Monday, August 25, 2014

ಅನುತ್ತರಾ

ಅದುಮಿಟ್ಟ ಅಸಹನೆ,
ಅವಡುಗಚ್ಚಿದ ದುಃಖ,
ಅಡಗಿಸಿಟ್ಟ ಕೀಳರಿಮೆ,
ಎಲ್ಲವನ್ನ ಉಂಡು
ಹೂಹೂವಿನ ಚಿತ್ರದ
ಮಿದು ಹತ್ತಿಬಟ್ಟೆ ಹೊದ್ದ
ಕ್ರೌರ್ಯ-ವು,
ನಿನ್ನ ಪುಟಿದು ನಿಲ್ಲುವ
ಎಳೆ ಬೆನ್ನಿಗೊಂದು ಸೆಳೆದು
ಬಾರಿಸಿದ್ದು ತಪ್ಪು ಮಗಳೆ.

ಇವತ್ತು,
ಗೊತ್ತಾಗದೆ ಅಥವಾ ಗೊತ್ತಾಗಿಯೇ
ಕ್ಷಮಿಸಿ
ನಕ್ಕು ಮುದ್ದಿಸಿ,
ಕೆನ್ನೆಗೊಂದು ಹೂಮುತ್ತೊತ್ತಿ
ಅಳಿಸಿಬಿಟ್ಟೆ ನನ್ನ ನೀನು.



ಮುಂದೊಮ್ಮೆ ನಾಳೆ,
ವರುಷಗಳು ಕಳೆದು,
ಗೊತ್ತಾದಾಗ,
ಕ್ಷಮಿಸಬೇಡ ನೀನು
ಕ್ಷಮಿಸಲೂಬಾರದು.
ಹೊರಲಾರೆ ಕ್ಷಮೆಯ ಭಾರ ನಾನು. :(

ಪುಟ್ಟಿಗೆ ಹೊಡೆದೆ ಎಂದಲ್ಲ,
ಹೊಡೆಯಬಾರದಿತ್ತು ಎಂದೂ ಅಲ್ಲ,
ಎಲ್ಲೋ ಇರಿದಿದ್ದಕ್ಕೆ ಇಲ್ಲಿ ಹೊಡೆಯುವುದು,
ಯಾತರದೋ ಅಸಹನೆ
ಇಳಿದಾರಿಯಲಿ ಎದುರುಬೀಳದಲ್ಲಿ
ಹರಿಬಿಟ್ಟಿದ್ದು ಹೇಗೆ ಸರಿ?


ಎಲ್ಲಕಿಂತ ಪ್ರೀತಿಯ ಅಮ್ಮ ಎಂದು
ನೀನು ಹೊಂದಿಸಿಕೊಂಡೆ,
ಎಂದರೂ
ನೀನು ಇದೇ ದಾರಿಯ
ಪಥಿಕಳಾಗಬಾರದು.

ಹೌದು,
ಮುಂದೊಮ್ಮೆ ಇದನೋದಿ
ಗೊತ್ತಾದಾಗ ನೀನು
ನನ್ನ ಕ್ಷಮಿಸಬಾರದು,
ಕ್ಷಮಿಸುತ್ತ ಇದೇ
ಹಾದಿಯ ನೀನು
ಹಿಡಿಯಬಾರದು.
ಅದ ಕಲಿಯಬಾರದು.

ಕೆಲವು ಸಲ,
ಕ್ಷಮಿಸುವುದಕ್ಕಿಂತ
ಕ್ಷಮಿಸದಿರುವುದು ಹೆಚ್ಚು ಅಗತ್ಯ.