Wednesday, November 19, 2014

ಒಂದು ಕಿರಿಬೆರಳ ಜಾದೂ!

ಹಣ್ಣಾರಿಸಿ ಕಾಯುತ್ತ
ಕೂತು, ತಾನೇ ಹಣ್ಣಾದವಳ
ನಿರೀಕ್ಷೆಗೆ ಪುಟವಿಟ್ಟು
ಮುಕ್ತಿಕೊಟ್ಟಿದ್ದು;


ಹೊಡೆಯಲು ಕೈ ಎತ್ತಿದವಳ
ದಿಕ್ಕು ತಿರುಗಿಸಿ,
ಸೃಷ್ಟಿಯ ತೋರಿದ್ದು;


ಸಂಸಾರ ವೃಂದದ
ಕೋಟಲೆಯಿಂದ ಪಾರುಗಾಣಿಸಲು,
ಸಂಗೀತ ಸುಧಾಂಬುಧಿಯಲ್ಲಿ
ಅದ್ದಿ ತೆಗೆಯಲು,
ಪಿಡಿದ ಬಿದಿರಿನ ಕೋಲಿಗೆ
ಮತ್ತು ಆಲಿಸಿದವರಿಗೆ ಜೀವವೂಡಿದ್ದು;


ಹಿರಿತಲೆಗಳ ಗರುವಭಂಗಕ್ಕೆ,
ಹೊಸಆಲೋಚನೆಗಳ ಉತ್ಕರ್ಷಕ್ಕೆ,
ಶರಣುಬಂದವರ ನೆರಳಿಗೆ,
ಎತ್ತಿ ಹಿಡಿದ ಗಿರಿಯ ಆನಿಕೆಯಾಗಿದ್ದು;


ಗಡಿಬಿಡಿಯಲ್ಲಿ
ದಾಕ್ಷಿಣ್ಯದಲ್ಲಿ ಪರಿಮಳದ ಡಬ್ಬಿಯ
ತುರುಕಿ, ಬದಿಗೆ ಸರಿದು ನಿಂತು
ಸುತ್ತಲವರ ಅಪಹಾಸ್ಯಕ್ಕೆ
ಈಡಾದ ಕುರೂಪಿಯ
ಕಿನ್ನರಿಯಾಗಿ ಬದಲಿಸಿದ್ದು;


ತಡೆಹಿಡಿದಷ್ಟೂ ಜಾರುವ
ಕಣ್ಬನಿ ಪ್ರವಾಹವ
ಒರೆಸಿ ಕಟ್ಟೆ ಕಟ್ಟಿದ್ದು;


ಜಾರುದಾರಿಯ ಹೆಜ್ಜೆಗಳ
ದಿಕ್ಕು ಬದಲಿಸಿ
ಜೊತೆಕೊಟ್ಟಿದ್ದು;


ಒಂದಕ್ಕೊಂದು ಬೆರೆಸಿ ನಡೆವಾಗ
ಕಾರಣವಿರದೆ
ಚಿತ್ತಾರವಿಟ್ಟು
ಮೈಮನದಲ್ಲಿ ಹೂವರಳಿಸಿದ್ದು;


ಜಗದೆಲ್ಲ ಚಿಂತೆಗಳ
ಅಮ್ಮನೆ ಕಳೆವಳೆಂಬ
ಭರವಸೆಯಲಿ,
ರಸ್ತೆಯುದ್ದಕೂ
ಕುಣಿಯುತ ಸಾಗುವ,
ಪುಟ್ಟಕಿನ್ನರಿಯು
ಹಿಡಿದು ನಡೆವುದು:
ಮತ್ತು
ಹಿಡಿದವಳು-ಕೊಟ್ಟವಳೂ ಇಬ್ಬರನ್ನೂ ಪಾರುಗಾಣಿಸುವುದು;


ಈ ಕಿರುಬೆರಳೇ ಅಲ್ಲವೇ?


ಇದಕೆ ಇರಬಹುದು
ಹಿರಿಯರ ಸಾಲು.. 
"ಮುಳುಗುವ ಜೀವಕೆ ಹುಲ್ಲುಕಡ್ಡಿಯ ಆಸರೆ" ಎಂಬ ರೂಪಕ