Tuesday, October 24, 2017

ಮಾಟ-ನೋಟ

ಎಲ್ಲ ನಮಿಸಿದರು
ಹಾಡಿ ಹೊಗಳಿದರು
ಮಣ್ಣ ಮೂರುತಿಯ ಮಾಡಿ ನೆನೆದರು
ಬದುಕಿನ ಕತ್ತಲೆಗೆ ಬೆಳಕಿನ ದಾರಿ ತೋರಿದ
ಜೀವವ ಎಷ್ಟು ಸ್ತುತಿಸಿದರೂ ಕಡಿಮೆಯೇ
ಎಲ್ಲ ಸರಿ
ಹುಡುಕಾಟದ ಬಯಲಿಗೆ
ಮೆಟ್ಟಿಂಗಾಲಿಡುವಾಗ
ತಿರುಗಿ ನೋಡದೆ ಎದ್ದು ನಡೆಯುವಾಗ
ಒಂದು ಮಾತು ಹೇಳಿ ಹೋಗಿದ್ದರಾಗಿತ್ತು
ಬೆಳಕು ಕಣ್ಣು ಚುಚ್ಚದೆ
ಮೆದುವಾಗಿ ಆಲಂಗಿಸಿಯೇ ಬಿಡುತ್ತಿತ್ತು.
ಇರಲಿ ಬಿಡಿ
ಕಲಿತದ್ದೆ ಅದಲ್ಲವೆ
ಸತ್ಯ ಕಠೋರ,
ಬೆಂಕಿ ಝಳ ಝಳ.
ಮಾತಿರದೆ ಎಸಳು ಮೊಗ್ಗು ಅರಳಿದೆ
ಬಿರುಬಿಸಿಲಿನಲ್ಲೆ ಹುಸಿನಗುವ ವಸಂತ-
-ನ ಎದೆಯಲ್ಲಿ ಮಾಗಿಯ ಇಬ್ಬನಿ ತಣ್ಣಗಿದೆ
ಶರದದ ಆಗಸದಲ್ಲಿ ನಲಿಯುವ ಬಿಳಿಮೋಡದ
ಒಡಲಲ್ಲಿ ಮಳೆಯ ಬೀಜ ಸುಮ್ಮಗಿದೆ
ಬದುಕು ಮಿಥ್ಯೆಯೆ ಹಾಗಾದರೆ
ಅಥವಾ ಮಾಯೆಯ ಮಾಟ?!
ನಾನು ಸುಮ್ಮನೆ ಏಳು ಸುತ್ತಿನ ಮಲ್ಲಿಗೆಯ ನೋಡುತ್ತಿರುವೆ
ಎಂಥ ಮಾಟ...ನೋಡುವವನೇ ಕರಗುವ ನೋಟ.