Thursday, August 2, 2007

ಕವಿಸಮಯ


ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...
ಹಾಲ್ನೊರೆಯ ಸೂಸಿದ್ದು
ಅವಳಾ?!
ಬಿಟ್ಟರೆ ಹರಿವ ಅವಳ
ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!


ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು
ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ
ಮಾತಿಲ್ಲದ ತಲೆಬಾಗು.


ಫೋಟೋ ಕೃಪೆ - ಪ್ರಭು - floatingcreeper@gmail.com

Wednesday, August 1, 2007

ಒಂದು ಮುರಿದು ಬಿದ್ದ ದೋಣಿ, ದಕ್ಕಲಾಗದ ನೋಟ ಮತ್ತು ಹೊರಳು ದಾರಿ..

ಯಾಕೆ ಎಲ್ಲ ಸಲವೂ ನಾನು ನಿನ್ನ ನೆನಪಿಸಿಕೊಂಡರೆ, ಇಷ್ಟು ವರ್ಷದ ನಂತರವೂ, ಅದೇ ಅಸಹನೆ? ನನಗೆ ಬರುವ ಸಿಟ್ಟು ಯಾರ ಮೇಲೆ, ಬದುಕಿನ ಯಾನಕ್ಕೆ ಲಗಾಟಿ ಹೊಡೆದು ಬಿದ್ದು ಹೋಗುವಂತ ಹಾಯಿ ಕಟ್ಟಿದ ನಿನ್ನ ಮೇಲಾ? ಅಥವಾ ಅಂತದೊಂದು ಹಾಯಿಯನ್ನು ನೀನು ಕಟ್ಟುವಾಗ ಸುಮ್ಮನೆ ನಸುನಗುತ್ತ ಒಪ್ಪಿಕೊಂಡು, ಹರಿವಿಗೆ ಬಿದ್ದ ನನ್ನ ಮೇಲಾ?
ಈ ವ್ಯತ್ಯಾಸದ ನಡುವಣ ಗೆರೆ ತುಂಬ ಸೂಕ್ಷ್ಮ. ಇದು ನಿನಗೆ ನನಗಿಂತ ಚೆನ್ನಾಗಿ ಗೊತ್ತು. ಮತ್ತು ಈ ಅರಿವನ್ನೇ ಉಪಯೋಗಿಸಿ, ಇದು ಗೊತ್ತಾಗದ ನನ್ನಂತ ಬೆಪ್ಪಳನ್ನು ಕೆಲದಿನಗಳ ಕಾಲ ಕಣ್ಣೀರ ಪ್ರವಾಹಕ್ಕೊಡ್ಡಿದೆ, ತಪ್ಪಿತಸ್ಥಳು ನಾನು ಮಾತ್ರ ಎಂಬ ಭಾವನೆಗಳ ಬಂಡೆಗಳಿಗೆ ನನ್ನ ಭಾವದ ದೋಣಿ ಮತ್ತೆ ಮತ್ತೆ ಡಿಕ್ಕಿ ಹೊಡೆದು, ಹಣ್ಣಾಗಿ ಹೋದೆ. ಗೊತ್ತಿದ್ದ ನೀನು, ಹಿಮ್ಮುಖ ಹರಿಗೋಲು ಹಾಕಿ ಬೇರೆ ಸೆಳವಲ್ಲಿ ಹರಿದು ಹೋಗುವಾಗಲೂ, ಹಣ್ಣಾಗಿ ಕುಳಿತ ನಾನು ಕುರುಡೂ ಆಗಿದ್ದೆ.

ನೀನು ಕೆಟ್ಟವನಲ್ಲ, ಗೊತ್ತು ನನಗೆ. ಆದರೆ ನೀನು ಚಾಣಾಕ್ಷ ಎಂಬ ತಿಳಿವಳಿಕೆ ಬಂದಾಗಿನಿಂದ, ಎಲ್ಲ ಸಂಬಂಧಗಳನ್ನೂ, ಭಾವನೆಗಳನ್ನೂ ವ್ಯವಹಾರಬದ್ಧತೆಯಲ್ಲಿ ನೇಯ್ದು ಲಾಭಾಂಶವನ್ನು ಹುಶಾರಿಯಿಂದ ಬದಿಗಿಟ್ಟು ನಿನ್ನ ಬ್ಯಾಲೆನ್ಸ್ ಹೆಚ್ಚು ಮಾಡಿಕೊಳ್ಳುತ್ತೀಯ, ಮತ್ತು ಅದಕ್ಕೆ ಎಲ್ಲ ಒಳದಾರಿಗಳೂ ಗೊತ್ತು ನಿನಗೆ ಅಂತ ಗೊತ್ತಾದಾಗಿನಿಂದ ನಾನು ದಿಕ್ಕೆಟ್ಟು ಹೋದೆ. ನಮ್ಮ ಯಾನದಲ್ಲಿ ಎದುರು ಅಲೆಗಳೇ ಉಳಿದು, ಒಬ್ಬೊಬ್ಬರೂ ಒಂದು ದಿಕ್ಕಿಗೆ ಕೈಗೋಲು ನಡೆಸಿ, ದಾರಿ ಕಷ್ಟವಾಯಿತು. ಗಳಿಸಿಕೊಳ್ಳುವ ಪಿತೂರಿಯ ಈಟಿಗೆ ಸಿಕ್ಕಿ ಹಾಯಿ ಲಗಾಟಿ ಹೊಡೆದು ಹರಿದೇ ಹೋಯಿತು. ಅಪನಂಬಿಕೆಗಳ ಕಲ್ಲು ಹರಿವಲ್ಲಿ ದೋಣಿ ಅಲೆದಾಡಿ, ತೀರವೆಂದು ಕರೆಯಬಹುದಾದಲ್ಲಿಗೆ ಬಂದು ನಿಂತಾಗ, ನಮ್ಮಿಬ್ಬರ ದಾರಿ ಒಡೆದು ಹೋಗಿ, ಇವತ್ತು ನಾವು ಅಪರಿಚಿತರಿಗಿಂತ ಹೆಚ್ಚು ದೂರ.

ಈ ಬೀದಿಯಲ್ಲಿ ನಡೆದರೆ ನಿನಗೆ ಸಿಗಬಹುದು ಎಂಬ ಕಾರಣಕ್ಕೆ, ನಾನು ಅಲ್ಲಿಗೆ ಹೋಗುವುದೇ ಇಲ್ಲ. ನೀನು ಸಡನ್ ಆಗಿ ಎದ್ರು ಬಂದರೆ ನನ್ನ ಮುಖದಲ್ಲರಳುವುದು ನಗುವೇ. ಆದರೆ, ನೀನು ಸಡನ್ ಆಗಿ ಎದುರು ಬಂದು ನಿಲ್ಲುವ ಒಂದರೆ ಕ್ಷಣ ಮುಂಚೆ ನೀನು ಸಿಗಬಹುದು ಅಂತ ಅನ್ನಿಸಿದರೆ, ತಕ್ಷಣ ತಿರುಗಿ ಬೇರೆ ದಾರಿಯಲ್ಲಿ ತಾನೇ ತಾನಾಗಿ ನಡೆದು ಹೋಗಿಬಿಡುತ್ತೇನೆ.. ನಿನ್ನ ಬಗ್ಗೆ ಸಿಟ್ಟಿಲ್ಲ, ಆದರೆ ನಿನ್ನನ್ನು ಸಹಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಬದಲಾವಣೆಯೇ ನನ್ನ ಬದುಕು.

ನಿನ್ನ ಬಗ್ಗೆ ಏನೇ ಬರೆದರೂ ನಾನ್ಹೀಗೆ ಬಿರುನುಡಿಯನ್ನೇ ಯಾಕೆ ಬರೆಯಬೇಕು ಅಂತ ಕೇಳುತ್ತೀ ನೀನು.. ಆದರೆ ಎಷ್ಟೇ ಇಷ್ಟವಿದ್ದರೂ ಒಂದರೆ ಕ್ಷಣದ ನಲ್ನುಡಿಯಾಡಿ, ನಿನ್ನ ಮನದಲ್ಲಿ ಹೊಸ ಆಸೆ ಬೀಜಕ್ಕೆ ನೀರೆರೆಯುವ ಕ್ಷಮೆ, ದಾರ್ಷ್ಟ್ಯ, ಮತ್ತು ಸಹನೆ ನನ್ನಲ್ಲಿಲ್ಲ.
ನಿನಗರಿವಾಗದೆ ಇಲ್ಲೆ ನಿಂತು ಮೌನವಾಗಿ, ನಿನಗೊಂದು ಸಂತಸಮಯ ದಿನ, ಹಾಯಾದ ಬದುಕನ್ನು ಆಶಿಸುವುದಷ್ಟೇ ನನ್ನ ಸಾಮರ್ಥ್ಯ ಮತ್ತು ಮಿತಿ.

ನಿನಗೆ ಚಂದದೊಂದು ಹೊಸಾ ಬದುಕಿರಲಿ
ಕನಸುಗಳ ನನಸಾಗಿಸುವ ಶಕ್ತಿಯಿರಲಿ,
ನನ್ನ ನೆನಪು ಮರೆತುಹೋಗಲಿ,
ರಾತ್ರಿ ಮಲ್ಗಿದ ಕೂಡಲೆ ಒಳ್ಳೆ ನಿದ್ದೆ ಬರಲಿ
ಮತ್ತು ಒಳ್ಳೆಯದಾಗಲಿ.

Tuesday, July 31, 2007

ಹೀಗೇ ಸುಮ್ಮನೆ..

ಭಾರವಾದ ನಿಟ್ಟುಸಿರು,
ಹೆಪ್ಪುಗಟ್ಟಿದ ಮೌನ,
ದುಃಖಕ್ಕೆ ಆಸರೆಯಾಗಿ ಗಾಳಿ ತೀಡದೆ ನಿಂತು,
ಸುತ್ತೆಲ್ಲ ಬಿಸಿಯಾಗಿ ಸೆಖೆಯೇರಿ,
ಇನ್ನೇನು ಹನಿಯಬೇಕು ಕಣ್ಣಂಚು,
ಅದೋ ಮೊಬೈಲಿನಲಿ ಮಿಂಚು!

ಹನಿಯ ಕಣ್ಣಂಚಲೆ ತಡೆದು
ಉದಾಸವಾಗಿ ಫೋನೆತ್ತಿಕೊಂಡು
ಡಿಸ್ ಪ್ಲೇ ನೋಡಿದರೆ
ನೀರಂಚಲಿ ಕುಳಿತು
ಹನಿವ ಮಳೆಯ, ಸುಳಿವ ಕುಳಿರ್ಗಾಳಿಯ

ಸೊಗವನ್ನು
ಹೂವರಳಿದ ಸಹಜತೆಯಲ್ಲಿ

ಬಣ್ಣಿಸುವ ಆ ಮೆಸೇಜು..
ದುಃಖ ಕರಗಿ,
ಮೌನ ಹಗುರಾಗಿ
ಮನದ ತುಂಬ ಹಗೂರಭಾರದ ನೆನಪು.
ನಿಸೂರಾಗಿ ಹಾಯತೊಡಗಿದ ಗಾಳಿಯಲಿ ತಂಪು.
ಸುತ್ತೆಲ್ಲ ವಿಷಯಗಳಲ್ಲಿ ಅದೇನೋ ಹೊಸ ಒನಪು...

ಪುಟ್ಟ ದೀಪದ ಚೆಂಬೆಳಕು,
ಹಿತರಾಗದ ಮುದನೀಡುವ ಹಾಡು,
ಮಳೆ, ಹೂವು, ಹಕ್ಕಿ, ಕಾಡು,
ಹೊಳೆ,ಕಡಲು,ಬೆಟ್ಟದ ಬೀಡು
ಎಲ್ಲ ಚಂದದ ಸಂಗತಿಗಳ
ಒಟ್ಟಂದದ ಆಪ್ತ ಪ್ರಭಾವಲಯ
ಹರಡಿದ ನಿನಗೆ ಅರ್ಪಿತವೀ
ತಡೆ ಹಿಡಿದಿಟ್ಟ ಕಣ್ಣ ಹನಿ..