Tuesday, November 21, 2017

ತೀರ್ಥ

ಶಂಖದಿಂದ ಬಂದಿದ್ದು ಮಾತ್ರ ತೀರ್ಥ
ಅಂತೊಬ್ಬರು ಹೇಳಿದರು
ಹಲವರು ಕೇಳಿದರು
ನುಡಿತೀರ್ಥ ಹನಿಸುವ
ಶಂಖಗೊರಳು ಪವಿತ್ರವಾಗಿದ್ದೇ
ಕೇಳುವ ಕಿವಿಯಿಂದಲ್ಲವೆ
ಅಂತ ಈ ಕಾಲದ ಮಕ್ಕಳು
ಕೇಳಿದರೆ
ಪುರೋಹಿತರಿಗೆ ಸಿಟ್ಟು
ಶಂಖ ಊದಲು ಶ್ವಾಸ ಸಾಲುವುದಿಲ್ಲ
ಅರ್ಚನೆಗೆ ನಮಸ್ಕರಿಸಿದ ತಲೆ ಬದಿಯ
ಕಿವಿಯಲ್ಲಿ ಇಯರ್ಫೋನುಗಳು...ವಯರು ಕಾಣುವುದಿಲ್ಲ
ಶಂಖಕ್ಕೆ ಮೂರು ನಾಮದ ಗಂಧ
ಥಳಥಳಿಪ ಹಿತ್ತಾಳೆ ತಟ್ಟೆ
ಗುಡಿಯ ಮಾಡದ ಮೇಲೆ
ಕಟ್ಟಿದ ಗೂಡಿನಲ್ಲಿ
ಕಾವು ಪಡೆವ ಮೊಟ್ಟೆ
ಬೆಳಗಾತ ಹೂಚೆಲ್ಲಿದ ಪಾದಪಥ
ಊರುಗೋಲಿನ ದಶರಥ-
ರ ಸಾಲು
ಇರುವೆ ಹರಿದಂತೆ ವಾಹನ-
ಕಟ್ಟಿಕೊಳ್ಳುವ ರಾಜಪಥ
ಸೈರನ್ನೇ ಕೇಳುವುದಿಲ್ಲ
ಶಂಖದ್ದಿನ್ನೇನು
ಕೋಳಿ ಯಾವಯಾವಾಗಲೋ ಕೂಗುತ್ತದೆ
ಸೂರ್ಯ ಬಂದಿದ್ದು ಗೊತ್ತಾಗದ ಹೊಂಜು
ಹಕ್ಕಿ ಮಾತ್ರ ಬೆಳಕು ಹರಿವ ಚಣದಲ್ಲಿ
ಹಾರುತ್ತದೆ
ಇಲ್ಲದಿದ್ದರೆ ತುಂಬಲಾರದು ಹೊಟ್ಟೆ
ಕಾವಿಲ್ಲದೆ
ಒಡೆಯಲಾರದು ಮೊಟ್ಟೆ
ಮುರಿದರಷ್ಟೆ ಭಗ್ನ
ವೆನ್ನಲಾಗದು
ಒಡೆಯದ ಮೊಟ್ಟೆಯ ಬದುಕೂ ಭಗ್ನ

ಶಂಖ ಸುಮ್ಮನಿದೆ
ಶ್ವಾಸ ಕುಂದಿರಬಹುದು
ಹಕ್ಕಿ ಹಾರದಿದೆ
ಪುಕ್ಕ ತರಿದಿರಬಹುದು
ಕಿವಿ ಎಂಗೇಜಾಗಿಯೇ ಇದೆ
ಆ ರತಿಯ ಶಾಖವೇ ವರ್ಚುವಲ್ ಆಗಿರುವಾಗ
ತೀರ್ಥಕ್ಕೇನು ಕಡಿಮೆ-
ನುಡಿತೀರ್ಥಕ್ಕೂ ವರ್ಬಲ್ ಡಯೇರಿಯಾಕ್ಕೂ
ಇದ್ದೂ ಇರದ ಹಾಗಿನ ತೆಳ್ಳನೆ ಗೆರೆಯೆಳೆಯುವ
ಜಾಲದಂಗಳದಲ್ಲಿ-
ತೊಟ್ಟಿಕ್ಕುತ್ತಿದೆ ಶಂಖವಿಲ್ಲದೆ...