Friday, October 12, 2007

ಕೆಂಪಿಕಣ್ಣು...

ದೀಪದ ಕುಡಿಗಳಂತ ಕಣ್ಣಂಚಲ್ಲಿ ಈಗಲೋ ಆಗಲೋ ಬೀಳುವಂತೆ ತುಂಬಿ ನಿಂತ ಹನಿ, ಮುದ್ದಾದ ಉದ್ದ ಮೂಗಿನ ತುದಿ ಕೆಂಪಗೆ ಕುಂಕುಮ ಸವರಿದಂತೆ, ಯಾವಾಗಲೂ ಕತೆ ಕಟ್ಟುವ ತುಂಟ ಬಾಯಿ, ತುಟಿ ಬಿಗಿದು ಸಿಡುಕಿಕೊಂಡು.. ಅಮ್ಮನಿಗೆ ನಗು ಬಂತು. ಆದರೆ ನಗುವಂತಿಲ್ಲ. ತುಟಿಗಳನ್ನ ಉಮ್ ಅಂತ ಬಿಗಿಹಿಡಿದು, ಕೆನ್ನೆಯನ್ನ ಕಷ್ಟಪಟ್ಟು ಒಳಗೆಳೆದುಕೊಂಡು ನಿಲ್ಲಿಸಿ, ಕಣ್ಣನ್ನ ಆದಷ್ಟೂ ಅಗಲ ಮಾಡಿಕೊಂಡು ಮಗಳನ್ನ ಸೀರಿಯಸ್ ಆಗಿ ನೋಡಿದಳು. ಮಗಳಿಗೋ ತುಂಬ ವಿಶ್ವಾಸ ಕಣ್ಣಂಚಿನಲ್ಲಿ ನಿಂತಿರುವ ಹನಿ ಕೆಳಗೆ ಉರುಳುತ್ತಿದ್ದಂತೆಯೇ ಅಮ್ಮನ ಮುಖ ಸಡಿಲವಾಗುತ್ತದೆ, ದನಿ ನವಿರಾಗುತ್ತದೆ, ಕೈ ತನ್ನನ್ನ ಬಳಸುತ್ತದೆ ಮತ್ತು ತಾನೂ ಇಷ್ಟೊತ್ತೂ ಹಟ ಮಾಡುತ್ತಿರುವ ಬಿಸ್ಕೇಟನ್ನ ಅಮ್ಮ ಅಲ್ಲಿ ನಾಗಂದಿಗೆಯ ಮೇಲಿಟ್ಟ ಸಿಲ್ವರ್ ಡಬ್ಬಿಯಿಂದ ತೆಗೆದು ಕೊಟ್ಟೆ ಕೊಡುತ್ತಾಳೆ.. ಹನಿ ಉದುರಿಸಲೋ ಬೇಡವೋ.. ಅಮ್ಮನ ಮುಖ ನೋಡಿದಳು.

ಉಂಹುಂ ಬಿಗಿದುಕೊಂಡೆ ಇದೆ.. ಓ ಇನ್ನೇನು ನಗುತ್ತಾಳೆ ಬಾಯಿ ತೆರೆಯಿತು..
ಅಮ್ಮನ ಬಾಯಿಂದ ಆ ಭಯಾನಕ ಶಬ್ಧ ಬಂದುಬಿಟ್ಟಿತು.. "ಕೆಂಪಿಕಣ್ಣು ಗೊತ್ತಲ್ದಾ.. ಹಟ ಮಾಡ ಮಕ್ಕಳಿಗೆ ಎಂತ ಮಾಡ್ತು ಅಂತ ಮರ್ತೋತಾ ಪುಟ್ಟೀ?...

ಕಣ್ಣಂಚಿನ ಹನಿ ಅಲ್ಲೆ ನಿಂತುಬಿಟ್ಟಿತು. ಭಯದಿಂದ ಕಣ್ಣು ಅಗಲವಾದರೂ ಪುಟ್ಟಿಗೆ ಸುಮ್ಮನಿರಲಾಗಲಿಲ್ಲ.. ಆ ಬಾಯಿ ಕೇಳಿಯೂ ಕೇಳಿಸದ ಹಾಗೆ "ಎಂತಾ ಮಾಡ್ತು" ಕೇಳೇ ಬಿಟ್ಟಿತು.

ಈಗ ಅಮ್ಮನ ಮುಖ ಸಡಿಲಾಯಿತು. ಬಗ್ಗಿ ಪುಟ್ಟಿಯನ್ನ ಎತ್ತಿ ಸೊಂಟಕ್ಕೆ ಹಾಕಿಕೊಂಡು ಮೆತ್ತಿನ ಮೆಟ್ಟಿಲ ಕೆಳಗಿದ್ದ ದೊಡ್ಡ ಕಿಟಕಿಯ ತಳಿಯಲ್ಲಿ ಕೂತಳು ಅಮ್ಮ. ಹೊರಗೆ ಕಿಟಕಿಯಿಂದಾಚೆಗೆ ಬಯಲ ಕೊನೆಗೆ ದಕ್ಷಿಣ ರೈಲ್ವೆಯ ಕೊನೆಯ ಸ್ಟೇಷನ್ನಿನ ಮರದ ಬೇಲಿಗಳು, ಹಸಿರಗಿಡಗಳ ಜೊತೆಗೆ ಮಾತುಕತೆ ನಡೆಸಿದ್ದವು. ಬೇಲಿ ಪಕ್ಕದ ಹಾದಿಯಲ್ಲಿ ಪ್ಲೈವುಡ್ ಫ್ಯಾಕ್ಟರಿಯ ಮೊದಲ ಶಿಫ್ಟು ಮುಗಿಸಿ ಹೋಗುತ್ತಿರುವ ಹಳ್ಳಿಯವರು... ಎಂತಾಗ್ತು ಅಂದ್ರೇ...

ಒಂದೂರಲ್ಲಿ ಒಂದು ಪುಟ್ಟ ಮನೆ, ನಮ್ಮನೇ ತರದ್ದೇ, ಬೀದಿಗೇ ಹೊಂದಿಕೊಂಡು ಅಂಗಡಿ, ದಾಟಿದ ಕೂಡಲೆ, ಜಗಲಿ, ಆಮೇಲೆ ನಡೂಗಿನ ಕೋಣೆ,ಮೆತ್ತಿ ಮೆಟ್ಲು, ಆದ್ ಕೂಡ್ಲೆ ಅಡಿಗೆ ಮನೆ, ಅಲ್ಲೇ ದೇವರ ಗೂಡು, ಆಮೇಲೆ ಪುಟ್ಟ ಅಂಗಳ, ಅಂಗಳದ ಕೊನೆಗೆ ಬಚ್ಚಲು ಮನೆ, ಅದರಾಚೆಗೆ ಕೊಟ್ಟಿಗೆ.. ದಾಟಿಕೊಂಡು ಹೋದ್ರೆ ಬಾವಿಯ ಬಯಲು..

ಗೊಬ್ರಗುಂಡಿ ಅಂಚಿನ ತೊಂಡೆಬಳ್ಳೀನೂ ಇತ್ತನೂ ಅಮಾ?
ಹೂಂ ಯಾವಾಗಲೂ ಹೂಮಿಡಿ ಬಿಡ್ತಿದ್ದ ತೊಂಡೆಬಳ್ಳಿ..
ಆಮೇಲೆ..

ಆಮೇಲೆಂತು, ಆ ಮನೇಲಿ, ಅಜ್ಜ, ಅಮ್ಮಮ್ಮ, ಅಪ್ಪ, ಅಮ್ಮ, ಮತ್ತೆ ಪುಟ್ಟಿ ಇದ್ದಿದ್ರು. ಅಷ್ಟಮಿ ಹಬ್ಬಕ್ಕೆ ಅಂತ ಅಜ್ಜ ಅಮ್ಮಮ್ಮ ಹಾರೆಗೊಪ್ಪಕ್ಕೆ ಹೋಗಿದ್ದರು. ಅವತ್ ರಾತ್ರೆ ಅಮ್ಮ ಊಟಕ್ಕೆ ರೊಟ್ಟಿ ಮಾಡಿದ್ದಳು. ಅಪ್ಪ ಅಂಗಡಿ ಬಾಗಿಲು ಹಾಕಿ - ಹಾಂ ಅದೇ ಹಲಗೆ ಹಲಗೆ ಬಾಗಿಲಿಂದೇ ಅಂಗಡಿ ಅವರದ್ದೂ- ಊಟಕ್ಕೆ ಬಂದು ಕುಳಿತರೆ, ಪುಟ್ಟಿನೂ ಜೊತೆಗೆ. ಅಮ್ಮ ಅಪ್ಪಂಗೆ ಮೂರು ರೊಟ್ಟಿ ಹಾಕಿದಳು, ತನಗೆ ಅಂತ ಎರಡು ರೊಟ್ಟಿ, ಪುಟ್ಟಿಗೆ ಒಂದು ರೊಟ್ಟಿ. ತಟ್ಟೆ ನೋಡಿದವಳೇ ಪುಟ್ಟಿಯ ಗಲಾಟೆ ಶುರುವಾಯಿತು. ನಂಗೆ ಇನ್ನೂ ಒಂದು ರೊಟ್ಟಿ ಬೇಕೂ..ಊಂ... ಅಮ್ಮ ನಯವಾಗಿ ಹೇಳಿದಳು, ಇಲ್ಲ ಪುಟ್ಟೂ ಮಕ್ಕಳಿಗೆ ಒಂದೇ ರೊಟ್ಟಿ, ರಾತ್ರೆ ಹೊತ್ತು ಜಾಶ್ತಿ ತಿಂದರೆ ಹೊಟ್ಟೆನೋವು ಬಂದು.. ಉಂಹೂಂ ಪುಟ್ಟಿ ಕೇಳೋದಿಲ್ಲ. ರಾಗ ದೊಡ್ಡದು ಮಾಡಿ, ತಟ್ಟೆ ದೂಡಿ ನೆಲಕ್ಕೆ ಕಾಲು ಬಡಿದು ಅಳತೊಡಗಿದಳೂ.. ನಂಗೆ ಒಂದ್ ರೊಟ್ಟಿ ಬ್ಯಾಡಾ ಹುಂ ಹೂಂ.. ಎರ್‍ಡೇ ಬೇಕು.. ಅಪ್ಪಂಗಾದ್ರೆ ಮೂರ್ ಹಾಕಿದ್ದೆ, ನಿಂಗೆ ಎರಡು, ನಂಗ್ಯಾಕೆ ಒಂದೇ... ಊಂ...ಪುಟ್ಟೂ ಮಕ್ಕಳು ಹಂಗೆಲ್ಲಾ ಹಟ ಮಾಡಾಲಾಗ, ಜಾಣೆ ಅಲ್ದಾ ನೀನು, ನಾಳೆನೂ ಮತ್ತೆ ರೊಟ್ಟೀನೇ ಮಾಡ್ತಿ, ಅವಾಗ ಮತ್ತೆ ತಿನ್ನು.. ಊಂಹೂಂ.. ನಂಗೆ ಎರಡು ಇಲ್ಲಾ ಮೂರು ರೊಟ್ಟಿ ಇವತ್ತೇ ಬೇಕೂ,, ಈಗ್ಲೇ.. ಈಗ ಅವಳು ನೆಲಕ್ಕೆ ಬಿದ್ದು ಹೊರಳಾಡಿ ಅಳತೊಡಗಿದಳು. ಅಪ್ಪ ಇನ್ನೂ ತಟ್ಟೆಗೆ ಕೈಇಟ್ಟಿರಲಿಲ್ಲ. ಗಂಭೀರವಾಗಿ ಹೇಳಿದರು. ಪುಟ್ಟೂ ಹಿಂಗೇ ಹಟಾ ಮಾಡಿದ್ರೆ ಹೊರಗಡೆ ಹಾಕಿ ಬಾಗಿಲು ಹಾಕ್ ಬಿಡ್ತಿ ನೋಡು. ಆಮೇಲೆ ನಾವೆಲ್ಲಾ ಮಲ್ಗಿದ ಮೇಲೆ ಕೆಂಪಿಕಣ್ಣು ಬಂದು... ಪುಟ್ಟಿಗೆ ಯಾರ ಮಾತೂ ಆಗುತ್ತಿಲ್ಲ. ಈಗ ಅಳುತ್ತ ಅಳುತ್ತ ಗಲಾಟೆ ಶುರು ಮಾಡಿಬಿಟ್ಟಳು. ಕೆಂಪಿಕಣ್ಣೂ ಇಲ್ಲೆ ಎಂತೂ ಇಲ್ಲೆ. ಹೊರಗಾಕಿದ್ರೂ ಅಡ್ಡಿಲ್ಲೆ ನಂಗೆ ಒಂದ್ ರೊಟ್ಟಿ ಬೇಡಾ, ಎರಡೇ ಬೇಕು.. ಅವರಿಬ್ಬರು ಸಮಾಧಾನ ಮಾಡಿ, ಬಯ್ದು ಸಿಟ್ಟು ಮಾಡಿ ಏನು ಮಾಡಿದರೂ ಪುಟ್ಟಿ ಬಿದ್ದುಕೊಂಡಲ್ಲಿಂದ ಏಳುತ್ತಲೇ ಇಲ್ಲ. ಅವಳಮ್ಮ ಕೊನೆಗೆ ಹೋಗಲಿ ಇನ್ನೊಂದರ್ಧ ರೊಟ್ಟಿ ಹಾಕ್ತಿ ಆಮೇಲೆ ರಾತ್ರೆ ಹೊಟ್ಟೆನೋವೂಂತ ಅತ್ರೆ ನಾನೇನು ಕೇಳದಿಲ್ಲೆ ಅಂತ ಹೇಳಿ ಅವಳ ತಟ್ಟೆಗೆ ಇನ್ನರ್ಧ ರೊಟ್ಟಿ ಹಾಕಿದರು. ಆದ್ರೂ ಪುಟ್ಟಿಯ ಹಟ ನಿಲ್ಲಲಿಲ್ಲ. ಅಳ್ತಾನೇ ಇದ್ದಾಳೆ. ಈಗ ಅಪ್ಪಂಗೆ ನಿಜವಾಗಲೂ ತುಂಬ ಸಿಟ್ಟು ಬಂದ್ ಬಿಡ್ತು.

ಎದ್ದು ಮಲಗಿ ಹೊರಳಾಡುತ್ತಿದ್ದ ಪುಟ್ಟಿಯನ್ನು ಎತ್ತಿಕೊಂಡು ಹೊರಗೆ ಹೋಗಿ ಬಾಗಿಲು ತೆಗೆದು ಹೊರಗೆ ಹಾಕಿ ಒಳಗಿನಿಂದ ಚಿಲುಕ ಹಾಕಲು ಹೊರಟವರು ಮತ್ತೆ ಕೇಳಿದರು.. ಪುಟ್ಟೂ ಈಗಲಾದರೂ ಹಟ ನಿಲ್ಲಿಸ್ತೀಯ ಅಥವಾ ಹೊರಗೇ ಇರ್ತೀಯ? ಪುಟ್ಟಿಗೆ ಈಗ ಇನ್ನೂ ಸಿಟ್ಟು ಬಂತು, ನಾನೇನು ಒಳಗೆ ಬರೋಲ್ಲ. ನಂಗೆ ಮೂರು ರೊಟ್ಟಿ ಕೊಡೋ ಹಾಗಿದ್ರೆ ಮಾತ್ರ ಒಳಗೆ ಬರೋದು... ಅಂತ ಅಲ್ಲೆ ಮುಂದಿನ ಕಟ್ಟೆಯಲ್ಲಿ ಕೂತು ಮತ್ತೆ ಅಳತೊಡಗಿದಳು. ಸರಿ ಹಾಗಾದ್ರೆ ಅಂತ ಅಪ್ಪ ಬಾಗಿಲು ಹಾಕಿಕೊಂಡು ಒಳಗೆ ಹೋದರು.

ಅಮ್ಮಾ ಅವಳು ಒಬ್ಳೇ ಅಲ್ಲೆ ಕತ್ತಲಲ್ಲಿ ಇದ್ಲಾ ನಮ್ಮ ಪುಟ್ಟಿಯ ಭಯದ ಪ್ರಶ್ನೆ.
ಅಮ್ಮ ಪುಟ್ಟಿಯನ್ನ ಇನ್ನೂ ಹತ್ತಿರ ಎಳೆದುಕೊಂದು ಹೇಳುತ್ತಾಳೆ. ಇಲ್ಲೆ ಮಗಾ ಆವಾಗಿನ್ನೂ ರಸ್ತೆ ಲೈಟೆಲ್ಲ ಹಂಗೇ ಇತ್ತು. ಅಷ್ಟೆಲ್ಲ ಕತ್ತಲೆ ಇರಲಿಲ್ಲ. ಆ ಪುಟ್ಟಿಗೆ ನಿಜವಾಗ್ಲೂ ತುಂಬ ಹೆದರಿಕೆ ಏನೂ ಆಗಲಿಲ್ಲ ಮತ್ತೆ ಸಿಟ್ಟು ಹಟ ಬೇರೆ ಇತ್ತಲ್ಲಾ ಹೆದರಿಕೆ ಇನ್ನೂ ಶುರುವಾಗಿರಲಿಲ್ಲ.
ಆಮೇಲೇನಾತಮ್ಮಾ?
ಹುಂ ಇನ್ನೇನು..

ಆ ಅಪ್ಪ ಅಮ್ಮ ಇಬ್ರೂ ಊಟ ಮಾಡಿದರು. ಅಮ್ಮ ಗೋಮೆ ಹಚ್ಚಿ, ಅಡಿಗೆ ಮನೆಯ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ನೆಲ ಒರೆಸಿ, ಬಚ್ಚಲು ಒಲೆಗೆ ಬೆಳಗಿನ ಬೆಂಕಿಗೇಂತ ಕಟ್ಟಿಗೆ ಪುರುಳೆ ಎಲ್ಲ ತುಂಬಿ ಕೊನೆಕೊನೆಯ ಕೆಲಸ ಮಾಡುತ್ತಿದ್ದಳು. ಅಪ್ಪ ನೀಟಾಗಿ ಹಾಸಿಗೆ ಹಾಸಿ, ಅವತ್ತಿನ ಲೆಕ್ಕ ಎಲ್ಲ ಬರೆದು ಮುಗಿಸುವಾಗ ಅಮ್ಮ ಎಲ್ಲ ಕೆಲಸ ಮುಗಿಸಿ ಬಂದಳು.

ಪುಟ್ಟಿ ಏನಾದ್ಲಮ್ಮಾ? ನಮ್ಮ ಪುಟ್ಟಿಗೆ ಹೆದರಿಕೆ ಕುತೂಹಲ ಎರಡೂ ತಡೆಯಲಾಗುತ್ತಿಲ್ಲ.

ತಡಿ ಹೇಳ್ತೀನಿ. - ಅವಳು ಅಲ್ಲಿ ಹೊರಗೆ ಕೂತಿದ್ಲಲ್ಲ ಸೊಲ್ಪ ಹೊತ್ತಿಗೆ ಅವಳಿಗೆ ದೂರದಲ್ಲಿ ಪೋಲಿಸ್ ಸ್ಟೇಷನ್ ತಿರುವಿನ ಹತ್ತಿರ ಎರಡು ಕೆಂಪು ಕಣ್ಣುಗಳು ಹೊಳೆಯುತ್ತ ಕಾಣಿಸಿತು. ಜೋಗದ ಕಡೆಯಿಂದ ಬರುತ್ತಿರುವ ಸ್ಕೂಟರ್ ಇರಬಹುದು ಅಂದ್ಕೊಂದಳು. ಆದರೂ ಸ್ವಲ್ಪ ಹೆದರಿಕೆ ಶುರುವಾಗಿತ್ತು. ಈಗ ಅಳು ನಿಂತು ಬಿಟ್ಟಿತು.

ಅದು ಕೆಂಪಿಕಣ್ಣೇ ಅಲ್ದಾ ಅಮಾ, ನಂಗೊತ್ತಿದ್ದು.. ನಮ್ ಪುಟ್ಟಿಯ ನಡುಗುವ ಧ್ವನಿ..
ಅಮ್ಮ ಕತೆಯ ಜೋಷಲ್ಲಿ ತೇಲುತ್ತಿದ್ದವಳು ಪುಟ್ಟಿಯ ಮುಖ ನೋಡುತ್ತ ಹೇಳಿದಳು. ಹೌದು ತಡೀ ಪೂರ್ತಿ ಹೇಳಕ್ಕೆ ಬಿಡದಿಲ್ಯಲ ನೀನು, ಇಷ್ಟೇ ಸಾಕಾ ಕತೆ ಇನ್ನೂ ಮುಂದೆ ಹೇಳ್ಲಾ...
ಓ, ನಂಗೆ ಈ ಸಲಾನೂ ಅದು ಕೆಂಪಿಕಣ್ಣಾ ಅಂತ ಗೊತ್ತಿಲ್ಯಲ.. ಏನು ಬರ್ತು ಬಂದ್ ಮೇಲೆ ಏನು ಮಾಡ್ತು ಅಂತ ನೋಡನ.. ಹೇಳಮ್ಮಾ...
ಸರಿ ಹಂಗಂದ್ರೆ ಕೇಳು..

ಹೊಳೀತಾ ಇರೋ ಕಣ್ಣು ಈಗ ಹತ್ರಾನೆ ಬಂದ್ ಬಿಡ್ತು. ಎಲ್ಲರ ಮನೆಯ ಬಾಗಿಲೂ ಹಾಕಿಕೊಂಡಿದೆ. ಹೆಚ್ಚೂ ಕಮ್ಮಿ ಎಲ್ಲ ಮನೇಲೂ ಲೈಟೆಲ್ಲ ಆಫ್ ಆಗಿದೆ.ಮಲಗ್ ಬಿಟ್ಟಿದಾರೆ. ಆ ಕಡೆ ಮಿಲ್ಲಿನ ಮುಂದಿದ್ದ ಕಂಬದ ಲೈಟಿನ ಬೆಳಕಲ್ಲಿ ಈಗ ಬರೀ ಕೆಂಪಿಕಣ್ಣಷ್ಟೆ ಅಲ್ಲ ಕಣ್ಣ ಹತ್ತಿರ ಕೆಳಗೆ ಹೊಳೆಯುವ ಮೀಸೆ, ಪಟ್ಟೆ ಪಟ್ಟೆ ಮೈ, ಚೂರೆ ಚೂರು ತೆಗೆದುಕೊಂಡ ಹಾಗೆ ಇರೋ ಬಾಯಲ್ಲಿ ಬೆಳ್ಳಗೆ ಹೊಳೆವ ಕೋರೆ ಹಲ್ಲು, ದಪ್ಪ ಬಳ್ಳಿಯಂತೆ ಆ ಕಡೆ ಈ ಕಡೆ ತೊನೆದಾಡುವ ಬಾಲ... ಎಲ್ಲ ಒಂದೊಂದೇ ಕಾಣಿಸತೊಡಗಿತು. ಪುಟ್ಟಿಯ ಹಟ ಕೂಡ್ಲೆ ಕಾಲ್ ಕಿತ್ತಿತು. ಹೆದರೀಕೆಂದ್ರೆ ಹೆದರಿಕೆ. ಅಳಕ್ಕೂ ಹೆದರಿಕೆ. ಕೂತಲ್ಲಿಂದ ಏಳಕ್ಕೂ ಆಗ್ತಾ ಇಲ್ಲ. ಇನ್ನೇನು ಜೂಜನ ಮನೆ ದಾಟಿದ್ರೆ, ಕಿಲಾರದವರ ಮನೆ ಆಮೇಲೆ ಪೇಪರಜ್ಜನ ಮನೆ, ಅದಾದ್ ಮೇಲೆ ನಮ್ಮನೇನೆ ಅಂತ ಗೊತ್ತಾಗೋತು ಪುಟ್ಟಿಗೆ.

ಹೆಂಗೆಂಗೋ ಎದ್ದವಳು ಬಾಗಿಲ ಹತ್ರ ಹೋಗಿ ನಿಂತ್ಕಂಡು ಅಳ್ತಾ ಅಳ್ತಾ ಅಮ್ಮನ್ನ ಕರೆದಳು. ಅಮ್ಮಾ ಇನ್ಯಾವತ್ತು ಹಟ ಮಾಡಲ್ಲ ಬಾಗುಲ್ ತೆಗೆಯಮ್ಮಾ, ಕೆಂಪಿಕಣ್ ಬರ್ತಾ ಇದೆ ನಂಗೆ ಹೆದ್ರಿಕೆ ಅಮ್ಮಾ, ಒಳ್ಳೇವ್ಳಾಗಿರ್ತೀನಿ ಒಳಗೆ ಕರ್ಕೊಳ್ಳಮ್ಮಾ, ಊಟ ಮಾಡಕ್ಕೆ ಹಟ ಮಾಡಲ್ಲಮ್ಮಾ... ಜೋರಾಗಿ ಅತ್ತಳು. ಅಳುತ್ತಳುತ್ತ ನೋಡಿದರೆ ಕೆಂಪಿಕಣ್ಣು ಜೂಜನ ಮನೆ ದಾಟಿ ಕಿಲಾರದ ಮನೆಯವರ ಹತ್ತಿರ ಬರ್ತಿದೆ... ಅಯ್ಯೋ, ಈಗ ಬಾಗಿಲ ಹೊರಗಿನ ಚಿಲಕವನ್ನ ಅಲ್ಲಾಡಿಸಿ ಅಳುತ್ತಾ ಕರೆದಳು ಅಮ್ಮಾ, ಅಪ್ಪಯ್ಯಾ ಹಟ ಮಾಡುಲ್ಲ ನಾನು ಒಳಗೆ ಕರ್ಕೊಳ್ಳೀ.... ಹೂಂ.....

ಅಮಾ ಒಳಗಡೆ ಅಪ್ಪ ಅಮ್ಮಂಗೆ ಕೇಳ್ಸೇ ಇಲ್ವಾ ಅಮಾ ಅವಳು ಅಳ್ತಾ ಇದ್ದಿದ್ದು.. ಕೆಂಪಿಕಣ್ ಬಂದ್ ಬುಟ್ರೆ ಏನ್ ಮಾಡ್ತಾಳಮ್ಮಾ ಅವ್ಳು... - ನಮ್ ಪುಟ್ಟಿಯ ಕಳಕಳಿಯ ಪ್ರಶ್ನೆ
ಸ್ವಲ್ಪ ತಡಿ.. ಮುಂದೆ ಹೇಳಕ್ಕೋ ಬ್ಯಾಡದೋ... ಹೂಂ ಹೇಳು..

ಅಷ್ಟೊತ್ತಿಗೆ ಹಿಂದ್ಗಡೆ ಕೊಟ್ಟಿಗೇಲಿ ಗೌರಿದನದ ಕರ ಬೆಳ್ಳಿ ಎಂತಕೋ ಅಂಬಾ ಅಂತ ಕೂಗ್ತಿತ್ತು. ಅಡಿಗೆ ಮನೇಲಿದ್ದ ಅಮ್ಮಂಗೆ, ಲೆಕ್ಕ ಬರೀತಾ ಇದ್ದ ಅಪ್ಪಂಗೆ ಇದೆಲ್ಲ ಕೇಳಿಸಲೇ ಇಲ್ಲೆ...
ಆದ್ರೆ ಅಮ್ಮ ಕೆಲ್ಸ ಮುಗಿಸಿ ನಡುಗಿನ ಕೋಣೆಗೆ ಬಂದಾಗ ಅವಳಿಗೆ ಬಾಗಿಲ ಚಿಲಕ ಅಲ್ಲಾಡಿಸಿ ಅಳುವ ಪುಟ್ಟಿಯ ಶಬ್ದ ಕೇಳಿಸಿತು. ಓಡುತ್ತ ಓಡುತ್ತ ಬಂದ ಅಮ್ಮ ಬಾಗಿಲು ತೆಗೆದಳು..
ಹೊರಗಡೆ ಇದ್ದ ಪುಟ್ಟಿಗೆ ಈಗ ಅಳಲೂ ಆಗುತ್ತಿಲ್ಲ. ಹೆದರಿಕೆಯಿಂದ ಮೈಯೆಲ್ಲ ಬೆವೆತುಹೋಗಿದೆ. ಕೆಂಪಿಕಣ್ಣು ಪೇಪರಜ್ಜನ ಮನೆಯ ಹತ್ತಿರ ಬಂದ್ ಬಿಟ್ಟಿದೆ.

ಅಷ್ಟೊತ್ತಿಗೆ ಬಾಗಿಲು ತೆಗೆದ ಅಮ್ಮ, ಪುಟ್ಟಿಯನ್ನ ಎತ್ತಿಕೊಂಡು ಬಾಗಿಲು ಹಾಕಿದಳು.ಅಮ್ಮನನ್ನ ಗಟ್ಟಿಯಾಗಿ ಹಿಡಿದುಕೊಂಡ ಪುಟ್ಟಿ ತಪ್ಪಾಯ್ತಮ್ಮಾ ಇನ್ಯಾವತ್ತೂ ಹಟ ಮಾಡಲ್ಲ, ನನ್ನ ಕೆಂಪಿಕಣ್ಣಿಗೆ ಕೊಡಬೇಡಾ.. ಅಂತ ಅಳುತ್ತಳುತ್ತ ಹೇಳಿದಳು. ಪುಟ್ಟಿಯ ಕಣ್ಣೊರೆಸಿದ ಅಮ್ಮ, ಅಡಿಗೆ ಮನೆಗೆ ಎತ್ತಿಕೊಂಡೇ ಹೋಗಿ, ತಟ್ಟೆಯಲ್ಲಿದ್ದ ರೊಟ್ಟಿಯನ್ನ ಬೆಲ್ಲ ತುಪ್ಪ ಹಚ್ಚುತ್ತಾ ಪುಟ್ಟಿಗೆ ತಾನೆ ತಿನ್ನಿಸಿದಳು. ರೊಟ್ಟಿ ಮುಗಿದ ಕೂಡಲೆ ಹಾಲು ಕೊಟ್ಟರೆ ಪುಟ್ಟಿ ಯಾವ ವೇಷನೂ ಮಾಡದೆ ಸುಮ್ಮನೆ ಹಾಲು ಕುಡಿದಳು. ಅಮ್ಮ ಬಚ್ಚಲಿಗೆ ಕರೆದುಕೊಂಡು ಹೋಗಿ ಅವಳ ಬಾಯಿ ತೊಳೆಸಿ, ಉಶ್ ಮಾಡಿಸಿ ಬರುವಷ್ಟರಲ್ಲಿ ಪುಟ್ಟಿಯ ಕಣ್ಣು ಮುಚ್ಚಿಕೊಂಡು ಹೋಗುತ್ತಿತ್ತು. ನಿದ್ದೆ ಬಂದೇ ಬಿಟ್ಟಿದೆ. ಎತ್ತಿಕೊಂಡು ಹೋಗಿ ಅಪ್ಪ ಹಾಸಿಟ್ಟಿದ್ದ ಹಾಸಿಗೆಯಲ್ಲಿ ಮಲಗಿಸಿ, ಬೆಚ್ಚಗಿನ ಬೆಡ್ ಶೀಟ್ ಹೊದಿಸಿ, ತಾನೂ ಮಲಕ್ಕೊಂಡಳು. ಅಪ್ಪ ಕವಳ ಉಗಿಯಲು ಎದ್ದು ಹೊರಗೆ ಹೋದ..

ಇಷ್ಟೊತ್ತೂ ಗಾಬರಿ, ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದ ನಮ್ಮ ಪುಟ್ಟಿ ಈಗ ಸುಮ್ಮನಾಗಿಬಿಟ್ಟಿದ್ದಾಳೆ. ಆ ಹೂವಿನ ಎಸಳುಗಳಂತ ಕಣ್ಣುಗಳ ತುಂಬ ಏನೋ ಯೋಚನೆ. ಮೆತ್ತನೆ ಗಲ್ಲದ ಮೇಲೆ ತೋರುಬೆರಳು ಬೇರೆ. ಸುಮ್ಮನೆ ಮಗಳನ್ನು ದಿಟ್ಟಿಸಿ ನೋಡಿದ ಅಮ್ಮನಿಗೆ ತುಂಬ ಮುದ್ದು ಬಂತು. ಪುಟ್ಟಿಯನ್ನು ಇನ್ನೂ ಹತ್ತಿರಕ್ಕೆ ಎಳೆದುಕೊಂಡು ಆ ಕೆನ್ನೆಯ ಮೇಲೆ ಮುತ್ತೂ ಕೊಟ್ಟುಬಿಟ್ಟಳು.
ಆಮೇಲೆ ನಿಧಾನವಾಗಿ ಹೇಳಿದಳು ನೋಡಿದ್ಯಾ ಹಟಾ ಮಾಡೋ ಮಕ್ಕಳಿಗೆ ಏನಾಗ್ತು ಅಂತ. ಕೆಂಪಿಕಣ್ ಬಂದ್ರೆ ಅಷ್ಟೇ..

ತಲೆಯನ್ನ ಒಂದು ಕಡೆಗೆ ವಾರೆ ಮಾಡುತ್ತಾ ಪುಟ್ಟಿ ಅಮ್ಮನ ಕುತ್ತಿಗೆಯನ್ನ ಎರಡೂ ಕೈಗಳಿಂದ ಬಳಸಿ ಉಲಿದಳು. ಅಮ್ಮಾ ನಾನು ಯಾವ್ದಕ್ಕೂ ಹಟ ಮಾಡೊಲ್ಲ, ಆದ್ರೆ ನೀನು ಯಾವತ್ತಾದ್ರೂ ನಾನ್ ಹಟ ಮಾಡಿದ್ರೆ ಕೆಂಪಿಕಣ್ಣಿಗ್ ಮಾತ್ರ ನನ್ ಕೊಡಬೇಡಮ್ಮಾ.. ಈ ಕತೆ ನೆನಪ್ ಮಾಡು, ಆಮೇಲೆ ನಾನು ಹಟ ಮಾಡಲ್ಲ... ನಾನು ಒಳ್ಳೇವಳು ಅಲ್ವಾ ಅಮ್ಮಾ.. ಈಗ ನಂಗೇನು ಬಿಸ್ಕೆಟ್ ಬೇಡ. ಸಂಜಿಗೆ ಹಾಲು ಕುಡಿಯೋ ಹೊತ್ತಿಗೆ ಕೊಡು ಪರವಾಗಿಲ್ಲ..

ಬಂದ ನಗುವನ್ನು ಕಷ್ಟಪಟ್ಟು ತಡೆದ ಅಮ್ಮ - ಹೌದಪ್ಪಾ ನಮ್ಮನೆ ದೇವ್ರ ಗುಣ ನಮಗೆ ಗೊತ್ತಿಲ್ಲವೇ.. ನೀನು ಒಳ್ಳೆಯವಳೇ.. ಆ ಹಟ ಒಂದು ಪೂರ್ತಿ ಬಿಟ್ಟರೆ ಅಪ್ಪಟ ಬಂಗಾರ - ಅನ್ನುತ್ತಾ ಪುಟ್ಟಿಯ ಕೆನ್ನೆ ತುಂಬ ಮುತ್ತಿನ ಗೊಂಚಲು ಬಿಡಿಸಿ....


ಇಲ್ಲಿ ಜನತುಂಬಿದ ಮಾಲ್ ಹೊರಗೆ ನಿಂತು ಅವನಿಗೆ ಕಾಯುತ್ತಿದ್ದೇನೆ. ಪಕ್ಕದಲ್ಲಿ ಮಗುವೊಂದು ಹೊರಳಾಡಿ ಅಳುತ್ತಿದೆ ಸೂಪರ್ ಮ್ಯಾನ್ ಗನ್ ಬೇಕೇ ಬೇಕು ಅಂತ.. ಅಮ್ಮ ಏನೇನೋ ಹೇಳಿ ರಮಿಸುತ್ತಿದ್ದಾಳೆ. ಮಗು ಕೇಳುತ್ತಿಲ್ಲ. ನನ್ನವನು ಬರುವವರೆಗೆ ಕೆಂಪಿಕಣ್ಣಿನ ಕತೆ ಹೇಳಲಾ ಅಂದ್ಕೊಂಡೆ.. ಅಷ್ಟೊತ್ತಿಗೆ ಮಗುವಿನ ಅಪ್ಪ ಬಂದವರು ಅಮ್ಮನಿಗೆ ಬೈದರು.. ಏನ್ ಮಮ್ಮೀ ನೀನು.. ಮಗೂ ಅಳ್ತಾ ಇದ್ರೆ ಕೇಳಿದ್ ಕೊಡಸೋದು ಬಿಟ್ಟು, ಏನೋ ಉಪದೇಶ ಮಾಡ್ತಾ ಇದ್ದೀಯಲ್ಲಾ? ಕೇಳಿದ್ ಕೊಡ್ಸಕ್ಕೆ ಎನ್ ಪ್ರೊಬ್ಲೆಮ್ ನಿಂಗೆ. ಕಮ್ ಹನೀ.. ಏನ್ ಬೇಕು ನಿಂಗೆ.. ಹಿಡ್ಕೋ ಇದನ್ನ ಅಂತ ತುಂಬಿ ತುಳುಕುತ್ತಿದ್ದ ಆಟದ ಸಾಮಾನಿನ ಚೀಲವನ್ನ ಹೆಂಡತಿಗೆ ಕೊಟ್ಟು, ಮಗುವನ್ನು ಎತ್ತಿಕೊಂಡು ಮತ್ತೆ ಮಾಲ್ ಒಳಕ್ಕೆ ಹೋದರು.

ನನ್ನ ಕೆಂಪಿಕಣ್ಣಿನ ದೃಷ್ಟಿ ಮಂಕಾಗಿ, ಹೊಳಪು ಕಳೆದುಕೊಂಡು ಮುಂದೆ ಹೋಗಲಾರದೆ ಅಲ್ಲೆ ಮಲಗಿಬಿಟ್ಟಿತು. ಈಗ ಮಕ್ಕಳಿಗೆ ಕತೆ ಹೇಳುವಷ್ಟಿಲ್ಲ. ವಿಡಿಯೋ-ಗೇಮಲ್ಲಿ ಸೀಡಿಯಲ್ಲಿ ಅವರಿಗೆ ಬೇಕಾದ್ದನ್ನ ಅವರೇ ಆಯ್ಕೆ ಮಾಡಿಕೊಂಡು ನೋಡುತ್ತಾರೆ. ಬೇಕಾದ್ದನ್ನ ಕೇಳಿದ ಕೂಡಲೆ ಕೊಡಿಸಲು ಅಪ್ಪ ಅಮ್ಮ ಹಗಲೂ ರಾತ್ರೆ ದುಡಿಯುತ್ತಾರೆ. ಊಟದ ತಟ್ಟೆ ಚಮಚ ಚಾಕು ಹಿಡಿದುಕೊಂಡು ಆಯಾ ನಿಂತಿರುತ್ತಾಳೆ. ನೂಡಲ್ಸ್, ವೇಫರ್ಸ್, ಐಸ್ ಕ್ರೀಂ, ಪಿಝಾ ಗಳನ್ನ ಎಷ್ಟು ತಿಂದರೂ ಯಾರು ಕೇಳುವವರೇ ಇಲ್ಲ. ಮೆಡಿಕ್ಲೈಮ್ ಇದೆಯಲ್ಲ..

ಇಲ್ಲಮ್ಮಾ ನಂಗೆ ನಿನ್ ಕತೆ ಬೇಕು..ಹೇಳ್ದೆ ಇದ್ರೆ ನಾನ್ ಊಟ ಮಾಡೊಲ್ಲ ಅಂತ ಇನ್ನೂ ಮೂಡದ ಜೀವವೊಂದು ಮೋಡ ಮರೆಯಿಂದ ಪಿಸುಗುಡುತ್ತ ನನ್ನ ಸಂತೈಸುತ್ತಿದೆ. ೧೫ ವರ್ಷದ ಹಳೆಯ ಚಂದಮಾಮ ಪುಸ್ತಕಗಳನ್ನ ಬುಕ್ ಬೈಂಡ್ ಮಾಡಿಸಿ ಹಿಡಿದು ಬರುತ್ತಿರುವ ನನ್ನವನನ್ನ ನೋಡಿ ಮನಸ್ಸಿಗೆ ಏನೋ ಸಮಾಧಾನ. ಸಿಗ್ನಲ್ ದಾಟುವಾಗ ನೋಡಿದೆ. ಅಲ್ಲಿ ಲೈಟುಕಂಬದ ಹಿಂದೆ ಹೊಳೆಯುತ್ತಿರುವುದೇನು.. ಕೆಂಪಿಕಣ್ಣೇ.. ನೀನಿದ್ದೀಯಲ್ಲಾ, ನಂಗೇನು ಭಯವಿಲ್ಲ..ಮತ್ತೆ ಬರುತ್ತೇನೆ ಅಂತ ಕಣ್ಣು ಮಿಟುಕಿಸುತ್ತಿತ್ತು..