ನೀ ಬಂದ ದಾರಿಯಲಿ
ಕಲ್ಲುಮುಳ್ಳು ಸಹಿತ ಕೆಂಪು ಮಣ್ಣು
ಮುಂದಡಿಯಿಟ್ಟಲ್ಲಿ
ಹಸಿರೆಲೆಗಳ ನಡುವೆ ಪುಟ್ಟಗೆ ಹಳದಿಯಾಗಿ
ಅರಳಿದ ನೆಲದಾವರೆ,
ಎಡವಿದ ಬೆರಳಿನ ನೆತ್ತರಿನ ಕಿರುಹನಿ
ಕುಂಕುಮದಂತೆ ಹಳದಿಎಸಳ ಸೋಂಕಿ
ಅವಡುಗಚ್ಚಿದ ಮುದ್ದುಬಾಯಿಗಳ
ಕೊನೆಗೆ ಸುಕ್ಕು
ಮಿನುಗು ಕಣ್ಣಂಚಲ್ಲಿ ಹೊಳೆದ ಹನಿಯಲ್ಲಿ
ನೆತ್ತಿಯ ಮೇಲಿನ ಬಿಸಿಲ ಪ್ರತಿಫಲನ
ಕನಸುಗಳೆಲ್ಲ ಹಾದಿಗೂಡಿ ಹೊರಟ
ಪಯಣದಿ ಸಿದ್ದಿಸಿದ ಧನ್ಯತೆ ನೀನೇನಾ?!!
ಬಿರುಬಿಸಿಲ ಬಯಲಲ್ಲಿ ಬೀಸಿದ ತಂಪು
ತಣ್ಣೆಳಲ ನೆಲೆಯಲ್ಲಿ ಮಂಜಾಗುತ್ತ
ಅಸಹನೆಯೆಬ್ಬಿಸುವುದೇಕೋ?
ಬದಲಾವಣೆಯ ಬದುಕಿನ
ನಾಗರಿಕತೆಯ ತೊಟ್ಟಿಲಿನ
ಮಹಿಮೆ ಬಣ್ಣಿಸಲಸದಳ!
ಸಾಕ್ಸು ಸುತ್ತುವರಿದು
ಬಿಳುಪೇರಿದ ಪಾದಗಳ ಆವರಿಸಿದ
ಬ್ರಾಂಡೆಡ್ ಶೂಗಳಲ್ಲಿ
ಎಡವಿ ಬೆರಳೊಡೆಯುವ ಅವಕಾಶವಿಲ್ಲ!
ಹೆಚ್ಚೆಂದರೆ
ನುಣುಪು ಮಾರ್ಬಲಿನಲ್ಲಿ ಜಾರಿಬಿದ್ದು
ಸ್ಪ್ರೈನ್ ಆಗಿ ಒಂದೆರಡು ವಾರ
ಮನೆಯಿಂದ ಕೆಲಸ ಮಾಡಬಹುದು-
ನನ್ನ ಆಹ್ ನಿನಗೆ ಏನೂ ಅನ್ನಿಸದ ಹಾಗೆ.
ನೀ ಬಂದ ದಾರಿ ಅದೇ ಅಲ್ಲಿದೆ
ಗಾಜುಗೋಡೆಗಳಾಚೆ.
ಇಲ್ಲೆ ನಿಲ್ಲುವುದು ಅನುಕೂಲವೇನೋ ನಿಜ
ಆದರೂ..
ಹೋಗಲಿ ಬಿಡು..
ನನ್ನ ಕಂಗಾಲುಗಣ್ಣಿಗೆ ಬೆಳಕ ಹರಿಸಿದ
ಶುಕ್ರತಾರೆಯೇ
ಈಗೇಕೆ ಹೆದರಿಕೆ?
ಆ ಪುಟ್ಟ ಪಚ್ಚೆಮೊಳಕೆ
ಅಷ್ಟು ಚೆಂದಕೆ ಹೊಳೆದಿದ್ದು
ಏರುಹಾದಿಯ ಬೆಟ್ಟತುದಿಯ
ಬಿರುಕು ಕಲ್ಲಿನ ನಡುವೆ
ನಸುಕಿನ ಚಳಿಯ ಚದುರಿಸಿ
ತೂರಿದ ಹೊನ್ನಬೆಳಕಲ್ಲಿ ಅಲ್ಲವೆ!
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
2 comments:
ಬದಲಾವಣೆಯ ಬದುಕಿನ
ನಾಗರಿಕತೆಯ ತೊಟ್ಟಿಲಿನ
ಮಹಿಮೆ ಬಣ್ಣಿಸಲಸದಳ!
ಸುಂದರ ಸಾಲುಗಳು. ಅರ್ಥವತ್ತಾದ ಸಾಲುಗಳು......
ಚೆನ್ನಾಗಿದೆ.
ಸಿಂಧು,
ಕಾಲುದಾರಿಯಿಂದ ಗ್ಲಾಸ್ ದಾರಿಯವರೆಗಿನ ಪಯಣದಲ್ಲಿ ಆದ ಬದಲಾವಣೆಯನ್ನು ಸಮರ್ಥವಾಗಿ ಕವನಿಸಿದ್ದೀರಿ. ನಿಮ್ಮ ಕವನಗಳು ಯಾವಾಗಲೂ ಮೆಚ್ಚುವಂತಹವೇ ಆಗಿರುತ್ತವೆ.
Post a Comment