Thursday, January 25, 2007

ಕಾರಿರುಳಾಗಸದಿ ತಾರೆ ನೂರಿದ್ದೇನು....

ಕಾರಿರುಳಾಗಸದಿ ತಾರೆ ನೂರಿದ್ದೇನು,
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು,
ದೂರದಾ ದೈವವಂತಿರಲಿ, ಮಾನಸ ಸಖನ
ಕೋರುವುದು ಬಡಜೀವ - ಮಂಕುತಿಮ್ಮ...


ಬೆಂಗಳೂರಿನ ಬ್ರಹ್ಮಾಂಡದಲ್ಲಿ ಕಳೆದು ಹೋಗಿದ್ದಳು ಹುಡುಗಿ. ಕತ್ತಲೆಯೇ ಅರಿವಾಗದಂತಹ ಬೆಳಕಿನ ರಾತ್ರಿಯ ಊರದು.., ಅವಳಿಗೆ ಮಾತ್ರ ಹಗಲಲ್ಲೂ ದಿಕ್ಕು ತೋಚುತ್ತಿರಲಿಲ್ಲ.

ಊರಿನಲ್ಲೋ ಸುತ್ತೆಲ್ಲ ಸದ್ದಿರುವ ಜನಜೀವನದ ಮಧ್ಯೆಯೇ ಮಲೆನಾಡಿನ ಮುಗ್ಧ ಮೌನ, ಜೀವಕ್ಕೆ ತಂಪೆರೆಯುತ್ತಿತ್ತು. ಭರ್ರ್ ಎಂದು ಸಾಗುವ ಬಸ್ಸಿನ ಶಬ್ಧದ ನಡುನಡುವೆ, ಗುಬ್ಬಚ್ಚಿಯ ಮಾತು, ಕೋಗಿಲೆಯ ಹಾಡು, ಪಿಕಲಾರದ ಉಲಿಗಳು ಬದುಕು ಕನಸುಗಳ ನಡುವೆ ಸೇತುವೆಯಾಗುತ್ತಿದ್ದವು.

ಆದರಿಲ್ಲಿ ರಾಜಧಾನಿಯಲ್ಲಿ....

ಊರಿನ ತಂಪುವನದಲ್ಲಿ ಎಲ್ಲ ಹೂಗಳೊಂದಿಗೆ ನಲಿದಿದ್ದ ಗಂಟೆ ದಾಸವಾಳವೊಂದು, ಕೆ.ಆರ್.ಸರ್ಕಲ್ಲಿನ ಮಧ್ಯೆ ಟಾರ್ ರಸ್ತೆಯಲ್ಲಿ ಒಂಟಿಯಾಗಿ ನಿಂತ ಅನುಭವ... ಬಸ್ಸ್ ಹತ್ತಿದರೆ ಮುಗಿದೇಹೋಯಿತು ಕಥೆ.. :( ಜಗದ ಶೂನ್ಯತೆಗಳೆಲ್ಲ ತರಾವರಿ ಡ್ರೆಸ್ ಮಾಡಿ, ಗಿಡದಲ್ಲಿದ್ದ ಹೂವೆಲ್ಲ ಕೊಯ್ದು ತಲೆಗೇರಿಸಿ, ಇದ್ದ ಬದ್ದ ಬಂಗಾರಕ್ಕೆಲ್ಲ ಗಿಲೀಟು ಮಾಡಿ, ಜಾಗಸಿಕ್ಕಲ್ಲೆಲ್ಲ ಪೇರಿಸಿಕೊಂಡು ಆ ರಷ್ಷಲ್ಲಿ ಒಬ್ಬರನ್ನೊಬ್ಬರು ತಿವಿದುಕೊಂಡು ಸವಾರಿ ಮಾಡಿದರೆ ಹೇಗಿರುತ್ತದೋ ಹಾಗಿರುತ್ತಿತ್ತು ಮಹಿಳೆಯರ ಸೆಕ್ಶನ್, ನಮ್ಮ ದಾಸವಾಳಕ್ಕೆ ಉಸಿರಾಡಲೂ ಭಯ, ಯಾರ ಪರ್ಫ್ಯೂಮ್ ಮೂಗೊಳಗೆ ಹೋಗಿ ತಲೆ ತಿರುಗುತ್ತೋ, ಯಾರ ಟಾಲ್ಕಂ ವಾಸನೆಗೆ ಆಕ್ಷೀ ಬರುತ್ತೋ ಎಂಬ ಆತಂಕ..ಅಲ್ಲಿ ಊರಲ್ಲಿ ಹಳತಾದ ಹಳಿಯ ಮೇಲೆ ದಿನ ನಿತ್ಯ ಹೊಸ ಪಯಣ..ದಾರಿ ಸಾಗಲು ಹೊಸ ಉತ್ಸುಕತೆ, ನಾಳಿನ ನಿರೀಕ್ಷೆ, ಕೆರೆ ದಂಡೆಯ ಕೂಡ ಸಾಗುವಾಗ ಕಣ್ಣ ಕೊಳದ ತುಂಬ ಅರಳಿ ನಿಲ್ಲುವ ತಾವರೆ ಕನಸುಗಳು......ಇಲ್ಲಿ ದಿನವೂ ಹೊಸದಾಗೇ ಕಾಣುವ ಡಾಂಬರು ರಸ್ತೆಯಲ್ಲಿ, ಅದೇ ಹಳೆ ಜಾಡು.. ದಾರಿಗಿಳಿಯಲೇ ಭಯ,ಪಕ್ಕದವರ ರಭಸಕ್ಕೆ ಬೀಳದಂತೆ ಆತಂಕದಿಂದ ಎಚ್ಚರಿಕೆಯಾಗಿ ಸಾಗುವ ಪಯಣ, ದಿನ ಮುಗಿದರೆ ಸಾಕಪ್ಪಾ ಎಂಬಂತಹ ಹಳಹಳಿಕೆ, ಚಣ ಮೈ ಮರೆತರೆ ಇದ್ದಲ್ಲೆ ಕಲ್ಲಾಗುವ ದಿಗಿಲು...

ಹಾಗೂ ಹೀಗೂ ದಾಸವಾಳವು ಮನೆ-ಬಸ್ಸು-ಕಾಲೇಜುಗಳ ಗಿರಗಿಟ್ಲೆಯಲ್ಲಿ ಉಸಿರು ಹಿಡಿದು ಕೊಂಡು, ರಜೆ ಬಂದ ಕೂಡಲೆ ಊರಿಗೆ ಓಡಿ ಹೋಗಿ ಒಡನಾಡಿ ಗಿಡಗಳ ಮಧ್ಯೆ ವಿರಮಿಸಿ, ಮತ್ತೊಂದು ತಿಂಗಳೊಪ್ಪತ್ತಿಗೆ ಆಗುವಷ್ಟು ಜೀವಜಲ ಉಂಡು ಗಿರಗಿಟ್ಲೆ ಬದುಕಿಗೆ ವಾಪಸಾಗುತ್ತಿತ್ತು...

ಇಂತಹ ಗಿರಗಿಟ್ಲೆ ಬದುಕಿಗೆ, ತಂಪೆರೆದು, ಗಾಳಿಬೀಸಿದ್ದು ಬೆಂಗಳೂರಿನ ಹೂಗಿಡಗಳೇ... ಒಬ್ಬಳು ಸಂಪಿಗೆ, ಇನ್ನೊಬ್ಬಳು ಮೈಸೂರ ಮಲ್ಲಿಗೆ,ಮತ್ತೊಬ್ಬಳು ಜಾಜಿ... ಇಲ್ಲ, ಇದು ಯಾರಿಗೂ ಇಷ್ಟವಾಗಬಹುದಾದ ಚಂದದ ಹೂಗಳ ಲಿಸ್ಟ್ ಅಲ್ಲ, ನಿಜವಾಗ್ಲು ಅವರು ಹಾಗೇ ಇದ್ದರು..ಬೆಳದಿಂಗಳಾಗಿ,ನಗೆಯ ಹೊನಲಾಗಿ, ಹಳೆಯ ಹಾಡುಗಳ ಮಧುರ ಉಲಿಯಾಗಿ ಒಲಿದು ಬಂದರು..

ಅವತ್ತೊಂದು ತಿಂಗಳ ಕೊನೆ, ಕಾಲೇಜಿಗೆ ರಜೆಯೇನಿರಲಿಲ್ಲ,ಬಾಡಿಕೊಂಡು ಕೂತಿದ್ದ ದಾಸವಾಳಕ್ಕೆ, ಶನಿವಾರ ಹೇಗೂ ಬರೀ ಡ್ರಾಯಿಂಗ್ ಕ್ಲಾಸು, ಸೋಮವಾರ ಕಾರ್ಪೆಂಟರಿ ಲ್ಯಾಬು, ಎರಡೂ ಬಂಕ್ ಮಾಡಿ 3 ದಿನ ಊರಲ್ಲಿಇದ್ದು ಮಲೆನಾಡ ಸೊಂಪು ಸವಿದು ಬಾ, ಮಿಸ್ಸಾಗಿದ್ದ ನೋಟ್ಸ್ ಎಲ್ಲ ಒಟ್ಟಿಗೆ ಬರೆಯೋಣ ಅಂತ ಬಹಳ ಇಷ್ಟವಾಗುವ ಸಲಹೆ ಕೊಟ್ಟರು. ದಾಸವಾಳ ತಡಮಾಡದೆ ಶುಕ್ರವಾರ ಮಧ್ಯಾಹ್ನವೇ ಊರಿನ ಬಸ್ಸೇರಿದಳು.. ಸೋಮವಾರ ಮಧ್ಯಾಹ್ನ ಅಮ್ಮನ ಜೊತೆಗೆ ಬಸಳೆ ಕುಡಿ ಬಿಡಿಸುತ್ತಿದ್ದಾಗ, ಪೋಸ್ಟ್ ಮ್ಯಾನ್ ಬೆಲ್ ಕೇಳಿಸಿತು. ಹೋಗಿ ನೋಡಿದರೆ 3 ಪತ್ರ, ಅಷ್ಟೂ ದಾಸವಾಳಕ್ಕೆ! ಆಶ್ಚರ್ಯದಿಂದ ಬಿಡಿಸಿ ನೋಡಿದರೆ ಸಂಪಿಗೆ,ಮಲ್ಲಿಗೆ,ಜಾಜಿಯರ ಒಲವಿನೋಲೆ..ಬಿಸಾಕಿ ಓಡಿ ಬಂದ ಬೆಂಗಳೂರು, ಹೂವಿನಂತ ಅಕ್ಷರಗಳಲ್ಲಿ ಕಾಳಿದಾಸನ ಉಜ್ಜಯಿನಿಗೂ ಮಿಗಿಲಾಗಿ ಅರಳಿ ನಿಂತಿತ್ತು. ಉಂಹು ಬೆಂಗಳೂರು ರಾತ್ರೋ ರಾತ್ರಿ ಬದಲಾಗಿರಲಿಲ್ಲ. ಅವರು ದಾಸವಾಳದ ನೋಟಕ್ಕೊಂದು ಹೊಸ ಆಯಾಮ,ಪರಿಭಾಷೆ ಕೊಟ್ಟಿದ್ದರು. ದಾಸವಾಳದ ಸಂಭ್ರಮದಲ್ಲಿ, ಅಮ್ಮ,ಅಪ್ಪ,ತಮ್ಮ,ಅಜ್ಜ,ಅಮ್ಮಮ್ಮ,ಚಿಕ್ಕಿ,ಮಾವ ಎಲ್ಲ ಸೇರಿಕೊಂಡರು.. ಬೆಂಗಳೂರಿನ ಚೆಲುವು,ಮಲೆನಾಡಿನ ಹೂವಿನೊಡನೆ ಅನುಸಂಧಾನ ಮಾಡಿಕೊಂಡಿತು.. ಬದುಕಿನ ನೋವಿನ ಪದರಗಳಲ್ಲಿ ಹೂಗಳು ಅರಳಿ ಸಹಜೀವನದ ಸಖೀಗೀತದ ಇಂಪು ಅಲೆಯೆದ್ದವು...

ಇವತ್ತು ಬೇಗ ಹೊರಟು ನಡೆದು ಹೋಗಿಬಿಡೋಣ, ಬಸ್ಸಿನ ಗೊಡವೆಯೇ ಬೇಡ ಅಂದುಕೊಳ್ಳುತ್ತಿದ್ದವಳು, ಗೆಳತಿಯರು ಬರುವ ಬಸ್ಸಿಗೆ ಕಾಯತೊಡಗಿದಳು. ಅವರ ಜೊತೆಗೆ ಬಸ್ ಪ್ರಯಾಣವೆಂದರೆ ಕನಸು -ನನಸುಗಳ ಸೇತುವೆಯುದ್ದಕ್ಕೆ ಜೋಕಾಲಿಯಾಡಿದಂತಿರುತ್ತಿತ್ತು.. ಕಾಲೇಜು ಸಹ್ಯವಾಯಿತು, ಭಯಹುಟ್ಟಿಸುತ್ತಿದ್ದ ಲೆಕ್ಚರರ್ ಗಳೆಲ್ಲಾ ತಮಾಷಿಯ ವಿಷಯವಾಗಿಬಿಟ್ಟರು... ದೈನಂದಿನ ರಗಳೆಗಳು, ಜಂಜಾಟಗಳು,ಕಸರತ್ತುಗಳೆಲ್ಲ ಅಣಕವಾಡುಗಳ ಸಾಹಿತ್ಯವಾಗಿ, ಅವೇ ಗಿರಗಿಟ್ಲೆಯಾಗಿಬಿಟ್ಟವು.. :)
  • ಸಂಪಿಗೆ- ಹೆಸರಿಗೆ ತಕ್ಕಂತೆ ಗಾಡ ಪರಿಮಳದ ಅನುಭವ, ಚುರುಕು ನಗೆ,ಸುಟಿಯಾದ ಹಾಸ್ಯ,ಬೊಗಸೆ ತುಂಬ ಅಕ್ಕರೆ... ತುಟಿಯ ಮೇಲೇ ತುಂಟ ಕಿರುನಗೆ..ಕೆನ್ನೆ ತುಂಬಾ ಕೆಂಡಸಂಪಿಗೆ...
  • ಮಲ್ಲಿಗೆ - ಬೇಲಿಸಾಲಲ್ಲಿ ಘಮ್ಮೆನ್ನುವ ದುಂಡುಮಲ್ಲಿಗೆಯ ಮೊಗ್ಗಿನ ಸೊಂಪು ಮೈವೆತ್ತಂತೆ ಇದ್ದಳು. ಸಂಪಿಗೆಯ ಹಾಸ್ಯಕ್ಕೆ ಪ್ರತಿಹಾಸ್ಯ, ಮಾತಿಗೊಂದು ಹಾಡು, ನಡವಳಿಕೆಯಲ್ಲಿ ವೀಣೆಯ ಬನಿ... ನೀರೊಳಗೆ ವೀಣೆ ಮಿಡಿದಂತೆ ಆಡುವ ಮಾತು, ಹೂವಿಗೇ ಜೀವ ಬಂದಂತೆ....
  • ಜಾಜಿ - ಸಂಪಿಗೆಯ ಹಾಸ್ಯಕ್ಕೆ ಬಿದ್ದು ಬಿದ್ದು ನಗುವ,ಮಲ್ಲಿಗೆಯ ಹಾಡಿಗೆ ಗುನುಗುತ್ತ ಜೊತೆಗೂಡುವ,ಕೈ ಕೈ ಹಿಡಿದು ದಾರಿ ಸಾಗುವ ಜಾಜಿ, ಅವರೆಲ್ಲ ಕ್ರಿಯೆ ಪ್ರಕ್ರಿಯೆಗಳಲ್ಲಿ ಕೈಗೂಡಿಸಿಯೂ ಸುಪ್ತವಾಗಿ ಅಭಿವ್ಯಕ್ತಗೊಂಡ ಸೂಕ್ಷ್ಮ ಆದರೆ ಮಧುರ ಪರಿಮಳ.... ನಿಲ್ಲಿಸದಿರು ವನಮಾಲೀ ಮಧುರ ಗಾನವ...

    ಸಿಂಪರ್ಣಿಮಾ.. (ಹೂಮಾಲೆಯ ಹೆಸರು)
ದಾಸವಾಳವು, ಈ ಹೂಮಾಲೆಯಲ್ಲಿ ಸೇರಿ, ಕಳೆದು ಹೋಗಿದ್ದ ಜೀವಸೆಲೆಯನ್ನ ಮರಳಿ ಪಡೆಯಿತು. ಅಷ್ಟೇಕೆ, ರಾಜಧಾನಿಯ ಹಿರಿಯ ಹಮ್ಮಿಗೆ ಸೆಡ್ಡು ಹೊಡೆದು, ಬದುಕನ್ನು ತನ್ನದೆ ಆದ ಸೂಕ್ಷ್ಮತೆಗಳಲ್ಲಿ ಸವಿಯಲು, ನವೆಯಲು, ಅರಳಿಸಲು, ತಲೆತಗ್ಗಿಸಿ ನಿಲ್ಲಲು, ಮತ್ತೆ ತಲೆಯೆತ್ತಲು ಕಲಿಯಿತು.. ಇನ್ನೂ ಕಲಿಯುತ್ತಲೆ ಇದೆ..
ಸಂಪಿಗೆ, ಮಲ್ಲಿಗೆ, ಜಾಜಿ ಉಣಿಸಿದ ಕಂಪು, ಜೀವದಾಳದಲ್ಲಿ ನೆಲೆನಿಂತು, ಉರಿಬಿಸಿಲ ಕ್ಷಣಗಳಲ್ಲಿ ನೆರಳಾಗಿ, ತಂಪಾಗಿ, ಇಂಪು ಉಲಿಗಳಾಗಿ ಬದುಕನ್ನು ಸಮೃದ್ಧಗೊಳಿಸುತ್ತಿದೆ; ಕತ್ತಲ ದಾರಿಯಲ್ಲಿ ಆರದ ಹಣತೆಗಳಾಗಿ ಜೊತೆಗೂಡಿವೆ.