Thursday, February 20, 2014

ನೋಡದ ನೋಟ..

ಮಾಸ್ತರರ ಚೂಪು ನೋಟ
ಗೆಳತಿಯರಿಬ್ಬರ ನಗೆಚಾಟಿಕೆ ಮಾತ
ಕತ್ತರಿಸಿಬಿಟ್ಟಿತು
ತಮ್ಮನೊಡನೆ ಸುಖಾಸುಮ್ಮನೆ
ಕ್ಯಾತೆ ತೆಗೆದು ಕೂಗಾಡುತ್ತಿದ್ದ ಪುಟ್ಟ ಅಕ್ಕ
ಸಂಧ್ಯಾವಂದನೆಯ ಅಪ್ಪನ ಹಿರಿನೋಟ
ತೂರಿ..
ಮೆತ್ತಗೆ ಸುಮ್ಮನಾದಳು.
ವಸಂತ ಮೆಲ್ಲಡಿಯಿಟ್ಟ
ಮೈ ಹೊರಗೆ ತಿರುಗುವಾಗ
ಹರಿವ ಮೆಚ್ಚು ನೋಟಕ್ಕೆ
ತಲೆ ಕೆಳಗೆ ಹಾಕಿ ಸಿಗ್ಗು ಮೂಡಿತು
ಅತ್ತಿತ್ತ ಹರಿವ ಕಣ್ಣು ಸಿಕ್ಕಿಸಿ
ಹಿಡಿದ ಆ ಮೊದಲ ನೋಟ
ಹೇಳಬಹುದು ಇದಕ್ಕೆ ಮಾಟ.
ಗೊತ್ತಿತ್ತು ಇದು ಮೊದಲೆ
ಹೋಗಲಿಬಿಡು ಎಂದ ಅಮ್ಮನ ನೋಟ
ಕಣ್ಣೊರಸಿ ಅರಳಿಸಿದ ನೊಂದ ನೋಟಕ್ಕೆ
ಢೀ ಇಟ್ಟ ಭರವಸೆಯ ಪೂರ ನೋಟ
ಏರು ಹಾದಿಯ ಕತ್ತಲೆಗೂ
ಅಪ್ಯಾಯತೆ ತಂದಿಟ್ಟ ಅವನ ನೋಟ
ಮುಗ್ಧತೆಯ ತುಂಬಿ ತುಳುಕಿಸಿದ
ಪಾಪು ನೋಟ...
ಮುಚ್ಚುವುದಕ್ಕೆ ಚಣ ಮೊದಲು
ಮತ್ತೆ ಬಿಟ್ಟು ಎಂದೆಂದಿಗೂ ಮುಚ್ಚಿದ ಆ ನೋಟ,
ಅತ್ತ ಕಣ್ಗಳ ಒರೆಸಿ
ಮುತ್ತಿಕ್ಕಿ ಕತೆ ಹೇಳಿ ನಗಿಸಿದ ಅಜ್ಜನ ನೋಟ,
ಬದಿಯಿಂದ ನೀನು ನೋಡಿಯೇ ಒದ್ದಾಡುತ್ತಿರುವೆ
ಇನ್ನು ಎದುರಾ ಎದುರೆ ಇರುಕಿಸಿಕೊಂಡಿದ್ದರೆ ಗತಿಯೇನೆ ಎಂದ ಶಾಯರಿ ನೋಟ....
ಎಲ್ಲವನ್ನೂ ಒಂದೆಡೆ ಹಾಕಿ ತುಲಾಭಾರ ಮಾಡುತಿರುವೆ
ಉಂಹೂಂ
ಈ ಯಾವುದೂ
ಇವತ್ತು ಬೆಳಗ್ಗೆ
ನೋಡದೆ ಕಳಿಸಿಕೊಟ್ಟ
ಆ ನೋಟಕ್ಕೆ
ಎಳೆತಕ್ಕೆ
ಸಮನಾಗುತಿಲ್ಲ.
ಅದರ ಹರಿತವೇ ಬೇರೆ
ಅದು ಕತ್ತರಿಸುವ
ಮೂಲದ್ರವ್ಯವೇ ಬೇರೆ.
ಅದರ ಸಾಂದ್ರತೆಯೇ ಬೇರೆ.
ಸಧ್ಯ ಹೊರಟುಬಿಟ್ಟೆ ಎಂದು
ನಿಸೂರಾಗುವ ಮೊದಲೆ
ಹಿಡಿದ ಆ ಖಾಲಿಭಾವ
ಯಾವುದರಿಂದಲೂ ತುಂಬುವದಿಲ್ಲ.

ಗೊತ್ತು ನಿನಗೆ
ಅಮ್ಮ ಹೊರಟಿದ್ದಾಳೆ ಆಫೀಸಿಗೆ
ಏನೆ ಗೋಳ್ಕರೆದರೂ..
ಮರುಳು ಮಾಡಿ
ಕಣ್ಣು ತಪ್ಪಿಸಿ
ಹೋಗಿಯೇ ಹೋಗುವಳು
ನೋಡಿ ಕಣ್ತುಂಬಿಸಿಕೊಳ್ಳಲಿ ಏಕೆ
ಅನಿಸಿತೇ!!?

ಗೊತ್ತು ನನಗೆ-
ನೋಟವಿದೆ ಆಟಿಕೆಯ ಮೇಲೆ,
ನೋಟವಿದೆ ಹಾಡು ಪರದೆಯ ಮೇಲೆ,
ಕಾಣುತ್ತಿರುವುದು ಮಾತ್ರ ಬೇರೆಯೇ ಬೇರೆ.
ನೋಡದ ನೋಟವೂ
ಹೀಗೆ ಕಾಡುತ್ತದೆ 
ಎಂಬ ಅರಿವಲಿ
ಮನಸು ತತ್ತರ

ನಿರುತ್ತರ...

Tuesday, February 18, 2014

ವೈರುಧ್ಯ ವೈಶಿಷ್ಟ್ಯ

ಶುಕ್ಲ ಬಿದಿಗೆಯಲ್ಲಿ
ಮೂಡುವ ಬಿಂಬವೇ
ಕತ್ತಲಿಂದಲ್ಲವೇ
ನಿನ್ನ ಕಮನೀಯತೆಗೆ
ಆ ಮನೋಹರ ಹೊಳಪು!
ದಿನದಾಗಸದಿ ತೇಲಿಬಂದರೆ
ವರಕವಿಯ ಪದ್ಯಸಾಲಾದೀಯ
ಕತ್ತಲಿರಲಿ ಸುತ್ತಮುತ್ತೆಲ್ಲ

ಮಿನುಗುತಿರಲಿ ರಾತ್ರಿಯೆಲ್ಲ.