ಮಸಾಲೆ ಪುರಿ ಗಾಡಿಯವನಿಗೆ ದುಡ್ಡು ಕೊಡಲು ಹೋದಾಗ ಎರಡು ಪುಟ್ಟ ಪೂರಿಯನ್ನು ಇಸಿದು, ತನ್ನ ಪುಟ್ಟ ಪರ್ಸಿನೊಳಗಿಟ್ಟುಕೊಂಡಳು. ಮತ್ತೆ ಗಡಿಬಿಡಿಯಲ್ಲಿ ಬಂದು ಎಲ್ಲ ಸೇರಿಸಿಕೊಂಡು, ಗಾಡಿ ದೂಡುತ್ತ ಮನೆ ಕಡೆ ಹೊರಟಳು.
ಸೊಸೆ ಬಯ್ಯುತ್ತಾಳೆ ಅಂತ ಗೊತ್ತಿದ್ರೂ ಬಾಗಿಲಲ್ಲಿ ಪುಟ್ಟ ಜಮಖಾನೆಯಲ್ಲಿ ಕೂತು ಆಡುತ್ತ ಕಾದಿರುವ ಮೊಮ್ಮಗನಿಗೆ ಈ ಪೂರಿ ಮುರಿದು ತಿನ್ನಿಸದೆ ಹೋದರೆ ಅವಳು ಹೇಗೆ ಅಜ್ಜಿಯಾಗುತ್ತಾಳೆ, ನೀವೆ ಹೇಳಿ. ಅದು ಹೇಗೆ ಅಜ್ಜಿ ಇಷ್ಟು ಪ್ರೀತಿಯಿಂದ ನೆನಪಿಟ್ಟು ತಗೊಂಡು ಹೋಗುವ ಪುಟ್ಟ ಪೂರಿಯಲ್ಲಿ ರೋಗಾಣುವಿರುತ್ತದೆ? ಅಮ್ಮ ಎಷ್ಟೆ ಬೈದರೂ ಅಜ್ಜ ನನಗೆ ತಂದುಕೊಟ್ಟ ಗಟರ್ ಪಕ್ಕದ ಅಯ್ಯಂಗಾರ್ ಬೇಕ್ರಿ ರೊಟ್ಟಿಯಿಂದ ನನಗೆ ಹೇಗೆ ಯಾವತ್ತೂ ಅನಾರೋಗ್ಯವಾಗಲಿಲ್ಲವೋ ಹಾಗೆ. ಅಜ್ಜಿ ಎತ್ತಿಟ್ಟುಕೊಂಡ ಪುಟ್ಟ ಪೂರಿಗಳು ಅಪ್ತವಾಗಿ, ಮನದಲ್ಲಿ ರುಚಿಯಾದ ಪರಿಮಳ ನೆನಪುಗಳು ಹಬೆಯಾಡಿದವು..
ಇಲ್ಲಿ ರಸ್ತೆಯ ಪಕ್ಕ, ನಾರುವ ಊರಿನ ಗಬ್ಬು ನಾಳಗಳ ಮಧ್ಯೆ, ಚಂದ್ರನಿರದ ರಾತ್ರಿಯಲ್ಲಿ, ಪುಟ್ಟದಾಗಿ ಮಿನುಗಿದ ಅಜ್ಜಿ, ನಿನಗೆ ಪ್ರೀತಿಯ ನಮನ.