Friday, January 31, 2014

ಸೃಷ್ಟಿ ನಿಯಮ.

ನನ್ನ ಗ್ರಹಗತಿಗಳು ಹೇಗಿವೆ
ನೋಡಿ ಹೇಳೆಂದು
ಕೈಬಿಡಿಸಿ ನಿನ್ನ ಕೈಯೊಳಗಿಟ್ಟೆ.
ಅಂಗೈಯಲ್ಲೆ ತಾರಗೆಯೊಂದು ಬಿದ್ದಿರೆ
ಹೇಳಲಿ ನಾನಾದರೂ ಏನೆಂದು
ನೀನು ಮುಗುಳ್ನಗು ಬಿರಿದೆ.
ಓಹ್..
ಮಬ್ಬುಸಂಜೆಯ ಆಗಸದಿ
ಮೂಡಿದ ಬಿದಿಗೆಯ ಬಿಂಬ
ಒಂದರೆಗಳಿಗೆ
ಸುತ್ತಲ ಜಗತ್ತು ಫೇಡ್ ಆಯಿತು.

ಮಳೆಯೊದ್ದೆ ಹಾದಿಯುದ್ದಕೆ
ತೂಗಿತೊನೆಯುವ ಮರಮರಸಾಲು
ನೋವ ಮರೆತು ನಡೆನಡೆವ ಕಾಲು
ಕೆಂಪಿಮಣ್ಣಿನ
ಇದ್ದಿಲೊಲೆಯ ಮೇಲೆ
ನೊರೆನೊರೆಯಾಗಿ ಉಕ್ಕಿದ
ಬಿಳಿಬಿಳಿ ಹಾಲು
ಚಿತ್ರಿಸಿದಂತಹ
ಮಾತು

ದನಿಯೊಡೆಯದೆಯೆ ಮೀಟಿದ
ಬರಿಯ ಭಾವತಂತು
ಹೇಳಲಿ ಹೇಗೆ
ನಾನಾದರೂ ಈಗ ಏನು ಎಂತು?


ಅವತ್ತು
ಅಲ್ಲಿ
ಎಷ್ಟು ಪಯಣಿಸಬೇಕಿತ್ತೋ
ಇವತ್ತು
ಇಲ್ಲಿ ಅಷ್ಟೇ ನೆಲೆಯಾಗಬೇಕಿದೆ.

ಚಿಗುರು ಹಳದಿಯಾಗಬೇಕಿರುವುದೇ ಸೃಷ್ಟಿ ನಿಯಮ.

Thursday, January 30, 2014

ಹೀಗೇ ಒಂದೆರಡು...ಮಾತು.

ಕುಡಿದು ಕುಪ್ಪಳಿಸಿ
ಲೇಟಾಗೆದ್ದು ಸ್ವಾಗತಿಸಿದ ಹೊಸವರ್ಷದ
ಮೊದಲಲ್ಲೆ
ವೈಕುಂಠ ಏಕಾದಶಿ.
ಸಾವಿನ ಹೊಸ್ತಿಲಿನಾಚೆ ಒಂದು ಸೀಟು
ಕಾದಿರಿಸಿಕೊಂಡೇ
ಸಂಭ್ರಮಿಸಿಬಿಡೋಣ.
ಎಳ್ಳು ಬೆಲ್ಲ ಹಂಚಿ
ಒಳ್ಳೊಳ್ಳೆ ಮಾತಾಡಿ
ಒಳಿತು ಕೆಡುಕುಗಳ ಮಧ್ಯೆ ಗೆರೆಯೆಳೆಯದೆ..
ಬೇರೆ ಇಸವಿಯ ಪಥಕ್ಕೆ ಸೇರೋಣ.
ಸಮ್ಮೇಳನಗಳ ಟಾಕು (talk)
ಸಂಭ್ರಮಗಳ ಠೀಕು
ಇವೆಲ್ಲವನ್ನೂ ಹರಿದಾಡಿಸಿದ ಟ್ವೀಟು
ಒತ್ತಿ ಒತ್ತಿ ಕೊಟ್ಟ ಎಫ್.ಬಿ ಲೈಕು
ಪ್ರಿಂಟಾಗಿ ಬಂದ ದಿನಪತ್ರಿಕೆಯ
ಆನ್ ಲೈನು ಲಿಂಕು
ಆಹಾ ..ಸಮಾಜವೇ (social)
ಸೋ ರಿಯಲ್! ಮತ್ತು
ಕೆಲವೊಮ್ಮೆ.. ಸರ್ರಿಯಲ್!!
ಮಾಧ್ಯಮ ಪೋಷಿತ, ಪ್ರೇಷಿತ
ಜನ ಸಮೂಹದಿಂದೆದ್ದು
ಬರಬಹುದೆ
ಬಾಹುಬಲಿ
ಈ ಸಲ ಭರತನಿಗಾಗಿ!


ಎಷ್ಟೆಲ್ಲ ಕೆಲಸವಿದೆ
ಕಥೆ, ಕವಿತೆ, ಹಾಡು ಕರೆಯುತ್ತಿವೆ
ಮಕ್ಕಳೂ ಕಾಯುತ್ತಿದ್ದಾರೆ
ಮನೆಯೊಳಗೆ
ರಾತ್ರಿಯ ಮಮ್ಮು ತಿನ್ನಿಸಿ
ಗೋಗರೆದು ಮಲಗಿಸುವಷ್ಟರಲ್ಲಿ
ಬೆಳದಿಂಗಳಿನ ದಾಹವಡಗಿ
ಬೆನ್ನು ಹಾಸಿಗೆ ತಾಗುವ ಮೊದಲೆ
ಸುಖನಿದ್ದೆ.

ಎಷ್ಟೆಲ್ಲ ಕೆಲಸವಿದೆ.
ಒಂದಿಡೀ ವರ್ಷವಿದೆ.
ಆಮೇಲೆ.. ಇನ್ನೇನು
ಎಂದಿನಂತೆ
ಮತ್ತೊಂದು ವರ್ಷ ಬರುತ್ತದೆ..
ಆದರೂ
ಎದಿರುಗೊಳ್ಳುವವರೆಗೂ ಖಾತ್ರಿಯಿಲ್ಲ.
ಎಂದೇ
ಈ ಹಳೇವರುಷವನ್ನೇ ಬದುಕಿಬಿಡಲು.
ನಿರೀಕ್ಷೆ
ಹೊಸ ಹುರುಪು ತುಂಬಿದೆ..

ಅಷ್ಟಲ್ಲದೆ ಅನ್ನುತಾರೆಯೇ..
ನಿರೀಕ್ಷೆಯೆ ಪರಮಸುಖ! ಮತ್ತು ಸಖ.

ಒಂದೊಂದೇ ಒಗಟು...

ಹೇಳಿದ ಹಾಗೆ ಕೇಳದೆ ಇದ್ರೆ
ನಾನು ಹೋಗಿ ಬಿಡ್ತೀನಿ ನೋಡು..
ಊಮ್..... ಬೇಡಾ... ಅಮ್ಮ ಬೇಕೂ.
ಸರಿ ವಾಪಸ ಬಂದೆ, ಈಗ ಹಟ ನಿಲ್ಲಿಸು.
ಆತು.. ನಂಗೆ ಇದು ಬೇಕು.
ಹಾಕಮ್ಮಾ ಬೇಕು...
ಸರೀ...ಇರು ಒಂದ್ನಿಮಿಷ...
ಇದು ಮೊನ್ನಿನ ಮಾತುಕತೆ.

ಇವತ್ತು....

ಏ ಹಟಾ ಮಾಡ್ಬೇಡಾ ಇರು
ಪುಟ್ಟಾ ಏನು ಮಾಡ್ತಿದೀ
ಹೋಗು ಆಪೀಚ್ ಹೋಗು...
ಉಹ್..
ಇನ್ನು ಹೋಗಲೇ ಬೇಕಾಯ್ತಲ್ಲಾ
ನಾನು 
ಹೊರಟೆ..
ನೀನು
ಬೇಕು ಅಮ್ಮಾ ಬೇಕು ಅಂತ ಲಂಗ ಹಿಡಿದೆ.

ನಾಳೆ
ಇನ್ನೇನು ಕಾದಿದೆಯೋ.!?

ತೊದಲಲ್ಲಿ ಮೊದ ಮೊದಲು ಜೊತೆಗಿದ್ದು
ತೊಡರಲ್ಲಿ ಅಲ್ಲಲ್ಲಿ ಕೈ ಹಿಡಿದು
ಬೆಳೆ ಬೆಳೆಯುತ್ತಾ
ನನ್ನ ಕನಸಿನಿಂದ
ನಿನ್ನ ಕನಸಿಗೆ
ನೀನು ರವಾನೆಯಾಗುವ ಹೊತ್ತು
ಬರುವುದು ಬಲುಬೇಗ ಅಂತ ಗೊತ್ತು.
ಹೂವು ಅರಳಿದ ಮೇಲೆ
ಗಂಧ ಗಾಳೀ ಪಾಲು.
ನನ್ನ ಬೇರು ನೆಲದಲ್ಲೇ
ನಿನ್ನ ಚಿಗುರು ಗೊಂಚಲು ಆಕಾಶದಲ್ಲೇ.
ಮಕ್ಕಳು ನಮ್ಮವರು. ನಾವೇ ಅಲ್ಲ.

ನಾಳೆ...
ಇದ್ದೆನೋ ಬಿಟ್ಟೆನೋ ಗೊತ್ತಾಗದ ಹಾಗೆ ನಾನೂ
ಇರುವೆಯೋ ಇಲ್ಲವೋ ಗೊತ್ತಾಗದ ಹಾಗೇ ನೀನೂ
ಬದುಕಿಬಿಡುವುದು
ಎಂಬುದು ಸಾರ್ವಕಾಲಿಕ ಸತ್ಯ.
ಅದೇನೇ ಇರಲಿ
ಈಗ ಮಾತ್ರ ಕೆನ್ನೆ ಕೆನ್ನೆಗೆ
ಗಲ್ಲಕ್ಕೆ, ಮೂಗಿನ ತುದಿಗೆ
ಹಣೆಗೆ, ಕಣ್ ಕಣ್ಣಿಗೆ
ನೆತ್ತಿಗೆ ಒತ್ತಿ ಒತ್ತಿ
ಸರಪಣಿ ಮುತ್ತು.

ಅಮೋಘವರ್ಷ
[ಒಂದೂವರೆ ವರುಷದ ಅಮ್ಮುಶಿ ಅವನಮ್ಮನಿಗೆ ಅರ್ಥ ಮಾಡಿಸಿದ ಒಂದು ಒಗಟು.]