Monday, December 26, 2011

ಟುಪ್ಪೂ ಕಥಾ ಸರಿತ್ಸಾಗರದ ಕೆಲವು ಬಿಂದುಗಳು!

ತುಂಬ ದಿನಗಳಿಂದಲೂ ನನ್ನ "ಟುಪ್ಪೂ ಕಥಾಸರಿತ್ಸಾಗರ"ದ ದಂಡೆಗೆ ಬರಲಿಕ್ಕಾಗಲಿಲ್ಲ. ಕಥೆಗಳು ಕಣ್ಮುಂದೆ ಬಿಚ್ಚಿಕೊಳ್ಳುತ್ತಾ ಮಂತ್ರಮುಗ್ಧವಾಗಿಸುವ ಕ್ಷಣಗಳಲ್ಲಿ ಮೈಮರೆತಿದ್ದೆ ನಾನು. ಅದನ್ನು ಅಕ್ಷರಕ್ಕಿಳಿಸುವ, ನನ್ನ ಅಕ್ಕ,ಗೆಳತಿಯರು ಕೇಳುವ ಹಾಗೆ ಕ್ಯಾಮೆರಾಕ್ಕಿಳಿಸುವ, ರೆಕಾರ್ಡ್ ಮಾಡುವ ಯಾವ ಎಚ್ಚರವೂ ಇಲ್ಲದ ಸುಖವಾದ ಮೈಮರೆವು. ಕೆಲವು ನೆನಪುಗಳು ಅವು ಆದ ವರ್ಷದಲ್ಲಾದರೂ ದಾಖಲಾಗಲಿ ಎಂಬ ಆಸೆಯಿಂದ ಈ ಬರಹ. ಅಮ್ಮಂದಿರೆಂದರೆ ಹೀಗೇ ಮಕ್ಕಳ ಬಾಲ್ಯದಲ್ಲಿ ದಿನವೂ ಮಾತನಾಡಿಸಿದರೂ ನಿಮಗೆ ಒಂದೊಂದು ಹೊಸ ಮುದ್ಗಥೆ ಕೇಳಲು ಸಿಗುತ್ತಿರುತ್ತದೆ. ಅವಳ ಮಾತು ಕತೆ,ತುಂಟತನ,ಮುದ್ದುಗರೆಯುವಿಕೆ, ಆಟ,ನಲಿವು,ಸಿಡುಕು ಸೆಡವು, ಕಾಮಿಡಿಗಳಲ್ಲಿ ಕೆಲವು ನಿಮ್ಮ ಅವಗಾಹನೆಗಾಗಿ ಮತ್ತು ಮುಂದೆಂದೋ ಅವಳು ಓದಿದರೆ, ಅವಳ ಪುಟ್ಟಬಾಯಿ ಅಗಲವಾಗಿ ನಗುವಿನ ಹೂ ತುಂಬಲಿಕ್ಕಾಗಿ.

ರಾಜ್ ಕುಮಾರ ನನ್ನ ಮಗಳ ನೆಚ್ಚಿನ ಮಾಮ. ಅವಳು ಅವನನ್ನು ಕರೆಯುವುದೇ "ಎಲ್ಲೂ ಹೋಗಲ್ಲ ಮಾಮ" ಎಂದು. ಅವನ ಹಳೆಯ ಕೆಲವು ಹಾಡುಗಳು ಅವಳ ಫೇವರಿಟ್ಟು. ನಗುನಗುತಾ ನಲಿ, ಬಾನಿಗೊಂದು ಎಲ್ಲೆ ಎಲ್ಲಿದೆ, ಆಗದು ಎಂದು, ಸಿಹಿಮುತ್ತು ಸಿಹಿಮುತ್ತು ನಂಗೊಂದು, ಥೈ ಥೈ ಬಂಗಾರಿ, ಇಫ್ ಯೂ ಕಮ್ ಟುಡೇ, ಒಂದು,ಎರಡು ಮೂರು ನಾಕು ಆದ್ಮೇಲೆ ಏನು, ಲಾಲಿ ಲಾಲಿ ಸುಕುಮಾರ.. ಇತ್ಯಾದಿ. ರಾಜ್ ಕುಮಾರ್ ನ ಯಾವ ಹಾಡು ಟೀವಿಯಲ್ಲಿ ಬಂದರೂ ಹತ್ತಿರ ಹೋಗಿ ನಿಂತು ನೋಡುತ್ತಾ ಕೇಳುತ್ತಾ ಇರುತ್ತಾಳೆ. :) ಮೊದಮೊದಲು ನಾವು ಅವಳನ್ನ ಬೆಳಗ್ಗೆ ಪ್ಲೇಹೋಮಿಗೆ ಬಿಡುವಾಗ, ಮೇಲೆ ಆಕಾಶ ನೋಡಿ ಟಾಟಾ ಮಾಡುತ್ತಿದ್ದಳು. ಏನೆಂದು ಕೇಳಿದರೆ, ನಕ್ಷತ್ರವಾಗಿರುವ ಎಲ್ಲೂ ಹೋಗಲ್ಲ ಮಾಮಂಗೆ ಟಾಟಾ ಎಂದು ವಿವರಿಸಿದ್ದಳು.
ಅಮರಚಿತ್ರಕಥೆಗಳಲ್ಲಿ ಭಕ್ತ ಪ್ರಹ್ಲಾದ ಅವಳಿಗಿಷ್ಟವಾದ ಕಥೆಗಳಲ್ಲಿ ಒಂದು. ಅವಳು ಪುಟ್ಟ ಮಗುವಾಗಿದ್ದಾಗಿನಿಂದ ಈಗ ಮೂರುವರ್ಷದವರೆಗೆ ಮೂರು ಪ್ರತಿಗಳಲ್ಲಿ ಆ ಪುಸ್ತಕದ ಕಥೆ ಹರಿದಿದೆ( ಅಕ್ಷರಶಃ ಮೊದಲ ಎರಡು ಪುಸ್ತಕಗಳು ಹರಿದು ಚಪ್ಪೆದ್ದು ಹೋಗಿವೆ).
ಒಂಟಿಕಾಲಿನಲ್ಲಿ ತಪಸ್ಸು ಮಾಡುವ ಹಿರಣ್ಯಕಶಿಪು, ತಂಬೂರಿ ನಾರದರ ನಾರಾಯಣ, ನಾರಾಯಣ, ಲಾಲಿ ಲಾಲಿ ಹೇಳುವ ಕಯಾದು, ಪ್ರಹ್ಲಾದನ ಕೈಮುಗಿದ ಹರಿಭಜನೆ, ಕಂಬ ಒಡೆಯುವ ಹಿರಣ್ಯಕಶಿಪುವಿನ ಗದಾಪರ್ವ, ಹೊಟ್ಟೆ ಸೀಳುವ ನರಸಿಂಹ ಮತ್ತು ಅವನ "ಎರಡೂ ಅಲ್ಲ" ಪ್ರಶ್ನೋತ್ತರಗಳು, ಇವು ನಮ್ಮನೆಲ್ಲ ರಂಜಿಸುವ ಅವಳ ಅಭಿನಯದ ಘಳಿಗೆಗಳು. ಹೀಗಿರಲಾಗಿ ಹೋದತಿಂಗಳು ಅವಳು ರಾಜ್ಕುಮಾರ್ ಅಭಿನಯದ ಭಕ್ತಪ್ರಹ್ಲಾದ ಸಿನಿಮಾವನ್ನು ಟೀವಿಯಲ್ಲಿ ಎರಡು ಮೂರು ಸಲ ನೋಡಿಬಿಟ್ಟಳು. ಮೊದಲ ಸಾರಿ ನರಸಿಂಹ ರಾಜಕುಮಾರ್ ನನ್ನ ಎತ್ತಿ ಕೊಂಡು ಹೊಟ್ಟೆ ಸೀಳುವಾಗ ಅವಳಿಗೆ ಭಯವಾಗಿ ಅಳು ಬಂತು. ನರಸಿಂಹನ ಮೇಲೆ ಕೋಪವೂ ಬಂತು. ಎಲ್ಲೂ ಹೋಗಲ್ಲ ಮಾಮ ಪಾಪ ಎಂದುಕೊಂಡು ನೆನೆಯುತ್ತಿದ್ದಳು. ಆಮೇಲೆ ಎರಡು ಸಲ ನೋಡುವಾಗ ಎಲ್ಲೂಹೋಗಲ್ಲ ಮಾಮ ಹಿರಣ್ಯಕಶಿಪುವೇ ಆಗಿ ಕಂಡುಬಂದಿದ್ದರಿಂದ, ಅವಳು ಮತ್ತೆ ವಾಪಸ್ ಪ್ರಹ್ಲಾದನ ಪರವಾಗಿದ್ದಾಳೆ. ಇದೆಲ್ಲ ಹೋಗಲಿ ನಾನು ಅವಳಿಗೆ ಅವಳ ಪೂರ್ತಿ ಹೆಸರು ಸೃಷ್ಟಿ ಶುಭದಾಯಿನಿ... .ಮುದ್ದು ರಾಕ್ಷಸಿ ಎಂದು ಹೇಳಿಕೊಟ್ಟಿದ್ದೆ. ಮೊದಮೊದಲು ಹಾಗೇ ಹೇಳುತ್ತಿದ್ದಳು. ಆಮೇಲೆ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ನಗುತ್ತಿದ್ದಳು. ಆದರೆ ಭಕ್ತಪ್ರಹ್ಲಾದ ನೋಡಿದಾಗಿನಿಂದ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ಕೋಪವೇ ಬಂದುಬಿಡುತ್ತದೆ. ಮೊದಲು ಸಿಡುಕಿ, ಆಮೇಲೆ ಅತ್ತು, ಕೊನೆಗೆ ಪುಸಲಾಯಿಸುತ್ತಾಳೆ. ಹಾಗೆ ಕರೆಯಬಾರದು ಎಂದು. :) ಯಾಕೇಂತ ಕೇಳಿದರೆ ರಾಕ್ಷಸ ಮಕ್ಕಳು ಕರ್ಕಶವಾಗಿ ಹಾಡು ಶ್ಲೋಕ ಹೇಳುತ್ತಾರೆ ಅಂತೆ!. ನಾನು ಕೈಮುಗಿದೆ.

ಅವಳಿಗಿಷ್ಟವಾದ ಇನ್ನೊಂದು ಅಮರಚಿತ್ರಕತೆ (ನಂಗೂ ತುಂಬ ಇಷ್ಟ) "ನನ್ನ ಗೋಪಾಲ" ಈ ಕಥೆಯನ್ನು ನಾನು ತುಂಬ ದಿವಸಗಳ ಕಾಲ ಅವಳನ್ನು ರೆಡಿ ಮಾಡಲು ಉಪಯೋಗಿಸುತ್ತಿದ್ದೆ. ಆ ಕಥೆಯಲ್ಲಿ ಗೋಪಾಲನಿಗೆ ಅಮ್ಮ ಸ್ನಾನ ಮಾಡಿಸಿ, ಅಂಗಿ ಹಾಕಿ, ಕಾಲ್ಚೀಲ ಹಾಕಿ, ತಲೆಬಾಚಿ ಶಾಲೆಗೆ ಕಳಿಸ್ತಾರೆ. ಅವಳನ್ನು ರೆಡಿ ಮಾಡುವಾಗ ಈ ರೆಫರೆನ್ಸ್ ಒಳ್ಳೆ ಸಹಾಯ ಮಾಡುತ್ತಿತ್ತು. ಈಗ ಅವನು ಕಾಲ್ಚೀಲ ಹಾಕಿಯೇ ಇಲ್ಲ, ಚಡ್ಡಿ ಇಲ್ಲ ಬರಿಯ ಪಂಚೆ, ಎಲ್ಲಿ ತಲೆ ಬಾಚ್ತಾ ಇದಾರೆ ತೋರ್ಸು ಅಂತೆಲ್ಲ ಕೇಳುತ್ತಾಳೆ. ನಾನು "ಚಿತ್ರದಲ್ಲಿ ಕಾಣಿಸದ ಕತೆಯಲ್ಲಿ" (ಎಲ್ಲ ಚಿತ್ರಗಳಾಚೆಗಿನ ಚಿತ್ರ!) ಎನ್ನುವ ಸಬೂಬಿನೊಂದಿಗೆ ಮ್ಯಾನೇಜ್ ಮಾಡ್ತಾ ಇದೀನಿ. ಸದ್ಯಕ್ಕೆ ಇದು ಕೆಲಸ ಮಾಡುತ್ತಿದೆ. ಒಬ್ಬಳೆ ಹೋಗುವಾಗ ತಾನು ಕೃಷ್ಣಮಾಮಿಯನ್ನು ಕರೆಯುವುದಾಗಿಯೂ ಆಗ ತನಗೆ ಭಯ ಆಗುವುದಿಲ್ಲವೆಂದೂ ಅವಳೂ ಹೇಳುತ್ತಿರುತ್ತಾಳೆ. ಇದರ ಸತ್ವ ನಂಗೆ ಗೊತ್ತಿಲ್ಲ. ಯಾಕೆಂದರೆ ಬಾಗಿಲಿಂದ ಆಚೆ ಹೋದಕೂಡಲೆ ಅಮ್ಮನ ಕೈಬಿಡುವುದಕ್ಕೆ ಗೊತ್ತಿಲ್ಲ ನಮ್ಮ ದೇವರಿಗೆ.
ಇದರ ಮಧ್ಯೆ ದಿನಾ ಅಮ್ಮಮ್ಮ ಹೇಳುವ ಕಿಷನನ ಕತೆಗಳು ಅಂದ್ರೆ ನಮ್ಮಗೂಗೆ ಸಿಕ್ಕಾಪಟ್ಟೆ ಇಷ್ಟ. ಅವಳ ತುತ್ತಿನ ಚೀಲ ತುಂಬುವುದೆ ಈ ಕಥೆಗಳಿಂದಾಗಿ. ಅದರ ಗುಂಗಿನಲ್ಲಿ ನಂಜೊತೆ ಮನೆಗೆ ಬರುವವಳು ದಿನಾ ಬೆಣ್ಣೆ ಮಡಿಕೆಯೊಡೆಯುತ್ತಾ, ಕುರ್ಚಿ ಸಂದಿಯಲ್ಲಿ ಅಡಗಿಕೊಳ್ಳುತ್ತಾ, ಮೃಣ್ಮಯ ಬಾಯನ್ನು ತೋರುತ್ತಾ, ಕಿರುಬೆರಳಿನಲ್ಲಿ ಗಿರಿಯನ್ನೆತ್ತುತ್ತಾ ಇರುತ್ತಾಳೆ. ಯಾವುದಕ್ಕಾದರೂ ನಾನು ಬೈದರೆ ನಾನು ತುಂಟತನ ಮಾಡಿದೆ ಅಷ್ಟೇಮ್ಮಾ ಕಿಶನನ ಹಾಗೆ ಅಂದು ಬಿಡುತ್ತಾಳೆ. ನಾನು ದೇವಕಿ, ಅಮ್ಮಮ್ಮ ಯಶೋದೆ ಮತ್ತು ಇವಳೇ ಕೃಷ್ಣ. ಸಂದರ್ಭಕ್ಕೆ ತಕ್ಕ ಹಾಗೆ ಅಲ್ಲಿ ಇದ್ದವರು ನಂದಗೋಪಾಲ, ಮತ್ತು ಗೋಪಿಕೆಯರು. ಅವಳು ದೇವಕಿಯಮ್ಮಾ ಅಂತ ಕರೆದಾಗ ನಾನು ಬರೀ ಏನು ಎಂದರೆ ಮೂಗಿನ ತುದಿಯ ಕೋಪ ಮಾತಿಗೆ ಮತ್ತು ಕಣ್ಣಹನಿಗೆ ಬಂದುಬಿಡುತ್ತದೆ. ಏನು ಕೃಷ್ಣಾ ಎಂದೇ ಕೇಳಬೇಕು. ಬದುಕಿನ ಬ್ರಹ್ಮಾಂಡ ದರ್ಶನ ಆಗುತ್ತಾ ಇರುತ್ತದೆ ನನಗೆ.

ಕೆಲವು ರಷ್ಯಾ ರಾದುಗ ಪ್ರಕಾಶನದ ಕತೆಗಳು ಅವಳಿಗಿಷ್ಟ. ಅದರಲ್ಲಿ ಮಾಟಗಾತಿ ಬರುತ್ತಾಳೆ. ಆಮೇಲೆ ಸ್ನೋವೈಟಿನಲ್ಲೂ ಅಷ್ಟೇ ಒಂದು ಭಯಂಕರ ಮೋಸದ ಮಾಟಗಾತಿ ಇದ್ದಾಳೆ. ಹೀಗಾಗಿ ಮಾಟಗಾತಿಯೆಂದರೆ ನಮ್ಮ ಸಿಂಗಾರಿಗೆ ಸ್ವಲ್ಪ ನಿಜವಾದ್ದು ಮತ್ತು ಸ್ವಲ್ಪ ಜಾಸ್ತಿ ತೋರಿಕೆಯದ್ದೂ ಎರಡೆರಡು ರೀತಿಯ ಭಯ. "ಮಾ" ಅಂದರೆ ಸಾಕು ಅವಳು ಬಂದುಬಿಡುತ್ತಾಳೆ ಎಂದು ಹೆದರಿಸಿ ಅವಳನ್ನು ನಿದ್ದೆಗೆ ದಬ್ಬಿದ ಮಧ್ಯರಾತ್ರಿಗಳು ತುಂಬ ಇದ್ದವು. ಈಗ ಈ ಟ್ರಿಕ್ಕು ನಡೆಯುವುದಿಲ್ಲ. ಅವಳು ಮಾಟಗಾತಿಗೇ ಫೋನ್ ಮಾಡಿಬಿಡುತ್ತಾಳೆ. ಒಂದು ಮಾಟಗಾತಿ ಪೊರಕೆಗೆ ಸಮೀಕರಿಸುವ ಕೋಲಿಟ್ಟುಕೊಂಡಿದ್ದಾಳೆ. ಅದರ ಮೇಲೆ ಕುಳಿತು ಅಬ್ರಕದಬ್ರ ಹೇಳಿ ಎಲ್ಲೆಂದರಲ್ಲಿ ಸುತ್ತಿ ಬರುತ್ತಾಳೆ. ಆದರೆ ಆಳದಲ್ಲಿ ಮಾಟಗಾತಿಯೆಂದರೆ ಭಯವೂ ಇದೆ. ಏನೆಂದರೆ ನೀವೇನಾದರೂ ಅವಳಿಗೆ ರೋಪ್ ಹಾಕಿದರೆ, ಅವಳು ಮಾಟಗಾತಿಗೆ ಫೋನ್ ಮಾಡುತ್ತಾಳೆ ಅಷ್ಟೆ. ನಾನೇನಾದ್ರೂ ಮಾಟಗಾತಿಯ ಮಾತೆತ್ತಿದರೆ ಅವಳು ಸ್ಲೀಪಿಂಗ್ ಬ್ಯೂಟಿಯಲ್ಲಿ ಬರುವ ಒಳ್ಳೆಯ ಮಾಟಗಾತಿಯಾಗಿಬಿಡುತ್ತಾಳೆ. ಹೀಗೆ ಈ ಮಾತುಗಾತಿಯ ಹತ್ತಿರ ಮಾಟಗಾತಿ ಸೋತು ಬಂದ ದಾರಿಯಲ್ಲೇ ಪೊರಕೆ ಹತ್ತಿ ಸಾಗಬೇಕು.

ಅವಳ ಇನ್ನೊಂದು ಹಾಟ್ ಫೇವರಿಟ್ ಕಥೆ ಮಣಿಕಂಠನದ್ದು. ಇದು ಅಜ್ಜ ಹೇಳುವ ಹಾಡು ಮತ್ತು ಕಥೆ. ಪಂದಳ ರಾಜನಿಗೆ ಸಿಕ್ಕಿದ ಮಣಿಕಂಠ, ಹುಲಿಯಹಾಲು ತರಲು ಹೋಗಿ ಮಹಿಷಿಯನ್ನು ಸೋಲಿಸಿ, ಹುಲಿಗಳ ಮೇಲೆ ಹತ್ತಿ ಅರಮನೆಗೆ ಬರುವ ಕಥೆ. ಇದು ಕೇಳುತ್ತ ಕೇಳುತ್ತ ನಿದ್ದೆ ಬಂದುಬಿಡುತ್ತದೆ ನಮ್ಮ ಮಗುವಿಗೆ. ಮಧ್ಯಾಹ್ನ ಎರಡುಗಂಟೆಯ ಹೊತ್ತಿಗೆ ಒಂದು ಸಲ ಅಜ್ಜನೂ, ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ನಾನೂ ಎಲ್ಲ ಕಥೆಗಳನ್ನು ಹೇಳಿ ಮುಗಿದ ಮೇಲೆ ಇದು ಹೇಳಿ ಮಲಗಲು ಪ್ರಯತ್ನ ಮಾಡುತ್ತೇವೆ. :)

ಈ ಎಲ್ಲ ಕಥೆಗಳಲ್ಲೂ,ಘಟನೆಗಳಲ್ಲೂ ತನಗೆ ಬೇಕಾದ್ದನ್ನು ಆವಾಹಿಸಿಕೊಂಡು ತಾನು ಅದೇ ಆಗುವ ಒಂದು ಮುಗ್ಧತೆಯ ಜಾದೂ ಇವಳಲ್ಲಿದೆ. ಅದೇ ಈ ಎಲ್ಲ ಚಂದ ಸಂಗತಿಗಳ ಹೂರಣ. ಒಂದು ಕಥೆಯ ಕಾಂಗರೂ ಮರಿಯಾಗಿ ಒಂದು ವಾರ ಓಡಾಡಿಕೊಂಡಿರುತ್ತಾಳೆ. ಆ ವಾರವಿಡೀ ಎಲ್ಲರೂ ಅವಳನ್ನು ರೂಮರಿ ಎಂದೇ ಕರೆಯಬೇಕು. ನಾನೆಲ್ಲಾದರೂ ಬೈದರೆ ಕಣ್ಣ ತುಂಬು ನೀರು ತುಂಬಿ ರೂಮರಿಗೆ ಯಾರಾರೂ ಬೈತಾರ ಅಂತ ಹೇಳಿ ನನ್ನ ಅಳಿಸುತ್ತಾಳೆ. ಆಮೇಲೆ ಇನ್ನೊಂದು ವಾರ ಸ್ನೋವೈಟಿನ ಒಬ್ಬ ಪುಟ್ಟ ಕುಳ್ಳನ ಹಾಗೆ ಓಡಾಡಿಕೊಂಡಿರುತ್ತಾಳೆ. ಮತ್ತಿನ್ನೊಂದು ವಾರ ಸಿಂಡ್ರೆಲಾ ಮತ್ತವಳ ಡ್ಯಾನ್ಸು ನಡೆಯುತ್ತದೆ. ಅದರ ಮುಂದಿನ ವಾರ ಗೋಪಾಲ, ಆಮೇಲೆ ಪ್ರಹ್ಲಾದ, ಕೃಷ್ಣ ಎಲ್ಲ ಆಗಿ ರೂಪಾಂತರ ಹೊಂದುತ್ತಿರುತ್ತಾಳೆ. ಈ ವಾರ ಗೋಲ್ಡಿಲಾಕ್ಸ್ ಕತೆಯ ಪಾಪು ಕರಡಿಯಾಗಿದ್ದಾಳೆ. ಈ ಎಲ್ಲ ರೂಪಗಳಲ್ಲು ಆಗಾಗ ಕೃಶ್ಣ ಮತ್ತು ಛೋಟಾ ಭೀಮ್ ಮಾತ್ರ ಖಾಯಮ್ಮಾಗಿ ಬಂದು ಹೋಗುತ್ತಾರೆ. ಮುಂದಿನ ವಾರದ ಕಥೆಗೆ ನಾನು ಸ್ಕೆಚ್ಚು ಹಾಕುತ್ತಾ ಇದ್ದೀನಿ.

ಈ ಎಲ್ಲ ಕಥೆ ಹೇಳುವಾಗಿನ ಒಂದು ಕಷ್ಟ ಅಂದರೆ ಈ ಕ್ವೆಶ್ಚನ್ ರಾಣಿಯ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಹೇಳುವುದು. ನಚಿಕೇತನ ಕತೆ ಹೇಳಿ ತುಂಬ ಕಷ್ಟ ಆಗಿಬಿಟ್ಟಿತ್ತು. ಸಾಯುವುದನ್ನು ವಿವರಿಸಿ ಯಾರೆಲ್ಲ ಸಾಯಬಹುದು ಅಂತ ಹೇಳಿ ಕೊನೆಗೆ ಈಗ ಯಾರ್ಯಾರೂ ಸಾಯುವುದೇ ಇಲ್ಲ ಅಂತ ಒಪ್ಪಿಸುವ ಹೊತ್ತಿಗೆ ಸಾಕಾಗಿ ಹೋಗಿತ್ತು ನನಗೆ.

ಹೋದವಾರ ಒಂದು ರಾತ್ರಿ ಮಲಗುವಾಗ ಎಂದಿನಂತೆ ನಮ್ಮ ಸಂವಾದ ನಡಿಯುತ್ತಿತ್ತು. ಇದು ಒಂದ್ರೀತಿ ಮಾತಿನ ಯುದ್ದ. ಎಷ್ಟೋ ದಿನ ನನ್ನ ಮಾತು ಅವಳು ಕೇಳದೆ ನಾನು ಸಿಟ್ಟು ಮಾಡಿಕೊಂಡು ಎದ್ದು ಹೋಗಿ ಆಚೆ ಮಲಗಿ ಅವಳು ಮತ್ತೆ ಅತ್ತು ಕರೆದು ಅಪ್ಪನ ಮೂಲಕ ನನ್ನಲ್ಲಿ ಸಂಧಾನ ನಡೆಸಿ ನನ್ನ ತೋಳು ಬಳಸಿ ಮಲಗುತ್ತಾಳೆ. ಮತ್ತೊಂದಷ್ಟು ಸಲ ಅವಳಿಗೆ ಕೋಪ ಬಂದು, ನನಗೆ ಬೇಜಾರಾಯಿತು ಅಂತ ಹೇಳಿ ಕತ್ತಲಲ್ಲೆ ಎದ್ದು ಗೋಡೆ ಕಡೆ ಮುಖ ಮಾಡಿ ಕೂತು, ಆಮೇಲೆ ನಾನು ಅವಳಿಗಿಷ್ಟವಾದ ಏನೇನೋ ಕತೆ ಹೇಳಿ ಮುದ್ದು ಮಾಡಿ ಒಲಿಸಿಕೊಳ್ಳುತ್ತೇನೆ. ಹೆಚ್ಚಿನ ರಾತ್ರಿಗಳು ಕತೆ, ಪ್ರಶ್ನೆ, ಕತೆ ಮತ್ತು ಹಾಡುಗಳಲ್ಲಿ ಹನ್ನೆರಡಕ್ಕೆ ಕೊನೆಯಾಗುತ್ತವೆ. ಹೋದ್ವಾರ ಏನಾಯ್ತೂಂದ್ರೆ ನಾನು ಅವಳನ್ನ ನೀನು ದೊಡ್ಡವಳಾದ ಮೇಲೆ ಏನು ಮಾಡುತ್ತೀ ಎಂದು ಕೇಳಿದೆ. ಅವಳೂ ನಾನು ದೊಡ್ಡವಳೇ ಆಗೋಲ್ಲಮ್ಮ ಅಂತ ಡಿಕ್ಲೇರ್ ಮಾಡಿದಳು. ಅದ್ಯಾಕೆ ಅಂದ್ರೆ, ಅವಳ ಮುದ್ದು ಟ್ಯೂನಿನಲ್ಲಿ ಉತ್ತರ ಬಂತು. ನಾನು ದೊಡ್ಡವಳಾದ್ರೆ ನೀನೂ ದೊಡ್ಡವಳಾಗಿ ಮುದುಕಿಯಾಗಿ ಆಮೇಲೆ ಸತ್ತು ಹೋಗುತ್ತೀ. ಅದು ನಂಗೆ ಬ್ಯಾಡ. ನಾನು ಹೀಗೇ ಇರ್ತಿ. ನೀನು ಹೀಗೇ ಇರು ಎಂದಳು. ಈ ಮೊದ್ದು ಮುದ್ದಿಗೆ ತುಂಬಿ ಬಂದ ಕಣ್ಣನ್ನು ನಾನು ನಕ್ಕು ಇಂಗಿಸಿದೆ. ಈ ಪ್ರೀತಿ ಹಿಂದೆ ಎಂದೂ ಸಿಕ್ಕಿರಲಿಲ್ಲ, ಮತ್ತು ಮುಂದೆಂದೂ ಸಿಗುವುದೂ ಇಲ್ಲ. ಸಿಕ್ಕಾಗ ಒಡ್ಡಿಕೊಂಡು ನಿಲ್ಲುವುದಷ್ಟೇ ನನ್ನ ಭಾಗ್ಯ.

ಮೊನ್ನೆ ಶನಿವಾರ ಎಲ್ಲ ಕಡೆಯೂ ಕ್ರಿಸ್ಮಸ್ ವ್ಯಾಪಾರ ಭರಾಟೆ. ಅಲ್ಲದೆ ಶುಕ್ರವಾರ ಅವಳ ಪ್ಲೇಹೋಮಿನಲ್ಲೂ ಕ್ರಿಸ್ಮಸ್ ಆಚರಣೆ ಇತ್ತು. ಹಾಗಾಗಿ ಒಂದೆರಡು ದಿನದಿಂದ ಸಾಂತಾಕ್ಲಾಸ್ ಬಗ್ಗೆಯೇ ಮಾತು ಕತೆ ಮತ್ತು ಜಿಂಗಲ್ ಬೆಲ್ ಹಾಡು. ನಿನ್ನೆ ಭಕ್ತಿಪೂರ್ವಕವಾಗಿ ಅವಳು ಒಂದು ಹೊಸಾ ಕ್ರೇಯಾನ್ ಸೆಟ್ಟು ಬೇಡಿಕೊಂಡೂ ಆಯಿತು. ನಾವಿಬ್ಬರೂ ಮೇಲಿಂದ ಮೇಲೆ ಒಳ್ಳೆಯ ನಡವಳಿಕೆಯ ಮಕ್ಕಳಿಗೆ ಕ್ರಿಸ್ಮಸ್ ತಾತ ಉಡುಗೊರೆ ಕೊಟ್ಟೇ ಕೊಡ್ತಾನೆ ಅಂತ ಹೇಳಿ ನಿನ್ನೆಯ ಭಾನುವಾರವನ್ನು ಮ್ಯಾನೇಜ್ ಮಾಡಿದ್ದೇನೋ ಹೌದು. ಕೊನೆಗೆ ಇವತ್ತು ಬೆಳಿಗ್ಗೆ ಅವಳು ಏಳುವಾಗ ನೋಡುತ್ತಾಳೆ ಚೆಂದದ ಹೊಳೆಯುವ ಗಿಫ್ಟ್ ಚೀಲದಲ್ಲಿ ಒಂದು ಹೊಸಾಥರದ ಕ್ರೇಯಾನ್ ಪೆನ್ ಸೆಟ್ಟಿದೆ!. ಕವರಿನ ಮೇಲೆ ಮೆರ್ರಿ ಕ್ರಿಸ್ಮಸ್ ಎಂದು ಕೂಗುತ್ತಿರುವ ಬಿಳಿಗಡ್ಡದ ಸಾಂತಾ!! ಅವಳ ಖುಶಿಯನ್ನ ಬರೆಯಲು ನನ್ನ ಕೈಸೋತಿದೆ. ಅವಳು ನಿದ್ದೆಯಲ್ಲಿದ್ದಾಗಲೇ ಬೆಳಿಗ್ಗೆಯೇ ಅವನು ಇಡ್ತಾನೆ ಎಂಬ ನಿರೀಕ್ಷೆ ನಿಜವಾಗಿ ಸಕತ್ ಥ್ರಿಲ್ಲಾಗಿಬಿಟ್ಟಿತ್ತು. ಆದರೂ ಒಂದು ಅನುಮಾನವಿತ್ತು. ಪಕ್ಕದಲ್ಲಿದ್ದ ಅಪ್ಪನಿಗೆ ಹೇಳಿದಳೂ. ಅಪ್ಪಾ ಸಾಂತಾ ಕೊಟ್ಟಿರುವ ಕ್ರೇಯಾನ್ಸ್, ಅವತ್ತು ಪ್ರತ್ಯೂಷಿ ನನ್ ಹ್ಯಾಪಿ ಬರ್ಥ್ ಡೇಗೆ ಕೊಟ್ಟಿದ್ನಲ್ಲಾ ಆ ಕ್ರೇಯಾನ್ಸ್ ಥರಾನೇ ಇದೆ ಅಲ್ವಾ ಅಂತ. :) ಆ ಕ್ರೇಯಾನ್ಸ್ ನಿಂಗೆ ತುಂಬ ಇಷ್ಟ ಆಗಿತ್ತಲ್ವಾ ಅದ್ಕೇ ಅದೇ ತರದ್ದು ಕೊಟ್ಟಿದಾನೆ ಅಂತ ಹೇಳಿ ಅಪ್ಪ ಬಚಾವಾಗಿದ್ದಾನೆ. ಮಗಳು ಆ ಸೆಟ್ಟಲ್ಲಿರುವ ಎಲ್ಲ ಬಣ್ಣಗಳನ್ನೂ ಹೆಸರಿಸುತ್ತಾ ಕ್ರಿಸ್ ಮಸ್ ರಜೆ ಕಳೆಯಲಿದ್ದಾಳೆ. ಆ ಕ್ರೇಯಾನ್ಸ್ ಎಲ್ಲ ಖಾಲಿ ಮಾಡಕ್ಕೆ ಅಂತ ಒಂದು ಕಲರಿಂಗ್ ಬುಕ್ ಬೇರೆ ಇದೆ. ಮುಂದಿನ ಕತೆ ಮುಂದಿನ ವರ್ಷ. ಅಲ್ಲೀವರೆಗೂ ತುಂಬ ಕೆಲ್ಸ ಇದೆ. ಕಲರಿಂಗ್ ಅಂದ್ರೆ ಸುಮ್ನೇನಾ?

ಸೃಷ್ಟಿ ಶುಭದಾಯಿನಿಗೆ ಈ ನವೆಂಬರ್ ಕೊನೆಯಲ್ಲಿ ಮೂರ್ವರ್ಷ ತುಂಬಿತು.
ನಾಳೆಯಿಂದ ನಿಂಗೆ ಮೂರ್ ವರ್ಷ ಅಂತಂದೆ ನಾನು ಹಿಂದಿನ ದಿನ. "ಆವಾಗ ನೀನೇನಾಗಿರ್ತೀಯಾ" ಮುದ್ದಾದ ಮಾತಿನ ಬಾಣ ತೂರಿಬಂತು.
ಸ್ವಚ್ಛ ಕಣ್ಣುಗಳ ತಿಳಿಗೊಳದಲ್ಲಿ ಬೀಳದೆ ಉತ್ತರಿಸಲು ಸಾಧ್ಯವೇ?
ಪ್ರಶ್ನೆಯ ಕಡಲು ಬತ್ತುವುದೇ ಇಲ್ಲ. ಉತ್ತರದ ನದಿ ಸಣ್ಣಗೆ ಸೊರಗಿದರೂ ಹರಿದು ತುಂಬುತ್ತಿರುತ್ತದೆ. ಎಷ್ಟೇ ಉತ್ತರ ಹೇಳಿದರೂ ಕೊನೆ ಕೊನೆಯ ಪ್ರಶ್ನೆ ಬರುವಾಗ ಬೇಸಿಗೆಯಾಗಿ ಉತ್ತರವಿಲ್ಲದೆ ನಿಲ್ಲಬೇಕಾದ ಸಂಭವವೇ ಜಾಸ್ತಿ. ಅದಕ್ಕೇ ಅವಳು ನನ್ನ "ಲಾಜವಾಬ್" ಮಗಳು!

Monday, December 19, 2011

ಸ್ವಪ್ನ ವಾಸ್ತವ ದತ್ತ...!

ತಡೆಹಿಡಿದಿಟ್ಟವು ಕೆಲವು
ಕಾಣದಂತೆ ಒರೆಸಿದವು ಹಲವು
ಮೂಡುವುದಕ್ಕೂ ಮೊದಲೆ
ಅವಡುಗಚ್ಚಿದ ಹೊಡೆತಕ್ಕೆ
ಕರಗಿಹೋದವು ಕೆಲವು
ಹರಿದು ಹೋಗಲೆಂದೇ ಸುರಿದ ಅಬ್ಬಿಯೇ ಬೇರೆ
ಅವ ಒರೆಸಿದ್ದೊಂದಷ್ಟು
ಎಲ್ಲರ ನೇವರಿಕೆಯಲ್ಲಿ ಒಣಗಿದವೊಂದಷ್ಟು
ಹೀಗೆ ಹಾಗೆ
ನನ್ನೊಳಗೆ ಹೊರಗೆ
ಸುಳಿದ ಸುಳಿವ ಹನಿಗಳನ್ನೆಲ್ಲ
ಅಕ್ಷರವಾಗಿಸಿದರೆ
ಅರೆ..!
ಕವಿತೆ
ಅರೆಗವಿತೆ?!!

------------------------
ಬನಿಯು ಹನಿವ
ಸಾಲುಗಳಲಿ
ಮೆತ್ತಗೆ ತೂರುವ ಬೆಳಕಬಲೆ
ಅಲ್ಲಿ ಒಳಗೆ
ಮೋಡ ಮುಸುಕಿದ
ಮನದಂಗಳದಲಿ
ಚೂರು ಬಗ್ಗಿಸಿ ಹರಿಯಿಸಿದರೆ
ಸಾಕು ಮಳೆಬಿಲ್ಲು!
ನೋಡನೋಡುತಲೆ ಕಳೆವ ದಿನದ
ಕೊನೆಗೆ ರಾತ್ರಿ
ಕತ್ತಲೆ ಅಲ್ಲು ಇಲ್ಲು ಎಲ್ಲು.
ಮಳೆಸುರಿದ ಇರುಳು ಕಳೆದು
ಬೆಳ್ಳಗೆ ಹೊಳೆದ ಬೆಳಗಿನ
ನೀಲಿಬಟ್ಟಲ ತುಂಬ ಮೊಸರು ಮೊಸರು ಮೋಡ,
ದಾರಿಯಿಡೀ ತುಂಬಿದ ಉದುರೆಲೆಗಳ
ಮೆಟ್ಟುತ್ತ ಮೇಲೆ ನೋಡಾ
ಹನಿಯಿಳಿವ ಎಲೆಗಳ ಹಿನ್ನೆಲೆಗೆ
ಘಮಗುಡುವ ಹೂಗೊಂಚಲು
ತೆಳುಪರಿಮಳವಿದು ಉಕ್ಕಿಸುವ
ಭಾವೋತ್ಕರ್ಷವದು ಗಾಢ!
--------------------------------
ಹಾವು ಹರಿದಂತೆ ಸರಿವ ದಾರಿ
ಕಾಡ ಸೆರಗಿನ ಹುಲ್ಲುಹಾವಸೆ
ಮುಳ್ಳು ಚುಚ್ಚದ ಹಾಗೆ
ಬದಿಯಲ್ಲಿ ಬೀಳದ ಹಾಗೆ
ಎಚ್ಚರದಿ
ಗಮಿಸುವ ಕನಸಿನೊಳಗಣ ಹಾದಿ
ಅವರು ಇವರು ಎಲ್ಲರೂ
ಜೊತೆಜೊತೆಗೆ ಸಾಗಿ
ಇಳಿದ ನೆಲೆಯ ಹೆಸರು ನೋಡದೆ
ವಿದಾಯದಲ್ಲಿ ನಗುವ ಹಂಚಿ
ಮುಂದೆ ಸಾಗುವ
ಲಗ್ಗೇಜು ಇರದ ಹಾದಿ
ಎಚ್ಚರದ ಹೆಜ್ಜೆ ಬೇಡುವ
ಕನಸಿನ ಹಾದಿ.
ಸ್ವಪ್ನಂ ಶರಣಂ ಗಚ್ಛಾಮಿ!

Thursday, November 10, 2011

ಪುರಸತ್ ಕೇ ರಾತ್ ದಿನ್

ಹೀಗೊಂದು ಪುರಸೊತ್ತಿನ ಕ್ಷಣದಲ್ಲಿ ಅಕ್ಷರಕ್ಕೆ ಹರಿದ ಲಹರಿ.

"ದಿಲ್ ಡೂಂಢ್ ತಾ ಹೈ ಫಿರ್ ವೊಹೀ ಪುರಸತ್ ಕೇ ರಾತ್ ದಿನ್.. "ಅಂತ ಶೀರ್ಷಿಕೆ ಕೊಟ್ಟು ಬರೆದ ಕಾಲಂ ಒಂದನ್ನು ಓದುತ್ತಿದ್ದ ದಿನಗಳಲ್ಲಿ ಆ ಇಡೀ ಸಾಲಿನ ಅರ್ಥವೇ ಹೊಳೆದಿರಲಿಲ್ಲ. ಆ ಹಾಡನ್ನು ಕೇಳಿರಲಿಲ್ಲ. ಆದರೆ ಆ ಲೇಖನವಿಡೀ ಹಾಡಿನ ಅಂತರಾಳವಿತ್ತು. ಮತ್ತು ಅದು ಸುಮ್ ಸುಮ್ನೇ ನಂಗೆ ಇಷ್ಟವಾಗಿಬಿಟ್ಟಿತು.
ನಮ್ಮ ಕರ್ನಾಟಕದ ಎತ್ತರದ ಗಿರಿಯ ಶಿಖರದಲ್ಲಿ ಕಳೆದ ಒಂದು ಸಂಜೆ ನನ್ನ ವಾಕ್ ಮನ್ನಲ್ಲಿ ಆ ಹಾಡು ಪೂರ್ತಿಯಾಗಿ ಕಿವಿಗಿಳಿಯಿತು. ಹತ್ತಿದ ಸುಸ್ತನ್ನು ಅಳಿಸಿ ಮನಸ್ಸನ್ನ ಹೊಸದೇ ಒಂದು ಭಾವೋದ್ದೀಪ್ತ ಮಜಲಿಗೊಯ್ದು ನಿಲ್ಲಿಸಿತು. ಆ ಎತ್ತರ ಬಾನೆತ್ತರದಲ್ಲಿ ನನ್ನ ಕಾಲು,ಹಿಂಬದಿಗಳು ಮಾತ್ರ ನೆಲಕ್ಕಂಟಿದ್ದವು. ಮನ ಮುಗಿಲ ಅಂಚುಗಳಲ್ಲಿ ಸುತ್ತುತ್ತಿತ್ತು.
ಹಾಡಿದವರು ಭೂಪಿಂದರ್ ಮತ್ತು ಬರೆದವರು ಗುಲ್ಜಾರ್ ಎಂಬ ವಿಷಯ ತಿಳಿಯಿತು. ಅವತ್ತು ಸಂಜೆ ಇರುಳುಗೆಂಪಲ್ಲಿ ಹರಿದ ಇಂಪು, ರಾತ್ರಿ ನಕ್ಷತ್ರಗಳು ಮಿಂಚುವಾಗಲೂ ಹರಿಯುತ್ತಲೇ ಇತ್ತು. ನಡುರಾತ್ರಿ ಕಳೆದು ಇಬ್ಬನಿತಂಪು ನಮ್ಮ ಟೆಂಟಲ್ಲಿ ಹನಿಯುವವರೆಗೂ ಹಾಡುತ್ತಿದ್ದ ವಾಕ್ ಮನ್ ಶೆಲ್ ಖಾಲಿಯಾಗಿ ನಿಲ್ಲುವವರೆಗೂ! ಬೆಳಿಗ್ಗೆ ಎದ್ದ ಕೂಡಲೆ ಪುರಸೊತ್ತಿನ ರಾತ್ರಿ ಮುಗಿದು ರಾಶಿ ರಾಶಿ ಮುಗಿಲುಗಳ ಹಿಂಡು ನಮ್ಮ ಶಿಖರವನ್ನು ಮುತ್ತಿದ ಚಟುವಟಿಕೆಯ ಬೆಳಗು ಹರಿಯಿತು! ಆಮೇಲೆ ಹಲವು ರಾತ್ರಿಗಳ ದೀಪವಾರಿದ ನಂತರದ ಅಳಲಿನ ಗಳಿಗೆಗಳಲ್ಲಿ ಸಾಥಿ ಕೊಟ್ಟ ಹಾಡು, ಗಡಿಬಿಡಿಯ ಗಳಿಕೆಯ ದಿನಗಳಲ್ಲಿ ನನ್ನ ಬಿಝಿ ಶೆಡ್ಯೂಲು ನೋಡಿ ವಾರ್ಡ್ ರೋಬಿನ, ಕೆಳ ಅಂಚಿನ ಡ್ರಾದಲ್ಲಿ ಹಳೆಯ ಕ್ಯಾಸೆಟ್ಟುಗಳ ಒಳಗೇ ಉಳಿಯಿತು.
ಇವತ್ತು ಇನ್ನೇನೋ ಹಳೆಯದರ ನೆನಪಿನ ದೀಪ ಹಚ್ಚಿಟ್ಟುಕೊಂಡು, ಕಳೆದ ದಿನಗಳ ಇರುಳುಗತ್ತಲೆಯ ಗೋಡೌನಿನಲ್ಲಿ ಅಲೆದಾಟ. ಅಲ್ಲಿ ಜಗಜೀತರ ದನಿ ತುಮ್ ಕೋ ದೇಖಾ ತೋ.. ಅಂತ ನಸುನಗುತ್ತಾ ಫುರ್ ಸತ್ ಕೇ ರಾತ್ ದಿನ್ ನೆನಪು ಮಾಡಿಕೊಡುತ್ತಿದೆ. ಅಷ್ಟೆಯೇ ಆ ಪುರಸೊತ್ತಲ್ಲಿ ಏನೇನು ಮಾಡಬಹುದು ಅಂದುಕೊಂಡೇ ರೋಮಾಂಚಿತಳು ನಾನು. ಮಾಡಿದೆನಾ ಅಂತ ಕೇಳಬೇಡಿ. ಅಕಸ್ಮಾತ್ ಕೇಳಿದರೆ ಹೇಳಲಿಕ್ಕೆ ಸಮಯವಿಲ್ಲ. :)
ಥೋಡೀ ಸೀ ಜಮೀ ಥೋಡಾ ಆಸ್ ಮಾ ದ ಟ್ಯೂನು ಸರಿಯಾಗುವುದು ೩೦*೪೦ ಚಿಕ್ಕ ಮನೆಯೋ ಅಥವಾ ಅಪಾರ್ಟ್ ಮೆಂಟೂ ನಡೆಯುತ್ತೋ ಅಂತ ಗೊಂದಲಗೊಳ್ಳುತ್ತೇನೆ ನಾನು. ಅರಳು ಹುರಿದ ಹಾಗೆ ಮಾತನಾಡದಿದ್ದರೂ ಹುರಿದ ಅರಳನ್ನು ತಿನ್ನುತ್ತ ಮಾತನಾಡಿ ಕಳೆಯುವ ನಮ್ಮ ವೀಕೆಂಡಿನ ಸಂಜೆಗಳಲ್ಲಿ ಕಾಗೆ ಹಾರಿಸುವ ಅವಶ್ಯಕತೆ ಇಲ್ಲ. ಅವೆಲ್ಲ ಗೂಡು ಸೇರಿದ ಮೇಲೆಯೇ ನಾವು ಹೊರಗೆ ಬರುವುದು.

ಈ ಹಾಡು ನೀವು ಕೇಳಿರದೆ ಇದ್ದರೆ ಇಲ್ಲಿವರೆಗೂ.. ಈಗ ಕೇಳಿ.

http://www.muzigle.com/track/thodi-si-zamin-thoda-aasman
ನಂಗೆ ತುಂಬ ಇಷ್ಟ ಆದ ಈ ಹಾಡಿನ ಸಾಹಿತ್ಯ ಗುಲ್ಜಾರ್ ಅವರದ್ದು.
ಇದೊಂದು ಡ್ಯುಯೆಟ್ - ಭೂಪಿಂದರ್ ಮತ್ತು ಲತಾ ಅವರ ಧ್ವನಿ. ಆರ್‍.ಡಿ ಬರ್ಮನ್ ಅವರ ಸಂಗೀತ.

ಇವಳು: ಥೋಡಿ ಸಿ ಝಮೀ.. ಥೋಡಾ ಆಸ್.ಮಾ
ಅವನು: ತಿನ್ ಕೋಂ ಕಾ ಬಸ್ ಇಕ್ ಆಶಿಯಾಂ
ಇವಳು: ಮಾಂಗಾ ಹೈ ಜೋ ತುಮ್ ಸೆ ವೋ ಜ್ಯಾದಾ ತೊ ನಹೀಂ ಹೈ
ಅವನು: ದೇನೆ ಕೋ ತೊ ಜಾನ್ ದೇ ದೇ ವಾದಾ ತೋ ನಹೀ ಹೈ
ಇವಳು: ಕೋಯೀ ತೇರೆ ವಾದೋಂ ಪೇ ಜೀತಾ ಹೈ ಕಹಾಂ..
ಅವನು:ಮೇರೇ ಘರ್ ಕೇ ಆಂಗನ್ ಮೇ ಚೋಟಾ ಸಾ ಝೂಲಾ ಹೋ
ಇವಳು:ಸೌಂಧೀ ಸೌಂಧೀ ಮಿಟ್ಟೀ ಹೋಗೀ ಲೇಪಾ ಹುವಾ ಚೂಲಾ ಹೊ
ಅವನು: ಥೋಡೀ ಥೋಡೀ ಆಗ್ ಹೋಗೀ.. ಥೋಡಾ ಸಾ ಧುವಾಂ
ಅವನು: ರಾತ್ ಕಟ್ ಜಾಯೇಗೀ ತೋ ದಿನ್ ಕೈಸೇ ಬಿತಾಯೇಂಗೇ
ಇವಳು: ಬಾಜರೇ ಕಿ ಖೇತೋಂ ಮೇ ಕವ್ವೇ ಉಡಾಯೇಂಗೇ
ಅವನು: ಬಾಜರೇ ಕಿ ಸಿಟ್ಟೋಂ ಜೈಸೀ ದೇತೀ ಹೋ ಜವಾಂ (ಜವಾಬ್)

ಯಾಕೋ ಈ ಕ್ಯಾಸೆಟ್ಟಿನಲ್ಲಿದ್ದ ಇಂಡೆಕ್ಸಿನ ಯಾವ ಹಾಡು ಕೇಳಿದರೂ ಮನಸ್ಸು ಮೋಡಕಟ್ಟುತ್ತದೆ. ಮಳೆಬರುವ ಸೂಚನೆ ಕಂಡ ಅವನು ಬೇಗನೆ ಕೊಡೆ ಸೂಡಿಕೊಂಡು ಒಂದು ಸಣ್ಣ ನಗೆಯೊಂದಿಗೆ ಹೊರಟುಬಿಡುತ್ತಾನೆ. ನಾನು ಒದ್ದೆ ಒಳಗೆ ಹೊರಗೆ ಗರಿ ಗರಿ ಇಸ್ತ್ರಿ ಬಟ್ಟೆ. ಪುಕ್ಕ ಕಿತ್ತ ಗರಿ.
ಯಾರಿಗೆ ತಾನೆ ಬೆಳಕು ಹರಿಯುವವರೆಗೆ..ರಾತ್ರಿ ಇಡೀ ಕೆಲಸಕ್ಕೆ ಬಾರದ ಮಾತನಾಡುತ್ತಾ ಸುಳ್ಳೆ ಸುಳ್ಳೆ ಆಕಾಶದ ಚುಕ್ಕಿ ಎಣಿಸುತ್ತಾ ಒಬ್ಬರಿಗಿನ್ನೊಬ್ಬರು ಆತು ಕೂತು, ಬೆಳಗಾದ ಕೂಡಲೆ ಹೊಲಕ್ಕೆ ಕಾಳು ತಿನ್ನಲು ಬಂದ ಹಕ್ಕಿಗಳನ್ನು ಹಾರಿಸುವ ಕೆಲಸದಲ್ಲಿ ಕಳೆದುಹೋಗಲು ಇಷ್ಟವಾಗುವುದಿಲ್ಲ? ಅದರಲ್ಲೂ ಜೋಳದ ಕಾಳು ಹುರಿದು ಅರಳಾಗುವ ಹಾಗೆ ಮಾತನಾಡುವವಳಿಗೆ!
ಏನೋ ಇಲ್ಲಿ ಕ್ಯೂಬಲ್ಲಿ ಏಸಿ ಆಫೀಸಿನಲ್ಲಿ ಹೊರಗಿನ ಗಾಳಿಯೇ ಬೀಸುವುದಿಲ್ಲ.. ಕಾಳು ತಿನ್ನುವ ಹಕ್ಕಿಯೆಲ್ಲಿ ಹುಡುಕಲಿ?


ಏನೇ ನೀನು ಅಂಗಳ ಇಲ್ದೇ ಇದ್ರೂ ಜಗಲಿಗೇ ಕಟ್ಟಿದೀನಲ್ಲ ಜೋಕಾಲಿನ. ಇಷ್ಟು ದಪ್ಪ ಆಗಿ ನನ್ನ ಹತ್ರ ತೂಗು ಅಂದ್ರೆ ಆಗಲ್ಲ ಅಂತೀನಷ್ಟೆ ಅನ್ನುವ ಬದಲು ಅವನು ಜಾಣ, ಮಾತಿರದೆ ನಗು ಸೂಸಿ ಜೋಕಾಲಿಯನ್ನೊಮ್ಮೆ ನನ್ನನ್ನೊಮ್ಮೆ ನೋಡಿ ನಮ್ಮ ಮುದ್ದುರಾಕ್ಷಸಿಯನ್ನ ಎತ್ತಿಕೊಂಡು ಜೋಲಿಯಲ್ಲಿಟ್ಟು ತೂಗುತ್ತಾನೆ. "ಯಹಾಂ ಏಕ್ ಶೆಹಜಾದೀ ಸೋಯೀ ಹುಯೀ ಹೈ...ಎಂಬ ಸೊಲ್ಲು ಚೂರು ಪಾರು ಕೇಳ್ತಾ ಇದೆ.
ಅವಳು ಎದ್ದ ಮೇಲೆ ಹಾಡುತ್ತಾಳೆ. ಏಕ್ ಫರಿಂದಾ ಹೋ ಶರ್ಮಿಂದಾ..ಆವೋ ಜಂಗಲ್...ಸೋಚ್ ರಹಾ ಹೈ ಬಾಹರ್ ಆಕೆ ಕ್ಯೂಂ ನಿಕಲಾ ಹೈ....
ಓಹ್ ಇರಿ. ಅವಳು ಏಳುವುದಕ್ಕೆ ಮೊದಲು ನನ್ನ ಕೆಲಸ ಮುಗಿಸಬೇಕು. ಮತ್ತೆ ನಾಳೆ ಸಿಗೋಣ.

Thursday, October 20, 2011

ಎರಡು ತುದಿಗಳ ನಡುವಣಚ್ಚರಿಯ ಬದುಕು!

ಅಳುಕು -
ಮೀರುವ ಕ್ರಿಯೆಯಲ್ಲಿ ಅಳಿಯುವೆನೇನೋ ಎಂದು;
ಹೊಳಪು -
ಮಡಿಲು ತುಂಬಿದ ಗುಲಾಬಿಕಾಲ್ಗಳ ಸೊಬಗು ಕಂಡು;
ಸಿಡುಕು -
ನೀನು ನಿದ್ದೆ ಕೆಡಿಸುತ್ತೀ ಅಂತ;
ಕಿರಿನಗು-
ನಿನ್ನ ಬೇಡಿಕೆ ತುಂಬಿದ ಕೆನ್ನೆಕಂಗಳ ನೋಡಿ;
ಅಸಹನೆ -
ಇನ್ನೇನು ತುತ್ತಿಡುವಷ್ಟರಲ್ಲಿ ಚಡ್ಡಿ ಬಿಚ್ಚುತ್ತೀ ಕಕ್ಕ ಬಂತು;
ಮಂತ್ರಮುಗ್ಧೆ -
ಕುತ್ತಿಗೆಯ ಬಳಸಿ ಕೆನ್ನೆಗೆ ಮೆತ್ತನೆ ಕೆನ್ನೆ ತೀಡುವಾಗ;
ಗೊಣಗು -
ಊಟದ ತಟ್ಟೆ ಹಿಡಿದು ಮನೆಯಿಡೀ ಸುತ್ತುವಾಗ;
ಬೆರಗು -
ಬೇಸರ ಬಂದು ಗಬ್ಬೆದ್ದ ದಿನದ ರುಟೀನಲ್ಲಿ ನಿನ್ನ ಹೊಸತನದ ಬನಿ ಬನಿ ಇಳಿವಾಗ;
ಅನಿಸುತ್ತೆ ಟುಪ್ಪೂ..
ಇದಕ್ಕೆ ಇರಬಹುದೆ ಕತೆ ಕವಿತೆ ಗೀತ ಗೋವಿಂದ-
-ಗಳಲ್ಲಿ ಉಲಿದಿದ್ದು
"ಮಣ್ಣುತಿಂದ ಬಾಯ ಬಿಡಿಸೆ
ಅಮ್ಮನೆದುರು ಜಗವೆ ಹರಡಿ
ಮೂಡಿದುದು ಅಚ್ಚರಿ
ತಾಯ್ತನದ ವೈಖರಿ !
ಅವಳ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗು ಮಣ್ಣು ತಿನ್ನದೆ -
ಅಮ್ಮ ಪೆಟ್ಟು ಕೊಡದೆ-
ಬಾಯಿ ಬಿಡದೆ-
ಅದರಲ್ಲಿಣುಕದೆ-
ಅಮ್ಮನ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗಳ ಹೊರತು ತೋರಬಹುದು ಯಾರಾದರೂ ಹೇಗೆ?

Wednesday, October 12, 2011

'ಹೊಸ'ಬಗೆ!

ಸುಳಿದು ನಿನ್ನ ನೆನಪು
ಕತ್ತಲ ಮನದಂಗಳದ ತುಂಬ ದೀಪದ ಬೆಳಕು
ಸುತ್ತ ಚಳಿಯ ಸಂಜೆ
ಕಾಲು ಚಾಚಿ ಒಲೆಯ ಮುಂದೆ
ನಿನ್ನ ನೆನಪಿನ ಕಾವು
ಅಕಾಲದ ಸಂಜೆ ಮಳೆಗೆ ನೆಂದ ರಸ್ತೆ
ಎದೆಯಲ್ಲಿ
ಮೇಲೇಳುವ
ಬೆಚ್ಚನೆ ಸ್ಪರ್ಶದ ಸ್ಮ್ರತಿಯ ಹಬೆ
ಒಂದು ಮಾತಿನ ಮೊದಲ ಪದ ಮಾತ್ರ ನಿನ್ನದು
ದನಿಯಾಗದೆ ಉಳಿದ ವಾಕ್ಯ
ನನಗೆ ಕೇಳಿದ್ದು ಹೇಗೆ,
ನಾನು ಹೇಳಲು ಬಾಯಿ ತೆರೆದದ್ದನ್ನ
ನೀನು ಆಡಿದ ಹಾಗೆ,
ಆಡದೆಯೆ ಉಳಿದೂ ಎಲ್ಲ ಅಂತರ್ಗತವಾದ ನಗೆ,
ಆ ನಗೆಬಿಂಬದ ಬೆಳದಿಂಗಳ ಬೆನ್ನಿಗೆ
ಕಡುಗಪ್ಪು ಆಕಾಶದ ಬಗೆ,
ಬಗೆಯಲು ಹೆದರಿಕೆ ನನಗೆ
ಉಳಿಯದೆ ಆಡಿದ ಮಾತು
ಆಡಬಾರದ್ದೇ ಅಂತಲೂ ಗೊತ್ತು ನಿನಗೆ.
ಇದು 'ಹೊಸ'ಬಗೆ!

Tuesday, October 11, 2011

ಜಿಸೇ ಹಮ್ ಗುನ್ ಗುನಾ ನಹೀ ಸಕ್ ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ..

{ನನ್ನ ಕುದಿವ ಭಾವಸರಸ್ಸಲ್ಲಿ ಕಾಗದದ ದೋಣಿ ತೇಲಿಬಿಟ್ಟು ಒಳಗುದಿಯನ್ನು ಸಹ್ಯವಾಗಿಸಿದ ದನಿಸಿರಿಯ ನೆನಪಲ್ಲಿ ಒಂದು ಬ್ಲಾಗ್ದೋಣಿ.. }

ಬೇಸರಾಗಿತ್ತು ಪಯಣ. ಜೊತೆಹಾದಿ. ಪ್ರಾಪಂಚಿಕತೆಯ ಓವರ್ ಡೋಸ್ ನಿಂದಾಗಿ ರೋಗಗ್ರಸ್ತ ಮನಸ್ಸು. ಎದೆಯಿಂದ ಎದೆಗೆ, ಮೋಡದಿಂದ ಮೋಡಕ್ಕೆ, ಮನೆಯಿಂದ ಮನೆಗೆ, ದಾರಿಯಿಂದ ದಾರಿಗೆ ಯಾವುದೂ ಬೇಕಿರದೆ ಬೇಕಾರಾಗಿ ಅಲೆದ ದಿನಗಳು. ಹಿರಿಯ ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತ ಕೂತಿದ್ದೆ. ನನ್ನನ್ನು ಗಝಲ್ ಲೋಕಕ್ಕೆ ಪರಿಚಯಿಸಿದ ಆ ಜೀವಕ್ಕೆ ಎಂದಿಗೂ ಋಣಿ ನಾನು. ನಮ್ಮಿಬ್ಬರ ನಡುವೆ ಏನೆಲ್ಲ ನಡೆದು ಯಾವೆಲ್ಲ ನೀರು ಹರಿದಿದೆ. ಇಬ್ಬರಲ್ಲೂ ಒಮ್ಮತ ಮೂಡದೆ ನಮ್ಮ ದಾರಿ ನಾವು ಹಿಡಿದು ಜೊತೆ ಹಿಡಿಸದೆ ನಡೆದಾಗಿದೆ. ಆದರೆ ಎರಡು ವಿಷಯಕ್ಕೆ ನಾನವರಿಗೆ ಚಿರಋಣಿ.
ಒಂದು : ಜೋಕೊಂದರಿಂದ ನನ್ನ ಅನಿಶ್ಚಯತೆಯನ್ನ ನೀಗಿಸಿ.ಹೊಸ ದಾರಿ ಹುಡುಕಿದವಳಿಗೆ ಬಯಲ ದಿಕ್ಕು ತೋರಿದ್ದಕ್ಕೆ. ಮತ್ತು ಪ್ರಾಮಾಣಿಕ ಸಾಥ್ ನೀಡಿದ್ದಕ್ಕೆ.
ಇನ್ನೊಂದು: ನನ್ನ ತಲ್ಲಣದ ದಿನಗಳಲ್ಲಿ ಈ ಗಝಲ್ ಮೋಡಿಗೆ ನನ್ನ ಸಿಲುಕಿಸಿ ತೇಲಿಬಿಟ್ಟಿದ್ದಕ್ಕೆ. ನನ್ನ ಭಾವಜಗತ್ತಿನ ವಿಸ್ತರಣೆಯಾಗಿ ಸೇರಿದ ಈ ಗಝಲ್ಲುಗಳು ನನಗೆ ಒಬ್ಬಳೆ ಕೂತು ಅಳುವುದಕ್ಕೆ ಸಿಕ್ಕ ಮಂದಬೆಳಕಿನ ದಿವ್ಯಮೂಲೆಯಂತೆ ಭಾಸವಾಗುತ್ತದೆ.
ಇದೆಲ್ಲ ಇರಲಿ ಅವತ್ತೊಂದಿನ ನನ್ನ ಸೆಳೆದ ಆ ಮೋಡಿಮಾಡಿದ ಹಾಡಿನ ಮೊದಲ ಸಾಲುಗಳು ಅರ್ಥವಿರಲಿ, ಪುನರುಕ್ತಿ ಮಾಡಲೂ ಗೊತ್ತಾಗಲಿಲ್ಲ. ಕೊನೆಯ ಸಾಲು ವೋ ಕಾಗಝ್ ಕೀ ಕಶ್ತೀ ವೋ ಬಾರಿಶ್ ಕಾ ಪಾನೀ.. ಕಾಗಝ್ ಅಂತಿದ್ದರೆ ಮುಂದಿನ ಪದ ದೋಣಿಯಿರಬಹುದು, ಅಲ್ದೆ ಮುಂದಿನ ಸಾಲಲ್ಲಿ ಮಳೆ ಮತ್ತು ನೀರಿದೆ ಅಂದುಕೊಂಡು ಮತ್ತೆ ಅವರಲ್ಲಿ ವಿನಂತಿಸಿಕೊಂಡು ಇಡೀ ಹಾಡು ರಿವೈಂಡ್ ಮಾಡಿ ಕೇಳಿದೆ. ಕ್ಯಾಸೆಟ್ಟು ಇಸಕೊಂಡು ಹೋಗಿ ಪ್ರತೀ ಸಾಲನ್ನೂ ರಿವೈಂಡ್ ಮಾಡುತ್ತಾ ಬರಕೊಂಡೆ. ಲೈಬ್ರರಿಗೆ ಹೋಗಿ ಉರ್ದು - ಇಂಗ್ಲಿಷ್ ಡಿಕ್ಶನರಿ ತೆಗೆದು ಎಲ್ಲ ಪದಗಳ ಅರ್ಥ ಬರಕೊಂಡೆ. ಮತ್ತೆ ಮನೆಗೆ ಬಂದು ಆ ಹಾಡನ್ನ ಕೇಳುತ್ತ ಕೂತೆ. ಹರೆಯದ ಹುಚ್ಚಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ ನನ್ನ ಬಾಲ್ಯ ಮನಸ್ಸಿನೊಳಗೆ ರಿವೈಂಡಾಗುತ್ತಿತ್ತು.
ಕಣ್ಣು ತೆರೆದೂ ಕನಸು ಕಾಣುವುದ ಕಲಿತೆ. ದಾರಿ ಸಾಗುತ್ತಲೇ ಕಳೆದು ಹೋಗುವುದ ಅರಿತೆ. ಅದನ್ನು ಹಾಡಿದವ ನಾನು ಕೇಳಿ ಅಳಲಿ, ತವಕಿಸುತ್ತ ಅಮ್ಮನೂರಿಗೆ ಓಡಲಿ, ತಮ್ಮನ ಜೊತೆ ಇನ್ನೊಂದು ಹೊಸಾ ರೌಂಡು ಅಂಗಳದಲ್ಲಿ ಆಟವಾಡಲಿ, ಇದೆಲ್ಲ ಮಾಡದೆ ಹೋದರೆ ನಾನು ಸತ್ತೇ ಹೋದೇನು ಅಂತ ನನಗೆ ಅನಿಸಿಬಿಡಲಿ ಅಂತಲೇ ಹಾಡಿದ್ದು ಅಂದುಕೊಂಡೆ. ಆ ಮೆಲಾಂಕಲಿಯನ್ನ ಕೇಳಿ ಥಕ್ಕಾಗಿ ಕೂತವಳು ಒಂದಿನ ಇನ್ನೊಂದಿಷ್ಟು ಕೇಳಲು ಎದ್ದೆ. ಅವನ ಮೆಲಾಂಕಲಿ ಮುಗಿವಲ್ಲಿ ಇನ್ನೊಬ್ಬ ಗಝಲ್ ಹಾಡುಗಾರನ ಭಾವಜಗತ್ತು. ಇಲ್ಲಿ ಕಳೆದು ಹೋದದ್ದ ಕುರಿತು ದುಃಖಿಸುವ ಹಂತ ಮುಗಿದು, ಕಳೆದುಕೊಳ್ಳಲಿಕ್ಕಾಗಿ ಅಂತಲೆ ದಕ್ಕಿಸಿಕೊಳ್ಳುವ, ಮುರಿದು ಬೀಳುತ್ತದೆ ಅಂತ ಗೊತ್ತಿದ್ದೇ ಕೈಗೆತ್ತಿಕೊಳ್ಳುವ, ನನ್ನದಲ್ಲದವನು ಅಂತಲೇ ಜಾಗ ಕೇಳುವ, ಹೂವು ಗಿಡದ್ದು ಸುಗಂಧ ಗಾಳಿಯದು, ನಾನು ಸುಳಿದಲ್ಲಿ ಸಿಕ್ಕ ಸುಗಂಧ ನನ್ನದು ಎಂಬ ಹೊಸ ಖಯಾಲಿನ ಲೋಕ ತೆರೆದಿತ್ತು. ಇವರೆಲ್ಲ ಯಾಕೆ ಇಷ್ಟು ಆರ್ತವಾಗಿ ಆರ್ದ್ರರಾಗಿ ಹಾಡಿ ಸುಮ್ಮನೆ ಒಣಗಿಕೊಂಡು ಮಿಡಿಯುವ ನಮ್ಮ ಹೃದಯದಲ್ಲಿ ಒರತೆ ಉಕ್ಕಿಸುತ್ತಾರೆ ಅಂತ ಅರ್ಥವಾಗದೆ ಹೋಯಿತು. ಅಷ್ಟರಲ್ಲಿ ಇನ್ನೊಂದು ಸ್ವತಂತ್ರ ಆತ್ಮದ ಕರೆ. ಅವಳನ್ನು ಸಮೀಪಿಸುವಾಗ ನನ್ನ ಸಾಹಿತ್ಯ ತಿಳಿದು ಕೇಳುವ ಹುಚ್ಚು ಬೆಪ್ಪಾಗಿ ಹೋಯಿತು. ಊಂ.... ಅಂತಲೆ ಹರಿವ ಅವಳ ರಾಗದ ಅಲೆಗೆ ನಾನು ದಿಕ್ಕು ದೆಸೆ ತಿಳಿಯದ ಹಾಗೆ ಕೊಚ್ಚಿಕೊಂಡು ಹೋದೆ. ಈ ಮೂವರೂ ನನ್ನ ಅತ್ಯಂತ ಖಾಸಗಿಕ್ಷಣವನ್ನ ಅಪರೋಕ್ಷವಾಗಿ ಹಂಚಿಕೊಂಡ ಆಪ್ತರು. ಯಾರಿಗೂ ಹೇಳದ್ದನ್ನ ಇವರೊಡನೆ ಹೇಳಿದ್ದೇನೆ. ಅವರು ಜಗತ್ತಿಗೆ ಹರಿಸಿದ ಹೊನಲು ನನಗಾಗೆ ಕೇವಲ ನನಗಾಗೆ ಹೇಳಿದ ಖಯಾಲುಗಳೆಂದು ಬಗೆದು ಅದರಿಂದ ಸಾಂತ್ವನ ಪಡೆದಿದ್ದೇನೆ. ಹೀಗೆ ಒಂದು ಗಾಯವನ್ನ ಕೊಳೆಸದೆ ಹಾಗೇ ರಂಗಾಗಿ ಇಡುವ ಮಾಂತ್ರಿಕ ಸ್ಪರ್ಶದ ಫ್ರೀಝರ್ ನ ಈ ಮೂರು ಖಾನೆಗಳ ಹೆಸರು ಜಗಜೀತ್, ಗುಲಾಂ ಅಲಿ ಮತ್ತು ಆಬಿದಾ ಪರ್ವಿನ್.
ನಿನ್ನೆ ಈ ಬದುಕಿನ ಕೊನೆಯ ಚರಣ ಮುಗಿಸಿ ಎದ್ದು ಹೋದ ಶ್ರೀ ಜಗಜೀತ್ ಸಿಂಗರ ನೆನಪಿನಲ್ಲಿ ಈ ಬರಹ.
ಗಝಲುಗಳನ್ನ ಅವುಗಳ ಸಾಂಪ್ರದಾಯಿಕ ಖಯಾಲುಗಳಿಂದ ಮುಕ್ತಗೊಳಿಸಿ, ಯಾರು ಬೇಕಾದರೂ ಹಾಡಬಹುದು ಅನ್ನಿಸುವಂತೆ ಆಪ್ತವಾಗಿ ಘಮಘಮಿಸುವಂತೆ ಹಾಡಿ, ಉರ್ದು ತಿಳಿಯದವರೂ ಗಝಲ್ ಕೇಳುವ ಹಾಗೆ ಮಾಡಿದ ಕೀರ್ತಿ ಜಗಜೀತರದ್ದು. ಅವರ ಧ್ವನಿಗೆ ಆಳವಿಲ್ಲ, ಹೊಸತನವಿಲ್ಲ, ಸಾಂಪ್ರದಾಯಿಕ ಘನತೆಯಿಲ್ಲ ಎಂಬಿತ್ಯಾದಿ ಹುಸಿಮಾತುಗಳಿಗೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಹಾಡುತ್ತ, ಸಂಗೀತ ಸಂಯೋಜಿಸುತ್ತ, ಹೊಸ ಹೊಸ ಪ್ರಯತ್ನ, ಮತ್ತು ಆಲ್ಬಂಗಳನ್ನು ತರುತ್ತ ಹೋದರು ಅವರು. ಹಾಡುಹಕ್ಕಿಯ ಕೇಳುವ ಕಿವಿಗಳು ಎಲ್ಲ ಕಡೆಯೂ ಇದ್ದವು. ಗಾಲಿಬ್ ಎಂಬ ಒಂದು ಅತ್ಯಪೂರ್ವ ರತ್ನವನ್ನ ರಾಷ್ಟ್ರೀಯ ಮಾಧ್ಯಮದಲ್ಲಿ ಧಾರಾವಾಹಿಯಾಗಿ ಎಳೆತಂದು ನಮ್ಮ ಪೀಳಿಗೆಗೆ ಹೊಸ ಆಪ್ತತೆಯನ್ನು ತೆರೆದುಕೊಟ್ಟದ್ದು ಅವರದ್ದೇ ಪ್ರಯತ್ನ. ಗಾಲಿಬ್ ನನ್ನ ದೊಡ್ಡ ವಿದ್ವಾಂಸರ ಸಭೆಯಲ್ಲಿ ಹಾಡಿಕೊಂಡು ಕೂರಬೇಕು ಎಂಬ ಮಿತಿಯ ಮೀರಿದ ಪ್ರಯತ್ನ. ಹೊಸ ದಿಕ್ಕುಗಳಿಗೆ ಬಾಗಿಲಿಲ್ಲ ಎಂದು ತೋರಿಸಿದ ಪ್ರಯತ್ನ ಅದು. "ಹಝಾರೋ ಖ್ವಾಯಿಷೇ ಐಸಿ ನಿಕಲೇ, ಹರ್ ಏಕ್ ಖ್ವಾಯಿಶ್ ಪೇ ದಂ ನಿಕಲೀ" ಎಂದು ಅವರು ನಿರ್ದೇಶಿಸಿದ ಗಾಲಿಬ್ ಹಾಡಿದ್ದು ನನಗಾಗೆ ಅಲ್ಲವೇ? ನಿದ್ದೆ ಬರದೆ ಕಾಡಿದ ರಾತ್ರಿಗಳ ಯುಗಾಂತ್ಯವಾಗುವುವರೆಗೂ ಸಾಥ್ ಕೊಟ್ಟ ಗಝಲುಗಳಲ್ಲಿ ಮೊದಮೊದಲ ಹಾಡುಗಳು ಅವರವೇ.. ಯಾರೋ ಹೇಳಿದ್ದು ನಿಜ. ಹೊಸಬರಿಗೆ ಗಝಲ್ ಎಂಟ್ರಿ ಪಾಯಿಂಟ್ ಜಗಜೀತ್ ಅಂತ. ಆ ಗಝಲ್ಲುಗಳ ಟೈಟಲ್ಲೇ ಅದು ಫಿಲ್ಮೀ ಗಝಲ್ಸ್! ಮತ್ತು ಆ ಫಿಲ್ಮೀ ಮೆಲಾಂಕಲಿ ಹಾಡುಗಳು ಒಮ್ಮೆ ಕೇಳಿದವರನ್ನ ಅಲ್ಲಿಗೆ ಬಿಡದೆ ಎಲ್ಲ ಗಝಲುಗಳ ಆಪ್ತಪಿಸುದನಿಯ ಪ್ರಪಂಚದಲ್ಲಿ ಆರ್ದ್ರಪಯಣಕ್ಕೆ ಹಚ್ಚಿಬಿಡುತ್ತಿದ್ದುದೂ ಹೌದು.
ತುಮ್ ಕೋ ದೇಖಾ ತೋ ಯೇ ಖಯಾಲ್ ಆಯಾ ಎಂಬ ಮಾತಿನ ರಮ್ಯತೆಯ ಮೋಡಿಯಲ್ಲಿ ಸೆಳೆಯುವ ಸಾಲಿನ ಬೆರಳು ಹಿಡಿದು ಹೊರಟರೆ ಅದು ನಮ್ಮನ್ನ ಕರೆದೊಯ್ದು ನಿಲ್ಲಿಸುವುದು ಜಿಸೇ ಹಮ್ ಗುನ್ ಗುನಾ ನಹೀ ಸಕ್ ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ.. ಎಂಬ ಗಾಯವನ್ನು ತೋರಲು! ಜುಖೀ ಜುಖೀ ಸೀ ನಝರ್... ಎಂಬ ಹಾಡು ಕಟ್ಟಿಕೊಡುವ ಬೇಕರಾರಿ ಇನ್ಯಾವ ಹಾಡಲ್ಲಿದೆ? ಅವಳು ಅವನೊಡನೆ ಕಳೆವ ಉತ್ಕಟ ಕ್ಷಣಗಳ ಉಲ್ಲಸಕ್ಕೆ ರೋಮಾಂಚಿತರಾಗುವ ಕ್ಷಣದಲ್ಲೇ, ಇವನ ಸಂಕಟಕ್ಕೆ ಹನಿಗಣ್ಣಾಗುವ ಕ್ಷಣವೂ ಈ ಹಾಡಲ್ಲೇ!
ಪ್ಯಾರ್ ಮುಜ್ ಸೇ ಜೋ ಕಿಯಾ ತುಮ್ ನೇ ತೋ ಕ್ಯಾ ಪಾವೋ ಗೀ...ಅಂತ ಸ್ವಮರುಕದಲ್ಲಿ ಬೇಯುವ ದನಿಗೆ ಹನಿಗಣ್ಣಾಗದ ಕಿವಿ ಇದ್ದೀತೇ?
ಕಲ್ ಚೌದ್ವೀಂ ಕಾ ರಾತ್ ಥೇ...ಅಂದ ಮೇಲೇ ನಿನ್ನ ಚರ್ಚೆಯಾಗದೆ ಹೇಗೆ ಸಾಧ್ಯ ಅಲ್ಲವೆ.. ಎಲ್ಲೆಲ್ಲಿ ಗಝಲ್ ಹಾಡು ಹಾಡುವರೋ ಅಲ್ಲಿ ನಿನ್ನ ನೆನಪಾಗದೆ ಹೋದೀತೇ?
ಇಶ್ಕ್ ಕೀಜಿಯೇ, ಫಿರ್ ಸಮಝಿಯೇ ಬೇಕುಧೀ ಕ್ಯಾ ಚೀಝ್ ಹೈ.. ಎಂಬ ಹಾಡಿನ ಸಾಲು ಕೇಳಿದವರು ಕೂಡಲೇ ಈ ಸಂಕಟಕ್ಕೇ ಹಂಬಲಿಸುವಂತೆ ಮಾಡುವ ಮಾಂತ್ರಿಕ ದನಿ ತನ್ನ ಕೊನೆಯ ಚರಣದಲ್ಲಿ ಜರ್ಝರಿತವಾಗಿ ಚಿಟ್ಟೀ ನ ಕೊಯೀ ಸಂದೇಸ್.. ಎಂಬ ಹಾಗೆ ಹೊರಟ ದಿನ ಮುಗಿದು, ಇನ್ನು ಬರಿ ನೆನಪುಗಳ ಪಯಣ. ಫೋಟೋ ಫ್ರೇಮುಗಳಲ್ಲಿ ಸೀಡಿ-ಡೀವಿಡಿಗಳಲ್ಲಿ ಆರ್ಕೈವುಗಳಲ್ಲಿ, ಆರ್ತ ಮನಸ್ಸುಗಳ ಕೇಳುಗಿವಿಗಳಲ್ಲಿ ಅಮರ ಗೀತವಾಗಿ ಗುನುಗುತ್ತಾ..

ನನ್ನ ಗಝಲುಗಳ ಪಯಣದ ಎಂಟ್ರಿ ಪಾಯಿಂಟ್ ಮತ್ತು ನಿತ್ಯಹರಿದ್ವರ್ಣ ಹಾಡು... ಜಗಜೀತರ ಧ್ವನಿಯಲ್ಲಿ http://www.youtube.com/watch?v=NqRCVdotF1U&feature=related

Friday, September 30, 2011

ಹಲ್ನೋವು

ಮಳೆಗಾಲದ ಮಧ್ಯಾಹ್ನ
ಉಂಹೂಂ ನಮ್ಮೂರಾಗಲ್ಲ
ಇಲ್ಲೆ ಐಟಿಸಿಟಿಯಲ್ಲಿ
ಬೈಗು,ಬೆಳಗು,ಬಿಸ್ಲೊತ್ತು,ನೆಳಲು
ಗೊತ್ತಾಗದ ಹಾಗೆ
ಏಸಿಯಲ್ಲಿ ಕುಳಿತು
ದಿನಚರಿಯನ್ನೇನು ಹೇಳುವುದು ಬಿಡಿ
ಎಲ್ಲರ ಕತೆಯೂ ಅದೆ
ವಿಷ್ಯ ಏನಪಾಂದ್ರೆ
ಸ್ವಲ್ಪ ಹೆಚ್ಚೇ ಕಾಡುತ್ತಿರುವ
ಹಲ್ನೋವು.
ಹುಂ ತಕ್ಷಣವೇ ಡಾಕ್ಟರತ್ರ
ಕರ್ಕೊಂಡೋಗಲು ನಾನು
ಹೊಸಹೆಂಡತಿಯಲ್ಲ.
ಅಂವ ಹಳೆಗಂಡನೂ ಅಲ್ಲ
ವಯಸ್ಸಾದ್ ಮೇಲೆ
ಇದ್ದಿದ್ದೆ ಇದೆಲ್ಲ
ಅಂತ ನಾನೂ ಸುಮ್ನಿದ್ದೆ
ಸುಮ್ನಾದಂಗೂ ಅಬ್ಬರ
ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ
ಈಗ ಮೂವತ್ತೈದರ ಆಜೂಬಾಜಲ್ಲಿ
ಇನ್ನೇನು ಮತ್ತೆ
ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ
ಬಾಲಗೋಪಾಲದಿಂದ
ಕಿರೀಟಕ್ಕೇ ಭಡ್ತಿ.
ಅದಕ್ಕೆ ಇರಬೇಕು
ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.
ಮಳೆಯ ಚಳ್ ಚಳಿಯಲ್ಲಿ
ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ
ಹಲ್ಲು ಕಟಗುಟ್ಟಿ
ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ
ಭೂತಗನ್ನಡಿಯಲ್ಲಿ ಬೆಳಕು ತೂರದೇನೆ
ಬೆಂಕಿ ಬಂದ್ರೂ ಬಂತೆ.

Tuesday, September 27, 2011

ಸುಗಂಧ ಸಮೀರ

ಸುಮ್ಮಗೆ ನೆಲದ ಮೇಲೆ
ಕಾಯುತ್ತ ಕೂತವಳ
ಎದಿರು
ಸಗ್ಗದಿಂದಿಳಿದಂತೆ
ನೀನು
ಹಾಜರಿ ಹಾಕಲು -
ಮೋಡವಾಗಿ ಬನಿಇಳಿವ
ಮೊದಲೇ
ಈ ಹನಿ
ಶರಧಿಯೊಳಗೆ ತಲ್ಲಣಿಸಿ
ಆವಿಯಾಗಿತ್ತೆಂಬ ಅರಿವು.
ಎಳೆಯ ಕಾಲದಿ ಬಿತ್ತಿದ
ಮೊಳಕೆಮೂಡದ ಬೀಜ
ಏರುಬದುಕಿನ ಬಿರುಹಾದಿಯಲಿ
ನೆರಳಿಗೆ ಹೊರಳಿದರೆ ತಂಗಾಳಿ
ಸೂಸುವ ಎಲೆಮರ,
ನೆನಪ ಗಂಧ ತೇಯುವ
ಕಲ್ಲು ಮನದ ಸುತ್ತ ಸುಳಿವ
ಸುಗಂಧಿತ ಸಮೀರ.
ನೀನು ಮೊನ್ನೆಯ ನಿಜ.
ಇವತ್ತೂ ನಿಜವೇ.
ಕಳೆದ ಕಾಲದ ಕನ್ನಡಿಯಲಿ
ನಿತ್ಯ ನೂತನ
ಮಂದಹಾಸವರಳಿಸುವ
ಮುಟ್ಟಲಾಗದ ನಿಜ.
ನಿಲುಕಲಾರದ ಅಳುಕಲ್ಲು
ಸವರಿ ಸಂತೈಸಿಕೊಳ್ಳುವೆ
ಕವಿತೆ ಬರೆವ ಲಹರಿ
ಅಲ್ಲು ಇಲ್ಲು ಎಲ್ಲೂ.
ಪೋಣಿಸಿದ ಅರಳು ಮೊಗ್ಗು
ಆಹ್ಲಾದ
ಕನಸು ಮನಸು
ನನಸಲ್ಲೂ!

Monday, August 22, 2011

ಸೋಜಿಗ!

ಮೇಲ್ಮುಖ ಹರಿಯುವ
ಕಾರಂಜಿ ನೀರಿನ
ತುದಿಯಲೊಂದು ಪುಟ್ಟ ಗೋಲ
ಹರಿವ ನೀರಿನ ಬಲವೇ ಬಲ
ಅತ್ತಿತ್ತ ಜಗ್ಗದ ಗೋಲ
ನೋಡಿ ಹಿರಿಯರಿಗೂ ಎಳೆಯರಿಗೂ ಸೋಜಿಗ
ನೀರ್ಬಲದ ಗೋಲ
ನಡು ದಾರಿಯಲ್ಲಿ
ನೆನಪಾಗುವಾಗ
ಮನದಲ್ಲೊಂದು ಭಯದ ಸೆಳೆ

ಹೆದರಿ,ಬೆವೆತ ಮಸ್ತಿಷ್ಕದಲ್ಲಿ
ನಿಜದ ಅರಿವು ಸಟ್ಟನೆ ಹೊಳೆ
ಹೊಳೆದು..
ನೀರು ನಿಂತ ಮರುಘಳಿಗೆಯಲ್ಲಿ
ಕೆಳಗುರುಳುವ ಗೋಲ!
ಈಗಿತ್ತು ಈಗಿಲ್ಲ!
ಬದುಕು ಕಡೆಗೂ
ಹಳೆಯ ಹಿರಿಯರ ಮಂತ್ರಶ್ಲೋಕಗಳ
ನೀರಮೇಲಣ ಗುಳ್ಳೆಗಳ
ಭಾಷ್ಯವೇ!
ನೀನು ಯಾವಾಗ
ಹರಿದು ಹೋದೆ?
ನಾನು ಯಾವಾಗ ಬಿದ್ದೆ?
ಸೋಜಿಗಕ್ಕೇ ಅಚ್ಚರಿ.
ಸ್ವಮರುಕದ ಎಣ್ಣೆಯಲಿ
ಬಿದ್ದ ನೋವಿಗೆ ಮಾಲೀಷು,
ಪುಕ್ಕಟೆ ಮಾಲೀಷು.

Monday, August 8, 2011

ಹೂಕಣಿವೆಯ ಹಾದಿ..


ನಿರಾಕರಣದ
ಚಂದ
ಬೆಟ್ಟ ಬಯಲು ನದಿ ಕಂದರಗಳಲಿ
ಹೊರಳುತ್ತಿದ್ದರೆ
ಊರ ಜಾತ್ರೆಯ ಗದ್ದಲಕೆ
ಹೊಂದಿಕೊಂಡ ನನ್ನ ಕಂಗಳಿಗೆ
ಬೆರಗಿನ ಪೊರೆ,
ಅಂಚಲಿ ಹೊಳೆದವು,
ಕಂಬನಿ ಜೋಡಿ
-
ನೋಡದೆ ಉಳಿದೆನೇ ಇಷ್ಟುದಿನ
ನೋಡಲಾಯಿತಲ್ಲಾ ಈಗಾದರೂ, ಇಷ್ಟಾದರೂ
-
ಬಾನೆತ್ತರಕೆ ಚಿಮ್ಮುವ
ಭುವಿಯ ಬಯಕೆ
ಒತ್ತರಿಸಿ ಖಂಡಾಂತರಗೊಂಡ
ತುಂಡುಗಳೂ ಅಖಂಡವೆನಿಸುವ
ವೈರುಧ್ಯ
ಎಲ್ಲ ಮೀರಬಲ್ಲೆ ಎನ್ನುವ
ನನ್ನ ಒಳಗ ಹಣಿಯುವ
ಮಣಿಸಿಯೇ ತೀರುವ
ನಿಡುದಾರಿ,
ಸೋತು ಕಾಲ್ ಚೆಲ್ಲಿದೊಡನೆ
ನೇವರಿಸುವ ಕುಳಿರು
ಅಲ್ಲ
ಇದನೆಲ್ಲ ಮಾತಿಗಿಡುವ
ನನ್ನ ಹಟವೇ
ಅಲ್ಲಿ ಕುಸಿದು ಕೂತಾಗ ನೀನೆಲ್ಲಿದ್ದೆ?
ಇರಲಿ ಬಿಡು
ಒಣಪೊಗರಿಗೆ ಈಗ ನೆಗಡಿಯಾಗಿದೆ,
ಏನಾದರಾಗಲಿ,
ಹೂಕಣಿವೆಯ ಹಂಬಲು ಕೊಂಚ ಹರಿದಿದೆ,
ಅರಳುಕಣಿವೆಯ ನೋಡಿ ತಣಿದಿದೆ.
ಲಕ್ಷ ಪಯಣಿಗರಲ್ಲಿ ಗುರಿ ಸೇರುವವರು
ಒಬ್ಬಿಬ್ಬರಂತೆ,
ನನ್ನದು ಪಯಣದ್ದೇ ಭಾಗ್ಯ.
ಗುರಿ ಯಾರಿಗೆ ಬೇಕು
ಪಯಣ ಮುಗಿಯದೆ ಇರಬೇಕು.

ನಿರಾಕರಣವ ಧೇನಿಸಿ
ಒಪ್ಪಿಗೆಗೆ ಹಟವಿಡಿಯುವ ನಾ ಮಳ್ಳಲ್ಲವೇ?
ಸಾಲು ಸಾಲು ಅಚಲ
ಸಾರಿ ಸಾರಿ ತಿಳಿ ಹೇಳಿಯೂ
ಕುಗ್ಗುವ ಕುದಿಯುವ ಈ ಬಗೆಗೆ ಮದ್ದಿಲ್ಲವೇ?
ಎತ್ತರದಿ ಮುಗಿಲು ಮುದ್ದಿಸಿ
ಆಳದಿ ಹೊನಲು ರಮಿಸುವ
ಈ ಬದುಕಿಗೆ ಇದೇ ಒಂದು
ಬರೆದಿಡದ ಭಾಷ್ಯವೇ?!
ಎಲ್ಲ ಚಂದಗಳ ನಿವಾಳಿಸಿ ಒಗೆಯಲು
ಕಿಡಿ ಇಲ್ಲ ಇಲ್ಲಿ,
ಭಾವಬಯಕೆಗಳ ಮೇರುತುದಿಯಲಿ
ಎಲ್ಲ ಮೀರಿದ, ತೀರಿದ ಹಿಮತೃಪ್ತಿ!
ಗಮ್ಯಕ್ಕಿಂತ ದಾರಿಯೇ ಸೊಗಸು
ಎಂಬ ಲೌಕಿಕವೆ ಲೇಸು.

(ಈ ಅಲ್ಪಳ ಬಯಕೆ ತೀರಿಸಿದ ಸಮಸ್ತ ಆತ್ಮೀಯರಿಗೆ, ಸೋಕಿಸಿಕೊಂಡ ಭೂರಮೆಗೆ, ನಿರುಕಿಸಿ ನಕ್ಕ ಬಾನಿಗೆ, ತಂಪಗೆ ಹರಿದ ನೀರಿಗೆ, ಕಂಪಲಿ ಮುಳುಗಿಸಿದ ಕಣಿವೆಗೆ, ಅತ್ತೂ ಕರೆದೂ ಜೊತೆಗೂಡಿದ ಸೃಷ್ಟಿಗೆ, ಜತೆ ಬಂದ ಬಿದಿಗೆಯ ಬಿಂಬಕ್ಕೆ
ಮತ್ತೆ ಮತ್ತೆ ಶರಣು. )

Tuesday, July 5, 2011

ಮಾಯಾಲೋಕ

ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ ಆಹಾ... ಥ್ಯಾಂಕ್ಸ್ ಅಂದ್ರೆ ಬಯ್ತೀಯ ನೀನು, ಅದಕ್ಕೆ ಇಡೀ ಕವಿತೆಯನ್ನ ಹೂವಪ್ಪುಗೆಯಲ್ಲಿ ನಿನಗರ್ಪಿಸುತ್ತಾ...
{ ನೀನು ಚಾಟಿಸಿದಾಗೆಲ್ಲ
ಇವತ್ತಿನ ನಾನು ಅಳಿದು
ಪಂಚೇಂದ್ರಿಯಗಳಲ್ಲಿ
ಹಳದಿಬೂದುಬಣ್ಣದ ಗೋಡೆ ನಡುವಿನ
ಕೋಣೆ, ನೆಲಬೆಂಚುಗಳು,
ಗುಸುಗುಸು ಮಾತು
ಕಪ್ಪು ಬೋರ್ಡಿನ ಮೇಲೆ ಬಿಳಿ ಬಿಳಿ
ಅಕ್ಷರ ದುಂಡಗೆ ಬರೆಯುತ್ತಿರುವ ಅನಸೂಯಮ್ಮ ಟೀಚರು
ಅಲ್ಲಲ್ಲಿ ಯಾರು ಮೊದಲು ಬರೆದು ಮುಗಿಸುವರೆಂಬ
ಛಲದ ಕಣ್ಣಾಟ,
ಹೊರಗೆ ಅಂಗಳದಲ್ಲಿ
ನೇತುಬಿಟ್ಟ ರೈಲ್ವೆ ಕಂಬಿಯ ಬೆಲ್ಲಿನ ರಿಂಗಣಕ್ಕೆ
ಕಾದ ಕಿವಿಗಳು
ಇನ್ನೇನು ಆಟದ ಬೆಲ್ಲು ಹೊಡಿಯಬೇಕು
ಅಷ್ಟರಲ್ಲಿ ಸುರಿದ ಮಳೆಗೆ
ಮತ್ತೆ ಕೋಣೆಯಲ್ಲೆ ಕೂಡಿಸಿ
ಹಾಡು ಕತೆ ಹೇಳಿಸುತ್ತಿರುವ ರಮಾಮಣಿ ಟೀಚರು
ಕೈಕಟ್ಟಿ ಎಲ್ಲರ ಮುಂದೆ
ನಿಂತು ಬಿಡಿಸುವೆ ನಾನು
ನೀವೆಲ್ಲ ಹತ್ತಿ ಕೂರುವುದಕ್ಕೇ ಕಾದ
ಮಾಯಾಚಾಪೆಯನ್ನು
ಇಂದು ಹೋಗೋಣ ರಷ್ಯಕ್ಕೆ
ನಾಳೆ ಚಿತ್ರಕೂಟಕ್ಕೆ
ನಾಡಿದ್ದು ಮಣ್ಣಿನಮನೆಗೆ
ಯಾನ ಮುಗಿದಿದೆ
ಬೆಲ್ಲು ಹೊಡೆದಿದೆ
ಮಳೆ ನಿಂತಿದೆ
ಶಾಲೆ ಮುಗಿದಿದೆ
ಈಗ ಮನೆಗೋಡುವ ಸಮಯ
ಹಾರಬಹುದು ಮಳೆನೀರಿನ ಹೊಂಡ
ಕೆಸರು ಎರಚಿದರು ಪರವಾಗಿಲ್ಲ
ಶಾಲೆ ಮುಗಿಯಿತಲ್ಲ
ನಾಳೆಗೆ ಬಣ್ಣದ ಬಟ್ಟೆ
ಆಹ್ ಎಷ್ಟು ಜೋರಾದ ಹಾರ್ನ್
ಅಯ್ಯೋ ನನ್ನ ಬಾಲ್ಯವಳಿಯಿತು
ಇಲ್ಲಿದೀನಿ ಗಣಕಯಂತ್ರದ ಮುಂದೆ
ನಿನ್ನ ನೆಟ್ಟು ಕಟ್ಟಾಗಿ
ಚಾಟು ಆಫಾಗಿ
ಮತ್ತಿಲ್ಲೆ ನಾನು
ಹುಶಾರಾಗಿ
ಇರಬೇಕಾದವಳು,
ಯಾರೆಂದರೆ ಅವರೊಡನೆ
ಏನೆಂದರೆ ಅದು ಮಾತಾಡದೆ
ನಗುವನ್ನು ಅಳೆದು ತೂಗಿ ಸೂಸಬೇಕಿರುವವಳು.
ಮತ್ತೆ ನಾಳೆ ಬಾ ನೀನು
ಬೇಗ.
ಆಫ್ ಆಗುವ ಮುನ್ನವೆ ಹೇಳಿಬಿಡು
ನಾನು ಚಾಪೆಯಿಂದಿಳಿಯಕ್ಕೆ ತಯಾರಿರುತ್ತೇನೆ
ಯಾಕೆ ಸುಮ್ಮನೆ ಕ್ರಾಶ್ ಲ್ಯಾಂಡಿಂಗು??
}

Wednesday, June 22, 2011

ಹೂಕಣಿವೆಯ ಹಂಬಲು

ಇಲ್ಲೆ ಗಣಕದ ಕಿಂಡಿಯಲ್ಲಿ
ಇಣುಕಿದರೆ
ಮಳೆಬಿಲ್ಲಿನ ಬಣ್ಣಗಳ ಹಾಯಿಸಿ
ನಗುವ
ಹೂಕಣಿವೆಯೇ,
ಇದೆಯೆ ನನಗೆ
ನಿನ್ನ ಒಡಲಲಿ ಹರಿದಾಡುವ ಭಾಗ್ಯ?

ಬಿಳಿಬೆಟ್ಟಗಳ ತಪ್ಪಲಲಿ
ದೀರ್ಘವಾಗಿ ಸುಯ್ಯುತಿರುವ
ಮರಗಳೆ ನೀವು ಕಾದಿರುವುದಾರನ್ನ?
ಗಿರಿಯ ಸಂದುಗಳಲಿ ತೂರಿ
ಹರಿವ ದೇವನದಿಗಳೆ
ನೀವು ಕರೆಯುವುದು ಯಾರನ್ನ?
ಸಂಗಮಿಸಿ ಹರಿವ ನದಿಗಳು
ಸೂಚಿಸುವುದೇನನ್ನ?
ದೂರಹಾದಿಯ ಪಯಣದ
ರೋಚಕತೆಯೇ ನೀನು
ಬಳಸಿರುವೆಯೇಕೆ ಹೀಗೆ ನನ್ನ?
ಲಕ್ಷಗಳಲ್ಲಿಹುದು ಸಂಖ್ಯೆ
ನಿನ್ನ ಮಡಿಲಲಿ ಸಾಗಿದ ಪಯಣಿಗರದು
ಮುಟ್ಟಿ ಮೀರಿದವರಾರು ಗುರಿಯ?


ಫ್ರಾಂಕ್ ಸ್ಮಿಥ್ ಮಹಾಶಯ
ಹೆಸರಿಡುವ ಮೊದಲೇ
ನೀನಲ್ಲಿದ್ದೆ.
ಇಂದಿಗೂ ಇರುವೆ,
ಋತುಮಾನದ ಜತೆಗೂಡಿದ
ಭುವಿಯ ಅರಳುವಿಕೆಯ
ಸಂಭ್ರಮಕ್ಕೆ ಸಾಕ್ಷಿಯಾಗಿ!
ಕಾಲದೇಶಗಳ ಮೀರಿದಂತೆ,
ರಾಜಕೀಯ ನುಸುಳದಂತೆ,
ಸಣ್ಣತನವ ಅರೆಯುವಂತೆ.
ಅಂದಿಗೂ ಇಂದಿಗೂ ಎಂದಿಗೂ!
ನೋಡಲು ರಮ್ಯ,
ಹೊಂದಲು ಅಗಮ್ಯ!


ಇದೆಯೆ ನನಗೆ ನಿನ್ನ
ಒಡಲಲಿ ಹರಿದಾಡುವ ಭಾಗ್ಯ?!
ಕಾದಿರುವೆ-
ಅದು-ಇದು ಎಲ್ಲದೂ
ಒಂದೇ ಎನಿಸುವ ಬಿಳಿಬಿಳಿ ಅದ್ವೈತಕ್ಕಾಗಿ..!

Wednesday, May 4, 2011

ಅಗಲ-ಆಳ

ಬಾಲ್ಯದ ಓದಿಗೆ ಹರವಿತ್ತು
ಆಳವಿರಲಿಲ್ಲ
ಅದಾಗ್ಯೂ
ನೆನಪು ಕಂಡರಿಸಿದ ಚಿತ್ರಗಳು ಹಲವು
ಆತು ಕೂತ ಸಾಲುಗಳೊ ಇನ್ನೂ ಹಲವು
ಮಿಲನ ಮುಗಿಯಲಿ,
ಆದರೇನು
ಎದೆಗೂತ್ತಿ ಹಿಡಿ ನನ್ನ
ರಾತ್ರಿಯ ನಶೆ ಕತ್ತಲಲ್ಲೆ ಕರಗಲಿ
ಬೆಳಗಾದರೂ ನಿನ್ನ ಕೈ ನನ್ನ
ಬರಿಮೈಯ ಬಳಸಿಯೇ ಇರಲಿ;
ಅವತ್ತು ಓದಿದ ಇಂಗ್ಲಿಷಿನ ಸಾಲುಗಳು
ಕನ್ನಡ ಮಣ್ಣಲ್ಲಿ ಮೊಳಕೆಯೊಡೆದ
ಆಶೆಯ ಬಳ್ಳಿಗೆ
ಇಂಬು ಕೊಟ್ಟ ಪರಿಗೆ ಏನ ಹೇಳಲಿ?!
ಯೂರಿಪಿಡೀಸನ ಮೀಡಿಯಾ ಅಂದುಕೊಂಡದ್ದು ತುಂಬ ನಿಜ
ಹೆಣ್ಣಿಗೆ - ಒಲವೇ ನನ್ನ ಬದುಕು
ಗಂಡಿಗೆ - ಒಲವು ಬದುಕನ್ನ ತುಂಬಬೇಕು
ಅದೇನೆ ಇರಲಿ
ಕಲಿತ ಪಾಠಗಳ ಜಾಗ ಪುಸ್ತಕಗಳಲ್ಲಿ
ಅಂತಾದರೆ
ಸಮಯ ಕಳೆಯಲು ಓದಿದ ಸಾಲುಗಳಲ್ಲಿ
ಅನಾವರಣಗೊಳ್ಳುತ್ತಿರುವುದೇನು!!
ಯಾರೋ ಹೇಳಿದರು
ಒಳ್ಳೆಯ ಪುಸ್ತಕ ನಿನಗೆ ಈ ಮುಂಚೆಯೆ ಗೊತ್ತಿದ್ದನ್ನೆ
ಅರ್ಥ ಮಾಡಿಸುವ ಬಗೆ
ನಕ್ಕಿದ್ದೆ ನಾನು ಎಂಥ ತಲೆಪ್ರತಿಷ್ಠೆ!
ಅನಿಸುತ್ತಿದೆ ಈಗ -
ಬರಿಮೈಯ ಬಳಸಲು
ಅವನ ಕೈ ಸಾಲದಷ್ಟು ಅಗಲಕ್ಕೆ
ನಾನು ಹರಡಿಕೊಂಡಿರುವಾಗ-
ಬದುಕು ಒಂದು ಒಳ್ಳೆಯ ಪುಸ್ತಕದ ಹಾಗೆ
ಎಂದೊ ಮನದೊಳು ಹೊಕ್ಕ ಹರವಿನ
ಆಳವನ್ನು ಇಂದು ಅರಿತ ಹಾಗೆ!
ಆಹ್ ಎನ್ನಿಸಿದ
ಆಶೆ
ನಿರಾಶೆಯ ದಿಬ್ಬ ಹತ್ತಿಳಿದರೂ
ನಿರೀಕ್ಷೆಯ ಹೊಸ್ತಿಲಲ್ಲಿ ದೀಪ ಹಚ್ಚಿಟ್ಟು
ಕಾಯುವ ಸೊಗಸೆ ಬೇರೆ!
ಮುಂದಿನ ಇರುಳಿನ ಕತ್ತಲ
ಸೊಗಯಿಸುವ ದೀಪ, ಜೊತೆಗೆ
ದೀಪದುರಿಯ ಕಣ್ಣು!

Wednesday, April 20, 2011

ತೆರೆದ ಬಾಗಿಲು

ಒಳಹೋಗುವುದೂ ಅಥವಾ ತಟ್ಟುತ್ತ ಕಾಯುತ್ತಿರುವುದೂ ನಮಗೇ ಬಿಟ್ಟಿದ್ದು!
ನನ್ನ ಬಹಳ ಹತ್ತಿರದ ಗೆಳೆಯನೊಬ್ಬ ಮೊನ್ನೆ ಮೊನ್ನೆ ಬೆಂಗಳೂರು ಬಿಟ್ಟು ಬೇರೆ ಊರಿಗೆ ನೆಲೆ ಹುಡುಕಿಕೊಂಡು ಹೋದ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನೂ, ಹುಡುಗಾಟಿಕೆಯಲ್ಲಿ ಚಿಕ್ಕವನೂ, ಉತ್ಸಾಹದಲ್ಲಿ ಹಿಂದಿಕ್ಕಲಾಗದವನೂ ಆದ ಈ ಗೆಳೆಯ, ಇನ್ನೊಬ್ಬ ಗೆಳೆಯ, ನಾನು ಮತ್ತು ನನ್ನ ಸಂಗಾತಿ - ನಾವು ನಾಲ್ವರದ್ದೇ ಒಂದು ಪುಟ್ಟ ಗುಂಪು. ಮಹಾನಗರದ ತಿರುಗಣಿಯಲ್ಲಿ ನಾವೇ ಬೇಕಾಗಿ ಸಿಕ್ಕು ನುರಿಸಿಕೊಂಡು, ಸಾಕು ಸಾಕಾಗಿ ಅಲ್ಲಿ ಇಲ್ಲಿ ಆಗ ಈಗ ಒಂದೆರಡುಮೂರು ದಿನಗಳ ಮಟ್ಟಿಗೆ ಕೆಲವು ಸುತ್ತಾಟ ಮಾಡುವುದು ನಮ್ಮ ಜಾಯಮಾನ. ಇದಲ್ಲದೆ ಪುಸ್ತಕ, ಸಮಾಚಾರ, ಹರಟೆ, ಪ್ರಕೃತಿ, ಹಕ್ಕಿಗಳು, ಮಳೆ,ಕಾಡು ಇವೆಲ್ಲ ನಮ್ಮ ಸಮಾನ ಆಸಕ್ತಿಯ ವಿಷಯಗಳು. ಎಲ್ಲರೂ ಬೇರೆ ಬೇರೆ ಬಡಾವಣೆಗಳಲ್ಲಿ ಗೂಡು ಕಟ್ಟಿಕೊಂಡವರು. ನೆಟ್ಟು,ಟಾಕು,ಫೋನು,ಫ್ಲಿಕರ್ರು ಹೀಗೆ ದಿನದಿನದ ಹೆಚ್ಚಿನ ಮಾತುಕತೆ. ತಿಂಗಳಿಗೊಮ್ಮೆ ಒಂದು ಭಾನುವಾರ ಬೆಳಗಿನಿಂದ ಇಳಿಮಧ್ಯಾಹ್ನದವರೆಗೆ ನಮ್ಮನೆಯಲ್ಲಿ ಸೇರಿ ಮಾತು-ನಗು-ಹರಟೆ ಮತ್ತು ಎಲ್ಲಿಗಾದರೂ ಹೊರಡುವ ಪ್ಲಾನು. ಅಲ್ಲಲ್ಲಿ ಕಾಫಿ,ಟೀ,ಪಾನಕ,ಹಣ್ಣು. ಇತ್ಯಾದಿ.
ಬೆಂಗಳೂರು ಬಿಡುವ ಬೇರೆ ಊರಲ್ಲಿ ನೆಲೆಸುವ ಗದ್ದೆಯೋ,,ತೋಟವೋ ಕೃಷಿ ಮಾಡುವ ಮಾತುಕತೆ ಮಾತ್ರ ಪ್ರತೀಸಲವೂ ನಡೆಯುತ್ತಿತ್ತು. ನೀನು ಮಾತನಾಡುವುದು ಸುಲಭ, ಹೇಳಿದಂತೆಲ್ಲ ಮಾಡಲಿಕ್ಕಾಗುವುದಿಲ್ಲ, ಇದು ಎಂತ ಈ ವಯಸ್ಸಲ್ಲಿ ಮಗಳ ಶಾಲೆ ಬಗ್ಗೆ ಆಲೋಚಿಸು ಮೊದಲು ಅಂತೆಲ್ಲ ಏನೇನೋ ಹೇಳಿ ನನ್ನ ತಲೆ ತಿನ್ನುವ ಈ ಗೆಳೆಯ ಇಂತಹದೆ ಒಂದು ಮಾತುಕತೆಯ ಮಧ್ಯದಲ್ಲಿ - ನಾನು ಕೆಲಸ ಬಿಡೋದೂಂತ ಮಾಡಿದ್ದೇನೆ. ಮುಂದಿನ ವರ್ಷದೊಳಗೆ ನಮ್ಮ ಜಾಗಕ್ಕೆ ಹತ್ತಿರವಾಗಿ ಮನೆ ಮಾಡಿ, ಕುಟುಂಬವನ್ನೂ ಕರೆದೊಯ್ಯುವ ಯೋಚನೆ ಇದೆ - ಅಂತ ಘೋಷಿಸಿಬಿಟ್ಟ. ನಾವು ಎಂದಿನಂತೆ ಭಾಳ ಸೀರಿಯಸ್ಸಾಗಿ ಆ ಬೆಳೆ ಬೆಳೆದರೆ ಒಳ್ಳೆಯದು ಈ ಬೆಳೆ ಬಗ್ಗೆ ಅಡಿಕೆಪತ್ರಿಕೆಯಲ್ಲಿ ಬಂದಿದೆ ಅಂತೆಲ್ಲ ವಿಶ್ಲೇಷಣೆ ಮಾಡುತ್ತ ಕೂತೆವು.


ಅದಾಗಿ ಒಂದ್ನಾಲ್ಕು ವಾರಕ್ಕೆ ಆಫೀಸಿನಲ್ಲಿದ್ದಾಗ ಫೋನ್ ಬಂತು.
ಏನಮ್ಮಾ ಬಿಸೀನಾ?...
ಇಲ್ಲ ಹೇಳಿ,,
ಒಂದು ಮಜಾ ಗೊತ್ತ?ಆ ಬಡ್ಡೀಮಗ ನನ್ ಮ್ಯಾನೇಜರ ಮುಖ ನೋಡ್ಬೇಕಿತ್ತು ನೀನು..
ಯಾಕೆ ಏನಾಯ್ತು?!..
...ಅದೇ ಹಳೆ ಪುರಾಣ. ನೀನು ಈ ಪ್ರಾಜೆಕ್ಟ್ ತೆಕ್ಕೋ ಮುಂದಿನ ವರ್ಷ ಇಷ್ಟು ಕೆ.ಜಿ. ನಾಣ್ಯಗಳ ಹೆಚ್ಚುವರಿ ಸಂಬಳ ಕೊಡ್ತೀನಿ.. ನೀನಿಲ್ಲದೆ ನನಗೇನಿದೆ... ಅಪ್ರೈಸಲ್ ಮಣ್ಣು ಮಸಿ.. ಹೋಗಲೋ ಹೋಗ್ ಅಂತ ರಾಜಿನಾಮೆ ಬಿಸಾಕ್ಬಿಟ್ಟೆ. ಈ ಮ್ಯಾನೇಜರ್ ನನ್ ಮಕ್ಳಿಗೆಲ್ಲ ಹಂಗೇ ಮಾಡ್ಬೇಕು. ಬುರುಡೆಗೆ ಬಿಸಿನೀರು ಕಾಯ್ಸುದು ಅಂತಾರಲ್ಲ ಹಂಗೆ! ಅದು ಹಾಳಾಗ್ಲಿ ನಾನು ಫೋನ್ ಮಾಡಿದ್ದು ಅದಕ್ಕಲ್ಲ. ...
ಮತ್ತೆ?
ಅದೇ ನಮ್ ಜಾಗದಲ್ಲಿ ನೀರು ಚೆನ್ನಾಗಿದೆ. ಈಗಿನ್ನೂ ಮಳೆ ಕಚ್ಚಿಕೊಳ್ಳುತ್ತಿದೆ ಅದಕ್ಕೆ ಸುವರ್ಣಗೆಡ್ಡೆ ಹಾಕಿಬಿಡೋಣ ಅಂತಿದೀನಿ. ಈ ಬುಧವಾರ ಊರಿಗೆ ಹೋಗಲಿಕ್ಕುಂಟು ಬರ್ತೀಯಾ ನೀನು? ಅವನು ಎಂದಿನ ಹಾಗೆಯೇ ಬಿಸಿಯಲ್ಲದಿದ್ರೆ ಇಬ್ರೂ ಬನ್ರಲ್ಲ. ಹೇಗೂ ಅಲ್ಲೊಂದು ಶೆಡ್ ಉಂಟು. ಗಂಜಿ ಊಟಕ್ಕೆ ಕರೆಂಟಿನೊಲೆ ಉಂಟು..ರಾತ್ರಿ ಹೊರಗೆ ಬಯಲಲ್ಲಿ ನಕ್ಷತ್ರ ನೋಡಿಕೊಂಡು...
ಯಾವ ಜಾಗ, ಏನ್ ಕತೆ?
ಅರ್ರೇ ಯಾವಾಗ್ಲೂ ಮಾತಾಡ್ತ ಇದ್ವಲ್ಲ ಅದೇ. ಅಲ್ಲಿ ಹೋಗಿ ಕೃಷಿ ಮಾಡೋದು ಅಂತ ನಿರ್ಧಾರ ಮಾಡಿಯಾಯ್ತು ನಾನು. ಎಲ್ಲ ಮಾಡಿಯಾಯ್ತು. ವರ್ಚುಯಲ್ ಸಗಣಿ ಹೊತ್ತಿದ್ದಾಯ್ತು. ನಿಜವಾದ ಮಣ್ಣೂ ಹೊತ್ ಬಿಡೋಣ ಅಂತ. ಹ್ಯಾಗೆ?
ಅಯ್ಯೋ ನಿಮ್ಮ. ಇರಿ ಸಂಜೆಗೆ ಸರಿಯಾಗಿ ಕೊರೆದುಕೊಂಡು ಮಾತಾಡೋಣ. ನಾನ್ ಕ್ಯಾಬ್ ಹತ್ತಿದ ಮೇಲೆ ಫೋನಿಸ್ತೀನಿ. ಅಂದು ಫೋನಿಟ್ಟೆ. ತಲೆ ಸಣ್ಣಗೆ ತಿರುಗುತ್ತಿತ್ತು.
ಸಂಜೆಯ ಮಾತುಕತೆಯಲ್ಲಿ ಈ ಹೊಸನೆಲೆ ಕಂಡುಕೊಳ್ಳುವ ಅಂದಾಜು ಸಿಕ್ಕಿತು. ವಾವ್ ಅಂತ ಮನಸ್ಸು ಘೋಷಿಸಿಬಿಟ್ಟಿದ್ದರೂ ಅಷ್ಟು ಚಿಕ್ಕವಳಿದ್ದಾಗಿನಿಂದ ಪೋಷಿಸಿಕೊಂಡು ಬಂದ ತಲೆಒಳಗಿನದ್ದು ವಾಸ್ತವದ ಲೆಕ್ಕಾಚಾರ ಹಾಕಿ ತಳಮಳಗೊಳ್ಳುತ್ತಿತ್ತು. ಅದಕ್ಕೆಲ್ಲಾ ಇನ್ನೊಂದಿಷ್ಟು ಪ್ರಶ್ನೆ ಉತ್ತರ ನಡೆದವು.
ಕೊನೆಯದಾಗಿ ನಿಕ್ಕಿ (ಖಚಿತ) ಯಾಗಿದ್ದೆಂದರೆ ಕೆಲವು ಹುಚ್ಚಿಗೆ ಮದ್ದಿಲ್ಲ. ಅದನ್ನು ಹುಚ್ಚಾಗಿ ಅನುಭವಿಸಿಯೇ ತೀರಿಸಿಕೊಳ್ಳಬೇಕು. ಮತ್ತು ಅಂಥವು ಸಿಕ್ಕಾಪಾಟ್ಟೆ ಥ್ರಿಲ್ಲಿಂಗ್ ಆಗಿರುತ್ತವೆ. ಆ ಥ್ರಿಲ್ಲಿನ ಮುಂದೆ ಅನುಭವಿಸಿದ ಅನುಭವಿಸಲೇಬೇಕಿರುವ ಕಷ್ಟ-ಕಿರಿಕಿರಿಗಳು ಹಿನ್ನೆಲೆಟ್ರಾಕಿನಲ್ಲಿರುತ್ತವೆ ಅಂತ.
ಅವನ ಜಾಗದಲ್ಲಿರುವ ದಿಬ್ಬದ ಮೇಲೊಂದು ಮನೆ(ಅದಕ್ಕೆ ಫ್ಯಾಂಟಮ್ಮಿನ ಮನೆಯ ಹೆಸರು ವೃಕ್ಷ ಗೃಹ) ಹಿಂಬದಿಯಲ್ಲಿ ವಿಂಡ್ ಮಿಲ್ಲು, ಒಂದು ಜಟ್ಟಿ ನಾಯಿ.. ಕಡಿಮೆಯಿರುವುದು ಹೀರೋಕುದುರೆ ಅದರ ಬದಲು ಪಲ್ಸರಿದೆ! ಇದು ನಮ್ಮ ಮಾತುಕತೆಗಳ ಸ್ಯಾಂಪಲ್. ಏನು ಹಾಕಿ, ಹೇಗೆ ಬೆಳೆದು, ಯಾವ ರೀತಿಯಲ್ಲಿ ಮಾರಾಟ ಮಾಡ್ಬೇಕು ಅಂತ ಯೋಚನೆ ಮಾಡೋದು ಬಿಟ್ಟು, ಇಂತದೇ ಕಲ್ಪನೆಯ ಮಾಯಾಚಾಪೆಯಲ್ಲಿ ಕೂತು ಸುತ್ತುವ ಕೆಲಸ ನಮ್ಮದು. ಇದೆಲ್ಲ ಒಂದು ವರ್ಷದ ಹಿಂದಿನ ಮಾತು.ಮೊನ್ನೆ ಬೆಳಗ್ಗೆ ಆ ಗೆಳೆಯ,ಅವನ ಹೆಂಡತಿ, ಪುಟ್ಟ ಮಗಳು ಮತ್ತು ಅವರಮ್ಮನನ್ನು ಹೊಸ ಊರಿಗೆ ಹೊರಟ ಕಾರಿನಲ್ಲಿ ಹತ್ತಿಸಿ ಕೈಬೀಸಿ ಕಳಿಸಿಯಾಯ್ತು.
ಮೊನ್ನೆ ಮೊನ್ನೆ ಅವನ ಹತ್ತಿರ ನಾನು ಊರಿಗೆ ಹೋಗುವ ಪ್ಲಾನು ಹೇಳಿ ಬಯ್ಯಿಸಿಕೊಂಡಿದ್ದೂ, ಅವನು ಹೋಗ್ತೀನಿ ಅಂದಾಗ ನಾನು ಉಚಾಯಿಸಿ ಮಾತನಾಡಿದ್ದೂ, ಅವನು ನಿಜ್ವಾಗ್ಲೂ ಕೆಲಸ ಬಿಟ್ಟಾಗ ಸಕ್ಕತ್ ಥ್ರಿಲ್ಲಾದರೂ ತುಂಬ ಹೆದರಿಕೆಯಾಗಿದ್ದೂ, ಆಮೇಲೆ ವಾರವಾರವೂ ಏನೇನು ಮಾಡುವುದೆಂದು ಹರಟಿದ್ದೂ, ಮುಂದಿನವಾರ ಹೊರಡುತ್ತೇನಮ್ಮಾ ಅಂತ ಅಂದಾಗ ಆ ದಿನ ಹತ್ತಿರವಾಗುವವರೆಗೂ ಅದರ ಗಂಭೀರತೆಯನ್ನೇ ಅರಿಯದೆ ಹೋಗಿದ್ದೂ ಎಲ್ಲವೂ ಅವನ ಮನೆಯ ಮುಂದೆ ಆಟೋ ಇಳಿಯುವಾಗ ಒಟ್ಟಿಗೆ ನೆನಪಾದವು. ಅವನು ಎಂದಿನ ಟ್ರೆಕ್ಕಿಂಗ್ ಹೊರಟ ಸರಾಗ ಹರಿವಿನಲ್ಲಿ ಹೊರಟಿದ್ದಾನೆ. ಒಳಗೆ ಆತಂಕದ ಸುಳಿಗಳಿರಬಹುದು. ಅವನ ಜೊತೆಗಾತಿ ಹೆಂಡತಿ ಸಂತೈಸುತ್ತಾಳೆ. ಮಗಳು ಅವನ ಕೆನ್ನೆಗಳಲ್ಲಿ ನಗು ಮೂಡಿಸುತ್ತಾಳೆ. ನಾವು ಗೆಳೆಯರು ಶುಭ ಆಶಯಗಳ ಕೊಡೆಬಿಚ್ಚಿ ಅವನ ಜೊತೆಗಿದ್ದೇವೆ.ಪಯಣಕ್ಕೆ ಶುಭಕೋರಲು ಬಂದಿದ್ದ ನನ್ನ ಇನ್ನೊಬ್ಬ ಗೆಳೆಯ ಹೇಳಿದ. ಏನೇ ಇದು, ಟಾರ್ಜಾನೇ ಹೊರಟು ಹೋದ ಮೇಲೆ ಇನ್ನು ನಾವು ಹ್ಯಾಗೆ ಸುತ್ತಾಟ ಮಾಡೋದು ಅಂತ. ಹೌದು ಅಂವ ಒಂದ್ರೀತಿ ಫ್ಯಾಂಟಮ್ಮು ಮತ್ತು ಟಾರ್ಜಾನಿನ ಕನ್ನಡರೂಪ. ನಾನು ಮಾತಿಗೆ ಸಲೀಸಾಗಿ ಹೇಳಿಬಿಟ್ಟೆ. ಅವನಿರುವ ಊರಿನ ಹತ್ತಿರವೇ ನಾವು ಸುತ್ತೋದು ಅಂತ. ಇದೆಲ್ಲ ಅಷ್ಟು ಸುಲಭಕ್ಕಲ್ಲ. ನಾವು ಯೋಚನೆಯಲ್ಲೇ ಪ್ರಪಂಚ ಸುತ್ತುವ ಮಂದಿ. ಹೆಜ್ಜೆ ಎತ್ತಿಡುವಾಗ ವಾಸ್ತವದ ನೋವುಗಳು ಮಗ್ಗಲು ಮುರಿಯುತ್ತವೆ."A dream is given to you only to make it come true" ಅಂತ ಒಂದು ಮಾತಿದೆ. ಅದು ಇವನ ಬದುಕಾಗಲಿ ಅಂತ ಹಾರೈಕೆ.

ಪುಸ್ತಕ ಪ್ರೀತಿಯ ಈ ಗೆಳೆಯನಿಗೆ ಕೊಡಲಿಕ್ಕೆಂದು ಒಂದಿಷ್ಟು ಪುಸ್ತಕ ಕೊಳ್ಳಲು ಅಂಕಿತಕ್ಕೆ ಹೋಗಿದ್ದೆ. ಬೇಕಾದ ಪುಸ್ತಕ ಕೊಳ್ಳುವಷ್ಟರಲ್ಲಿ ಪ್ರಕಾಶ್ ಇದು ನೋಡಿ ನೀವಿನ್ನೂ ಓದಿರಲ್ಲ ಅಂತ ಕೊಟ್ಟರು. ತೇಜಸ್ವಿ ಹೆಸರಿನಲ್ಲಿ ತೀರ್ಥ, ಪ್ರಸಾದ ಕೊಟ್ಟಿದ್ದರೂ ತಗೊಳ್ಳುವ ನಾನು ಆ ಪುಸ್ತಕದ ಲೇಖಕಿಯ ಹೆಸರು ನೋಡಿಯೇ ಮರುಳಾಗಿಬಿಟ್ಟೆ. ಒಂದು ಗೆಳೆಯನಿಗೂ ಇನ್ನೊಂದು ನನಗೂ ಎತ್ತಿಟ್ಟಿಕೊಂಡುಬಿಟ್ಟೆ. ಅದು ನಮ್ಮ ಪ್ರೀತಿಯ ರಾಜೇಶ್ವರಿ ತೇಜಸ್ವಿಯವರು ಬರೆದ "ನನ್ನ ತೇಜಸ್ವಿ". ಸರಿಯಾಗಿ ಮಂಗಳವಾರ ರಾತ್ರಿಯಿಂದ ಓದಲು ತೊಡಗಿ, ಬುಧವಾರ, ಗುರುವಾರ ರಾತ್ರಿಗಳಲ್ಲಿ ಮುಂದುವರಿಸಿ ಮುಗಿಸಿಬಿಟ್ಟೆ. ಅದರಲ್ಲಿರುವ ತೇಜಸ್ವಿ ನಾನು ಅಂದುಕೊಂಡ ಹಾಗೇ ಇದ್ದರಲ್ಲಾ ಎಂಬ ಅಚ್ಚರಿಯೊಂದಿಗೆ, ಅವರ ಪ್ರೀತಿಯ ಸಂಗಾತಿ ರಾಜೇಶ್ ಮೇಲಿನ ಪ್ರೀತಿ ಮತ್ತು ಅಭಿಮಾನ ಸಿಕ್ಕಾಪಟ್ಟೆ ಜಾಸ್ತಿಯಾಗ್ಬಿಟ್ಟಿದೆ. ಅವರು ಹಾಗಿರಲು ಇವರು ಹೀಗಿರುವುದೇ ಕಾರಣ. ನನ್ನನ್ನು ಒಂದು ಜ್ವರದ ಹಾಗೆ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತು. ಇದು ಅಭಿಮಾನವನ್ನು ಮೀರಿದ, ಕನ್ನಡದ ಓದುಪ್ರೀತಿಯ ಸೃಜನಶೀಲ ಮನಸ್ಸುಗಳೆಲ್ಲ ಓದಲೇಬೇಕಿರುವ ಪುಸ್ತಕ. ಓದುಪ್ರೀತಿಯವರು ಅಂತ ಯಾಕಂದೆ ಅಂದರೆ ಇದು ೫೦೦ಕ್ಕೂ ಹೆಚ್ಚಿನ ಪುಟಗಳಿರುವ ಮಹಾ ಓದು. ಆ ಚೈತನ್ಯಪೂರ್ಣ ಸಾಂಗತ್ಯವನ್ನು ವಿವರಿಸಲು ಇದು ಕಡಿಮೆಯೇ ಅನ್ನಿಸಿದರೂ, ಇನ್ನೂ ಹೆಚ್ಚು ಬರೆದು ವಾಚ್ಯವಾಗದೆ ಅವರ ಬದುಕಿನ ಸವಿಯನ್ನು ನಮ್ಮ ಮನದ ಭಿತ್ತಿಯಲ್ಲಿ ಕಲ್ಪಿಸಿಕೊಳ್ಳಲಿಕ್ಕೂ ಅವಕಾಶ ನೀಡಿದ್ದಾರೆ ಲೇಖಕಿ. A typical Tejaswi style! ಆ ಕೊನೆಯ ಸಿಟೌಟಿನ ಅಧ್ಯಾಯವೇ ಸಾಕು ಈ ಬರಹದ ರೂಹನ್ನ ಕಟ್ಟಿಕೊಡಲು. ಈ ಮಾತುಗಳೆಲ್ಲ ಯಾಕೆ. ಅವರ ಪುಸ್ತಕ ಓದಿ. ರಾಜೇಶ್ವರಿಯವರ ಮೊದಲಮಳೆಗೆ ಅರಳಿ ಸುಗಂಧಿಸುವ ಕಾಫಿಹೂಗಳಂತಹ ಬರಹಮಾಲೆಯನ್ನ ಓದಿಯೇ ಅನುಭವಿಸಬೇಕು.
----------------------------------
ಇದು ಬದುಕಿನ ತಿರುಳೋ ಅಥವಾ ಇದೇ ಬದುಕೋ ಗೊತ್ತಾಗದ ಅರೆ ಎಚ್ಚರದ ಕನಸು ಮುಗಿಯುವಷ್ಟರಲ್ಲಿ ಬದುಕು ಕೊನೆಯ ನಿಲ್ದಾಣಕ್ಕೆ ಬಂದಿರುತ್ತದೆ. ಇವತ್ತು ೩೩ ವರ್ಷ ಕಳೆದ ಬದುಕಿನ ತಿರುವಿನಲ್ಲಿ ನಿಂತು ಯೋಚಿಸುತ್ತೇನೆ. ಕಳೆದ ೩೩ ವರ್ಷಗಳಲ್ಲಿ ಬದುಕಿನ ಪಾತ್ರೆಗೆ ನಾನು ತುಂಬಿದ್ದೇನು? ಅದರಿಂದ ಹರಿಸಿದ್ದೇನು?ಅಥವಾ ಉಮರ ಹೇಳಿದಂತೆ ಬೋರಲು ಬಿದ್ದ ಬದುಕಿನ ಪಾತ್ರೆ ತುಂಬದೆ ಉಳಿದಿದೆ, ತುಳುಕುವುದಕ್ಕೇನಿದೆ? ಅಥವಾ ಈ ೩೩ಕ್ಕೆ ಎಲ್ಲ ಮುಗಿಯಿತು ಎಂಬಂತೆ ಕೂರಬೇಕೆಂದೆ ನನಗೆ ಈ ವಯಸ್ಸನ್ನು,ಆರೋಗ್ಯವನ್ನು, ಏನಾದರೂ ಮಾಡುವ ಚೈತನ್ಯವನ್ನು, ಮಾಡಬೇಕೆಂಬ ತುಡಿತವನ್ನು ನನ್ನನ್ನು ರೂಪಿಸಿದ ಸೃಷ್ಟಿ ದಯಪಾಲಿಸಿದೆಯೇ? ಅಥವಾ ಈ ತಪನೆಯೇ ಒಂತರ ಏನನ್ನೂ ಮಾಡಲು ಸಾಧ್ಯವಿರುವ ಎಲ್ಲಕ್ಕೂ ಒಡ್ಡಿನಿಂತ ಹೊಸ ಬಾಗಿಲೆ? ನಾನು ಹ್ಯಾಗೆ ಗ್ರಹಿಸಿದೆ ತೊಳಲಾಟವನ್ನ,ಸಂಕ್ರಮಣವನ್ನ ಅಂತ ಮುಂದೆ ಎಂದಾದರೂ ಹೇಳಿಯೇನು.
-ಪ್ರೀತಿಯಿಂದ,ಸಿಂಧು

Tuesday, April 19, 2011

ಬಿಸಿಲು ಮಳೆ ಮಳೆಬಿಲ್ಲು

ಪುಟ್ಟ ಕಲ್ಲು
ಕಪ್ಪೆ ಹಾರಿಸಿ ಎದ್ದ ಅಲೆಯಂದದಿ
ನೆನಪ ಸುಗಂಧ
ಪರಿಮಳಿಸಿ
ಹೊರಗೆ ಕಾಫಿಗೆ ಬಂದು
ನೋಡುತ್ತೇನೆ
ಬಿಸಿಲು ತೂರಿ ಮಳೆ
ಒಳಗೂ ಹೊರಗೂ
ದೊಡ್ಡ ಕಟ್ಟಡದ ಛಾವಣಿ
ಕೆಳಗೆ ಅಂದದ ಆವರಣ
ಹೊರಗೆ ಧೂಳು ಹಬೆಯೆಬ್ಬಿಸುತ್ತಾ
ಮಳೆ ನೀರ ಪೂರಣ
ದಶಕಗಳ ನೆನಪು
ಮಣ್ಣವಾಸನೆಯಲ್ಲಿ
ಹಬ್ಬುತ್ತಾ
ಮನಸು ಹಿತವಾದ ಕನಸ
ಹೊಕ್ಕು
ಪುಟ್ಟ ಕಲ್ಲು
ಕಪ್ಪೆ ಹಾರಿಸಿ
ಅಲೆ ಅಲೆ ಅಲೆ..
ಚೈತನ್ಯನ ನೋಡುತಲೆ!
ಸಾಗರ, ಕೆರೆ ಏರಿ, ಸೈಕಲ್ ಸವಾರಿ
ಹೈಸ್ಕೂಲು, ಮಾಶ್ಟ್ರು, ಸಹಪಾಠ
ಮಾತಿರದ ಕಾಲದ ಮೆಲಕು
ಹಾಕುತ್ತಾ ಕಾಫಿ ಮುಗಿದ ಮೇಲು
ಕೈಯಲ್ಲೆ ಇದೆ ಲೋಟ
ಹೊಸ ಹೊಸ ನೋಟ!
ಬಿಸಿಲು ಮಳೆ ಮಳೆಬಿಲ್ಲು
ಬೆಚ್ಚಗಿನ ಒದ್ದೆ ಅಲ್ಲು ಇಲ್ಲು ಎಲ್ಲೆಲ್ಲು

Tuesday, February 15, 2011

ನೀ ಬಂದ ದಾರಿ

ನೀ ಬಂದ ದಾರಿಯಲಿ
ಕಲ್ಲುಮುಳ್ಳು ಸಹಿತ ಕೆಂಪು ಮಣ್ಣು
ಮುಂದಡಿಯಿಟ್ಟಲ್ಲಿ
ಹಸಿರೆಲೆಗಳ ನಡುವೆ ಪುಟ್ಟಗೆ ಹಳದಿಯಾಗಿ
ಅರಳಿದ ನೆಲದಾವರೆ,
ಎಡವಿದ ಬೆರಳಿನ ನೆತ್ತರಿನ ಕಿರುಹನಿ
ಕುಂಕುಮದಂತೆ ಹಳದಿಎಸಳ ಸೋಂಕಿ
ಅವಡುಗಚ್ಚಿದ ಮುದ್ದುಬಾಯಿಗಳ
ಕೊನೆಗೆ ಸುಕ್ಕು
ಮಿನುಗು ಕಣ್ಣಂಚಲ್ಲಿ ಹೊಳೆದ ಹನಿಯಲ್ಲಿ
ನೆತ್ತಿಯ ಮೇಲಿನ ಬಿಸಿಲ ಪ್ರತಿಫಲನ
ಕನಸುಗಳೆಲ್ಲ ಹಾದಿಗೂಡಿ ಹೊರಟ
ಪಯಣದಿ ಸಿದ್ದಿಸಿದ ಧನ್ಯತೆ ನೀನೇನಾ?!!
ಬಿರುಬಿಸಿಲ ಬಯಲಲ್ಲಿ ಬೀಸಿದ ತಂಪು
ತಣ್ಣೆಳಲ ನೆಲೆಯಲ್ಲಿ ಮಂಜಾಗುತ್ತ
ಅಸಹನೆಯೆಬ್ಬಿಸುವುದೇಕೋ?
ಬದಲಾವಣೆಯ ಬದುಕಿನ
ನಾಗರಿಕತೆಯ ತೊಟ್ಟಿಲಿನ
ಮಹಿಮೆ ಬಣ್ಣಿಸಲಸದಳ!
ಸಾಕ್ಸು ಸುತ್ತುವರಿದು
ಬಿಳುಪೇರಿದ ಪಾದಗಳ ಆವರಿಸಿದ
ಬ್ರಾಂಡೆಡ್ ಶೂಗಳಲ್ಲಿ
ಎಡವಿ ಬೆರಳೊಡೆಯುವ ಅವಕಾಶವಿಲ್ಲ!
ಹೆಚ್ಚೆಂದರೆ
ನುಣುಪು ಮಾರ್ಬಲಿನಲ್ಲಿ ಜಾರಿಬಿದ್ದು
ಸ್ಪ್ರೈನ್ ಆಗಿ ಒಂದೆರಡು ವಾರ
ಮನೆಯಿಂದ ಕೆಲಸ ಮಾಡಬಹುದು-
ನನ್ನ ಆಹ್ ನಿನಗೆ ಏನೂ ಅನ್ನಿಸದ ಹಾಗೆ.
ನೀ ಬಂದ ದಾರಿ ಅದೇ ಅಲ್ಲಿದೆ
ಗಾಜುಗೋಡೆಗಳಾಚೆ.
ಇಲ್ಲೆ ನಿಲ್ಲುವುದು ಅನುಕೂಲವೇನೋ ನಿಜ
ಆದರೂ..
ಹೋಗಲಿ ಬಿಡು..
ನನ್ನ ಕಂಗಾಲುಗಣ್ಣಿಗೆ ಬೆಳಕ ಹರಿಸಿದ
ಶುಕ್ರತಾರೆಯೇ
ಈಗೇಕೆ ಹೆದರಿಕೆ?
ಆ ಪುಟ್ಟ ಪಚ್ಚೆಮೊಳಕೆ
ಅಷ್ಟು ಚೆಂದಕೆ ಹೊಳೆದಿದ್ದು
ಏರುಹಾದಿಯ ಬೆಟ್ಟತುದಿಯ
ಬಿರುಕು ಕಲ್ಲಿನ ನಡುವೆ
ನಸುಕಿನ ಚಳಿಯ ಚದುರಿಸಿ
ತೂರಿದ ಹೊನ್ನಬೆಳಕಲ್ಲಿ ಅಲ್ಲವೆ!

Wednesday, January 19, 2011

ಅಚಾನಕ್ ಖುಶಿ ಕೊಟ್ಟ ಫೇಸ್ಬುಕ್..!

ಇದ್ದಕ್ಕಿದ್ದಂಗೆ ಒಂದಿನ

ಚಳಿಗಾಲದ ಮಧ್ಯಾಹ್ನ

ಕೀ ಚಿಟುಕಿಸಿ ಜಾಲಕಿಟಕಿ ತೆರೆದರೆ

ಅಲ್ಲಿತ್ತೊಂದು ಕೊಂಡಿ

ಕುತೂಹಲದಿಂದ ಹಿಂಬಾಲಿಸಿ ಹೊರಟರೆ

ಬಂದು ನಿಂತಿದ್ದು ಕೆರೆಶಾಲೆಯ ನೆನಪಿನಂಗಳದಲ್ಲಿ

ಜೊತೆಜೊತೆಗೇ ಬೆಂಚಲ್ಲಿ ಕೂತು

ಎಂದೂ ಮಾತನಾಡಿಸಿರದ

ಆಗ ಅಕಸ್ಮಾತ್ತಾಗಿ ಎದುರು ಸಿಕ್ಕರೆ ನಾಚಿ,ಬೆಚ್ಚಿ, ಇರುಸು ಮುರುಸಾಗಿ

ತಿರುಗಿ ಸಾಗಿದ್ದ ಇಬ್ಬರೂ

ಇವತ್ತು

ಕಳೆದ ಗಂಟನ್ನು ಜೋಪಾನವಾಗಿ

ಎತ್ತಿಟ್ಟಂತೆ,

ಮರೆಯದಂತೆ, ಆಗೀಗ ಸಿಗುವಂತೆ

ಕಳೆದ ಕಾಲದ ಅಸಮಾನತೆಯನ್ನೆಲ್ಲ

ಸಪಾಟಾಗಿಸಿ ಒಬ್ಬರಿಗಿನ್ನೊಬ್ಬರ ಸಿಗಿಸಿ

ಹಳೆ ನೆನಪಿನ ಕೆರೆಯ ಅರಳು ಮೊಗ್ಗುಗಳನ್ನ

ಹರವಿ ಕೂರಿಸಿರುವುದು

ಫೇಸ್ಬುಕ್ಕು ಎಂಬ ಜಾಲಂಗಳ!

ನವೀನ,ರಘುರಾಮ,ದಿನೇಶ,ಶಶಿ..ಪೂರ್ಣಿಮಾ

ಇವರೆಲ್ಲರ ಬೆಂಗಡೆಯಲ್ಲಿ ಅನಾಮತ್ತು ಏಳು ವರ್ಷದ ಬಾಲ್ಯ

ಮತ್ತು ಅದು ಕಟ್ಟಿಕೊಟ್ಟ ಈ ಬದುಕು!