Tuesday, February 11, 2014

ತಧೀಂ ಧಿನಕ ಧೀಂ

ದೀಪವಾರಿ
ರಂಗದಲ್ಲಿ ಕತ್ತಲೆ,
ಗುಜುಗುಜು ನಿಂತು
ಪಿಸುಗುಡುವಿಕೆ.
ಅಲ್ಲಲ್ಲಿ ಸಾಲು ಮಧ್ಯೆ
ಎಡವುತ್ತಾ
ಕುರ್ಚಿ ಹುಡುಕಿ ಕೂರುವಷ್ಟರಲ್ಲಿ,..

ಎರಡು ಪುಟಾಣಿ ಕೈ ಜೋಡಿಗಳಲ್ಲಿ
ಪಟಪಟಿಸುವ ತೆರೆಯ ಸೂಚನೆ,
ಇನ್ನೇನು ಒಡ್ಡೋಲಗ ಶುರು,
ಹೌದೆನ್ನಲು ಹಾರ್ಮೋನಿಯಂ ಶ್ರುತಿ
ಕಂಚಿನ ಕಂಠದಿಂ ಹರಿವ ಬನಿ
ದೇವರ ದೇವ ಶಿಖಾಮಣಿಯ
ಹೆಜ್ಜೆ ಹಾಕಿಸುತಿದೆ.
ದನಿಯ ದೈವ
ಲಾಸ್ಯದಲ್ಲಿ ಮೈಗೂಡಿದ ಹಾಗೆ.

ತೆರೆಯ ಹಿಂದೆ
ಕಿರೀಟಿಯ ಒಡ್ಡೋಲಗ
ಮುಂದೆ ನಲಿವ
ಬಾಲ ಗೋಪಾಲರು
ಕತ್ತಲೆಯ ವೃತ್ತದ
ಮಧ್ಯೆ ಬೆಳಗುವ
ತಧೀಂ ದಿನ್ನಕ ಧೀಂ


ಅರೆ! ಎಷ್ಟು ಸುಲಭ,
ಸಮಸ್ಯಾ ನಿವಾರಣೆ!
ಭಿನ್ನಾಭಿಪ್ರಾಯವೇ?
ಯುದ್ಧ ಹೂಡು,
ತುಂಬ ತಲೆಬಿಸಿಯೇ?
ವಿದೂಷಕನ ಕರೆ,
ಪರಿಸ್ಥಿತಿ ಬಿಗಡಾಯಿಸಲು
ಕೃಷ್ಣಗೇ ಮೊರೆ,
ಅಲ್ಲಲ್ಲಿ ನವಿಲು ಕುಣಿದ
ಹಾಗೆ ಸ್ತ್ರೀವೇಷ ಬೇರೆ!

ಕಥೆಯಿಲ್ಲಿ ನೇಪಥ್ಯ
ಆಹಾ ಅಲ್ಲಿ ನೋಡು
ಕೇದಿಗೆಮುಂದ್ಲೆಯವನ ಕಣ್ಣ ಭಾಷೆ
ಕಿರೀಟಿಯ ಹೆಜ್ಜೆ ಗೆಜ್ಜೆ
ಎಂಥಾ ಭಾಗ್ವತಿಕೆ ಮಾರಾಯಾ..
ಚೆಂಡೆಯಂತೂ.. ಆಹಾಹ ಅಗದೀ ಬೆಸ್ಟು
ರಂಗಕ್ಕೆ ಕತ್ತಲಾವರಿಸಿದಾಗ
ತೆರೆದ ಕಣ್ಣು
ಮತ್ತೆ ಆಟ ಮುಗಿಯುವವರೆಗೆ
ಮುಚ್ಚಿದ್ರೆ ಕೇಳು!

ತೆರೆ ಸರಿಸಿ ಬಂದಾಗಿದೆ
ಕುಣಿತ ಚಂದಗಾಣಿಸಬೇಕು
ಮಾತು ಮೈಮರೆಸಬೇಕು
ಯಕ್ಷಲೋಕವನ್ನ ಇಲ್ಲಿ
ಬಯಲ ಮಧ್ಯೆ
ಕಟ್ಟಿಕೊಡಬೇಕು.


ಚೌಕಿಯಲ್ಲಿ ಬಣ್ಣ ಕಳಚಿ
ಹೊರಟ ಮೇಲೆ
ಮುಂದಿನ ಮಾತು.
ಯಕ್ಷ ಲೋಕದಿಂದಿಳಿದ
ಬಣ್ಣಗಳ ನೇರ್ಪು ಮಾಡುತ್ತ
ರಂಗದಿಂದ ದೂರವುಳಿದೂ
ನಟಿಸಬೇಕು
ಮಾತಲ್ಲಿ ಮನೆಕಟ್ಟಬೇಕು
ನೋವುಗಳ ಜತನದಿಂ ಎತ್ತಿಟ್ಟು
ಮುಂದಿನ ಮೇಳದ ಕರೆಬರುವವರೆಗೆ
ನಗುವ ಪುರಂದರ ವಿಠಲನಿಗೆ ಕಾಯಬೇಕು.

ಅಲ್ಲಿ ತಧೀಂ ಧಿನಕ ಧೀಂ
ಇಲ್ಲಿ ಧೀಂ ತಧೀಂ ಧಿನಕ...