Wednesday, April 2, 2008

ಹಸಿರ ಹೊದ್ದವಳು ಕಾದಿದ್ದಾಳೆ

ಹಸಿರ ಹೊದ್ದವಳು ಕಾದಿದ್ದಾಳೆ
ಹೊಳೆಯ ಹೊಸ್ತಿಲಲಿ
ನೆನಪಿನ ದೀಪ ಹಚ್ಚಿ..
ಏನೂ ಇಲ್ಲದೆ,
ಸುಮ್ಮನೆ,
ಮಾತ ಕದ್ದು
ಮೌನ ಬಡಿಸಿ
ಹಕ್ಕಿಗೊರಳ ಇಂಚರ ನೇಯುತ್ತಾ
ಖಾಲಿ ಬದುಕನ್ನ ತುಂಬಿ ತುಳುಕಿಸಲು..
ಹಸಿರ ಹೊದ್ದವಳು ಕಾದಿದ್ದಾಳೆ


ಇನ್ನೇಕೆ ಮಾತು.
ಬಿಂಕವಿಲ್ಲ,
ಮಾತ ಕಟ್ಟಿಟ್ಟುಹೊರಟೆ..
ಜೊತೆಗಿರುವನು ಚಂದಿರ.

ಆಮೇಲೆ ಸೇರಿಸಿದ್ದು.. ಈ ಹಸಿರು ಪಯಣದ ನೆನಪಿನ ಬರಹ ಕೆಂಡಸಂಪಿಗೆಯಲ್ಲಿ..
ಲಾವಂಚ -
http://www.kendasampige.com/article.php?id=514Monday, March 31, 2008

ಹೂವು ಚೆಲ್ಯಾವೆ ಹಾದಿಗೆ..

ಮಲೆನಾಡಿನ ಪುಟ್ಟ ಊರಿನಿಂದ ಬಂದ ನನಗೆ ರಾಜಧಾನಿಯ ಗಜಿಬಿಜಿ, ಗಡಿಬಿಡಿ, ಗುಂಪಿನಲ್ಲಿ ಕವಿಯುವ ಏಕಾಂಗಿತನ ಎಲ್ಲ ಬೇಸರಹುಟ್ಟಿಸಿಬಿಟ್ಟಿದ್ದವು. ಎಲ್ಲ ಅಮೂರ್ತವಾಗಿ, ಕನ್ನಡಿಯೊಳಗಿನ ಗಂಟಾಗಿ, ಆಪ್ತತೆಯಿಂದ ಹೊರತಾಗಿ ಕಾಣಿಸುತ್ತಿದ್ದವು.ಈ ಎಲ್ಲ ಬೇಸರದ ಕಾವಳಗಳನ್ನು ಬೆಚ್ಚಗೆ ಅರಳಿದ ಒಂದು ಬೆಳಗು ಸಹ್ಯವಾಗಿಸಿಬಿಟ್ಟಿತು. ಬೆಳಗ್ಗೆ ೭ ಗಂಟೆಗೆ ಬಿ.ಎಂ.ಟಿ.ಸಿ ಬಸ್ಸಿನ ಕಿಟಕಿಯಿಂದ ಕಂಡ ಮೈತುಂಬ ಹೂಬಿರಿದು ಪಾದಪಥಕ್ಕೂ ಚೆಲ್ಲಿದ ಮರಗಳ ಸಾಲು, ಇಬ್ಬನಿಯ ಮಬ್ಬಿನಲ್ಲೂ ಗೆರೆಕೊರೆದಂತೆ ಕಾಣುವ ಬೆಳ್ಳಕ್ಕಿ ಸಾಲು, ಬುಲ್ ಬುಲ್ ಮೈನಾಗಳ ಚಿಲಿಪಿಲಿ, ರಸ್ತೆಬದಿಯಲ್ಲಿ ಬೆವರಿಳಿಸುತ್ತ ಓಡುತ್ತಿರುವ ಮಂದಿ ಎಲ್ಲವೂ ಊರಿನ ಆಪ್ತತೆ ಮತ್ತು ಮಾನುಷೀ ಮಾರ್ದವತೆಯನ್ನ ಚೂರು ಚೂರಾಗಿ ಬನಿ ಇಳಿಸತೊಡಗಿದವು.

ಚಳಿಗಾಲ ಗಾಢವಾಗುತ್ತಿದ್ದಂತೆ ಹೂಬಿರಿದು ನಿಲ್ಲುವ ಮರಗಳ ಸಾಲು ಏನೇನೋ ಖುಷಿಗಳನ್ನ ಹಿತವನ್ನ ಹರಡುತ್ತವೆ. ಬೆಂಗಳೂರೆಂಬ ಮಾಯಾನಗರಿ ಮಾಯೆಯ ಝಗಮಗ ಕಳೆದು, ಇಬ್ಬನಿಯಲ್ಲಿ ತೊಳೆದು ತಂಪಗೆ ಹೊಳೆಯುತ್ತದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೆಂಪಾಗುವ ಪಡು ದಿಕ್ಕು ಓ ಇದು ನಮ್ಮೂರಲ್ಲಿ ಮುಳುಗುವ ಸೂರ್ಯನೇ ಅಂತನ್ನಿಸಿ ಬೆಂಗಳೂರು ಮನದಲ್ಲಿ ಇನ್ನೊಂದು ಮೆಟ್ಟಿಲೇರುತ್ತದೆ. ಎಲ್ಲ ಬಗೆಯ ಕೆಲಸ ಕಾಯಕಗಳಿಗೆ ಅವಕಾಶ ಕೊಟ್ಟು ಗುಳೆಬಂದ ರೈತರನ್ನೂ, ಓದಲು ಬಂದ ಮಕ್ಕಳನ್ನೂ,ಐಟಿ ಅಲೆಯಲ್ಲಿ ತೇಲುವ ಯುವಜನಾಂಗವನ್ನೂ, ವಾಕಿಂಗಿನಲ್ಲಿ ಸಂಚರಿಸುವ ಹಿರಿಜೀವಗಳನ್ನು, ಗಡಿಬಿಡಿಯಲ್ಲಿ ಓಡುವ ದಿನಗಳನ್ನು ಸಮಾನ ಭಾವದಲ್ಲಿ ಒಳಗೊಳ್ಳುವ ಯುಟೋಪಿಯಾದಂತೆ ಭಾಸವಾಗುತ್ತದೆ.

ಒಮ್ಮೊಮ್ಮೆ ಸಿರಿತನ, ದಾರಿದ್ರ್ಯ ಎರಡೂ ಸೀಸಾ ಆಡುತ್ತಿರುವಂತೆ ಕಂಡು ಮನಸ್ಸಿನಲ್ಲಿ ಮುಳ್ಳು ಚಿಟಿಗೆಯಾಡುತ್ತದೆ. ಒಬ್ಬರಿನ್ನೊಬ್ಬರ ಹೆಗಲು ಕಟ್ಟದ ವ್ಯವಹಾರೀ ಸಂಬಂಧಗಳ ಮೆರವಣಿಗೆ ನೋಡಿ ಮನಸು ಮುದುಡುತ್ತದೆ.ಸಾಕಪ್ಪಾ ಅನ್ನಿಸುತ್ತ ರಾತ್ರಿ ಮಲಗೆ ಬೆಳಗ್ಗೆ ಏಳುವಾಗ ತಂಪಗೆ ಅರಳುವ ಬೆಳಗು, ಹೂಚೆಲ್ಲಿದ ಪಾದಪಥ, ಹೂವಾಡಗಿತ್ತಿ, ತರಕಾರಿಯಮ್ಮ, ಯುನಿಫಾರ್ಮ್ ಹಾಕಿ ತಿದ್ದಿ ತೀಡಿದ ತಲೆಗೂದಲಿನ ಜೊಂಪೆ ಹಿಂದಕ್ಕೆ ತಳ್ಳುತ್ತಾ ನಡೆಯುವ ಪುಟಾಣಿಗಳನ್ನ ನೋಡಿದರೆ ಎಲ್ಲ ಕಸಿವಿಸಿ ಕಳೆದು ಮುದ್ದು ಮೂಡುತ್ತದೆ. ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ? ನಿನ್ನೆ ಸಿಡುಕು ಮೂಡಿಸಿದ್ದ ದಾರಿಯಲ್ಲಿ ಇವತ್ತು ಹೊಸ ಹಿತ ಹೇಗೆ ಅರಳುತ್ತದೆ? ನಿನ್ನೆ ಚಿಟ್ಟು ಹಿಡಿಸಿದ್ದ ಗಜಿಬಿಜಿ ಇವತ್ತು ಹೇಗೆ ಅಚ್ಚರಿ ಹುಟ್ಟಿಸುತ್ತದೆ? ಯೋಚಿಸಬೇಕಾದ ವಿಷಯ.

ಊರಿನ ನೆನಪನ್ನು ಹೊತ್ತು ತರುವುದು ಇಲ್ಲಿಯ ಅಚಾನಕ್ ಮಳೆ. ಈ ಮಳೆಯನ್ನ ಮಲೆನಾಡಿನ ಧೋ ಮಳೆಯ ಜೊತೆ ಹೋಲಿಸಲಾಗುವುದಿಲ್ಲವಾದರೂ, ಬೇಸಿಗೆ ದಿನಗಳಲ್ಲಿ ಕಾವು ಹೆಚ್ಚಿ ಮನಸ್ಸು ವಿಷಣ್ಣವಾದಾಗ ಇದ್ದಕ್ಕಿದ್ದಂಗೆ ಸಂಜೆಯೋ ರಾತ್ರಿಯೋ ಬಂದು ತೋಯಿಸುವ ಮಳೆ, ಮನಸ್ಸಿನ ಕಸಿವಿಸಿಯನ್ನು ಹೋಗಲಾಡಿಸಿ ಬಾಲ್ಯದ ನೆನಪನ್ನು, ಊರಿನ ಆಪ್ತತೆಯನ್ನು ತಂಪಾಗಿ ತಂದಿಟ್ಟು ಹೋಗುತ್ತದೆ. ಎಲ್ಲ ಚಂದವೇ ಅಂತೇನಿಲ್ಲ. ಕಟ್ಟಿ ನಿಂತ ಮೋರಿಗಳಲ್ಲಿ ಹೋಗಲಾಗದ ನೀರು ರಸ್ತೆಗೆ ನುಗ್ಗುತ್ತದೆ. ರಸ್ತೆ ಹೊಳೆಹಾದಿಯಾಗುತ್ತದೆ. ಕೆಳಗಿನ ಮಟ್ಟದಲ್ಲಿ ಕಟ್ಟಿರುವ ಮನೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬೆಳಿಗ್ಗೆ ಕಸಗುಡಿಸುವವರ ಗಾಡಿ ತುಂಬಿ ತುಳುಕಿ ಭಾರವಾಗಿರುತ್ತದೆ. ಆಫೀಸುಗಳ ಹೌಸ್ ಕೀಪಿಂಗ್ ನವರ ಕೆಲಸ ಡಬ್ಬಲ್ಲಾಗಿರುತ್ತದೆ. ಇದೆಲ್ಲ ನೋಡಿದಾಗ ಮನವು ಮುದುಡಿದರೂ ಸುಮ್ಮನೆ ಕಿಟಕಿಯಾಚೆಯಿಂದ ನೋಡುವಾಗ ಮಳೆಗೆ ತೋಯ್ದು, ಧೂಳು ಕಳೆದ ಚಿಗುರು ಮರಗಳು, ಅಲ್ಲಲ್ಲಿ ಹಸಿರು ಗುಪ್ಪೆಯಾಗಿ ಕಾಣುವ ಪುಟ್ಟ ಪುಟ್ಟ ಪಾರ್ಕುಗಳು, ಸಾಲು ಮರಗಳು, ತಣ್ಣಗೆ ಭಾರವಾಗಿ ಹರಿದಾಡುವ ಗಂಧವತೀ ಗಾಳಿ ಎಲ್ಲ ಮುದುಡಿದ ಮನದ ಪಕಳೆಗಳ ಮೇಲೆ ಒಂದು ನಲಿವಿನ ಛಾಯೆಯನ್ನ ಹಬ್ಬಿಸುತ್ತವೆ. ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ..ಹಾಡು ನೆನಪಾಗುತ್ತದೆ.

ಚುಕ್ಕಿ ಹರಡಿದ ರಾತ್ರಿಗಳು ನಮ್ಮ ನಿಯಾನು ದೀಪದ ಬೆಳಕಲ್ಲಿ ಮಂಕಾಗಿದ್ದರು ಮಿನುಗುತ್ತಲೇ ಇರುತ್ತವೆ. ನಗರದ ಹೃದಯಭಾಗದಿಂದ ದೂರವಿರುವ ಕೆಲವು ಬಡಾವಣೆಗಳಲ್ಲಿ ಹುಣ್ಣಿಮೆ ಬೆಳಕು ನೇರ ಬಾಲ್ಕನಿಗೇ ನುಗ್ಗಿ ಮನಸ್ಸು ಹಾಡಾಗುತ್ತದೆ.. ಹುಣ್ಣಿಮೆ ಆಗಸದ ಬಣ್ಣದ ಛತ್ರಿಯು ಮೆಲ್ಲನೆ ತಾನಾಗಿ ಬಿಚ್ಚುತ್ತದೆ(ಲಕ್ಷ್ಮೀನಾರಾಯಣ ಭಟ್ಟರ ಕವಿತೆ ಸಾಲು).

ಬೆಚ್ಚಗೆ ಕಾಫೀ ಹೀರುತ್ತ ನಿಂತಾಗ ತಣ್ಣಗೆ ಮುಟ್ಟುವ ಬೇಡುವ ಕೈ, ಮನಸ್ಸನ್ನು ಮಂಜುಗಟ್ಟಿಸುತ್ತದೆಯಾದೆಯಾದರೂ, ಹೊಸಹಗಲಿನ ಭರವಸೆ ನಂದುವುದಿಲ್ಲ. ಉದ್ಯಾನ ನಗರಿ ಎಂದು ಕರೆಸಿಕೊಂಡಿದ್ದ ಉದ್ಯೋಗನಗರಿ ಎಲ್ಲಕ್ಕೂ ಪರಿಹಾರವಿದೆಯೆಂಬ ಭರವಸೆಯಿಂದ ಹೂವರಳಿಸಿ ನಿಲ್ಲುತ್ತದೆ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಅಂತ ಸಮಾಧಾನಿಸಿಕೊಳ್ಳುತ್ತೇನೆ.

ಹೂಳು ತುಂಬಿ ಲೇಔಟುಗಳಾಗುತ್ತ ನಡೆದಿರುವ ಕೆರೆಗಳನ್ನು ನೋಡಿದರೆ ಮಾತ್ರ ಯಾವ ಹಾಡು, ಎಷ್ಟೇ ಹಸಿರಾಗಿರುವ ಮರವೂ ಕೂಡ ನನಗೆ ಹಾಯೆನಿಸುವುದಿಲ್ಲ. ನಮ್ಮ ಅನ್ನಕ್ಕೆ ನಾವೇ ಕಲ್ಲು ಹಾಕಿಕೊಳ್ಳುವ ನಮ್ಮ ಗೋರಿಯನ್ನ ನಾವೇ ತೋಡುವ ಕೆಲಸದಲ್ಲಿ ಎಷ್ಟು ಗಡಿಬಿಡಿಯಿಂದ ಮುಳುಗಿಹೋಗಿದ್ದೇವಲ್ಲಾ ಅಂತ ಬೇಜಾರಾಗಿ ಹೋಗುತ್ತದೆ. ಏನು ಮಾಡಲಿ? ಬಂದ ಎಲ್ಲರನ್ನೂ ತೆಕ್ಕೆಗೆ ಎಳೆದುಕೊಂಡಿರುವ ಬೆಂಗಳೂರೆಂಬ ಮಹಾತಾಯಿಯ ಬೆನ್ನು ತೊಡೆಗಳನ್ನ ಹುಣ್ಣು ಮಾಡುತ್ತಿರುವ ನಮ್ಮ ಪಾಪಕ್ಕೆ ಪರಿಹಾರವೆಲ್ಲಿದೆ? ನಾನು ಚೂರೂ ನಂಬದಿರುವ ದೇವರು ಇದ್ದಕ್ಕಿದ್ದಂಗೆ ಬಂದು ವರ್ಷಗಟ್ಟಲೆ ಮಾಡಬೇಕಿರುವ ಯಾವುದೋ ಹೊಚ್ಚ ಹೊಸಾ ಹಸಿರು ವ್ರತವನ್ನ ಹೇಳಿಕೊಡಬಾರದೇ ಅನ್ನಿಸುತ್ತಿದೆ.

ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!