Friday, May 30, 2008

ಗಂಜಿ..

ಜಿಟಿಜಿಟಿ ಮಳೆ ಬೆಳಿಗ್ಗೆ ಎದ್ದಾಗಿನಿಂದಲೇ ಸುರಿಯುತ್ತಿದೆ. ಹೂವು ಕೊಯ್ಯಲು ಹೋಗುವಾಗಲೂ ಕೊಡೆ ಹಿಡಿದುಕೊಂಡೇ ಹೋಗಬೇಕಾದಷ್ಟು ಜೋರೇ. ಹಾಗಾಗೇ ಇವತ್ತು ದೇವರಿಗೆ ಒಂದೆರಡು ಬೇಲಿಸಾಲಿನ ಹೂಗಳು ಖೋತಾ. ಸ್ನಾನ ಮುಗಿಸಿ ಯುನಿಫಾರ್ಮ್ ಹಾಕಿ, ಕೈಯಲ್ಲಿ ಹಣಿಗೆ ಹಿಡಿದು ಬಂದವಳಿಗೆ ಅಮ್ಮ ಬಿಸಿಬಿಸಿ ಹಬೆಯಾಡುತ್ತಿದ್ದ ತಟ್ಟೆ ಕೊಟ್ಟು ತಲೆಬಾಚತೊಡಗಿದಳು. ತಟ್ಟೆ ನೋಡಿದ ಕೂಡಲೆ ಇವಳಿಗೆ ಸಿಟ್ಟು. ನನಗೆ ಗಂಜಿ ಬೇಡ, ತಿಂಡಿ ಬೇಕು. ಸಿಡುಕತೊಡಗಿದಳು. ಅಮ್ಮ ನಯವಾಗಿ ಮಾತನಾಡಿಸುತ್ತ, ನೋಡು ಈ ಚಳಿ ಮಳೇಲಿ ಬಿಸಿ ಬಿಸಿ ಗಂಜಿ ತಿನ್ನು, ಮೇಲೆ ಘಮ ಘಮ ಕೊಬ್ಬರಿ ಎಣ್ಣೆ ಮತ್ತೆ ಕರಿಯಪ್ಪೆ ಮಾವಿನ ಮಿಡಿ ಇದೆ. ಎಷ್ಟು ರುಚಿ ಇರುತ್ತಲ್ಲಾ ಪುಟ್ಟೀ, ಈ ಮಳೆಯಲ್ಲಿ ಮೈ ಬೆಚ್ಚಗಿರತ್ತೆ. ಹೊಟ್ಟೆ ತಂಪಾಗಿರತ್ತೆ ತಿಂದರೆ ಅಂತ ಹೇಳುತ್ತ ಎರಡೂ ಜಡೆಯನ್ನೂ ಎತ್ತಿ ಕಟ್ಟಿ, ಅಲ್ಲೇ ಕಿಟಕಿಯ ಬಳಿ ಇಟ್ಟಿದ್ದ ಹಳದಿ ಬಣ್ಣದ ಗುಂಡು ಡೇರೆ ಹೂವನ್ನ ಮುಡಿಸಿದಳು. ಇವಳಿಗೆ ಅಮ್ಮನ ಮಾತು ಚೂರು ಚೂರೂ ಇಷ್ಟವಾಗಲಿಲ್ಲ. ಗಂಜಿ ತಿನ್ನಲಿಕ್ಕೇನೋ ರುಚಿಯಾಗೇ ಇತ್ತು. ಮನಸ್ಸು ಕೆಟ್ಟಿತ್ತು. ತಾನು ಓದಿದ ಕತೆಗಳಲ್ಲೆಲ್ಲ ಬಡವರ ಮನೆಯವರು ಗಂಜಿ ತಿಂದು ಬದುಕುತ್ತಿದ್ದರು. ಹಾಗಾದರೆ ನಾವೂ ಬಡವರೆ ಎಂಬ ಗಾಢ ನಿರಾಸೆಯಲ್ಲಿ ತಿಂದು ಮುಗಿಸಿ ಕೈ ತೊಳೆದುಕೊಳ್ಳುವಾಗ ಅವಳ ಕಣ್ಣಲ್ಲಿ ನೀರಿತ್ತು. ಗಮನಿಸಿದ ಅಮ್ಮ ಮೆತ್ತಗೆ ಹೇಳಿದಳು. ನಾಳೆ ತಿಂಡಿ ದೋಸೆ. ಈಗ ಸಿಟ್ಟು ಮಾಡಿಕೊಳ್ಳದೆ ಸ್ಕೂಲಿಗೆ ಹೋಗು ಮಗಳೇ. ಸರಿ ಎಂದರೂ ಬಿಗುವಾದ ಮನದಲ್ಲೆ ಕೊಡೆ ಬಿಚ್ಚಿ ಹೊರಟಳು. ಅಮ್ಮ ಬಾಗಿಲಲ್ಲೇ ತನ್ನ ಟಾಟಾಕ್ಕೆ ಕಾಯುತ್ತಿದ್ದಾಳೆ ಅಂತ ಗೊತ್ತಿದ್ದೂ ತಿರುಗಿ ನೋಡದೆ ಹೋಗಿಬಿಟ್ಟಳು.

ಅವತ್ತು ಶಾಲೆಗೆ ಹೋದರೂ ಬೆಳಗ್ಗಿನಿಂದಲೇ ಒಂದು ತರ ಗೌ ಅನ್ನುತ್ತಿತ್ತು. ಧಾರಾಕಾರ ಮಳೆ. ಶಾಲೆಯ ಹೊರಗಿನ ಅಂಗಳವೆಲ್ಲ ಕೆಸರು ಹೊಂಡವಾಗಿತ್ತು. ಎಲ್ಲರೂ ಕ್ಲಾಸಿನಲ್ಲೆ ನಿಂತುಕೊಂಡು ಪ್ರಾರ್ಥನೆ ರಾಷ್ಟ್ರಗೀತೆ ಹೇಳಬೇಕಾಯಿತು. ಬೆಳಗ್ಗೆ ಹೇಗೆ ಹೇಗೋ ಮುಗಿಯಿತು. ಮಧ್ಯಾಹ್ನದ ಕ್ಲಾಸು ಭಾರೀ ಕಷ್ಟವಾಗಿಬಿಟ್ಟಿತು. ಸಂಜೆಯಾಗೇ ಹೋಯಿತೇನೋ ಅನ್ನುವಂತೆ ಕವಿದುಕೊಂಡಿದ್ದ ಕತ್ತಲು, ಎಲ್ಲರಿಗೂ ನಿದ್ದೆಯ ಮೂಡು ತಂದುಬಿಟ್ಟಿತ್ತು. ಅದಕ್ಕೆ ಸರಿಯಾಗಿ ಗುಂಡಮ್ಮ ಟೀಚರ ಗಣಿತ ಕ್ಲಾಸು ಎರಡು ಪೀರಿಯಡ್ಡು ಬೇರೆ. ಎಷ್ಟು ಕೂಡಿದರೂ ಕಳೆದರೂ ಲೆಕ್ಕವೇ ಮುಗಿಯುತ್ತಿಲ್ಲ. ದಿನವೂ ಆಗಿದ್ದರೆ ಮುಂದಿನ ಪಿರಿಯಡ್ಡು ಆಟಕ್ಕೆ ಬಿಡಬೇಕು. ಹಾಗಾಗಿ ಅದರ ಹಿಂದಿನ ಪಿರಿಯಡ್ಡಿನಲ್ಲೆ ಹಂಚಿಕೆ ಶುರುವಾಗಿರುತ್ತಿತ್ತು ಗುಟ್ಟಾಗಿ. ಯಾರು ರೂಪನ ಟೀಮು, ಯಾರು ಭಾಗ್ಯನ ಕಡೆ, ಕೆರೆ ದಡವೋ, ಕಳ್ಳಾ ಪೋಲಿಸೋ,..ಹೀಗೇ ಎಲ್ಲ ನಿರ್ಧಾರಗಳೂ ಗುಸುಗುಸೂಂತ ಹರಡಿಕೊಂಡು ಕ್ಲಾಸಿನಲ್ಲಿ ತುಂಬ ಚಟುವಟಿಕೆ ಇರುತ್ತಿತ್ತು. ಇವತ್ತು ಎಲ್ಲರೂ ಮಂಕಾಗಿದ್ದರು. ಹೊರಗೆ ಧೋ ಮಳೆ. ಅಷ್ಟಕ್ಕೇ ಮುಗಿಯಲಿಲ್ಲ. ಮುಂದಿನ ಪಿರಿಯಡ್ಡಲ್ಲಿ ಅನಸೂಯಮ್ಮ ಟೀಚರು ಬಂದುಬಿಟ್ಟರು. ಅಯ್ಯೋ ರಾಮ ಇವರಿನ್ನು ಮತ್ತೆ ಬೆಳಗ್ಗಿನ ಕನ್ನಡವನ್ನೇ ಕೊರೆಯುತ್ತಾರಲ್ಲಾ ಅಂದುಕೊಳ್ಳುತ್ತಿದ್ದ ಹಾಗೆ ಒಳಗೆ ಬಂದ ಟೀಚರು, ಮಕ್ಳಾ ಇವತ್ತು ಮಳೆ, ಆಟ ಬಂದ್, ಅದಕ್ಕೆ ಈಗ ಕತೆ ಹೇಳಾಟ ಅಂತ ಶುರು ಮಾಡಿದರು. ಓ ಇದೇನೋ ಬೇರೆ ತರ ನಡೀತಾ ಇದ್ಯಲ್ಲ ಅಂತ ಎಲ್ಲರ ಕಿವಿಯೂ ಚುರುಕಾಯಿತು. ಮೂಲೆಯಲ್ಲಿ ಬಾಗಿಲ ಹಿಂದಿನ ಬೆಂಚಲ್ಲಿ ಕೂತ ಶೋಭಾ ತೂಕಡಿಸುತ್ತಿದ್ದಿದ್ದು ಟೀಚರ ಕಣ್ಣಿಗೆ ಬಿತ್ತು. ಕೂಡಲೇ ಅವರ ಕೈಯಲ್ಲಿದ್ದ ಉದ್ದನೆ ಬೆತ್ತ ತಗೊಂಡು ಅವಳ ಹತ್ತಿರ ಹೋಗಿ ಸಣ್ಣಗೆ ತಿವಿದರು. ಅಯ್ಯಮ್ಮಾ ಅಂತ ಅವಳು ಬೆಚ್ಚಿ ಬಿದ್ದು ಎದ್ದು ಕೂತರೆ ನಮಗೆಲ್ಲ ಮುಸಿಮುಸಿ ನಗು. ಇನ್ಯಾರಾದರೂ ಮಲಗಿದರೆ ಸರಿಯಾಗಿ ಬೀಳತ್ತೆ ಮೈಮೇಲೆ ನಾಗರಬೆತ್ತ ಇದು ಗೊತ್ತಾಯ್ತಾ ಅಂತ ಪುಟ್ಟಗೆ ನಡೆದುಕೊಂಡ ಬಂದ ಟೀಚರು ಒಂದು ಕ್ಷಣ ಅಜ್ಜ ಹೇಳುವ ಕತೆಯ ಲಂಕಿಣಿಯಂತೆಯೇ ಕಾಣಿಸಿದರು. ಛೇ ಛೇ, ಟೀಚರ್ ಬಗ್ಗೆ ಹಂಗೆಲ್ಲಾ ಅಂದ್ಕಂಡ್ರೆ ಪಾಪ ಬರುತ್ತೆ, ಅಂತ ನೆನಪು ಮಾಡಿಕೊಂಡು ಲಂಕಿಣಿಯನ್ನ ಹಿಂದೆ ದಬ್ಬಿದರೂ ಟೀಚರ್ ಕನ್ನಡಕದೊಳಗಿನ ಚೂಪುಕಣ್ಣಿನಲ್ಲಿ ನೋಡುತ್ತಿದ್ದುದ್ದು ಏನೋ ಭಯ ಹುಟ್ಟಿಸುತ್ತಿತ್ತು.
ಅಷ್ಟರಲ್ಲಿ ಟೀಚರ್ ಕತೆ ಶುರುಮಾಡಿದರು. ಅಲ್ಲಿ ನೋಡಿದರೆ ಮತ್ತೆ ಗಂಜಿಯೇ ಬರಬೇಕಾ? ಅದ್ಯಾರೋ ಅಡುಗೂಲಜ್ಜಿ ಅವಳ ಮೊಮ್ಮಗಳಿಗೆ ಮಳೆಯಲ್ಲಿ ಬಿಸಿಬಿಸಿ ಗಂಜಿ ಮಾಡಿ ಕೊಡುವ ಕತೆ. ಇವಳಿಗೆ ಬೇಜಾರಾಗಿ ಹೋಯಿತು. ಇವಳ ಇರುಸುಮುರುಸು ಟೀಚರ ಕಣ್ಣಿಗೂ ಬಿತ್ತು. ಎಬ್ಬಿಸಿ ನಿಲ್ಲಿಸಿ ಕೇಳಿದರು. ಅದು ಅದೂ ಗಂಜಿ ಅಂದ್ರೆ ಬಡವರೂಟ ಅಲ್ವಾ.. ಅಂತ ತೊದಲಿದಳು. ಅಯ್ಯೋ ಹುಚ್ಚಕ್ಕಾ, ಯಾರ್ ಹೇಳಿದ್ದು ಹಂಗೇ ಅಂತ. ಒಂದೊಂದ್ಸಲ ಮಾರಾಜಂಗೂ ಗಂಜಿನೇ ರುಚಿಯಾಗ್ ಬಿಡತ್ತೆ ಗೊತ್ತಾ. ಬಿಸಿಬಿಸಿ ಗಂಜಿಗೆ, ಚೂರು ಉಪ್ಪು, ಎಣ್ಣೆ, ಉಪ್ಪಿನಕಾಯಿರಸ ನೆಂಚಿಕೊಂಡು ತಿಂದರೆ ಆಹಾ ಅಂತ ಅವರೇ ತಿಂದ ಖುಶಿಯಲ್ಲಿ ಚಪ್ಪರಿಸಿಬಿಟ್ಟರು. ಇದು ಬಡವರ ಕತೆಯಾಯಿತು. ಶ್ರೀಮಂತರು ಇದಕ್ಕೊಂಚೂರು ಕಾಯಿತುರಿ ಹಾಕಿ ತಿಂತಾರೆ ಅದಂತೂ ಇನ್ನೂ ರುಚಿ. ತಿಂದು ನೋಡಿದಿಯಾ ಯಾವಾಗಾದ್ರೂ, ಒಂದ್ಸಲ ತಿನ್ನು, ಆಮೇಲೆ ಪಾಯಸ ಕೊಟ್ರೂ ಇಲ್ಲ ಗಂಜಿ ಬೇಕು ಅಂತೀಯ ಅಂತ ಹೇಳಿ ನಕ್ಕರು. ಶ್ರೀಕೃಷ್ಣ ಪರಮಾತ್ಮನಿಗೂ ಹಸಿವಾಗಿ ಸುಧಾಮನ ಮನೆಗೆ ಹೋದಾಗ ಅವನು ಕೊಟ್ಟಿದ್ದು ಅವಲಕ್ಕಿ ಮತ್ತು ಗಂಜಿ, ಹೇಗೆ ಸುರಿದುಕೊಂಡು ತಿಂದ ಗೊತ್ತಾ ಅವನು. ರಾಮನಿಗೆ ಶಬರಿ ಬರೀ ಹಣ್ಣು ಕಚ್ಚಿ ಕೊಟ್ಟಳು ಅಂದುಕೊಂಡ್ಯಾ, ಗಂಜಿ ಉಪ್ಪಿನಕಾಯಿ ರಸವನ್ನೂ ಕೊಟ್ಟಿರುತ್ತಾಳೆ. ಪಾಪ ಇಲ್ಲದಿದ್ದರೆ ಹಸಿವೆಲ್ಲಿ ಹೋಗತ್ತೆ. ಅಂತಹ ರಾಮದೇವರೇ ಗಂಜಿಯನ್ನು ಖುಶಿಯಿಂದ ತಿಂದ ಮೇಲೆ ಇನ್ಯಾವ ಶ್ರೀಮಂತರು ಬೇಕು ನಿನಗೆ? ಆಹ್ ಹೌದಲ್ಲಾ ಅನ್ನಿಸಿತು ಇವಳಿಗೂ.ಮತ್ತೆ ಕತೆ ಮುಂದುವರಿಯಿತು. ಅಜ್ಜಿ, ಮೊಮ್ಮಗಳು, ಕಾಡು, ಬಂಗಾರದ ಹೂವಿನ ಗಿಡ, ರಾಜಕುಮಾರ, ಮತ್ತು ಕೊನೆಗೆ ಅವರಿಬ್ಬರ ಮದುವೆಗೆ ರುಚಿಯಾದ ಗಂಜಿಯೂಟದೊಡನೆ ಕತೆ ಮುಗಿಯಿತು. ಇವಳಿಗೆ ಭಾರೀ ಸಮಾಧಾನ. ಇಷ್ಟು ದಿನಕ್ಕೆ ಒಂದು ಕತೇಲಿ ರಾಜಕುಮಾರ ಗಂಜಿ ತಿಂದ. ಆಮೇಲೆ ಟೀಚರ್ ಬೇರೆ ಶ್ರೀಮಂತರೂ ಗಂಜಿಯನ್ನ ಕೇಳಿ ಮಾಡಿಸಿಕೊಂಡು ತಿಂತಾರೆ ಅಂದ್ ಬಿಟ್ಟಿದಾರೆ. ಹೌದು ಗಂಜಿ ರುಚಿಯೇ ಆದ್ರೆ ಬಡವರು ಮಾತ್ರ ತಿನ್ನುತ್ತಾರೆ ಅನ್ನುವುದು ಅವಳ ಕೊರಗಾಗಿಬಿಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ಮನೆಯಲ್ಲಿ ವಾರಕ್ಕೆ ನಾಲ್ಕು ದಿನ ಗಂಜಿ. ಈಗ ಏನೋ ಸಮಾಧಾನವಾಯಿತು. ಕತೆ ಮುಗಿಯುವಷ್ಟರಲ್ಲಿ ಮಳೆ ನಿಂತು, ಹೂಬಿಸಿಲು ಮೋಡದ ಮರೆಯಲ್ಲಿ ತೂರಿ ತೂರಿ ಬರುತ್ತಿತ್ತು. ಮತ್ತೆ ಮರುದಿನ ಅಮ್ಮ ದೋಸೆ ಮಾಡಿದರೆ, ಇವಳು ಗಂಜಿ ಹಾಕಮ್ಮಾ ಅಂತ ಕೇಳಿದಳು ಅಂತ ಬೇರೆ ಹೇಳಬೇಕಿಲ್ಲ ಅಲ್ಲವಾ..! :)


ಇತ್ತೀಚೆಗೆ ಹುಶಾರಿಲ್ಲದಾಗ ಒಂದು ದಿನ ಗಂಜಿ ಮಾಡಿ, ಉಪ್ಪಿನಕಾಯಿ ರಸ, ಎಣ್ಣೆಯ ಜೊತೆಗೆ ಚಪ್ಪರಿಸಿ ತಿಂದು ಬಾಯಿ ಸರಿಮಾಡಿಕೊಂಡಾಗಿನಿಂದ ಅನಸೂಯಮ್ಮ ಟೀಚರೂ ಮತ್ತು ಅವರ ಗಂಜಿಯ ಕತೆ ಉಮ್ಮಳಿಸಿ ನೆನಪಾಗುತ್ತಿದೆ. ಅವತ್ತು ಅವರು ಆ ಕತೆಗೆ ಮತ್ತು ಅವಳ ಕುತೂಹಲಕ್ಕೆ ಒಂದು ಮುಗ್ಧ ತಿರುವನ್ನ ಕೊಡದೆ ಹೋಗಿದ್ದರೆ ಎಷ್ಟೊಳ್ಳೆ ಗಂಜಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೆ ನಾನು.
ಎಲ್ಲ ಊರಿನ ಎಲ್ಲ ಶಾಲೆಗಳಲ್ಲೂ ಅನಸೂಯಮ್ಮ ಟೀಚರಿನಂತವರು ಒಬ್ಬರಾದರೂ ಇರಲಿ, ಮಕ್ಕಳ ಮನಸ್ಸನ್ನ ಮೆತ್ತಗೆ ಹೂವರಳಿಸಿದಂತೆ ಕತೆ ಹೇಳಿ ತಿದ್ದಲಿ ಅಂತ ಆಶಿಸುತ್ತೇನೆ. ನನ್ನ ಬಾಲ್ಯದ ಕೊಂಕುಗಳನ್ನ ತಿದ್ದಿದ ಅನಸೂಯಮ್ಮ ಟೀಚರ್ ಮತ್ತು ಅವರಂತಹದೇ ಇನ್ನೂ ಹಲವಾರು ಟೀಚರುಗಳಿಗೆ ಒಂದು ಪ್ರೀತಿಯ ನಮಸ್ಕಾರ.