Thursday, November 13, 2008

ಕೃಷ್ಣಪಕ್ಷದ ಲಹರಿ..

ಈಗಷ್ಟೆ ನಿಂತ ಮಳೆ,
ಮರಮರದ ಹಸಿರೆಲೆಯ
ತುದಿಮೂಗಲ್ಲಿ ಪುಟ್ಟ ಪುಟ್ಟಹನಿ,
ಮೋಡ ಚೆದುರಿ, ಕೊನೆಯ ಕಿರಣಗಳು
ಕೆಂಪಗೆ ನೀಲಿಯಲ್ಲಿ ಹರಡುತ್ತಾ
ಹಿತವಾದ ಸಂಜೆ,
ದಾರಿ ಇಕ್ಕೆಲದ ಕಳೆಗಿಡಕ್ಕೂ
ಮಳೆಹನಿಯ ಸವಿದು
ಎಂತದೋ ಬಳುಕು ;
ದಾರಿಬದಿಯ ನೀರಹರಿವಿನಲ್ಲಿ
ಚಿಣ್ಣರ ಪುಟ್ಟ ಕಾಲಾಟ;
ತುಂಬಿಬಂದಿದೆ ಮನ
ಮನೆಗೆ ಬಂದವಳು ಕದವ ತೆರೆದೆ
ಬಾಲ್ಕನಿಯಾಚೆಗೆ ದೂರದಲಿ
ಸಾವನದುರ್ಗದ ಮೇರುನೋಟ;
ನೀನಿಲ್ಲ ಜತೆಯಲ್ಲಿ
ಅಕ್ಷಾಂಶವೇ ಬೇರೆ
ಹರಡಿಬಿದ್ದಿದೆ ಗುರುತು ಹಾಕಿಟ್ಟ ಭೂಪಟ
ಗೊತ್ತು ಕೆಲದಿನಗಳ ದೂರ
ಹೇಗೆ ಇಳುಕಲಿ ಮನದ ಭಾರ?
ಕೈ ಮುಗಿದು ಕೂತಿದ್ದೇನೆ
ಬಿಸಿಹಾಲಿನ ಬಟ್ಟಲ ಮುಂದೆ..
ಗೊತ್ತು ನೀನಲ್ಲೆ ಇದ್ದರೂ
ಮನಸು ಇಲ್ಲೆ ಉಳಿದಿದೆ..!

Monday, November 3, 2008

ಸ್ಪಂದನೆ..

ನನ್ನ ಭಾವಲಹರಿಗೆ ಸ್ಪಂದಿಸಿದ ಮತ್ತು ಸ್ಪಂದಿಸುತ್ತಲೇ ಇರುವ ಎಲ್ಲರಿಗೂ ಪ್ರೀತಿಯ ವಂದನೆಗಳು.
ಕೆಲಸ ಮತ್ತು ವೈಯಕ್ತಿಕ ಒತ್ತಡಗಳಿಂದ ಪ್ರತಿಸ್ಪಂದನೆ, ಬ್ಲಾಗ್ ಬರಹ ಮತ್ತು ಓದು ಎರಡೂ ತುಂಬ ನಿಧಾನವಾಗಿಬಿಟ್ಟಿದೆ.

ನನ್ನ ಲಹರಿಗೆ (ಹಿಂದಿನ ಬರಹ/ಕವಿತೆ) ಸ್ಪಂದಿಸಿದವರಲ್ಲಿ ಹೆಚ್ಚಿನವರು ನಾನು ಬ್ಲಾಗ್ ಮುಚ್ಚುತ್ತಿದ್ದೇನಾಗಿ ತಿಳಿದುಕೊಂಡಿದ್ದೀರಿ. ಆ ಅರ್ಥ ಬರುವ ಹಾಗೆ ಬರೆದಿದ್ದರೆ ಕ್ಷಮಿಸಿ.

ನಾನು ಬರೆಯುವುದು ನನ್ನ ಮನದ ಮೇಲೆ ಹಾಯುವ ಎಷ್ಟೋ ಕಾಲದ ಮತ್ತು ದಿನದಿನವೂ ಘಟಿಸಿದ ನೆನಪುಗಳನ್ನ ನೇವರಿಸಿದ ಭಾವಲಹರಿಯನ್ನ. ಓದಿದ ನೀವೂ ಇದನ್ನ ಪ್ರೀತಿಯಿಂದ ಆಸ್ಥೆಯಿಂದ ನೇವರಿಸಿದ್ದೀರಿ ಪ್ರತಿಸ್ಪಂದಿಸಿದ್ದೀರಿ. ಎಷ್ಟೋ ಬಾರಿ ಈ ಎಲ್ಲವೂ ನಾನಂದುಕೊಂಡ ಆಯಾಮವನ್ನು ದಾಟಿ ಇನ್ನೆಲ್ಲೋ ಸಾಗಿವೆ. ಬಿಟ್ಟ ಬಾಣದ ಗತಿಯಲ್ಲಿ ಬರೆದ ಮಾತುಗಳು ನನ್ನ ಪರಿಧಿ ಮೀರಿ ಸಾಗುತ್ತವೆ ನಾಟುತ್ತವೆ. ಇದು ಎಲ್ಲರ ಬರಹದ ಮಿತಿ ಮತ್ತು ಸಾಮರ್ಥ್ಯ. ಹೀಗಾದಾಗ ಭಾವುಕ ಮನಸ್ಸು ಗೊಂದಲದಲ್ಲಿ ಬೀಳುತ್ತದೆ. ತಾರ್ಕಿಕ ನೆಲೆಗಟ್ಟು ಗಟ್ಟಿಯಿರದ ಭಾವಸಂವೇದನೆಗಳು ದಿಕ್ಕೆಡುತ್ತವೆ. ಹೀಗಿದ್ದೂ ತಡವರಿಸಿಕೊಂಡೂ ಭಾವಲಹರಿಗಳು ಹರಿಯುತ್ತಲೇ ಇರುತ್ತವೆ. ಇದರ ಜೊತೆಗೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಒತ್ತಡಗಳು ಇನ್ನೊಂದಿಷ್ಟು ಒಜ್ಜೆ ಹೇರಿವೆ.

ಬರೆಯದೆ ಕೂರಬಹುದಾದ ಹುಟ್ಟಲ್ಲ ನನ್ನದು. ಬರೆಯಲು ಬಿಂಕ ಬಿಗುಮಾನವೆರಡೂ ಇಲ್ಲ. ಬರೆದಾಗ ಇಲ್ಲಿ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ಅನಿಸಿಕೆಗಳಲ್ಲಿ ಕಲಿಯಬಯಸುತ್ತೇನೆ.

ಮೊದಲೆ ಹೇಳಿದ ಹಾಗೆ ಇದು - ಆಶೆಯೆಂಬ ತಳ ಒಡೆದ ದೋಣಿಯ ದೂರ ತೀರ ಯಾನ. ಎಲ್ಲೂ ಮುಳುಗಬಹುದು. ತೇಲಿ ಇನ್ನೆಲ್ಲೋ ಸಾಗಲೂ ಬಹುದು. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.. ಎಂಬ ಸಾಲು ದೋಣಿಯ ಹುಟ್ಟಾಗಿರುವುದು ನನ್ನ ಯಾನದ ಅದೃಷ್ಟವಿರಬಹುದು.

ಪ್ರೀತಿಯಿರಲಿ
ಸಿಂಧು

Monday, September 29, 2008

ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..

ಕಣ್ಣಿಗೆ ಕಂಡದ್ದೆಲ್ಲವನ್ನೂ
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.

ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.

ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..

-ಪ್ರೀತಿಯಿಂದ
ಸಿಂಧು

Tuesday, September 23, 2008

ಹೊಸಜೀವ ಹೊಸಭಾವ ಹೊಸತೀರ..

ಭಾದ್ರಪದ ಮುಗಿಯುವ ಸಮಯ
ಚವತಿ ಚಂದಿರನ ಅಪವಾದ ಅಂಟಿಸುವ
ಚೆಲ್ಮೊಗಕ್ಕೆ
ಕೃಷ್ಣಪಕ್ಷದ ಸವೆತ..
ಅಲ್ಲಿ ಪಡುವಣದ ತೀರದಲ್ಲಿ
ಒಬ್ಬರಿನ್ನೊಬ್ಬರಲ್ಲಿ ಲೀನದಂಪತಿಗಳ ಮಡಿಲಲ್ಲಿ
ಮೊಗ್ಗು ಹೂಬಿರಿದಿದೆ;
ಮನಸು ಹಗುರಾಗಿ,
ಚಳಿ ಕೂರುತ್ತಿರುವ ಸಂಜೆಗಳಲ್ಲಿ
ಮಳೆಮೋಡದ ನೆನಪು ದಟ್ಟವಾಗಿ-
ಪುಟ್ಟವಳು, ಚಿಕ್ಕವಳು
ಇವತ್ತಷ್ಟೇ ಹುಟ್ಟಿದವಳು
ಅಮ್ಮನ ಮಡಿಲು ತುಂಬಿ,
ಅಪ್ಪನ ಮನಸು ತುಂಬಿ,
ಸುತ್ತೆಲ್ಲರ ಬದುಕಲ್ಲಿ ಆಹ್ಲಾದ ತುಂಬುವವಳು
ಚೆಲುವಾಗಿ,ಒಳಿತಾಗಿ ಬೆಳೆಯಲಿ
ಎಂದು
ನವನವೋನ್ಮೇಷ ಶಾಲಿನೀ
ಪ್ರಕೃತಿಯ ಚರಣಗಳಲ್ಲಿ
ಒಂದು ತುಪ್ಪದ ದೀಪದ ವಿನಂತಿ..
ಇಲ್ಲಿ ಬೆಳಗುವ ಸೊಡರಿನ
ಪ್ರತಿಫಲನಕ್ಕೆ

ಇಂದು ಸಂಜೆಯ ಪಡುವಣ ತೀರದ ಕೆನ್ನೆ ಇನ್ನಷ್ಟು ಕೆಂಪಾಗಲಿದೆ.

Friday, August 29, 2008

ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು..?

ಪ್ರಕೃತಿಯನ್ನ ಹುರಿದು ಮುಕ್ಕುತ್ತಿರುವ ಯೋಜನೆಗಳ ಬಗ್ಗೆ ಗೆಳೆಯ ರಾಜೇಶ್ ನಾಯಕ್ ಬರೆದಿದ್ದು ಓದುವಾಗ ಸಂಕಟವಾಗುತ್ತದೆ. ಅದೇ ರೀತಿಯ ದಿನದಿನವೂ ಪ್ರಗತಿಯ ಬಣ್ಣ ಮೆತ್ತಿಕೊಂಡಿರುವ ಹಲವಾರು ವಿಷಯಗಳು ಮನಸ್ಸಿಗೆ ಬರೆ ಇಡುತ್ತವೆ. ಪರಿಸರ ಪ್ರೀತಿಯ ಲೇಖಕರು, ಪರಿಸರ ವಿಜ್ಞಾನಿಗಳು ಬರೆದಿರುವ ಪುಸ್ತಕಗಳನ್ನ ಓದಿ, ಅವರು ನಡೆಸುತ್ತಿರುವ ಸಂರಕ್ಷಣಾ ಕೆಲಸಗಳ ಬಗ್ಗೆ ತಿಳಿದು ಸ್ವಲ್ಪ ಸಮಾಧಾನವೆನ್ನಿಸುತ್ತದೆ. ಆದರೆ ನಿಜವಾಗಲೂ ನನ್ನ ನಡವಳಿಕೆ ಎಷ್ಟು ಸರಿ? ಇಷ್ಟೆಲ್ಲ ಯೋಚಿಸುವ, ಕುಟ್ಟುವ ನಾನು ಏನು ಮಾಡಿದ್ದೇನೆ? ನಲ್ಲಿಯಿಂದ ನೀರು ಸೋರದಂತೆ ನಿಲ್ಲಿಸುವಷ್ಟಕ್ಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಇರುವಷ್ಟಕ್ಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಷ್ಟಕ್ಕೆ , ವಿದ್ಯುತೆ ಉಪಕರಣಗಳ ಅತಿಬಳಕೆ ಮಾಡದೆ ಇರುವಷ್ಟಕ್ಕೆ ನನ್ನ ಕಾಳಜಿ, ಬದ್ಧತೆ ಮುಗಿಯಿತೇ? ನನಗೆ ದಿನ ನಡೆಸಲು ಬೇಕಾಗುವ ಕಂಪ್ಯೂಟರ್/ಲ್ಯಾಪ್ ಟಾಪ್ ಅತಿಬಳಕೆ ಮಾಡದೆ ಇರುವಷ್ಟು, ತಿಳುವಳಿಕೆ ಇದೆಯೇ ಎಂದರೆ ಇಲ್ಲ ಎಂತಲೇ ಕಾಣುತ್ತದೆ.

ಈ ಬಗ್ಗೆ ಇತ್ತೀಚೆಗೆ ಗೆಳೆಯನು ಕಳುಹಿಸಿದ ಬ್ಲಾಗ್ ಬರಹವೊಂದನ್ನ ಓದಿದ ಮೇಲೆ ತಲೆ ಸ್ವಲ್ಪ ಕೆಟ್ಟ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ ನನಗೆ. ಸರಿ ತಪ್ಪುಗಳ, ಸಾಮಾಜಿಕ ಬದ್ಧತೆಗಳ, ಪರಿಸರ ಪ್ರೀತಿಯ, ಬಗ್ಗೆ ಗೊಂದಲ ಶುರುವಾಗಿದೆ. ಎಲ್ಲ ಸಮಸ್ಯೆಗಳನ್ನೂ ಮಾತಾಡೀ ಮಾತಾಡೀ, ಅನಲೈಸ್ ಮಾಡೀ ಮಾಡೀ ನಮ್ಮ ಮನದ ಭಾರವನ್ನ ಕಳೆದುಕೊಳ್ತಿದೀವೀಂತ ಅನುಮಾನ ಶುರುವಾಗಿದೆ. ಈ ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು ಅಂತ ಯೋಚಿಸುತ್ತ ಕೂತಾಗ ಬರೆದಿದ್ದನ್ನ, ಕೆಂಡಸಂಪಿಗೆಯಲ್ಲಿ ಲಾವಂಚ ಅಂಕಣದಲ್ಲಿ ಪ್ರಕಟಿಸಿದ್ದಾರೆ. http://www.kendasampige.com/article.php?id=1292

ನಿಮಗೆ ಸಮಯವಿದ್ದಾಗ ಓದಿ ನೋಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಲೇಖನದ ಒಪ್ಪಕ್ಕಿಂತ ವಿಷಯದ ತೀವ್ರತೆಯ ಬಗ್ಗೆ ತಿಳಿಸಿದರೆ ನನ್ನ ಗೊಂದಲವಿಷ್ಟು ಕಡಿಮೆಯಾಗಬಹುದು. ನಿಮಗೂ ತಲೆ ಕೆಡಿಸಿದೆ ಎಂದು ಬಯ್ದುಕೊಳ್ಳಬೇಡಿ.

Tuesday, August 26, 2008

ಒಂದು ತುಂಡು ಗೋಡೆ..

ಕೆಲವು ಬರಹಗಳೇ ಹಾಗೆ ಓದಿದ ಕೂಡಲೇ ನಮ್ಮೊಳಗೆ ಮೆತ್ತಗೆ ಎಲ್ಲೋ ಅಡಗಿದ್ದ ಭಾವಗಳನ್ನ ಉದ್ದೀಪಿಸಿ ಹೊರಗೆಲ್ಲ ಹರಿದಾಡುವಂತೆ ಮಾಡುತ್ತವೆ. ಹಲವು ಬಾರಿ ಈ ಭಾವಗಳು ಆರ್ದ್ರ ಪ್ರೀತಿ, ಸವಿ ಬಾಲ್ಯ, ಬೇಸರದ ಕ್ಷಣಗಳು, ತಲ್ಲಣ ತವಕಗಳನ್ನ, ಕರುಣೆಯನ್ನ ಉದ್ದೇಪಿಸಿದರೆ, ಕೆಲವು ಉದ್ದೇಶಪೂರ್ವಕ ಸಿಟ್ಟು ಹಗೆಯನ್ನ ಉದ್ದೇಪಿಸುತ್ತವೆ.
ಸಾಮಾನ್ಯವಾಗಿ ಕೋಮುಭಾವನೆಗಳು ಪುಟ್ಟಕಿಡಿಗೆ ಕಾಯುವ ಗರಿಗರಿ ಸಿಡಿಮದ್ದಿನ ಹಾಗೆ. ಅಕ್ಷರಲೋಕದ ಹಲವು ಮಶಿ ಹಿಡಿದ ಚಿತ್ರಗಳ ಮೂಲಬಣ್ಣವೆ ಈ ತರಹದ ಪ್ರೇರೇಪಕ ಬರಹಗಳು. ಎಷ್ಟೇ ಆಕರ್ಷಕ ಶೈಲಿಯಲ್ಲಿದ್ದರೂ, ಇವುಗಳನ್ನ ಒಂಥರಾ ಅನುಮಾನದಿಂದಲೆ ಓದುವುದು ನನ್ನ ಅಭ್ಯಾಸ. ನನ್ನ ಜೀವನದ ಸೀಮಿತ ಅವಧಿಯಲ್ಲಿ, ಪರಿಧಿಯಲ್ಲಿ ಕಂಡ ಪ್ರಭಾವಿಸಿದ ಮಾನವೀಯತೆಯ ಸೆಲೆಗಳು ಎಲ್ಲ ಜಾತಿ ಧರ್ಮ ನೆಲೆಗಳನ್ನು ಮೀರಿ ನಿಂತ ವ್ಯಕ್ತಿತ್ವಗಳಾಗಿದ್ದರಿಂದ, ನನ್ನ ಯೋಚನೆಗಳಿಗೆ ಈ ಕೋಮು ಫ್ರ್‍ಏಮು ಬೀಳದ ಸುರಕ್ಷಿತ ಜಾಗದಲ್ಲಿದ್ದೇನೆಂಬ ಭಾವನೆ ನನಗೆ.
ಹೀಗೆಯೆ ಕೆಲದಿನಗಳ ಹಿಂದೆ ತಮ್ಮನು ಒಂದು ಪುಸ್ತಕ ಓದಿ ಸಿಕ್ಕಾಪಟ್ಟೆ ಚೆನಾಗಿದೆ ಓದು ಅಂತ ಒಂದು ಪುಸ್ತಕ ತಂದುಕೊಟ್ಟ. ಹೆಸರು "ಒಂದು ತುಂಡು ಗೋಡೆ" ಬರೆದವರು ಶ್ರೀ ಬೊಳುವಾರು ಮಹಮ್ಮದ್ ಕುಂಇ ಯವರು.
ಊಟ ಮಾಡುವಾಗ ಒಂದು ಕತೆ ಓದುವಾ ಅಂತ ಶುರು ಮಾಡಿದರೆ, ಸಂಕಲನದಲ್ಲಿದ್ದ ಐದೂ ಕತೆಗಳು ಒಳಗಿಳಿದವು. ಬಹಳ ಒಳ್ಳೆಯ ಉದ್ರೇಕರಹಿತ ನಿರೂಪಣೆ, ಮನಸ್ಸಿಗೆ ನಾಟುವ ಚಿತ್ರಣ, ಬರಹದಲ್ಲಿ ಎದ್ದು ಕಾಣುವ ಪ್ರಾಮಾಣಿಕತೆ, ಮಿತವಾದ ಸೂಚ್ಯವಾದ, ಅಂತರ್ಗತವಾದ ಸಹಿಷ್ಣುತೆ ಎಲ್ಲವೂ ತುಂಬ ಚೆನಾಗಿದೆ. ನಾವೆಲ್ಲ ಓದಲೇಬೇಕೆನ್ನಿಸಿದ ಪುಸ್ತಕ. ದಯವಿಟ್ಟು ಕೊಂಡು, ಅಥವಾ ಲೈಬ್ರರಿಯಲ್ಲಿ ತಗೊಂಡು ಓದಿ. ಇವು ಈಗಾಗಲೆ ಸುಧಾ, ಪ್ರಜಾವಾಣಿ ವಿಶೇಷಾಂಕಗಳಲ್ಲಿ ಪ್ರಕಟವಾದವೂ ಕೂಡ.
 1. ಒಂದು ತುಂಡು ಗೋಡೆ,
 2. ಕೇಸರಿ ಬಿಳಿ ಹಸುರು ಮೂರು ಬಣ್ಣ ನಡುವೆ ಚಕ್ರವು,
 3. ಮೀನು ಮಾರುವವನು,
 4. ಓದು,
 5. ಸ್ವಾತಂತ್ರದ ಓಟ

ಎಲ್ಲ ಕತೆಗಳೂ ವಿಶಿಷ್ಟ ಅನುಭವಗಳನ್ನ ಕಟ್ಟಿಕೊಡುತ್ತವೆ.
ನನ್ನ ಕೈಯಾರೆ ಮನೆ ಸುಟ್ಟು
ಬೂದಿ ಹೊತ್ತು ಹೊರಟಿರುವೆ,
ಸುಡಬಯಸುವಿರಾದರೆ ನಿಮ್ಮ
ಮನೆ,
ನನ್ನ ಜೊತೆಯಲ್ಲಿ ಬರಬಹುದು..
ಎಂಬ ಕಬೀರನ ದೋಹೆಯ ಸಾಲುಗಳಿಂದ ಆರಂಭವಾಗುವ ಸಂಕಲನ ಮನಸ್ಸಿನಲ್ಲಿ ಬಲವಾದ ಛಾಪೊತ್ತುತ್ತದೆ.

ಮಕ್ಕಳ ಸಾಹಿತ್ಯಕ್ಕೆ, ಆ ಮೂಲಕ ದೊಡ್ಡವರ ಅಭಿವ್ಯಕ್ತಿಗೆ ಇವರು ನೀಡಿದ ಕೊಡುಗೆಯೂ ಅಪಾರ. ತಟ್ಟು ಚಪ್ಪಳೆ ಪುಟ್ಟ ಮಗು ಇವರದೇ ಕೃತಿ. ಜೆಹಾದ್ ಅಂತೊಂದು ತುಂಬ ಎಂದರೆ ತುಂಬ ಇಷ್ಟವಾಗುವ ಕಾದಂಬರಿಯೂ ಇವರದ್ದೆ. ಅಂಕ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲ್ಲಿ, ಅತ್ತ ಇತ್ತ ಸುತ್ತ ಮುತ್ತ ಇವರ ಇತರ ಕಥಾ ಸಂಕಲನಗಳು.

ಒಂದು ತುಂಡು ಗೋಡೆಯ ಸಂಕಲನದ ಕತೆಗಳ ಬಗೆಗೆ ಕೆಲವು ಅನಿಸಿಕೆಗಳು..
ರೊಟ್ಟಿ ಪಾತುಮ್ಮ, ಅವಳ ದಿನಗೂಲಿಯ ಸಂಗ್ರಹವಾದ ಹಣ, ಮನೆ ಕಟ್ಟುವ ಆಸೆಯಷ್ಟೆ ನಿಖರವಾಗಿ ಶ್ರೀನಿವಾಸಶೆಟ್ಟರ ಬಡ್ಡಿ ವ್ಯಾಪಾರ, ಅದರಲ್ಲಿಯೂ ತೋರುವ ಪ್ರಾಮಾಣಿಕತೆ, ಏನೋ ಸಾಧಿಸಲು ಹೊರಟು ಮಾಡಬಾರದ್ದನ್ನು ಮಾಡಿದ ಹಳಹಳಿಯಲ್ಲಿ ಕೊರಗುವ ಮನುಷ್ಯಸಹಜ ನಿಸ್ಪ್ರಹತೆ ಒಂದು ತುಂಡು ಗೋಡೆ ಯಲ್ಲಿ ನನಗೆ ತುಂಬ ಇಷ್ಟವಾದ ಅಂಶಗಳು.
ಕೇಸರಿ ಬಿಳಿ ಹಸುರು.. ಈಗಿನ ಕಾಲಕ್ಕೆ ಉತ್ಪ್ರೇಕ್ಷೆಯೆನ್ನಿಸಬಹುದಾದ ಆದರ್ಶದ ಎಳೆಗಳಲ್ಲಿ ಅದ್ದಿ ತೆಗೆದಂತಿದೆಯಾದರೂ ಆ ಕತೆಯ ಪಾತ್ರಗಳು ಇನ್ನೂ ಇಲ್ಲೆ ನಮ್ಮ ನಡುವೆಯೇ ಇರುವುದನ್ನ ನೋಡಬಹುದು.
ಮೀನು ಮಾರುವವನು ಕತೆಯ ಮೀನು ಮಾರುವವನು ಮತ್ತು ಶಾಸ್ತ್ರಿಗಳು, ಅವರ ಸುತ್ತಲಿನ ಸಮಾಜ ಮತ್ತು ಬದುಕು ಎಲ್ಲ ದಕ್ಷಿಣಕನ್ನಡದ ಅಚ್ಚ ಹಸಿರು ನೋಟಗಳ ಸೊಗದಲ್ಲಿ ಮನಸ್ಸಿಗಿಳಿಯುತ್ತವೆ.
ಓದು ನಂಗೆ ಇಡೀ ಸಂಕಲನದಲ್ಲಿ ಸಿಕ್ಕಾಪಟ್ಟೆ ಇಷ್ಟವಾದ ಕತೆ. ಅನುದ್ದೇಶಿತ ಆದರೂ ಗಹನವಾದ ವಿಷಯಗಳ ವಾಹಕರಾಗಿ ನಮ್ಮ ಬದುಕು ಹೇಗೆ ರೂಪಿತವಾಗಬಹುದು ಎಂಬುದರ ಒಂದು ಸರಳ ನಿರೂಪಣೆ. ಎಲ್ಲ ಪಾತ್ರಗಳೂ - ಸಿಟ್ಟುಗೊಂಡು ಮಾಸ್ತರ ವಿರುದ್ಧ ಕೆಂಡ ಕಾರುವ ಪುತ್ತುಮೋಣು, ನಯವಾಗಿ ಪಾಠ ಹೇಳಿಕೊಡುವ ಮಾಸ್ಟರನ್ನು ಇಷ್ಟಪಡುತ್ತಲೇ ಅವರನ್ನು ದೂರವಿಡಬಯಸುವ ಕಾಸಿಂ ಎಂಬ ದೊಡ್ಡವನಾಗಿಬಿಟ್ಟಿರುವ ಪುಟ್ಟ ಹುಡುಗ, ಅಪ್ಪನ ಆದರ್ಶದ ಹೊಳಪಲ್ಲೆ ದಾರಿ ಹುಡುಕುವ ಯುವ ಮಾಸ್ತರ್, ಎಲ್ಲವನ್ನೂ ಕುತೂಹಲದಿಂದ ಗಮನಿಸುತ್ತಾ ಭಾಗಿಯಾಗುವ ಊರಿನ ಸಮಸ್ತರು.. ಎಲ್ಲ ಕಾಡುವ ಪಾತ್ರಗಳೇ ಆಗಿವೆ.
ಕೊನೆಯ ಕತೆ ಸ್ವಾತಂತ್ರದ ಓಟ ಕೂಡ ಒಂದು ವಿಲಕ್ಷಣ ನೆನಪನ್ನು, ನಾವಿಲ್ಲಿ ಗಡಿಯಿಂದ ದೂರವಾಗಿ ಬದುಕು ಕಟ್ಟಿಕೊಂಡವರಿಗೆ ತೀರಾ ಪುಟ್ಟದು ಅನ್ನಿಸುವ ಸಂಗತಿಯನ್ನು ಅದರ ಮಾನವೀಯ ನೆಲೆಗಳಲ್ಲಿ ಚಿತ್ರಿಸಿದ ಕತೆ.

ಇತ್ತೀಚೆಗೆ ಈ ಕತೆಯ ನಾಟಕರೂಪವನ್ನ ಸಮುದಾಯ ಬೆಂಗಳೂರು ತಂಡದ ಕಲಾವಿದರು ಪ್ರದರ್ಶಿಸಿದರು ಕೂಡಾ. ಸ್ವತಹ ಬೊಳುವಾರು ಅವರೇ ನಾಟಕದ ರೂಪಾಂತರ ಮಾಡಿದ್ದರು. ನನಗೆ ನಾಟಕಕ್ಕಿಂತ ಕತೆಯೇ ಜಾಸ್ತಿ ಇಷ್ಟವಾಯಿತು. ಕತೆಯ ಸೂಚ್ಯ ಮಿತಿಗಳು ನಾಟಕ ಪ್ರದರ್ಶನದಲ್ಲಿ ವಾಚ್ಯವಾಗಿ, ಕೆಲವೊಮ್ಮೆ ಅತಿ ಸರಳೀಕೃತವಾಗಿ, ನಾಟಕ ಮಾಡಿಸುವವರ ಸಿದ್ಧಾಂತಗಳ ಮರುದನಿಯಾಗಿ ಹೊಮ್ಮಿರುತ್ತವೆ. ಕತೆ ನನ್ನ/ಮ್ಮ ಓದಿನ,ತಿಳುವಳಿಕೆಯ,ಅನಿಸಿಕೆಗಳ ಕಿಂಡಿ. ಹಾಗಿದ್ದೂ ನಾಟಕವೂ ಒಂದು ವಿಶಿಷ್ಟ ಅನುಭವವನ್ನ ಕೊಟ್ಟಿದ್ದು ಸುಳ್ಳಲ್ಲ.

ಅಡ್ದಗೋಡೆಯನ್ನು ಒಡೆಯಬಯಸುವವರಿಗೆ ಲೇಖಕರು ಈ ಸಂಕಲನವನ್ನು ಅರ್ಪಿಸಿದ್ದಾರೆ. ಒಳ್ಳೆಯ ಓದಿಗೆ,ಚಿಂತನೆಗೆ ಪೂರಕವಾಗುವ ಕತೆಗಳು. ನನಗೆ ಸಿಕ್ಕ ಹಿತವಾದ ಓದು ನಿಮ್ಮದೂ ಆಗಲಿ ಎಂಬ ಉದ್ದೇಶದಿಂದ ಈ ಬರಹ...

Monday, August 11, 2008

ಮತ್ತೆ ಸಿಗುವುದು ಬೇಕೆ..?

ಪುಟ್ಟಪುಟ್ಟ ಬಿಳಿನೀಲಿ ಹೂಗಳು
ಅಲ್ಲೊಂದು ಇಲ್ಲೊಂದು..
ಬರಿಯ ಮುಳ್ಳು ತುಂಬಿದ
ಎಲೆಗಳಿಲ್ಲದ ಪೊದೆಯ ಮಧ್ಯೆ
ಚುಚ್ಚಿ ಗಾಯವಾಗಿ ರಕ್ತಸುರಿದು
ಪೊದೆಯನ್ನೇ ಕಿತ್ತು
ಒಣಗಿಸಿ ಕತ್ತರಿಸಿ
ಬೂದಿಯಾಗಿಸಿ
ಕಲ್ಲಗೋರಿಯಲಿ ಮಲಗಿಸಿ
ಮೇಲಿಷ್ಟು ಮಣ್ಣೆಳೆದು
ಪ್ರಮಾಣ ಮಾಡಿ
ಎಪಿಗ್ರಾಫಿಯಾ ಬರೆದಿದ್ದೂ ಆಗಿದೆ
ಮತ್ತೇಕೆ ಕೆದಕುತ್ತೀಯೆ
ಏಳುವುದು ಬರಿಧೂಳು
ಕಾಲ ಕೆಳಗಿರುವುದು ಶೂನ್ಯ,
ಕಾಲು ಹೊತ್ತಿರುವ
ಮನದ ಗೂಡಲ್ಲಿ
ಸೂತಕದ ನೆರಳು.

ಮಾಗಿದ ಗಾಯವ ಕಿತ್ತು
ಒಣಗಿಸುವ ಉಪಚಾರವೇಕೆ,
ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.
ಆ ಹಾದಿಯ ಗುರಿಯೇ ಅಲ್ಲಿಗೆ -
ಯಾರೂ ಜೊತೆಯಾಗುಳಿಯದೆ
ಗಾಡಿ ಬದಲಿಸುವ ಜಂಕ್ಷನ್ನಿಗೆ.

ಇಲ್ಲ ಅವಳಿಲ್ಲ ಹುಡುಕುವುದು ಬೇಡ
ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ
ಉಳಿದಿರಬಹುದು ಅವಳ
ಚಹರೆಯ ಕುರುಹು,
ಮೇಲೆ ಹುಡುಕುವುದು ಬೇಡ..

Wednesday, July 9, 2008

ಅರ್ಪಣೆ..

ಅರ್ಧರಾತ್ರಿಯಲ್ಲಿ ಮಾತನಾಡಿಸಿ, ಫ್ಲೈಯಿಂಗ್ ಹಗ್ ಕೊಟ್ಟವಳಿಗೆ...
ಪುಟ್ಟ ತುಂಬೆ ಹೂ,
ಬಿಳಿಬಿಳೀ ಇಬ್ಬನಿ,
ಸೂಸಿ ಬರುವ ತಂಗಾಳಿ,
ಅದರಒಳಗಣ
ಮಲ್ಲಿಗೆಯ ಘಮ,
ಎಳೇ ಬಿಸಿಲು,
ಹಕ್ಕಿ ಚಿಲಿಪಿಲಿ,
ಮೊದಲ ಮಳೆಹನಿ,
ಪುಟ್ಟಪುಟಾಣಿ ಪಾಪುವಿನ ಹೂನಗೆ,
ಎಲ್ಲ ಬೊಗಸೆಯಲ್ಲಿ ಹಿಡಿದು
ನಿಂತಿದೇನೆ ನಿನ್ನ
ಪ್ರೀತಿ,ನೇಹಗಳಿಗೆ ಮನಸೋತು..

Monday, July 7, 2008

ಹುಲಿರಾಯನ ಆಕಾಶವಾಣಿ..

ಕೆಲದಿನಗಳ ಹಿಂದೆ 'ಸದ್ದಡಗಿದ ಶಿಕಾರಿಕೋವಿ' ಎಂಬ ಪುಸ್ತಕವನ್ನು ಓದಿದೆ. ಡಾ ಪ್ರಭಾಕರ ಶಿಶಿಲ ಅವರು ಬಡ್ಡಡ್ಕ(ಸುಳ್ಯ) ಅಪ್ಪಯ್ಯಗೌಡರ ಶಿಕಾರಿಯ ನೆನಪನ್ನು ಮನಃಸ್ಪರ್ಶಿಯಾಗಿ ನಿರೂಪಿಸಿ ಬರೆದಿರುವ ಪುಸ್ತಕ. ಕನ್ನಡದ್ದೇ ಆದ ಶಿಕಾರಿಯ ಕತೆ, ಮತ್ತು ಆ ಕಾಲದ ಕಾಡು, ಪ್ರಾಣಿಗಳು, ಮತ್ತು ಇತರೇ ವನಸಂಪತ್ತು, ಜೀವನಶೈಲಿಯ ಬಗೆಗಿನ ಕುತೂಹಲದಿಂದ ಈ ಪುಸ್ತಕ ಓದತೊಡಗಿದೆ. ಒಂದೊಂದು ಸನ್ನಿವೇಶವನ್ನೂ ಕಣ್ಣಿಗೆ ಕಟ್ಟುವ ಹಾಗೆ, ಬದುಕು,ಬೇಟೆ,ಹಳ್ಳಿ ಜೀವನ ಮತ್ತು ಕಾಡನ್ನ ಸೂಕ್ಷ್ಮ ವಿವರಗಳನ್ನೂ ಬಿಡದೆ ಬರೆದಿದ್ದಾರೆ. ರೋಮಾಂಚಕವಾದ ಶಿಕಾರಿ ಕತೆಯನ್ನು ಓದುತ್ತ ಓದುತ್ತ ಮನಸ್ಸಿಗೆ ತುಂಬ ಬೇಜಾರಾಗಿಬಿಟ್ಟಿತು. ನಮ್ಮ ಸಾಕಷ್ಟು ಅನುಭವಿ ಮತ್ತು ದೊಡ್ಡ ಬೇಟೆಗಾರರೆಲ್ಲ, ನರಭಕ್ಷಕ ಅಥವಾ ಕಂಟಕಪ್ರಾಯವಾದ ಹುಲಿಗಳನ್ನೇ ಬೇಟೆಯಾಡಿರುವುದು ನಿಜವಾದರೂ, ನಾವು ಮನುಷ್ಯರು ವನ್ಯಜೀವಿಗಳ ನಿವಾಸವಾದ ಕಾಡನ್ನು ನಮ್ಮ ಪ್ರಗತಿಪರ ಉದ್ದೇಶ/ದುರುದ್ದೇಶಗಳಿಗೆ ಖಾಲಿ ಮಾಡುತ್ತ, ಅವು ತಮ್ಮ ಜಾಗದಿಂದ ಹೊರಬಂದು ಆಹಾರ ಹುಡುಕತೊಡಗಿದರೆ ಬೇಟೆಯಾಡಿ ಕೊಲ್ಲುವುದು ಎಷ್ಟು ನ್ಯಾಯ.. ? ಇದರ ಜೊತೆಜೊತೆಗೇ "ನೆಲ ಕಚ್ಚಿದ ಗುಬ್ಬಚ್ಚಿ" ಎಂಬ ಪಕ್ಷಿ ಶಾಸ್ತ್ರಜ್ಞ ಸಲೀಂಅಲಿಯವರ ಅನುವಾದಿತ ಜೀವನ ಚರಿತ್ರೆ ಓದಿದೆ. ಅನುವಾದಕರು ಎನ್.ಪಿ.ಶಂಕರನಾರಾಯಣ ರಾವ್. ಸಲೀಂ ಅಲಿಯವರ ಬದುಕು ಪಕ್ಷಿ ಸಂಕುಲದಷ್ಟೇ ಆಸಕ್ತಿಯುತವಾಗಿ ಓದಿಸಿಕೊಂಡುಹೋಯಿತು. ವಿವರಗಳು ಬದಿಗಿಟ್ಟು ಆ ಪುಸ್ತಕದಲ್ಲಿ ಓದಿದ ರಾಜರ, ರಾಜಮನೆತನಗಳ, ಜಮೀನುದಾರರ, ಬ್ರಿಟಿಶ್ ಅಧಿಕಾರಿಗಳನ್ನು ಮನತಣಿಸುವವರ ಬೇಟೆಯ ಕತೆಗಳು, ಪಕ್ಷಿಗಳ ಮಾರಣಹೋಮ ಇತ್ಯಾದಿ ಎಲ್ಲ ಓದಿ ಮನಸ್ಸು ಮುದುಡಿಹೋಯಿತು ಕೂಡಾ.
ಮನರಂಜನೆಗೆ ಇನ್ನೊಂದು ಜೀವಿಯನ್ನ ಕೊಲ್ಲುವ, ಹವ್ಯಾಸವಾಗಿ ಬೆಳೆಸಿಕೊಂಡಿರುವ ಒಂದೇ ಜೀವಪ್ರಬೇಧವೆಂದರೆ ಮನುಷ್ಯರು ಅಂತ ಕಾಣುತ್ತದೆ.
ಮತ್ತೆ ಮರುವಾರ ಪುಸ್ತಕದಂಗಡಿಗೆ ಹೋದೆ. ಪ್ರಾಣಿಗಳ ಬಗ್ಗೆ ಮತ್ತು ನಮ್ಮ ಉಲ್ಲಾಸಕಾರಂತರಂತಹ ವನ್ಯಜೀವಿಶಾಸ್ತ್ರಜ್ಞರ ಕೆಲಸ ಕಾರ್ಯಗಳ ಬಗೆಗೆ ಏನಾದರು ಪುಸ್ತಕ ಸಿಕ್ಕುತ್ತಾ ನೋಡಬೇಕು ಅಂತ. ನಾನು ಚಿಕ್ಕವಳಿದ್ದಾಗ ಕೆಲ ಪತ್ರಿಕೆಗಳಲ್ಲಿ ಹುಲಿಗಳಿಗೆ ಕಾಲರ್ ತೊಡಿಸಿದವರು ಎಂಬ ತಲೆಬರಹದಡಿಗಳಲ್ಲಿ ಇವರ ಬಗ್ಗೆ ಓದಿದ ನೆನಪು. ಎಲ್ಲ ಬಿಟ್ಟು ಇವರು ಹುಲಿಗೇಕೆ ಕಾಲರ್ ತೊಡಿಸಿದರೋ ಎಂಬ ಉಡಾಫೆಯಲ್ಲಿ ಅದನ್ನ ಓದಿರಲಿಲ್ಲ ನಾನು.
ಈಗ ಶಿಕಾರಿಗಳ ಬಗ್ಗೆ ಓದಿದ ನಂತರ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿತು. ಹುಲಿರಾಯನ ಬದುಕು, ಹುಲಿರಾಯನ ಆಕಾಶವಾಣಿ, ಎಂಬ ಎರಡು ಹುಲಿಗಳ ಬಗೆಗಿನ ಪುಸ್ತಕವೇ ಸಿಕ್ಕಿತು. ಎರಡರ ಮೂಲ ಸೆಲೆಯೂ ಉಲ್ಲಾಸ ಕಾರಂತರೇ. ಅವರ ಇಂಗ್ಲಿಷ್ ಪುಸ್ತಕದ ಅನುವಾದ ಮಾಡಿದವರು ಟಿ.ಎಸ್. ಗೋಪಾಲ್. ಮತ್ತೊಂದು ಪುಸ್ತಕದ ನಿರೂಪಣೆಯ ಹೊಣೆ ಹೊತ್ತವರೂ ಇವರೆ. ನನ್ನ ಕುತೂಹಲಕ್ಕೆ ಈ ಪುಸ್ತಕಗಳು ಬಹು ಒಳ್ಳೆಯ ಆಸರೆಯಾಗಿ ಒದಗಿಬಂದವು.

ಹುಲಿರಾಯನ ಬದುಕು ಓದಿಮುಗಿಸಿದ್ದೇನೆ. ತಳಮಳ ಸ್ವಲ್ಪ ಕಡಿಮೆಯಾಗಿದೆ. ಎಲ್ಲ ಮುಗಿದುಹೋಯಿತು ಎಂಬ ಶೂನ್ಯಭಾವ ಇಲ್ಲ ಈಗ. ಏನನ್ನೋ ಮಾಡಬಹುದು, ಮಾಡಬೇಕು ಎಂಬ ಅನಿಸಿಕೆ ದಟ್ಟವಾಗಿ ನಿಂತಿದೆ.
ತನ್ನ ಸಂಪೂರ್ಣ ಆವಾಸವಾದ ಕಾಡಿನ ಶೇಕಡಾ ಐದು ಭಾಗವಷ್ಟೇ ಈಗಿನ ಹುಲಿಗಳಿಗೆ ಉಳಿದಿದೆಯಂತೆ. ಉಳಿದಿರುವ ಅದರಲ್ಲೂ ಹೊರಗಣ ಕಾಡು ಮನುಷ್ಯರ ಸಂಚಾರ ಮತ್ತು ವ್ಯವಹಾರಗಳಿಗೆ ಪಕ್ಕಾಗಿದೆಯಂತೆ. ನಮ್ಮ ವನ್ಯಜೀವಿಗಳು ಎಲ್ಲಿ ಬದುಕಬೇಕು? ಸಂತ್ರಸ್ತ ಜನರನ್ನೇ ಕೇಳುವವರು ಗತಿಯಿಲ್ಲ. ಕಾಡು ಪ್ರಾಣಿಗಳು ಯಾರಿಗೆ ಬೇಕು?
ಸತ್ಯವೇನೆಂದರೆ, ನಾವು ಮನುಷ್ಯರು ಇಂದು ನಮಗೆ ಬೇಕಾದ ಗುರಿಗಳ ಹಿಂದೆ ನಾಗಾಲೋಟದಿಂದ ಓಡುವ ಎಲ್ಲ ಸೌಲಭ್ಯ, ಸವಲತ್ತೂಗಳೂ ನಾವು ಬದುಕಿದ್ದರೆ ಮಾತ್ರ ಕೆಲಸ ಮಾಡುತ್ತವೆ. ಭೂಮಿಯ ಮೇಲಿನ ಸೃಷ್ಟಿ ವೈವಿಧ್ಯತೆಯೇ ಭೂಮಿಯ ಫಲವತ್ತತೆ, ಋತುಮಾನ, ಜೀವ ನಿಯಂತ್ರಣ ಮತ್ತು ಜೀವೋತ್ಪಾದನೆಯ ಎಲ್ಲದರ ಬೆನ್ನೆಲುಬು. ನಾವು ಅದನ್ನೇ ನುಂಗಿ ನೀರು ಕುಡಿಯುತ್ತಾ ಕೂತ ಮರದ ಕೊಂಬೆ ಕಡಿಯುವ ಕೆಲಸದಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದೇವೆ.
ಬರಿಯ ಹುಲಿಯಿಂದ ಪ್ರಪಂಚ ನಡೆಯುತ್ತಿಲ್ಲ. ಮನುಷ್ಯನಿಂದಂತಲೂ ಖಂಡಿತ ಅಲ್ಲ. ಎಲ್ಲ ಜೀವವೈವಿಧ್ಯಗಳ ಒಂದರೊಡನಿನ್ನೊಂದರ ಹೊಂದಾಣಿಕೆಯೇ ನಮ್ಮ ಜೀವರಹಸ್ಯ. ಹುಲಿಗಳು ಈ ರಹಸ್ಯ ಬಿಡಿಸುವ ಮತ್ತು ವೈವಿಧ್ಯತೆ ಕಾಪಾಡುವ ಮುಖ್ಯ ಕೊಂಡಿಗಳು. ಒಂದು ಹುಲಿಯ ಉಳಿವು, ಅದರ ಸುತ್ತಲಿನ ಆಹಾರ/ಬೇಟೆಪ್ರಾಣಿಗಳ ಉಳಿವಿನ ಮೇಲೆ ನಿಂತಿರುತ್ತದೆ. ಆ ಬೇಟೆ ಪ್ರಾಣಿಗಳು ಕಾಡಿನ/ಸಸ್ಯ ಸಮೃದ್ಧತೆಯ ಮೇಲೆ ಅವಲಂಬಿಸಿರುತ್ತವೆ. ಕಾಡು ಮಳೆ/ಬಿಸಿಲುಗಳ ಮೇಲೆ. ಈ ಎಲ್ಲವೂ ನಮ್ಮ ಮೇಲೆ ಮಾಡುವ ಪರಿಣಾಮವನ್ನು ಪ್ರತ್ಯೇಕವಾಗಿ ತೋರಿಸಿಕೊಡಬೇಕಾದ್ದಿಲ್ಲ ಅಲ್ಲವೇ? ಇದು ಈ ಪುಸ್ತಕದಿಂದ ನಾನು ಕಲಿತ ಪಾಠ.

ಈ ಬಗೆಗಿನ ಹೆಚ್ಚಿನ ಮಾಹಿತಿ, ನಾವು ಮಾಡಬಹುದಾದ ಸಣ್ಣ ಸಣ್ಣ ಆದರೆ ಅತ್ಯವಶ್ಯಕ ಜೀವನಶೈಲಿಯ ಬದಲಾವಣೆಗಳು, ಸಾಧ್ಯವಾದಾಗ ವನಜೀವನ ಸಂರಕ್ಷಣ ಕಾರ್ಯದಲ್ಲಿ ತೊಡಗಿರುವವರಿಗೆ ನೀಡಬಹುದಾದ ಸಹಾಯ ಎಲ್ಲವನ್ನೂ ಈ ಪುಸ್ತಕ ಪ್ರೀತಿಯಿಂದ ಹೇಳಿಕೊಡುತ್ತದೆ.ಸಮಯಾವಕಾಶವಾದಾಗ ದಯವಿಟ್ಟು ಈ ಪುಸ್ತಕ ಕೊಂಡು ಓದಿ. ಇಲ್ಲಿ ಆಳ ಅಧ್ಯಯನ ಮತ್ತು ಪರಿಶೀಲನೆಯ ಸಾರಸರ್ವಸ್ವವಿದೆ.

ನಮ್ಮ ವನ್ಯಜೀವನ ಸಂರಕ್ಷಣೆಯ ಬಗೆಗಿನ ಹೆಚ್ಚು ಮತ್ತು ನಿಖರ ಮಾಹಿತಿಗಳು ಈ ವೆಬ್ ಸೈಟಿನಲ್ಲಿ ಸಿಗುತ್ತವೆ. http://www.wildlifefirst.info/about.htm

ಅವನ ಹಾಡು..


ಆ ಉದ್ದ ಜಡೆಯನ್ನ ಬಿಂಕವಾಗಿ ಹೊತ್ತು ತಿರುಗುವ
ಮೊದ್ದುತನದ ಮೇರುತಲೆಗೆ ಎರಡು ತಟ್ಟುತ್ತಾ;
ಜಗದ ಎಲ್ಲ ಚಲನೆಯನ್ನ ಹೊತ್ತು ಸುಳಿವ
ತುಂಟ ಕಣ್ಣುಗಳ ಕೊಳದಲ್ಲಿ ಬಿದ್ದು ಈಜುತ್ತಾ;
ಸಾಗರದಷ್ಟು ಮಾತು ತುಂಬಿ ತುಳುಕುವ
ಪುಟ್ಟ ಬಾಯಿಗೆ ನನ್ನ ಮೌನದೊಲವ ಕುರುಹ ಹಚ್ಚುತ್ತಾ;
ಚಕ್ರ ಕಟ್ಟಿದಂತೆ ತಿರುಗುವ ಕಾಲ ಹಾದಿಯ
ಹಿಂಬಾಲಿಸಿ ಹಿಂಬಾಲಿಸಿ ಸುಸ್ತಾಗುತ್ತಾ;
ಮಾಡಿದಡುಗೆ ಘಾಟು ಘಾಟಾಗಿದ್ದರೂ
ಅಮ್ಮನಡುಗೆಯಂತೇ ಇದೆ ಎಂದು ಭಾವಿಸಿ ತಿನ್ನುತ್ತಾ,
ನಡೆಯದೇ ಓಡುತ್ತ ಎಡವಿಬಿದ್ದಾಗ
ಮೇಲೇಳಲು ಕೈ ನೀಡುತ್ತಾ;
ಎಲ್ಲ ನಿಯಮಗಳ ಮೀರಿದ-ಯಾವ ಅಳತೆಗೂ ಸಿಗದ
ಸಿಟ್ಟು ಮಾಡಿದರೆ ಮುದುಡುವ,
ಮುದ್ದು ಮಾಡಿದರೆ ಚಿಗುರುವ
ನಿನ್ನ ಚೈತನ್ಯದ ಹರಿವು
ನೋಡಿ ನೋಡಿ ಅವಾಕ್ಕಾಗುತ್ತಾ;
ನನ್ನಲಿಲ್ಲದ, ನನಗೆ ತುಂಬ ಬೇಕಿರುವ ಎಲ್ಲದೂ
ನಿನ್ನಲಿರುವುದ ನೋಡುತ್ತ
ಪುಳಕಗೊಂಡು
ಮತ್ತೆ ಮತ್ತೆ ಬಿಗಿದಪ್ಪುತ್ತಾ;
ನಿನ್ನ ಮಾತಿನ ತಾಳಕ್ಕೆ
ನನ್ನ ಮೌನರಾಗ
ಜತೆಯಾಗಿ
ಬದುಕಿನ ಕವಿತೆಗೆ
ಸಂಜೀವನ ಸಂಗೀತದ ಸಂಯೋಜನೆ..

Thursday, June 26, 2008

ಅಶ್ರುತ ಅನುರಣನ.

ಹಸಿರು, ಮಳೆ, ಗುಡ್ಡ, ಹಿನ್ನೀರು
ಹಣ್ಣು,ಜೇನು,ಗಾಳಿ,ಮಳೆ, ಬೆಳದಿಂಗಳ ಬಾಲ್ಯ,
ಮಾವನೊಡನೆ ಮುನಿಸು, ಅತ್ತೆಯೊಡನೆ ಸೊಗಸು,
ಅಜ್ಜನ ಕತೆ, ಅಮ್ಮಮ್ಮನ ಕೊಂಡಾಟ,
ರಜೆಯ ಮಜದ ಮೂರ್ತ ರೂಪ
ನನ್ನದೇ ಊರೆನಿಸಿದ್ದು
ಇವತ್ತು
ನನ್ನದಲ್ಲ, ...!!?? :( :(

ಅದೇ ಹಸಿರು, ಕೊಂಚ ಧೂಳುಬಡಿದಿದೆ
ಅದೇ ಮಳೆ, ಏನೋ ಸ್ವಲ್ಪ ಹಿಂಚು ಮಿಂಚು
ಅದೇ ಗುಡ್ಡ, ಅಲ್ಲಲ್ಲಿ ಬೋಳಾಗಿದೆ
ಅದೇ ಹಿನ್ನೀರು, ಸ್ವಲ್ಪ ಸವುಳಾಗಿದೆ
ಹಣ್ಣು ಜೇನು ಗಾಳಿ ಮಳೆ ಬೆಳದಿಂಗಳು
ಹಾಗೇ ಇರಬಹುದೇನೋ
ಹೋಗಿ ರುಚಿ ನೋಡುವವರು ಯಾರು,ಯಾವಾಗ?


ಸಂಬಂಧಗಳು ರೇಷಿಮೆಯಂತೆ-
ಅಜ್ಜನ ಕತೆಯದೇ ರೂಪಕ;
ಬಾಲ್ಯದ ಜೋಕಾಲಿ ಜೀಕಿ ಮುಗಿಸಿ,
ಬದುಕಿನ ಏರು ಹತ್ತುತ್ತಾ
ಉಸಿರುಬಿಡುತ್ತಿರುವವಳಿಗೀಗ ಹೌದೇಹೌದೆನಿಸುತ್ತಿದೆ:
ಸಂಬಂಧಗಳು ರೇಷಿಮೆಯಂತೆ-
ಸುಲಭವಾಗಿ ಸಿಕ್ಕಾಗುತ್ತವೆ,
ಕಡಿದ ಮೇಲೆ ಜೋಡಿಸಲಾಗದು.
ಮೊನ್ನೆ ಮೊನ್ನೆ
ನಕ್ಕಂತೆ ಅನಿಸಿದ ನಗು,
ಆಡಿದ ಮಾತು, ನೋಡಿದ ನೋಟ
ಎಲ್ಲ ಯಾವಾಗ ಹೇಗೆ ಬದಲಾಯಿತು,
ಗೊತ್ತಾಗುತ್ತಿಲ್ಲ!
ಕೂತು ಕತೆಹೇಳಿ ತರ್ಕಿಸಲು ಅಜ್ಜನಿಲ್ಲ,
ಅಮ್ಮಮ್ಮ ಅವನ ಹಿಂದೆಯೇ ಹೊರಟ ಹಾಗಿದೆ,

ಉಳಿದೆಲ್ಲರೂ ಬದಲಾಗುವ ಕಾಲದ
ಮುಳ್ಳು ಹಿಡಿದು ನೇತಾಡುತ್ತಾ
ಮನದ ತುಂಬ
ಪ್ರೀತಿಯ ಬಂಧವೊಂದರ ಸೂತಕ.


ಮನುಷ್ಯರು ಬದಲಾಗಬಹುದು
ನಿನ್ನೆಯಿದ್ದವರು ಇಂದಿಲ್ಲ,
ಇಂದಿನ ನಾವು ನಾಳೆಗೆ ಸಲ್ಲ,
ಮರ,ಗುಡ್ಡ,ಮಳೆ, ಕಾಡು ಹಾಗಲ್ಲವಲ್ಲ..
ಸೂತಕದ ಒಳಮನೆಯಲ್ಲಿ
ನೆನಪಿನ ದೀಪದ ಮಂದ ಬೆಳಕು!
ಅಲ್ಲಿ ಬೇಕೆಂದಾಗ
ಹೊರಗಿನ ಹಂಗಿಲ್ಲದ
ಅಜ್ಜ,ಅಮ್ಮಮ್ಮ,ಕಾಡು,ಕತೆ,ತಿರುಗಾಟ,
ಅಕ್ಕರೆಯ ಬಂಧದ ಅಶ್ರುತ ಅನುರಣನ.

Friday, May 30, 2008

ಗಂಜಿ..

ಜಿಟಿಜಿಟಿ ಮಳೆ ಬೆಳಿಗ್ಗೆ ಎದ್ದಾಗಿನಿಂದಲೇ ಸುರಿಯುತ್ತಿದೆ. ಹೂವು ಕೊಯ್ಯಲು ಹೋಗುವಾಗಲೂ ಕೊಡೆ ಹಿಡಿದುಕೊಂಡೇ ಹೋಗಬೇಕಾದಷ್ಟು ಜೋರೇ. ಹಾಗಾಗೇ ಇವತ್ತು ದೇವರಿಗೆ ಒಂದೆರಡು ಬೇಲಿಸಾಲಿನ ಹೂಗಳು ಖೋತಾ. ಸ್ನಾನ ಮುಗಿಸಿ ಯುನಿಫಾರ್ಮ್ ಹಾಕಿ, ಕೈಯಲ್ಲಿ ಹಣಿಗೆ ಹಿಡಿದು ಬಂದವಳಿಗೆ ಅಮ್ಮ ಬಿಸಿಬಿಸಿ ಹಬೆಯಾಡುತ್ತಿದ್ದ ತಟ್ಟೆ ಕೊಟ್ಟು ತಲೆಬಾಚತೊಡಗಿದಳು. ತಟ್ಟೆ ನೋಡಿದ ಕೂಡಲೆ ಇವಳಿಗೆ ಸಿಟ್ಟು. ನನಗೆ ಗಂಜಿ ಬೇಡ, ತಿಂಡಿ ಬೇಕು. ಸಿಡುಕತೊಡಗಿದಳು. ಅಮ್ಮ ನಯವಾಗಿ ಮಾತನಾಡಿಸುತ್ತ, ನೋಡು ಈ ಚಳಿ ಮಳೇಲಿ ಬಿಸಿ ಬಿಸಿ ಗಂಜಿ ತಿನ್ನು, ಮೇಲೆ ಘಮ ಘಮ ಕೊಬ್ಬರಿ ಎಣ್ಣೆ ಮತ್ತೆ ಕರಿಯಪ್ಪೆ ಮಾವಿನ ಮಿಡಿ ಇದೆ. ಎಷ್ಟು ರುಚಿ ಇರುತ್ತಲ್ಲಾ ಪುಟ್ಟೀ, ಈ ಮಳೆಯಲ್ಲಿ ಮೈ ಬೆಚ್ಚಗಿರತ್ತೆ. ಹೊಟ್ಟೆ ತಂಪಾಗಿರತ್ತೆ ತಿಂದರೆ ಅಂತ ಹೇಳುತ್ತ ಎರಡೂ ಜಡೆಯನ್ನೂ ಎತ್ತಿ ಕಟ್ಟಿ, ಅಲ್ಲೇ ಕಿಟಕಿಯ ಬಳಿ ಇಟ್ಟಿದ್ದ ಹಳದಿ ಬಣ್ಣದ ಗುಂಡು ಡೇರೆ ಹೂವನ್ನ ಮುಡಿಸಿದಳು. ಇವಳಿಗೆ ಅಮ್ಮನ ಮಾತು ಚೂರು ಚೂರೂ ಇಷ್ಟವಾಗಲಿಲ್ಲ. ಗಂಜಿ ತಿನ್ನಲಿಕ್ಕೇನೋ ರುಚಿಯಾಗೇ ಇತ್ತು. ಮನಸ್ಸು ಕೆಟ್ಟಿತ್ತು. ತಾನು ಓದಿದ ಕತೆಗಳಲ್ಲೆಲ್ಲ ಬಡವರ ಮನೆಯವರು ಗಂಜಿ ತಿಂದು ಬದುಕುತ್ತಿದ್ದರು. ಹಾಗಾದರೆ ನಾವೂ ಬಡವರೆ ಎಂಬ ಗಾಢ ನಿರಾಸೆಯಲ್ಲಿ ತಿಂದು ಮುಗಿಸಿ ಕೈ ತೊಳೆದುಕೊಳ್ಳುವಾಗ ಅವಳ ಕಣ್ಣಲ್ಲಿ ನೀರಿತ್ತು. ಗಮನಿಸಿದ ಅಮ್ಮ ಮೆತ್ತಗೆ ಹೇಳಿದಳು. ನಾಳೆ ತಿಂಡಿ ದೋಸೆ. ಈಗ ಸಿಟ್ಟು ಮಾಡಿಕೊಳ್ಳದೆ ಸ್ಕೂಲಿಗೆ ಹೋಗು ಮಗಳೇ. ಸರಿ ಎಂದರೂ ಬಿಗುವಾದ ಮನದಲ್ಲೆ ಕೊಡೆ ಬಿಚ್ಚಿ ಹೊರಟಳು. ಅಮ್ಮ ಬಾಗಿಲಲ್ಲೇ ತನ್ನ ಟಾಟಾಕ್ಕೆ ಕಾಯುತ್ತಿದ್ದಾಳೆ ಅಂತ ಗೊತ್ತಿದ್ದೂ ತಿರುಗಿ ನೋಡದೆ ಹೋಗಿಬಿಟ್ಟಳು.

ಅವತ್ತು ಶಾಲೆಗೆ ಹೋದರೂ ಬೆಳಗ್ಗಿನಿಂದಲೇ ಒಂದು ತರ ಗೌ ಅನ್ನುತ್ತಿತ್ತು. ಧಾರಾಕಾರ ಮಳೆ. ಶಾಲೆಯ ಹೊರಗಿನ ಅಂಗಳವೆಲ್ಲ ಕೆಸರು ಹೊಂಡವಾಗಿತ್ತು. ಎಲ್ಲರೂ ಕ್ಲಾಸಿನಲ್ಲೆ ನಿಂತುಕೊಂಡು ಪ್ರಾರ್ಥನೆ ರಾಷ್ಟ್ರಗೀತೆ ಹೇಳಬೇಕಾಯಿತು. ಬೆಳಗ್ಗೆ ಹೇಗೆ ಹೇಗೋ ಮುಗಿಯಿತು. ಮಧ್ಯಾಹ್ನದ ಕ್ಲಾಸು ಭಾರೀ ಕಷ್ಟವಾಗಿಬಿಟ್ಟಿತು. ಸಂಜೆಯಾಗೇ ಹೋಯಿತೇನೋ ಅನ್ನುವಂತೆ ಕವಿದುಕೊಂಡಿದ್ದ ಕತ್ತಲು, ಎಲ್ಲರಿಗೂ ನಿದ್ದೆಯ ಮೂಡು ತಂದುಬಿಟ್ಟಿತ್ತು. ಅದಕ್ಕೆ ಸರಿಯಾಗಿ ಗುಂಡಮ್ಮ ಟೀಚರ ಗಣಿತ ಕ್ಲಾಸು ಎರಡು ಪೀರಿಯಡ್ಡು ಬೇರೆ. ಎಷ್ಟು ಕೂಡಿದರೂ ಕಳೆದರೂ ಲೆಕ್ಕವೇ ಮುಗಿಯುತ್ತಿಲ್ಲ. ದಿನವೂ ಆಗಿದ್ದರೆ ಮುಂದಿನ ಪಿರಿಯಡ್ಡು ಆಟಕ್ಕೆ ಬಿಡಬೇಕು. ಹಾಗಾಗಿ ಅದರ ಹಿಂದಿನ ಪಿರಿಯಡ್ಡಿನಲ್ಲೆ ಹಂಚಿಕೆ ಶುರುವಾಗಿರುತ್ತಿತ್ತು ಗುಟ್ಟಾಗಿ. ಯಾರು ರೂಪನ ಟೀಮು, ಯಾರು ಭಾಗ್ಯನ ಕಡೆ, ಕೆರೆ ದಡವೋ, ಕಳ್ಳಾ ಪೋಲಿಸೋ,..ಹೀಗೇ ಎಲ್ಲ ನಿರ್ಧಾರಗಳೂ ಗುಸುಗುಸೂಂತ ಹರಡಿಕೊಂಡು ಕ್ಲಾಸಿನಲ್ಲಿ ತುಂಬ ಚಟುವಟಿಕೆ ಇರುತ್ತಿತ್ತು. ಇವತ್ತು ಎಲ್ಲರೂ ಮಂಕಾಗಿದ್ದರು. ಹೊರಗೆ ಧೋ ಮಳೆ. ಅಷ್ಟಕ್ಕೇ ಮುಗಿಯಲಿಲ್ಲ. ಮುಂದಿನ ಪಿರಿಯಡ್ಡಲ್ಲಿ ಅನಸೂಯಮ್ಮ ಟೀಚರು ಬಂದುಬಿಟ್ಟರು. ಅಯ್ಯೋ ರಾಮ ಇವರಿನ್ನು ಮತ್ತೆ ಬೆಳಗ್ಗಿನ ಕನ್ನಡವನ್ನೇ ಕೊರೆಯುತ್ತಾರಲ್ಲಾ ಅಂದುಕೊಳ್ಳುತ್ತಿದ್ದ ಹಾಗೆ ಒಳಗೆ ಬಂದ ಟೀಚರು, ಮಕ್ಳಾ ಇವತ್ತು ಮಳೆ, ಆಟ ಬಂದ್, ಅದಕ್ಕೆ ಈಗ ಕತೆ ಹೇಳಾಟ ಅಂತ ಶುರು ಮಾಡಿದರು. ಓ ಇದೇನೋ ಬೇರೆ ತರ ನಡೀತಾ ಇದ್ಯಲ್ಲ ಅಂತ ಎಲ್ಲರ ಕಿವಿಯೂ ಚುರುಕಾಯಿತು. ಮೂಲೆಯಲ್ಲಿ ಬಾಗಿಲ ಹಿಂದಿನ ಬೆಂಚಲ್ಲಿ ಕೂತ ಶೋಭಾ ತೂಕಡಿಸುತ್ತಿದ್ದಿದ್ದು ಟೀಚರ ಕಣ್ಣಿಗೆ ಬಿತ್ತು. ಕೂಡಲೇ ಅವರ ಕೈಯಲ್ಲಿದ್ದ ಉದ್ದನೆ ಬೆತ್ತ ತಗೊಂಡು ಅವಳ ಹತ್ತಿರ ಹೋಗಿ ಸಣ್ಣಗೆ ತಿವಿದರು. ಅಯ್ಯಮ್ಮಾ ಅಂತ ಅವಳು ಬೆಚ್ಚಿ ಬಿದ್ದು ಎದ್ದು ಕೂತರೆ ನಮಗೆಲ್ಲ ಮುಸಿಮುಸಿ ನಗು. ಇನ್ಯಾರಾದರೂ ಮಲಗಿದರೆ ಸರಿಯಾಗಿ ಬೀಳತ್ತೆ ಮೈಮೇಲೆ ನಾಗರಬೆತ್ತ ಇದು ಗೊತ್ತಾಯ್ತಾ ಅಂತ ಪುಟ್ಟಗೆ ನಡೆದುಕೊಂಡ ಬಂದ ಟೀಚರು ಒಂದು ಕ್ಷಣ ಅಜ್ಜ ಹೇಳುವ ಕತೆಯ ಲಂಕಿಣಿಯಂತೆಯೇ ಕಾಣಿಸಿದರು. ಛೇ ಛೇ, ಟೀಚರ್ ಬಗ್ಗೆ ಹಂಗೆಲ್ಲಾ ಅಂದ್ಕಂಡ್ರೆ ಪಾಪ ಬರುತ್ತೆ, ಅಂತ ನೆನಪು ಮಾಡಿಕೊಂಡು ಲಂಕಿಣಿಯನ್ನ ಹಿಂದೆ ದಬ್ಬಿದರೂ ಟೀಚರ್ ಕನ್ನಡಕದೊಳಗಿನ ಚೂಪುಕಣ್ಣಿನಲ್ಲಿ ನೋಡುತ್ತಿದ್ದುದ್ದು ಏನೋ ಭಯ ಹುಟ್ಟಿಸುತ್ತಿತ್ತು.
ಅಷ್ಟರಲ್ಲಿ ಟೀಚರ್ ಕತೆ ಶುರುಮಾಡಿದರು. ಅಲ್ಲಿ ನೋಡಿದರೆ ಮತ್ತೆ ಗಂಜಿಯೇ ಬರಬೇಕಾ? ಅದ್ಯಾರೋ ಅಡುಗೂಲಜ್ಜಿ ಅವಳ ಮೊಮ್ಮಗಳಿಗೆ ಮಳೆಯಲ್ಲಿ ಬಿಸಿಬಿಸಿ ಗಂಜಿ ಮಾಡಿ ಕೊಡುವ ಕತೆ. ಇವಳಿಗೆ ಬೇಜಾರಾಗಿ ಹೋಯಿತು. ಇವಳ ಇರುಸುಮುರುಸು ಟೀಚರ ಕಣ್ಣಿಗೂ ಬಿತ್ತು. ಎಬ್ಬಿಸಿ ನಿಲ್ಲಿಸಿ ಕೇಳಿದರು. ಅದು ಅದೂ ಗಂಜಿ ಅಂದ್ರೆ ಬಡವರೂಟ ಅಲ್ವಾ.. ಅಂತ ತೊದಲಿದಳು. ಅಯ್ಯೋ ಹುಚ್ಚಕ್ಕಾ, ಯಾರ್ ಹೇಳಿದ್ದು ಹಂಗೇ ಅಂತ. ಒಂದೊಂದ್ಸಲ ಮಾರಾಜಂಗೂ ಗಂಜಿನೇ ರುಚಿಯಾಗ್ ಬಿಡತ್ತೆ ಗೊತ್ತಾ. ಬಿಸಿಬಿಸಿ ಗಂಜಿಗೆ, ಚೂರು ಉಪ್ಪು, ಎಣ್ಣೆ, ಉಪ್ಪಿನಕಾಯಿರಸ ನೆಂಚಿಕೊಂಡು ತಿಂದರೆ ಆಹಾ ಅಂತ ಅವರೇ ತಿಂದ ಖುಶಿಯಲ್ಲಿ ಚಪ್ಪರಿಸಿಬಿಟ್ಟರು. ಇದು ಬಡವರ ಕತೆಯಾಯಿತು. ಶ್ರೀಮಂತರು ಇದಕ್ಕೊಂಚೂರು ಕಾಯಿತುರಿ ಹಾಕಿ ತಿಂತಾರೆ ಅದಂತೂ ಇನ್ನೂ ರುಚಿ. ತಿಂದು ನೋಡಿದಿಯಾ ಯಾವಾಗಾದ್ರೂ, ಒಂದ್ಸಲ ತಿನ್ನು, ಆಮೇಲೆ ಪಾಯಸ ಕೊಟ್ರೂ ಇಲ್ಲ ಗಂಜಿ ಬೇಕು ಅಂತೀಯ ಅಂತ ಹೇಳಿ ನಕ್ಕರು. ಶ್ರೀಕೃಷ್ಣ ಪರಮಾತ್ಮನಿಗೂ ಹಸಿವಾಗಿ ಸುಧಾಮನ ಮನೆಗೆ ಹೋದಾಗ ಅವನು ಕೊಟ್ಟಿದ್ದು ಅವಲಕ್ಕಿ ಮತ್ತು ಗಂಜಿ, ಹೇಗೆ ಸುರಿದುಕೊಂಡು ತಿಂದ ಗೊತ್ತಾ ಅವನು. ರಾಮನಿಗೆ ಶಬರಿ ಬರೀ ಹಣ್ಣು ಕಚ್ಚಿ ಕೊಟ್ಟಳು ಅಂದುಕೊಂಡ್ಯಾ, ಗಂಜಿ ಉಪ್ಪಿನಕಾಯಿ ರಸವನ್ನೂ ಕೊಟ್ಟಿರುತ್ತಾಳೆ. ಪಾಪ ಇಲ್ಲದಿದ್ದರೆ ಹಸಿವೆಲ್ಲಿ ಹೋಗತ್ತೆ. ಅಂತಹ ರಾಮದೇವರೇ ಗಂಜಿಯನ್ನು ಖುಶಿಯಿಂದ ತಿಂದ ಮೇಲೆ ಇನ್ಯಾವ ಶ್ರೀಮಂತರು ಬೇಕು ನಿನಗೆ? ಆಹ್ ಹೌದಲ್ಲಾ ಅನ್ನಿಸಿತು ಇವಳಿಗೂ.ಮತ್ತೆ ಕತೆ ಮುಂದುವರಿಯಿತು. ಅಜ್ಜಿ, ಮೊಮ್ಮಗಳು, ಕಾಡು, ಬಂಗಾರದ ಹೂವಿನ ಗಿಡ, ರಾಜಕುಮಾರ, ಮತ್ತು ಕೊನೆಗೆ ಅವರಿಬ್ಬರ ಮದುವೆಗೆ ರುಚಿಯಾದ ಗಂಜಿಯೂಟದೊಡನೆ ಕತೆ ಮುಗಿಯಿತು. ಇವಳಿಗೆ ಭಾರೀ ಸಮಾಧಾನ. ಇಷ್ಟು ದಿನಕ್ಕೆ ಒಂದು ಕತೇಲಿ ರಾಜಕುಮಾರ ಗಂಜಿ ತಿಂದ. ಆಮೇಲೆ ಟೀಚರ್ ಬೇರೆ ಶ್ರೀಮಂತರೂ ಗಂಜಿಯನ್ನ ಕೇಳಿ ಮಾಡಿಸಿಕೊಂಡು ತಿಂತಾರೆ ಅಂದ್ ಬಿಟ್ಟಿದಾರೆ. ಹೌದು ಗಂಜಿ ರುಚಿಯೇ ಆದ್ರೆ ಬಡವರು ಮಾತ್ರ ತಿನ್ನುತ್ತಾರೆ ಅನ್ನುವುದು ಅವಳ ಕೊರಗಾಗಿಬಿಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ಮನೆಯಲ್ಲಿ ವಾರಕ್ಕೆ ನಾಲ್ಕು ದಿನ ಗಂಜಿ. ಈಗ ಏನೋ ಸಮಾಧಾನವಾಯಿತು. ಕತೆ ಮುಗಿಯುವಷ್ಟರಲ್ಲಿ ಮಳೆ ನಿಂತು, ಹೂಬಿಸಿಲು ಮೋಡದ ಮರೆಯಲ್ಲಿ ತೂರಿ ತೂರಿ ಬರುತ್ತಿತ್ತು. ಮತ್ತೆ ಮರುದಿನ ಅಮ್ಮ ದೋಸೆ ಮಾಡಿದರೆ, ಇವಳು ಗಂಜಿ ಹಾಕಮ್ಮಾ ಅಂತ ಕೇಳಿದಳು ಅಂತ ಬೇರೆ ಹೇಳಬೇಕಿಲ್ಲ ಅಲ್ಲವಾ..! :)


ಇತ್ತೀಚೆಗೆ ಹುಶಾರಿಲ್ಲದಾಗ ಒಂದು ದಿನ ಗಂಜಿ ಮಾಡಿ, ಉಪ್ಪಿನಕಾಯಿ ರಸ, ಎಣ್ಣೆಯ ಜೊತೆಗೆ ಚಪ್ಪರಿಸಿ ತಿಂದು ಬಾಯಿ ಸರಿಮಾಡಿಕೊಂಡಾಗಿನಿಂದ ಅನಸೂಯಮ್ಮ ಟೀಚರೂ ಮತ್ತು ಅವರ ಗಂಜಿಯ ಕತೆ ಉಮ್ಮಳಿಸಿ ನೆನಪಾಗುತ್ತಿದೆ. ಅವತ್ತು ಅವರು ಆ ಕತೆಗೆ ಮತ್ತು ಅವಳ ಕುತೂಹಲಕ್ಕೆ ಒಂದು ಮುಗ್ಧ ತಿರುವನ್ನ ಕೊಡದೆ ಹೋಗಿದ್ದರೆ ಎಷ್ಟೊಳ್ಳೆ ಗಂಜಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೆ ನಾನು.
ಎಲ್ಲ ಊರಿನ ಎಲ್ಲ ಶಾಲೆಗಳಲ್ಲೂ ಅನಸೂಯಮ್ಮ ಟೀಚರಿನಂತವರು ಒಬ್ಬರಾದರೂ ಇರಲಿ, ಮಕ್ಕಳ ಮನಸ್ಸನ್ನ ಮೆತ್ತಗೆ ಹೂವರಳಿಸಿದಂತೆ ಕತೆ ಹೇಳಿ ತಿದ್ದಲಿ ಅಂತ ಆಶಿಸುತ್ತೇನೆ. ನನ್ನ ಬಾಲ್ಯದ ಕೊಂಕುಗಳನ್ನ ತಿದ್ದಿದ ಅನಸೂಯಮ್ಮ ಟೀಚರ್ ಮತ್ತು ಅವರಂತಹದೇ ಇನ್ನೂ ಹಲವಾರು ಟೀಚರುಗಳಿಗೆ ಒಂದು ಪ್ರೀತಿಯ ನಮಸ್ಕಾರ.

Thursday, May 8, 2008

ಕಾಯುವುದು..

ಕಡುನೀಲಿ ಆಕಾಶದ ದೂರದಂಚಲ್ಲಿ
ಮಿಂಚಿ ಬೆಳಕಾಗುತ್ತಿದೆ ಒಂದು ಪುಟ್ಟ ಕಿರಣ
ಕಾಯಿ ಇನ್ನೊಂದೆರಡು ಗಳಿಗೆ,
ಕೆಂಪು ಕೆಂಪು ಸೂರ್ಯ
ಬೆಚ್ಚಗೆ ಬೆಳಕಿನೋಕುಳಿಯಲ್ಲಿ!
ಬೂದಿಬೂದಿ ಮೋಡದ ಒಡಲು
ತುಂಬಿ ನಿಂತಿದೆ, ಸೆಖೆಯಲ್ಲೊಂದು ತಂಪುಗಾಳಿ
ಗಳಿಗೆಯೆರಡು ಕಳೆಯಲಿ
ತಂಪು ತಂಪು ಹನಿ, ಉಲ್ಲಸದ ಮಣಿ!
ಹಸಿರೆಲೆಗಳ ನಡುವೆ ಮೂಡಿದ ಮೊಗ್ಗು
ಒಂದೊಪ್ಪತ್ತು ಕಾಯ್ದರಾಯಿತು
ನಸುಬಿರಿದು ಸುತ್ತ ಘಮ ಮೆಲ್ಲಗೆ ಹರಡಿ
ಆಹಾ ಕಾಯುವುದರಲ್ಲೆಷ್ಟು ಸುಖವಿದೆ!

ಸಧ್ಯ ಬರೀ ಕತ್ತಲೆ ಅಂದುಕೊಂಡು
ಮತ್ತೆ ಹೊದ್ದು ಮಲಗಲಿಲ್ಲ
ಕೆಂಪುಮಣಿಯ ಉದಯರಾಗ ಮನತುಂಬಿದೆ;
ಓಹೋ ಸೆಖೆ ಎಂದು ಹಾದಿ ಬಿಟ್ಟು ಸರಿಯಲಿಲ್ಲ
ತಂಪು ಸುರಿದಿದೆ;
ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ
ಇಂದು ಮೊಗ್ಗು ಬಿರಿದಿದೆ;
ಆಹಾ ಕಾಯುವುದರಲ್ಲೂ ಸುಖವಿದೆ.

Friday, April 11, 2008

ಆತ್ಮೀಯರೊಬ್ಬರ ಸಂಗಾತ,

ಮೊನ್ನೆ ಎಲ್ಲೋ ಕಾಡು ಸುತ್ತಲು ಹೋದವರು ಹಾಗೇ ಕಡಲತೀರವನ್ನೊಂದಿಷ್ಟು ನೋಡಿಬಿಡುವಾ ಅಂತ ಹೋದೆವು. ಅಲ್ಲಿಸಿಕ್ಕ ಗೆಳೆಯನೊಡನೆ ಕಳೆದ ಒಂದ್ನಾಲ್ಕೈದು ಗಂಟೆಗಳು ತುಂಬ ತಂಪಾಗಿದ್ದವು. ಕಡಲ ತೀರದ ಮಾರ್ದವ ಬಿಸಿಯ ಮೇಲೆ ತೇಲಿ ಬರುವ ಗಾಳಿಯ ತಂಪು, ನುಣ್ಪು ಮತ್ತು ಬಿಸುಪು ಎಲ್ಲದರ ಒಟ್ಟಂದದಂತಿತ್ತು ಅವರೊಡನೆ ಕಳೆದ ಸಮಯ.

ತುಂಬ ದಿನದಿಂದ ನೋಡಬೇಕೆಂದಿತ್ತು ಇಬ್ಬರಿಗೂ. ಅವಕಾಶವಾಗಿರಲಿಲ್ಲ. ಅವತ್ತು ಅಚಾನಕ್ಕಾಗಿ ಸಿಕ್ಕಿ ಇಬ್ಬರಿಗೂ ಮಾತು ಮೊದಲು ಮಾಡಲು ಗೊತ್ತಾಗಲಿಲ್ಲ. ಒಂದೆರಡು ದೋಸೆ, ಕಾಫಿ, ಲಸ್ಸಿ, ಮತ್ತು ಅಳಿವೆಯೊಂದರಲ್ಲಿ ದೋಣಿಯಾನ, ಜನರಿಂದ ತುಂಬಿರದ ಕಡಲ ತೀರ, ಮಾತು ಮಾತು ಮಾತು.. ಎಲ್ಲ ತುಂಬ ಹಿತವಾಗಿತ್ತು. ಯುಗಾದಿಯ ಹಿಂದಿನ ದಿನ ಮುಕ್ಕಿದ ಆಲೆಮನೆಯ ಬೆಲ್ಲದ ಸಿಹಿಯಿತ್ತು.
ಹೆಚ್ಚು ಹೆಚ್ಚು ಬರೆಯಲಿಕ್ಕೇನಿಲ್ಲ. ತುಂಬ ಸಂತಸ ನನಗೆ ಅವರ ಕಂಡು. ನೋಡಿದ ಸುತ್ತಿದ ಕಾಡೆಲ್ಲ, ಕಾಡಿನ ಪ್ರೀತಿಯೆಲ್ಲ ಮೈವೆತ್ತಂತಹ ವ್ಯಕ್ತಿಯ ಭೆಟ್ಟಿಯಾಗಿ ಮನಸು ಉಲ್ಲಸಗೊಂಡಿದೆ.
ನಮಗಾಗಿ ಸಮಯ ಕೊಟ್ಟು, ಜೊತೆಗೂಡಿದ ಈ ಸ್ನೇಹಿತರಿಗೆ ಪ್ರೀತಿಪೂರ್ವಕ ವಂದನೆಗಳು.

Wednesday, April 2, 2008

ಹಸಿರ ಹೊದ್ದವಳು ಕಾದಿದ್ದಾಳೆ

ಹಸಿರ ಹೊದ್ದವಳು ಕಾದಿದ್ದಾಳೆ
ಹೊಳೆಯ ಹೊಸ್ತಿಲಲಿ
ನೆನಪಿನ ದೀಪ ಹಚ್ಚಿ..
ಏನೂ ಇಲ್ಲದೆ,
ಸುಮ್ಮನೆ,
ಮಾತ ಕದ್ದು
ಮೌನ ಬಡಿಸಿ
ಹಕ್ಕಿಗೊರಳ ಇಂಚರ ನೇಯುತ್ತಾ
ಖಾಲಿ ಬದುಕನ್ನ ತುಂಬಿ ತುಳುಕಿಸಲು..
ಹಸಿರ ಹೊದ್ದವಳು ಕಾದಿದ್ದಾಳೆ


ಇನ್ನೇಕೆ ಮಾತು.
ಬಿಂಕವಿಲ್ಲ,
ಮಾತ ಕಟ್ಟಿಟ್ಟುಹೊರಟೆ..
ಜೊತೆಗಿರುವನು ಚಂದಿರ.

ಆಮೇಲೆ ಸೇರಿಸಿದ್ದು.. ಈ ಹಸಿರು ಪಯಣದ ನೆನಪಿನ ಬರಹ ಕೆಂಡಸಂಪಿಗೆಯಲ್ಲಿ..
ಲಾವಂಚ -
http://www.kendasampige.com/article.php?id=514Monday, March 31, 2008

ಹೂವು ಚೆಲ್ಯಾವೆ ಹಾದಿಗೆ..

ಮಲೆನಾಡಿನ ಪುಟ್ಟ ಊರಿನಿಂದ ಬಂದ ನನಗೆ ರಾಜಧಾನಿಯ ಗಜಿಬಿಜಿ, ಗಡಿಬಿಡಿ, ಗುಂಪಿನಲ್ಲಿ ಕವಿಯುವ ಏಕಾಂಗಿತನ ಎಲ್ಲ ಬೇಸರಹುಟ್ಟಿಸಿಬಿಟ್ಟಿದ್ದವು. ಎಲ್ಲ ಅಮೂರ್ತವಾಗಿ, ಕನ್ನಡಿಯೊಳಗಿನ ಗಂಟಾಗಿ, ಆಪ್ತತೆಯಿಂದ ಹೊರತಾಗಿ ಕಾಣಿಸುತ್ತಿದ್ದವು.ಈ ಎಲ್ಲ ಬೇಸರದ ಕಾವಳಗಳನ್ನು ಬೆಚ್ಚಗೆ ಅರಳಿದ ಒಂದು ಬೆಳಗು ಸಹ್ಯವಾಗಿಸಿಬಿಟ್ಟಿತು. ಬೆಳಗ್ಗೆ ೭ ಗಂಟೆಗೆ ಬಿ.ಎಂ.ಟಿ.ಸಿ ಬಸ್ಸಿನ ಕಿಟಕಿಯಿಂದ ಕಂಡ ಮೈತುಂಬ ಹೂಬಿರಿದು ಪಾದಪಥಕ್ಕೂ ಚೆಲ್ಲಿದ ಮರಗಳ ಸಾಲು, ಇಬ್ಬನಿಯ ಮಬ್ಬಿನಲ್ಲೂ ಗೆರೆಕೊರೆದಂತೆ ಕಾಣುವ ಬೆಳ್ಳಕ್ಕಿ ಸಾಲು, ಬುಲ್ ಬುಲ್ ಮೈನಾಗಳ ಚಿಲಿಪಿಲಿ, ರಸ್ತೆಬದಿಯಲ್ಲಿ ಬೆವರಿಳಿಸುತ್ತ ಓಡುತ್ತಿರುವ ಮಂದಿ ಎಲ್ಲವೂ ಊರಿನ ಆಪ್ತತೆ ಮತ್ತು ಮಾನುಷೀ ಮಾರ್ದವತೆಯನ್ನ ಚೂರು ಚೂರಾಗಿ ಬನಿ ಇಳಿಸತೊಡಗಿದವು.

ಚಳಿಗಾಲ ಗಾಢವಾಗುತ್ತಿದ್ದಂತೆ ಹೂಬಿರಿದು ನಿಲ್ಲುವ ಮರಗಳ ಸಾಲು ಏನೇನೋ ಖುಷಿಗಳನ್ನ ಹಿತವನ್ನ ಹರಡುತ್ತವೆ. ಬೆಂಗಳೂರೆಂಬ ಮಾಯಾನಗರಿ ಮಾಯೆಯ ಝಗಮಗ ಕಳೆದು, ಇಬ್ಬನಿಯಲ್ಲಿ ತೊಳೆದು ತಂಪಗೆ ಹೊಳೆಯುತ್ತದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೆಂಪಾಗುವ ಪಡು ದಿಕ್ಕು ಓ ಇದು ನಮ್ಮೂರಲ್ಲಿ ಮುಳುಗುವ ಸೂರ್ಯನೇ ಅಂತನ್ನಿಸಿ ಬೆಂಗಳೂರು ಮನದಲ್ಲಿ ಇನ್ನೊಂದು ಮೆಟ್ಟಿಲೇರುತ್ತದೆ. ಎಲ್ಲ ಬಗೆಯ ಕೆಲಸ ಕಾಯಕಗಳಿಗೆ ಅವಕಾಶ ಕೊಟ್ಟು ಗುಳೆಬಂದ ರೈತರನ್ನೂ, ಓದಲು ಬಂದ ಮಕ್ಕಳನ್ನೂ,ಐಟಿ ಅಲೆಯಲ್ಲಿ ತೇಲುವ ಯುವಜನಾಂಗವನ್ನೂ, ವಾಕಿಂಗಿನಲ್ಲಿ ಸಂಚರಿಸುವ ಹಿರಿಜೀವಗಳನ್ನು, ಗಡಿಬಿಡಿಯಲ್ಲಿ ಓಡುವ ದಿನಗಳನ್ನು ಸಮಾನ ಭಾವದಲ್ಲಿ ಒಳಗೊಳ್ಳುವ ಯುಟೋಪಿಯಾದಂತೆ ಭಾಸವಾಗುತ್ತದೆ.

ಒಮ್ಮೊಮ್ಮೆ ಸಿರಿತನ, ದಾರಿದ್ರ್ಯ ಎರಡೂ ಸೀಸಾ ಆಡುತ್ತಿರುವಂತೆ ಕಂಡು ಮನಸ್ಸಿನಲ್ಲಿ ಮುಳ್ಳು ಚಿಟಿಗೆಯಾಡುತ್ತದೆ. ಒಬ್ಬರಿನ್ನೊಬ್ಬರ ಹೆಗಲು ಕಟ್ಟದ ವ್ಯವಹಾರೀ ಸಂಬಂಧಗಳ ಮೆರವಣಿಗೆ ನೋಡಿ ಮನಸು ಮುದುಡುತ್ತದೆ.ಸಾಕಪ್ಪಾ ಅನ್ನಿಸುತ್ತ ರಾತ್ರಿ ಮಲಗೆ ಬೆಳಗ್ಗೆ ಏಳುವಾಗ ತಂಪಗೆ ಅರಳುವ ಬೆಳಗು, ಹೂಚೆಲ್ಲಿದ ಪಾದಪಥ, ಹೂವಾಡಗಿತ್ತಿ, ತರಕಾರಿಯಮ್ಮ, ಯುನಿಫಾರ್ಮ್ ಹಾಕಿ ತಿದ್ದಿ ತೀಡಿದ ತಲೆಗೂದಲಿನ ಜೊಂಪೆ ಹಿಂದಕ್ಕೆ ತಳ್ಳುತ್ತಾ ನಡೆಯುವ ಪುಟಾಣಿಗಳನ್ನ ನೋಡಿದರೆ ಎಲ್ಲ ಕಸಿವಿಸಿ ಕಳೆದು ಮುದ್ದು ಮೂಡುತ್ತದೆ. ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ? ನಿನ್ನೆ ಸಿಡುಕು ಮೂಡಿಸಿದ್ದ ದಾರಿಯಲ್ಲಿ ಇವತ್ತು ಹೊಸ ಹಿತ ಹೇಗೆ ಅರಳುತ್ತದೆ? ನಿನ್ನೆ ಚಿಟ್ಟು ಹಿಡಿಸಿದ್ದ ಗಜಿಬಿಜಿ ಇವತ್ತು ಹೇಗೆ ಅಚ್ಚರಿ ಹುಟ್ಟಿಸುತ್ತದೆ? ಯೋಚಿಸಬೇಕಾದ ವಿಷಯ.

ಊರಿನ ನೆನಪನ್ನು ಹೊತ್ತು ತರುವುದು ಇಲ್ಲಿಯ ಅಚಾನಕ್ ಮಳೆ. ಈ ಮಳೆಯನ್ನ ಮಲೆನಾಡಿನ ಧೋ ಮಳೆಯ ಜೊತೆ ಹೋಲಿಸಲಾಗುವುದಿಲ್ಲವಾದರೂ, ಬೇಸಿಗೆ ದಿನಗಳಲ್ಲಿ ಕಾವು ಹೆಚ್ಚಿ ಮನಸ್ಸು ವಿಷಣ್ಣವಾದಾಗ ಇದ್ದಕ್ಕಿದ್ದಂಗೆ ಸಂಜೆಯೋ ರಾತ್ರಿಯೋ ಬಂದು ತೋಯಿಸುವ ಮಳೆ, ಮನಸ್ಸಿನ ಕಸಿವಿಸಿಯನ್ನು ಹೋಗಲಾಡಿಸಿ ಬಾಲ್ಯದ ನೆನಪನ್ನು, ಊರಿನ ಆಪ್ತತೆಯನ್ನು ತಂಪಾಗಿ ತಂದಿಟ್ಟು ಹೋಗುತ್ತದೆ. ಎಲ್ಲ ಚಂದವೇ ಅಂತೇನಿಲ್ಲ. ಕಟ್ಟಿ ನಿಂತ ಮೋರಿಗಳಲ್ಲಿ ಹೋಗಲಾಗದ ನೀರು ರಸ್ತೆಗೆ ನುಗ್ಗುತ್ತದೆ. ರಸ್ತೆ ಹೊಳೆಹಾದಿಯಾಗುತ್ತದೆ. ಕೆಳಗಿನ ಮಟ್ಟದಲ್ಲಿ ಕಟ್ಟಿರುವ ಮನೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬೆಳಿಗ್ಗೆ ಕಸಗುಡಿಸುವವರ ಗಾಡಿ ತುಂಬಿ ತುಳುಕಿ ಭಾರವಾಗಿರುತ್ತದೆ. ಆಫೀಸುಗಳ ಹೌಸ್ ಕೀಪಿಂಗ್ ನವರ ಕೆಲಸ ಡಬ್ಬಲ್ಲಾಗಿರುತ್ತದೆ. ಇದೆಲ್ಲ ನೋಡಿದಾಗ ಮನವು ಮುದುಡಿದರೂ ಸುಮ್ಮನೆ ಕಿಟಕಿಯಾಚೆಯಿಂದ ನೋಡುವಾಗ ಮಳೆಗೆ ತೋಯ್ದು, ಧೂಳು ಕಳೆದ ಚಿಗುರು ಮರಗಳು, ಅಲ್ಲಲ್ಲಿ ಹಸಿರು ಗುಪ್ಪೆಯಾಗಿ ಕಾಣುವ ಪುಟ್ಟ ಪುಟ್ಟ ಪಾರ್ಕುಗಳು, ಸಾಲು ಮರಗಳು, ತಣ್ಣಗೆ ಭಾರವಾಗಿ ಹರಿದಾಡುವ ಗಂಧವತೀ ಗಾಳಿ ಎಲ್ಲ ಮುದುಡಿದ ಮನದ ಪಕಳೆಗಳ ಮೇಲೆ ಒಂದು ನಲಿವಿನ ಛಾಯೆಯನ್ನ ಹಬ್ಬಿಸುತ್ತವೆ. ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ..ಹಾಡು ನೆನಪಾಗುತ್ತದೆ.

ಚುಕ್ಕಿ ಹರಡಿದ ರಾತ್ರಿಗಳು ನಮ್ಮ ನಿಯಾನು ದೀಪದ ಬೆಳಕಲ್ಲಿ ಮಂಕಾಗಿದ್ದರು ಮಿನುಗುತ್ತಲೇ ಇರುತ್ತವೆ. ನಗರದ ಹೃದಯಭಾಗದಿಂದ ದೂರವಿರುವ ಕೆಲವು ಬಡಾವಣೆಗಳಲ್ಲಿ ಹುಣ್ಣಿಮೆ ಬೆಳಕು ನೇರ ಬಾಲ್ಕನಿಗೇ ನುಗ್ಗಿ ಮನಸ್ಸು ಹಾಡಾಗುತ್ತದೆ.. ಹುಣ್ಣಿಮೆ ಆಗಸದ ಬಣ್ಣದ ಛತ್ರಿಯು ಮೆಲ್ಲನೆ ತಾನಾಗಿ ಬಿಚ್ಚುತ್ತದೆ(ಲಕ್ಷ್ಮೀನಾರಾಯಣ ಭಟ್ಟರ ಕವಿತೆ ಸಾಲು).

ಬೆಚ್ಚಗೆ ಕಾಫೀ ಹೀರುತ್ತ ನಿಂತಾಗ ತಣ್ಣಗೆ ಮುಟ್ಟುವ ಬೇಡುವ ಕೈ, ಮನಸ್ಸನ್ನು ಮಂಜುಗಟ್ಟಿಸುತ್ತದೆಯಾದೆಯಾದರೂ, ಹೊಸಹಗಲಿನ ಭರವಸೆ ನಂದುವುದಿಲ್ಲ. ಉದ್ಯಾನ ನಗರಿ ಎಂದು ಕರೆಸಿಕೊಂಡಿದ್ದ ಉದ್ಯೋಗನಗರಿ ಎಲ್ಲಕ್ಕೂ ಪರಿಹಾರವಿದೆಯೆಂಬ ಭರವಸೆಯಿಂದ ಹೂವರಳಿಸಿ ನಿಲ್ಲುತ್ತದೆ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಅಂತ ಸಮಾಧಾನಿಸಿಕೊಳ್ಳುತ್ತೇನೆ.

ಹೂಳು ತುಂಬಿ ಲೇಔಟುಗಳಾಗುತ್ತ ನಡೆದಿರುವ ಕೆರೆಗಳನ್ನು ನೋಡಿದರೆ ಮಾತ್ರ ಯಾವ ಹಾಡು, ಎಷ್ಟೇ ಹಸಿರಾಗಿರುವ ಮರವೂ ಕೂಡ ನನಗೆ ಹಾಯೆನಿಸುವುದಿಲ್ಲ. ನಮ್ಮ ಅನ್ನಕ್ಕೆ ನಾವೇ ಕಲ್ಲು ಹಾಕಿಕೊಳ್ಳುವ ನಮ್ಮ ಗೋರಿಯನ್ನ ನಾವೇ ತೋಡುವ ಕೆಲಸದಲ್ಲಿ ಎಷ್ಟು ಗಡಿಬಿಡಿಯಿಂದ ಮುಳುಗಿಹೋಗಿದ್ದೇವಲ್ಲಾ ಅಂತ ಬೇಜಾರಾಗಿ ಹೋಗುತ್ತದೆ. ಏನು ಮಾಡಲಿ? ಬಂದ ಎಲ್ಲರನ್ನೂ ತೆಕ್ಕೆಗೆ ಎಳೆದುಕೊಂಡಿರುವ ಬೆಂಗಳೂರೆಂಬ ಮಹಾತಾಯಿಯ ಬೆನ್ನು ತೊಡೆಗಳನ್ನ ಹುಣ್ಣು ಮಾಡುತ್ತಿರುವ ನಮ್ಮ ಪಾಪಕ್ಕೆ ಪರಿಹಾರವೆಲ್ಲಿದೆ? ನಾನು ಚೂರೂ ನಂಬದಿರುವ ದೇವರು ಇದ್ದಕ್ಕಿದ್ದಂಗೆ ಬಂದು ವರ್ಷಗಟ್ಟಲೆ ಮಾಡಬೇಕಿರುವ ಯಾವುದೋ ಹೊಚ್ಚ ಹೊಸಾ ಹಸಿರು ವ್ರತವನ್ನ ಹೇಳಿಕೊಡಬಾರದೇ ಅನ್ನಿಸುತ್ತಿದೆ.

ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!

Monday, March 10, 2008

ಕತೆ ಕತೆ ಕಾಪಿ...!

ದೊಡ್ಡದಾದ ಭವಂತಿ ಇರುವ ನಡುಮನೆಯ ಜಗುಲಿಯಲ್ಲಿ ಪುಟ್ಟ ಪುಟ್ಟ ಗುಡ್ಡಗಳಂತಹ ಅಡಿಕೆ ರಾಶಿ, ಸುತ್ತ ಗುಡ್ಡಗಳನ್ನ ಹರಡಿ ಕೂತು ತನ್ನ ಸೃಷ್ಟಿಯನ್ನ ತಾನೇ ಪರಿಶೀಲಿಸುವ ಶಿಲ್ಪಿಯಂತೆ ಕುಳಿತಿರುವ ಅಜ್ಜ..ಪುಟ್ಟಿ ಓಡೋಡಿ ಬಂದಳು ಶಾಲೆಯಿಂದ. ಇವತ್ತು ಏಪ್ರಿಲ್ ಹತ್ತು. ಇನ್ಮೇಲೆ ಎರಡು ತಿಂಗಳು ಶಾಲೆಗೆ ಬೇಸಿಗೆ ರಜ; ಯುನಿಫಾರ್ಮ್ ಬಿಸಾಕಿ, ಪಾಟಿ ಚೀಲ ಅಮ್ಮಮ್ಮನ ಮರಿಗೆಯ ಪಕ್ಕದ ಸಂದಿಯಲ್ಲೆಸೆದು, ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕಿನ, ಚಿಟ್ಟೆ ಚಿತ್ರದ ಬಿಳಿ ಜೇಬಿನಲ್ಲಿ ಕಿರುನೆಲ್ಲಿಕಾಯಿ ತುಂಬಿಟ್ಟುಕೊಂಡು, ಅಡಿಕೆ ಗುಡ್ಡಗಳ ಬದಿಯಲ್ಲಿ ದಾರಿ ಮಾಡಿಕೊಂಡು, ಅಜ್ಜನ ಪಕ್ಕದಲ್ಲಿ ಜಾಗ ಮಾಡಿಕೊಳ್ಳುತ್ತ ಕೂರಲಿಕ್ಕಿಲ್ಲ..ಅಮ್ಮಮ್ಮನಿಗೆ ಸಿಟ್ಟು - ಸುಮ್ನೆ ಏಳಲ್ಲಿಂದ, ಆರಿಸಿಟ್ಟ ಅಡಿಕೇನೆಲ್ಲ ಸೇರಿಸ್ ಬಿಡ್ತೆ, ಆ ಕಡೆ ಮೆತ್ತಿನ್ ಮೇಲೆ ಬೇರೆ ಆಟ ಆಡು ಹೋಗು..- ಪುಟ್ಟಿ ತುಂಬ ಒಳ್ಳೆಯವಳಂತೆ ಮುಖ ಮಾಡಿಕೊಂಡು ಅಜ್ಜನ ಹತ್ರ - ಇಲ್ಲಜ್ಜಾ ನಂಗೊತ್ತಿದ್ದು ಯಾವ್ದು ಯಾವಡಕೆ ಅಂತ - ಬಿಳೆಗೋಟು, ಚಾಲಿ, ಆಪಿ, ಹುಳುಕ ಅಲ್ದಾ.. ನಾನೂ ಆರಿಸ್ತಿ ಪ್ಲೀಸ್..ಅಜ್ಜ ಯಾವಾಗಲೂ ಅಭಯದಾತ. ಎಷ್ಟು ಸಿಟ್ಟು ಮಾಡಿಕೊಳ್ಳೋಣ ಅಂದರೂ ಪುಟ್ಟಿಯ ಮುಖ ನೋಡಿದ ಕೂಡಲೆ ನಗು ಬಂದು ಸಡಿಲಾಗುವ ಮುಖ ಬಿಗುಗೊಳ್ಳುವುದೇ ಇಲ್ಲ. ಸರಿ ಬಾ, ನೀನು ಬಿಳೆ ಗೋಟು ಮಾತ್ರ ಆರಿಸಿ ಇಕಾ ಈ ರಾಶಿಗೆ ಸೇರಿಸು.. ಬೇರೆ ಅಡಿಕೆ ಎಲ್ಲ ನಾನೇ ಆರಿಸ್ತಿ.

ಆರಿಸುತ್ತಾ ಕೂತ ಹಾಗೆ ಅಲ್ಲೊಂದಿಷ್ಟು ಹಾತೆಗಳು ಹಾರಾಡುತ್ತಿವೆ. ನೋಡುವಷ್ಟೂ ನೋಡಿ, ಅದಾಗಲೇ ಆರಿಸಿ ಬೇಜಾರು ಬಂದಿದ್ದ ಪುಟ್ಟಿ ಅಜ್ಜನ ಕಡೆ ನೋಡಿದಳು. ಅವನು ಸೀರಿಯಸ್ಸಾಗಿ ಅಡಿಕೆ ಆರಿಸುತ್ತಿದ್ದಾನೆ. ಹಗೂರ ತಿರುಗಿಕೊಂಡು ಒಂದು ಹಾತೆಯನ್ನು ಪಟಾರನೆ ಸೊಳ್ಳೆ ಹೊಡೆಯುವ ಹಾಗೆ ಹೊಡೆದರೆ ಹೋ.. ಅದು ಪಡ್ಚ.. ವಾವ್, ಇದು ಸೊಳ್ಳೆಯಷ್ಟು ಚಾಲಾಕಲ್ಲ ಆರಾಮಾಗಿ ಹೊಡೀಬಹುದು. ಇನ್ನೊಂದೆರಡು ಹೊಡೆದೇಬಿಡುವಷ್ಟರಲ್ಲಿ, ತಲೆ ತಗ್ಗಿಸಿಕೊಂಡು ಅಡಿಕೆ ಆರಿಸುತ್ತಿದ್ದ ಅಜ್ಜ ಕೇಳಿಬಿಟ್ಟ.. ಎಂತ ಮಾಡ್ತಾ ಇದ್ದೆ? ಅಜ್ಜಾ ಸೊಳ್ಳೆ ಹೊಡೀತಾ ಇದ್ದಿ.. ನಿಂಗೆ ಕಚ್ಚಬಾರ್ದು ಅದು ಅಂತ.. ನಮ್ ಪುಟ್ಟಿ ಸಿಕ್ಕಾಪಟ್ಟೆ ಜಾಣೆ. ಆದ್ರೇನು ಮಾಡ್ತೀರಿ ಅವನು ಪುಟ್ಟಿಯ ಅಜ್ಜ, ಇನ್ನೂ ಜಾಣ.. - ಇಷ್ಟು ಮಧ್ಯಾಹ್ನದಾಗೆ ಸೊಳ್ಳೆ ಎಲ್ಲಿಂದ ಬರ್ತು? ಅದು ಹಾತೆ.. ಹಂಗೆಲ್ಲಾ ಹಾತೆ ನೊಣ ಎಲ್ಲ ಹೊಡೀಲಾಗ. ಇರುವೆನೋ ಸೊಳ್ಳೆನೋ ನಮಗೆ ಕಚ್ಚಿ ತೊಂದರೆ ಕೊಟ್ಟರೆ ಮಾತ್ರ ಹೊಡೆಯಬೇಕೆ ವಿನಃ ಸುಮ್ ಸುಮ್ನೆ ಹೊಡದ್ರೆ ಅಣಿಮಾಂಡವ್ಯ ಋಷಿಯ ಕತೆ ಇತ್ತಲಾ ಹಂಗೇ ಆಗ್ತು ನಿಂಗೂ..

ಅಣಿಮಾಂಡವ್ಯ!!! - ಈಗ ಪುಟ್ಟಿ ಗಾಳಕ್ಕೆ ಸಿಕ್ಕ ಮೀನು.. ಅಜ್ಜನ ಕತೆಯ ಗಾಳ ಎಂತ ಪವರ್ ಫುಲ್ ಗೊತ್ತಾ- ಅಜ್ಜಾ ಅದ್ಯಾವ ಕತೆ ನಂಗೆ ಗೊತ್ತೇ ಇಲ್ಯಲ್ಲಾ.. ಅಜ್ಜನ ಮುಖದಲ್ಲಿ ಕಂಡೂ ಕಾಣದ ನಗು, ಸರಿ ಹೇಳ್ತಿ ಮತ್ತೆ ನೀನು ಸುಮ್ಮನೆ ಹಾತೆ ಹೊಡೀದೆ ಕೂರಕ್ಕು ಅಷ್ಟೇ.ಹೋ ಅದ್ಯಾವ ಮಹಾ ಕೆಲಸ.. ಹೇಳ ಹೇಳುತ್ತಲೇ ಅವಳ ಕೈ ಅಲ್ಲೇ ಹಾರುತ್ತಿದ್ದ ಹಾತೆಯತ್ತ ಹೋಯಿತು.. ನೋಡಿದ್ಯಾ ನೋಡಿದ್ಯಾ ಇದೇ ಬ್ಯಾಡ ಅಂತ ಹೇಳಿದ್ದು..ಸರಿ ಸರಿ ನಾನು ಕೈ ಕಟ್ಟಿ ಕೂರ್ತೀನಿ ನೀನ್ ಕತೆ ಹೇಳು -

ಒಂದು ಕಾನಿನಲ್ಲಿ ಅಣಿ ಮಾಂಡವ್ಯ ಅಂತೊಬ್ಬ ಋಷಿ ಇದ್ದ. ತುಂಬ ಒಳ್ಳೆಯ ಋಷಿ. ಗೆಡ್ಡೆ ಗೆಣಸು ತಿಂದುಕೊಂಡು, ದೇವರ ಪೂಜೆ, ತಪಸ್ಸು ಮಾಡಿಕೊಂಡು ತನ್ನ ಪಾಡಿಗೆ ತಾನಿರುತ್ತಿದ್ದ. ಒಂದು ಇರುವೆಯನ್ನೂ ಕೊಲ್ಲುತ್ತಿರಲಿಲ್ಲ. ಅಂತಹಾ ಋಷಿ ಒಂದು ದಿನ ಸತ್ತು ಹೋದ. ಅಷ್ಟು ಒಳ್ಳೆಯವನು ತಾನು ಇನ್ನು ಸ್ವರ್ಗಕ್ಕೇ ಹೋಗುವುದು, ದೇವರ ಜೊತೆ ಆನಂದದಿಂದ ಇರಬಹುದು ಅಂದುಕೊಂಡಿದ್ದ. ನೋಡಿದರೆ ನರಕಕ್ಕೆ ಬಂದು ಬಿಟ್ಟಿದ್ದಾನೆ. ಏನು ಎತ್ತ ಅಂತ ಅವನು ಕೇಳುವುದಕ್ಕೆ ಮೊದಲೇ ಯಮದೂತರು ಅವನನ್ನ ಎತ್ತಿಕೊಂಡು ಹೋಗಿ ಕುದಿಯುತ್ತಿರುವ ಎಣ್ಣೆ ಕೊಪ್ಪರಿಗೆಯೊಳಗೆ ಅದ್ದಿ ತೆಗೆದರು..ಪುಟ್ಟಿಯ ಬಾಯಿ ಭಯದಿಂದ ತೆರೆದುಕೊಂಡುಬಿಟ್ಟಿದೆ. ಕಟ್ಟಿಕೊಂಡಿದ್ದ ಕೈ ಯಾವಾಗಲೋ ಬಿಚ್ಚಿಹೋಗಿ, ನೆಲಕ್ಕೆ ಊರಿಕೊಂಡು ಅಜ್ಜನ ಕತೆಯನ್ನ ಮೈಯಿಡೀ ಕಿವಿಯಾಗಿಸಿ ಕೇಳುತ್ತಿದ್ದಾಳೆ.

ಅಯ್ಯಯ್ಯೋ ಅಮ್ಮಾ ಅಂತ ಕೂಗಿಕೊಂಡ ಅಣಿಮಾಂಡವ್ಯ ಋಷಿ. ಅಷ್ಟರಲ್ಲಿ ಅಲ್ಲಿಗೆ ಬಂದ ಚಿತ್ರಗುಪ್ತ ಅಣಿಮಾಂಡವ್ಯನ ಲೆಕ್ಕದ ಪುಸ್ತಕ ನೋಡಿ, ಈಗ ಇವನನ್ನ ತಲೆಕೆಳಗಾಗಿ ನೇತು ಹಾಕಿ, ಕೆಳಗಡೆ ಬೆಂಕಿ ಹಾಕಿ ಅಂತ ಹೇಳಿದ.ಯಮದೂತರಿಗೇ ಅಷ್ಟೆ ಸಾಕು. ಚಿತ್ರಗುಪ್ತ ಹೇಳಿದ ಹಾಗೆ ಮಾಡುವುದೇ ಕೆಲಸ. ಅವರು ಬಂದವರು ಯಾರು ಏನು ಅಂತೆಲ್ಲ ನೋಡುವುದಿಲ್ಲ. ಯಾರ ಜೊತೆಯೂ ಮಾತಾಡುವುದಿಲ್ಲ. ಅವರಿಗೆ ನೆಹರೂನೂ ಒಂದೇ ಅಣಿಮಾಂಡವ್ಯ ಋಷಿಯೂ ಒಂದೇ.
ನಾನೂ ಅಷ್ಟೇನಾ ಅಜ್ಜಾ.. ಮಕ್ಕಳಿಗೂ ಹಾಗೇನಾ..ಛೇ ಛೇ ಮಕ್ಕಳೆಲ್ಲಿ ನರಕಕ್ಕೆ ಹೋಗ್ತಾರೆ. ಇದೆಲ್ಲ ದೊಡ್ಡವರಿಗೆ ಮಾತ್ರ. ಮುಂದೆ ಕೇಳು..


ಅವರು ಅವನನ್ನ ತಲೆ ಕೆಳಗೆ ಮಾಡಿ ನೇತುಹಾಕಿದರು. ಕೆಳಗೆ ದೊಡ್ಡ ಉರಿಯ ಬೆಂಕಿ ಮಾಡಿದರು. ಉರಿ ಹೆಚ್ಚೂ ಕಮ್ಮಿ ಅವನ ಎತ್ತಿಕಟ್ಟಿದ ಜಟೆಯವರೆಗೂ ಬರುತ್ತಿದೆ. ಉರಿ ಸೆಕೆ ತಾಳಲಾಗುತ್ತಿಲ್ಲ. ಇನ್ನೇನು ಎಚ್ಚರ ತಪ್ಪಬೇಕು ಅಷ್ಟರಲ್ಲಿ ಚಿತ್ರಗುಪ್ತ ಬಂದು, ಈಗ ಒಂದು ಸರಳನ್ನು ಕೆಂಪಗೆ ಕಾಯಿಸಿ, ಅವನ ಕುಂಡಿಗೆ ಚುಚ್ಚಿ ಅನ್ನಬೇಕೇ..! ಇದನ್ನು ಕೇಳಿದ ಅಣಿಮಾಂಡವ್ಯ ದೇವರೇ ನನ್ನನ್ನು ಹೇಗಾದರೂ ಕಾಪಾಡು, ಯಾವ ಪಾಪವನ್ನೂ ಮಾಡದ ನನಗ್ಯಾಕೆ ಈ ಶಿಕ್ಷೆ ಅಂತ ಕೇಳಿಕೊಂಡ.. ಅಷ್ಟರಲ್ಲಿ ಯಮಧರ್ಮರಾಯ ಅಲ್ಲಿಗೆ ಬಂದ. ಬಂದವನು ಎಲ್ಲ ಪಾಪಿಗಳೂ ಅನುಭವಿಸುತ್ತಿದ್ದ ಶಿಕ್ಷೆಯನ್ನೆಲ್ಲಾ ಹೀಗೇ ಒಂದು ಸಾರಿ ಕಣ್ಣಾಡಿಸಿ ನೋಡಿ ಇನ್ನೇನು ಹೊರಡಬೇಕು, ಆಗ ಅವನ ಕಣ್ಣಿಗೆ ಅಣಿಮಾಂಡವ್ಯ ಋಷಿಯು ಬಿದ್ದ. ಅರೇ ಇದೇನು ಇವರಿಲ್ಲಿ ಅಂದುಕೊಂಡು ಹತ್ತಿರ ಹೋಗಿ ಗಮನಿಸಿ ನೋಡಿದರೆ ಹೌದು, ಋಷಿವರ್ಯರೇ..
ಚಿತ್ರಗುಪ್ತಾ ಅಂತ ಕೂಗಿ ಕರೆದರೆ ಅವನು ಓಡೋಡುತ್ತ ಬಂದ. ಇದೇನು ಇವರಿಲ್ಲಿ ಅಂತ ಕೇಳಿದಾಗ ಚಿತ್ರಗುಪ್ತನು ಪಾಪದ ಲೆಕ್ಕದ ಪುಸ್ತಕ ತೆಗೆದು ನೋಡಿದ. ಹೌದು ದೇವಾ ಇವರು ಸಣ್ಣಕಿದ್ದಾಗ ಒಂದು ಭಯಾನಕ ಪಾಪ ಮಾಡಿದ್ದರು. ಇವರ ತಂದೆ ಯಾಗ, ನೇಮಗಳಲ್ಲಿ ನಿರತರಾಗಿದ್ದರೆ, ಇವರು ಮಾತ್ರ ಸುತ್ತ ಮುತ್ತ ಸುಳಿದಾಡುವ ನೊಣಗಳನ್ನು ಹಿಡಿದು, ಅವುಗಳ ಕುಂಡಿಗೆ ದರ್ಭೆ ಚುಚ್ಚಿ ಆಟವಾಡುತ್ತಿದ್ದರು,ಅಂತಹ ಪಾಪಕ್ಕೆ ಇದೇ ಶಿಕ್ಷೆ. ಅದಕ್ಕೇ ಅವರು ಆಮೇಲೆ ಯಾವ ಪಾಪವನ್ನೂ ಮಾಡದೆ ತುಂಬ ಒಳ್ಳೆಯವರಾಗಿ ಬದುಕು ನಡೆಸಿದರೂ ನರಕಕ್ಕೆ ಬಂದಿರುವುದು -ವಿವರಣೆ ನೀಡಿದ. ಯಮನಿಗೆ ಎಲ್ಲೋ ಏನೋ ತಪ್ಪಾಗಿದೆ ಅನಿಸಿತು. ಅಷ್ಟೊತ್ತಿಗೆ ಅಣಿಮಾಂಡವ್ಯ ಋಷಿಯೂ ಸಹ ಯಮದೇವಾ, ನಾನು ಮಾಡಿದ ಆ ತಪ್ಪು ಎಷ್ಟನೇ ವರ್ಷದಲ್ಲಿ ನಡೆದಿದ್ದು ಅಂತ ಕೇಳಿದ. ಚಿತ್ರಗುಪ್ತ ಪುಸ್ತಕ ನೋಡಿ ಸುಮಾರು ನಾಲ್ಕರಿಂದ ನಾಲ್ಕೂವರೆ ವರ್ಷ ಪ್ರಾಯ ನಿಮಗಾಗ ಅಂತ ಹೇಳಿದ. ಅದಾದ ಮೇಲೆ ಇನ್ನೇನು ಪಾಪವನ್ನು ಮಾಡಿದ್ದೇನೆ ಅಂತ ಋಷಿ ಮತ್ತೆ ಕೇಳಿದ. ಇನ್ಯಾವುದೂ ಪಾಪವೇ ಇಲ್ಲ. ಭೂಮಿಯಲ್ಲಿ ನಾಲ್ಕು ಸಂವತ್ಸರ ಮಳೆ ಬೆಳೆ ಚೆನ್ನಾಗಿ ಆಗುವಷ್ಟು ಪುಣ್ಯವಿದೆ ನಿಮ್ಮ ಆಯುಸ್ಸಿನಲ್ಲಿ ಅಂತ ಹೇಳಿದ. ಇದನ್ನು ಕೇಳಿ ಋಷಿಗೆ ತುಂಬ ದುಃಖವಾಯಿತು. ಅವನು ಯಮನಿಗೆ ಹೇಳಿದ, ದೇವಾ, ತಪ್ಪು ಮಾಡಿದ್ದಕ್ಕೆ ತಕ್ಕ ಶಿಕ್ಷೆ ವಿಧಿಸಲೇ ಬೇಕು. ಆದರೆ ಏನೂ ತಿಳಿಯದ ಬಾಲ್ಯಕಾಲದಲ್ಲಿ ಮಾಡಿದ ಒಂದು ತಪ್ಪಿಗೆ ಜೀವನ ಪೂರ್ತಿ ಮಾಡಿದ ಒಳ್ಳೆಯ ಕೆಲಸಗಳೂ, ಪುಣ್ಯಗಳಿಕೆಯನ್ನೆಲ್ಲಾ ಬದಿಗಿಟ್ಟು ಹೀಗೆ ಶಿಕ್ಷೆ ಕೊಟ್ಟರೆ ಪ್ರಪಂಚದಲ್ಲಿ ಅರಾಜಕತೆ ಹೆಚ್ಚಾಗುತ್ತದೆ. ಆಮೇಲೇ ಎಲ್ಲರೂ ಒಂದ್ಸಲ ತಪ್ಪು ಮಾಡಿದವರೆಲ್ಲ ಹೇಗಿದ್ರೂ ಶಿಕ್ಷೆ ಆಗೇ ಆಗತ್ತೆ ಅಂತ ಮತ್ತೆ ಮತ್ತೆ ತಪ್ಪು, ಪಾಪ, ಅನ್ಯಾಯಗಳನ್ನ ಮಾಡುತ್ತಲೇ ಹೋಗುತ್ತಾರೆ, ಇದಕ್ಕೆ ಒಂದು ಪರಿಹಾರವಿರಬೇಕು. ಅಂತ ಹೇಳಿದ.
ಯಮನಿಗೆ ಹೌದು ಇದು ಸರಿ ಅನ್ನಿಸಿತು. ಕೂಡಲೇ ಯಮದೂತರಿಗೆ ಋಷಿಯನ್ನು ಇಳಿಸಿ, ಸೂಕ್ತ ಉಪಚಾರ ಮಾಡಲು ಹೇಳಿದನು. ಋಷಿಯು ಸ್ವಲ್ಪ ಚೇತರಿಸಿಕೊಂಡ ಮೇಲೆ, ತನ್ನ ಸಭೆಗೆ ಕರೆಸಿ, ನಡೆದ ಅಚಾತುರ್ಯಕ್ಕೆ ಕ್ಷಮೆ ಕೇಳಿ, ಈ ತೊಂದರೆಗಾಗಿ ಏನು ಬೇಕಾದರೂ ವರ ಕೇಳಲು ಹೇಳಿದನು. ಅದಕ್ಕೆ ಋಷಿಯು, ಆರು ವರ್ಷದ ಒಳಗಿನ ಮಕ್ಕಳು ತಪ್ಪು ಮಾಡಿದರೆ ಅದನ್ನು ಪಾಪವೆಂದು ಚಿತ್ರಗುಪ್ತರು ಬರೆದುಕೊಳ್ಳಬಾರದಾಗಿಯೂ ಮತ್ತು ಯಾವ ಮನುಷ್ಯನೂ ಮೊದಲ ಬಾರಿ ತಿಳಿಯದೆ ತಪ್ಪು ಮಾಡಿದರೆ ಅದನ್ನು ಕ್ಷಮಿಸಬೇಕೆಂದೂ ಕೇಳಿಕೊಂಡನು.ಯಮನೂ ಸಂತುಷ್ಟಗೊಂಡು ಒಪ್ಪಿಕೊಂಡನು. ಆದರೆ ಮಾಡುತ್ತಿರುವುದು ತಪ್ಪೆಂದು ತಿಳಿದ ಮೇಲೂ ಅದನ್ನೇ ಮಾಡಲು ಹೊರಟರೆ ಅದು ಮಹಾಪಾಪವೆಂದೂ, ಅಂತಹ ಪಾಪಕ್ಕೆ ನರಕದಲ್ಲಿ ಕಠಿಣ ಶಿಕ್ಷೆ ಕಾದಿದೆಯೆಂದೂ ಎಚ್ಚರಿಸಲು ಮರೆಯಲಿಲ್ಲ. ನಂತರ ದೇವದೂತರನ್ನು ಕರೆಸಿ, ಋಷಿಯನ್ನು ದೇವಲೋಕಕ್ಕೆ ಕಳಿಸಿಕೊಟ್ಟನು.

ಅದಕ್ಕೇ ಹೇಳುವುದು, ಸುಮ್ಮಸುಮ್ಮನೆ ಯಾವ ಪ್ರಾಣಿ,ಪಕ್ಷಿ,ಕ್ರಿಮಿ, ಕೀಟಗಳನ್ನೆಲ್ಲ ಹಿಂಸಿಸಬಾರದು ಎಂದು.ಅಷ್ಟರಲ್ಲೇ ಪುಟ್ಟಿಗೆ ಭಯ ಹತ್ತಿಕೊಂಡುಬಿಟ್ಟಿತು. ಹಾಗಾದ್ರೆ ಈಗ ನಾನು ಹಾತೆಯನ್ನೆಲ್ಲ ಪಟ್ ಅಂತ ಹೊಡೆದುಕೊಂದೆನಲ್ಲಾ ಅದಕ್ಕೆ ನನಗೆ ಆಮೇಲೆ ಶಿಕ್ಷೆಯಾಗುತ್ತಾ.. ಅಜ್ಜನನ್ನು ಪೀಡಿಸಿತೊಡಗಿದಳು. ಇಲ್ಲ ಮಾರಾಯಿತಿ, ಇಲ್ಲ. ನೀನಿನ್ನೂ ತುಂಬ ಚಿಕ್ಕವಳು. ಅಲ್ಲದೆ ನಾನು ಹಾತೆಯನ್ನು ಹೊಡೆಯಬಾರದು ಅಂತ ಹೇಳಿದ ಮೇಲೆ ನೀನು ಹಾತೆಗಳ ತಂಟೆಗೇ ಹೋಗಿಲ್ಲ. ತಿಳಿದೂ ತಿಳಿದೂ ತಪ್ಪು ಮಾಡುವವರಿಗೆ ಮಾತ್ರ ಹೀಗೆಲ್ಲ ಶಿಕ್ಷೆಯಾಗುತ್ತದೆ ಅಂತ ಹೇಳುತ್ತಿದ್ದಾನೆ ಅಜ್ಜ..


ತಾನ್ ತನನನಾ... ಇದ್ದಕ್ಕಿದ್ದಂಗೆ ಟೀವಿ ವಾಲ್ಯೂಮ್ ಜಾಸ್ತಿಯಾಗಿ ಕುರ್ಚಿಯಲ್ಲಿ ಕೂತ ಹಾಗೇ ಮಂಪರಿಗೆ ಜಾರಿದ್ದ ನನಗೆ ಎಚ್ಚರವಾಯಿತು. ಅಜ್ಜನ ಕತೆಯ ಕನಸು ಫ್ರೇಮ್ ಬೈ ಫ್ರೇಮ್ ನೆನಪಿತ್ತು. ಅರೇ ಈ ಕನಸು ಈಗ್ಯಾಕೆ ಬಿತ್ತು ಅಂತ ಯೋಚನೆ ಮಾಡುವಷ್ಟರಲ್ಲಿ ಜಾಹೀರಾತು ಮುಗಿದು ಮತ್ತೆ ವಾರ್ತೆ ಶುರುವಾಯಿತು. ವಾರ್ತೆಯ ತುಂಬಾ ಗಾಂಧಿಗಿರಿಯ ಸಂಜಯ್ ದತ್ತನ ಶಿಕ್ಷೆ/ಕೋರ್ಟು/ಜೈಲುವಾಸದ ಸುದ್ದಿ.. ಹಾಗೇ ಬಿಚ್ಚು ಹೀರೋ ಸಲ್ಮಾನನ ಪೋಚಿಂಗ್ ಕೇಸಿನ ವಿಶ್ಲೇಷಣೆ... ಇವರಿಗ್ಯಾರಿಗೂ ಹೀಗೆ ಕತೆ ಹೇಳುವ ಅಜ್ಜನೇ ಇರಲಿಲ್ಲವೇ ಅಂತನ್ನಿಸತೊಡಗಿತು... ಜಡ್ಜ್ ಸಾಹೇಬರ ಕರುಣೆಯನ್ನು ಗಳಿಸಲು ಇತ್ತೀಚೆಗೆ ಮಾಡಿದ ಸೇವೆ, ಒಳ್ಳೆಯ ಕೆಲಸ, ಅಮ್ಮನ ಮದರ್ ಇಂಡಿಯಾ ಇಮೇಜು, ಗಾಂಧೀಜಿಯ ಹೆಸರು ಎಲ್ಲ ಬಳಸುವ ಜಾಣ್ಮೆ ಮನಸ್ಸಿಗೆ ಕಷ್ಟ ಕೊಡುತ್ತಿದೆ.
ಚಿತ್ರಗುಪ್ತನೆಲ್ಲಿದ್ದಾನೆ? ಅವನ್ಯಾಕೆ ಬಂದು ಈ ಮಂದಿಯನ್ನ, ಇಂತಹ ಆಮಿಷಗಳಿಗೆ ಬಲಿಯಾಗುವ ನ್ಯಾಯಾಧೀಶರನ್ನ ಲೆಕ್ಕದ ಪುಸ್ತಕ ತೋರಿಸಿ ಎಚ್ಚರಿಸುವುದಿಲ್ಲ? ಸಿನಿಮಾ ಮಂದಿ ಹೋಗಲಿ, ನಮ್ಮ ಮಕ್ಕಳೇ ವೈಭವೀಕರಿಸಿದ ಆಕ್ಷನ್ ಸಿನಿಮಾಗಳು, ಕ್ರೈಂ ಸ್ಟೋರಿ ನೋಡಿ ನೋಡಿ ಯಾವ ನರಕದ ಕತೆಯೂ ಭಯ ಹುಟ್ಟಿಸುವುದಿಲ್ಲ. ಹೇಗಾದರೂ ಮಾಡಿ, ಋಷಿ ಮುನಿಗಳನ್ನ, ಮುಲ್ಲಾ ನಸರುದ್ದೀನನನ್ನ, ಶಹಜಾದೆಯನ್ನ, ಬೀರಬಲ್ಲನನ್ನ, ವಿಷ್ಣುಶರ್ಮನನ್ನ,ಮಾರ್ಕ್ ಟ್ವೈನ್ ನನ್ನ ನಮ್ಮ ಮಕ್ಕಳಿಗೆ ಗೊತ್ತು ಮಾಡಿಕೊಡಬೇಕಲ್ಲಾ, ಇದರ ಹೊರತಾಗಿ ಇನ್ಯಾವ ಅವೇರ್ ನೆಸ್ ಕ್ಯಾಂಪೈನ್ ಬೇಕು?!

Friday, February 15, 2008

ಇಷ್ಟೆ..ಅಷ್ಟೆ..

ಸುತ್ತ ನಾಕು ಚುಕ್ಕಿ,
ನೆಟ್ಟಗೆಳೆದರೆ ನಕ್ಷತ್ರ,
ಸೊಟ್ಟಗೆಳೆದರೆ ಬಳ್ಳಿರಂಗೋಲೆ,
ನನ್ನದೇ ಚುಕ್ಕಿ, ನನ್ನದೇ ಗೆರೆ. ಇಷ್ಟೆ.


ಮಂಡಲವ ಮೀರಿ
ಪಥ ಹುಡುಕುವ ಮನ
ಮತ್ತೆ ಮತ್ತೆ
ನಾನೇ ಇಟ್ಟ ಚುಕ್ಕಿ
ಎಳೆದ ಗೆರೆಯೊಳಗೆ
ಸುತ್ತಿ ಸುತ್ತಿ
ಕಣ್ಣ ಕೊನೆಯಲ್ಲಿ ಹನಿಯಾಗಿ
ತುಂಬುತ್ತದೆ. ಅಷ್ಟೆ.


ಗೊತ್ತಿಲ್ಲ
ಇಷ್ಟಕ್ಕೂ ನನಗ್ಯಾಕೆ
ರಂಗೋಲಿಯ ಉಸಾಬರಿ
ಅದು ಹೇಗೋ ಏನೋ
ಇದೇ ಬದುಕಿನ ಪರಿ,
ಅರಿವಿರದೆ
ಇಟ್ಟ ಚಿಕ್ಕೆ
ಎಳೆದ ಗೆರೆ
ನನ್ನದೇ ಮಂಡಲದಲ್ಲಿ
ನಾನೇ ಸೆರೆ. ಪಥಭ್ರಷ್ಟೆ.

Tuesday, February 5, 2008

ಮಾಗಿಯ ಬೆಳಗಿನ ಕನಸು..

ಬೆಳಿಗ್ಗೆ ಮುಂಚೆ ಎದ್ದು ಬಚ್ಚಲೊಲೆಯಲ್ಲಿ ಸಂಜೆಯೇ ತುಂಬಿದ್ದ ಕಟ್ಟಿಗೆ ಕುಂಠೆಗಳ ಮೇಲೆ ಒಣ ಅಡಿಕೆ ಸಿಪ್ಪೆ ಸುರುವಿದೆ. ಅಲ್ಲೆ ಹಂಡೆಯ ಬಾಯಿಬದಿಯಲ್ಲಿ ಇಟ್ಟಿದ್ದ ಚಿಮಣಿಬುಡ್ಡಿಯಿಂದ ಸ್ವಲ್ಪ ಎಣ್ಣೆ ಹನಿಸಿ, ತಂದಿಟ್ಟುಕೊಂಡಿದ್ದ ಹಳೆಯ ನೋಟ್ ಪುಸ್ತಕದ ಹಾಳೆಗಳನ್ನ ಚಿಮಣಿ ದೀಪಕ್ಕೆ ಹಿಡಿದು ಒಲೆಯೊಳಗೆ ಇಟ್ಟೆ. ಬೆಂಕಿ ಭಗ್ಗೆಂದಿತು. ಹೊರಗೆ ಚುಮುಚುಮು ಬೆಳಗು, ಇಬ್ಬನಿ. ಸೂರ್ಯ ಇನ್ನೂ ಹಾಸಿಗೆಯಿಂದ ಎದ್ದಿರದ ನಸುಗತ್ತಲಲಿನ ಹಿತ್ತಲಲ್ಲಿ ಬೆಳ್ಳಗೆ ನಗುವ ಪಾರಿಜಾತ ಹೂಗಳಿದ್ದವು. ಹನಿಹನಿಯಾಗಿ ಇಬ್ಬನಿ, ಹೂ ಹೂಗಳಿಂದ ತೊಟ್ಟಿಕ್ಕುತ್ತಿತ್ತು. ಮರದ ಬುಡದ ಹಸಿರುಹುಲ್ಲಲ್ಲೂ ಹೂರಂಗೋಲಿ.. ಕೆಂಪಗೆ ಹೊಳೆಯುವ ತೊಟ್ಟಿನ ತುದಿಗೆ ಬಿಳೀ ಚಿತ್ತಾರದ ಪಕಳೆಗಳು.. ತಣ್ಣಗೊಮ್ಮೆ ಗಾಳಿ ಬೀಸಿದಾಗ ತೇಲಿ ಬರುವ ಸುಗಂಧ. ನೋಡುತ್ತಾ ಹಾಗೇ ಕುಕ್ಕರಗಾಲಲ್ಲಿ ಕುಳಿತೆ. ಒಲೆಯ ಉರಿ ದೊಡ್ಡದಾಗಿ ಸುತ್ತ ಬೆಚ್ಚಗಿತ್ತು. ಹಾಗೇ ಗೋಡೆಗೆ ಆತು ಕೂತು, ಕಾಲುಗಳನ್ನ ಮುಂದಿನ ಬಚ್ಚಲ ಗೋಡೆಗೆ ಒತ್ತಿ ಹಿಡಿದು ಬೆಚ್ಚಗಿನ ಒಳಗಲ್ಲಿ ಹೊರಗಿನ ತಂಪು ನೋಡುತ್ತ ಕುಳಿತೆ. ನೋಡ ನೋಡುತ್ತ ಕೂತ ಹಾಗೆ ಪುಟ್ಟ ಹಕ್ಕಿಯೊಂದು..ಟುವ್ವೀ ಎನ್ನುತ್ತ ಹಾರಿ ಹೋಯಿತು.. ಅಲ್ಲೆ ಬಲಮೂಲೆಯಲ್ಲಿದ್ದ ಮಾವಿನ ಮರದ ಕೊಂಬೆಯಲ್ಲಿ ಕೂತ ಗಿಣಿಗಳು, ಹೂ ಚೆಲ್ಲಿ ನಿಂತ ಮುತ್ತುಗದ ಮರದಲ್ಲಿ ಉಲಿಯುವ ಪಿಕಳಾರಗಳು, ಗುಬ್ಬಚ್ಚಿ ಒಟ್ಟೊಟ್ಟಿಗೆ ತಮ್ಮ ಮಾತುಕತೆ ಶುರು ಮಾಡಿದವು. ಸೂರ್ಯನಿಗೆ ಇನ್ನೂ ಮಲಗಿರಲು ಆಗಲಿಲ್ಲ. ಎದ್ದು ಬೇಗಬೇಗ ಸವರಿಸಿಕೊಂಡು ದಿನದ ಪಯಣಕ್ಕೆ ಪಡುವಲಿನ ಕಡೆ ಹೊರಟ..

ಕಟ್ಟಿಗೆಯನ್ನು ಸ್ವಲ್ಪ ಮುಂದೆ ಮಾಡಿ, ಇನ್ನೊಂದು ಒಬ್ಬೆ ಅಡಿಕೆಸಿಪ್ಪೆ ಸುರುವಿ ಈ ಕಡೆ ತಿರುಗುವಷ್ಟರಲ್ಲಿ ಬಿಸಿಲಕೋಲೊಂದು ಕಿಟಕಿಯ ತಳಿ ಹಾದು ಒಳಗೋಡೆಯ ಮೇಲೆ ಬೆಳಕಿನ ಚಿತ್ತಾರ ಬರೆದಿತ್ತು.. ನೋಡುತ್ತ ಕೂತವಳ ಮುಂದೆ ಬಂದು ಕುಳಿತವರು ಯಾರಿದು.. ಓಹ್,, ಅವರಲ್ಲವೆ.. ಮಾತು ತುಟಿಯಿಂದಿಳಿಯುವ ಮುನ್ನ ಅವರ ಮೆಲ್ನಗೆ ತಡೆಯಿತು. ಕನ್ನಡಕದ ಒಳಗಿಂದ ಹೊಳೆದ ಕಣ್ಣ ಬೆಳಕು ಹೇಳಿತು..ಹೌದು ಇದು ನಾನೇ.. ಅದನ್ನ ಮತ್ತೆ ಮತ್ತೆ ಮಾತಾಡಿ ಒಣಹಾಕಬೇಕಿಲ್ಲ. ಬೆಳಗಿನ ತಂಪು ಮಾತಿಲ್ಲದೆ ಒಳಗಿಳಿಯಲಿ..ಜೀವ ಬೆಚ್ಚಗಿರುತ್ತದೆ..ಎಂದಂತಾಯಿತು..

ಮಾತು ಬರುವುದು ಎಂದು ಮಾತನಾಡುವುದು ಬೇಡ ಅಂದವರಲ್ಲವೆ.. ಸುಮ್ಮನೆ ಕುಳಿತು ನೋಡತೊಡಗಿದೆ. ಮುಂದೇನು...ಕಣ್ಣ ಕಪ್ಪೆಯ ಚಿಪ್ಪಿಗೆ ಕಂಡ ಸಮುದ್ರದಂಥ ನೋಟ..

ಸುಮ್ಮನೆ ಸುಖವಾಗಿರುವ ಸಗ್ಗ ಬೇಸರಾಯಿತು ಬಂದೆ
ಈ ಮಾಗಿ ಬೆಳಗಲ್ಲಿ ಇಬ್ಬನಿಯ ತಂಪು ಕುಡಿಯಲು,
ಹಾಗೇ ಬಂದವನಿಗೆ ತಂಪು ಕೊರೆಯುವಾಗ..ನೋಡಿದೆ
ತೆರೆದ ಬಾಗಿಲು, ಬೆಚ್ಚನೆ ಒಲೆಗೂಡು, ಕೂರಲೆ ಸ್ವಲ್ಪ ಹೊತ್ತು ಇಲ್ಲೆ..?
ಮಾತಿನ ಸಡಗರ ಮತ್ತು ಗೌರವದ ಬಿಂಕ ಬೇಡ..

ನಾನೇನ ಹೇಳಬಹುದಿತ್ತು.. ಯಾವತ್ತೂ ಹಂಬಲಿಸುತ್ತಿದ್ದ ಪ್ರಿಯಜೀವವು ಇಲ್ಲೆ ಪಕ್ಕದಲ್ಲೆ ಇದ್ದಕ್ಕಿದ್ದಂಗೆ ಬಂದು ಕೂರುವ ಕ್ಷಣದಲ್ಲಿ ನನ್ನ ಮಾತುಗಳೆಲ್ಲ, ಬಂದ ದಾರಿಯಲ್ಲೆ ವಾಪಸಾದವು.. ಮುಖದಲ್ಲಿ ಮೆಚ್ಚುಗೆ ಮತ್ತು ಅಚ್ಚರಿಯ ಸೊಂಪು ಹರಡಿತು.. ಅವರ ಸೂಕ್ಷ್ಮಗ್ರಾಹೀ ಕಣ್ಣು ಅದನ್ನ ಸವಿಯಿತು.

ಕೇಳಬೇಕಿದೆ ನನಗೆ ಪದುಮಳೆಲ್ಲಿ? ಶಾರದೆಯ ಬಂಗಾರವಿಲ್ಲದ ಬೆರಳೆಲ್ಲಿ..? ಸೀತೆಯ ತುಂಟನಗುವೆಲ್ಲಿ? ನಿಲ್ದಾಣ ತಿಳಿಯದೆ ಹತ್ತಿದ ರೈಲೆಲ್ಲಿ? ಕೈಮರದ ನೆರಳು ಯಾವ ಕಡೆಗೆ? ಸಂಜೆಹಾಡಿನ ರಾಗವೇನು? ಶರತ್ ಶಾರದೆಯ ದೀಪಗಳ ಸ್ವಿಚ್ಚೆಲ್ಲಿ? ಬದುಕಿನ ಕವಿತೆಯ ಛಂದಸ್ಸೇನು? ತೆರೆದ ಬಾಗಿಲ ಅಗುಳಿ ಕಳಚಿಟ್ಟವರಾರು? ಹೊಳೆಬದಿಯ ಹಕ್ಕಿಗೊರಳಲಿ ಹೇಗೆ ಸೇರಿತು ಹಾಡು? ನೊಂದ ಹೃದಯ ಕಟ್ಟಿದ ಹಾಡ ನುಡಿಸಿದ ವೀಣೆ ಎಲ್ಲಿ? ಮುತ್ತೂರ ತೇರಿನಲಿ ಕಂಡ ಮೀನಾಕ್ಷಿಯ ಬಳೆಯ ಸದ್ದೆಲ್ಲಿ? ತುಂಗಭದ್ರೆಗೀಗ ಎಷ್ಟು ವರುಷ? ನೀವು ಬರುವ ದಾರಿಯ ಬೇಲಿಸಾಲಿನ ಹೂಗಳಿಗೆ ಕೆಂಪು ಬಣ್ಣ ಕೊಟ್ಟವರಾರು, ನಕ್ಕ ಹಾಗೆ ನಟಿಸದೆ ಸುಮ್ಮನೆ ನಕ್ಕುಬಿಡುವುದು ಹೇಗೆ? ತೌರಸುಖದೊಳಗಿನ ವ್ಯಥೆಯ ಕೇಂದ್ರವೆಲ್ಲಿ? ನೀರೊಳಗೆ ವೀಣೆ ಮಿಡಿದಂತೆ ಮಾತನಾಡಬಹುದೆ? ತುಂಬದ ಒಲವನ್ನ ಹಿಡಿದಿಡ ಹೊರಟ ಪಾತ್ರೆಯಾವುದೋ? ಎಂದೋ ಕೇಳಿದ ಹಾಡನು ವೀಣೆಯಲಿ ನುಡಿಸುವುದು ಹೇಗೋ,ಬಯಲ ತುಂಬ ಹಸಿರು ದೀಪ ಹಚ್ಚಿ ಹರಿವ ನದಿಯ ಒರತೆಯೆಲ್ಲಿ? ಈ ಸಲದ ನವಪಲ್ಲವದ ಚೆಂದುಟಿಯಲಿ ಝೇಂಕರಿಸುವುದೆ ಚಿಟ್ಟೆ?ನಮ್ಮ ಅನುಭವ ತೆಳುವೆನ್ನುವವರ ಟೀಕೆಗೆ ಕಹಿಯಿಲ್ಲದೆ ನಗುವುದು ಹೇಗೆ?...
ಇನ್ನೂ ಏನೇನೋ.. ಎಲ್ಲ ಒಂದಾದಮೇಲೊಂದರಂತೆ ಮನಸ್ಸಿನಲ್ಲಿ ಸುಳಿಯುತ್ತಿದ್ದರೆ, ಮುಂದೆ ಕೂತವರ ಕಣ್ಣ ಕಾಂತಿಯು ಮತ್ತಷ್ಟು ಉಜ್ವಲವಾಗುತ್ತಿತ್ತು..

ಮಾಗದ ಗಾಯಗಳ ನೋವನ್ನ ಒಲುಮೆಯ ಇಂಕಲ್ಲದ್ದಿ ಬರೆದೆನಮ್ಮಾ, ಎತ್ತಿ ನೇವರಿಸಿದ ಭಾವುಕ ಹೃದಯಗಳ ಪ್ರೀತಿಯ ಓದು ನೋವನ್ನ ಪರಿಮಳವಾಗಿಸಿ ತೇಲಿಸಿತಷ್ಟೇ.. ನೋಡು ನಿನಗೂ ಕಾಣಬಹುದು ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರ..ಎಲ್ಲ ನೋಟಗಳಾಚೆಗಿನ್ನೊಂದು ನೋಟ..
ಬಾಲ್ಯದ ಸವಿ, ಯೌವ್ವನದ ಓದು, ಹಿರಿಯ ಜೀವಗಳ ಕೈಕಂಬ, ತುಂಬು ದಾಂಪತ್ಯದ ನಲಿವು-ಬವಣೆ,ಸುತ್ತಲ ಚೆಲುವು-ನೋವು, ಪ್ರತಿಬಾರಿಯೂ ಹೊಸತಾಗಿ ಬರುವ ಬೇವುಬೆಲ್ಲದ ಯುಗಾದಿ,ಇಕ್ಕೆಲದಲ್ಲಿ ಹೂವರಳಿದ ಹಾದಿಯ ಕಲ್ಲುಮುಳ್ಳು ಪಯಣ, ಸ್ಪರ್ಶಕ್ಕೆ ದಕ್ಕದ ಅದ್ಯಾವುದೋ ಪುಳಕದ ಹಂಬಲ, ಮಾತಿಗೆ ನಿಲುಕದ ಭಾವಸಂವಾದ, ನೋಟಕ್ಕೆ ಮೀರಿದ ವ್ಯಾಪ್ತಿ, ಅರ್ಥಕ್ಕೆ ಹೊರತಾದ ಸನ್ಮತಿ, ಎಲ್ಲ ಚೆಲುವು-ನೋವುಗಳ ಒಳಹೂರಣವಾಗಿ ಎದ್ದು ನಿಂತ ಒಳಿತು, ಭಾಷೆ, ಕಾಲಗಳ ಸೀಮೆಯಾಚೆ ಹೊಳೆವ ದೇಶಾಭಿಮಾನ, ಜನಪದದ ಸಿರಿವಂತಿಕೆ..ಎಲ್ಲವೂ ಸೇರಿ ಅಕ್ಷರಗಳ ಸೊಬಗಲ್ಲಿ ಮಿಂದ ಸಾಲುಗಳನ್ನ ಮಲ್ಲಿಗೆಯ ಮಾಲೆಯಾಗಿ ಮುಡಿದವರು ಓದಿದ ನೀವಲ್ಲವೇ? ನನ್ನದೇನಿದೆ ಬರಿಯ ನೇಯ್ಗೆ.. ಚೆಲುವಿದ್ದರಷ್ಟೆ, ಒಳಿತಿದ್ದರಷ್ಟೆ ಸಾಲದು, ನೋಡಿ ಮೆಚ್ಚುವ ಮನಗಳಿರಬೇಕು... ಮತ್ತೆ ಸುಮ್ಮನೆ ಕೂತು ಬೆಂಕಿಗೆ ಬೆನ್ನೊಡ್ಡಿ, ಕಿಟಕಿಯಾಚೆ ಕಣ್ಣು ನೆಟ್ಟರು.

ಮತ್ತೆ ಮೌನ ಬೇಲಿಸಾಲಿನ ಹೂಗಳಂದದಿ ದೂರದೂರಕೂ ಹಬ್ಬಿತು.. ಬೀಸಿಬಂದ ಕುಳಿರಲ್ಲಿ ಇರುವಂತಿಗೆ ಮತ್ತು ಪಾರಿಜಾತದ ಮಿಶ್ರಕಂಪು.. ಒಲೆಯಲ್ಲಿ ಕೆಂಪಗೆ ಕಾದ ಕೆಂಡವಾಗುತ್ತಿರುವ ಕಟ್ಟಿಗೆಯನ್ನ, ಒಟ್ಟುಗೂಡಿಸಿ ಟಿನ್ನಿನ ತಟ್ಟೆಯಲ್ಲಿ ಸೇರಿಸಿ ಇಕ್ಕಳದಲ್ಲಿ ಹಿಡಿದು ಅಡುಗೆ ಮನೆಗೆ ನಡೆದೆ, ಪಾತು ಯಾವಾಗಲೋ ಕೆಂಪಿ ದನದ ಕರೆದ ನೊರೆಹಾಲು ದಬರಿಯಲ್ಲಿ ತಂದಿಟ್ಟು ಹೋಗಿದ್ದಳು. ಅಡಿಗೆ ಮನೆಯ ಮೂಲೆಯಲ್ಲಿ ಕಾಯುತ್ತ ಕೂತಿದ್ದ ಅಗ್ಗಿಷ್ಟಿಕೆಯ ಬಾಯಿಗೆ ಮುತ್ತುಗದ ಹೂಗಳಂತೆ ಕೆಂಪಗೆ ಹೊಳೆವ ಕೆಂಡಗಳ ಸುರಿದವಳು ಹಾಲಿನ ದಬರಿಯನ್ನು ಮೇಲಿಟ್ಟು ಬಂದೆ. ಹಂಡೆಯಲ್ಲಿ ನೀರು ಕುದಿಯುತ್ತಿತ್ತು..
ಚಳಿಯ ಝುಮುರಿಗೆ ಬಿಸಿನೀರು ಹಿತವೆಂದೆ..
ಒಲೆಯ ಕಾವಿಗಿಂತಲೂ! ಎಂದು ನಗುತ್ತ ಕೇಳಿದರು.. ನಾನು ಮಾತುಗಳನ್ನ ಹಿಂದೆ ದಬ್ಬಿ ಅವರ ನೋಡುತ್ತ ನಗುತ್ತ ನಿಂತೆ..

ಹಾಲು ಕಾಯುತ್ತಲಿದೆ, ಇನ್ನೇನು ಕಾಫಿ ಮಾಡುವೆ ಎನ್ನಲು, ನನಗೆ ಸಕ್ಕರೆಯ ಹಾಕು ಶುಗರಿಲ್ಲ, ಸಕ್ಕರೆ ಬೇಡ ಎನ್ನಲು ಅವಳಿಲ್ಲ.. ಎಂದವರ ಕಣ್ಣಂಚಲಿ ಹೊಳೆದದ್ದು ನಗುವೆ ನೋವೆ.. ಎರಡರ ಎರಕ ಕಂಡಿದ್ದಂತೂ ಸತ್ಯ..ಕೆದರಿದ ಕೂದಲ ಸರಿಮಾಡಬೇಕೆನ್ನಿಸಿತು, ನಡುಮನೆಯ ಕನ್ನಡಿಯ ಹಿಂದೆ ಇದ್ದ ಪುಟ್ಟ ಬಾಚಣಿಗೆ ತಂದರೆ ಮಗುವಿನಂತೆ ತಲೆ ಕೊಟ್ಟು ಕೂತರು. ಅಲ್ಲಿ ಬೈತಲೆಯ ಪಕ್ಕದಲ್ಲಿನ ಎರಡು ನಿಡಿದಾದ ಕೂದಲಲ್ಲಿ ಸಿಕ್ಕಿತ್ತು. ಮೆಲ್ಲ ಬಾಚಿ, ಹಣೆಯ ಮೇಲೆ ಬಾಗಿದ ಬಿಳಿಕುರುಳ ತೀಡಿದೆ. ಕಪ್ಪೆಯ ಚಿಪ್ಪಿನಗಲದ ಕಣ್ಣ ದೋಣಿಗೆ ಆಶ್ರಯ ಕೊಟ್ಟ ಹಣೆಯ ಲಂಗರಿನಲ್ಲಿ ಹಿಡಿದೆಳೆದು ನಿಲ್ಲಿಸಿದ ಕುರುಳುಗಳು ಅವರೇ ಹಿಂದೆಂದೋ ಬರೆದಿದ್ದ ಬಿಳಿಯ ಬೆಂಡೋಲೆಗಳಂತೆ ನಗುತ್ತಿದ್ದರೆ, ಅವರ ಸಾಲು ಸಾಲು ಚೆಲುಬರಹಗಳ ದೋಣಿಗಳು ಭಾವಸಮುದ್ರದ ನೀರಿಗಿಳಿಯತೊಡಗಿದವು..

ತೀಡಿದ್ದಾಯಿತೆ? ಹಾಲು ಉಕ್ಕಿದ ವಾಸನೆ ಎಂದವರನ್ನಲು, ಅಡಿಗೆ ಮನೆಗೆ ಓಡಿದೆ. ನೊರೆನೊರೆಯಾದ ಹಾಲು ಮಣ್ಣಿನ ಅಗ್ಗಿಷ್ಟಿಕೆಯ ಮೇಲೆಲ್ಲ ಬಿಳಿಚಿತ್ತಾರ.. ಪಕ್ಕದಲ್ಲೆ ಕೂತು ಗುರುಗುಟ್ಟುವ ಜಾಣೆ ಬಿಲ್ಲಿ.. ಪುಟ್ಟ ಪಾತ್ರೆಯಲ್ಲಿ ಹಾಲಿಗೆ ಡಿಕಾಕ್ಷನ್ ಬೆರೆಸಿ ಹದವಾಗಿ ಸಕ್ಕರೆ ಹಾಕಿ, ಮತ್ತೆರಡು ನಿಮಿಷ ಒಲೆಯ ಮೇಲಿಟ್ಟು ಎರಡು ಲೋಟಕ್ಕೆ ಬಗ್ಗಿಸಿ ಹೊರಬಂದೆ...

ಇಬ್ಬನಿ ಕರಗಿತ್ತು, ಬಿಸಿಲು ಬೆಳೆದಿತ್ತು.. ಬಿಸಿಲ ಕೋಲಿನ ಬೆಳಕು ಮರೆಯಾಗಿತ್ತು.. ಹಿಂದಿನ ನಿಲ್ದಾಣದಲ್ಲಿ ಇಳಿದವರ ಹೆಸರು ಕೇಳದವರು, ನಮ್ಮ ಕೊಡೆಯ ನೆರಳು ಅವರ ದಾರಿಗೆ ಬೀಳದ್ದಕ್ಕೆ ಕೈಮುಗಿದವರು..ಸಮಾನಾಂತರ ರೇಖೆಗಳಲ್ಲಿ ಸಾಗುವ ನಮ್ಮ ಬದುಕಿನ ಪಯಣವನ್ನ ಅಕ್ಷರಕ್ಕಿಳಿಸಿದವರು, ಹೊರಟುಹೋಗಿದ್ದರು. ಸುತ್ತೆಲ್ಲ ಚಂದನವ ತೇಯ್ದ ಇಹದ ಪರಿಮಳ. ಹಿತವಾದ ಬಿಸಿಲಿನಲ್ಲಿ ಕೆಂಪಿದನದ ಎಳೆಗರು ಚೆಲುವಿ ಅಂಗಳಕ್ಕಿಳಿದಿದ್ದಳು. ಕಣ್ಣು ತುಂಬಿ ಕಾಫಿಗುದುರುವುದರಲ್ಲಿತ್ತು..

ಕಾಫಿಯ ಚೆಲ್ಲುವರೇನಮ್ಮ.. ಹೋಗು ದಿನದ ಕೆಲಸಗಳು ಸಾಕಷ್ಟಿವೆ...ಅಂತ ಕಿಟಕಿಯಾಚೆ ಅವರು ನುಡಿದಂತಾಯಿತು.. ನಾಳೆ ಬರುವೆನು ಎಂಬ ಸೂಚನೆಯೇ ಅಂದುಕೊಳ್ಳುತ್ತಾ ಮನಸು ಹಗುರಾಗಿ ಒಲೆಯ ಬಳಿಯೇ ಬಿದ್ದಿದ್ದ ಬಾಚಣಿಗೆಯನ್ನೆತ್ತಿಕೊಂಡೆ ಎರಡು ಬಿಳಿಕೂದಲುಗಳಿದ್ದವು.

ಒಳಗಿನಿಂದ ನನ್ನವರು .. ಬಾರೆ ನನ್ನ ಶಾರದೆ..ಎಂದನ್ನಲು ಬಾಚಣಿಗೆಯನ್ನ ಮಡಿಲ ನಿರಿಗೆಗೆ ಸಿಕ್ಕಿಸಿಕೊಂಡು ಕಾಫಿಲೋಟಗಳನ್ನು ಹಿಡಿದು ಒಳಗೋಡಿದೆ..

Saturday, January 26, 2008

ಭಾವಜೀವಿಯ ಕವಿತೆ..

ಹೆದ್ದಾರಿಯಿಂದ ಸ್ವಲ್ಪದೂರದಲ್ಲಿ ಬೆಟ್ಟ, ಕಾನು, ಘಟ್ಟದ ರಸ್ತೆ, ಮಳೆ ಇವೆಲ್ಲ ಕಂಡರಿಸಿ ನಿಲ್ಲಿಸಿದ ಪುಟ್ಟ ಚೆಲುವಾದ ಊರು ಕಲಗಾರು. ತಾಳಗುಪ್ಪಾ-ಜೋಗದ ಮಧ್ಯೆ ಸಿಗುವ ಈ ಊರಿನ ಪ್ರಕೃತಿಸಿರಿಯಷ್ಟೇ ಇಷ್ಟವಾಗುವ ಜೀವ ಮಾಧು ಮಾವ. ದಿನದಿನದ ಬದುಕಲ್ಲಿ ಹಣ್ಣಾಗುತ್ತಲೇ ತನ್ನ ಭಾವದೊರತೆಯನ್ನ ಚಿರಂತನವಾಗಿ ಜೀವಂತವಿರಿಸಿಕೊಂಡ ಭಾವಜೀವಿ. ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದವನ ಕೈಯಲ್ಲಿ ಸಿಕ್ಕ ಕವಿತೆಯ ಪುಸ್ತಕಗಳಲ್ಲಿ ಕಣ್ಣಾಡಿಸಿದವಳಿಗೆ ತುಂಬ ಚೆಲುವಾದ ಕವಿತೆಗಳು ಸಿಕ್ಕಿ ಮನಸ್ಸು ಉಲ್ಲಸಗೊಂಡಿತು. ತನ್ನ ಮನೆ,ತೋಟ ಕೆಲಸಗಳ ನಡುವೆ, ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವ ಮಾವನ ಓದಿನ ಹರವೂ ಅಪಾರ. ಬೇಲಿಸಾಲಿನ ಹಸಿರ ನಡುವೆ ಕೆಂಪಗೆ ಹೊಳೆವ ಹೂವಿನ ಮಾರ್ದವತೆ ಮೈದಳೆದಿರುವ ಮಾಧು ಮಾವನ ಒಂದು ಭಾವಗೀತವನ್ನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇನೆ.. ಓದಿ ಏನನ್ನಿಸಿತು ಹೇಳಿ

ಮುಸುಕಿನಲಿ ಆಡಿದ
ಪಿಸುಮಾತು - ಕಿವಿಮಾತು
ಇನಿದನಿಗೆ ಬದಲಾಗಿ
ಕರ್ಕಶದ ಮಾರ್ದನಿಯಾಗದಿರಲೆಂದು
ಮಂಜು ತಬ್ಬಿತು ಬೆಟ್ಟವ
ಮನದ ಮಾತಿಗೆ ಮೌನ
ಮುಳ್ಳಬೇಲಿಯ ಘನವಾಗಿ
ಹೆಪ್ಪುಗಟ್ಟಿದ ಭಾವ
ಶೂನ್ಯದಾಗಸಕೆ ನಿಚ್ಚಣಿಕೆಯಾದಾಗ
ಮಂಜು ತಬ್ಬಿತು ಬೆಟ್ಟವ
ಮುಗ್ಧ ಮುಖದಾವರೆಯ
ಸ್ನಿಗ್ಧ ನಗುವಿನ ಪ್ರಕೃತಿ
ನದಿಯಂಚಿನ ಮರಳು - ಗುಡ್ಡ
ಯಂತ್ರಗಳ ರವದಲ್ಲಿ ಸಿಡಿಸಿಡಿದು ಹೋಳಾಗೆ
ಮಂಜು ತಬ್ಬಿತು ಬೆಟ್ಟವ
ಆಸೆಗಳ ತಿಳಿಗೊಳದಿ
ದುರಾಸೆಗಳ ಅಲೆಮೂಡಿ
ವಾದ ವಿವಾದಗಳ ವಿಷಯ-ವಿಷವಾಗಿ
ತತ್ವಗಳ ಬದುಕಲ್ಲಿ ಕುಹಕ ಬೆಂಕಿಬಲೆ ಹೆಣೆದಾಗ
ಮಂಜು ತಬ್ಬಿತು ಬೆಟ್ಟವ
ಕಾಡ ನಾಡಾಗಿಸುವ
ಕುರುಡು ಹುನ್ನಾರಿಗೆ ಸಿಲುಕಿ
ದುಡಿವ ಜನ - ಮಡಿವ ಜನ
ಇಟ್ಟಂಗಿ ಕಲ್ಲು ಪಾವಟಿಗೆಯಾಗಿ, ಉಳ್ಳವರು ಅಟ್ಟಹಾಸವ ಮಾಡೆ
ಮಂಜು ತಬ್ಬಿತು ಬೆಟ್ಟವ
ನಿನ್ನೆ ನಾಳೆಯ ನಡುವೆ
ಇಂದೆಂಬ ಚಿರಸತ್ಯ
ಯಾರಿರಲಿ ಇಲ್ಲದಿರಲಿ
ನಾನಿದ್ದರಷ್ಟೆ ಸುಖವೆಂಬ ಸ್ವಾರ್ಥ ಸಂತೆಗೆ ಕರಗಿಬೀಳುವ ಮುನ್ನ
ಮಂಜುತಬ್ಬಿತು ಬೆಟ್ಟವ.


-ಮಾಧವ ಶರ್ಮ ಕಲಗಾರು

Friday, January 25, 2008

ಗಣರಾಜ್ಯೋತ್ಸವದ ಹಿಂದಿನ ಸಂಜೆ..

ಓ ಇವತ್ತು ಈ ರಿಪೋರ್ಟು ರೆಡಿ ಮಾಡಬೇಕು. ಹಾಳಾದ್ದು ಗಣರಾಜ್ಯೋತ್ಸವ ಶನಿವಾರ ಬಂದ್ ಬಿಡ್ತು. ಒಂದು ರಜಾ ಮಿಸ್ಸಾಗೋಯ್ತು ಅಂದುಕೊಳ್ಳುತ್ತ ದಿನಚರಿ ಶುರುವಾಯಿತು. ಅಷ್ಟರಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಕ್ವಿಝ್ ಒಂದನ್ನ ಮುಂದಿಟ್ಟರು. ಎಲ್ಲರೂ ಗೊಣಗುತ್ತಲೇ ಕೈಗೆತ್ತಿಕೊಂಡೆವು.
ಸ್ವತಂತ್ರ ಭಾರತದ ಬಗೆಗಿನ ಕೆಲವು ಪ್ರಶ್ನೆಗಳು. ಹೆಚ್ಚೂ ಕಡಿಮೆ ಎಲ್ಲವನ್ನೂ ನಾವು ಮಾಧ್ಯಮಿಕ ಶಾಲೆಯಲ್ಲಿ ಓದಿರಬಹುದಾದದ್ದು.
ಯಾರಿಗೂ ೪ ಪ್ರಶ್ನೆಗಳಿಗಿಂತ ಹೆಚ್ಚಾಗಿ ಮುಂದೆ ಹೋಗಲಾಗಲಿಲ್ಲ. ಆ ನಾಲ್ಕರಲ್ಲೂ ಎರಡು ಅಳೆದೂ ಸುರಿದೂ ಐದು ನಿಮಿಷ ಯೋಚನೆ ಮಾಡಿ ಉತ್ತರಿಸಿದ್ದು. ತಲೆತಗ್ಗಿಸಿ ಕೂತೆ.

ಒಂದು ಇಡೀ ತಲೆಮಾರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ತಂದುಕೊಟ್ಟ ಸ್ವಾತಂತ್ರ್ಯ, ಆ ವಿಶೇಷ ಚೇತನಗಳು ಕಂಡ ಆದರ್ಶ ಗಣರಾಜ್ಯ ಎರಡೂ ಮುಖಕ್ಕೆ ಮುಸುಕೆಸೆದುಕೊಂಡು ಅಳುತ್ತ ಕೂತಿವೆ. ನಮಗೆ ಮಿಡ್ಲ್ ಸ್ಕೂಲಿನ ಪರೀಕ್ಷೆಯ ಮಟ್ಟಕ್ಕೆ ಮಾತ್ರ ಸಿವಿಕ್ಸ್ ಬೇಕು. ಆಮೇಲೆ ಮರೆತುಹೋಗಿಬಿಡುತ್ತೆ. ಬಾಲ್ಯದಲ್ಲಿ ಓದಿದ ಗುಂಪಾಗಿ ಹೋರಾಡಿದ್ದ ಸ್ವತಂತ್ರ ಸೇನಾನಿಗಳು ನಾವು ಬೆಳೆದು ದೊಡ್ಡವರಾದ ಮೇಲೆ, ನಮ್ಮ ನಮ್ಮ ಮನಸ್ಸಿಗೊಪ್ಪುವ ಸಿದ್ಧಾಂತ ಧಾರೆಯ ಪ್ರಭಾವಳಿಯಲ್ಲಿ ಮೆರವಣಿಗೆ ಹೊರಟು ಅವರ ಹೋರಾಟದ ಸತ್ವ ಮಕಾಡೆ ಮಲಗಿರುತ್ತದೆ. ಒಬ್ಬೊಬ್ಬರನ್ನೂ ಒಂದೊಂದು ಪಕ್ಷ ಗುತ್ತಿಗೆಗೆ ಹಿಡಿಯುತ್ತದೆ. ನಾವು ಗೆದ್ದೆತ್ತಿನ ಬಾಲ ಹಿಡಿಯುತ್ತಾ, ಹಿರಿಯರ ಕಷ್ಟಾರ್ಜಿತ ಸ್ವಾತಂತ್ರವನ್ನ ಸ್ವೇಚ್ಛೆಯಾಗಿ ಉಪಯೋಗಿಸುತ್ತಾ, ಕ್ರಿಕೆಟ್ ಮ್ಯಾಚುಗಳಲ್ಲಿ ಬಾವುಟದ ಬಣ್ಣ ಬಳಿದುಕೊಳ್ಳುತ್ತಾ, ವೀಸಾ ಕ್ಯೂನಲ್ಲಿ ಕಾಯುತ್ತಿರುತ್ತೇವೆ. ನಮ್ಮದು ಸಿರಿಮಲ್ಲಿಗೆ.

ಭಾರತ ಗಣರಾಜ್ಯವಾದ ವರ್ಷ ಯಾವುದು ಅಂತ ತಿಳಿದುಕೊಂಡು ನಮಗೇನಾಗಬೇಕಾಗಿದೆ? ಸೆನ್ಸೆಕ್ಸ್ ಹೇಗೆ ಏರಿಳಿಯುತ್ತಿದೆ ಅಂತ ನೋಡಲು ಸರಿಯಾಗಿ ಟೈಮಿಲ್ಲ. ನಮ್ಮ ರಾಷ್ಟ್ರಗೀತೆಯ ಇತಿಹಾಸ ಗೊತ್ತಿಲ್ಲ. ತಪ್ಪಾಗಿ ಹಾಡಿದವರನ್ನ ಹಂಗಿಸುತ್ತೇವೆ. ರಾಜಕಾರಣಿಗಳನ್ನ ಎಗ್ಗಿಲ್ಲದೆ ಆಡಿಕೊಳ್ಳುತ್ತೇವೆ. ನಮ್ಮ ಹಕ್ಕು ಬಳಸಿ ಕರ್ತವ್ಯ ನಿಭಾಯಿಸುವ ಮಾತೆತ್ತಿದರೆ ಜಾರಿಕೊಳ್ಳುತ್ತೇವೆ. ಹೋದವರ್ಷ ಟೀವಿ ಚಾನೆಲ್ಲೊಂದು ನಮ್ಮ ಸಂಸದ ಮಹಾಶಯರನ್ನು ಮಾತಾಡಿಸಿತ್ತು. ರಾಷ್ಟ್ರಗೀತೆ ಬರೆದವರು ಯಾರು ಎಂಬ ಪ್ರಶ್ನೆ ಮುಂದಿಟ್ಟರೆ ಕ್ಯಾಮೆರಾ ಮುಂದೆ ಪೆಕರು ಪೆಕರಾಗಿ ಗಾಂಧಿ, ಮೋಸ್ಟ್ಲೀ ಯಾವುದೋ ಚಟರ್ಜೀ,ವಿವೇಕಾನಂದ ಅಂತ ಬಾಯಿಗೆ ಬಂದಂಗೆ ಕೆಲವರು ಹಲುಬಿದರೆ, ಕೆಲ ಹಿರಿಯ ಸಂಸದರು ಇಂತದೆಲ್ಲ ಯಾರು ನೆನಪಿಟ್ಕೋತಾರೆ ರಾಷ್ಟ್ರಗೀತೆ ಹಾಡೊಕ್ಕೆ ಬಂದರೆ ಸಾಕಲ್ವಾ ಅಂದರು. ಸಧ್ಯ ಆ ಚಾನೆಲ್ಲು ಅವರಿಂದ ಅದನ್ನು ಹಾಡಿಸಿ ರಾಷ್ಟ್ರಗೀತೆಗೆ ಅವಮಾನ ಮಾಡಲಿಲ್ಲ.

ಅಮೆರಿಕದ ಶಿಕ್ಷಣಪದ್ಧತಿಯಲ್ಲಿ ಓದುವ ಗ್ರಾಜುಯೇಟ್ಸ್ ಮತ್ತು ಪ್ರೊಫೆಶನಲ್ಸ್ (ಡಾಕ್ಟರು, ಇಂಜಿನಿಯರು, ಲಾಯರು, ಆಡಿಟರು..ಇತ್ಯಾದಿ ಎಲ್ಲರೂ) ರಾಷ್ಟ್ರದ ಚರಿತ್ರೆ,ಭೂಗೋಳ ಮತ್ತು ನಾಗರಿಕ ಸಂಹಿತೆಯನ್ನ ಒಂದು ಮೇಜರ್ ವಿಷಯವಾಗಿ ಓದಲೇಬೇಕು. ಇದು ಜನಮನದಲ್ಲಿ ನಮ್ಮ ದೇಶದೆಡೆಗಿನ ಅಭಿಮಾನ, ನಮ್ಮ ಸ್ವಾತಂತ್ರ ಹೋರಾಟದ ಹಿರಿಮೆ, ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ಎಲ್ಲವನ್ನೂ ಕಟ್ಟಿಕೊಡುತ್ತದೆ. ಇಂತಹ ಒಳ್ಳೆಯ ವಿಷಯದ ಕಡೆ ನಮ್ಮ ಗಮನ ಹೋಗುವುದೇ ಇಲ್ಲ. ನಮಗೆ ಅವರ ತಂತ್ರಜ್ಞಾನ ಮತ್ತು ಸ್ಟಾಕ್ಸ್ ಮಾತ್ರ ಬೇಕು.

ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ರಂಗದಲ್ಲಿ ಮುನ್ನುಗ್ಗುವ ನಮಗೆ ನಮ್ಮ ಸಂಸ್ಕೃತಿಯ, ಬೇರಿನ ಅರಿವೇ ಇಲ್ಲದೆ ಹೋದರೆ ಹೇಗೆ ಅಂತ ಮನಸ್ಸು ಖಿನ್ನವಾಗಿದೆ. ಇನ್ನೆಲ್ಲ ಹೋಗಲಿ ತಮ್ಮ ಸುಖ ಮತ್ತು ಸಂಪತ್ತನ್ನು ಬದಿಗಿಟ್ಟು ಹೋರಾಟ ಮಾಡಿದ ನಮ್ಮ ಸ್ವತಂತ್ರಯೋಧರ ನೆನಪು ನಮಗೆ ಚಿರಸ್ಮರಣೀಯವಲ್ಲವೆ!

ನೋಡಿ, ಗೂಗ್ಲಿಂಗ್ ಮಾಡದೇ ಈ ಕ್ವಿಝ್ ಗೆ ಉತ್ತರ ಹುಡುಕಿ. ನಿಮಗೇನೆನ್ನಿಸಿತು ಅಂತ ಹಂಚಿಕೊಳ್ಳಿ.
 1. Who was the president of the Constituent Assembly that held the 'Independence Meeting'?
 2. Who was the viceroy of independent India?
 3. Name the first woman minister of Independent India.
 4. What does the navy blue wheel that appears in the Indian national flag stand for?
 5. The order of the colors of Indian national flag from top down is.................................
 6. In 1997, the year of 50th anniversary of Indian independence, the US Senate passeda resolution, designating it as a National(US) Day of celebration of............................
 7. Name the national animal, bird, flower and fruit
 8. Since when India had been recognized as a republic?
 9. Who was the last Governor General of Independent India?
 10. The first stanza of Tagore's 'Janagana Maana' has been selected as India's national anthem.How many stanzas are there in the original song?

ಇಂತಹ ಒಂದು ಭಿನ್ನ ಆಲೋಚನೆಯ ಕ್ವಿಝ್ ಕೊಟ್ಟು ನಮ್ಮ ೫೯ನೇ ಗಣರಾಜ್ಯೋತ್ಸವಕ್ಕೆ ಹೊಸ ಅರ್ಥ ತುಂಬಿದ ಸಹೋದ್ಯೋಗಿಗೆ ಕೃತಜ್ಞತೆ ಸಲ್ಲಿಸುತ್ತಾ..

Tuesday, January 22, 2008

ಬದುಕಿಗಿಂತ ಕನಸು ಲೇಸು..

ಅವನು ಬರದೆ ಕಣ್ಣೇ ತೆರೆಯಬಾರದು ಅಂತ ಗಟ್ಟಿಯಾಗಿ ಕಣ್ಮುಚ್ಚಿಕೊಂಡು ಕೂತಿದ್ದೆ. ಬೀಸಿ ಬಂದ ತಂಗಾಳಿ ಬಯಲಿನಲ್ಲಿದ್ದ ಹೂಗಳ ಪರಿಮಳವನ್ನೆರಚಿತು. ಆ ಕಡೆ ನೋಡಿದೆ. ಜನರ ಗಡಿಬಿಡಿ, ಓಡಾಟ ನೋಡಿ ಬೋರು ಹೊಡೆಸಿಕೊಂಡಿದ್ದ 'ದಿನ' ಆದಷ್ಟು ಬೇಗ 'ನಿಶೆ' ಯ ತೆಕ್ಕೆ ಸೇರುವ ಆತುರದಲ್ಲಿ ಸಂಜೆಯ ಹೊಸಿಲೆಡವಿ ಹಣೆಯೊಡೆದುಕೊಂಡಿತ್ತು. ಪಥಿಕರು ‍ಯಾರೂ ಇರದಿದ್ದ ಹಾದಿಯೊಂದರ ಯಾವ ತಿರುವಿನಲ್ಲೂ ಅವನ ಸುಳಿವಿರಲಿಲ್ಲ. ಶೀತಗಾಳಿಗೆ ಮೈ ಬಿಟ್ಟು ಕೂತಿದ್ದೀಯಲ್ಲಾ ಅಂತ ನನ್ನ ಗದರಿದ ರಾತ್ರಿ ಮಬ್ಬುಗತ್ತಲಿನ ಶಾಲು ಹೊದೆಸಿತು. ಅವನ ಕಣ್ಣೋಟದ ಪ್ರತಿಫಲನವೋ ಎಂಬಂತೆ ಥಳಕ್ಕೆಂದವು ನಕ್ಷತ್ರಗಳು. ಇನ್ನು ಬರಲಾರ ಅವನು, ಅನ್ನಿಸಿದ್ದೇ ತಡ ಸುತ್ತಲಿನ ಕತ್ತಲಿನ ಅರಿವಾಯಿತು. ಸೋತ ಕಾಲಿನಲ್ಲಿ ಏಳಲಾರದೆ ಎದ್ದೆ.

ಏನೇನೋ ಹೇಳಿ ಬೋರ್ ಹೊಡೆಸ್ತಿದ್ದೀನಾ ನಾನು? ಆದ್ರೆ ಪ್ಲೀಸ್ ಸ್ವಲ್ಪ ನನ್ನನ್ನ ಅರ್ಥ ಮಾಡಿಕೊಳ್ಳಿ.ನನ್ನ ತಳಮಳವನ್ನ ನಾನು ಯಾರಿಗೂ ಹೇಳಿಕೊಳ್ಳಲಾರೆ. ನನಗೊಬ್ಬಳಿಗೇ ಇದನ್ನೆಲ್ಲ ಸಹಿಸಲು ಆಗುತ್ತಲೇ ಇಲ್ಲ. ನೀವಾದ್ರೆ... ನಿಮಗೆ ನನ್ನ ಗೊತ್ತಿಲ್ಲ. ನಂಗೂ ನಿಮ್ಮುನ್ನ ಗೊತ್ತಿಲ್ಲ. ಅದಿಷ್ಟೇ ಅಲ್ಲ. ನೀವು ಇದನ್ನೆಲ್ಲಾ ಓದಿದ ಮೇಲೆ ಏನಂತ ಸ್ಪಂದಿಸುತ್ತೀರೆಂದು ನಂಗೆ ಗೊತ್ತಾಗೋಲ್ಲ. ಕತ್ತಲ ರಾತ್ರಿಯಲ್ಲಿ ಮನೆಯವರು ‍ಯಾರಿಗೂ ಎಚ್ಚರವಾಗದ ಹಾಗೆ ಎದ್ದು ಕಿಟಕಿಗೆ ಆತು ಕಣ್ಣೀರಿಡುವಾಗ ಆ ಹನಿಗಳನ್ನು ಬೀದಿದೀಪ ಪ್ರತಿಫಲಿಸುತ್ತಲ್ಲಾ ಹಾಗೆ ಇದು. ಆ ಹನಿಗಳಂತೆ ಈ ಪದಗಳನ್ನ ಹರಿಯಬಿಟ್ಟಿದ್ದೇನೆ.
ನನ್ನ-ನಿಮ್ಮೆಲ್ಲರ ದೈನಂದಿನ ವ್ಯವಹಾರೀ ವಾಸ್ತವಿಕತೆಯ ಬಿಸಿಗೆ ಬಾಡಿ ಬಸವಳಿದಿರುವ ಭಾವುಕತೆಯನ್ನು ಈ ಹನಿಗಳು ಸ್ಪರ್ಶಿಸಿದರೆ ಸಾಕು ನನಗೆ. ಅಲ್ಲೆ ಇಂಗಿ ಹೋಗಲವು. ನಾನು ಇಲ್ಲಿ ಕರಗುತ್ತೇನೆ. ಈಗ ಕೇಳುತ್ತೀರಲ್ವಾ..?

ಅವನು ನನಗೆ 'ಅವನಾ'ಗಿರಲಿಲ್ಲ. ನಾನೇ ಆಗಿದ್ದ. ಅವನು ನನ್ನ ಗೆಳೆಯನಷ್ಟೇ ಇರಲಿಲ್ಲ. ಅವನು ನನ್ನ ಅಮ್ಮನಾಗಿದ್ದ. ಅವನ ಕಣ್ಣೋಟದಿಂದ ನಾನು ಬಿಸಿಯಾಗುತ್ತಿರಲಿಲ್ಲ, ಅರಳುತ್ತಿದ್ದೆ. ಅವನು ನನ್ನ ಸ್ಪರ್ಶದಲ್ಲಿ ಕರಗುತ್ತಿರಲಿಲ್ಲ ಪಲ್ಲವಿಸುತ್ತಿದ್ದ. ಮಾತು, ನೋಟ, ಸ್ಪರ್ಶಗಳು ಕಂಗಾಲಾಗಿ ನಿಂತ ನಂತರದ ಮೌನಶ್ರೇಣಿಯ ಚಾರಣ ಪಯಣ ನಮ್ಮದಿತ್ತು. ಅಲ್ಲಿ ಗದ್ದಲವಿರಲಿಲ್ಲ, ನಿರ್ವಾತ ಮೊದಲೇ ಇಲ್ಲ. ಪ್ರಕೃತಿಯ ಚೆಲುವು ಬಗೆಬಗೆಯ ರೂಪಿನಲ್ಲಿ ಮೈದಳೆದ ಆ ಹಾದಿಯಲ್ಲಿ, ನಾನು ಹೊರಟಾಗ ಒಬ್ಬಳೇ ಇದ್ದೆ. ಅವನು ಅಲ್ಲೆ ತಿರುವಿನಲ್ಲಿದ್ದ ಪುಟ್ಟ ಝರಿಗೆ ಮೈಯೊಡ್ಡಿ ನಿಂತು ಸುತ್ತಲ ಜಗದ ಪರಿವೆಯಿಲ್ಲದೆ ಗುನುಗುತ್ತಿದ್ದ.

ಮೈ ತನ್ ಹಾ ಥಾ.. ಮೈ ತನ್ ಹಾ ಹೂಂ
ತುಮ್ ಆವೋ ತೋ ಕ್ಯಾ, ನಾ ಆವೋ ತೋ ಕ್ಯಾ...!
ನೀನು ಬಂದರೇನು ಗೆಳತೀ ಬರದಿದ್ದರೇನು ಅಂತ ವಿಷಾದವೂ ಮುದ್ದು ಸುರಿಸುವ ಹಾಗಿನ ಗುಲಾಮ್ ಅಲಿಯವರ ಗಝಲ್ ಸಾಲುಗಳವು.

ನಾನಲ್ಲಿ ಅರೆಘಳಿಗೆ ನಿಂತು ಮುಂದಡಿಯಿಟ್ಟೆ. ಮುಂದಿನೊಂದು ತಿರುವಿನಲ್ಲಿ ಎಷ್ಟೇ ತಡೆದರೂ ಕಣ್ಣಿನಿಂದ ಚಿಮ್ಮಿದ ಒರತೆಯನ್ನು ಅಳಿಸಲು ಕೈಯೆತ್ತಿದೆ. ತಡೆದ ಅವನು ಕರ್ಚೀಫು ಕೈಗಿಟ್ಟ. ಮಾತುಗಳು ಮೌನಕೋಟೆಯ ಸುತ್ತ ಗಸ್ತು ತಿರುಗಿ ಸುಸ್ತೆದ್ದು ಹೋಗಿ ತೆಪ್ಪಗಾದವು. ಆವತ್ತು ರಾತ್ರಿಯ ಪಯಣಕ್ಕೊಂದು ವಿರಾಮವಿತ್ತು ನೆಲಕ್ಕೊರಗಿದೆವು. ಆಕಾಶ ಚಾವಣಿಯ ಡೇರೆಗೆ ಚಂದಿರ ತಾರೆಗಳ ಶಾಂಡೆಲಿಯರ್ ಝಗ್ಗೆಂದಿತ್ತು. ನಡೆದ ಆಯಾಸವನ್ನೇ ಮರೆಸುವ ಗಾನದಿಂಪಿನ ಊಟವಿಟ್ಟಿದ್ದ ಅವನು ನನಗೆ. ಅವನ ದಣಿದ ಕಂಗಳಿಗೆ ನಾನು ತುಟಿಯೊತ್ತಿದೆ. ಈ ಅಪರಿಚಿತ ನನ್ನ ಪಯಣದ ಹಾದಿಯಲ್ಲಿ ಜೊತೆ ಜೊತೆಗೇ ಹೆಜ್ಜೆ ಹಾಕಿ ನನಗರಿವಿಲ್ಲದೆ ನನ್ನೊಳಮನೆಗೆ ನಡೆದುಹೋಗಿಬಿಟ್ಟಿದ್ದ. ಹೊರತರುವ ಬಗೆಯೆಂತೋ ಗೊತ್ತಿಲ್ಲ. ಹೊರತರಲು ನಂಗೆ ಇಷ್ಟವೂ ಇಲ್ಲ.

ಹೆಜ್ಜೆ ಮೂಡಿರದ ಬಯಲಲ್ಲಿ ನಾವು ಹೆಜ್ಜೆ ಇಟ್ಟೆವು. ಅವನು ಹೆಜ್ಜೆಯಿಟ್ಟಲ್ಲಿ ನಾನೊಂದು ಕವನ ಮೂಡಿಸುತ್ತಿದ್ದೆ. ನಾನು ಹೆಜ್ಜೆಯಿಟ್ಟಲ್ಲಿ ಅವನೊಂದು ಹಾಡು ಗುನುಗುತ್ತಿದ್ದ. ನಮ್ಮಿಬ್ಬರ ಹೆಜ್ಜೆಗೆ ಜೊತೆಯಾಗಿ ಹೆಸರು ಗೊತ್ತಿಲ್ಲದ ಕಾಡು ಹೊಕ್ಕಿಯೊಂದು ಉಲಿಯುತ್ತಿತ್ತು. ಸುತ್ತ ಚೆಲುವಾಗಿ ತುಂಬಿ ನಿಂತ ಅಮ್ಮ ನಮ್ಮನ್ನು ನೋಡಿ ಮೆಲು ನಗುತ್ತಿದ್ದಳು. ತಂಗಾಳಿ ಬೀಸುತ್ತಿದ್ದಳು. ಕಂಪು ಸೂಸುತ್ತಿದ್ದಳು.

ಇಷ್ಟು ವರ್ಷ ಒಬ್ಬಂಟಿತನದ ಬಂದರಿನಲ್ಲಿ ಲಂಗರು ಹಾಕಿದ ನನ್ನ ಬದುಕಿನ ನಾವೆಗೆ ಚೈತನ್ಯದ ಪುಶ್ ಸಿಕ್ಕಿತ್ತು. ನಾನು ಜೀವನ್ಮುಖತೆಯಲ್ಲಿ ತೇಲಬಯಸಿದೆ. ಬಂದರಿನವರಿಗೆ ಕಸಿವಿಸಿಯಾಗತೊಡಗಿತು. ಹಾಕಿದ್ದ ಮೂರುಗಂಟಿನ ಮೇಲೆ ಇನ್ನೆರಡು ಸುತ್ತು ಹಗ್ಗ ಬಿಗಿದರು. ನಾನೇನು ತುಂಬ ಕೂಡಿ ಕಾಪಿಟ್ಟುಕೊಳ್ಳಬೇಕಾದ ಬೇಕೇ ಬೇಕಿರುವ ನಾವೆಯಲ್ಲ. ಹಾಗಂತ ಬಿಟ್ಟು ಬಿಡಲು ಸೋಶಿಯಲ್ ಸ್ಟೇಟಸ್ ಒಪ್ಪಬೇಕಲ್ಲ. ತಾವೇ ನಾವೆಯ ಹಗ್ಗ ಕಡಿದು ಹರಿಯಬಿಟ್ಟರೆ ದೊಡ್ಡಸ್ತಿಕೆ ಉಳೀತದೆ, ಅದು ಬಿಟ್ಟು ನಾವೆ ತಾನಾಗೆ ಬಂದರಿನಿಂದ ಸರಿದು ಹೋಯಿತೆಂದರೆ...! ಇದ್ದ ಡಿಗ್ನಿಟಿಯೆಲ್ಲ ನೀರುಪಾಲಾದ ಹಾಗೆ ಅಂತ ಬಂದರಿನವರ ಅಭಿಪ್ರಾಯ.
ಇದೆಲ್ಲ ನಿಜವಾದರೂ ನಾನು ಬರಿಯ ನಾವೆಯಷ್ಟೇ ಅಲ್ಲವಲ್ಲ. ಸೋಷಿಯಲ್ ಸ್ಟೇಟಸ್ ಇರೋದು ಬೇರೆಯವ್ರನ್ನ ಖುಷಿ ಪಡಿಸಲೇ ಹೊರತು ನನ್ನ ಮನದಳಲನ್ನ ಸಂತೈಸಲು ಅಲ್ಲವಲ್ಲ....
ಮಲ್ಲಿಗೆ ಕವಿ ಹೀಗೊಂದು ಹೂನೇಯ್ಗೆ ನೇಯ್ದರು..

ಕೈ ಮುಗಿವೆನು ಬಿಸಿಹಾಲಿನ ಬಟ್ಟಲಂತ ಪ್ರೀತಿಗೆ,
ಬದುಕಿಗಿಂತ ಕನಸು ಲೇಸು ಎಂಬ ನಿನ್ನ
ರೀತಿಗೆ...
ಈ ವ್ಯವಹಾರಿಕ ಜಗತ್ತಿನ ಮುಖವಾಡಗಳ ಹಿಂದೆ ನನ್ನನ್ನ ಹುದುಗಿಸಿಟ್ಟುಕೊಂಡು ತುಂಬ ದಿನಗಳ ಕಾಲ ಮುರುಟಿಕೊಂಡು ಬದುಕಿ ಕೊನೆಗೊಂದು ದಿನ ಕೊರಡಾಗುವುದು ನಂಗಾಗೋಲ್ಲ. ಸ್ವಲ್ಪ ದಿನವೇ ಆದ್ರೂ ಸರಿ ಭಾವುಕ ಕನಸುಗಳಲ್ಲಿ ಕರಗಿ ಹೋಗೋದೇ ಒಳ್ಳೇದು ಅನ್ನಿಸಿಬಿಟ್ಟಿದೆ.

ನೀವು ಇದನ್ನು ಓದುವ ಹೊತ್ತಿಗಾಗಲೇ ನಾನು ನನ್ನ ಕನಸಿನ ಲೋಕದ, ಗಿರಿಶ್ರೇಣಿಗಳ ತಪ್ಪಲಲ್ಲಿ ಇರ್ತೀನಿ. ದರಿಯ ಅಂಚಿನಲ್ಲಿ, ಬೀಳುವಂತೆ ಕಂಡೂ ಬೀಳದ ಕಲ್ಲಿನ ಮೇಲೆ ಕೂತಿರ್ತೀನಿ, ನನ್ನ ನೋಡಿ ಬೆಚ್ಚಗೆ ಕೆಂಪು ಕೆಂಪಾಗಿ ಭೂಮಿಯ ಬೆನ್ನಲ್ಲಿ ಅಡಗುವ ಸೂರ್ಯನ್ನ ನೋಡುತ್ತಾ.. ಹೌದು ನೆನ್ನೆ ತಾನೇ ಬಂದರಿನವರ ವ್ಯವಹಾರ ಮುಗಿಯಿತು. ವಿಚ್ಛೇದನದ ಬಿಡುಗಡೆ.
ನೀವು ನಂಗೊಂದು ಸಹಾಯ ಮಾಡ್ತೀರಾ?ಅವನ್ಯಾಕೋ ಇವತ್ತು ಬಂದಿಲ್ಲ, ನಾನು ಇವತ್ತೇ ಹೊರಡಬೇಕು. ಇಲ್ಲೊಂದು ಪುಟ್ಟ ನೋಟ್ ಇದೆ, ಇದನ್ನ ಅವನಿಗೆ ತಲುಪಿಸುತ್ತೀರಾ? ಲೈಬ್ರರಿಯ ನೋಟಿಸ್ ಬೋರ್ಡಿನಲ್ಲಿ ಹಾಕಿದರೆ ಸಾಕು ಅವನಿಗೆ ಸಿಕ್ಕೇ ಸಿಗುತ್ತೆ.

ಜನನಿಬಿಡ ನಗರಗಳಿಂದ ದೂರಕ್ಕೆ,
ನೀಲಿಯಂಚಿನ ಹಸಿರು ಹೊದ್ದ-
ನಿಸರ್ಗದ ಒಡಲೊಳಕ್ಕೆ,
ಮೌನರಾಗದ ಗಾನದಿಂಪಿಗೆ,
ನಾ-ನೀ ಮರೆತು ಹೋಗಿ
'ನಾವಾ'ಗುವ ಆಕಾಶಚಾವಣಿಯ
ಹುಲ್ಲುಹಾಸಿನರಮನೆಗೆ,
ತೆರಳುತ್ತಿದ್ದೇನೆ ಗೆಳೆಯಾ.

ಬರುವ ದಾರಿ ಸುಲಭದ್ದು,
ನಿನಗೇ ಗೊತ್ತುಂಟಲ್ಲ,
ಗೋಡೆಗಳಿಲ್ಲ, ತೆರೆದ ಬಾಗಿಲು,
ಕರೆಗಂಟೆ ಒತ್ತಬೇಕಿಲ್ಲ.
-ಕನಸುಗಾತಿ

Tuesday, January 1, 2008

ನವಪಲ್ಲವ

ಎಲ್ಲ ಬರೆದಿದ್ದಾರೆ ಕಳೆದ ನಿನ್ನೆಗಳು ಬರುವ ನಾಳೆಗಳು ಇಂದು ಹನ್ನೆರಡು ಗಂಟೆಗೆ ಸರಿಯಾಗಿ ಬಂದು ತುಂಬಿಕೊಳ್ಳುವ ಮೆಸೇಜುಗಳು ಎಲ್ಲದರಲ್ಲೂ -ಹೊಸವರ್ಷವಂತೆ ಹೊಸ ಬೆಳಗಂತೆ!

ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ ಎಂದ ಹಿರಿಮನಸು, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಪ್ರತಿ ಬೆಳಗಿಗೂ ಮಣಿಯಿತು.
ಹೊಸತು ಬರಲಿದೆ ಎಂದು ವರ್ಷದ ಯಾವುದೋ ನಿರ್ದಿಷ್ಟ ತೇದಿಯಂದು ಎಲ್ಲ ಸಂಭ್ರಮದಿ ಕಾದಿದ್ದಾರೆ, ಪಟಾಕಿ, ಹಾಡು, ಕುಣಿತ, ನಿಶೆ ಎಲ್ಲದರ ಸಂಗಮದಿ..

ಹಳೆಬೇರು ಹೊಸಚಿಗುರು ಕೂಡಿರಲು ಮರಸೊಬಗೆಂದು ಹಿರಿಮನಸು ದಿನಾ ಬೆಳಿಗ್ಗೆಯೂ ಗುನುಗಿತು ಅಂತಃಪುರಗೀತೆಯಾಗಿ!

ಈ ಎಲ್ಲ ಹಿರಿಚೇತನಗಳ ಬೆಳಕಲ್ಲಿ ಅದ್ದಿ ತೆಗೆದು ಕಣ್ಣರಳಿದೆ ನನ್ನದು. ಅಚ್ಚರಿ ಸಂತಸ!

ದಿನದಿನದ ಚೆಲುವಿನ ಸವಿ
ಹನಿಹನಿಯಾಗಿ ಬನಿ ಇಳಿಯುತ್ತಿದ್ದರೆ
ನಾನಿಲ್ಲಿ ಕಾದಿದ್ದೇನೆ ನಾಲಿಗೆ ಚಾಚಿ,
ಕಂಬನಿಯ ಉಪ್ಪು ಹನಿಯ ಒರೆಸಿಕೊಳ್ಳುತ್ತಾ..
ದಿನದಿನವೂ
ಹೂವಿನಲಿ, ಚಿಗುರಿನಲಿ, ಇಬ್ಬನಿಯಲಿ, ಚೆಂಬಿಸಿಲಲಿ..
ಹಣ್ಣೆಲೆಯಲಿ, ದೋರುಗಾಯಲಿ, ಕಳಿತ ಫಲದಲಿ, ಗಿಳಿಕಚ್ಚಿತಿಂದ ಅರೆಹಣ್ಣಲಿ, ಮುಳ್ಳಲಿ,ಬಿಸಿಲಲಿ,ಕೊರೆವಚಳಿಯಲಿ,
ನೋವಲಿ,ಮನಸು ಮುದುಡಿ ಮುಪ್ಪಾದ ಚಣಗಳಲಿ..
ಒಳಿತೆಂಬುದುದೇ ಕೆಡುಕೆಲ್ಲದಕೆ ವಿನಾಶವ ತರುವ ಉಶೋದಯದ ಚೆಲ್ ಬೆಳಕಿನ ಓಕುಳಿಗೆ...
ಸುತ್ತೆಲ್ಲ ಹೂಬಿರಿದು, ಬೆಳಕು ಹೊಳೆದು, ತಂಪಿನ ಘಮ.
ರಾತ್ರೆಯ ನೋವಿಗೂ ಇಲ್ಲಿದೆ ಬೆಚ್ಚನೆ ಮಡಿಲು,
ಅಳುವ ಮರೆತು ಹೋಗಲು, ಕಣ್ಣೊರೆಸಿ ನಗಲು,
ಬಂದಿದೆ ಹೊಸಹಗಲು..

ಈ ಇಬ್ಬನಿಯ ಹೊಸ ಬೆಳಗುಗಳಿಗೆ ಘಮವೂಡಲು ಕನ್ನಡದ ಕಂಪಾಗಿ,ಇಂಪಾಗಿ ಕೆಂಡಸಂಪಿಗೆಯೊಂದರ ನವಪಲ್ಲವ.
ನಮ್ಮದೇ ದನಿ ಅದರ ರೆಂಬೆರೆಂಬೆಯಲ್ಲೂ ಕುಳಿತ ಕೋಕಿಲದ ಉಲಿಯಲ್ಲಿ.

ನೀವೂ ಆಸ್ವಾದಿಸಿ ಅದರ ಘಮ, ಅದರ ಇಂಪು.
ಆಹ್ಲಾದದ ಕೆಂಡಸಂಪಿಗೆ ನಮಗಾಗಿ...