Wednesday, December 30, 2009

ನೋವಿನೊಡಲಲಿ ನಲಿವಿನ ಹೂವು..

ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು, ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ,
ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ.
ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
http://kendasampige.com/article.php?id=2953

ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ,

ಪ್ರೀತಿಯಿಂದ,
ಸಿಂಧು

Thursday, December 24, 2009

ಗುಡಿಸಿಲ್ ಬಾಗಿಲ್ ಬೀಗದ್ ಹಂಗೇ ಮನಸಿನ್ ರಾಗಾನೂ...

ಉಪಯೋಗಿಸದೆ ಇಟ್ಟರೆ ಎಲ್ಲವಕ್ಕೂ ತುಕ್ಕು ಹಿಡಿಯುತ್ತದೆ ಅಂತ ಅದ್ಯಾವುದೋ ಕಾಲದಲ್ಲಿ ಕ್ಲಾಸಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾಗ ಕೇಳಿದ ನೆನಪು. ಇನ್ಯಾವತ್ತೋ ಈ ಬಗ್ಗೆ ಪುಟಗಟ್ಟಲೆ ಬರೆದು ೫ ಮಾರ್ಕು ಗಳಿಸಲು ಹೋರಾಡಿದ್ದ ನೆನಪು. ಬ್ಲಡ್ಡೀ ಕರ್ರೋಸನ್ ಅಂತ ಮಾಸ್ತರರೊಬ್ಬರು ವೀರಾವೇಶಾದಿಂದ ಗಂಟೆಗಟ್ಟಲೆ ಕೊರೆಯುವುದನ್ನ ಅಣಕಿಸಿ ಮುಸಿಮುಸಿ ನಕ್ಕ ನೆನಪು ಇಲ್ಲೇ ಬಗಲಲ್ಲಿ ಹಚ್ಚಗಿದೆ.

ಈ ಧಾವಂತದ ಬದುಕಿನಲ್ಲಿ – ಸುಮ್ಮನಿದ್ದರೆ ಪಕ್ಕದಲ್ಲಿ ಧಾವಿಸುವವನು ನಿನ್ನ ಮೇಲೆಯೇ ಹಾದು ಹೋಗುತ್ತಾರೆ ಅದಕ್ಕಾಗಿ ನೀನೂ ಧಾವಿಸುತ್ತಿರಬೇಕು ಎಂಬ – ನಿಯಮಗಳ ಬದುಕಿನಲ್ಲಿ ಮಾರ್ದವತೆಗೆ ತುಕ್ಕು ಹಿಡಿದಿದೆ.
ಈಗಷ್ಟೇ ಸಂಜೆಗತ್ತಲು ಕವಿಯುವ ಮೊದಲು ಮಿನರ್ವಾದಿಂದ ಹೊರಟು ಗಾಂಧಿಬಜಾರಿನವರೆಗೂ ಸಾವಧಾನದಿಂದ ಬಂದ ನಡಿಗೆಯ ನೆನಪು ಹಾಗೆ ಇಲ್ಲಿ ಆರದೆ ಕೂತಿದೆ.
ಇವತ್ತು ಸಂಜೆ ಇಲ್ಲೆ ಮನೆಯಾಚೆ ಇರುವ ಪಾರ್ಕಿಗೆ ಹೋಗಲು ಸಮಯವಿಲ್ಲ, ಹೋಗಲೇಬೇಕಿದ್ದರೆ ಬೈಕು ಬೇಕು. ನಡಿಗೆಯ ಆಮೆಓಟವನ್ನ ಹಿಂದೆ ಹಾಕಿ ಸಮಯವಿಲ್ಲದ ಮೊಲ ಓಡಿಹೋಗುತ್ತಿದೆ.
ಅದಕ್ಕೆ ಗೊತ್ತಿದೆಯಾ ಈ ಓಡುವಿಕೆಯ ಕೊನೆಗೆ ಎದ್ದು ನಿಲ್ಲಲೂ ತ್ರಾಣವಿರುವುದಿಲ್ಲ ಅಂತ?!

ಇವಳ ಮಿಂಚುಕಣ್ಣು ಅವತ್ತು ಮಿಂಚಿದ್ದರೆ ಅದಕ್ಕೆ ಅವನೇ ಕಾರಣ.
ಇವತ್ತು ಅವಳ ಮಿಂಚು ಕಣ್ಣು ಕುಕ್ಕುತಿದ್ದರೆ ಅದಕ್ಕೂ ಅವನೇ ಕಾರಣ.
ಎರಡು ಮಿಂಚುಗಳ ನಡುವೆ ಕಳೆದುಕೊಂಡಿದ್ದೇನು.
ಮಿಂಚು ಕಂಡು ರೋಮಾಂಚನಗೊಳ್ಳುವುದನ್ನೇ?
ಕಳೆದುಕೊಳ್ಳುವಿಕೆ ಮಾತ್ರ ಅಕಾರಣ!
ಹೊಸತೆಂದರೇನು? ಬರಿಯ ಚಿಗುರು ಮಾತ್ರವೇ? ಬೇರಲ್ಲಿರುವುದೆಲ್ಲ ಹಳೆಯದೇ ಹಾಗಾದರೆ?!
ಬದಲಾವಣೆಯ ಬದುಕಿನಲ್ಲಿ ಬದಲಾಗದೆ ಉಳಿಯುವುದೇನು?
ತೀರದ ಆಶೆಗಳೇ?

ಜೊತೆಜೊತೆಯ ಹೆಜ್ಜೆ, ಎಷ್ಟೇ ಹತ್ತಿರವಾಗಿಟ್ಟರೂ
ಕೊನೆಗೆ ಯಾಕೆ ಅನಿಸುತ್ತದೆ
ದೋಣಿಯೊಳಗೆ ನೀನೂ.... ಕರೆಯ ಮೇಲೆ ನಾನೂ...?!
ಎಲ್ಲ ಗೊಂದಲಗಳ ಉತ್ತರದ ಮ್ಯಾಪು ಚಾರಣದಲ್ಲಿದೆಯೇ?
ಆರೋಹಣದ ಹಾದಿಯ ಮೂಲ ಕಣಿವೆಯಲ್ಲಂತೆ ಹೌದೆ?
ಸೇತುವೆಯಾದ ಮಾತು ಗೋಡೆಯಾದ ಮೇಲೆ
ಬೇಸರಾಗಿದೆ ಮನಕೆ
ಇಂದಿನ ತುಂಬಾ ಅಂದಿನ ನೆನಕೆ.

ಮತ್ತೊಮ್ಮೆ ನೆನಪಿಸಿಕೊಳ್ಳಬಯಸುತ್ತೇನೆ. ಮತ್ತೆ ಮತ್ತೆ ಕನಸುತ್ತೇನೆ;
ಅಂದು – ಇರುಳಿನಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!

ಇಷ್ಟೆಲ್ಲ ಕನವರಿಸಿಯೂ, ಎಲ್ಲದರ ಮೇಲೆ ಬೇಸರಿಸಿಕೊಂಡೂ,
ತುಂಬು ಕೃತಜ್ಞತೆ ನನಗೆ,
ಅಂದಿಗಾದರೂ ದಕ್ಕಿತ್ತಲ್ಲ ಬೇಕಿದ್ದುದು,
ಇಂದಿಗೆ ನೆನಪಿಸಿಕೊಳ್ಳಲು ಉಳಿಯಿತಲ್ಲ.
ಇಷ್ಟೆಲ್ಲ ಮಾತನಾಡಿದೆ ನಾನು. ನಾನು ಅವಳಾಗಿಯೇ ಉಳಿದಿಲ್ಲ
ನೀನು ಹೇಗೆ ಅವನೇ ಆಗಿರುತ್ತಿ?!
ಅಲ್ಲ!!!

ಪುಣ್ಯವೆಂದರೆ ಇಬ್ಬರ ಬೆನ್ನಿಗೂ ಅದೇ ನೆಲ.
ನೋಡಲೊಂದೇ ಆಕಾಶ,
ಹಾದಿ ಮುಗಿದಿಲ್ಲ
ವಿಸ್ತರಿಸಿದೆ!
ಕತ್ತಲೆಯ ಕಾವಳದಲ್ಲಿ
ಅಮ್ಮನ ಮಿನುಗುಚುಕ್ಕಿ!
ನೆನಪಿನ ಎಣ್ಣೆ, ಅಕ್ಕರೆಯ ಹಳೆಬಟ್ಟೆ
ತಿಕ್ಕಿ ಒರೆಸಲು ಕಳೆಯದೆ ತುಕ್ಕು?

ಬರೆಯಲಿಕ್ಕೆಷ್ಟೋ ಇದೆ.
ಎಲ್ಲವನ್ನ ಬರೆದೆ ಅರುಹಬೇಕೆ
ಹೊಳವಿಗೂ ಅಷ್ಟಿರಲಿ!


(ತಲೆಬರಹದ ಸಾಲು ರಾಜರತ್ನಂ ಅವರ -ರತ್ನ ಬೇವಾರ್ಸಿ- ಕವಿತೆಯದು)

Tuesday, December 15, 2009

...

ಹಾಲಿನ ಕೂಪನ್, ಕೇಬಲ್ಲು,
ಫೋನು ಮತ್ತು ಕರೆಂಟು ಬಿಲ್ಲು,
ತರಕಾರಿ, ದಿನಸಿ,
ಮತ್ತಿನ್ಯಾವುದೋ ಮಾಡದೆ ಉಳಿದ ಕೆಲಸ
ಎಲ್ಲ ಹಾಗೆ ಇರಲಿ ಬಿಡು.
ಈಗ ಮೊದಲಿಂದ ಮಾತಾಡೋಣ
ಯಾವ ಅಜೆಂಡಾವೂ ಇಲ್ಲದೆ
ಅವತ್ತು ಸಂಜೆ ಗಿರಿಯ ಮೇಲೆ
ಮೌನದ ಚಿಪ್ಪೊಡೆದು
ಹೊರಬಂದ
ಮುತ್ತುಮಾತುಗಳ
ನೆನಹುಗಳ ನೇಯುತ್ತ -
ಇವತ್ತಿನ ಸಂಭಾಷಣೆಯ ಸಿಂಗರಿಸೋಣ,
ಯಾವ ಮಾತೂ ಆಡದೇ ಇದ್ದರೂ ನಡೆದೀತು,
ಏನೂ ಅಲ್ಲದ -
ಏನೋ ಆಗಬೇಕಿಲ್ಲದ
ಆ ಮುಗ್ಧ ಭಾವಕ್ಕೆ ಮತ್ತೊಮ್ಮೆ ಒಡಲ ನೀಡೋಣ
ಹೂವು, ಹಕ್ಕಿ,
ನೀರು, ನೆರಳು,
ಸಂಜೆಗೆಂಪು ಪಯಣದ ಹಾದಿಯ ಬದಿಗೆ
ಮತ್ತೆ ಸರಿಯೋಣ
ಕೆಲನಿಮಿಷಗಳ ಮಟ್ಟಿಗಾದರೂ..
ಹಾಗೇ ಇರಲಿ ಬಿಡು
ಕಟ್ಟದೆ ಉಳಿದ ಬಿಲ್ಲು.

Friday, December 4, 2009

ಝೆಹರ್ ಜೋ ತೂನೇ ದಿಯಾ ಥಾ ವೋ ದವಾ ಹೋ ಬೈಠಾ..

ಅವತ್ತು ಬದುಕೇ ಬೇಜಾರಾಗಿ ಅಳುತ್ತಾ ಕೂತುಬಿಟ್ಟಿದ್ದೆ. ಮಾತನಾಡಿಸಲು ಬಂದ ಗೆಳೆಯ ಗೆಳತಿಯರು ಏನು ಹೇಳಲಿಕ್ಕೂ ತೋಚದೇ, ಸುಮ್ಮನೆ ಹೆಗಲ ಮೇಲೊಮ್ಮೆ ಮೆತ್ತಗೆ ಒತ್ತಿ, ಕೆನ್ನೆ ತಟ್ಟಿ ಸಪ್ಪಗೆ ಹೊರಟು ಹೋಗಿದ್ದರು. ಅವರಿಗೆ ಗೊತ್ತಿತ್ತು ಈ ಕಣ್ಣೀರನ್ನು ಒರೆಸಬಾರದು ಹರಿಯಲು ಬಿಡಬೇಕು ಅಂತ. ಅದಕ್ಕೇ ಅಲ್ಲವಾ ನನಗೆ ಅವರೆಂದರೆ ಅಷ್ಟು ಪ್ರೀತಿ.
ಅಷ್ಟು ಪ್ರೀತಿಯ ಅವರೆಲ್ಲರಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದ ನಾನು ಆ ಹೊತ್ತಿನಲ್ಲಿ ಎಲ್ಲ ಕಳೆದುಕೊಂಡು ಮೋಹದ ಬೆಂಕಿಯಲ್ಲಿ ಬೂದಿಯಾಗುತ್ತಿದ್ದೆ. ಕಣ್ಣೀರು ಎಣ್ಣೆಯ ತಲೆಯ ಮೇಲೆ ಹೊಡೆದ ಹಾಗೆ ಉರಿಗಳನ್ನು ಎತ್ತರಕ್ಕೆಬ್ಬಿಸುತ್ತಿತ್ತು.
ನೀನು ನಿನ್ನ ಎಂದಿನ ಉಡಾಫೆಯ ರೀತಿಯಲ್ಲಿ ಹೊರಳು ದಾರ‍ಿಯಲ್ಲಿ ಹೊರಟು ನಿಂತಿದ್ದೆ. ಆ ದಾರಿಯ ಅನತಿ ದೂರದ ತಿರುವಲ್ಲಿ ಇನ್ಯಾವುದೋ ಮನಸ್ಸಿನ ಮಂಟಪ ಎದ್ದು ನಿಂತಿತ್ತು - ಹೊಸ ಕ್ಷಿತಿಜಗಳನ್ನ ತೆರೆದು ನಿಂತ ಹೊರಳು ದಾರಿ.ಹೀಗೆ ಇದ್ದಕ್ಕಿದ್ದಂಗೆ ನೀನು ಹೊರಟು ಹೋಗುತ್ತಾ ಇದ್ದರೆ ನನ್ನ ಎಲ್ಲ ಅವಲಂಬನೆಗಳ ಹಂದರವೂ ಕುಸಿದುಬಿದ್ದಿತ್ತು.
ಭೂಕಂಪವಾಗುವವರಿಗೂ ಎಚ್ಚರವಾಗಿದ್ದರೆ ಬೀಳುತ್ತಿರುವ ಮನೆಯಿಂದ ಓಡಿಬರಲು ಸಮಯವಿರುತ್ತದೇನೋ.ನಾನು ಪೆದ್ದಿ. ನಿನ್ನ ಮನದ ಒಳ ಮೂಲೆಯಲ್ಲಿ ಕೂತು ಬಾಗಿಲು ಹಾಕಿಕೊಂಡು ಕೀಲಿ ಕಳಕೊಂಡು ಬಿಟ್ಟಿದ್ದೆ. ಸಾವರಿಸಿಕೊಂಡು ಏಳುವಷ್ಟರಲ್ಲಿ ಚಂದದ ಉದ್ಯಾನ ಮರುಭೂಮಿಯಾಗಿಬಿಟ್ಟಿತ್ತು.ಬೆಳ್ಳಗೆ ಮಿನುಗುವ ಚಂದಿರ ಹೋಗಿ, ಉರಿದು ಬೀಳುವ ಉಲ್ಕೆ ಉಳಿದಿತ್ತು.

ನನ್ನ ಹುಚ್ಚುತನವೇ ನನ್ನ ಹುಚ್ಚಿಯನ್ನಾಗಿ ಮಾಡಿತು ಅಂದರೆ ಅಲ್ದೆ ಮತ್ತಿನ್ನೇನು ಅಂತೀಯ ನೀನು.
ನಿನ್ನದೇ ಹುಚ್ಚು ನನಗೆ ಎನ್ನುವ ನನ್ನ ಮಾತು ತುಟಿಯವರೆಗೆ ಬಂದಿದ್ದು ನಿನ್ನ ಕುಹಕದ ನಗೆಯನ್ನು ನೋಡಿ ಸಪ್ಪಗಾಗಿ ಬಂದ ಕಡೆಯೇ ಹೋಯಿತು.
ಹೋದರೆ ಹೋಗು ಮತ್ತೆ ಬರುತ್ತೀಯ ನೀನು ಅಂದುಕೊಂಡು ಸುಮ್ಮನುಳಿದೆ.
ಎಷ್ಟು ದೂರ ಹೋದೆ ನೀನು, ಕರೆದರೂ ಕೇಳಿಸದ ತೀರದ ಗುಂಟ ನಿನ್ನ ಹಾದಿ.
ಹೆಜ್ಜೆ ಬೆರೆಸಲೂ ಆಗದ ನನಗೆ ಉಳಿದದ್ದು ಒಳಗುದಿ.
ಸುತ್ತಲ ಜನ ಅಯ್ಯೋ ಪಾಪ ಎಂದು ಹೇಳುತ್ತಾ ನಕ್ಕರು. ಬೇಡವೆಂದರೂ ಮಾಡಿಕೊಂಡೆ ಈಗ ಅನುಭವಿಸು ಎಂಬ ಭಾವ ಮಾತಲ್ಲಿ ಹೊರಬರದ ಹಾಗೆ ನೋಡಿಕೊಂಡರು. ಅಷ್ಟು ಮುತುವರ್ಜಿ.
ಬಿದ್ದವಳ ಮೇಲೊಂದು ಕಲ್ಲು ಹಾಕದೆ ಇರುವುದು ಹೇಗೆಂದು ಸಂಕಟವಾಗಿ ನಗೆಮೊಗ್ಗುಗಳನ್ನೆಸೆದರು.
ನನ್ನ ತಪನೆಯ ಉರಿಯ ವರ್ತುಲ ಹೊಕ್ಕಲಾಗದ ಮೊಗ್ಗುಗಳು ತೊಟ್ಟಿನ ಸಮೇತ ಅರಳದೆಯೆ ಕರಕಲಾದವು.
ಒಳಗೆ ಉರಿ, ಹೊರಗೆ ಬೂದಿ, ಕಣ್ಣಲ್ಲಿ ಉರಿಯುವ ಕೆಂಡ. ಸಂಕಟದ ಸಾಗರಕ್ಕೆ ಒಂದೇ ನದಿ.
ತಣ್ಣಗೆ ಗಾಳಿ ಸುಳಿದಾಗಲೆಲ್ಲ ನನ್ನೊಳಗಿನ ಉರಿ ಮತ್ತಷ್ಟು ಕೆನ್ನಾಲಗೆ ಚಾಚಿತು.
ಹೀಗೆ ಬಿಟ್ಟು ಹೋಗಲೇಬೇಕೆಂದು ಇದ್ದವನು ನನ್ನನ್ನ ಕರೆದುಕೊಂಡು ಬಂದೆ ಯಾಕೆ. ಏನು ಕೇಳಿದರೆ ಏನು ಫಲ. ನಮ್ಮ ಮಧ್ಯೆ ಉಳಿದಿರುವುದು ನಿರ್ವಾತ! ನಾನುಹೇಳಿದ್ದು ನಿನಗೆ ಕೇಳುವುದಿಲ್ಲ. ಏನನ್ನಾದರೂ ಹೇಳುವುದು ನಿನಗೂ ಬೇಕಿಲ್ಲ.

ಒಬ್ಬ ಗೆಳೆಯ, ಒಬ್ಬ ಗೆಳತಿ, ಇನ್ನೊಬ್ಬ ತಮ್ಮ ನನ್ನ ಅಳಲಿನ ಹರಿವಿನುದ್ದಕ್ಕೂ ಸುಮ್ಮನೆ ನಡೆಯುತ್ತ ಬಂದರು. ನಾನು ಅಳು ನಿಲ್ಲಿಸಿ ಅವರೆಡೆಗೆ ನೋಡುವ ದಿನಕ್ಕೆ ಕಾಯುತ್ತಾ! ಇದು ಅರಿವಾದ ದಿನ ಒರೆಸಿಕೊಂಡ ಕಣ್ಣು ಮತ್ತೆ ತೇವಗೊಳ್ಳಲಿಲ್ಲ.

ಏನು ಗೊತ್ತಾ ?ನೀನು ಒಳ್ಳೆಯವನು. ನನ್ನ ಮೇಲೆ ನನಗೇ ನಂಬಿಕೆ ಬೆಳೆದಿದ್ದೇ ನೀನು ಬಿಟ್ಟು ಹೋಗಿದ್ದರಿಂದ. ಅವಲಂಬನೆಗಳನ್ನ ಮೀರಿದ ನನ್ನದೇ ಬದುಕನ್ನ ನಾನು ಕಟ್ಟಿಕೊಂಡಿದ್ದೇ ನೀನು ಇಲ್ಲದೆ ಹೋದದ್ದರಿಂದ.ನನ್ನ ಇವತ್ತಿನ ಖುಶಿಯ ಒರತೆಯೇ ನೀನು ಅವತ್ತು ಉಣಿಸಿದ ದುಃಖ. ನೀನೇನಾದ್ರೂ ಹಾಗೆ ಮಾಡದೆ ಇದ್ದಿದ್ದರೆ ಇವತ್ತು ನಾನು ಬರಿಯ ನೆರಳಾಗಿ ಅಷ್ಟೇ ಇರುತ್ತಿದ್ದೆ. ಸಧ್ಯ . ಇವತ್ತಿಲ್ಲಿ ಕಾರ್ತೀಕ. ವಿಷವೇ ಔಷಧಿಯಾಗುವುದನ್ನ ಗಝಲ್ಲುಗಳಲ್ಲಿ ಮಾತ್ರ ಕೇಳಿದ್ದೆ. ನಿನ್ನ ಕೃಪೆ. ಅದನ್ನೇ ಅನುಭವಿಸುತ್ತಿದ್ದೀನಿ.

ಕೃತಜ್ಞತೆಗಳೊಂದಿಗೆ
-ನವೀನ

ಕೊನೆಯ ಒಂದು ಮಾತು:
ನೀನು ಮೋಸ ಮಾಡಿದೆ ಎಂಬ ಬೇಸರವಿಲ್ಲ ನನಗೆ. ನೀನೂ ಮೋಸ ಮಾಡಿದೆಯಲ್ಲ ಎಂಬ ವಿಷಾದವಷ್ಟೇ.

Friday, November 27, 2009

ಬಚ್ಚಲ ರೊಚ್ಚು..

ಅವನಿಂದ ನೂರಾಅರವವತ್ನಾಲ್ಕಕ್ಕೂ ಹೆಚ್ಚು ಮನೆಯ ದೀಪಗಳು ನಂದಿದವು. ಅವನ ಯೋಚನೆಗಳು ಕ್ರೌರ್ಯದ ಪರಮಾವಧಿಯವು ಮತ್ತು ನೀಚ ಉದ್ದೇಶಗಳು. ಇದರ ಬಗ್ಗೆ ಯಾವುದೇ ಧರ್ಮ,ಜಾತಿ,ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಅಭಿಪ್ರಾಯವೂ ಒಂದೇ.
ಆದರೆ ಅದೇ ಅವನಿಂದ ನಾಡಿನ ಎಲ್ಲ ಮಾಧ್ಯಮಗಳ ಮಾರಾಟ ಮತ್ತು ಮೌಲ್ಯವರ್ಧನೆ ಆಗುತ್ತಿರುವುದು ಅಸಹ್ಯದ ಪರಮಾವಧಿ ಎಂಬುದು ನನ್ನ ಅನಿಸಿಕೆ.
ಅವನು ಈಗ ಕಟಕಟೆಯಲ್ಲಿದ್ದಾನೆ. ಅವನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡಿದೆ ಅಷ್ಟು ಖರ್ಚು ಮಾಡಿದೆ, ಇಟ್ಟುಕೊಳ್ಳುವುದೇಕೆ, ಕಲ್ಲು ಹೊಡೆದೋ ಗುಂಡು ಹೊಡೆದೋ ಕೊಂದುಬಿಡಬೇಕು ಎಂದು ಆವೇಶದಲ್ಲಿ ಯೋಚಿಸುವ ಮುನ್ನ ಹುತಾತ್ಮ ಮೇ.ಸಂದೀಪ್ ಉನ್ನಿ ಕೃಷ್ಣನ್ ಅವರ ಅಪ್ಪ ನೀಡಿದ ಉತ್ತರವನ್ನು ದಯವಿಟ್ಟು ಓದಿ ಮನನ ಮಾಡಿಕೊಳ್ಳಿ. [ನನಗೆ ಆ ನರಕೀಟದ ಹೆಸರನ್ನು ೨೪ ಸಲ ಬರೆಯಲು ಮತ್ತು ಓದಲು ಅಸಹ್ಯವಾದದ್ದರಿಂದ ಅವನ ಹೆಸರು ಬಂದಲ್ಲೆಲ್ಲ ಕಪ್ಪು ಬಣ್ಣ ಬಳಸಿದ್ದೇನೆ.]
ಈ ನರಹಂತಕನ ಮುಖ ನೋಡಬೇಕೂನಿಸುತ್ತಾ ನಿಮಗೆ ಅಂತ ನಮ್ಮ ಮಾಧ್ಯಮ ಪ್ರತಿನಿಧಿ ಶಿಖಾಮಣಿ ಮಾಡಿದ ಪ್ರಶ್ನೆಗೆ ಅವರು ಹೇಳಿದ್ದಿಷ್ಟು –
ಈ ಮಹಾನ್ ತಂದೆಯ ಯೋಚನೆಯನ್ನ ದೃಷ್ಟಿಕೋನವನ್ನ ಗೌರವಿಸುವುದು ಈ ಸಂದರ್ಭದಲ್ಲಿ ತುಂಬ ಸೂಕ್ತ.
ಎಷ್ಟು ಕೋಟಿಗಳೂ ನಾವು ಕಳೆದುಕೊಂಡ ಅಮೂಲ್ಯ ಜೀವಗಳಿಗೆ ಸಮನಲ್ಲ. ಈ ತರಹದ ಘಟನೆಗಳು ಮುಂದೆ ನಡೆಯದ ಹಾಗೆ ಜವಾಬ್ದಾರಿ ತೆಗೆದುಕೊಳ್ಳುವವರು ಮಾಡುತ್ತಿರುವ ಕೆಲಸ ಮಧ್ಯೆ ಅನಾವಶ್ಯಕ ಭಾವೋದ್ವೇಗದ ಆರೋಪಣೆಗಳು ಸಲ್ಲ.
ಆ ಕರಾಳ ದಿನ ಜೀವ ಕಳೆದುಕೊಂಡ ಮತ್ತು ಜೀವರಕ್ಷಣೆಗಾಗಿಯೇ ಜೀವತೆತ್ತ ಎಲ್ಲರ ನೆನಪಿಗೆ ತಲೆಬಾಗುತ್ತಾ,
ಪ್ರೀತಿಯಿಂದ
ಸಿಂಧು.
[ಮಾಹಿತಿ ಚಿತ್ರದ ಮೂಲ - ವಿಜಯಕರ್ನಾಟಕ ೨೬.೧೧.೦೯]

Monday, November 2, 2009

ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್

ರದನೋದಯ ಜ್ವರ ದಮ್ ರೋಟ್ ಮೇಲೆ ನಡೆಯುತ್ತಾ ಇದೆ. :)
ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ ತುತ್ತು ಇಡುವಾಗ ಬೆರಳು ಕಡಿದು ಬಿಡಬೇಕೇ..!!
ಟುಪ್ಪೂಗೆ ಹನ್ನೊಂದು ತುಂಬಿತು..!
ಸಣ್ಣದಾಗಿ ಜ್ವರ ಮತ್ತು ಆಗ ಈಗ ಲೂಸ್ ಮೋಶನ್ ಆಗ್ತಾ ಇದ್ರೂ, ದಮ್ರೋಟ್ ಮಾಡಿದ್ರೆ ತಿನ್ನದೆ ಹ್ಯಾಗಿರೋದು ಅಂತ ಚಪ್ಪರಿಸಿಕೊಂಡು ತಿನ್ನುತ್ತೆ ಈ ಪುಟ್ಟಗುಬ್ಬಿ ಈಗ. ಹನ್ನೊಂದು ಮಾಸಗಳುರುಳಿ ವರ್ಷದ ಹೆಜ್ಜೆಗಳು ಮೆತ್ತಗೆ ಮೂಡ್ತಾ ಇದೆ.
ಮರಿಗೆ ಕೈಬಿಟ್ಟು ನಡೆಯಲು ತವಕ, ನೋಟ ಸಕ್ಕತ್ತಾಗಿರುತ್ತಾದರೂ ಅಮ್ಮನಿಗೆ ತಲ್ಲಣ. :)

Tuesday, September 29, 2009

::ಸೃಷ್ಟಿ ಶುಭದಾಯಿನಿ::

::ಮಾತುಗಳನ್ನು ಮೀರಿದ ಬೆಡಗು::
ಬೆರಗು,ಹೊನಲು,ನಸು-ಬೆಳಗು,ಬೆಳದಿಂಗಳ ಮಿಶ್ರ ಮಾಧುರ್ಯಕ್ಕೀಗ 10 ತಿಂಗಳು!

Friday, September 25, 2009

Ground Reality hurts.. n its unfair world!

ಸಮಾನತೆ, ಸ್ವಾತಂತ್ರ್ಯ
ಸ್ವಾವಲಂಬನೆ
ಒಳ್ಳೆಯ ಉಕ್ತಲೇಖನದ ಪದಗಳು.
ಎಷ್ಟೇ ಸರಿಯಾಗಿ ಬರೆದರೂ
ಅವು ಪುಸ್ತಕದ ಮೇಲೆ ಮಾತ್ರ.
ಮಾತುಗಳಲ್ಲಿ ಬಂದರೂ
ಭಾಷಣಗಳಲ್ಲಿ ಮಾತ್ರ.
ಪದಗಳಲ್ಲಿ ಮೂಡಿದರೂ
ಪ್ರಶಸ್ತಿ ಪಡೆಯುವ ಕವಿತೆಗಳಿಗೆ ಮಾತ್ರ.
ಚಿತ್ರದಲ್ಲಿ ಬರಬೇಕಿದ್ದರೆ
ಕಲಾತ್ಮಕ ಸಿನಿಮಾಗಳಿಗೆ ಮಾತ್ರ.
ಬದುಕಿನ ಸ್ತರವೇ ಬೇರೆ
ಹೆಣ್ಣು ಯಾವತ್ತಿದ್ದರೂ ಹೊಂದಾಣಿಕೆಗೆ ಮಾತ್ರ.

Friday, August 28, 2009

ಅಶ್ರುತ ಗಾನ..

ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ
ಮೂಟೆ ಕಟ್ಟಿಟ್ಟ
ಆಹ್ಲಾದದ ಹಾದಿಯದು
ಪುಲ್ಲ ಕುಸುಮಿತ ದ್ರುಮದಲ ಶೋಭಿನೀ
ಹೊರೆಗೆಲಸದ ಕಟ್ಟೆಯಿಳಿದು
ಕಾಲು ಚೆಲ್ಲಿದ ಕೂಡಲೆ
ಮುತ್ತಿಡುವ ಆಶಾದಾಯಿನಿ

ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ
ಅನುಕೂಲಗಳ ಆತಂಕರಹಿತ
ಅನಾಹತ ಹೈವೇಗೆ ಬಂದಾಯಿತು
ಇಲ್ಲೇ ಸುದೂರದಿ
ನೀಲಿಗೆರೆಯ ಸುತ್ತಲ
ಹಸಿರು ಪದರದ ಹಾದಿಯ ಸಂಜೀವಿನೀ
ದೂರವೇನಿಲ್ಲ,
ಕಾಲಿಗೆ ದಕ್ಕುವುದಿಲ್ಲ,
ನಡುವೆಯಿರುವುದೀಗ
ದಾಟಿ ಹಾರಬಹುದಾದ ಕಿಟಕಿಯಲ್ಲ
ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!
ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ
ಹಿಂದೆ ತಿರುಗಿ ಹೋಗಬಹುದೆ?
ಅದರ ಗುಟ್ಟು ನನಗೆ ತಿಳಿಯದಲ್ಲ..!
ಕೂತು ಯೋಚಿಸಲು ಗಡಿಬಿಡಿ
ಕೊನೆಗೆ ಷರಾ ಹೋಗಲಿಬಿಡಿ..
ಆಕಡೆ ನೋಡದಿದ್ದರಾಯಿತು
ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ

ಆದರೂ...

ಈಗ ಇಲ್ಲದಿದ್ದರ ಕುರಿತು
ಕೊರಗಿ ನಲುಗುವ ಮೊದಲು
ಒಂದು ಕೃತಜ್ಞತೆ ಹೇಳಬೇಕಿದೆ,
ಇಲ್ಲಿಯವರೆಗೆ ನಿಲುಕಿದ್ದಕ್ಕೆ
ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ
ಕೇಳದೆಯೇ ಒಲಿದು ಬಂದದ್ದಕ್ಕೆ
ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ
ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ
ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?

ಸಂಕಟಕಳೆದು
ನಲಿವು ಮುಗಿದು
ಸ್ಥಿತಪ್ರಜ್ಞಯೋಗದಲ್ಲೂ
ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!

ನೀಲಾಂಬರದ ನಡುವಿನ ಚಂದಿರನ ಸೇರಲು ನಗುತ ಹೊರಟ ರೋಹಿಣಿ..

ಮಲ್ಲಿಗೆಯ ಪರಿಮಳದ ಹಾದಿ ಹಿಡಿದು ನಡೆದ ವೆಂಕಮ್ಮ ಕೆ.ಎಸ್.ನ ಅವರ ಬಗೆಗೆ ನನ್ನ ನುಡಿನಮನವನ್ನ ಕೆಂಡಸಂಪಿಗೆ ಪ್ರಕಟಿಸಿದೆ.
ನಿನ್ನೆ ಬುಧವಾರ ಬೆಳಿಗ್ಗೆ
ತನ್ನ ಹಾದಿ ಕಾಯುತ್ತ ಕೂತಿರಬಹುದಾದ
ಕವಿಚೇತನವನ್ನ ಸೇರಲು
ಅವರ ಮನೆಯೊಡತಿ ಹೊರಟು ಹೋಗಿದ್ದಾರೆ.

ಕಾವ್ಯಶ್ರೀ..ಯ ಹಿರಿಯಚೇತನಗಳನ್ನ ಕಳೆದುಕೊಂಡ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಬರಲಿ.
ಪ್ರೀತಿಯ ನಮನಗಳು ವೆಂಕಮ್ಮನವರಿಗೆ.

ಪ್ರೀತಿಯಿಂದ
ಸಿಂಧು

Wednesday, August 19, 2009

ಬರಿ ಬೆಳಗಲ್ಲೋ ಅಣ್ಣಾ...

ಪಾದರಕ್ಷೆಯೊಳಗಣ ಒದ್ದೆ ಮುದ್ದೆ ಪಾದ
ನೆನೆದು ತೋಯ್ದ ರಸ್ತೆಯ ಮೇಲೆ
ಕೊಡೆಯ ಕೆಳಗೇ ನಡೆದೂ
ಮೇಲುದದ ತುದಿಯಲ್ಲಿ ತುಂತುರು ಹನಿಗಳು
ಛೇ, ಬೆಳಗಿನ ಹೊಸ್ತಿಲಲಿ
ಹೀಗೆ ಮಳೆ ಹುಯ್ದರೆ
ಆಫೀಸಿಗೆ ಹೋಗುವುದು ಹೇಗೆ
ಎಷ್ಟು ಕಷ್ಟವಪ್ಪಾ ಬದುಕೂ...
ಥಂಡಿಯಲಿ ತುಟಿ ಸುತ್ತಿಸಿ ಒಳಗಿನ ಬಿಸಿಯನ್ನು
ಗಾಳಿಯಲಿ ಊದಿಬಿಟ್ಟ ಉಂಗುರಗಳನ್ನ
ನೋಡುತ್ತ ಕತ್ತು ಮೇಲೆತ್ತಿದರೆ..

ಬೀದಿಯಂಚಲಿ
ಮೋಡವೇ ತನ್ನೊಳಗೆ ಎಂಬಂತೆ
ಹನಿಯಿಡುತ್ತಿರುವ ಆಕಾಶಮಲ್ಲಿಗೆಯ ಮರ
ತೂಗಿಬಿದ್ದ ಬೆಂಡೋಲೆಹೂಗಳ ಗೊಂಚಲಲ್ಲಿ
ಪರಿಮಳವ ಹೊದ್ದು
ಇಳಿಯುತ್ತಿರುವ ಬನಿ
ಯಾರೂ ರಂಗೋಲಿಯಿಡದ
ಮುಖ್ಯರಸ್ತೆಯ
ಮೈಯ ತುಂಬ
ಚಿತ್ತಾರವಿಟ್ಟ ಬಿಳಿಬಿಳಿಹೂಗಳು
ಎಲೆಮರೆಯಲ್ಲಿ ಒದ್ದೆ ಪುಕ್ಕ
ಕೊಡವುತ್ತ ಆರ್ದ್ರವಾಗಿ ಕುಳಿತು
ಬೆಚ್ಚನೆ ರಾಗವ ಉಲಿಯುತ್ತಿರುವ ಹಕ್ಕಿ ಸಮುದಾಯ
ಬೇಡಿಕೆ, ಬೇಸರಗಳಿಲ್ಲದ ಸಹಜ ಸತ್ಯ ಬದುಕು

ಅದೇ ಒದ್ದೆಮುದ್ದೆ ಹಾದಿ,
ಮೈ ತೋಯಿಸುವ ಮಳೆ ಆಪ್ತವೆನಿಸಿ..
ಅಷ್ಟೇ ಅಲ್ಲ
ಕಾದಿರುವ ಬೆಚ್ಚನೆ ಕ್ಯಾಬು,
ಒಣಗಿ ಗರಿಗರಿಯಾಗಿರುವ ಆಫೀಸು ಕ್ಯೂಬು
ಎಲ್ಲ ನೆನಪಾದವು...
ಇದು ಬರಿ ಬೆಳಗಲ್ಲೋ ಅಣ್ಣಾ -
ಬೇಂದ್ರೆ ಅಂದರಂತೆ
ಹೌದೆನಲು ಮಾತು ಮರೆತು ನಿಂತೆ!

ಕಾರ್ಪೋರೇಟ್ ಮೌನದಲಿ
ಮರೆತ ಮಾತು ಆವಿಯಾಗುತ್ತಿದೆ
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ
ನೋಡಬೇಕು ಅಷ್ಟೆ!

Monday, August 3, 2009

ಹತ್ತುವುದೆಲ್ಲ ಇಳಿಯಲಿಕ್ಕೇ...!!?

ಏರು ಹಾದಿಯ ಬೆಟ್ಟಸಾಲಿನ
ನಿಬಿಡ ಕಾಡಿನ ಅಂಚಲಿ
ಹರಡಿ ನಿಂತ ಚಾಮರವ
ಹೊತ್ತ ಮತ್ತಿಮರದ ನೆರಳಲಿ
ನಿಂತು ನೋಡಲು
ಕಾಣಸಿಗುವುದು ದೂರಕಣಿವೆಯ
ಕಾಲುಹಾದಿ,..
ಹಸಿರ ಹುಲ್ಲಿನ ಮಧ್ಯೆ
ಬಳುಕಿ ಹರಿವ ಹೊನಲಿದೆ,
ಅಲ್ಲೆ ಸನಿಹದಿ
ಮೆಲ್ಲಹೊರಳುತ ದಾರಿ
ದೂರಕೆ ಸಾಗಿದೆ
ಬೆಟ್ಟತುದಿಯ ನೋಟಕೆ
ಕ್ಯಾಮೆರಾ ಕಣ್ಣಾಟಕೆ
ರಮಣೀಯ ಚಿತ್ರದ ಯೋಚನೆ
ದಾರಿಯೆಡೆಯಲ್ಲಿ ನಡೆದವರಿಗಷ್ಟೇ
ಗೊತ್ತು
ಚುಚ್ಚುವ ಮುಳ್ಳು, ಒತ್ತುವ ಕಲ್ಲು
ಹಳ್ಳದ ಉಸುಕು,
ಗುರಿಯಿರದ ಪಯಣದ ಯಾತನೆ....

ಇಲ್ಲಿ ದೂರದಿ
ಬೆಟ್ಟದೇರಲಿ
ತಂಪು ಮತ್ತಿಯ
ನೆರಳಲಿ
ಆ ಎಲ್ಲ ಯಾತನೆಗಳ
ತಿಥಿ ನಡೆದಿದೆ
ಊಟವಿಲ್ಲದ ಶ್ರಾದ್ಧ;
ಮನಸೋ
ಮರೆಯಬೇಕಿರುವುದನ್ನೆ
ನೆನೆಯಲು
ಮತ್ತೆ ಮತ್ತೆ ಬದ್ಧ;
ಮರೆಯಲೋ ನೆನಪಾಗಲೋ
ನೆನಪುಗಳಿಗೆ ನಡೆದಿವೆ
ತಂತಮ್ಮೊಳಗೇ ಯುದ್ಧ!

ಯುದ್ಧ ಮುಗಿದು
ಗಾಯಗಳ ನೆಕ್ಕುತ್ತಾ,
ಕಣ್ಣ ನೋಟವ ಕದಲಿಸಿ
ಬೆಟ್ಟಸಾಲಿನಲ್ಲಿ
ಆರೋಹಣ.
ಮತ್ತೆ ಮುಂದಿನ ತಿಥಿಗೆ
ನೆನಪುಗಳ ಅವರೋಹಣ..
ಹತ್ತುವುದೆಲ್ಲ ಇಳಿಯಲಿಕ್ಕೇ ಅಂತ ಇದಕ್ಕೇ ಅನ್ನುತ್ತಾರೇನೋ!

Thursday, July 16, 2009

ಸ್ನೇಹಿತನಿಗೆ...

ಕವಿಕಾಣ್ಕೆಯ ಸ್ನೇಹಿತನಿಗೆ...

ಕಾಲುಹಾದಿಯ ಪಯಣದಲ್ಲಿ
ನೆರಳು ಬಿಸಿಲ ಚಿನ್ನಾಟ;
ಎಲ್ಲೋ ನಿಂತು
ನಿಡಿದಾದ ಉಸಿರೆಳೆಯುವಾಗ
ನಿನ್ನ ನೆನಪಿನ
ಹೂವರಳಿದ ಗಂಧ
ಬಗ್ಗಿ ನೋಡಿ ಗಿಡವ ಹುಡುಕಲಾರೆ
ನಿಬಿಡ ಕಾಡು, ಪೊದೆ;
ದೂರವೆನಿಸುತ್ತಿದೆ ಆದರೂ
ಹತ್ತಿರವಾಗಿ ಸುಳಿಯುತ್ತಿದೆ ಗಂಧ
ಹೂವರಳಿದ ನೆನಕೆಗೇ
ಮೈಯೆಲ್ಲ ಮುಳ್ಳು..
ಮತ್ತೆ ಮುಂದೋಡುವ ಪಯಣ,
ಎಚ್ಚರ ಕನಸುಗಳ ನಡುವಣ
ದಿನದಿನದ ಗಾಣ
ಗೊತ್ತು ಇನ್ಯಾವುದೋ
ತಿರುನಲ್ಲಿ
ಬರಲಿದೆ
ನೆನಪಿನ ಬನದ ನಿನ್ನ ಗಂಧ ಗಾಳಿ!

ದೂರವ ಮೀರಿ,
ಮರೆವನು ಮೆಟ್ಟಿ,
ಹಾಯೆನಿಸುವಂತೆ
ತೀಡಿ ಬರುವ
ನಿನ್ನ ದೃಶ್ಯಕಾವ್ಯಕ್ಕೆ
ಮಧುರ ಸ್ನೇಹಕ್ಕೆ
ಆಭಾರಿ ಸಮುದ್ರೆಯ
ಕಣ್ಣ ಹನಿಗಳ ಕಾಣಿಕೆ
ನೆನಪಿನಲೆಗಳ ಮಾಲಿಕೆ..

Wednesday, July 15, 2009

ಅರ್ಥ - ಅಪಾರ್ಥ

" If you have built castles in the air, your work need not be lost;
that is where they should be.
Now put the foundations under them.."

ಹೆನ್ರಿ ಡೇವಿಡ್ ಥೋರೋ (ಥೋರು) ನ ಈ ಉಕ್ತಿ ನನ್ನನ್ನು ಸದಾ ಕಾಡಿದ, ಕಾಪಾಡಿದ ಸಾಲು.

ಕಾಡುವ ಸಾಲುಗಳನ್ನ ಬರೆದವರ ಬಗೆಗಿನ ಅರ್ಥ-ಅಪಾರ್ಥಗಳ ಕುರಿತು ನನ್ನ ಇತ್ತೀಚಿನ ಗ್ರಹಿಕೆಯನ್ನ ಕೆಂಡಸಂಪಿಗೆಯ ನನ್ನ ಅಂಕಣ ಲಾವಂಚದಲ್ಲಿ ಪ್ರಕಟಿಸಲಾಗಿದೆ. [http://kendasampige.com/article.php?id=2657]

ಸಮಯವಿದ್ದರೆ ಓದಿ, ಏನನ್ನಿಸಿತು ಹಂಚಿಕೊಳ್ಳಿ.

ಪ್ರೀತಿಯಿಂದ
ಸಿಂಧು

Thursday, July 2, 2009

ಕರುಣಾಳು ಬಾ ಬೆಳಕೆ..

ಸಂಜೆ ಕಾವಳ ಕವಿದಿದೆ
ದೂರದಿ ತೇಲಿಹ ಕರ್ಮುಗಿಲ ಮಾಲೆ
ಭುವಿಯ ಮೈಗೆ ಮೆತ್ತಿದೆ
ಇನ್ನೇನು ಮಳೆ ಬರಲಿದೆ..
ದಿನದ ಬಿನ್ನಹಗಳ
ಆಲಿಪನೆಂದು ನಂಬಿದವನ ಮುಂದೆ
ಎರಡು ನಂದಾದೀಪ
ಬತ್ತಿ ಸರಿಮಾಡಿ ಎಣ್ಣೆತುಂಬಿಸಿ
ಕಡ್ಡಿ ಕೊರೆದರು ಗೌರಮ್ಮ
ದೇವರ ಮುಂದೆ ಚೆಂಬೆಳಕು
ಹಚ್ಚಿದ ಮೊಗದ ಮೇಲೂ
ಪ್ರತಿಫಲಿಸಿ ಚೆಲ್ಲಿದ ಬೆಳಕು,
ಕಾವಳ ಸರಿಯಿತೆ ಹೊರಗೆ?!

ಸಮಾನತೆಯ ಬೇರಿನ
ಕಷಾಯ ಕುಡಿದವಳಿಗೆ
ಇರಿಸುಮುರಿಸು
ಅವರು ಹಚ್ಚಬಹುದೆ ದೀಪ
ಅತ್ತೆ ಸ್ವತಃ ಹುಣಿಸೆಹಣ್ಣು
ತಿಕ್ಕಿ ತೊಳೆದು ಇಟ್ಟ ದೀಪ !
ಸಂಜೆ ಕಾವಳ ಇಳಿದಿತ್ತು
ಮನಸಿನ ಒಳಗೆ;
ದೀಪದ ನಿಹಾರಿಕೆ ಹೊರಗೆ;
ದೇವರೆಡೆಗೆ.
ವಿಚಾರವೇನಿದ್ದರೂ ಮಾತಿಗೆ,
ಬರವಣಿಗೆಗೆ,
ಕೊನೆಗೂ ದೀಪದ ಸುತ್ತ ಕತ್ತಲೆ,
ಬೆಳಕು ಮಾತ್ರ ಬೆಳ್ಳಗೆ,
ಕಪ್ಪಿಡದೆ.. ತನ್ನ ಪಾಡಿಗೆ ತಾನಿದೆ..

ನಕ್ಕಳೊಬ್ಬ ಕಿನ್ನರಿ
ಹರಿಯಿತೊಂದು ಬೆಳಕ ಝರಿ
ಮನೆದೇವರನ್ನೆ
ಮಡಿಲಿಗೆ ತುಂಬಿಹೆನು
ದೀಪ ಹಚ್ಚಬಾರದೆ
ದೇವರಿಗೂ ಮೈಲಿಗೆಯೇ?!

ಹಬ್ಬಿದ ಕಾವಳ ಕರಗಿ
ಮೋಡಒಡೆದು ಮಳೆಯಾಗಿ
ಗೌರಮ್ಮನಲಿ
ಅಮ್ಮನದೇ ಬಿಂಬ
ಮನದ ಕಪ್ಪು ತೊಳೆದ ಬೆಳಕು
ಮತ್ತೆ ಮತ್ತೆ ಮಿನುಗಿ
ನಿತ್ರಾಣದಿ ಮೂಲೆಹಿಡಿದ
ವಿಚಾರದೆಳೆಯಲಿ
ಹೊಸ ಜೀವಸೆಲೆ.

Friday, June 12, 2009

ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ, ತುಂಬ ಸಂತಸ ನನಗೆ ನಿನ್ನ ಕಂಡು..

ಹೌದು ಮುಗಿಲಗಲದ ಕಣ್ಣಿನವಳೇ, ನೀನು ತಡವಾಗಿ ಬಂದೆ ಎಂಬ ಸೆಡವು ಎನಗಿಲ್ಲ. ನನ್ನ ಜೀವಕೆ ನೀನು ಬಂದ ಪರಿಯನು ನೆನೆದು ಮಾತು ಬರಹಗಳೆಲ್ಲ ಮೂಕವಾಗಿ, ಎದೆಯ ಬಡಿತದಲ್ಲಿ ಕವನದ ಛಂದಸ್ಸು ತುಂಬುತ್ತಿದೆ. ನೀನು ಬಂದಿದ್ದರಾಗಿತ್ತು ಅಂತ ಮನಸ್ಸು ಬಯಸಿದ್ದು ಹೌದಾದರೂ, ನೀನೆ ಬರಬಹುದು ಅಂತ ಗೊತ್ತಿರಲಿಲ್ಲ. ಎಷ್ಟೇ ಒಳ್ಳೆಯವನೇ ಆದರೂ ಎಡವಟ್ಟನಂತೆ ಇರುವ ನನ್ನ ಬದುಕಿನ ಬಯಲಿಗೆ ಬೆಳದಿಂಗಳಂತೆ ಹರಿದು ಬಂದ ಹುಣ್ಣಿಮೆಯೇ ನಿನ್ನ ಬೆರಳಳತೆ ಅಂದಾಜು ಮಾಡಲಾಗದೆ ಅಮ್ಮನ ಬೆರಳಿನಳತೆಯ ಉಂಗುರ ತಂದಿದ್ದಕ್ಕೆ ದಯವಿಟ್ಟು ಕ್ಷಮಿಸು.
ನಮ್ಮನೆಯ ಹೊಸಿಲಕ್ಕಿ ದೂಡಿದ ಕೆಲವೇ ದಿನಗಳಲ್ಲಿ ನಿನ್ನನ್ನು ದಪ್ಪಗೆ ಮಾಡುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತೇನೆ.

ನಿನಗೆ ತಿಳಿನೇರಳೆ ಬಣ್ಣ ಇಷ್ಟ ಅಂತ ಗೊತ್ತಾದಾಗಿನಿಂದ ನಾನು ತಗೊಳ್ಳುತ್ತಿರುವ ಎಲ್ಲ ಟೀಶರ್ಟ್ ಗಳೂ ಹೆಚ್ಚು ಕಡಿಮೆ ಅದರದ್ದೇ ಶೇಡಿನದ್ದು.ನಿನ್ನ ಜಡೆ ಹರಡಿದ ಬೆನ್ನು ನಿಮ್ಮನೆಯವರು ಕಳಿಸಿದ ಫೋಟೋದಲ್ಲಿ ಕಾಣಿಸದೇ ಇದ್ದರೂ, ಹುಣ್ಣಿಮೆಯ ಹಾಲು ಹರಿದಂತಹ ನಗು ಮಾತ್ರ ನನ್ನನ್ನ ಫಿದಾ ಮಾಡಿದ್ದು ಹೌದು. ಆಮೇಲೆ ದಿನಾ ರಾತ್ರೆ ಜೀಟಾಕ್ ಕಂಡುಹಿಡಿದ ಗೂಗಲ್ ಟೀಮನ್ನು ನೆನೆಸಿಕೊಂಡು ದೀಪ ಹಚ್ಚಿಟ್ಟೇ ಲ್ಯಾಪ್ಟಾಪ್ ಆನ್ ಮಾಡುತ್ತಿದ್ದೇನೆ. ದೇವರ ಮುಂದೆ ಕೈಮುಗಿಯಲು ಸೋಮಾರಿತನ ಮಾಡುವ ಈ ನನ್ಮಗ ಅದ್ಯಾಕೆ ದೀಪ ಹಚ್ಚಿಡುತ್ತಾನೆ ಅಂತ ಅಮ್ಮ ಸುಡೊಕು ಬಿಡಿಸುವುದಕ್ಕಿಂತ ಜಾಸ್ತಿ ತಲೆಕೆಡಿಸಿಕೊಂಡಿದಾಳೆ. ಅವಳಿಗೇನು ಗೊತ್ತು ನಮ್ಮ ನೆಟ್ಸಂಚಾರ, ಸಮಾಚಾರ.. ಅದೆಷ್ಟೇ ಹಳೇ ಕಾಲದವಳು ಅಂದುಕೊಂಡರೂ, ಸೈಲೆಂಟ್ ಮೋಡಿನ ನನ್ನ ಮೊಬೈಲಿನ ದೀಪ ಮಿನುಗಿದ ಕೂಡಲೆ ಅಮ್ಮನ ಕುಡಿಗಣ್ಣು ಮಿಂಚುತ್ತದೆ. ಅವಳಿಗೆ ಗೊತ್ತು ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪಿನವರು ಕರೆಮಾಡುತ್ತಿದ್ದಾರೆ ಅಂತ.

ನಿನ್ನ ಜೊತೆ ಚಾಟ್ ಮಾಡುವಾಗಲೆಲ್ಲ ಬರೀ ಸ್ಮೈಲಿಗಳೇ ತುಂಬಿಕೊಂಡು, ಪೂರ್ತಿ ಬರೆಯಲು ಅರ್ಜೆಂಟಾಗುವ ಅರ್ದಂಬರ್ಧ ಕಂಗ್ಲೀಶು ಕುಟ್ಟಿಕೊಂಡು ಅವತ್ತವತ್ತಿನ ಎಮೋಟ್ ಐಕಾನ್ಸ್ ಮಾತ್ರ ಹೊರಬರುತ್ತವೆ.
ಏನಾದರೂ ಮಾಡಿ ಕನ್ನಡಪಂಡಿತರು ಬೆತ್ತದ ಪೆಟ್ಟು ಕೊಟ್ಟು ಕಲಿಸಿದ ವರ್ಣಮಾಲೆಯನ್ನ ಉಪಯೋಗಿಸಿ ಕನಸಿನ ಬಣ್ಣಗಳನ್ನ ನನಸಿನ ಕ್ಯಾನ್ವಾಸಿನಲ್ಲಿ ಹರಡೋಣ ಅಂತ ಕೂತುಕೊಂಡಿದೀನಿ. ನನಗೇ ಗೊತ್ತಿಲ್ಲದಂತೆ ಚಿಕ್ಕವನಿದ್ದಾಗಿಂದ ಕೇಳಿ ಬೆಳೆದ ಕವನಗಳು ಭಾವಗೀತಗಳು ಪ್ರತೀ ಭಾವನೆಯ ಸೊಲ್ಲಿಗೂ ಪಲ್ಲವಿಯಾಗುತ್ತಿದೆ. ಓದುವ ನಿನಗೆ ಹೊಸಲೋಕದ ಕನಸಿನ ಹೂಗಳ ದಾರಿ ಘಮ್ಮಂತ ತೆರೆದುಕೊಳ್ಳುವ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ನಾನು ಬರೆದಿದ್ದೆಲ್ಲ ನಿನ್ನ ಮನಸ್ಸಿನಲ್ಲಿ ನಲ್ಮೆಯ ಬನಿಯಿಳಿಸಿದರೆ ಅದರ ಕ್ರೆಡಿಟ್ಟು ಭಾವಗೀತಗಳ ಕ್ಯಾಸೆಟ್ಟು ತಂದು ಕೇಳಿಸುವ ಅಮ್ಮನಿಗೂ, ನರಸಿಂಹಸ್ವಾಮಿಯವರ ಮಲ್ಲಿಗೆಯ ಮಾಲೆಯನ್ನು ಆರಿಸಿ ಆರಿಸಿ ಓದಿಸಿದ ಅಣ್ಣನಿಗೂ ಸಲ್ಲುತ್ತದೆ.

ನಿನ್ನ ಪ್ರಸ್ತಾಪ ಬರುವ ಒಂದು ವಾರ ಮುಂಚೆ ನಾವು ಸ್ನೇಹಿತರೆಲ್ಲ ಸೇರಿ ಮೂರು ದಿನ ಸುತ್ತಾಟಕ್ಕೆ ಹೋಗಿದ್ದೆವು.ನಮ್ಮ ಮೊದಲ ತಾಣ ಅಯ್ಯನಕೆರೆ ಅಂತ. ಸಕ್ಕರೆ ಪಟ್ಣದ ಮುಖ್ಯರಸ್ತೆಯಿಂದ ಒಂದ್ನಾಲ್ಕು ಕಿ.ಮೀ. ಒಳಗಿರುವ ಈ ಕೆರೆ ಯಾರೋ ರಾಜರ ಕಾಲದಲ್ಲಿ ಕಟ್ಟಿಸಿದ್ದು. ಸುತ್ತಮುತ್ತಲಿನ ಪುಟ್ಟ ಕೆರೆಗಳ ನೀರು ಕೋಡಿ ಬಿದ್ದು ಈ ಕೆರೆಗೆ ಬಂದು ತುಂಬಿ ನಂತರ ಕೋಡಿ ಬಿದ್ದು ಹೊಳೆಯಾಗಿ ಹರಿಯುತ್ತದೆ. ಸುತ್ತ ಮುತ್ತಲ ಹತ್ತಿಪ್ಪತ್ತು ಊರುಗಳಿಗೆ, ಗದ್ದೆ ತೋಟಗಳಿಗೆ, ಕುಡಿಯುವ ನೀರಿಗೆ ಆಸರೆಯಾಗಿ ಒದಗಿಬಂದ ಕೆರೆ.ನಾವು ಹೋಗಿದ್ದು ನವೆಂಬರಿನ ಕೊನೆಯಾದ್ದರಿಂದ ನೀರು ತುಂಬಿ ಕೆರೆ ಸಮುದ್ರದ ಪುಟ್ಟ ಪ್ರತಿಕೃತಿಯಂತೆ ಕಾಣುತ್ತಿತ್ತು.ದಂಡೆಗೆ ಅಲೆಗಳು ಅಪ್ಪಳಿಸುತ್ತಿದ್ದವು.ಕೋಡಿ ಬೀಳುವ ಕಟ್ಟೆಯ ಮೇಲೆ ನೀರು ತೆಳ್ಳಗೆ ದಾವಣಿಯಂತೆ ಆವರಿಸಿ ಕೆಳಗೆ ಧಾರೆಯಾಗುತ್ತಿತ್ತು.ನಾವೆಲ್ಲ ಕೈಕೈ ಹಿಡಿದು ಕೋಡಿದಂಡೆಯನ್ನ ನೀರಿನಲ್ಲಿ ಕಾಲದ್ದಿ ದಾಟುತ್ತಿದ್ದಾಗ ಗೆಳತಿಯೊಬ್ಬಳು ಮೇಲೆ ನೋಡಿ ಅಂತ ಕೂಗಿಕೊಂಡಳು ನೋಡಿದರೆ ಬೆಳ್ಳಕ್ಕಿಗಳು ದೇವರ ರುಜುವಿನಂತೆ ವೀವೀವೀಯಾಗಿ ನೀಲಿಯೆಂದರೆ ನೀಲಿಯಾಗಿ ಕಾಣುವ ಆಕಾಶದಲ್ಲಿ ಹಾರಿ ಹೋಗುತ್ತಿದ್ದವು. ನಿಮ್ಮನೆಯಲ್ಲಿ ನೀನು ಇಷ್ಟಪಟ್ಟು ಬೆಳೆಸಿರುವ ಭಟ್ಕಳ ಮಲ್ಲಿಗೆಯ ಬಿಳುಪಿನೊಂದಿಗೆ ಸ್ಪರ್ಧೆ ಇಟ್ಟರೆ ಬೆಳ್ಳಕ್ಕಿಯೇ ಗೆಲ್ಲುತ್ತದೆ. ಹಿನ್ನೆಲೆಗೆ ಅಯ್ಯನಕೆರೆಯ ಮೇಲೆ ಕಾಣುವ ನೀಲಿಯೇ ಇರಬೇಕಷ್ಟೇ. ನೀನು ನಮ್ಮನೆಯಲ್ಲಿ ಎಲ್ಲರ ನಲ್ಮೆಯಲ್ಲಿ ನೆಲೆಗೊಂಡ ಮೇಲೆ ಒಂದಿನ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ. ರಾತ್ರಿ ಲೇಟಾಗಿ ಇಲ್ಲಿಂದ ಹೊರಟರೆ, ಬೆಳಗ್ಗಿನ ಬಿಸಿಲು ರಂಗೋಲಿ ಇಡುವುದರೊಳಗೆ ಅಲ್ಲಿರುತ್ತೀವಿ. ಯಾವುದೋ ಕಾಲದ ರಾಜ ಶಿಸ್ತುಬದ್ಧವಾಗಿ ಕಟ್ಟಿಸಿದ ಈ ಕೆರೆ ಇಂದಿಗೂ ಅದೇ ಅಚ್ಚುಕಟ್ಟಲ್ಲಿ ಉಳಿದುಕೊಂಡು ಸಾವಿರಾರು ಜನರಿಗೆ ಜೀವಸೆಲೆಯಾಗಿದೆ. ದಾರಿಯಲ್ಲಿ ಸಿಕ್ಕ ಹಳ್ಳಿಯವ ಹೇಳುತ್ತಿದ್ದ.ಹೂಳು ತೆಗೆಸುವುದು ಸರ್ಕಾರದ ಕೆಲಸವಾದಾಗಿನಿಂದ ಅದು ದೇವರ ಕೆಲಸವಾಗಿ, ಈಗೀಗ ಬೇಸಿಗೆಯಲ್ಲಿ ನೀರಿಗಿಂತ ಹೂಳೇ ಇರುತ್ತದೆ ಅಂತ. ನಾವೇ ಹೊಸದಾಗಿ ಕಟ್ಟಿಸುವುದಿರಲಿ, ಇದ್ದಿದ್ದನ್ನೂ ಉಳಿಸಗೊಡದೆ ಹೋಗುತ್ತೀವಲ್ಲ ಈ ಬಗ್ಗೆ ಭಾರೀ ಬೇಸರ ನನಗೆ. ನಿಮ್ಮ ಮನೆಯ ಹಿತ್ತಲಲ್ಲಿ ಇಂಗುಗುಂಡಿಯನ್ನ ನೋಡಿ ಮನಸ್ಸಿಗೆ ನೆಮ್ಮದಿಯಾಯಿತು. ಅದನ್ನು ನೀನೂ ನಿಮ್ಮಪ್ಪ ಸೇರಿ ಗುಂಡಿ ತೋಡಿ, ಇಟ್ಟಿಗೆ ಇಟ್ಟು ಕಟ್ಟಿದಿರಿ ಅಂತ ಕೇಳಿ ಆ ನೆಮ್ಮದಿಗೆ ಗರಿ ಮೂಡಿದೆ. ನಾವಿಬ್ಬರೂ ಇನ್ನೂ ಏನೇನೋ ಮಾಡುವುದರ ಬಗ್ಗೆ ಯೋಚಿಸಬಹುದಲ್ಲಾ ಅಂತ ಸಂತಸವಾಗಿದೆ. ಅದಕ್ಕೇ ಹೇಳಿದ್ದು ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ ಅಂತ. ನನ್ನ ನೆಚ್ಚಿನ ಹಾಡು ಕೂಡ ನೀನು ಮೊದಲು ಕಲಿತ ಕೆರೆಯ ನೀರನು ಕೆರೆಗೆ ಚೆಲ್ಲಿ..

ಯಾವುದಕ್ಕೂ ಬೆಳಗಿನ ತಂಪು ನನ್ನ ಪತ್ರದಲ್ಲಿ ಇಳಿಯಲಿ ಅಂತ ಬೆಳಿಗ್ಗೆ ಮುಂಚೆ ಕೂತ್ಕೊಂಡು ಬರೀತಾ ಇದೀನಿ. ಈಗಷ್ಟೇ ಸೂರ್ಯ ತನ್ನ ಒಲವುಬಲೆಗಳನ್ನ ಹೊರಗಿನ ಪುಟ್ಟಹಿತ್ತಲಿನ ಎಳೆ ಮೊಗ್ಗುಗಳ ಮೇಲೆಲ್ಲ ಸುಳಿಯುತ್ತಿದಾನೆ. ನನ್ನ ಕಿಟಕಿಯ ನೇರಕ್ಕೆ ಇರುವ ಗಂಟೆ ದಾಸವಾಳದ ಮೊಗ್ಗಿಗೆ ಬಾಯಿಟ್ಟು ಕೆಂಪುಕುತ್ತಿಗೆಯ ಉದ್ದಕೊಕ್ಕಿನ ಪುಟ್ಟ ಹೂಗುಬ್ಬಿ ಹಕ್ಕಿ,ಬಾಯಿಟ್ಟು ರಸ ಹೀರುತ್ತಾ ಇದೆ. ನನಗೆ ಫೋಟೋ ತೆಗೆಯುವುದೆಂದರೆ ಅಷ್ಟಕ್ಕಷ್ಟೇ.ನೀನು ಇಲ್ಲಿಯೇ ಇರುತ್ತೀಯಲ್ಲಾ ಆಗ ಗಮನಿಸು. ಒಂದು ಅಚಾನಕ್ ಮಳೆ ಬಂದು ಹೋದ ರಾತ್ರಿಯ ಮರುಬೆಳಗ್ಗೆ ಅರಳುವ ಮೊಗ್ಗಿಗೆ ಈ ಹಕ್ಕಿ ಗ್ಯಾರಂಟಿ ಬರುತ್ತದೆ. ಆಗ ನೋಡಬಹುದಂತೆ.
ಈಗ ಗೊತ್ತಾಗುತ್ತಿದೆ ಹಕ್ಕಿ‌ಇಂಚರವೂ ಮತ್ತು ಬೆಳಗಿನ ತಂಪೂ ಮನಸ್ಸಿಗೆ ಏನು ಜಾದೂ ಮಾಡುತ್ತದೆ ಅಂತ.ಒಂದ್ ಹತ್ತು ನಿಮಿಷ ನನಗೆ ಏನೂ ಬರೆಯಬೇಕು ಅಂತಲೇ ಅನ್ನಿಸಲಿಲ್ಲ. ಆ ಪುಟಾಣಿಯ ರಸಹೀರುವಿಕೆಯನ್ನೇ ಗಮನಿಸುತ್ತಿದ್ದೆ. ಈಗ ಮನಸ್ಸು ನಾನೇ ರಸ ಕುಡಿದ ಅನುಭೂತಿಯಲ್ಲಿ ತೇಲುತ್ತಿದೆ.

ಗಾಳಿಗೆ ತೂಗುವ ಎಲೆಯ ನವಿರಿನ ಹಾಗೆ ಆವಿರ್ಭವಿಸಿ ನನ್ನ ಮನಸ್ಸಿನಲ್ಲಿ ಮೋಹ ಉಲ್ಬಣಿಸುವಂತೆ ಮಾಡಿದವಳೇ ಈಗ ನಾನು ಕಾಲೇಜಿಗೆ ಹೊರಡಲು ರೆಡಿಯಾಗಬೇಕಿದೆ. ಇವತ್ತು ಸೈಕೋ‌ಅನಾಲಿಸಿಸ್ ಮಾಡುವ ಹೊಸ ಪ್ರಾಯೋಗಿಕ ಅಭ್ಯಾಸ ಮಾಡಿಸುತ್ತೇನೆ ಅಂತ ವಿದ್ಯಾರ್ಥಿಗಳಿಗೆ ಹೋದವಾರವೇ ಹೇಳಿಟ್ಟಿದ್ದೆ.ಎಂದಿಗಿಂತ ಸ್ವಲ್ಪ ಮೊದಲೇ ಹೋಗಬೇಕು.ಇವತ್ತಿಗೆ ಈ ಪುಟ್ಟ ಪತ್ರ ಪೋಸ್ಟ್ ಮಾಡಿರುತ್ತೀನಿ. ಮುಂದಿನವಾರ ಪ್ರಬಂಧವನ್ನೇ ಕಳಿಸುತ್ತೇನೆ.ಓದಲು ಸಮಯಾವಕಾಶ ಮಾಡಿಕೊಂಡಿರು.

ಕ್ಲ್ಶಾಸಿನಲ್ಲಿ ಏನಾದರೂ ಯಡವಟ್ಟಾದರೆ ಇರಲಿ ಅಂತ ನಿನ್ನ ಮೋಹಕ ಮುಗುಳ್ನಗೆಯ ಮ್ಯಾಕ್ಸಿ ಪ್ರಿಂಟ್ ತೆಗೆದಿಟ್ಟುಕೊಂಡಿದೀನಿ. ಹುಡುಗರು ನನ್ನ ಎಡವಟ್ಟು ನೋಡಿ ಹೋ ಅಂತ ಕೂಗಿದ ಕೂಡಲೆ ಈ ಫೋಟೋ ಟೇಬಲ್ ಮೇಲಿಟ್ಟು, ಚಂದನ್ ಸಾ ಬದನ್..ಹಾಡಿನ ಚರಣವನ್ನು ಹಾಡಲು ರೆಡಿಯಾಗಿದೀನಿ. ಓಹೋ,ಈ ಲೆಕ್ಚರರ್ ನನ್ಮಗನೂ ನಮ್ ಫುಟ್ ಪಾತಿಗೇ ಬಂದವ್ನಲ್ಲಾ ಅಂತ ಅವರೆಲ್ಲ ಆಗ ಕೋ ಆಪರೇಟ್ ಮಾಡ್ತಾರೆ. ಇದು ನನ್ನ ಲೆಕ್ಚರರಿಂದ ಕಲಿತ ಪಾಠ.
ಉಂಹು ಈ ಪತ್ರದಲ್ಲಿ ಮುದ್ದು,ಅಪ್ಪುಗೆಯೆಲ್ಲ ಏನಿಲ್ಲ. ಇದು ಭಾವಸಂಚಾರವಷ್ಟೇ.!

ಮುಂದಿನ ಪತ್ರದವರೆಗೆ ಅಪ್ಪಳಿಸುವ ಎಲ್ಲ ಭಾವದಲೆಗಳನ್ನ ಮನಸ್ಸಿನಲ್ಲೇ ಸಾಲುಗಳಾಗಿ ಪರಿವರ್ತಿಸುತ್ತಿರುತ್ತೇನೆ, ನಿನ್ನ ಭಾವೋಲ್ಲಾಸದ ಸಾಲುಗಳಿಗೆ ಕಾಯುತ್ತಾ,
ನಿನ್ನವ,

now the ball n court is yours..!

[ತಲೆಬರಹ ಕೆ.ಎಸ್.ನ ಅವರ ಕವಿತೆ ಸಾಲು ಮತ್ತು ಕೊನೆಯ ಇಂಗ್ಲಿಷ್ ಅಡಿಬರಹವೂ ಅವರದೇ ಕವಿತೆಯಲ್ಲಿನ ಭಾವ]

Friday, May 29, 2009

ಒಂದು ರಜಾ ಅರ್ಜಿ..

...ಗೆ

ಕಣ್ಣ ಕನ್ನಡಿಯಲ್ಲಿ
ಕಳೆದ ಕಾಲದ ಧೂಳು
ಇಣುಕಿನೋಡಿದರೆ ಪ್ರತಿಬಿಂಬವಿಲ್ಲ;
ಒರೆಸಲು ಇಬ್ಬರಿಗೂ ಪುರುಸೊತ್ತಿಲ್ಲ...
ತೊಡಗಿಕೊಂಡಿದ್ದು ಅತಿಯಾಯಿತೇನೋ.!?

ಗೊತ್ತು ನನಗೆ,
ಕ್ಲೀನಿಂಗ್ ಏಜೆಂಟ್ ಧಾರೆಯಾಗುತಿದ್ದ
ದುಃಖದ ದಿನಗಳು
ಕಳೆದುಹೋದ
ಸಮಾಧಾನದ ಬದುಕಿದು..
ಸಮಾಧಾನ ತುಸು ಹೆಚ್ಚೇ ಆಯಿತೇನೋ!?

ಕಾಡು ಹಾದಿಯ ಹಾದು
ಬೆಟ್ಟದೊರತೆಯ ಮಗ್ಗುಲ
ಬಯಲಲ್ಲಿ ಕೂರಬೇಕಿದೆ..
ಕಳೆದ ಕಾಲದ ನೇಹದ ನೆನಪಿನ ಮಿನುಗು
ಬರುವ ದಿನಗಳ ಕನಸಿನ ಮೆರುಗು
ಅಚಾನಕ್ಕಾಗಿ ದಕ್ಕಿಸಿಕೊಂಡ ಪುರುಸೊತ್ತಿನ ಸೊಬಗು
-ಗಳನ್ನ ಹೊತ್ತು ಹೊಳೆಯುವ
ಆಕಾಶಗನ್ನಡಿಯ ಚುಕ್ಕಿಗಳು
ಕಣ್ಣ ಕನ್ನಡಿಯಲ್ಲಿ
ಕಾಣದ ಬಿಂಬಗಳ
ಮರುಪ್ರದರ್ಶನಕ್ಕೆ ಕಾದಿವೆ..

ಈ ಎಲ್ಲ ಗಡಿಬಿಡಿಯ
ದಿನರಾತ್ರಿಗಳ ಹಿಂಡಿ
ಒಂದುದಿನರಾತ್ರಿಯ
ರಜೆ ಸೋಸಲಾದೀತಾ..?

..ಇಂದ

Wednesday, May 20, 2009

ಈ "ಪರಿ" ಯ ಸೊಬಗು...

"ಯೇ ಕೌನ್ ಆಗಯೀ ದಿಲ್ ರುಬಾ ಮೆಹಕಿ ಮೆಹಕೀ.. ಫಿಜಾ ಮೆಹಕಿ ಮೆಹಕೀ ಹವಾ ಮೆಹಕಿ ಮೆಹಕೀ...."
ಈ ಸಾಲನ್ನು ನಾನು ಕೇಳಿದ ದಿನದಿಂದಲೂ ನನ್ನ ಒಳಗಣ್ಣ ಮುಂದಿದ್ದವಳು ಈಗ ಮಡಿಲಿಗೆ ಬಂದಿದ್ದಾಳೆ. ಒಂದೇ ವ್ಯತ್ಯಾಸವೆಂದರೆ ಅವಳು ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಬಂದವಳು, ಇವಳಿನ್ನೂ ಅಂಬೆಗಾಲಿಡಲು ಕಲಿಯಬೇಕಿದೆ.
ನನ್ನೆಲ್ಲ ಸಮಯ,ಸಮಯವಿಲ್ಲದಿರುವಿಕೆ, ನಿದ್ದೆ ಎಚ್ಚರ,ಕನಸು ಊಟ, ಶೌಚ, ದಿನಚರಿ, ರಾತ್ರಿಯಪರಿ ಎಲ್ಲವನ್ನೂ ಒಂದು ಘಮದಂತೆ ಆವರಿಸಿಕೊಂಡವಳ ಒಂದು ಪೋಸ್ ಇಲ್ಲಿದೆ.
ನಿದ್ದೆ ತೂಕಡಿಸಿಬರುವಾಗ ನಾನು ಎದ್ದು ಕೂತೇ ಇರುವಂತೆ ಮಾಡುವ, ಊಟದ ಬಟ್ಟಲು ನಾನು ಕೈಲಿ ಹಿಡಿಯುವಾಗಲೇ ತನ್ನ ಚಡ್ಡಿ ಒದ್ದೆ ಮಾಡಿಕೊಳ್ಳುವ, ಕಾಡುವ ಈ 'ಪರಿ' ಅಮ್ಮನಿಗೆ ತ್ರಾಸಾಗಿ ಮುಖ ದುಮ್ಮಿಸಿಕೊಂಡಿದ್ದಾಳೆ ಅಂತ ಗೊತ್ತಾಗುತ್ತಲೇ ಒಂದು ದೇವಲೋಕದ ದಿವ್ಯನಗು ನಕ್ಕುಬಿಡುತ್ತಾಳೆ. ನಾನು ಅತ್ತಾರೆ ಅಳಲವ್ವ ಈ ಕೂಸು ನನಗಿರಲಿ ಮಿಕ್ಕಾರೆ ಮಿಗಲಿ ಮನೆಗೆಲಸ..ದ ಉಲಿಯಾಗುತ್ತೇನೆ. ಅವಳ ಆಟಕ್ಕೆ ಅವಳಂತ ಇನ್ನೂ ಹಲವು ಮಕ್ಕಳೇ ಅವರ ನಗು ಆಟಗಳೇ ಸಾಟಿ.
ಸಾಕುಸಾಕೆನ್ನಿಸುತ್ತಲೇ ಮತ್ತೆ ಬೇಕೆನ್ನಿಸುವಂತೆ ಮಾಡುವ ಅವಳ ರೀತಿಗೆ ನಾನು ಫಿದಾ ಆಗಿಬಿಟ್ಟಿದೇನೆ. ಬರೆಯಲು ಹಂಚಿಕೊಳ್ಳಲು ವಿಷಯಗಳೇನೊ ಸಾಕಷ್ಟಿವೆ. ಆದರೆ ಅಮ್ಮನ ರೋಲು ಸ್ವಲ್ಪ ಜಾಸ್ತೀನೇ ಆಗ್ ಬಿಟ್ಟು ಬರೆಯಲು ಸಮಯ ಸಾಕಾಗುತ್ತಿಲ್ಲ. ಓದು ಬೆಳಿಗ್ಗೆ ಆಫೀಸ್ ಕ್ಯಾಬಿನಲ್ಲಿ ಮೊದಲ ೨೦ ನಿಮಿಷಕ್ಕೆ ಸೀಮಿತವಾಗಿದೆ.
ಬೇಸಿಗೆ ರಜೆ ಬಂದ ಪುಟ್ಟಿಯರು ಆ ಆರೂವರೆಯ ಚುಮುಚುಮು ಚಳಿಯಲ್ಲಿ ಸರದಿಯ ಮೇಲೆ ಸೈಕಲ್ ಹೊಡೆಯಲು ರೆಡಿಯಾಗಿರುವುದನ್ನ ನೋಡುತ್ತ ಆಫೀಸಿಗೆ ಹೊರಡುತ್ತೇನೆ. ಸಂಜೆ ಇನ್ನೂ ಬಿಸಿಲಿಳಿಯುವ ಮೊದಲೆ ಮನೆಗೆ ಬರುವಾಗಲೂ ಆ ಬೆಳಗಿನ ಚೈತನ್ಯದಲ್ಲೇ ಸೈಕಲ್ ಹೊಡೆಯುತ್ತಿರುತ್ತಾ ನಗುತ್ತಿರುವ ಅವರ ಚೈತನ್ಯಕ್ಕೆ ಆ ಬಾಲ್ಯದ ಜೀವನೋತ್ಸಾಹಕ್ಕೆ ಕಣ್ಣಾಗುತ್ತಾ ನನ್ನ ಮನಸ್ಸು ಗರಿಗೆದರಿದೆ. ಈ ಗಡಿಬಿಡಿಯ ಪುರುಸೊತ್ತಿಲ್ಲದ ದಿನರಾತ್ರಿಗಳಲ್ಲಿ ನನ್ನದಾದ ಒಂದೆರಡು ಗಳಿಗೆಗಳನ್ನು ಕಾದಿಟ್ಟುಕೊಳ್ಳಲು ದೇಹವನ್ನೂ ಅಣಿಮಾಡುತ್ತಿದ್ದೇನೆ. :) ನನ್ನ ಬೆರಳುಗಳನ್ನು ಕುಟ್ಟಲು ಪುಟಗೊಳಿಸಿದ ಆ ಎಳೆಯ ಮೊಗ್ಗುಗಳಿಗೆ ಅವರ ಚೈತನ್ಯಕ್ಕೆ ತಲೆಬಾಗಿದ್ದೇನೆ.
ನನ್ನ ಖುಶಿಯಲ್ಲಿ ಪಾಲ್ಗೊಂಡು ಸ್ಪಂದಿಸಿದ ನೀವು ಎಲ್ಲರಿಗೂ ಅಕ್ಕರೆಯ ನಮಸ್ಕಾರ.

-ಪ್ರೀತಿಯಿಂದ
ಸಿಂಧು

Tuesday, January 6, 2009

ನನ್ನ ಖುಶೀ ನಿಮಗೂ...

ಫಿರ್ ಛಿಡೀ ರಾತ್ ಬಾತ್ ಫೂಲೋಂ ಕೀ.. ರಾತ್ ಹೈ ಯಾ ಬಾರಾತ್ ಫೂಲೋಂ ಕೀ.. ಎಂಬ ಹಾಡಿನುಲಿಯ ಮಾಧುರ್ಯದ ಅಂತರಂಗದಲ್ಲಿ ಅಡಗಿ ಕೂತಿದ್ದವಳು ಮಡಿಲಿಗೆ ಬಂದಿದ್ದಾಳೆ.
ಒಲವಿನ ಪಯಣದ ಹಾದಿಗೆ
ಜೊತೆಯಾಗಿ ಮೆಲ್ಲಡಿ ಇಡಲು
ನೀರಧಿಯ ನೇವರಿಸಿ
ಮುಗುಳು ಬಿರಿದ ತಿಂಗಳನ
ಮಗಳ ಆಗಮನ..
ಮಾರ್ಗಶಿರ ಪ್ರತಿಪದೆಯ ಹೊಸ್ತಿಲಲಿ!
ಖುಶೀ,ಸಂತಸ,ಛಲ,ಸಂಕಟ,ನೋವು,ನೆಮ್ಮದಿ,ಸಣ್ಣತನ,ಸಮೃದ್ಧಿ,ಸಮಾಧಾನ,ಆತ್ಮೀಯ ಕುಟುಂಬ,ಮತ್ತು ತುಂಬಿತುಳುಕುವಷ್ಟು ಪ್ರೀತಿ ಎಲ್ಲವನ್ನೂ ಎರೆದ ಬದುಕು, ಇನ್ನೊಂದೇ ಬದುಕನ್ನು ಮಡಿಲಿಗಿಟ್ಟಿದೆ.
ಎಲ್ಲವನ್ನು ಕೊಟ್ಟಿರುವ ನವನವೋನ್ಮೇಷಶಾಲಿನೀ ಪ್ರಕೃತಿಯು ಪ್ರತಿರೂಪಿ ಸೃಷ್ಟಿಯನ್ನು ಹನಿಯಾಗಿ ಬನಿ ಇಳಿಸಿದ್ದಾಳೆ.
ಆ ಶಕ್ತಿಗೆ ನಮನ. ಜೊತೆಗೆ ನಿಂತು ನೇವರಿಸಿದ ಎಲ್ಲ ಪ್ರೀತಿಯ ಕೈಗಳಿಗೆ ನಮನ.
ಮುದ್ದು ಸುರಿಸುವ ಗುಲಾಬಿ ಕಾಲುಗಳಿಗೆ, ಕರೆಂಟು ಹರಿಸುವ ಮುಗ್ಧ ಕಣ್ಗಳಿಗೆ, ಬಿಗಿಯಾಗಿ ಹಿಡಿದಿರುವ ಪುಟಾಣಿ ಬೆರಳುಗಳಿಗೆ.. ನಮನ.
ಹೋದ ನವೆಂಬರಿನ ಕೊನೆಯಲ್ಲಿ ಧರೆಗಿಳಿದು ಘಮ್ಮನರಳಿದ ಋತುಋತುವಿನ ಚೇತನದಂತೆ ನಮ್ಮ ಬಾಳಲ್ಲಿ ತುಂಬಿಕೊಳ್ಳುತ್ತಿರುವವಳ ಹೆಸರು ಸೃಷ್ಟಿ. ನಮ್ಮ ಸಂತಸದ ಸಿಹಿ ನಿಮ್ಮೊಡನೆ ಹಂಚಿ ದುಪ್ಪಟ್ಟಾಗಿಸುವ ಆಸೆ..
ಪ್ರೀತಿಯಿಂದ
ಸಿಂಧು