Thursday, January 12, 2012

ಹೂವು ಚೆಲ್ಲಿ-ದ ಹಾದಿ

ಉದಾತ್ತ ಹೆಜ್ಜೆಗಳ
ಭಾರಕ್ಕೆ
ನಲುಗಿದ ಕಾಲ ಕೆಳಗಿನ ಹೂಗಳ ಬಣ್ಣ
ಮಾಸಲು ಮಾಸಲು,
ಆಗಸಕ್ಕೆ ಮುಖವೆತ್ತರಿಸಿದ
ಕನಸುಕೊಂಬೆಗಳ ತುದಿಗೆ
ಬಿರಿಯದ ಮೊಗ್ಗುಗಳ ಬಣ್ಣದ ಹಂಬಲು.
ಬೇರುಗಳ ಮಾತು ಬೇಡ
ಕಂಪೌಂಡಿಗೆ ಘಾತವಾಗುತ್ತೇಂತ
ಬೇರಿಳಿವ ಜಾತಿಯ ನೆಡುವುದಿಲ್ಲ.

ತೆರೆದ ಬಾಗಿಲಿನ
ಮುಖಮಂಟಪ
-ದ ಒಳಗೆ ಹರಿದ ದಾರಿ
-ಯ ಕೊನೆಗೆ
ಮುಚ್ಚಿದ ಕೊಠಡಿ
ತುಂಬ ಕಿಟಕಿಗಳು
ಭಾರದ ಕದ ತಿರುಗಣೆಯಲ್ಲಿ
ಸಿಕ್ಕಿಹಾಕಿಕೊಂಡಿದೆ
ತೆಗೆಯಲಾಗುವುದಿಲ್ಲ.
ಹೊರಗಿನ ಬೆಳಕು ಬೇಕು ಯಾಕೆ
ಒಳಗೆ ಝಗಮಗಿಸುವ ದೀಪ
ಏಸಿಯ ವೆಂಟು
ಬಾಯಲ್ಲಿ ಕರಗುವ ಐಸ್ಕ್ರೀಮು
ತಿನ್ನುತ್ತ
ನೆನಪಾಗುವ ನಿಂಬೆಹುಳಿ ಪೆಪ್ಪರ್ ಮಿಂಟು.

ದಾರಿಬದಿಯಲಿ ಹೂಬಿಟ್ಟ ಸಂಪಿಗೆಮರ
ಜಡಿದು ಕೂರಿಸಿದ್ದರೂ ಎಲ್ಲೋ ಸಂದಿನಲ್ಲಿ
ತೂರಿಬರುವ ಗಾಢ ಕಂಪು.
ಅರೆಗತ್ತಲ ಬೀದಿಯ
ಹೂವು ಸುರಿವ ಸಂಜೆಯಲಿ
ಜತೆಗೆ ಹೋದ ಒದ್ದೆ ಹೆಜ್ಜೆಗಳು
ಮೋಡ ತುಂಬಿದ
ಆಗಸದಲಿ ಕದ್ದು ಹೊಳೆವ
ತಿಂಗಳು
ಇರುಳ ಹೆರಳಿನ ತುಂಬ
ರಾತ್ರಿರಾಣಿ ಘಮಘಮಿಸಿ
ಅಲ್ಲಿ ಕತ್ತಲಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!

ಈ ನೆನಪಿನ ಮಾತು ಬೇಡ ಈಗ
ಇದೊಂದು ಹುಚ್ಚು ಮಂಪರು
ಮಲಗಲು ಒಳ್ಳೆ ಸ್ಲೀಪ್ ವೆಲ್ ಹಾಸಿಗೆಯಿದೆಯಲ್ಲ
ಸುಮ್ಮನೆ ಮಲಗು
ಬೆಳಿಗ್ಗೆ ಬೇಗ ಏಳಬೇಕು.

ಪಾಟಿನೊಳಗಿನ ಮಲ್ಲಿಗೆ ಬಳ್ಳಿಯ
ಕರುಣೆ
ದಿನದಿನವೂ
ಎರಡೆರಡೇ ಅರಳು ಮೊಗ್ಗು.

ಕಲ್ಲುಮುಳ್ಳು ಹಾದಿಯ
ನೋವನುಂಡು ನಡೆದವರು
ಹೂವು ಚೆಲ್ಲಿ-ದ ಹಾದಿಯ
ನುಣ್ಪು ದುಃಖದಿ
ಜಾರಿ ಬಿದ್ದರು,
ಉದಾತ್ತ ಹೆಜ್ಜೆಗಳು ಬಲು ಭಾರ!

Tuesday, January 10, 2012

ಈ ಹುಚ್ಚಿಗೆ ಹೆಸರು ಬೇಕೆ?

ಹಿತವಾದ ಕತ್ತಲ ಇಳಿಸಂಜೆ
ಮಾತುಕತೆ ಮುಗಿಸಿ ಹಗುರಾಗಿ
ಬೀಸುಹೆಜ್ಜೆಯ ಲಘುನಡಿಗೆಯಲಿ
ಬೇಲಿ ದಾಟುವಾಗ ಮನೆಯಂಗಳದಿ-
ಪುಟ್ಟಗೆ ಉರಿವ
ತುಳಸಿಯ ದೀಪ
ಹಚ್ಚಿಡುವ ನೀನು,
ಸುಖಾಸುಮ್ಮನೆ ಕಡೆಗಣ್ಣಲಿ
ನೋಡಿದ್ಯಾಕೆ?

ದೀಪದ ಬೆಳಕನ್ನಷ್ಟೆ ತುಂಬಿಕೊಂಡು
ಮುನ್ನಡೆಯಲಿದ್ದ ನನ್ನ
ಜಗ್ಗಿ ನಿಲ್ಲಿಸಿ, ಮುಗ್ಗರಿಸಿ
ತಿರುತಿರುಗಿ ನೋಡುತ್ತ
ಹೊರಡಲಾರದೆ ಹೊರಟೆ..
ಈಗ ನೋಡು-
ಮಳೆ ನಿಂತ ತಂಪಲ್ಲು
ಹೊತ್ತಿ ಉರಿವ ಒಳಗು!
ನಿನಗೇನೂ..ಅಮ್ಮನ ಕರೆಗೆ
ಜೋಡು ಜಡೆಯ ಬೀಸುತ್ತ
ಕುಣಿವ ಹೆಜ್ಜೆಗಳಲ್ಲಿ ಓಡುತ್ತ
ಹೋಗುವ ಹೊತ್ತು;
ನಾನಿಲ್ಲಿ
ಹೆಜ್ಜೆ ಇಲ್ಲಿಡಲಾ ಬೇಡವಾ
ಯೋಚಿಸುತ್ತಾ
ಕಳೆಯದೇ ಜಾರುವ ಹೊತ್ತನ್ನ
ತುಂಬಲಾರದೆ ನೋಯುತ್ತಾ..

ಹೋಗೇ ಮರಿರಾಕ್ಷಸೀ,
ಇನ್ನೊಮ್ಮೆ ನಿನ್ನ ಯೋಚನೆ ಸುಳಿದರೆ ಕೇಳು
ನಿನ್ನ ದೀಪದುರಿಯ ಕುಡಿಗಣ್ಣು
ನನ್ನ ಕೆನ್ನೆಯ ಕತ್ತಲ ಮೇಲೆ ಪ್ರತಿಫಲಿಸುವವರೆಗೂ..
ಜನ ಹೇಳುತ್ತಾರೆ
ಪ್ರೀತಿ ಪ್ರೇಮ ಬರಿಯ ಮರುಳು..
ಹೌದಾ..?
ಅವರಿಗೇನು ಗೊತ್ತು
ನಿನ್ನ ಕಣ್ಣಿನ ಅಮಲು.