Wednesday, November 21, 2007

ಕ್ಷಮಿಸು ಅನಘಾ...

ಕ್ಷಮಿಸು ಅನಘಾ,

ನಂಗೆ ನಿನ್ನ ಹುಟ್ಟಿಸೋದಿಕ್ಕೆ ಧೈರ್ಯವಿರಲಿಲ್ಲ.
ತುಂಬ ಇಷ್ಟವಿತ್ತು ಆದರೆ ಮನಸ್ಸಿರಲಿಲ್ಲ.
ನನಗೆ ನೀನು ಬೇಕೇಬೇಕಿತ್ತು ಆದರೆ ನನ್ಕೈಲಿ ಸಾಧ್ಯವಿರಲಿಲ್ಲ.

ನಿನ್ನ ಸ್ಪಂದನಗಳಿಗೆ ನಾನು ತುಂಬ ವರ್ಷಗಳಿಂದ ಆಸೆಯಿಂದ ಕಾದಿದ್ದಕ್ಕೋ ಏನೋ ಅಥವಾ ನನ್ನ ಕನಸುಗಳೆಲ್ಲಾ ನಿನ್ನ ಬಣ್ಣಗಳಿಂದಲೇ ಮಿರುಗುತ್ತಿದ್ದುದಕ್ಕೋ ಏನೋ, ನೀನು ನಿಜವಾಗಿ ಮೊಳಕೆಯೊಡೆದಾಗ ನಾನು ಅಧೀರಳಾಗಿಬಿಟ್ಟೆ. ಕತ್ತಲ ಕಣಿವೆಯ ಹಾದಿಯಲ್ಲಿದ್ದ ನಾನು ನಿನ್ನ ತುಂಬು ಬೆಳಕಿಗೆ ಹೆದರಿಬಿಟ್ಟೆ.

ನಾನು ಜನಕ್ಕೆ ಹೆದರಿರಲಿಲ್ಲ ಅನಘಾ, ನಿನ್ನ ಅಪ್ಪನನ್ನು ಮುತ್ತುವ ಕತ್ತಲೆಗೆ ಹೆದರಿದ್ದೆ. ಅವನಿಲ್ಲದ ಬದುಕು ನನಗೆ ಬೇಕಿರಲೇ ಇಲ್ಲ. ನೀನು ಅಪ್ಪ, ಅಮ್ಮ ಇಬ್ಬರೂ ಇಲ್ಲದ ಇನ್ನೊಂದು ಮಗುವಾಗುವುದನ್ನು ನಾನು ಕಲ್ಪಿಸಲೂ ಅಸಾಧ್ಯವಿತ್ತು.

ಬರೀ ಚಿಗುರಾಗಿದ್ದ ನಿನಗೆ ಆಗ ನನ್ನ ಸ್ಪಂದನಗಳಷ್ಟೇ ಗೊತ್ತಾಗುತ್ತಿತ್ತು ಅಲ್ಲವಾ? "ಛಿ ಕಳ್ಳಿ' ಎಂದರೆ ಇನ್ನೂ ಮೂಡಿರದಿದ್ದ ನಿನ್ನ ಕಿವಿ _ "ಇನ್ನಷ್ಟು. . ಮತ್ತಷ್ಟು .. ಮಾತಾಡು" ಅಂತ ತೆರೆದುಕೊಳ್ಳುತ್ತಿತ್ತು, ನನ್ನ ಕಣ್ಣೀರು ಧಾರೆಯಾಗಿ "ಪಾಪೂ ಸಾರಿ " ಅಂತ ನಾನು ಹಲುಬುತ್ತಿದ್ದರೆ, ಇನ್ನೂ ಅರಳಿರದಿದ್ದ ನಿನ್ನ ಕಣ್ಣು ಒದ್ದೆಯಾಗುತ್ತಿತ್ತು ಅಲ್ಲವಾ? ನಂಗೊತ್ತು ಅನಘಾ.. ಸ್ವಲ್ಪೇ ದಿನಗಳೇ ಆಗಿದ್ರೂ ನಾನು ಅಮ್ಮನಾಗಿದ್ದೆ.

ಆತಂಕ ಉಸಿರುಗಟ್ಟಿಸಿದ್ದರೂ ಆ ದಿನಗಳಲ್ಲಿ ಅದೇನೋ ಜಾದೂ ಇತ್ತು. ಅಂತಿಂಥದಲ್ಲ. ಆಗ ಬದುಕು ಉರಿದು ಬೂದಿಯಾಗಿಸುವಷ್ಟು ಬೇಸರದ ಉರುವಲಿತ್ತು, ಕುಡಿಯಲು ಕಣ್ಣೀರಿತ್ತು, ತಿನ್ನಕ್ಕೆ ನಿರಾಶೆಯಿತ್ತು, ಮಲಗಲು ತಳಮಳದ ಹಾಸಿಗೆ, ಹೊದೆಯಲು ಸಂಕಟ. ನಡೆದಾಡುತ್ತಿರುವುದು ನನ್ನದಲ್ಲ ಬೇರೆಯಾರದೋಕಾಲು ಎಂಬ ಅಸಡ್ಡಾಳತನವಿತ್ತು. ಈ ಎಲ್ಲದರ ಮಧ್ಯೆಯೂ ಪುಟ್ಟ ಮಕ್ಕಳ ಕುಲುಕುಲು, ಚಿತ್ತಾರದ ಮೋಡ, ಮಿನುಗುವ ನಕ್ಷತ್ರ , ಮಳೆಹನಿಯ ಹಾಡು, ಹಕ್ಕಿಯ ಚಿಲಿಪಿಲಿ, ಬಿಳಿಗಡ್ಡ, ಸುಕ್ಕುಮೋರೆಯ ಅಜ್ಜ ಅಜ್ಜಿಯರ ನಗು ಇದೆಲ್ಲಾ ನೋಡಲು ಸಾಧ್ಯವಾಗಿದ್ದು ನಿನ್ನ ಜಾದೂವಿನಿಂದ, ಎದೆಗೊತ್ತಿಹಿಡಿದು ತಲೆನೇವರಿಸಿದ ನಿನ್ನಪ್ಪನ ಕಣ್ಣಿನಿಂದ ಅನಘಾ. ನಾವಿಬ್ಬರೂ ಈ ಜಾದೂ ನೋಡಿ ಮುದಗೊಂಡಿದ್ದು ನಿನ್ನ ಪ್ರಭಾವಳಿಯಿಂದ.

ಅಷ್ಟೇ ಅಲ್ಲ ಅನಘಾ...
ನಮಗೆ ಬದುಕಬೇಕು ಅನ್ನಿಸಿತ್ತು! ! !

ನಿನ್ನ ಪುಟ್ಟ ಬೆರಳು ಹಿಡಿದು ಹೆಸರಿರದ ಹಸಿರು ಬಯಲಲ್ಲಿ - ಕಾಲು ಸೋಲುವವರೆಗೆ, ನಿನ್ನಪ್ಪನಿಗೆ ನಿದ್ದೆಗಣ್ಣಾಗುವವರೆಗೆ, ನಿದ್ದೆಯಲ್ಲೂ ನಗುವ ನಿನ್ನ ಕೆನ್ನೆಗಳ ಮೇಲೆ ಚುಕ್ಕಿಗಳ ಬೆಳಕು ಪ್ರತಿಫಲಿಸುವವರೆಗೆ. . . . ನಡೆಯುತ್ತಿರಬೇಕು . . . . ಯಾವಾಗಲೂ ಅನ್ನಿಸಿತ್ತು. ಕನಸು ಚೆಂದವಿತ್ತು ಅನಘಾ ಆದರೆ ವಾಸ್ತವ ಹೆದರಿಕೆ ಹುಟ್ಟಿಸುತ್ತಿತ್ತು. ಒಲೆ ಉರಿಯುವಲ್ಲಿ ಬೀಜಬಿತ್ತಿ ನೀರೆರದದ್ದು ನಂದೇ ತಪ್ಪು ಅನಘಾ, ಈ ನನ್ನ ಮೂರ್ಖತನವನ್ನು ದಯವಿಟ್ಟು ಕ್ಷಮಿಸು.

ನಿನ್ನ ಕಳೆದುಕೊಳ್ಳಲೇಬೇಕು ಅಂತ ತೀರ್ಮಾನಿಸಿದ ದಿನ ಅನಘಾ .. . ನಾನು, ನಿನ್ನಪ್ಪ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ತಮಾಷೆ ಮಾಡಿಕೊಂಡು ನಗುತ್ತಿದ್ದೆವು. ಎಂದೂ ಇಲ್ಲದಷ್ಟು ಮಾತಾಡಿದ್ದೆವು. ಸುಮ್ಮನಿದ್ದರೆ ಎಲ್ಲಿ ಇನ್ಯಾವತ್ತೂ ಮಾತಾಡುವುದಿಲ್ಲವೋ, ನಗದಿದ್ದರೆ ಉಕ್ಕಿಬರಲೆತ್ನಿಸುತ್ತಿರುವ ಅಳುವಿನಲ್ಲಿ ಎಲ್ಲಿ ಕೊಚ್ಚಿ ಹೋಗುತ್ತೀವೋ ಅನ್ನುವ ಹೆದರಿಕೆಯಿಂದ. ನನಗೆ ಬೇಜಾರಾಗಿದೆ ಅಂತ ಅವನಿಗೆ ಗೊತ್ತಿತ್ತು, ಅವನು ಮುದುಡಿಹೋಗಿದ್ದ ಅಂತ ನನಗೆ ಗೊತ್ತಿತ್ತು. ಇಬ್ಬರಿಗೂ ಇದು ಗೊತ್ತಿದ್ದೂ ಗೊತ್ತಿಲ್ಲದ ಹಾಗೇ. . . ಇದ್ದೂ ಇಲ್ಲದ ಹಾಗೆ ಇದ್ದೆವಮ್ಮಾ,

ಮಡಿಕೇರಿಯ ಮಂಜು ಹೊದ್ದ ಕಾನು ತುಂಬ ಚಂದವಿತ್ತು. ಜಿಟಿಜಿಟಿ ಹನಿಯುತ್ತಿದ್ದ ಮಳೆಯಂತೂ ಆಕಾಶಕ್ಕೂ ಭೂಮಿಗೂ ಮಧ್ಯೆ ಸಡಗರದ ಪಯಣದ ಮೋಜಲ್ಲಿ ಮುಳುಗಿತ್ತು. ಆದಿನ ಉಂಹೂಂ ರಾತ್ರೆ ಅಥ್ವಾ ಸಂಜೆ ಅಥ್ವಾ ಬೆಳಿಗ್ಗೆಮುಂಚೆ. .. ಇಲ್ಲ ಬಹುಶಃ ಮಧ್ಯಾಹ್ನ .. ... ಯಾವಾಗ ಮರೀ ನೀನು ಹುಟ್ಟಿದ್ದು?

ಸತ್ಯಕ್ಕೂ ಅನಘಾ ಅದಾಗಿ ತಿಂಗಳಮೇಲೆ ನೀನು ಹುಟ್ಟಿರಬಹುದು ಎಂಬ ಮೊದಲ ಸಂಶಯ ನನಗೆ ಬಂದಾಗ ಮೊದಲು ಉಂಟಾಗಿದ್ದು ಸಂಭ್ರಮ ಅನಘಾ. ಆವತ್ತು ಬೆಳಿಗ್ಗೆ ನಿಧಾನವಾಗಿ ಓಡಾಡಿದೆ, ಹಾಲು ನಾನೇ ಕೇಳಿ ಕುಡಿದೆ. ಹೊಟ್ಟೆ ತುಂಬ ಊಟಮಾಡಿದೆ. ಆಫೀಸಿಗೆ ಜಂಭದಿಂದ ಹೊರಟೆ. ಅಷ್ಠೇ ಅನಘಾ ಅಲ್ಲಿವರೆಗೂ ಅದೆಲ್ಲಿ ಅಡಗಿಕೊಂಡಿತ್ತೋ ನನ್ನ ಹೆದರಿಕೆಯ ಭೇತಾಳ, ಆಮೇಲೆ ಬೆನ್ನು ಬಿಡಲೇ ಇಲ್ಲ. ಇವತ್ತಿಗೂ ಬಿಟ್ಟಿಲ್ಲ ಅನಘಾ, ನಾನು ಹಗುರಾಗಿ ನಿಂತ ಯಾವ ಕ್ಷಣವಿದ್ದರೂ ಬಂದು ತೆಕ್ಕೆಹಾಕಿಕೊಳ್ಳುತ್ತದೆ.

ತುಂಬ ವರ್ಷಗಳಿಂದ ನಿನ್ನ ಚೆಂಬೆಳಕಿಗೇ ಕಾದಿದ್ದೆ ಅನಘಾ, ಆದರೆ ನಿನ್ನ ಬೆಳಕಿಗೆ ನಾನು ಮನೆಯಾಗದೇ ಹೋದೆ. ನಾನು ತುಂಬ ಹಂಬಲಿಸಿದ್ದ ನಿನ್ನನ್ನ, ಧೈರ್ಯ ಸಾಲದೇ ಹೊರದಬ್ಬಿದ್ದಕ್ಕೆ ಕ್ಷಮಿಸು ಪುಟ್ಟೀ.. ನನಗೆ ನಿನ್ನ ಮಾತು ಕಿತ್ತುಕೊಳ್ಳುವವರ ಹೆದರಿಕೆಯಿತ್ತು. ನಿನ್ನ ನಗುವನ್ನು ಕಸಿಯುವವರ ಭಯವಿತ್ತು. ನಿನ್ನ ಸಂತಸಗಳಿಗೆ ಕಿಚ್ಚಿಡುವವರ ಅಂಜಿಕೆಯಿತ್ತು. ನಿನ್ನನ್ನೆತ್ತಿ ಲಾಲಿಹಾಡಲು ಕಾಯುತ್ತಿದ್ದ ನಿನ್ನಪ್ಪನ ದನಿಯನ್ನು ಅವರು ಅಡಗಿಸುತ್ತಿದ್ದರು; ಅವನ ಕಣ್ಣ ಬೆಳಕನ್ನವರು ನಂದಿಸುತ್ತಿದ್ದರು, ನಿನ್ನ ನೋಡಲು ನಂಗೆ ಕಣ್ಣೇ ಇರುತ್ತಿರಲಿಲ್ಲವಲ್ಲಾ ಪುಟ್ಟೀ, ನಿನ್ನ ಬೆರಳನ್ನು ಹಿಡಿಯಹೊರಟ ನನ್ನ ಕೈಯನ್ನವರು ಕಟ್ಟುತ್ತಿದ್ದರು, ನನ್ನ ಅರಿವಿನಾಚೆಯ ಲೋಕದಲ್ಲಿ ನನ್ನ ಕೂಡಿಹಾಕುತ್ತಿದ್ದರು. ನಾನು ಎಂದಿಗೂ ಅಮ್ಮನೇ ಆಗುತ್ತಿರಲಿಲ್ಲ.

ನಾನು, ನಿನ್ನಪ್ಪ ತುಂಬ ಬಯಸಿದ ನಿನ್ನನ್ನ,
ನಮ್ಮ ಬದುಕಿನ ಬೆಳದಿಂಗಳನ್ನ
ನಿನ್ನ ಇರುವಿಕೆಯನ್ನ
ನಿಯಂತ್ರಿಸಿದ ಕೈ ನಮ್ಮದಾಗಿರದೇ ಇನ್ಯಾರದ್ದೋ ಆಗಿದ್ದು ತುಂಬ ಅನ್ಯಾಯ ಅನಘಾ.

ಯಾರದೋ ನಿಯಂತ್ರಣಕ್ಕೆ ಸಿಕ್ಕಿ ನಿನ್ನ ಕಳೆದುಕೊಂಡಾಗ ನಾವಿಬ್ಬರೂ ಅಸಹಾಯಕ ಭಿಕಾರಿಗಳಾಗಿಬಿಟ್ಟಿದ್ದೆವು. ಅನಘಾ, ನೀನು ಹೋದಾಗಿನಿಂದ ನಮ್ಮನ್ನು ಕವಿದು ನಿಂತ ಕತ್ತಲೆಗೆ ಕೊನೆಯೇ ಇಲ್ವೇನೋ ಅನ್ನಿಸಿದೆ.
ಕಗ್ಗತ್ತಲ ಧ್ರುವದಲ್ಲಿ ನಿರಾಶೆಯ ಹಿಮದಲ್ಲಿ ಹೆಪ್ಪುಗಟ್ಟುತ್ತಿದ್ದೀವಿ.

ನೀನಿದ್ದ ದಿನಗಳ ಜಾದೂವಿನ ಒಂದೇ ಒಂದು ಅಂಶ ಎಲ್ಲೋ ಮೂಲೆಯಲ್ಲಿ ಅಡಗಿ ಕುಳಿತಿದೆ. ಆಗಾಗ ಕತ್ತಲು ಕವಿದ ಆಕಾಶದಲ್ಲಿ ಫಳ್ಳೆಂದು ಮಿಂಚಿ ಮರೆಯಾಗುತ್ತದೆ. ಪಿಸುನುಡಿಯುತ್ತದೆ. " ಕೃಷ್ಣಪಕ್ಷ ಮುಗಿದ ಕೂಡಲೇ ಅನಘಾ ಬರ್‍ತಾಳೆ " ಅಂತ.
ಹೌದಾ ಅನಘಾ? ಈ ಕೃಷ್ಣಪಕ್ಷ ಮುಗಿಯುತ್ತಾ? ನಿನ್ನಪ್ಪನಿಗೆ ತುಂಬ ದಿಗಿಲು."ಇಲ್ಲಿ ಎಷ್ಟು ಕತ್ತಲೇಂದ್ರೆ ಅನಘಾ ಅಕಸ್ಮಾತ್ ಬಂದ್ರೂ ನಾವು ಕಾಣಿಸ್ತೀವಾ" ಅಂತ. ಮರುಗಳಿಗೇಲಿ ಅವನೇ ಸಮಾಧಾನ ಮಾಡಿಕೊಳ್ಳುತ್ತಾನೆ. "ಅವಳು ಬೆಳದಿಂಗಳಲ್ವಾ, ನಮಗಂತೂ ಕಾಣಿಸುತ್ತಾಳೆ" ಅಂತ.

ಒಂದು ಬಾರಿ ಸುರಿದ ನಿನ್ನ ಧಾರೆಯನ್ನ ಹಿಡಿದಿಡಲಾಗದ ಅಸಹಾಯಕತೆ ನನ್ನ ಮಂಜುಗಟ್ಟಿಸಿದೆ ಅನಘಾ. ಇಲ್ಲಿ ಬಿಸಿ ಇರುವುದು ಒಂದೇ - ಕಣ್ಣೀರು.

ನಿನ್ನ ಅಮ್ಮನಾಗಲಾರದವಳು.
(ಕೊನೆಯ ಮಾತು - ಕ್ಷಮೆಯಿದೆಯೇ?.. ಇಲ್ದೇ ಇದ್ರೂ ಪರವಾಗಿಲ್ಲ, ಇದೆ ಅಂತ ಹೇಳು ಸಾಕು)