Saturday, October 1, 2016

ಸಮಗ್ರ

ತಂದೆ ಉತ್ಕ್ರಮಣ ಕಾಲದಲ್ಲಿರುವಾಗ
ಆಸೆ ಗರಿಗೆದರಿದ್ದರ ಬಗ್ಗೆ,
ಮಿಲನೋತ್ಕರ್ಷದ ಸಂತಸದಲ್ಲಿರುವಾಗ
ಬಾಗಿಲು ಬಡಿದ ಸಾವಿನ ಸುದ್ದಿಯ ಬಗ್ಗೆ,
ನೀನೇ ಬರೆದಿದ್ದೆಯಲ್ಲ
ನಿನ್ನ ಸತ್ಯಾನ್ವೇಷಣೆಯಲ್ಲಿ.
ಆದರೂ ನಮಗೆ ಹೆಸರಿಡುವ ಚಟ,
ಔಟ್ ಆಫ್ ಕಂಟೆಕ್ಸ್ಟ್ ಕೋಟ್ ಮಾಡುವುದು ಅಹಹಾ ಅದೆಂಥ ಸುಖ.
ವರಕವಿಯ ಉಲುಹು - ಸಿಕ್ಕಲ್ಲಿ ಅಲ್ಲ. ಸಿಕ್ಕಲ್ಲಿ ಮಾತ್ರ.

ಎಲ್ಲದನ್ನೂ ಭೂತಗಾಜಲ್ಲಿಟ್ಟು
ನಮ್ ನಮ್ಮ ಮೂಗಿನ ನೇರಕ್ಕೆ ನೋಡುವ ನಾವು
ಎಷ್ಟು ಬೇಗ ತೀರ್ಪು ಕೊಡುತ್ತೇವೆ!
ಲೋಕ ಬಿರುದು ಕೊಟ್ಟರೆ,
ನೀನು ಅದಕ್ಕಂಟದೆ,
ಶೌಚದ ಕೋಣೆಯ ತೊಳೆಯುತ್ತಿದ್ದೆ;
ಬಾವಲಿ, ಹುಡ್ದುಗಳ ಆಮಿಷಕ್ಕಿಳಿಯದೆ
ತುಂಡು ಪಂಚೆ ಮೇಲುದ ಹೊದ್ದೆ.

ಸಿಕ್ಕದ್ದನ್ನೆಲ್ಲ ಬಳಿದು ಅಕೌಂಟಲ್ಲಿಟ್ಟುಕೊಳ್ಳುವ,
ನಮ್ಮ ಯುಗಕ್ಕೆ ಅನುಮಾನ -
ಈ ಎಲ್ಲ ತೋರಿಕೆಗಳ ಹಿಂದೆ,
ಬಿಸಿಲಿಗೆ ಕಪ್ಪಡರಿದ ಒಣ ಚರ್ಮದ
ಮೊಗದಲ್ಲಿ ಈಗಷ್ಟೆ ಬಿರಿದ ಮಲ್ಲಿಗೆ ನಗು,
ಬರಬೇಕಿದ್ದರೆ ಇನ್ನೇನೋ ಇರಬೇಕು;
ಅಡಗಿಸಿಟ್ಟ ಹುನ್ನಾರ, ಹೊಸದೇನೋ ಹತಾರ
ಬಾಯಲ್ಲಿ ಶಾಂತಿ ಮಂತ್ರ;
ಕೈಯಲ್ಲಿ ಒಡೆದು ಆಳಿದ ತಂತ್ರ
ಇರಬಹುದೇನೋ !? -
ಎಂಬನುಮಾನದ ಹಸಿಕಟ್ಟಿಗೆಗೆ
ಬೆಂಕಿ ಹಚ್ಚುವವರ ದೇಶಾಭಿಮಾನ
ಮತಾಭಿಮಾನ, ಹೆಸರಿಟ್ಟುಕೊಂಡ ಸ್ವಾಭಿಮಾನ!

ಎಲ್ಲದಕ್ಕೂ ನಿನ್ನದು ಪಂಚಮದ ಸೊಲ್ಲು,
ಶುದ್ಧ ಹಿಂದೋಳ, ರಂಗದಿಂದ ದೂರ.
ಮುಂದೆ ವೇದಿಕೆಯಲ್ಲಿ,
ನೆರೆದವರ ಟೋಪಿ,.ಬಣ್ಣ ನುಂಗಿದ ಬಿಳಿ ಬಿಳಿ ಕೋಟಂಗಿ,
ನೀಲಿಯಲ್ಲಿ ಹೂವುದುರಿಸಿ ಪಟಪಟಿಸುವ ತ್ರಿವರ್ಣಧ್ವಜ,
ಆಕಳಿಕೆ ತಡೆದು ಉಸುರುವ ಜೈಜಯವಂತೀ,
ನಡುಮಧ್ಯೆ ಕಿಸೆಯಲ್ಲಿಟ್ಟ ಫೋನಲ್ಲಿ ವಾಟ್ಸಾಪು ಮೆಸೇಜು
ಸೆಕ್ರೆಟರಿ ಬರಕೊಟ್ಟ ಕೊಟೇಶನ್ ಯುಕ್ತ ಭಾಷಣ
ಮುದುರಿ ಒದ್ದೆಯಾಗುವ ಮೊದಲೆ ಗಳುಹಬೇಕು,
ಕೊನೆಗೊಂದು ಮಾತು
ಸಬಕೋ ಸನ್ಮತಿ ಹೇಳಬೇಕು.
"ಸಬಕೋ" ಅಷ್ಟೆ ತನಗಲ್ಲ.
ಇಲ್ಲಿ ಸ್ಮಾರ್ಟು ಫೋನು, ಟೀವಿಯಲ್ಲಿ ಸ್ಟ್ರೀಮಾಗುತ್ತಿರುವ ಪಥ ಸಂಚಲನಕ್ಕೆ
ವಾಹ್ ಗುಟ್ಟುವ ಲೈಕೊತ್ತುವ ಜನ ಮಾನಸ ನಿನ್ನ ನಿಜವ ನಂಬಲೇ ಇಲ್ಲ

ಬರೆದಿಟ್ಟೆ ನೀನು ನಿನ್ನ ಸತ್ಯಾನ್ವೇಷಣೆಯ,
ಇಟ್ಟ ಹೆಜ್ಜೆಗಳ, ತೊಟ್ಟ ನಿಲುವುಗಳ,
ಕಲಿತ ಹೊಳವುಗಳ,
ಹೊಸತಿಗೆ ತೆರೆದುಕೊಂಡ ಬಗೆಯ,
ಹಳತಿಗೆ ಒಲಿದ ಎದೆಯ,
ಎಡವಿದ್ದು, ತಡವಿದ್ದು,
ಆಗಿದ್ದು, ಆಗಬೇಕಾಗಿದ್ದಿದ್ದು, ಆಗಬಹುದಾಗಿದ್ದು..
ಎಲ್ಲ ಖುಲ್ಲಂ ಖುಲ್ಲ
ಆದರೂ ಓದುವವರ ಕಣ್ಣು ತೆರೆಯದೆ
- ಬಿಚ್ಚಿಟ್ಟದ್ದು ಸಿಕ್ಕುವುದಿಲ್ಲ.
ಅವರು ಹುಡುಕಿದ್ದು ಅವರಿಗೆ
ಸಿಕ್ಕಿದರೆ ಸಾಕು,
ನೀನು ಬರೆದಿದ್ದಲ್ಲ!!
ಮತ್ತೆ ವರಕವಿ... ಕಂಡದ್ದು ಅಲ್ಲ, ಕಂಡದ್ದು ಮಾತ್ರ.
ಎಲ್ಲೋ ಒಳಗೆ, ಹೊರಗೆ ಕೇಳಿಸದ ಹಾಗೆ.
((ಯೂ ಬೀ ದ ಚೇಂಜ್... ))


ಇದು ನಿನ್ನೊಬ್ಬನದೆ ಅಲ್ಲ ಅಜ್ಜಾ.
ದಕ್ಷಿಣೇಶ್ವರದ ಆಲದ ಕೆಳಗೆ
ಬೆರಗು ಮೈವೆತ್ತು ನಿಂದವನ ಗತಿಯೂ.
ಅವನ ಮಾನವತಾವಾದದ
ಕಾಲುದಾರಿಯ ಮೇಲೆ
ಕೆಂಪು ಬಾವುಟ, ಕೇಸರಿ ಶಾಲು.
ಅವನ ಹೆಸರು ಹೇಳಲೂ ಲಾಯಕ್ಕಿಲ್ಲದವರ
ಬಾಯಲ್ಲೆಲ್ಲ ಉದ್ಧರಿತ ಸಾಲು ಸಾಲು
ಉತ್ತಿಷ್ಠ, ಜಾಗ್ರತ.. ಪ್ರಾಪ್ಯವರಾನ್ನಿಬೋಧತ..
ಎಲ್ಲದಕ್ಕೂ ಮಧ್ಯಮ ಪುರುಷ ಕರ್ಮಣೀ ಪ್ರಯೋಗ, ತನಗಲ್ಲ.
ಜನ ಮರುಳೋ ಜಾತ್ರೆಯೋ!

ಸಂತೆಯಲ್ಲಿ ನಿಂತು
ಜಪಮಣಿಯೊಳಗೆ ಧ್ಯಾನಸ್ಥನಾದವನ
ಗೋರಿಯ ಸುತ್ತ ದೊಡ್ಡ ಮಂದಿರ;

ನುಡಿದರೆ ಮುತ್ತಿನ ಹಾರವೆಂದವರ-
ಮರ್ಯಾದೆಯನ್ನು ನಾವು ಚರ್ಚೆಗಳಲ್ಲಿ ಹರಾಜು ಹಾಕಿದ್ದೇವೆ.
ಒಳಗಿರುವ ಅನ್ಯವನ್ನ ಅನನ್ಯವಾಗಿಸಿದವನನ್ನು
ಪಾಲು ಮಾಡಿಕೊಂಡಿದ್ದೇವೆ.

ಬಯಲಾದವರನ್ನು ಬೆತ್ತಲಾದವರನ್ನು
ಎಳೆದೆಳೆದು ಪೀಠ ಕಟ್ಟಿದ್ದೇವೆ
ಶೂನ್ಯ ಮಂಟಪಕ್ಕೆ ಸ್ವರ್ಣಲೇಪ
ಝಗ್ಗೆನ್ನುವ ಶಾಂಡೆಲಿಯರ್ ದೀಪ

ಕತ್ತಲು ಎಲ್ಲೂ ಇಲ್ಲ
ಕೊನೆಯ ಪಕ್ಷ ಬೆಳಕನ್ನು ಹುಡುಕಬೇಕು ಎಂಬರಿವು
ಮೂಡಲೂ ಕತ್ತಲಿಲ್ಲ.
ಕರೆಂಟು ಹೋದರೆ ಡೀಸೆಲ್ ಉರಿಸು
ಸೂರ್ಯನಿಗೇ ಪ್ಲಗ್ಗು ಹಾಕು, ಒಟ್ಟಲ್ಲಿ ಝಗಮಗಿಸು.
ಈಗಿವರು ಎಲ್ಲ ಹಿಂದುಳಿದ ಜಾತಿಪಾಲು.
ಮುಂದುವರಿದವರ ಜಾತಿಯೇ ಪಾಲು.

ಆನಿಕೇತನವನ್ನ ಸ್ಮಾರಕವಾಗಿಸಿದ ಮೇಲೆ
ವಿಶ್ವಪಥವು ಟೋಲ್ ರಸ್ತೆ ಹೆಸರಾಗಿದೆ
ಗದ್ದೆಗಳೆಲ್ಲ ಒಣಗಿ ಬಿರಿಯುತ್ತಿದ್ದರೆ
ಪೇಟೆಗಳ ಮಾರ್ಕೆಟ್ ಮಾತ್ರ ಕೆಸರಾಗಿದೆ

ಅಮ್ಮ ಸ್ನಾನಕ್ಕಿಳಿಸಿದ ಪುಟ್ಟ ಮಗುವಿನ ಮುಗ್ಧತೆಯಲ್ಲಿ
ಜಗತ್ತಿಗೆ ಬರಿಮೈಯಾದವನ ಪಂಥವಿದೆ
ನಿಮ್ಮೂರ ಹತ್ ಹತ್ತಿರದವನೆ.
ಅಹಿಂಸೆಯೇ ಜೀವನಧರ್ಮ
ಒಂದು ಪೈಸೆ ಕಡಿಮೆ ಬಿದ್ದರೂ ಬಡ್ಡಿ ಗಿಟ್ಟುವುದಿಲ್ಲ.
ಅಡಮಾನಕ್ಕಿಟ್ಟ ವಸ್ತು ಮರಳುವುದಿಲ್ಲ.

ದುಃಖಮೂಲ ಬದುಕಿಗೆ ಬೆನ್ನು ಹಾಕಿದವನ
ಅನುಯಾಯಿಗಳು,
ಮೂರ್ತಿಪೂಜೆ ಬೇಡೆಂದವನ
ಹಲ್ಲುಗಳನ್ನ ವಜ್ರದ ಕರಂಡಕದಲ್ಲಿಟ್ಟರು!
ದಿಕ್ಕು ದಿಕ್ಕಿನಲ್ಲಿ ಆಕಾಶದೆತ್ತರಕ್ಕೆ ಕಟ್ಟಿದ ವಿಹಾರದ
ಗೋಡೆಯುದ್ದಕ್ಕೆ ವಿಗ್ರಹಗಳಿವೆ ಉದೂದ್ದ!!

ತನ್ನ ತನದಿ ಬೆಳೆದು ಇಡೀ ಭಾರತ
ಮಣಿವ ಸಂವಿಧಾನ ಬರೆದವನು
ಈಗ ಬರಿದೆ ಅಸ್ಪ್ರಶ್ಯರ ನಾಯಕ.
ಫೋಟೋ ಪ್ರತಿಮೆಗಳಲ್ಲಿ
ಜಯಂತಿಯ ದಿನ ಹಾರ ಹಾರಗಳಲ್ಲಿ ಮುಳುಗಿ
ಹೊರಜಗಲಿಯಲ್ಲೆ ಕೂತ ಪಥಿಕ.


ಇರಲಿ ಬಿಡು.

ಕಾಲ ಸಂದ ಬಳಿಕ
ನಿಮ್ಮ ಕಂಪ್ಲೀಟ್ ವರ್ಕ್ಸೂ
ಎಲ್ಲರ ಸೊತ್ತು.
ಹೇಗ್ ಹೇಗೆ ಬಳಸಬೇಕು
ಅವರವರಿಗೆ ಗೊತ್ತು.
ಸಮಗ್ರ - ಬರಿಯ ಶೀರ್ಷಿಕೆಯಲ್ಲಿ ಮಾತ್ರ.


[[ಕನ್ನಡ ಮಾಣಿಕ್ಯ ಪತ್ರಿಕೆಯ ವಾರ್ಷಿಕ ಪ್ರಕಟಣೆ ಸುಗಂಧಿಯಲ್ಲಿ ಪ್ರಕಟವಾದ ನನ್ನ ಕವಿತೆ. ಕರ್ಕಿ ಕೃ‍ಷ್ಣಮೂರ್ತಿ ಮತ್ತು ಬಾಲಕೃಷ್ಣ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಈ ಸುಗಂಧಿ ವಿಶೇಷಾಂಕ ಇತ್ತೀಚಿನ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ವಿಶೇಷಾಂಕ.]]

Tuesday, September 27, 2016

ಶಿಲುಬೆ ಹೊತ್ತ ಬೆನ್ನು

ಮೋಡ ಕಟ್ಟುತ್ತದೆ
ಹನಿಯುವುದೇ ಇಲ್ಲ
ಹೇಳಲಿಕ್ಕೆ ತುಂಬ ಇದೆ
ದನಿಯಾಗುವುದೇ ಇಲ್ಲ

ಹೀಗಿರಬಾರದಿತ್ತು
ಹಾಗೇ ಇದ್ದಿದ್ದರೆ ಚೆನ್ನಿತ್ತು

ಈಗ ಏನು ಮಾತಾಡಿದರೂ
ಕರ್ತವ್ಯ ಮತ್ತು ಜವಾಬ್ದಾರಿ
ಶಿಲುಬೆ ಹೊತ್ತ ಬೆನ್ನು
ಕೂಡುವುದಿಲ್ಲ ಕಣ್ಣು
ಮಿಂಚುವುದಿಲ್ಲ
ಬರಿದೆ ಗುಡುಗು
ಮಳೆ ಬರದೆಯೂ
ಕಲಕಿ ಹೋದ ಕಣ್ಣು

ಜೊತೆ ಹೆಜ್ಜೆ,
ಗುರಿಯಿರದ ಹಾದಿ
ಹನಿ ಮುದ್ದಿಸುವ ಕಾನು
ಕಂಡ ಶಿಖರವನೇರಲಿಕ್ಕು
ಕಣಿವೆ ತುಂಬ ದಿಕ್ಕು
ಎಲ್ಲ ದಾಟಿ
ರಾಜಪಥದ ಬೀದಿಯ
ಆರತಕ್ಷತೆಯಲ್ಲಿ
ಬಯಲಾದೆವು
ಹಾಗೇ ಇದ್ದಿದ್ದರೆ ಚೆನ್ನಿತ್ತು.

ಶಿಲುಬೆ ಹೊತ್ತ ಬೆನ್ನು
ಸಾಕೆನಿಸಿಯೂ ಹೊರಲೇಬೇಕಿನ್ನು.