Wednesday, June 22, 2016

ನಿಲ್ ದಾಣ - ನಲ್ ದಾಣ

ಕರೆದುಬಿಡು ಬಂದುಬಿಡುವೆನು ಎಲ್ಲಿಂದಲೆ ಆಗಲಿ
ಬೆಟ್ಟ ಹತ್ತಿ ತೊರೆಯ ದಾಟಿ ಯಾರೆ ನನ್ನ ತಡೆಯಲಿ.. (-ಕೆ.ಎಸ್.ನ)

ಎಂದು ಹೊರಟವನು ಹಳೆಯ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಕೂತುಬಿಟ್ಟೆ
ಹೊಸ ಬಸ್ ಬೆಳಿಗ್ಗೆ ಬರಬೇಕಿತ್ತು.
ಮೊನ್ನೆ ಮೊನ್ನೆಯಷ್ಟೇ ನಗರಪಾಲಿಕೆ ಹಾಕಿಸಿದ ಟಾರ್ ರಸ್ತೆ,
ರಾತ್ರಿಯಿಡೀ ಸುರಿದ ಮಳೆಗೆ ನೆಂದು ಮೆತ್ತಗಾದ ಹಾಗೆ ಅನ್ನಿಸುವಾಗ,
ಸೋರುವ ನಿಲ್ದಾಣದ ಮೂಲೆಯ ಮುರುಕುಬೆಂಚಿನ ಬೆಚ್ಚನೆ ಮೂಲೆಯಲ್ಲಿ
ಹಳತು, ಹೊಸತು, ಇನ್ನೂ ಅರಳಬಹುದಾದ ಮೊಗ್ಗಿನ ಕನಸು,
ಎಲ್ಲ ಬೆರೆತ ಚಡಪಡಿಕೆಗಳ ಅಗ್ಗಿಷ್ಟಿಕೆಗೆ ಹೆದರಿ ಚಳಿ ದೂರದಲಿತ್ತು.
ಹೊಟ್ಟೆಗಿರದ, ನಿದ್ದೆ ಬರದ, ಎಚ್ಚರವಿರಲು ರಚ್ಚೆ ಹಿಡಿಯುವ ಮನದ ತುಂಬ
ಹಸಿರೆಲೆಗಳ ನಡುವೆ ಬಿಳಿಬಿಳಿಯಾಗಿ ಅರಳಬಹುದಾದ ಹೂಕನಸು.

ವಿಷಯ ಏನಂದ್ರೆ
ಅವಳು ಕರೆದಿರಲಿಲ್ಲ.
ಕರೆಯದೆ ಇರುವುದೂ ಒಂದು ಬಗೆಯ ಕರೆ
ಅಂತ ಗೊತ್ತಾದವನೇ ನಿಜವಾದ ನಲ್ಲ.
ಬೆಳಕು ಹರಿಯುವ ಮುಂಚೆ
ಮಿಂಚು ಹರಿದ ಹಾಗೆ ಬೆಳಿಗ್ಗೆ ಮುಂಚಿನ ಬಸ್ ಹತ್ತಲು
ಅವಳು ಬಂದೇ ಬಂದಳು
ಇವನು ಈಗಷ್ಟೇ ಮನೆಯಿಂದ ಬಂದ ಹಾಗೆ
ನಿಲ್ದಾಣದಿಂದ ಹೊರಬಂದ ಗತ್ತಿಗೆ
ಶೇಕ್ಸ್ ಪಿಯರ್ ಹೊಸನಾಟಕ ಸೃಷ್ಟಿಸುವ ಆಲೋಚನೆಯಲ್ಲಿದ್ದಾನೆ.
ಅವಳು - ಮರುಮಾತಿಲ್ಲದ ಹಾಗೆ
ಮಳೆನಿಂತ ಬೆಳಗಲ್ಲಿ ತೋಯ್ದು ನಿಂತ ಮಲ್ಲಿಗೆ
ಕಣ್ಣು ಕಣ್ಣು ಕೂಡಿದ ಘಮ ಬರುತಿರುವುದು ಇಲ್ಲಿಗೆ

ಹೀಗೆಲ್ಲ ಆಗಿ
ಕರೆಯದೇ ಬಂದು ಜರುಗಿದ್ದೇ ಹಿಂಗಿದ್ದರೆ
ಕರೆದು ಬಂದರೆ ಏನಾಗಿರುತ್ತಿತ್ತು ಓ ದೇವರೇ
ಬಹುಶಃ ಸ್ವಚ್ಛ ಆಗಸದಲ್ಲಿ
ಮೋಡಗಳೆಲ್ಲ ಮತ್ತೆ ಕಲೆತು
ಮಳೆ ಬರುತ್ತಲೇ ಇರುತ್ತಿತ್ತು.

ಓ ಇವನೆ. ಇಲ್ಲೆ ಪಕ್ಕದಲ್ಲೆ ಇರುವ ನನ್ನೊಲವೆ,
ನೀನು ಎಷ್ಟೆ ದೂರವಿದ್ದರೂ
ಇದನ್ನೆಲ್ಲ ಮರೆಯದಿರಲಿ,
ಇದ್ದಕ್ಕಿದ್ದಂತೆ ತಿರುವು ತಗೊಳ್ಳುವಾಗ
ಇದೆಲ್ಲ ನೆನಪಾಗಿ
ಮಳೆ ಬರದೆ ಇದ್ದರೂ ರೈನ್ ಕೋಟ್ ಹಾಕಿಕೊಂಡು ಹೋಗು ಎಂದು ಅಂದುಕೊಳ್ಳುತ್ತಿರುವೆ.
ಅಕಸ್ಮಾತ್ ಆ ನಿಲ್ದಾಣ ಸೋರುತ್ತಿದ್ದರೆ?
ಈಗ ವಯಸ್ಸಾದ ಮೇಲೆ ಶೀತ ತಡೆಯುವುದಿಲ್ಲ.


{{{{ಮೊದಲೆರಡು ಸಾಲು (ಕೆ.ಎಸ್.ನರಸಿಂಹ ಸ್ವಾಮಿಯವರ ಕವಿತೆಯ ಸಾಲು)}}}