Tuesday, September 7, 2010

ಶ್ರಾವಣದಲ್ಲೇ ಮಾಗಿ!

ಹೊಸ ಆಫೀಸು, ಹೊಸ ಜೊತೆಗಾರರು, ಮ್ಯಾನೇಜರು ಮತ್ತು ಒಂದಿಬ್ಬರು ಟೀಮಿಗಳನ್ನ ಬಿಟ್ಟರೆ ಇನ್ಯಾರ ಪರಿಚಯವೂ ಇರಲಿಲ್ಲ. ಮಧ್ಯಾಹ್ನ ಬೇರೆ ಬೇರೆ ಟೀಮಿನ ಎಲ್ಲರೂ ಒಟ್ಟಿಗೆ ಊಟಕ್ಕೆ ಹೊರಟೆವು. ನಾನು ಕ್ಯಾಂಟೀನಿನಲ್ಲಿ ಉದ್ದುಕೆ ಜೋಡಿಸಿದ ಟೇಬಲ್ಲಿನ ಈಚೆ ತುದಿಯಲ್ಲಿ ಕೂತು ಎಲ್ಲರ ಮಾತು ಕೇಳಿಸಿಕೊಳ್ಳುತ್ತ, ನನ್ನ ಧ್ವನಿಯನ್ನೂ ತುತ್ತಿನ ಜೊತೆಗೆ ಸೇರಿಸಿ ಒಳಕ್ಕೆ ತಳ್ಳುತ್ತಿದ್ದೆ.
ಎಲ್ಲರೂ ಅವರಷ್ಟಕ್ಕೆ ಇಂಗ್ಲಿಷಿನಲ್ಲಿ ಆ ವಾರ ರಿಲೀಸಾಗಲಿರುವ ಸಿನಿಮಾದಿಂದ ಹಿಡಿದು, ಮೂಲಿ ಪರಾಟ ಮಾಡುವುದು ಹೇಗೆ ಮತ್ತು ಉದ್ದ ಜಡೆಯನ್ನ ಲ್ಯಾಕ್ಮೆ ಶಾಂಪೂ ಬಳಸಿ ಸಂಭಾಳಿಸುವುದು ಹೇಗೆ ಮೊದಲಾದ ವಿಷಯಗಳಲ್ಲಿ ಮುಳುಗಿದ್ದರು. ಎಲ್ಲ ವಯಸ್ಸು, ಅನುಭವ, ಆಕಾರ, ಆಸಕ್ತಿಗಳು ಕಲಸಿಕೊಂಡಿದ್ದ ಗಜಿಬಿಜಿಯ ಗುಂಪು. ನಾನು ಅಯ್ಯೋ ಇವರಲ್ಯಾರೂ ಕನ್ನಡದವರ ಹಾಗೇ ಕಾಣ್ತಾ ಇಲ್ವಲ್ಲ ಹೆಂಗಪ್ಪಾ ಗೆಳೆತನ ಬೆಳಸೋದು ಅಂದುಕೊಂಡು ಸುಮ್ಮನುಳಿದೆ.
ಪಕ್ಕದಲ್ಲಿ ಕುಳಿತ ಸಹೋದ್ಯೋಗಿಗೆ ಎಲ್ಲರ ಮಾತುಗಳ ನಡುವೆ ನನ್ನ ದ್ವನಿ ಕೇಳದಿರುವುದು ಅದು ಹೇಗೋ ಗಮನಕ್ಕೆ ಬಂದು, ಹಾಗೇ ಇಂಗ್ಲಿಷಿನಲ್ಲಿ ಒಂದು ಸಾಲಿನ ಇಂಟ್ರೋ ಹಾಕಿದರು. ಅಷ್ಟಕ್ಕೆ ಸುಮ್ಮನುಳಿಯದೆ, ಇನ್ಫಿಯಿಂದ ಬಂದವಳು ಮತ್ತು ಚಾರಣ ಪ್ರಿಯೆ ಅನ್ನುವ ವಿಶೇಷಣ ಸೇರಿಸಿಬಿಟ್ಟರು. ಎಲ್ಲರೂ ಮತ್ತೊಮ್ಮೆ ಗಜಿಬಿಜಿಯಲ್ಲಿ ಹಾಯ್ದರು. ನಾನು ತಿರುಗಿಸಿ ಹಾಯೆಂದೆ.
ಊಟ ಮುಗಿದು ಕೈತೊಳೆದು ಮೆಟ್ಟಲಿಳಿಯುವಾಗ ಎತ್ತರಕ್ಕೆ, ದೊಡ್ಡ ಆಕಾರದಲ್ಲಿದ್ದ ಹುಡುಗ ಬಂದು, ಇಂಗ್ಲಿಶಿನಲ್ಲಿ ನೀವು ಇನ್ಫೀನಾ, ನನ್ನ ಒಂದು ಉಸಿರಿನ ಉತ್ತರ ಹೌದು, ಟ್ರೆಕ್ಕಿಂಗ್ ಗ್ರೂಪಿದ್ಯಾ ಮತ್ತೆ ಹೌದು, ನೇಟಿವ್ ಯಾವುದು - ಮೊದಲ ಬಾರಿಗೆ ನಾನು ಬೆಂಗಳೂರು ಅಂತಂದೆ. ಈ ಬೇರೆ ಬೇರೆ ಭಾಷೆಯ ಜನರಿಗೆ ನಮ್ಮ ಸಾಗರ ಎಲ್ಲಿ ಎಂದು ಹೇಳಿಕೊಡುವ ತಾಳ್ಮೆ ಇರಲಿಲ್ಲ ನನಗೆ. ನನ್ನ ಅನಾಸಕ್ತಿ ಆತನಿಗೂ ತಟ್ಟಿರಬಹುದು. ಸೀಯಾ ಅಂತಂದು ಹೊರಟು ಹೋದ. ಸಧ್ಯ ಅಂತ ನಾನು ಬೇಗ ಮೆಟ್ಟಿಲಿಳಿದು ಸಾಗಿದೆ.
ಮುಂದೆರಡು ದಿನಗಳಲ್ಲಿ ಅವನು ಕನ್ನಡದವನು ಅಂತ ಗೊತ್ತಾಗಿ ನೆಮ್ಮದಿಯೊಂದು ಚಿಗುರೊಡೆಯಿತು. ಆಮೇಲಿನ ದಿನಗಳಲ್ಲಿ ಕೆಲಸ, ತಮಾಷಿ,ಡ್ಯಾನ್ಸು, ಸಿನಿಮಾ, ಸುತ್ತಾಟ, ಚಾರಣ, ಪ್ರವಾಸ ಅಂತ ಚಟುವಟಿಕೆಗಳು ತುಂಬಿ ತುಳುಕಿದವು.
ಆ ಸಹೋದ್ಯೋಗಿಯ ಭಾಷೆ, ನಡವಳಿಕೆ, ಆಸಕ್ತಿ, ಉತ್ಸಾಹ ಎಲ್ಲದರಲ್ಲೂ ಕನ್ನಡತನ ಮತ್ತು ಸಂಸ್ಕೃತಿ ಅಚ್ಚೊತ್ತಿದ್ದವು. ದಿನದಿನದಿಂದ ದಿನಕ್ಕೆ ಅಯ್ಯೋ ಬಿಟ್ಟರೆ ಸಾಕಪ್ಪಾ ಅನ್ನಿಸಿದ ಕ್ಷಣದಿಂದ ನಮ್ಮ ಸ್ನೇಹಸಂಬಂಧ ಇವತ್ತು ಯಾಕೆ ಬರಲಿಲ್ಲ ಅಂತ ಯೋಚಿಸುವಲ್ಲಿಯವರೆಗೆ ಬಂದಿತು. ಅದೆಲ್ಲಕ್ಕೂ ಆ ಮನುಷ್ಯನ ಸ್ನೇಹ, ಸೌಜನ್ಯ,ಪರಿಸರ ಪ್ರೇಮ, ಸಾಮಾಜಿಕ ಕಾಳಜಿ, ಮತ್ತು ಬದ್ಧತೆಗಳು ಕಾರಣವಾದವು.
ಟೆಕ್ಕಿಗಳು ಎಂದರೆ ಟೆಕ್ ಪ್ರಪಂಚದ ಸರಹದ್ದಲ್ಲೆ ಇರುವ ನನಗೂ ಒಂದು ಅಳತೆ ದೂರದಲ್ಲೆ ನಿಲ್ಲಬಯಸುವ ಸಂಶಯ. ಭಾಷೆ,ದೇಶ,ಸಂಸ್ಕೃತಿಗಳು ಕೊನೆಯ ಬೆಂಚಲ್ಲಿರಬಹುದು ಅನ್ನುವ ಅನುಮಾನದ ನೆಲೆ ನನ್ನ ಈ ನಡವಳಿಕೆಯ ನೆಲೆಗಟ್ಟು. ಅದನ್ನು ಸುಳ್ಳು ಮಾಡಿ ಜೊತೆಯಾದ, ನನ್ನ ಭಾವಕೋಶವನ್ನು ವಿಸ್ತರಿಸಿದ ಸ್ನೇಹಿತರು ಈಗ ಸಾಕಷ್ಟಿರುವುದರಿಂದ ಈಗ ನಾಲ್ಕೂವರೆ ವರ್ಷಗಳ ಹಿಂದಿದ್ದ ನನ್ನ ಮನಸ್ಥಿತಿ ಬದಲಾಗಿದೆ. ಅದಕ್ಕೆ ದೊಡ್ಡ ಕೊಡುಗೆ ಈ ಗೆಳೆಯ.
ಈ ಎಲ್ಲ ವಿಷಯಗಳನ್ನೂ ನಾನೆಂದೂ ಯೋಚಿಸಿರಲೆ ಇಲ್ಲ. ಅವನು ನನ್ನ ಸ್ನೇಹಿತನಾಗಿರುವುದು, ಮತ್ತು ಮನಸ್ಸಿಗೆ ಬಂದ ವಿಷ್ಯಗಳನ್ನ, ಹಸಿರನ್ನ, ಭಾವೋದ್ವೇಗಗಳನ್ನ, ಪಯಣವನ್ನ, ಫೋಟೋಗಳನ್ನ, ಮತ್ತು ಎಷ್ಟೊಂದೆಲ್ಲ ಮಾತುಕತೆಗಳನ್ನ, ವಿಶೇಷವಾಗಿ ಅವನಮ್ಮ ಮಾಡಿಕೊಟ್ಟ ಅದ್ಭುತ ತಿಂಡಿಗಳನ್ನ ಹಂಚಿಕೊಂಡು ತಿನ್ನುವಾಗೆಲ್ಲ ಆ ಸಂಬಂಧ ಎಷ್ಟು ಸಹಜವಾಗಿ ಆಪ್ತವಾಗಿತ್ತು ಅಂದರೆ ಅದಕ್ಕೆ ವಿಶ್ಲೇಷಣೆಯ, ಆಲೋಚನೆಯ ಅವಶ್ಯಕತೆ ಇರಲಿಲ್ಲ. ಅದು ತನ್ನಿಂತಾನೇ ಅವತ್ತು ತಪ್ಪಿಸುಕೊಳ್ಳುತ್ತಾ ಹೊರಳಿನಿಂತ ಮೆಟ್ಟಿಲು ದಾರಿಯನ್ನ ಹತ್ತಿ, ಇಬ್ಬರ ಒಳಜಗತ್ತಿನಲ್ಲಿ ಒಂದು ಆಪ್ತನೆಲೆ ಕಂಡುಕೊಂಡು ಬಿಟ್ಟಿತ್ತು.
ಈಗ ಕೆಲತಿಂಗಳುಗಳ ಮುಂಚೆ ಅವನು ಬೇರೆ ಕೆಲಸ, ಬೇರೆ ಊರು, ಬೇರೆಯದೇ ಅಕ್ಷಾಂಶಕ್ಕೆ ಹೊರಡುವ ಮಾತು ಬಂದಾಗ ಎರಡು ದಿನ ನನಗೆ ಪ್ರತಿಸ್ಪಂದನೆಯೇ ಹೊಳೆಯಲಿಲ್ಲ.
ಬೇಸರವಾದ ಕೂಡಲೆ, ಹಸಿವಾದ ಕೂಡಲೆ, ಪಯಣದ ಯೋಚನೆ ಬಂದಕೂಡಲೇ ಮತ್ತು ಪಯಣವೊಂದರಿಂದ ನಾನಾಗಲೀ ಅವನಾಗಲೀ ವಾಪಸ್ ಬಂದ ಕೂಡಲೆ, ಹಬ್ಬದ ಮರುದಿನ, ಹೊಸ ಓದಿನ ಮರುಕ್ಷಣ, ಫ್ಲಿಕರ್ ಅಪ್ಲೋಡ್ ಆದಕೂಡಲೇ ಅಲ್ಲಿ ಅವನ ಕ್ಯೂಬಿನ ಗೋಡೆಗಳಿಗೊರಗಿ ಒಂದಿಷ್ಟು ಹೊತ್ತು ಮಾತನಾಡುವುದಿತ್ತು. ಅದು ಹೆಚ್ಚು ಕಮ್ಮಿ ವೈಸಿವರ್ಸಾ ಕೂಡ.
ದಿನದಿನವೂ ನೋಡದೆ ಇದ್ದರೂ ಅಲ್ಲೆಲ್ಲೋ ಕಂಡೊಡನೆ ಒಂದು ನೆಮ್ಮದಿಯ ನಗೆ ಹಿತವಾದ ನೋಟವಿರುತ್ತಿತ್ತು. ಅವನು ವೀಕೆಂಡಿನ ಹೊಸಚಾರಣದ ಪ್ಲಾನು ಹೇಳುತ್ತಿದ್ದಂತೆ ಕೇಳುವುದಿಲ್ಲ ಎಂಬ ಹುಸಿಮುನಿಸಿನ ನನ್ನ ಮೊಗವಾಡದ ಹಿಂದೆ ಕಾತರದ ಕಿವಿಯಿತ್ತು. ಅವನ ಹಿರಿನಗುವಿನ ಒಳಗೆ ನನ್ನ ಕೇಳುಗಿವಿಗೆ ಕತೆಯುಣ್ಣಿಸುವ ಅಕ್ಕರೆಯಿರುತ್ತಿತ್ತು.
ಕನ್ನಡದ ಘಟ್ಟ ಕಾಡುಗಳ ನೆನಪು, ಹಸಿರಿನ ಮಾತು, ವನಸಿರಿಯ ಚಿತ್ರಗಳು, ಓದು-ಬರಹ ಎಲ್ಲಕ್ಕೂ ಒಂದು ಸಂವೇದನಾಶೀಲ ಕಟ್ಟೆಯಂತೆ (ಸೆನ್ಸಿಬಲ್ ಕಾರ್ನರ್ ಈಸ್ ಮೋರ್ ಕರೆಕ್ಟ್) ಒದಗಿದ, ನನ್ನ ತಮ್ಮಮತ್ತುಬಾಳಗೆಳೆಯನ ಅಂಶಗಳನ್ನು ಅಷ್ಟಷ್ಟು ಬೆರೆಸಿ ಮಾಡಿದಂತೆನಿಸುವ ಈ ಕಿರಿಯ ಗೆಳೆಯ ಇನ್ನು ಏಳು ಸಮುದ್ರದಾಚೆಗಿನ ರಾಜಕುಮಾರ.
ಚಾಟಿ’ದೆ ಎನ್ನುವುದು ಮೇಲಿನ ಮಾತು. ನಮ್ಮ ಭಾವಜಗತ್ತಿಗೆ ಹೊಸ ಸೇತುವೆ ಬೇಕಿಲ್ಲ. ಆದರೂ ಭೌತಿಕ ಜಗತ್ತಿನಲ್ಲಿದು ದೂರದ ಬದುಕು. ಹೊರಗೆ ಮಳೆ ಹನಿಯುತ್ತಿದ್ದರೂ ಒಳಗೆ ಗಾಜಿನ ಗೋಡೆಯೀಚೆ ಕುಳಿತವಳಿಗೆ ಮುಟ್ಟಲಾಗದೆ ಉಳಿಯುವ ಸಾದೃಶ್ಯವೇಕೋ ನೆನಪಾಗುತ್ತಿದೆ.
ಇಲ್ಲಿಯವರೆಗೆ ಅನುಭವಿಸಿದ ಸ್ನೇಹದ ಕ್ಷಣಗಳು ಇನ್ನು ಮುಂದಿನ ಅಂತರವನ್ನ ತುಂಬಿಕೊಡುವಷ್ಟು ಸಶಕ್ತವಾಗಿರುವ ಅರಿವು ಈ ವಿದಾಯವನ್ನ ಸಹನೀಯಗೊಳಿಸುತ್ತಿದೆ.
ನಾನು ತುಂಬ ಇಷ್ಟಪಟ್ಟ ಸೆಪ್ಟೆಂಬರು ಅದ್ಯಾಕೋ ಈ ವರ್ಷ ಇದ್ದಕ್ಕಿದ್ದಂತೆ ವಿದಾಯದ ತಿಂಗಳಾಗಿ ಬದಲಾಗಿಬಿಟ್ಟಿದೆ.
ಶ್ರಾವಣದ ಕೊನೆ ಕೊನೆಗೆ ಕಳೆದ ಕಾಲದ ಕೊಂಡಿಗಳು ಒಂದೊಂದಾಗಿ ಜರುಗುವಾಗ ಒಳಗೆ ಮನದಲ್ಲಿ ಎಲೆಯುದುರುವ ಕಾಲ ನಡೆಯುತ್ತಿದೆ. ಕಳೆದ ದಿನಗಳ ಹಚ್ಚಹಸಿರಿನ ನೆನಪು, ಅಕ್ಕರೆಯ ದೀಪದ ಬೆಳಕಲ್ಲಿ ಬಂಗಾರದಂತೆ ಹೊಳೆಯುತ್ತಿವೆ.
ವಿದಾಯದ ಮಬ್ಬುಗತ್ತಲಿಗೆ ಬೆಳಕಾಗಿ ನಿಲ್ಲುವುದೆ ನೆನಪು?!
ಉಳಿದದ್ದೇನೇ ಇರಲಿ.
ನಾನು ಸಿರಿವಂತೆ.
ಹಿರಿತನದ ಹಿರಿಕಿರಿಯ ಜೀವಗಳ ಗೆಳೆತನದ ಡೆಪಾಸಿಟ್ಟುಗಳು
ಒಳಗೆ ಕಾಲನ ತಿರುಪಿಗೆ ಸಿಕ್ಕದಂತೆ ಬೆಚ್ಚಗೆ ಮರಿಹಾಕುತ್ತಲಿವೆ ನಿರಂತರ.

ನಲ್ಮೆಯ ಗೆಳೆಯಾ,
ಅಕ್ಕರೆಯ ಅಪ್ಪುಗೆಯ ವಿದಾಯ.
ಅಮ್ಮ ಅಪ್ಪನಿಟ್ಟ ಹೆಸರು
ಅನ್ವರ್ಥವಾಗಲಿ - ಸುಜಯ.
ಒಳಿತು, ನೆಮ್ಮದಿ,
ಸಂಕಟವ ಸಹಿಸುವ ಶಕ್ತಿ
ನೋವಿನ ಕ್ಷಣಗಳನ್ನ ಮರೆಸುವಷ್ಟು ನಲಿವು
ನಿನ್ನದಾಗಿರಲಿ,
ಅವಳು ಸ್ವಲ್ಪ ಜಾಸ್ತಿನೇ ಬೇಗ ಸಿಗಲಿ,
ಎಂಬುದೆನ್ನ ಆಶಯ.