Thursday, June 9, 2016

ಮಳೆಗಾಲ

ಇದೀಗ ಮಳೆಗಾಲ;
ಹೋದ ಸಲದ ಮಳೆ ಕಳೆದು
ಚಳಿ ಹಿಡಿದು, ಹಸಿರು ಕೆಂಪಾಗಿ
ಧನುರ್ಮಾಸದ ಚುಮುಚುಮು ಬೆಳಗಲ್ಲಿ
ಬಿಸಿ ಬಿಸಿ ಹುಗ್ಗಿಯುಂಡು
ಸಂಕ್ರಮಣದಲ್ಲಿ ಉದುರಿದ
ಎಲೆಗಳ ಕಾಂಡ ಹೊತ್ತ ಮರಗಿಡಗಳೆಲ್ಲ
ಚೈತ್ರ ಬರುವ ನಿರೀಕ್ಷೆಯಲ್ಲಿ ಚಿಗುರಿ
ವೈಶಾಖದ ಬಿಸಿಲಿನಲ್ಲಿ
ಹೂವ ಅಗ್ಗಿಷ್ಟಿಕೆಯ ದಿವ್ಯ ಗೊಂಚಲು
ಮೊದಲ ಮಳೆ ಬಿದ್ದ ಕೂಡಲೆ
ಬೇಲಿಸಾಲಿನ ಮಲ್ಲಿಗೆ ಬಳ್ಳಿ ತುಂಬ
ಅಚ್ಚ ಬಿಳಿಯ ಮಲ್ಲಿಗೆ
ಕೊಡೆ ಹಿಡಿದು, ಹೊಂಡ ಹಾರುತ್ತ
ಹೋಗುವಾಗ ಸಿಕ್ಕುವುದು
ಮಳೆ ನಿಂತ ಮೇಲಿನ ಹೂಚೆಲ್ಲಿದ ಹಾದಿ

ಇದೀಗ, ಮತ್ತೆ ಮಳೆಗಾಲ:
ಬ್ಲಾಗೂರಿನ ಮರದಲ್ಲಿ
ಮಳೆನಿಂತು ಹನಿಯುತಿದೆ.
ತೂಗಿಬೀಳುವ ಆಕಾಶಮಲ್ಲಿಗೆ
-ಯ ಮೃದುಲಘಮಕ್ಕೆ
ಚಡಪಡಿಸುವ ಮನವನ್ನ
ಸಂತೈಸುವ ಮತ್ತಿದೆ.
ಹಳೆವೈನು ಕೇಳುವವರಿಲ್ಲದೆ ಸುಮ್ಮನೆ ಕೂತಿದೆ.

ಈ ಸಂಭಾಷಣೆ.. ಈ ಸ್ನೇಹ ಸಂಭಾಷಣೆ..

ಸೈಲೆಂಟು ಮೋಡಿನಲ್ಲೆ
ರಿಂಗಾಗುವ ಫೋನು...:
ನಿನ್ನ ಆತುರದ ನುಡಿ
ಕವಿತೆ ಕಳಿಸುತ್ತೇನೆ
ಓದು ಬೇಗ...
ಪಿಸುಗುಡುತ್ತೇನೆ ನಾನು:
ಇರಲಿ, ನಿಧಾನ,
ಇವತ್ತು ತುಂಬ ಕೆಲಸ,

ಎಲ್ಲಿ ಬಿಡುತ್ತೀಯ ನೀನು?:
ಇಲ್ಲ, ಈಗಲೇ!
ಇದು ನಿನ್ನೆ ರಾತ್ರಿಯಿಂದ ನನಗೆ
ಹಿಡಿಸಿದೆ ಹುಚ್ಚು,
ನಿನಗೂ ಒಂದಿಷ್ಟು ಒರೆಸದೆ
ಇರಲಿ ಹೇಗೆ?!
ಈ ಕೂಡಲೆ,
ಎಲ್ಲ ಬದಿಗಿಟ್ಟು
ಓದು..
ಮಧುರವೋ ಚೆನ್ನವೋ
ಆಮೇಲೆ ಹೇಳು.

ಓದು. ಓದಿ ಮರುಳಾಗು,
ಹಿಡಿಯಲಿ ಹುಚ್ಚು,
ಸಂಜೆ ಸಿಗೋಣ,
ಕಾಫಿ ಕುಡಿಯುತ್ತಾ-
ತಿರುಪು ಬಿಚ್ಚು.
ಅಮಾಸೆ ಹುಣ್ಮೆಗಳ,
ಹಂಗಿಲ್ಲದ
ಭಾವಕಡಲ ದಂಡೆಗೆ
ಬಂದೊಡ್ಡಲಿ ಭರತ.

ಹೂಂ.. ಸರಿ ಸರಿ,
ಇನ್ನು ಬಿಡುವುದಿಲ್ಲ ಈ ಮಹರಾಯಿತಿ.
ಈಗ ಶುರುವಾಗಿದೆ
ಮಾನ್ಸೂನು,
ಆಗಲೇ ಕಡಲ್ಕೊರೆತ!


:-) :-):-) :-) :-):-)
ಸರಿ, ಎಲ್ಲಿ? ಇನ್ನೂ ಬರಲಿಲ್ಲ ಕವಿತೆ?
ಹಿಡಿಯುವುದಕ್ಕೆ ಮೊದಲೆ ಹುಚ್ಚು ಕೆದರಿತೆ?!

Tuesday, June 7, 2016

ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ

ಮಂಕಾದ ಹಗಲು
ಇಳಿಬಿದ್ದ ಹೆಗಲು
ತಿರುವಿನಲ್ಲಿ ಸಿಕ್ಕ ದಿನ
ಹೊರಟ ಪಯಣಕ್ಕೆ
ದಾರಿ ನೂರಿದ್ದವು
ಏರು ಹೆಜ್ಜೆ, ಬೆಟ್ಟ ಕೊಳ್ಳ
ತುಂಬಿ ಹರಿವ ಹಳ್ಳ
ಬಯಲು ಹೊಕ್ಕವರು
ಇಟ್ಟ ಹೆಜ್ಜೆಗಳ ಹಿಂದೆ
ದೂರದಾರಿ ಮಲಗಿದೆ
ನೆಲೆನಿಂತ ತಾವಿನ
ತುಂಬ ಕುಹೂಗೀತ
ಸ್ಥವಿರಗಿರಿಯ ಚಲನದಾಸೆಯೂ
ಬಿಸಿಯೇ ಘನವಾಗಿ ಸುರಿವ ತಣ್ಬನಿಯೂ
ಜತೆಜತೆಗೆ
ಹಿನ್ನೆಲೆಗೆ ಹೆದ್ದೆರೆಗಳ ಕಡಲು

ಮಂಕಾದ ಹಗಲು
ಇಳಿಬಿದ್ದ ಹೆಗಲು
ನಿನಗೆ ಅಲ್ಝಮೈರು
ನನಗೆ ಪಾರ್ಕಿನ್ಸನ್ನು
ಒಂದೇ ಉಸಿರಿಗೆ ಹತ್ತಿಳಿದ ಬೆಟ್ಟಮಗ್ಗುಲು
-ಗಳ ಮರೆತು ಈಗ ನೋಯಿಸುವ ಬೆನ್ನು

ಮಂಕಾದ ಹಗಲು
ಇಳಿಬಿದ್ದ ಹೆಗಲು
ಸುಖಾಸುಮ್ಮನೆ ನೋಯಿಸುವ ಗಿಬ್ರಾನು
ನಮ್ಮಿಂದಲೇ ಬಂದವರು ನಮ್ಮವರಲ್ಲ
ನಮ್ಮನ್ನ ತಂದವರು ನಮ್ಮವರಾಗಿಲ್ಲ
ದಾರೀಲಿ ನೆನೆದು ಕೈ ಕೈ ಹಿಡಿದವರು
ಧಾರೀಲಿ ನೆನೆದ ಕೈ ಕೈ ಹಿಡಿದವರು
ಜತೆಯಲಿದ್ದೂ ಜತೆಯಲಿಲ್ಲ.
ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ
ಎಲ್ಲ ಚಲನಶೀಲತೆಗೆ ಒಂದೇ ಮೂಲೆ - ದೇವ ಮೂಲೆ
ನುಡಿಯದಲೆ ಮುತ್ತಿನ ಹಾರದಂತಿರಬೇಕು
ಬಾಯಿಬಿಟ್ಟರೆ ಬಣ್ಣಗೇಡು.

ಹೀಗಾಗಿಯೇ..
ಮಂಕಾಗಿದೆ ಹಗಲು
ಇಳಿಬಿದ್ದಿದೆ ಹೆಗಲು

ಇನ್ನೇನು ಶಾಲೆಬಿಡುವ ಹೊತ್ತು
ಬಣ್ಣ ಬಣ್ಣಗಳ ಕಾಮನಬಿಲ್ಲು ಬರಬಹುದು ಇವತ್ತು.
ಮಂಕು ಹಗಲು ದಿಢೀರನೆ
ಓಕುಳಿ ಸಂಜೆಯಲ್ಲಿ ಜಾರಿ
ನೀಲಿಗಪ್ಪಾಗಿ ಹರಡಿ
ಮಳೆನಿಂತು ಮಿಂಚಬಹುದು ಅಲ್ಲಲ್ಲಿ ಒಂದೊಂದು ಮುತ್ತು.

[[[ ಬೇಂದ್ರೆಯಜ್ಜನ ಪ್ರಸಿದ್ಧ ಸಾಲು ದಾರಿಲೆ ನೆನೆದ ಕೈ ಹಿಡದಿ ನೀನು. (ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯಿಂದ) ಇದನ್ನು ನಾನು ಈ ಕವಿತೆಯ ಲಹರಿಗೆ ತಕ್ಕಂತೆ ಉಪಯೋಗಿಸಿದ್ದೇನೆ. ಅಲ್ಲಿ ಬೇರೇನೇ ಉಪಯೋಗಿಸಿದರೂ ಅರ್ಥನಷ್ಟವೆನಿಸಿದ್ದರಿಂದ.]]]

Monday, June 6, 2016

ಮರೀಚಿಕೆ ಕಂಡರೂ ಖುಶಿ

ತುಟಿಯಂಚು ಅಷ್ಟು ಹಿಗ್ಗಬಾರದೆ?,
ಆ ಕಿರಿಹಲ್ಲು ಹೊಳೆಯಿಸುವ ಒಂದು ಪುಟ್ಟ ನಗು..
ಯಾಕೆಂದರೆ?...
ಹೀಗೇ ಸುಮ್ಮನೆ,

ಯಾಕೋ ಈ ಹೊತ್ತು ಮನಸು ಬಿಮ್ಮನೆ,
ಹಗುರಾಗಿ ನಗೆದೋಣಿಯ ಮೇಲೇರಿ
ಒಳ ನದಿಯಲ್ಲೊಂದು ಯಾನ.. ಥಟಕ್ಕನೆ
ಇಳಿದುಬಂದು ಬಿಡಬಹುದು ತೀರ ಬೇಕೆನ್ನಿಸಿದೊಡನೆ.

ಏನಿದೆಲ್ಲ ಹುಚ್ಚಾಟ. ಕಿರಿಕಿರಿ;
ಸುಮ್ಮನಿರಬಾರದೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ಅಚ್ಚುಕಟ್ಟಾಗಿ
ಶಿಸ್ತಾಗಿ, ಧೂಳು ಹೊಡೆದು, ಮಡಿಕೆ ಮುದುರದೆ
ಇರುವ ಹಾಗೆ..

ನಗು ಎಂದರೆ ನಿನಗೆ ಹೇರಿಕೆ
ನೀ ನಗದಿದ್ದರೆ ನನಗೆ ಚಡಪಡಿಕೆ
ಶಿವನೇ ಇದೆಂಥ ಕ್ರೌರ್ಯ.
ಯೋಗಮುದ್ರೆಯಲ್ಲಿ ನಗುವಿಗೆ ಜಾಗವಿಲ್ಲವಲ್ಲ.
ಒತ್ತಾಯದ ಪರಮಾನ್ನದ ಗತಿ ಎಲ್ಲರಿಗೂ ಗೊತ್ತು.

ಅದು ಸರಿ.
ಈ ಉಸಿರುಗಟ್ಟಿಸುವ ಬದುಕಿನಲ್ಲಿ
ಒಂದು ನಗೆಬುಗ್ಗೆಗೆ ಕಾದವರು
ಮೌನದುಸುಬಿನಲ್ಲಿ ಹುಗಿದೇ ಹೋಗಬಹುದು.
ನಗಲು ಒತ್ತಾಯಿಸಿದರೆ ಹಿಂಸೆ
ನಗದೆ ಇದ್ದರೋ.. ಪ್ರತಿಹಿಂಸೆ. 
ಎರಡು ಸತ್ಯಗಳ ಮಧ್ಯೆ ಒಂದು ಸುಳ್ ಸುಳ್ಳೇ ನಗೆ
ಇಡೀ ಬದುಕಿನ ತುಂಬ ತುಂಟನಗು ಬೀರುತ್ತದೆ.

ಅದಕ್ಕೇ ಇರಬಹುದಾ..
ಮರೀಚಿಕೆ ಕಂಡರೂ ಖುಶಿ.