ಹುಲುಸಾಗಿ ಬೆಳೆದ ಮಾತಿನ ಬೆಳೆ,
ಭೂಮಿ ಹುಣ್ಣಿಮೆ ಕಳೆದು,
ಭೂರೆ ಅಭ್ಯಂಜನ ಸುರಿದು,
ಮಾಗಿಯ ಇಬ್ಬನಿಯ ಮೆದ್ದು,
ಸಂಕ್ರಮಣದ ಎಳೆಬಿಸಿಲ ಹೊದ್ದು
ಕಾಯುತ್ತ ಕೂತಿತ್ತು
ನಿನ್ನ ನಲುಮೆಯ ಕೊಯ್ಲಿಗೆ
ನೀನ್ಯಾಕೆ ಕೊಯ್ಲು ಬೇಸರವುಕ್ಕಿ
ಸುಮ್ಮನೆ ಕತ್ತರಿಸಿ
ಕಾಳೊಕ್ಕದೆ
ಮೌನ ಬಿತ್ತಿಬಿಟ್ಟೆ?!
ಇನ್ನೂ ಮಳೆಯ ಹದ ಕಾಣದ
ಬಿರುನೆಲದಲ್ಲಿ
ಬಿಮ್ಮಗೆ ಮೊಳಕೆಯೊಡೆದ ಮೌನ
ಒಕ್ಕದೇ ಹೋಗಿ
ಎಲ್ಲ ಕಾಳೂ ಜೊಳ್ಳಾಗಿ
ಮಾತು ಸಸಾರವಾಗಿ
ಕೇಳುವವರಿಲ್ಲದೆ ಬಿದ್ದು
ನಿದ್ದೆ ಎಚ್ಚರದ ನಡುವಿನ ಪಯಣ
ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!
ಹೋಗಲಿ ನಸುನಗುವೊಂದೆರಡ ಬಿಸಾಕು
ನಿನ್ನ ನಲ್ದನಿಯ ಜೊತೆಯಿಲ್ಲದ
ಬೆಂದ ಮನಸಿಗಿಷ್ಟು ತಂಪು ಸೇಚನ..
--------------------
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ..
(ಜಿ.ಎಸ್.ಎಸ್ ಅಥವಾ ಕಣವಿಯವರ ಸಾಲು, ಯಾರದೆಂದು ಸರಿಯಾಗಿ ಗೊತ್ತಿಲ್ಲ)
ಮುಕ್ತ
-
ಬಾಂದಳದ ತುಂಬಾ ಎರಚಿದ್ದ ನಕ್ಷತ್ರಗಳನ್ನೇ ದಿಟ್ಟಿಸುತ್ತಿದ್ದಳು ಭೂಮಿ.
ಬಾಲ್ಕನಿಯಲ್ಲಿ ಕುಳಿತು ಅಮಾವಾಸ್ಯೆಯ ಕಾರಿರುಳನ್ನು ಆಸ್ವಾದಿಸುವುದೆಂದರೆ ಅವಳಿಗೆ ಬಹಳ ಇಷ್ಟ.
ಆದರ...