Monday, March 12, 2018

ಕವಿ ಮಿತಿ

ನೆಲ ಹೇಳಿತು
ಮುಗಿಲು ಕಿವಿಗೊಟ್ಟಿತು
ಮಧ್ಯದ ಜನಸಂಕುಲ ಗಾಬರಿಯಾಯಿತು
ಒಂದು ತುಂತುರು ಮಳೆ
ಮಳೆ ನಿಂತ ತಂಗಾಳಿ, ಹಕ್ಕಿ ಕುಕಿಲು
ಎಂದಿನ ಹಾಗೆ ಟ್ರಾಫಿಕ್ಕು, ಕೆಲಸ, ಶಬ್ಧ,
ತುಂಬಿ ತುಳುಕುವ ಸಾರಿಗೆ,ಆಸ್ಪತ್ರೆ, ಹೋಟೆಲು,
ಹನಿ ತುಳುಕದ ಹಾಗೆ ಎಚ್ಚರದ ಬಾಟಲು.

ಆಗಸ ಪಿಸುನುಡಿಯಿತು
ಭುವಿ ಕಿವಿಯಾಯಿತು
ಮಧ್ಯದ ಜನಸಂಕುಲ ಕುಮ್ಹಿಟಿಬಿದ್ದರು
ಆತಂಕ, ಸಾಶಂಕ, ದೇಗುಲಗಳಲ್ಲಿ ಪರಿಪರಿಯ ಅರ್ಚನೆ ತಳ್ಳಂಕ
ಮತ್ತೊಂದು ಸುರಿಮಳೆ
ತೊಳೆದ ಕೊಳೆ, ಮುರಿದು ಬಿದ್ದ ರೆಂಬೆ ಕೊಂಬೆ
ಪಕ್ಕದ ಮರದಲ್ಲಿ ಗೂಡು ಸಿದ್ಧಗೊಳ್ಳುತ್ತಿರುವ ಸಂಜೆ
ಬೆಳಕು ಚೆಲ್ಲಿದ ಪಾದಪಥ, ಕಿವಿ ತುಂಬುವ ಹಾರ್ನುಗೀತ
ಮತ್ತದೇ ಟ್ರಾಫಿಕ್ಕು, ಕಿಕ್ಕಿರಿದ ಸಿಗ್ನಲು,
ಉದ್ದ ಕ್ಯೂಭರಿತ ಸಾರಿಗೆ, ಆಸ್ಪತ್ರೆ, ಹೋಟೆಲು
ಒಂದೆರಡು ಹನಿ ತುಳುಕಿಯೂ ತುಳುಕದ ಬಾಟಲು.

ಮಧ್ಯೆ ಟೆಕ್ನಾಲಜಿ
ಪತ್ರ,ಮೆಸೇಜು,ಚಿತ್ರ, ಎಮೋಜಿ
ಎಲ್ಲ ಸ್ತಬ್ಧ.
ಶಬ್ಧದೊಳಗಣ ನಿಶ್ಯಬ್ಧ
ದೊಳಗೆ
ಅಮೃತವಾಹಿನಿಯೊಂದು
ಹರಿಯುತ್ತಲೆ ಇರಲಿ
ಎಂದಷ್ಟೆ ಬಯಸುವುದು
ಕವಿಯ ಭಾಗ್ಯ.

ಇರಬಹುದೆ...

ಜತೆಗಿಳಿದ ದಾರಿ ಬಿಟ್ಟು
ತಿರುಗಿ ಹೊರಟೆ
ಸಕ್ಕತ್ತಾಗಿ ಕೈಕೊಟ್ಲು ಗುರೂ
ಲೋಕವೆಂದಿತು.
ಎಲ್ಲಿ ಕೈಯಿಟ್ಟೆ, ಎಲ್ಲಿ ಬಿಟ್ಟೆ
ಎಲ್ಲಿ ಕಟ್ಟಿದೆ, ಎಲ್ಲಿ ಒಡೆದೆ ಅಂತ
ಅದಕ್ಕೇನು ಗೊತ್ತು
ಪ್ಚ್ ಪ್ಚ್ ಅನ್ನುತ್ತದೆ.


ಬಿದ್ದು ಪುಡಿಯಾಗುವವಳಿದ್ದೆ
ಒಂದು ಕಿರಿಬೆರಳು ಹಿಡಿದೆತ್ತಿ ನಿಲ್ಲಿಸಿತು
ನೋಡ್ದಾ.. ಗೊತಿತ್ತು ನಂಗೆ
ಎಂದು ಹಲವರಿಯಿತು ಲೋಕ
ಏನು ಸಿಕ್ಕಿತು ಏನು ದಕ್ಕಿತು
ಎದ್ದು ನಿಂತಿದ್ದು ಹೇಗೆ
ಅದಕ್ಕೇನು ಗೊತ್ತು
ಮುಸಿನಗೆ ನಗುತ್ತದೆ.


ಹೇಳಿದ ಮಾತು ಕೇಳಲಿಲ್ಲ
ದೊಡ್ಡವರ ದಾರಿ ಸಾಗಲಿಲ್ಲ
ಬೆನ್ನು ಹತ್ತದಿರದೆ ಪಾಪ
ಕಳೆಯಬಹುದೆ ಶಾಪ
ಹೊರೆಸುತ್ತದೆ ಲೋಕ
ಏನು ಕೇಳಿದೆ, ಎಲ್ಲಿ ಹೋದೆ
ಬೆನ್ನೇರಿದ್ದು ಏನು
ಇಳಿಸಿದ್ದು ಏನು
ಶಾಪವೋ ವರವೋ
ಅದಕ್ಕೇನು ಗೊತ್ತು
ಉಪದೇಶ ಮಾಡುತ್ತದೆ.


ಎಲ್ಲ ತಿರುವುಗಳೂ ಒಂದು ದಾರಿಯಲ್ಲಿ
ಒಟ್ಟಾಗಿ ಕರಗುವಾಗ
ಅನಿಸುತ್ತದೆ
ಹೊರಳುದಾರಿ, ಕಿರುಬೆರಳು,
ಎಡವು ನಡೆ, ಎದ್ದ ನಿಲುವು
ಶಾಪ, ಉಶ್ಯಾಪ, ಪಶ್ಚಾತ್ತಾಪ, ಪರಿಹಾರ
ಎಲ್ಲ ನಿಶ್ಚಿತವಾಗಿದ್ದು ಆ ನದೀಮೂಲದಲ್ಲೆ
ಇರಬಹುದೆ?!!
ಎಲ್ಲವೂ ಕರಗುವುದೆ ಒಂದೇ ನಿರಾಳದಲ್ಲಿ...?!
ಮಡಕೆಯೊಳಗಿನ ನೀರು ಸಮುದ್ರದೊಡನೆ ಸೇರುವಲ್ಲಿ!