ಆಧಾರವಿಲ್ಲದ ಪಾಡಿಗೆ...ಬೇಗ ಕಾರ್ಡು ಅಪ್ಲೈ ಮಾಡಿದೆ
ವಿಚಾರವಿಲ್ಲದೆ ಪಕ್ಷಪಕ್ಷಗಳು ನೇಯ್ದ ಬಲೆಯಲಿ ಸಿಕ್ಕಿದೆ
ಆಚಾರ ಪಡೆಯಲು ಪಟ್ಟ ಪಾಡಿಗೆ ಪಡೆದವರ ಕಷ್ಟವೂ ಸೇರಿದೆ
ಪಡೆಯದೆ ಇದ್ದರೂ ಪಡೆವರಿದ್ದರೂ ಅನುಷ್ಠಾನ ಗಾಣದಿ
ಜನ ಸಿಕ್ಕಿ ನುರಿಯುತಿರೆ ಬಿದ್ದೆವು ಅತಂತ್ರ ಜಾಡಿಗೆ...
ಹೇಳಬಾರದೆ ಇದರೊಳಗೇನಿದೆ..?
{ವಿಜಯ ಕರ್ನಾಟಕದಲ್ಲಿ ಈ ಬರಹದ ಸಂಕ್ಷಿಪ್ತ ರೂಪ ಪ್ರಕಟವಾಗಿದೆ.
ಈ ಬರಹದ ಕೆಲವು ಮಹತ್ವದ ಮಾಹಿತಿಗಳನ್ನು ನನಗೆ ಕೊಟ್ಟವರು ಗೆಳೆಯರಾದ ಆನಂದರ ಋಗ್ವೇದಿ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ. }
ಏನಾದರೂ ಮಾತಾಡಿ. ಆಧಾರ್ ಕೇಳಬೇಡಿ...ಎಂಬುದು ಮಹಾನಗರದ ಟ್ರಾಫಿಕ್ಕು ಪೀಡಿತ ಜನರ, ಸಣ್ಣ ನಗರಗಳ ಕೊಳಚೆ ಪೀಡಿತ ಮಹಾಜನರ, ಹಳ್ಳಿ ಊರುಗಳ ಬರ-ಪ್ರವಾಹ ಪೀಡಿತ ಜನರ, ರೈತರ, ಶ್ರಮಿಕರ ಎಲ್ಲರ ಮಾತೂ ಆಗಿದೆ. ಆಧಾರ್ ತಂದ್ರೆ ಮುಂದಿನ ಕೆಲಸ ಎನ್ನುವುದು ಈ ಎಲ್ಲ ನಗರ, ಊರು, ಗ್ರಾಮ, ಹಳ್ಳಿಗಳನ್ನೂ ಆವರಿಸಿದ ನಮ್ಮ ಸರ್ಕಾರಿ ಆಡಳಿತಯಂತ್ರದ ಪ್ರತಿಯೊಬ್ಬ ಸಿಬ್ಬಂದಿಯದ್ದೂ ಆಗಿದೆ. ಅವರಿಗೂ ಈ ಆಧಾರ್ ಎಂಬುದನ್ನು ನಾವು ಜನರ ಅಸ್ತಿತ್ವದೊಂದಿಗೆ ಲಿಂಕ್ ಮಾಡುವ ಲಾಚಾರ್ ಕೆಲಸದಿಂದಾಗಿ ಸಿಕ್ಕಾಪಟ್ಟೆ ಗ್ರಾಚಾರ್ ಬಂದಿದೆ ಅಂದ್ರೂ ಏನೂ ತಪ್ಪಿಲ್ಲ.
ಇಲ್ಲಿಯವರೆಗೂ ನಾನು ಕನ್ನಡ, ಇಂಗ್ಲಿಷ್ ಪತ್ರಿಕೆಗಳಲ್ಲಿ ವರದಿಗಳಲ್ಲಿ ಈ ಆಧಾರ್ ಅಂದ್ರೆ ಎಂತದು, ಯಾಕೆ ಬೇಕು, ಇದರಿಂದ ಕೊಟ್ಟವರಿಗೇನು ಲಾಭ,ಕೊಡಿಸಿಗೆಂಡವರಿಗೇನು ಲಾಭ, ಕೊಡಲು, ತಗೊಳ್ಳಲು, ತಗೊಂಡ ಮೇಲೆ ಉಪಯೋಗಿಸಲೂ ಎಲ್ಲರೂ ಯಾಕೆ ಇಷ್ಟು ತಿಣುಕಾಡುತ್ತಿದ್ದೇವೆ. ತಗೊಂಡವರಿರಲಿ,ಉಪಯೋಗಿಸಲು ಹೋದಾಗ ಅದನ್ನು ನಡೆಸಬೇಕಾದವರೂ ಉಪಯೋಗಿಸಿ ಕೆಲಸ ನಡೆಸಬೇಕಾದವರೂ ಹಗಲಿಡೀ..ಹೆಬ್ಬೆಟ್ಟು ಮ್ಯಾಚಾಗಲಿಲ್ಲ, ಕಣ್ಗುಡ್ಡೆ ಸಿಕ್ಕಿ ಹಾಕಿಕೊಳ್ಳಲಿಲ್ಲ ಅಂತ ಭಯಂಕರ ಒತ್ತಡದಲ್ಲಿ ಹರಿಹಾಯುತ್ತಿರುವುದನ್ನ, ಕೈಗೆ ಸಿಕ್ಕಿದರೆ ಚಚ್ಚಿ ಬಿಡುವೆ ಎಂಬ ಕೋಪದಲ್ಲಿ ಕೌಂಟರಿನಾಚೆಗೆ ನಿಂತು ಅವಡುಗಚ್ಚುತ್ತಿರುವ ಜನಸಮೂಹವನ್ನ ನೋಡಿದರೆ ಗಾಬರಿಯಾಗುತ್ತದೆ. ಈ ಅನುಷ್ಠಾನ ಗಾಣದಲ್ಲಿ ಸಿಕ್ಕಿ ನುಗ್ಗಿ ನುರಿಯಾಗುತ್ತಿರುವ ಕೆಳ ಮಧ್ಯಮ ವರ್ಗದ ಶ್ರಮಿಕ ಸಮಾಜದ ಕಷ್ಟ ಗೋಜಲುಗಳನ್ನು ನೋಡಿದರೆ ಕಂಗಾಲಾಗುವ ಪರಿಸ್ಥಿತಿಯೇ ಇದೆ.
ಶಿವಮೊಗ್ಗ ಜಿಲ್ಲೆಯ ಪುಟ್ಟ ಗ್ರಾಮದ ನ್ಯಾಯಬೆಲೆ ಅಂಗಡಿ. ಪರಿತರ ಪಡೆಯಲು ಉದ್ದಕೆ ನಿಂತ ಸರತಿ ಸಾಲು. ಎಲ್ಲರೂ ಹೆಚ್ಚುಕಮ್ಮಿ ಇವತ್ತು ನನ್ನ ಹೆಬ್ಬೆಟ್ಟು ಸರಿಯಾಗಿ ಒತ್ಲಪ್ಪಾ ಅಂತ ಮನೆದೇವರಿಗೆ ಚಿಳ್ಳಪಿಳ್ಳ ಹರಕೆ ಹೊತ್ತು ನಿಂತಿದಾರೆ. 78 ವರ್ಷದ ಮಹಾಲಕ್ಷ್ಮಕ್ಕ ಸಾಲಲ್ಲಿ ಮೊದಲನೆಯವಳು. ಮನೆಯಲ್ಲಿ ಜ್ವರಬಂದು ಮಲಗಿರುವ ಗಂಡ ಶೀನಪ್ಪನಿಗೆ ಗಂಜಿ ಕಾಸಿಟ್ಟು ಪಕ್ಕದಲ್ಲಿಟ್ಟು ಓಡಿ ಬಂದು ನಿಂತದ್ದರಿಂದ ಮೊದಲ ಜಾಗ ಸಿಕ್ಕಿದೆ. ಅವಳ ಇಬ್ಬರು ಮಕ್ಕಳಲ್ಲಿ ಒಬ್ಬ ತಮಿಳುನಾಡಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸದಲ್ಲಿದ್ದಾನೆ. ಒಬ್ಬನು ಬೆಂಗಳೂರಿನ ಗಾರ್ಮೆಂಟು ಫ್ಯಾಕ್ಟರಿಯ ನೌಕರ. ಅವರವರು ಅವರವರ ಸಂಸಾರದಲ್ಲಿ ಮಗ್ನರು. ಇಲ್ಲಿ ಹಳ್ಳಿಯಲ್ಲಿ ಮಹಾಲಕ್ಷ್ಮಕ್ಕ ಮತ್ತು ಅವಳ ಗಂಡ ಇಬ್ಬರೆ, ಕೃಷಿ ಕೆಲಸವಿದ್ದಾಗ ಮೈಯಾಳಿನ ಕೆಲಸ ಮಾಡಿ, ಮನೆಯಂಗಳದಲ್ಲಿ ಚೂರು ಪಾರು ತರಕಾರಿ ಬೆಳೆದು, ಒಂದು ಹಸುವಿನ ಹಾಲು ಕರೆದು ಜೀವನ ನಡೆಸುತ್ತಾರೆ. ಇವರು ಬಿ.ಪಿ.ಎಲ್ ಕಾರ್ಡು ಹೋಲ್ಡರುಗಳು. ಇಬ್ಬರದೂ ಆಧಾರ ಕಾರ್ಡಿದೆ.
೧೦ ಗಂಟೆಗೆ ಬೈಕಿನಲ್ಲಿ ಬಂದಿಳಿದ ನ್ಯಾಯಬೆಲೆ ಅಂಗಡಿ ಕೃಷ್ಣಪ್ಪ ಸಾಲು ನೋಡಿ ನಿಟ್ಟುಸಿರಿಟ್ಟು ಬಾಗಿಲು ತೆಗೆದ. ಸಾಲಿಗೆ ಜೀವಬಂದು ಮಿಸುಕಾಡಿತು. ಬಾಗಿಲು ತೆಗೆದು ಕಂಪೂಟ್ರು ಚಲಾಯಿಸಿ, ಅದರ ಯೂಪಿಎಸ್ ವೈರ್ ನಿಗಾ ನೋಡಿ, ಅಲ್ಲೆ ಇದ್ದ ತಿರುಪತಿ ತಿಮ್ಮಪ್ಪನ ಫೋಟೋಕ್ಕೆ ಊದುಬತ್ತಿ ಹಚ್ಚಿದ. ಮೊದಲೆ ಬಂದು ಕಾದುಕೊಂಡಿದ್ದ ಅವನ ಸಹಾಯಕ ನಾಗ್ರಾಜು ಹಳೆಬಟ್ಟೆಯಲ್ಲಿ ಟೇಬಲ್ಲಿನ ಧೂಳು ಹೊಡೆದು ಪೆನ್ನು, ರಷೀದಿ, ಆಧಾರ್ ಕಾರ್ಡಿನ ಯಂತ್ರ ಎಲ್ಲವನ್ನೂ ಇಡಬೇಕಾದ ಜಾಗದಲ್ಲಿ ಇಟ್ಟು, ಇದ್ದ ಒಂದೇ ಒಂದು ಕಿಟಕಿಯ ಬಾಗಿಲು ತೆಗೆದು. ಎಲ್ಲ ಕಾರ್ಡ್ ಎತ್ತಿಟ್ಕೊಳ್ರೀ ಅಂತ ಸಾಲಿಗೆ ಕೂಗು ಹಾಕಿದ. ಎಲ್ಲರೂ ಒಂದೊಂದ್ಸಲ ತಮ್ಮ ತಮ್ಮ ಆಧಾರವನ್ನು ಮುಟ್ಟಿ ನೋಡಿಕೊಂಡು ನೆಟ್ಟಗೆ ನಿಂತರು. ಮಹಾಲಕ್ಷ್ಮಕ್ಕ ಬಂದು ಎಷ್ಟೇ ಹೆಬ್ಬಟ್ಟು ಒತ್ತಿದರೂ ಅವಳ ಹೆಬ್ಬಟ್ಟು ಆಧಾರ್ ಡಾಟಾಬೇಸಿನ ಹೆಬ್ಬಟ್ಟಿಗೆ ಮ್ಯಾಚೇ ಆಗುತ್ತಿಲ್ಲ. ಹೋಗ್ಲಿ ಪಷ್ಟ್ ಕಣ್ಗುಡ್ಡೇನಾದ್ರಾ ಮ್ಯಾಚ್ ಮಾಡ್ಬಿಡಾಣ ಅಂತ ನಾಗ್ರಾಜು ಅಂದಾಗ ಕೃಷ್ಣಪ್ಪ ಗುರಾಯಿಸಿದರೂ ಇರಲಿ ಅದನ್ನೂ ನೋಡುವ ಅಂತ ಪ್ರಯತ್ನ ಪಟ್ಟ. ಅದು ಮ್ಯಾಚಾಯಿತು. ಹೆಬ್ಬೆಟ್ಟು ಆಗುತ್ತಿಲ್ಲ. ನೋಡಪಾ ಹೋಗ್ಲಿ ಇಲ್ಲೆ ನಿನ್ ರಷೀದಿಲಿ ಹೆಬ್ಬಟ್ಟು ಹಾಕಿ ಹೋಗ್ಬಿಡುವೆ. ಇನ್ಯಾವತ್ತಾದ್ರೂ ಬಂದಾಗ ಮತ್ತೆ ಚೆಕ್ಮಾಡು. ಗಂಡ ಹುಷಾರಿಲ್ಲದೆ ಮಲಗಿದಾನೆ. ನಾನು ಬೆಳಗ್ಗೆ ಎದ್ದು ಹಂಗೇ ಇಲ್ಬಂದೆ ಅಂತ ಅವಳೆಷ್ಟು ಗೋಗರೆದರೂ ಜಪ್ಪೆನ್ನದ ಕೃಷ್ಣಪ್ಪ.. ಇನ್ನೊಂದು ನಾಕು ಜನದ್ ಆಗೋವರೆಗೆ ಅಲ್ಲೆ ಹೊರಗೆ ಕುಂತಿರವ್ವ. ಹಂಗೆಲ್ಲ ಮಾಡಿ ಕೊಟ್ಟರೆ ನನ್ನ ಕೆಲ್ಸ ಹೋಗುವುದು ಎಂದು ಅವಳನ್ನು ಹೊರಕಳಿಸಿದ. ಮತ್ತೆ ನಾಕು ಜನರ ಮ್ಯಾಚಿಂಗು ನಡೆಯಿತು. ಒಬ್ಬೊಬ್ಬರದೂ ಒಂದೆರಡು ಬಾರಿಯಾದರೂ ಮ್ಯಾಚಿಂಗ್ ಸರಿ ಮಾಡಿ, ಬಿಲ್ ತೆಗೆದು ಅವರ ಪಡಿತರ ಕೊಡುವ ಹೊತ್ತಿಗೆ ಒಂದು ಗಂಟೆಗೂ ಹೆಚ್ಚು ಹೊತ್ತು ಹಿಡಿಯಿತು. ಮತ್ತೆ ಲಕ್ಷ್ಮವ್ವನ ಕರೆದು ಮ್ಯಾಚ್ ಮೇಕಿಂಗ್ ನಡೆಸಿದರೆ ಉಸ್ಸಪ್ಪ ಈ ಸಲವೂ ಆಗಲಿಲ್ಲ. ಬಾಯಿಗೆ ಬಂದ ಹಾಗೆ ಬೈದುಕೊಂಡು ಅವಳು ಮತ್ತೆ ಹೊರನಡೆದಳು. ಇನ್ನೂ ಇಬ್ಬರಿಗೆ ಅರ್ಧ ಗಂಟೆ ಮ್ಯಾಚ್ ಮಾಡಿ ಪಡಿತರ ಕೊಟ್ಟ ಮೇಲೆ ಮುದುಕಿಯ ನೋಡಲಾಗದೆ ಮತ್ತೆ ನೋಡಿದರೆ ಈಗಲೂ ಮ್ಯಾಚಾಗಲಿಲ್ಲ. ಹೋಗಲಿ ನಿನ್ ಗಂಡನ್ನೆ ಕಳ್ಸು ಲಕ್ಷ್ಮವ್ವ ಎಂದವನ ಮೇಲೆ ಅವಳು ಕವಕ್ಕನೆ ಹಾರಿ ಬಿದ್ದಳು. ಜ್ವರ ಬಂದು ಎದ್ದೇಳಲಾರದೆ ಬಿದ್ದವನ ಕಳಿಸಲೇನಪ್ಪಾ? ಭಾಳ ಕಲ್ತೀಯ ಬಿಡು ನೀನು. ನ್ಯಾಯವಾಗಿ ಕಾರ್ಡು ಕೊಟ್ಟು ಹೆಬ್ಬೆಟ್ಟೊತ್ತಿದರೆ ಪಡಿತರ ಕೊಡ ಒಲ್ಯಲ್ಲಾ..ನಿನ್ನ ಸಂಸಾರ ಉದ್ಧಾರಾಗಲ್ಲ ಬಿಡು ಅಂದು ಶಾಪ ಹೊಡೆದು ಚಿಂತೆಯಿಂದ ಮನೆ ಕಡೆ ತೆರಳಿದಳು. ಅವಳ ಶಾಪ ತಟ್ಟಿದ ಹಾಗೆ ಕರೆಂಟು ಹೋಯಿತು. ಸರಿಯಾಗಿರ್ ಚಾರ್ಜಿರದ ಯುಪಿಎಸ್ಸು ಕುಂಯ್ಯೆಂದು ಮಲಗಿತು. ಉದ್ದಕೆ ನಿಂತ ಸಾಲಲ್ಲಿ ಇನ್ನೂ ಇಪ್ಪತ್ತು ಜನರೇ ಇದ್ದರು. ಅವರೆಲ್ಲರ ಒಳಶಾಪಗಳ ಧಗೆ ಕೃಷ್ಣಪ್ಪನಿಗೆ ತಟ್ಟುತ್ತಲೆ ಇತ್ತು. ಸಾಲಿನಲ್ಲಿದ್ದ ಇಬ್ಬರು ಮಾತಾಡಿಕೊಳ್ಳುತ್ತಿದ್ದರು. ಮದ್ಲೆಲ್ಲ ಪಡಿತರಕ್ಕೆ ಬೆಳ್ಗೆಒಂಭತ್ತಕ್ಕೆ ಬಂದರೆ ಹನ್ನೊಂದ್ರೊಳಗೆ ಮುಗ್ಸಿ ಅವತ್ತಿನ ಕೂಲಿಗೂ ಹೋಗಕ್ಕೆ ಆಗ್ತಿತ್ತು. ಈಗ ದೇವರ ದಯವಿದ್ದರೆ ಅವತ್ತಿಡೀ ನಿಂತರೆ ಸಿಕ್ಕರೆ ಸಿಕ್ಕಿತು ಇಲ್ದಿದ್ರೆ ಇಲ್ಲ. ಅದಕ್ಕೂ ನಸೀಬಿರ್ಬೇಕು. ಹಂಗಾಗಿದೆ ಅಲ್ವಾ ಪರಶ್ಯಾ...ಅಂದ
ಬರೀ ನಸೀಬಲ್ಲ ಕರೆಂಟಿರ್ಬೇಕು ಮತ್ತು ನಮ್ ಹೆಬ್ಬೆಟ್ಟು ನಮಗೇ ಮ್ಯಾಚಾಗಬೇಕು ಕಣಯ್ಯಾ..ಅಂದ ಪರಶ, ಮನೆಗೆ ಹೋಗಿ ಮಧ್ಯಾಹ್ನ ಊಟಕ್ಕೆ ಕುಂತು ಟೀವಿ ಹಚ್ಚಿದರೆ ಟೀವಿಯಲ್ಲಿ ಜಾಹೀರಾತು ಬರುತ್ತಿತ್ತು. ನಾನೇ ರಾಜಕುಮಾರ...ಪ್ರೌಡ್ ಇಂಡಿಯನ್ನು, ನನ್ನತ್ರ ಆಧಾರಿದೆ. ಯೂನಿಕ್ ಐಡೆಂಟಿಟಿ. ನಿಮ್ಮತ್ರ ಇದ್ಯಾ? ಆಧಾರ್ ಮಾಡ್ಸಿ.. ಬೀ ಎ ಪ್ರೌಡ್ ಇಂಡಿಯನ್ ಅಂತ..ಸಿನಿಮಾನಟರು ಹೆಬ್ಬೆಟ್ಟೆತ್ತುತ್ತಿದ್ದರು. ಇವನವ್ವನ್ ಆಧಾರ್ ಇಲ್ದಿದ್ರೆ ನಾವು ಇಂಡ್ಯನ್ಸೆ ಅಲ್ವಾ ಹಂಗರೆ, ಇವರೆಲ್ಲ ಸಾಲಲ್ಲಿ ನಿಂತ್ಕಂಡ್ ಒಂದಿನ ಪಡಿತರ ತಕ್ಕಂಬೇಕು ಅವಾಗ್ಗೊತ್ತಾಗತ್ತೆ ಪ್ರೌಡ್ ಇಂಡ್ಯನ್ ಅಂದ್ರೆ ಏನಂತ.. ಹೆಬ್ಬೆಟ್ಟೆತ್ತಿದ್ರೆ ಮುಗೀತಾ? ಒತ್ಸಿ ಮ್ಯಾಚ್ ಮಾಡಿಸ್ಬೇಕು ನನ್ ಮಕ್ಳಿಗೆ ಅಂತ ಗೊಣಗುತ್ತಿದ್ದ.
ಇತ್ತ ನ್ಯಾಯಬೆಲೆ ಕೃಷ್ಣಪ್ಪ ಈ ಆಧಾರ್ ಕಂಡು ಹಿಡಿದವನಿಗೆ ಶಾಪ ಹಾಕುತ್ತಾ ಮೊಬೈಲು ಪೋನಿನ ನೆಟ್ ಪ್ಯಾಕ್ ಆನ್ ಮಾಡಿ ನೋಡಿದರೆ ಅವತ್ತಷ್ಟೆ ಚನ್ನಗಿರಿಯ ಯಾವುದೋ ನ್ಯಾಯಬೆಲೆ ಅಂಗಡಿಯಲ್ಲಿ ನಕಲಿ ಬಿಪಿಎಲ್ ಕಾರ್ಡುಗಳನ್ನಿಟ್ಟುಕೊಂಡು ಪಡಿತರ ಅವ್ಯವಹಾರ ಮಾಡಿದ ಆ ಊರಿನ ನೇತಾರ ಮತ್ತು ನ್ಯಾಯಬೆಲೆ ಅಂಗಡಿ ಸಿಬ್ಬಂದಿಯ ಬ್ರೇಕಿಂಗ್ ನ್ಯೂಸಿನ ಲಿಂಕಿತ್ತು. ನೋಡಿ ಬೆಚ್ಚಿಬಿದ್ದವನಿಗೆ ಈ ಆಧಾರು ಪಡಪೋಸಿಯಲ್ಲ ಆದ್ರೆ ಸರಿಯಾಗಿ ಮಾಡ್ಲಿಲ್ಲ ಮಾತ್ರ ಅಂತ ಒಳಗೊಳಗೇ ಅನ್ನಿಸಿತು.
ಅರೆ ನಮ್ಮೂರಿನ ಪಕ್ಕದ ಊರಿನ ನ್ಯೂಸ್ ಬಂದಿದೆಯಲ್ಲ ಅಂತ ರಾಜೇಶ ಪೇಪರೋದಿದವನು, ಯಾರೋ ಪಾಪ ಫ್ಯಾಮಿಲಿ ಫ್ಯಾಮಿಲೀನೆ ಆಧಾರ್ ಇಲ್ಲದೆ ಪಡಿತರ ಸಿಕ್ಕದೆ ಉಪವಾಸ ಬಿದ್ದು ಸತ್ತೋಗ್ತಿದಾರಂತೆ. ಅಲ್ಲ ಆ ಊರಿನ ಜನ ಏನು ಮನುಷ್ಯರಲ್ವಾ... ಸ್ವಲ್ಪ ನೋಡ್ಕಂಡ್ ಬರ್ತೀನಿ ಅಂದು ಬೈಕು ಹತ್ತಿದ.
ಆ ಊರಿನ ಎಂಟ್ರನ್ಸಲ್ಲೆ ಇದ್ದ ಕಾಮತ್ ಟೀ ಅಂಗಡಿಯಲ್ಲಿ ಒಂದು ಖಡಕ್ ಚಾ ಆರ್ಡರ್ ಮಾಡಿ ಸಿಗರೇಟು ಹೊತ್ತಿಸಿಕೊಂಡು ಅಂಗಡಿಯವನನ್ನು ಕೇಳಿದ. ಅಂಗಡಿಯವ ಸಣ್ಣಗೆ ನಗುತ್ತ, ಅದು ಪೇಪರ್ರಲ್ಲಿ ಇವತ್ತು ಬಂದಿದೆ. ನಿನ್ನೇನೆ ಟೀವಿಲೆಲ್ಲ ಬ್ರೇಕಿಂಗ್ ಆಯ್ತಲ್ಲಾ ಮಾರ್ರೆ.. ನೀವು ಯಾ ಪೇಪರಿನೋರು? ಅಂದ. ರಾಜೇಶ್ ಹೌದಾ..ಪೇಪರ್ ಗೀಪರ್ ಎಂತ ಇಲ್ಲ. ಅಲ್ಲ ನೀವು ಎಂತ ಜನ ಕಣಯ್ಯಾ. ಒಂದು ಫ್ಯಾಮಿಲೀನೆ ರೇಷನ್ ಇಲ್ದೆ ಸಾಯ್ತಾ ಬಿದ್ದಿದೆ ಅಂದ್ರೆ ಸ್ವಲ್ಪ ಸಹಾಯ ಮಾಡದು ಬ್ಯಾಡ್ವಾ? ನಿಮ್ಮೂರು ಪಂಚಾಯ್ತಿ ಲೀಡ್ರು ಯಾರು? ಅಂತ ಸ್ವಲ್ಪ ಗದರಿಸಿದ. ಅಂಗಡಿಯವ ಗರಮ್ಮಾಗಿ ಅಂದ. ಊಟ ಇಲ್ದೆ ಸತ್ತಿದ್ರೆ ಯಾರಾದ್ರೂ ಸಹಾಯ ಮಾಡ್ತಾ ಇರ್ಲಿಲ್ವೇನಯ್ಯಾ? ನಿಂಗೇನು ಗೊತ್ತು ಈ ಊರ ಸಮಾಚಾರ? ಅವು ಸತ್ಕಂಡು ಬಿದ್ದಿರದು ರೇಷನ್ನಲ್ಲಿ ಆಧಾರ್ ಮ್ಯಾಚಗ್ಲಿಲ್ಲಾಂತ ಗಲಾಟಿ ಮಾಡ್ಕಂಡು ಹೋಗಿ ಹೊಟ್ಟೆ ತುಂಬ ಕುಡ್ದು ಸತ್ತಿದ್ದು. ೨೪/೭ ಟೀವಿಯವರಿಗೆ ಇದೇ ಅಲ್ವಾ ಬೇಕಾಗಿರೋದು. ಆಧಾರ್ ಮ್ಯಾಚಾಗ್ಲಿಲ್ಲ ಅಂತ ಗೊತ್ತಾಯ್ತು. ಎಲ್ಲಿ ಕೇಳಿದ್ರು. ರೇಷನ್ ಅಂಗ್ಡೀಲಿ ಅಂದ್ರು. ಒಂದಕ್ಕೊಂದು ಸೇರಿಸ್ಕೊಂಡು ಆಧಾರ್ ಲಿಂಕಾಗದ ಕುಟುಂಬ ಪಡಿತರ ಸಿಗದೆ ಹಸಿವಿನಿಂದ ಸತ್ತು ಬಿದ್ದರು ಅಂತ ಬಿದ್ದಿದ್ದನ್ನೇ ಮತ್ ಮತ್ತೆ ಫೋಕಸ್ ಮಾಡಿ ತೋರ್ಸಿದ್ರು....ರಾಜೇಶ ತಣ್ಣಗಾದ.
ಜಿಲ್ಲಾ ಆಸ್ಪತ್ರೆಯಲ್ಲಿ ಇನ್ಷೂರೆನ್ಸ್ ಕ್ಲೈಮ್ ಮಾಡಲು ಬಂದ ಮಹದೇವಯ್ಯನವರನ್ನು ಸಿಬ್ಬಂದಿ ಆಧಾರ್ ಕಾರ್‍ಡು ಕೊಡಲು ಕೇಳಿದರೆ ರೇಗಿಬಿದ್ದರು. ಯಾವನ್ಲಾ ಅದು ಆಧಾರ್ ಕೇಳದು. ನಾನು ನಾಗೇನಹಳ್ಳಿಯ ಮಾದೇವಯ್ಯ. ಊರ್ನಾಗೆ ಯಾರನ್ನಾದ್ರೂ ಕೇಳ್ಕಂಡ್ಬನ್ನಿ ನಾನು ಯಾರು ಹೇಳ್ತರೆ. ಇಲ್ನೋಡು ನನ್ನ ವೋಟರ್ ಐಡಿ. ಇಲ್ಲಿದೆ ನೋಡು ನನ್ನ ಯಶಸ್ವಿನಿ ಕಾರ್ಡು. ಇನ್ಸೂರೆನ್ಸ್ ಕೊಟ್ರೆ ಸರಿ, ಇಲ್ಲಂದ್ರೆ ಪೋಲಿಸ್ ಕಂಪ್ಲೈಂಟ್ ಕೊಡ್ತೀನಿ ಅಂತ ಕೂಗಾಡಿದರು. ಅಷ್ಟರಲ್ಲಿ ಅವರ ಹತ್ತಿರ ಬಂದ ಮೇಲಧಿಕಾರಿಯೊಬ್ಬರ ಮುಖ ನೋಡಿದವರೆ ಮೆತ್ತಗಾದರು. ನೋಡಿ ಇವ್ರೇ ಹೋದ್ವರ್ಸ ನೀವೇ ತಾನೆ ನನ್ ಯಶಸ್ವಿನಿ ಕಾರ್ಡು ಎರಿಫೈ ಮಾಡಿ ದುಡ್ ಕೊಟ್ಟಿದ್ದು. ಅದೇ ಯಶಸ್ವಿನಿ ಕಾರ್ಡೇ ಇದು. ದಯವಿಟ್ಟು ಮಾಡ್ಕೊಡಿ. ತುಂಬ ತೊಂದ್ರೆಲಿದೀನಿ. ದುಡಿಯೋ ವಯಸ್ಸಲ್ಲಿ ನನ್ ಹೆಂಡತಿ ಕಾಯಲೆ ಬಿದ್ದವ್ಳೆ. ಅಂತ ಕೈಮುಗಿದರು.
ಮೇಲಧಿಕಾರಿ ಅಸಹಾಯಕರಾದರೂ ಅವರನ್ನು ಮಾದೇವಯ್ನೋರೆ ಬನ್ನಿ ಇಲ್ಲಿ ಕೂತ್ಗಂಡು ಮಾತಾಡಣ ಅಂತ ಒಳಗೆ ಕರ್ಕೊಂಡು ಹೋಗಿ ಅವರಿಗೆ ಆಧಾರ್ ಕಾರ್ಡ್ ಲಿಂಕಿನ ಅವಶ್ಯಕತೆಯನ್ನ ಹೇಳತೊಡಗಿದರು.
ಕೌಂಟರಿನಲ್ಲಿನ ಸಿಬ್ಬಂದಿ ನಾವೇ ಏನೋ ಆಧಾರ್ ಮಾಡ್ಬಿಟ್ವೇನೋ ಅನ್ನೋ ಹಂಗೆ ಕೂಗಾಡ್ತನೆ, ನಮ್ ಕಷ್ಟ ನಮ್ದು. ಈ ಆಧಾರ್ ಲಿಂಕ್ ಮಾಡಕ್ಕೆ ಹೋಗಿ ಒಂದಿನ ಮಾಡ ಕೆಲ್ಸ ನಾಕ್ ದಿನ ಆಗ್ತದೆ, ನಮ್ ಗೋಳು ಕೇಳೊರಿಲ್ಲ. ಜನ ಮಾತ್ರ ನಮ್ನೆ ದಬಾಯಿಸ್ತಾರೆ ಅಂತ ಬೈಕೊಳ್ತ ಇದ್ದರು.
ಪದೇ ಪದೇ ತಮ್ಮ ಮೊಬೈಲಿಗೆ ಬರುತ್ತಿದ್ದ ಆಧಾರ್ ಲಿಂಕ್ ಮಾಡಿ ಮೆಸೇಜು ನೋಡಿ ಶಾಮರಾಯರು ಸ್ವಲ್ಪ ಗಾಬರಿಯಾಗಿದ್ದರು. ಏರ್ಟೆಲ್ಲಿನವನ ಅಂಗಡಿಗೆ ಆಧಾರ್ ಕಾರ್ಡೆ ಹಿಡಿದುಕೊಂಡು ಹೋದರೂ.. ಅವನು ಆಧಾರ್ ಲಿಂಕ್ ಮಾಡಲು ನೋಡಿದರೆ ಅದು ಇವರ ಹೆಬ್ಬೆಟ್ಟಿಗೆ ಮ್ಯಾಚು ಮಾಡುತ್ತಿರಲಿಲ್ಲ. ಪಕ್ಕದಲ್ಲಿ ತಮ್ಮ ಹಾಗೆಯೇ ಬಂದಿದ್ದ ಇನ್ನೊಬ್ಬ ಹೆಂಗಸಿಗೂ ಹೆಬ್ಬೆಟ್ಟು ಮ್ಯಾಚಾಗಿ ಕಣ್ಗುಡ್ಡೆ ಮ್ಯಾಚಾಗದಿದ್ದನ್ನು ಗಮನಿಸಿದ್ದರು. ಮೂರು ನಾಲ್ಕು ಸಲ ಹೋದಾಗಲೂ ಇದೇ ರೀತಿ ಆದಾಗ ಆ ಏರ್ಟೆಲ್ ಅಂಗಡಿಯವನು ನಿಮ್ ಆಧಾರ್ ಕಾರ್‍ಡನ್ನೆ ಮತ್ತೆ ಸರಿ ಮಾಡಿಸಿಕೊಳ್ಳಿ ಸಾರ್, ಹೆಬ್ಬೆಟ್ಟು ಮ್ಯಾಚಿಂಗ್ ಸರಿಯಾಗಿಲ್ಲ ಅಂದಾಗ ಅವರ ತಲೆಬಿಸಿಯಾಗಿತ್ತು. ಆ ಬೆಂಗ್ಳೂರು ಒನ್ ಕೇಂದ್ರ ಅದರಲ್ಲಿ ಬೆಳಿಗ್ಗೇನೆ ಹೋಗಿ ಟೋಕನ್ ತರೋದು, ಸಾಲಲ್ಲಿ ನಿಂತು ತಮ್ಮ ಸರದಿ ಬಂದಾಗ, ಅಯ್ಯೋ ಇವನೊಬ್ನು ಬಂದ್ನಲ್ಲ ಎಂಬಂತೆ ತನ್ನ ಕಡೆ ಕನಿಷ್ಟವಾಗಿ ನೋಡುವ ಸಿಬ್ಬಂದಿ, ಹೆಬ್ಬೆಟ್ಟುಗಳ ಮ್ಯಾಚಿಂಗ್ ಆಗದೆ ಗೋಳು ಹುಯ್ಯುವ ಆ ಹೆಬ್ಬೆಟ್ಟು ನೋಂದಣಿ ಯಂತ್ರ, ಬೆಳಕು ಸರಿಯಾಗಿಲ್ಲದೆ ಅರ್ಧ ಗಂಟೆ ಫೋಟೋ ತೆಗೆಸಿಕೊಳ್ಳಬೇಕಾದ ಕರ್ಮ... ಕಣ್ಬಿಡ್ರೀ, ಹೆಗಲೆತ್ತಿ, ಇಲ್ಲೇ ನೋಡಿ, ಸ್ವಲ್ಪ ಕುತ್ಗೆ ತಿರುಗ್ಸಿ ಅಂತ ಸಿಡಿಗುಟ್ಟುವ ಆ ಸಿಬ್ಬಂದಿ ಹೆಂಗಸು.... ಇದೆಲ್ಲ ನೆನಪಾಗಿ ಈ ಫೋನೂ ಬೇಡಾ ಆಧಾರೂ ಬೇಡ ಅನ್ನಿಸಿ ಮನೆಗೆ ಬಂದುಬಿಟ್ಟರು.
ಇವೆಲ್ಲ ನಮ್ಮ ಸುತ್ತಲೂ ಸಂಭವಿಸುತ್ತಿರುವ ಆಧಾರ್ ಎಂಬ ಯುನಿಕ್ ಐಡೆಂಟಿಫಿಕೇಶನ್ ನಂಬರ್ ಎಂಬ ರಾಷ್ಟ್ರೀಯಗುರುತಿಸುವಿಕೆ ಪದ್ಧತಿಯ ವಿರಾಟ್ ಸ್ವರೂಪಗಳ ನಾಲ್ಕೆಂಟು ಬಿಂಬಗಳು ಅಷ್ಟೆ. ಮೊದಲು ಈ ಯೂನಿಕ್ ಐಡಿ ಎಂದರೆ ಏನು ನೋಡುವ. ನಮ್ಮ ದೇಶದಲ್ಲಿ ಎಲ್ಲ ನಾಗರಿಕರಿಗೂ ಮಕ್ಕಳು, ವಯಸ್ಕರು, ವೃದ್ಧರು, ಅಕ್ಷರಸ್ಥರು, ಅನಕ್ಷರಸ್ಥರು, ಅನುಕೂಲ ಇದ್ದವರು ಇಲ್ಲದವರು ಎಲ್ಲರಿಗೂ) ಅನ್ವಯವಾಗುವ ಹಾಗೆ ಒಂದು ಗುರುತಿನ ಚೀಟಿ ಇಲ್ಲ. ಉದಾಹರಣೆಗೆ:
- ೧೮ ವರ್ಷದ ಒಳಗಿನವರು ವೋಟ್ ಮಾಡುವುದಿಲ್ಲವಾದ್ದರಿಂದ ಅವರಿಗೆ ವೋಟರ್ ಐಡಿ ಇಲ್ಲ. ಹಾಗಾಗಿ ಅವರಿಗೆ ಈ ಗುರುತಿನ ಚೀಟಿ ಇಲ್ಲ. ಮನೆಯಲ್ಲಿ ರೇಶನ್ ಕಾರ್ಡಿದ್ದರೆ ಅವರ ಗುರುತಿಗೊಂದು ಅವಕಾಶವಿದೆ ಇಲ್ಲವಾದರೆ ಅದಿಲ್ಲ.
- ಆದಾಯ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಐಟಿ ಕಟ್ಟದೆ ಇರುವ ವರ್ಗಕ್ಕೆ ಪ್ಯಾನ್ ಅವಶ್ಯಕತೆ ಅಲ್ಲ, ಅವರು ಪ್ಯಾನ್ ಕಾರ್ಡು ಮಾಡಿಸುವುದಿಲ್ಲ.
- ಡ್ರೈವಿಂಗ್ ಮಾಡದಿರುವವರಿಗೆ ಡಿ.ಎಲ್ ಬೇಕಿಲ್ಲ ಹಾಗಾಗಿ ಡಿ.ಎಲ್ ಎಂಬುದನ್ನೆ ಒಂದು ಗುರುತಿಸುವಿಕೆಯ ಮಾನದಂಡವಾಗಿ ಉಪಯೋಗಿಸಲು ಬರುವುದಿಲ್ಲ.
- ಸರ್ಕಾರಿ ಕಛೇರಿಗಳಲ್ಲಿ ಇರುವವರಿಗೆ ಒಂದು ಗುರುತುಚೀಟಿ ಇದ್ದರೂ ಬೇರೆ ಖಾಸಗಿ ಕೆಲಸದಲ್ಲಿರುವವರ ಗುರುತುಚೀಟಿ ಸರ್ಕಾರಿ ಕೆಲಸಕ್ಕೆ ಅಥವಾ ಸರ್ಕಾರಿ ಉಪಯೋಗಕ್ಕೆ ಬರುವುದಿಲ್ಲ.
- ಪಾಸ್ ಪೋರ್ಟ್ ಒಂದು ಅತ್ಯುತ್ತುಮ ಗುರುತುಚೀಟಿಯಾದರೂ ಅದು ಅವಶ್ಯಕತೆ ಇದ್ದವರು ಮಾತ್ರ ಮಾಡಿಸುತ್ತಾರೆ.
ಈ ತರಹದ ಕಾರಣದಿಂದಾಗಿ ಇಡೀ ದೇಶದ ಎಲ್ಲ ನಾಗರಿಕರಿಗೂ ಒಂದು ಸಮಾನ ಗುರುತುಚೀಟಿ ಅಥವ ಯುನಿಕ್ ಐಡೆಂಟಿಫಿಕೇಶನ್ ಆಗಿ ಎಲ್ಲ ದಾಖಲೆಗಳಲ್ಲೂ ಉಪಯೋಗಿಸಬಹುದಾದ ಈ ಆಧಾರ್ ನಿಜವಾಗಲೂ ಒಂದು ಅತ್ಯುತ್ತಮ ಪರಿಕಲ್ಪನೆ.
ಇದರ ಪ್ರಕಾರ ಆಧಾರ್ ಕಾರ್ಡೆಂದರೆ ಒಂದು ಅನನ್ಯ ಗುರುತಿನ ಚೀಟಿ. ಚೀಟಿ ಹೊಂದುವವರ ಅನುಮತಿಯ ಮೇರೆಗೆ ಅವರ ಬಯೋಮೆಟ್ರಿಕ್ ವಿವರವನ್ನೂ ಹೊಂದುವುದರಿಂದ ಇಲ್ಲಿಯವರೆಗೆ ಮಾಡಿದ ಹಾಗೆ ಮುಖ/ಫೋಟೋ ಗುರುತಿನ ಮೇಲೆ,
ವಿಳಾಸದ ದಾಖಲೆಯ ಮೇಲೆ ಆ ಚೀಟಿಯನ್ನು ಹೊಂದಿದವರ ದಾಖಲೆಗಳನ್ನು ನಕಲು ಮಾಡಲಾಗುವುದಿಲ್ಲ. ಈ ಗುರುತುಚೀಟಿಯನ್ನು ತಮ್ಮದೆಂದು ಸಾಬೀತು ಪಡಿಸಲು ನಾವು ನಮ್ಮದೇ ಹೆಬ್ಬೆಟ್ಟು ಮತು ಕಣ್ಣುಗುಡ್ಡೆ (ಐರಿಸ್) ದಾಖಲನ್ನು ಸಾಬೀತು ಮಾಡಬೇಕಾಗುತ್ತದೆ. ಏನನ್ನು ನಕಲು ಮಾಡಿದರೂ ಈ ಎರಡನ್ನು ನಕಲು ಮಾಡಲು ಬರುವುದಿಲ್ಲ. ಇಡೀ ಪ್ರಪಂಚದಲ್ಲಿ ಯಾರಿಗೂ ಒಂದೇ ತರಹದ ಕಣ್ಣುಗುಡ್ಡೆ ಇರುವುದೇ ಇಲ್ಲ. ಹಾಗಾಗಿ ಇದು ಹೆಚ್ಚು ದಕ್ಷ ಗುರುತಿನ ಚೀಟಿ.
- ಇದು ಕಾರ್ಯಗತವಾದರೆ:
- · ದೇಶದ ಎಲ್ಲ(ಬಹುಪಲು) ನಾಗರಿಕರಿಗೆ ಒಂದೇ ಗುರುತಿಸುವಿಕೆಯ ದಾಖಲೆ ಇರುತ್ತದೆ.
- · ಡಿಜಿಟಲ್ ರೂಪದಲ್ಲಿ ಈ ದಾಖಲೆ ಇರುವುದರಿಂದ ಎಲ್ಲ ಬಗೆಯ ಡಿಜಿಟಲ್ ವ್ಯವಹಾರಗಳಲ್ಲಿ ಇದನ್ನು ಉಪಯೋಗಿಸುವುದು ಸುಲಭ. (ಬ್ಯಾಂಕ್ ವ್ಯವಹಾರ,ಸಿಬ್ಬಂದಿಯ ಸಂಬಳ, ಪಡಿತರ, ವಿಮೆ, ಲೈಸನ್ಸು ಇತ್ಯಾದಿ ದಾಖಲೆಗಳನ್ನು ಹೊಂದಲು ಬೇಕಾದ ವಿಚಾರಣೆ, ಅನುದಾನಗಳು, ಸಬ್ಸಿಡಿಗಳು, ಆದಾಯ ತೆರಿಗೆ, ವೋಟರ್ ವ್ಯವಸ್ಥೆ, ರಾಷ್ಟ್ರೀಯ ಭದ್ರತೆ ಮುಂತಾದವು) ಎಲ್ಲದಕ್ಕೂ ಈ ಯುನಿಕ್ ಐಡೆಂಟಿಫಿಕೇಶನ್ ಅನುಕೂಲಿಸುತ್ತದೆ.
- · ಯಾವುದೇ ಅನುಕೂಲ, ಅನುದಾನ, ಸಬ್ಸಿಡಿ ಇತ್ಯಾದಿಗಳಲ್ಲಿ ನಕಲು ಮಾಡುವುದು ಅಸಾಧ್ಯವಾಗುತ್ತದೆ. (ಉದಾಹರಣೆ ನಕಲಿ ಐಡಿಗಳನ್ನು ಮಾಡಿ ಬಿ.ಪಿ.ಎಲ್ ಕಾರ್ಡು, ಆದಾಯ ಕಾರ್ಡು, ವೋಟರ್ಸ್ ಐಡಿ, ಪಾಸ್ಪೋರ್ಟು ಇತ್ಯಾದಿ ಮಾಡಲು ಸಾಧ್ಯವಾಗುವುದಿಲ್ಲ.
- · ತಾತ್ವಿಕವಾಗಿ ಇದು ಭ್ರಷ್ಟ ವ್ಯಾಪಾರಗಳಿಗೆ ಕಡಿವಾಣ ಹಾಕುತ್ತದೆ. (ಒಂದು ಮಾಹಿತಿಯ ಪ್ರಕಾರ ಸಣ್ಣ ನಗರಸಭೆಯೊಂದರಲ್ಲಿ ಚುನಾವಣೆಗೆ ಮುಖಂಡರೊಬ್ಬರು ೫೦೦೦ ವೋಟರ್ ಐಡಿಗಳನ್ನು ಒಬ್ಬರೇ ಇಟ್ಟುಕೊಂಡು ನಕಲಿ ಮತದಾನ ಮಾಡಿಸಿದರು. ಸಾಮಾನ್ಯವಾಗಿ ಇದು ನಡೆಯುವಾಗ ಮತದಾನ ಮುಗಿಯುವ ಕೊನೆಯ ಅರ್ಧಗಂಟೆಯಲ್ಲಿ ಜನರು ಎಲ್ಲೆಲ್ಲಿಂದಲೋ ಬಂದು ಮತ ಹಾಕುತ್ತಾರೆ. ಕೌಂಟರಿನಲ್ಲಿರುವವರು ಐಡಿ ಇದೆಯೇ ಎಂದು ಪರಿಶೀಲಿಸಿ ಮತ ಹಾಕಿಸುತ್ತಾರೆ. ಕೊನೆಯ ಅರ್ಧ ಗಂಟೆಯಾಗಿರುವುದರಿಂದ ಮುಖ ಪರಿಶೀಲನೆ ಮತ್ತು ಸಾಬೀತುಪಡಿಸುವಿಕೆಗೆ ಅಂತಹ ಮಹತ್ವ ಕೊಡಲಾಗುವುದಿಲ್ಲ. ಈ ರೀತಿಯಲ್ಲಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ಕಳ್ಳವ್ಯವಹಾರವನ್ನು ಬಯೋಮೆಟ್ರಿಕ್ ಐಡೆಂಟಿಫಿಕೇಶನ್ ಇರುವ ಆಧಾರ್ ಕಾರ್ಡಿನಲ್ಲಿ ನಡೆಸಲಾಗುವುದಿಲ್ಲ), ನೂರಾರು ಬಿ.ಪಿ.ಎಲ್ ಕಾರ್ಡುಗಳನ್ನು ಒಂದು ಕುಟುಂಬದ ವಿವರಗಳ ಮೇಲೆ ತಯಾರಿಸಿ ಏಮಾರಿಸಲಾಗುವುದಿಲ್ಲ. ಪಾಸ್ಪೋರ್ಟ್ ದುರುಪಯೋಗ ತಡೆಗಟ್ಟಬಹುದು.
- · ಮುಖ್ಯವಾಗಿ ಹಲವಾರು ಪ್ಯಾನು ಮತ್ತು ಹಲವಾರು ಅಕೌಂಟು ಇಟ್ಟುಕೊಂಡು ಆದಾಯವನ್ನು ಮರೆಮಾಚಲಾಗುವುದಿಲ್ಲ. ಅನೈತಿಕವಾಗಿ ವಿವರಗಳನ್ನು ಸೃಷ್ಟಿಸಿ ತಮ್ ತಮ್ಮ ಹಲವಾರು ಐಡೆಂಟಿಟಿಗಳನ್ನು ಉಪಯೋಗಿಸಿ ಸಮಾಜದ ಎಲ್ಲ ಸ್ತರಗಳಲ್ಲೂ ಭ್ರಷ್ಟಾಚಾರ ನಡೆಸುವವರಿಗೆ ಇದು ದೊಡ್ಡ ಕಡಿವಾಣ.
- ಇಲ್ಲಿಯವರೆಗೂ ಅತ್ಯುತ್ತಮ ಪರಿಕಲ್ಪನೆಗಳೆಲ್ಲ ಯೋಜನೆಯ ಹಂತದಲ್ಲೆ ಅದ್ಭುತವಾಗಿ ಪ್ರತಿಪಾದಿಸಲ್ಪಟ್ಟು ಕಾರ್ಯರೂಪಕ್ಕೆ ತರುವಾಗ ಮಹೋದ್ಭುತವಾಗಿ ಎಕ್ಕುಟ್ಟಿ ಹೋಗಿರುವ ನಮ್ಮ ದೇಶದ ಇತರ ಎಲ್ಲ ಕಾರ್ಯಕ್ರಮಗಳ ಸಾಲಿನಲ್ಲಿ ಸೇರಲು ಈಗ ಆಧಾರ್ ತುದಿಗಾಲಲ್ಲಿ ನಿಂತ ಹಾಗಿದೆ.
ಯಾಕೆಂದರೆ ಮೇಲೆ ವಿವರಿಸಿದ ಹಾಗೆ ಆಧಾರ್ ಅನ್ನು ಸರಿಯಾಗಿ ಕಾರ್ಯಗತ ಮಾಡಿ ಜನರಲ್ಲಿ ನಾಗರಿಕರಲ್ಲಿ ಇದರ ಬಳಕೆಯ ಬಗ್ಗೆ ಸರಿಯಾದ ತಿಳುವಳಿಕೆ ಕೊಟ್ಟರೆ ಭಾರತದ ಆಡಳಿತ ಮತ್ತು ಕಾರ್ಯಾಂಗ ಸುಧಾರಿಸಿಹೋಗುತ್ತದೆ. ಇದೊಂತರ ಹುಚ್ಚು ಬಿಡದೆ ಮದುವೆಯಾಗದು - ಮದುವೆಯಾಗದೆ ಹುಚ್ಚು ಬಿಡದು ಎಂಬ ಕ್ಯಾಚ್ ೨೨ ಸನ್ನಿವೇಶವಾಗಿ ಪರಿವರ್ತನೆಯಾಗಿ ಕೂತಿದೆ. ಇದಕ್ಕೆ ನಮ್ಮ ರಾಜಕೀಯ ಪಕ್ಷಗಳ ಮೇಲಾಟ ಕಾರಣ. ಅಷ್ಟೆ ಅಲ್ಲದೆ ಭ್ರಷ್ಟತನದಲ್ಲಿ ಮುಳುಗಿಹೋಗಿರುವ ಆಡಳಿತ ಯಂತ್ರ, ಮತ್ತು ಏನಾದರೆ ಏನು ನಮಗೇನಾಗುತ್ತದೆ ಎಂಬ ನಾವು ನಾಗರಿಕರ ನಿರ್ಲಕ್ಷ್ಯ ಕಾರಣ. ಭ್ರಷ್ಟತನವನ್ನು ನಾವು ರಾಜಕೀಯ ಪಕ್ಷಗಳಿಗೆ, ಆಡಳಿತ ಯಂತ್ರಕ್ಕೆ ಆರೋಪಿಸಿ ನಮ್ಮ ಮೇಲಿನ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವುದು ಎಲ್ಲಕ್ಕಿಂತ ಮುಖ್ಯ ಕಾರಣ.
· ಆಧಾರ್ ಅನ್ನು ಸಮರ್ಥಿಸುವ ಗುಂಪು ಹೇಳುತ್ತದೆ. ಆಧಾರ್ ಎಂದರೆ ಎಲ್ಲದೂ. ನಮ್ಮ ಎಲ್ಲ ಸಮಸ್ಯೆಗಳಿಗೆ ಆಧಾರೆ ಪರಿಹಾರ. ಇದನ್ನು ಮಾಡಿದರೆ ಭಾರತ ವಿಶ್ವಗುರುವಾಗುತ್ತದೆ ಎಂದು.
· ಆಧಾರ್ ಅನ್ನು ವಿರೋಧಿಸುವ ಗುಂಪು ಹೇಳುತ್ತದೆ ಆಧಾರೆ ಎಂದರೆ ಎಲ್ಲದೂ ಅಲ್ಲ. ನಮ್ಮ ಎಲ್ಲ ಸಮಸ್ಯೆಗಳಿಗೆ ಆಧಾರೆ ಕಾರಣ. ಇದನ್ನು ಮಾಡಿದರೆ ಭಾರತ ವಿಶ್ವಗುಲಾಮನಾಗುತ್ತದೆ. ಆಧಾರ್ ಹೊಂದಿದ ವ್ಯಕ್ತಿ ಆಡಳಿತದ ಸರ್ಕಾರದ ಮರ್ಜಿಯಲ್ಲಿ ಬದುಕಬೇಕಾಗುತ್ತದೆ. ಖಾಸಗಿತನದ ಹರಣ ಎಂದು.
ಈ ಎರಡೂ ಗುಂಪಿನ ಮಧ್ಯದ ತೆಳುಗೆರೆಯ ಮೇಲೆ ಒಂಟಿಕಾಲಿನಲ್ಲಿ ನಿಂತಿದೆ ಆಧಾರ್ ಅಥವಾ ಯೂನಿಕ್ ಐಡೆಂಟಿಫಿಕೇಶನ್ ಎಂಬ ಪರಿಕಲ್ಪನೆಯ ಸತ್ಯ.
ಒಂದು ಗುರುತಿನ ಚೀಟಿ ನಮ್ಮ ಎಲ್ಲ ದೈನಂದಿನ ವ್ಯವಹಾರದ, ನಂಬಿಕೆಯ, ದಾಖಲೆಯ, ನಕಲು ಮಾಡಲಾಗದ ಸತ್ಯವಾದರೆ ಅದರಿಂದ ಅನುಕೂಲ ಯಾರಿಗೆ?
ಜನಸಾಮಾನ್ಯರಿಗೆ. ಇದನ್ನು ಯಾವುದೇ ವಶೀಲಿ ಬಾಜಿ, ದುಡ್ಡು ದಮ್ಮಯ್ಯ ಕೊಟ್ಟು ಮಾಡಲಾಗುವುದಿಲ್ಲ. ನಮ್ಮದೇ ಹೆಬ್ಬೆಟ್ಟು, ನಮ್ಮದೇ ಕಣ್ಗುಡ್ಡೆ,ಮತ್ತು ನಾವೆ ಕೊಡುವ ನಮ್ಮ ವಿವರಗಳು. ಎಲ್ಲಿಯೂ ಯಾವಾಗಲೂ ಉಪಯೋಗಿಸಬಹುದಾದ ಪರಿಶೀಲಿಸಬಹುದಾದ ವಿವರ ವ್ಯವಸ್ಥೆ. ಇಲ್ಲಿ ನಮ್ಮ ವಿವರಗಳನ್ನು ಯಾರೆಂದರೆ ಅವರಿಗೆ ಕೊಡಲಾಗುವುದಿಲ್ಲ. ನಮ್ಮ ಕಾರ್ಡು ಅಥವಾ ನಂಬರ್ ಯಾರೆ ಕದ್ದರೂ ಅದನ್ನು ನಮ್ಮದೆ ಬಯೋಮೆಟ್ರಿಕ್ ಪರಿಶೀಲನೆಯಿಲ್ಲದೆ ಉಪಯೋಗಿಸಲೇ ಬರುವುದಿಲ್ಲ. ಇದು ಪಕ್ಷಾತೀತವಾದ ಸತ್ಯ.
ಒಂದು ನಕಲು ಮಾಡಲಾಗದ ಗುರುತಿನ ಚೀಟಿಯಿಂದ ಅನಾನುಕೂಲ ಯಾರಿಗೆ?
ನಮ್ಮನ್ನು ನಂಬಿಸಿ ನಮ್ಮನ್ನು ಕೊಳ್ಳೆ ಹೊಡೆಯುತ್ತಿರುವ ಭ್ರಷ್ಟ ವ್ಯವಸ್ಥೆಗೆ. ಅದು ದುಡ್ಡು ಕೊಟ್ಟು ಮತ ಖರೀದಿಸಿ ಬಂದಿರುವ ಸರ್ಕಾರವಿರಬಹುದು, ತೋಳ್ಬಲ ಉಪಯೋಗಿಸಿ ಹೆದರಿಸಿ ನಮ್ಮನ್ನು ಅದುಮಿಟ್ಟಿರುವ ಪಾಳೇಗಾರ ವ್ಯವಸ್ಥೆಯಿರಬಹುದು, ತಲೆ ಉಪಯೋಗಿಸಿ ನಮ್ಮ ತಲೆ ಕೆಡಿಸಿ ಅನೈತಿಕ ದುಡ್ಡು ಸಂಪಾದನೆಗೆ ನಮ್ಮನ್ನು ಪ್ರಚೋದಿಸುವ ಗುಂಪಿರಬಹುದು, ನಮ್ಮ ವಿವರಗಳನ್ನೇ ಉಪಯೋಗಿಸಿ ನಕಲು ಮಾಡಿ ತಮ್ಮ ಕಾರ್ಯ ಸಾಧಿಸುವ ಭಯೋತ್ಪಾದಕರು, ಭ್ರಷ್ಟ ರಾಜಕಾರಣಿಗಳು, ಕಂಪನಿಗಳಿರಬಹುದು ಇವರೆಲ್ಲರಿಗೂ ಕೈಕಟ್ಟುತ್ತದೆ. ಆದರೆ ಹಾಗಂತ ಇದನ್ನು ಸಾರಾಸಗಟಾಗಿ ಎದುರಾಎದುರೆ ಹೇಳಲು ಯಾರಿಗೂ ದಮ್ಮಿಲ್ಲ. ಈ ಯೋಜನೆಯ ಅನುಷ್ಠಾನದಲ್ಲಿರುವ ಲೋಪದೋಷಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಇವರೆಲ್ಲರೂ ನಮಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದಾರೆ. ನಮ್ಮನ್ನು ನಮ್ಮ ವಿರುದ್ಧವೇ ಎತ್ತಿಕಟ್ಟುತ್ತಾರೆ. ಇದು ಸಹ ಪಕ್ಷಾತೀತವಾದ ಸತ್ಯ. ನಾನು ಹೊಡೆದಂಗೆ ಮಾಡುವೆ ನೀನು ಅತ್ತಂತೆ ಮಾಡು ಎನ್ನುವುದು ಈ ಭ್ರಷ್ಟ ವ್ಯವಸ್ಥೆಯ ಪಾಲುದಾರರಾದ ಎಲ್ಲರ ಕಾರ್ಯತಂತ್ರ.
ಇದರ ಯಾವುದೇ ಮಾಹಿತಿಯಿಲ್ಲದ ನಮ್ಮ ಜನಸಾಮಾನ್ಯರ ದೊಡ್ಡ ಗುಂಪಿದೆ. ನಮಗೆ ನಮ್ಮದೇ ಗಾಣದಲ್ಲಿ ದಿನದಿನವೂ ತಿರುಗುತ್ತಿರುವವರಿಗೆ ಇದೆಲ್ಲ ಬಸ್ಸಲ್ಲಿ ಹೋಗಲು ಟಿಕೆಟ್ ಕೊಂಡಹಾಗೆ ಅಥವಾ ಊಟಕ್ಕೆ ಮೊದಲು ಕೂಪನ್ ಕೊಂಡ ಹಾಗೆ ಇದೂ ಒಂದು ವ್ಯವಸ್ಥೆ. ಇದರ ಹೆಚ್ಚಿನ ತಿಳುವಳಿಕೆಯಿಲ್ಲ. ಭ್ರಷ್ಟರಲ್ಲದ ಆದರೆ ಆಡಳಿತ ಯಂತ್ರದ ಭಾಗವಾಗಿರುವ ಹೆಚ್ಚಿನ ಸರ್ಕಾರಿ ಸಿಬ್ಬಂದಿಗಳೂ ಹೀಗೆಯೇ ಇರುವರು. ಅವರಿಗೂ ಈ ಯೋಜನೆಯ ಸಂಪೂರ್ಣ ತಿಳುವಳಿಕೆ, ಈ ಯೋಜನೆಯ ಫಲದಾಯಿತ್ವದ ಅರಿವು ಇಲ್ಲ. ಎಲ್ಲರಿಗೂ ಯಾವುದೋ ದುಡ್ಡುತಗೊಂಡ ಖಾಸಗೀ ಫರ್ಮು ತರಬೇತಿ ಕೊಡುತ್ತದೆ. ಅವರು ಉಪಯೋಗಿಸುವ ಭಾಷೆ, ಸ್ಥಳೀಯ ಜ್ಞಾನ ಎಲ್ಲ ನಗಣ್ಯ. ತರಬೇತಿ ಮುಗಿದ ಸರ್ಟಿಫಿಕೇಟು ಕೊಡುತ್ತದೆ. ಆದರೆ ನಿಜವಾಗಿಯೂ ಈ ಆಧಾರ್ ಕೊಡುವ, ಮತ್ತು ಕೊಟ್ಟ ನಂತರ ಅದನ್ನು ಉಪಯೋಗಿಸಲು ಬೇಕಾಗುವ ಮೂಲಭೂತ ವ್ಯವಸ್ಥಯೇ ಇಲ್ಲ. ಆ ವ್ಯವಸ್ಥೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕಾದ ಉಪಯುಕ್ತ ಅಥವಾ ನೇರ ಹ್ಯಾಂಡ್ಸ್-ಆನ್ ತರಬೇತಿ ಇಲ್ಲ. ಈ ಡಿಜಿಟಲ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಬೇಕಾದ ವಿದ್ಯುತ್, ಯು.ಪಿ.ಎಸ್, ನೆಟ್ವರ್ಕ್/ಅಂತರ್ಜಾಲ, ಉತ್ತಮ ಮಾಹಿತಿಸರ್ವರ್ ಯಂತ್ರಗಳು, ಹೆಬ್ಬೆಟ್ಟು,ಫೋಟೋ, ಐರಿಸ್ ದಾಖಲಿಸುವ ಯಂತ್ರಗಳು ಇವುಗಳನ್ನೆಲ್ಲ ಸರಿಯಾಗಿ ಪೂರೈಸುವ ವ್ಯವಸ್ಥೆಯಿಲ್ಲ. ಹಾಗಾಗಿ ಆಧಾರ್ ದಾಖಲೆ ಜನರಿಗೆ ಒಂದು ವ್ಯರ್ಥ ಪ್ರಹಸನದ ಹಾಗೆ, ಸಮಯ ಪೋಲು ಮಾಡುವ ಯೋಜನೆಯ ಹಾಗೆ ಕಾಣುತ್ತದೆ. ಆಧಾರ ಬಂದ ನಂತರ ಅದನ್ನು ಉಪಯೋಗಿಸುವ ಕಡೆ ಇರುವ ಅವ್ಯವಸ್ಥೆ, ಅಜ್ಞಾನ ಕೂಡಾ ಇದರ ಕಾರ್ಯಕ್ಷಮತೆಗೆ ದೊಡ್ಡ ಹೊಡೆತ.
ಇಷ್ಟಲ್ಲದೆ ಇದು ದೇಶದ ಭದ್ರತೆಗೆ, ಖಾಸಗಿತನಕ್ಕೆ ಹೊಡೆತ ನೀಡುತ್ತದೆ ಎಂದು ಪ್ರಚಾರಮಾಡುವ ಒಂದು ಗುಂಪಿದೆ. ಇವರು ಯಾತಕ್ಕೆ ಸೇರಿದವರು ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ. ಈ ಮಾಹಿತಿ ಅತ್ಯಂತ ಗೌಪ್ಯ ಮತ್ತು ಸುರಕ್ಷಿತ. ಆದರೆ ಈ ಗೌಪ್ಯತೆ ಮತ್ತು ಸುರಕ್ಷಿತತೆಯ ಬಗ್ಗೆ ಮಾತಾಡಬೇಕಾಗಿರುವುದು ನಾನು ನೀವಲ್ಲ. ಇದನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಸಾಮರ್ಥ್ಯವಿರುವ ಆಧಾರ್ ಪ್ರಾಧಿಕಾರ. ಪ್ರಾಧಿಕಾರದಿಂದ ಜನರಿಗೆ ಈ ಬಗ್ಗೆ ಸರಿಯಾದ, ಜನರ ತಿಳುವಳಿಕೆಯ ಮಟ್ಟದಲ್ಲಿ ಅರ್ಥವಾಗಬಹುದಾದ ಸ್ಪಷ್ಟೀಕರಣ ಮತ್ತು ಮಾಹಿತಿ ಬೇಕು. ಇದನ್ನು ತನ್ನ ಅನುಕೂಲಕ್ಕೆ ಮಾತ್ರ ಬಳಸಿಕೊಳ್ಳುವ, ಬದ್ಧತೆಯಿಲ್ಲದಿರುವ ಸರ್ಕಾರಗಳೂ ರೂಲುಗಳ ಪ್ರಕಾರ ಒಂದಿಷ್ಟು ಅನುದಾನ ಉಪಯೋಗಿಸಿ ಕಾಟಾಚಾರದ ಜಾಹೀರಾತುಗಳನ್ನು ರಚಿಸಿ ಯಾರಿಗೂ ಅರ್ಥವಾಗದ ಹಾಗೆ ಮಾಡುವುದರಲ್ಲಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿವೆ.
ಆಧಾರ ಒಂದು ಅತ್ಯುತ್ತುಮ ಪರಿಕಲ್ಪನೆ. ಭಾರತದಂತಹ ದೇಶಕ್ಕೆ ಇದು ಅವಶ್ಯವಾಗಿ ಬೇಕು. ಆದರೆ ಆಧಾರ್ ನೀಡುವ ಮತ್ತು ನೀಡಿದ ನಂತರ ಆ ಮಾಹಿತಿಯನ್ನು ಸರಿಯಾಗಿ ಸಂರಕ್ಷಿಸುವ, ಸಂರಕ್ಷಿಸಿದ ಮಾಹಿತಿಯನ್ನು ಸರಿಯಾಗಿ ನಿರ್ವಹಿಸುವ ವ್ಯವಸ್ಥೆಯನ್ನು ನಮ್ಮ ಸರ್ಕಾರ, ಆಡಳಿತ ಯಂತ್ರ ಇವು ಸಮರ್ಪಕವಾಗಿ ಮಾಡಬೇಕು. ಇದರ ಬಗ್ಗೆ ತಿಳುವಳಿಕೆಯನ್ನು ಪಡೆದ ನಾಗರಿಕರು ಇತರರಿಗೂ ತಿಳುವಳಿಕೆಯನ್ನು ಹಂಚಬೇಕು. ಮತ್ತು ನಮ್ಮ ಅನುಕೂಲಗಳನ್ನು ನಾವು ಪಡೆಯುವ ನಿಟ್ಟಿನಲ್ಲಿ ಸರ್ಕಾರವನ್ನು ಆಡಳಿತವನ್ನು ಪ್ರಶ್ನಿಸಿ ಅದನ್ನು ನಮಗೆ ನೀಡುವಂತೆ ಮಾಡಬೇಕು. ಏನೋ ಹೋಗಲಿ ಬಿಡು. ನಾನೊಬ್ಬನು ಗೆರೆದಾಟಿದರೆ ಏನು ಮಹಾ ಆಯಿತು ಎಂಬ ಉಡಾಫೆಯಲ್ಲಿ ನಮ್ಮ ನೈತಿಕ ಬದ್ಧತೆಯನ್ನು ಹೊಂದಿಸಿಕೊಂಡು ನಡೆಯುವ ನಾವು ಕೋಟ್ಯಂತರ ಭಾರತೀಯರು ಇಡೀ ದೇಶವನ್ನೆ ಭ್ರಷ್ಟಾಚಾರಕ್ಕೆ ಒತ್ತೆ ಇಡುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನ ಬಂದರೆ ಇದು ಸರಿಹೋಗಲೂಬಹುದು.
ಆಗ ಮಾತ್ರ ಸಾವಿರಾರು ಲಕ್ಷ್ಮಮ್ಮರು ತಮ್ಮ ಪಡಿತರವನ್ನು ಯಾವ ಅಡೆತಡೆಯಿಲ್ಲದೆ ಪಡೆಯಬಹುದು. ನೂರಾರು ಮಾದೇವಯ್ಯರಿಗೆ ಅವರ ವಿಮೆ ದೊರಕುತ್ತದೆ. ಶಾಮರಾಯರು ಅಬಾಧಿತವಾಗಿ ಮೊಬೈಲು ಉಪಯೋಗಿಸಬಹುದು. ಆಧಾರಿನಿಂದ ಪಡಿತರವಿಲ್ಲದೆ ಸತ್ತರು ಎಂಬ ಸುದ್ದಿಯು ನಿರಾಧಾರವಾಗುತ್ತದೆ. ಕಪ್ಪುಹಣ ಲೂಟಿ ಮಾಡಿ ಬೇರೆ ದೇಶಕ್ಕೆ ಓಡಿಹೋಗುವವರಿಗೆ ಅಡ್ಡಗಾಲು ಹಾಕಬಹುದು. ಒಂದು ಮಟ್ಟಕ್ಕೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಕೂಡ.