Tuesday, September 26, 2023

Long Post Alert!


"ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..."

ಬುದ್ಧಚರಣವೆಂಬ ಮಹಾಕಾವ್ಯದಾನೆಯ ಮುಟ್ಟಿನೋಡಿದ ಕುರುಡುನೋಟ.-ಸಿಂಧು

----------------------------------------

ಹೆಸರು ನೋಡಿ ಓಹ್ ಇದು ನನಗೆ ಈಗ ಸಧ್ಯಕ್ಕೆ ಬೇಡ ಅಂದುಕೊಂಡೆ. ಅದು ಮಹಾಕಾವ್ಯ ಅಂತ ವಿವರಣೆ ಓದುತ್ತಲೂ ಬಹುಶಃ ಇದು ನನಗೆ ಆಗಲಿಕ್ಕಿಲ್ಲ ಎಂಬ ಯೋಚನೆ ಬಂತು. ಎಂದಾದರೊಂದು ದಿನ ನೋಡುವ ಎಂಬ ಸಮಾಧಾನವನ್ನೂ ಕೊಟ್ಟುಕೊಂಡೆ.
ಹಾಗಂತಲೇ ಅಲ್ಲಿ ಇಲ್ಲಿ ಈ ಪುಸ್ತಕದ ಕುರಿತು ಕೆಲ ಹಿರಿಯರ ಅಭಿಪ್ರಾಯ ಲೇಖನಗಳು ಪ್ರಕಟವಾದಾಗ ಓದಿದರೂ ಮನಸ್ಸು ಓದಲೆಳಸಿರಲಿಲ್ಲ. ಇದರ ಕುರಿತು ಮಾತನಾಡಿಕೊಂಡರೂ ಗೆಳತಿ ಮಾಲಿನಿ ಈ ಪುಸ್ತಕದ ಕುರಿತು ಬರೆಯುವವರೆಗೂ ಓದುವ ಮನಸ್ಸು ಬಂದಿಲ್ಲದೆ ಇದ್ದದ್ದು ನಿಜ.
ಪುಸ್ತಕದ ಹೆಸರು ಮತ್ತು ಮಹಾಕಾವ್ಯವೆಂಬ ಪ್ರಕಾರ ಸ್ವಲ ಭಯವುಂಟು ಮಾಡಿದ್ದು ನಿಜವೇ ಆದರೂ, ಈ ಕುರಿತು ಬಂದ ಲೇಖನಗಳು ಅವುಗಳಲ್ಲಿಯ ಅಧ್ಯಯನಶೀಲತೆಯ ಗಹನತೆಯಿಂದ ಅಥವಾ ಮೇಲುಮೇಲಿನ ಕೆಲಮಾತುಗಳಿಂದ ಪುಸ್ತಕದ ತಿರುಳಿನ ಕಡೆಗೆ, ಸಂರಚನೆಯ ಕಡೆಗೆ ನನ್ನ ಮನಸ್ಸನ್ನು ಹೊರಳಿಸದೇ ಇದ್ದದ್ದೂ ಅಷ್ಟೇ ನಿಜ.

ಚಿಕ್ಕವರಿದ್ದಾಗ ಅಲ್ಲಿಲ್ಲಿ ಚೂರು ಕೇಳಿದ ಮತ್ತು ಅಮರಚಿತ್ರಕಥೆ, ಚಂದಮಾಮದಲ್ಲಿ ಓದಿದ ಜಾತಕ ಕಥೆಗಳು ಹಾಗೂ ಪಠ್ಯದಲ್ಲಿ ಒದಗಿದ ಬುದ್ಧನಷ್ಟೇ ಗೊತ್ತಿದ್ದ ನನಗೆ ಈ ಮಹಾಕಾವ್ಯವು ಬುದ್ಧನೆಂಬ ಅಗಲವಾದ ಹರಿವಿನ ಹೊಳೆಗೆ ಲೈಫ್ ಜಾಕೆಟ್ ಇರುವ ತೆಪ್ಪವಾಗಿ ಒದಗಿತು ಎಂದರೆ ಉತ್ಪ್ರೇಕ್ಷೆಯಲ್ಲ. ಸಾಮಾನ್ಯವಾಗಿ ಬುದ್ಧ ಎಂದರೆ "ಆಸೆಯೇ ದುಃಖಕ್ಕೆ ಮೂಲ, ಬುದ್ಧ ಎಂದರೆ ನಡುರಾತ್ರೆ ಹೆಂಡತಿ ಮತ್ತು ಮಗು ಮಲಗಿದ್ದಾಗ ಬದುಕಿನ ಅರ್ಥ ತಿಳಿಯಲು ಎದ್ದು ಹೋದ ರಾಜಕುಮಾರ, ಕಿಸಾಗೌತಮಿಗೆ ಸಾವು ಎಲ್ಲರಿಗೂ ಒಂದಿಲ್ಲೊಂದು ದಿನ ಬಂದೇ ಬರುವುದು ಎಂದು ಸುಲಭವಾಗಿ ಸಾಸಿವೆಯ ಮೂಲಕ ಅರ್ಥ ಮಾಡಿಸಿದವನು, ಬುದ್ಧನೆಂದರೆ ಅಂಗುಲಿಮಾಲನಿಗೆ ಬೆರಳು ಕೊಟ್ಟವನು, ಬುದ್ಧನೆಂದರೆ ಅಮ್ರಪಾಲಿಯೆಂಬ ನರ್ತಕಿಯ ಮನೆಗೂ ಬಂದ ಗುರು, ಬುದ್ಧ ಎಂದರೆ ವಿಹಾರ, ಬುದ್ಧ ಎಂದರೆ ಚೈತ್ಯ, ಬುದ್ಧ ಎಂದರೆ ನಲಂದಾ, ಬುದ್ಧ ಎಂದರೆ ಬೋಧಿ ವೃಕ್ಷ, ಬುದ್ಧ ಎಂದರೆ ರಾಜರಾಜರುಗಳನ್ನೆಲ್ಲ ಹಿಂಸೆಯಿಂದ ವಿಮುಖವಾಗಿಸಿದವನು, ಎಂದೆಲ್ಲ ಸ್ವಲ್ಪ ರಮ್ಯ ಮತ್ತು ಸ್ವಲ್ಪ ನಾವು ಸಾಧಾರಣ ಮನುಷ್ಯರಿಂದ ತುಸು ದೂರಕ್ಕೆ ಎತ್ತರಕ್ಕೆ ಇರುವ ಮಹಾನ್ ಚೇತನ ಎಂಬುದಷ್ಟು ಅರೆಬರೆಯಾಗಿ ದಕ್ಕಿದ ಬಾಲ್ಯದ ತಿಳಿವು ಒಂದೆಡೆಗಿತ್ತು. ಮುಂದೆ ಮುಂದೆ ಬೆಳೆಯುತ್ತ ಬರುವಾಗ ಬುದ್ಧನೆಂದರೆ ವೈದಿಕಶಾಹಿಯ ವಿರುದ್ಧ ಸಮಾನತೆಯ ಧರ್ಮ ಕೊಟ್ಟವನು, ಹೊಸಯುಗದ ಹರಿಕಾರ, ಬುದ್ಧನೆಂದರೆ ಗಣರಾಜ್ಯಗಳ ಹಿಂದಿನ ಪ್ರೇರಣೆ, ಬುದ್ಧನೆಂದರೆ ನಲಂದಾ ತಕ್ಷಶಿಲೆ, ಬುದ್ಧನೆಂದರೆ ರಾಹುಲ ಸಾಂಕೃತ್ಯಾಯನರ ಕಥೆಗಳ ತಿರುಳು, ಬುದ್ಧನೆಂದರೆ ಅಂಬೇಡ್ಕರ್ ರಂತಹ ಮಹಾನಾಯಕನನ್ನೆ ಧಾರ್ಮಿಕವಾಗಿಸಿದವನು, ಬುದ್ಧನೆಂದರೆ ಪೌರ್ಣಮಿಯ ಶಾಂತತೆ, ಬುದ್ಧನೆಂದರೆ ಮಂದಸ್ಮಿತ ಹೀಗೆಲ್ಲ. ಜಗತ್ತಿನ ತೊಂದರೆಗಳಿಗೆ "ಬುದ್ಧಂ ಶರಣಂ ಗಚ್ಛಾಮಿ" ಎಂಬ ಏಕೈಕ ಪರಿಹಾರ ಎಂಬ ಅತಿರಮ್ಯ ಆದರ್ಶವೆಂದು ಕಲಿತರೂ ನನ್ನ ಹಾಗಿನ ಸಾಧಾರಣ ಮನುಷ್ಯರಿಗೆ ಒಂದು ಹೆಜ್ಜೆ ದೂರದ ನಮಸ್ಕಾರಕ್ಕೆ ಯೋಗ್ಯ ಎಂಬ ಭಾವನೆ ಇತ್ತು. ಹೆಚ್ಚೆಂದರೆ ಮನೆಯಲ್ಲಿ ದೀಪದ ಬೆಳಕು ಬೀಳುವೆಡೆಯಲ್ಲಿ ಒಂದು ಬುದ್ಧನ ಮೊಗದ ಶಿಲ್ಪವಿದ್ದರೆ ಮನೆಯ ಚಂದ ಹೆಚ್ಚುತ್ತದೆ ಎಂಬ ಅಲ್ಟ್ರಾ ಮಾಡರ್ನ್ ಅಭಿರುಚಿಯೊಂದು ಸೇರಿಕೊಂಡಿತು. ಬದುಕಿನ ದಾರಿಗಳಲ್ಲಿ ಬಗ್ಗು ಬಡಿಸಿಕೊಂಡು ಅಷ್ಟಷ್ಟೇ ದೂರ ಬರುವಾಗ ಕೆಲವು ರಮ್ಯ ಕಲ್ಪನೆಗಳು ವಾಸ್ತವದ ಬಿಸಿಲಿನಲ್ಲಿ ಒಣಗುತ್ತಾ ಹೂಪಕಳೆಗಳು ಉದುರುತ್ತವೆ. ಸಹಜವಾಗಿ ನಾವು ಒಂದು ನಿಟ್ಟುಸಿರಿನೊಂದಿಗೆ ಮುಂದೆ ಹೆಜ್ಜೆ ಇಡುತ್ತೇವೆ.

ಮೂರ್ತಿ ಪೂಜೆಯನ್ನೇ ಕಟುವಾಗಿ ವಿರೋಧಿಸಿದ, ಮೂಢನಂಬಿಕೆಗಳನ್ನು ಹೆಜ್ಜೆಹೆಜ್ಜೆಗೂ ಪ್ರಶ್ನಿಸುತ್ತಾ ಹೊಸ ಆಕಾಶವನ್ನು ತೆರೆದ ಬುದ್ಧನೆಂಬ ಗುರುವಿನ ಹಲ್ಲುಗಳನ್ನು ವಜ್ರದ ಕರಂಡಕವೊಂದರಲ್ಲಿ ಇಟ್ಟು ಬುದ್ಧ ದೇವಾಲಯವೊಂದರಲ್ಲಿ ಪೂಜಿಸಲಾಗುತ್ತದೆ, ಅದಕ್ಕಾಗಿ ಅತಿ ಹೆಚ್ಚು ಪ್ರವಾಸಿಗಳು ಭೇಟಿ ಕೊಡುತ್ತಾರೆ ಎಂದು ತಿಳಿದಾಗ ನಾನು ವೈಚಾರಿಕತೆ ಎಂಬುದು ಕಡತಂದ ರಮ್ಯತೆಯಾಗಿದ್ದರೆ ಎಂಥ ಅಪಾಯ ಎಂದು ಮನಗಂಡೆ. ಇಂಥ ಹಿನ್ನೆಲೆಯಲ್ಲಿ, ಅವರ ಬಿಡಿ ಕಾವ್ಯದ ಅಭಿಮಾನಿಯೇ ಆಗಿದ್ದರೂ ನಮ್ಮ ಹೆಚ್ಚೆಸ್ವೀಯವರ ಬುದ್ಧಚರಣ ಮಹಾಕಾವ್ಯವನ್ನು ಕೈಗೆತ್ತಿಕೊಳ್ಳಲು ನನಗೆ ಅಂಥ ಉಮೇದು ಇರಲಿಲ್ಲ.

ಈ ಪುಸ್ತಕದ ಕುರಿತು ನಾವೊಂದಿಷ್ಟು ಜನ ಕಾವ್ಯಾಸಕ್ತ ಸ್ನೇಹಿತರು ಮಾತನಾಡಿಕೊಂಡಾಗ ನಮ್ಮಲ್ಲಿನ ಚೆನ್ನಾಗಿ ಕವಿತೆ ಬರೆಯುವ ಸಾಕಷ್ಟು ಕಾವ್ಯ ಓದುವ ಗೆಳೆಯರು ಆಡಿದ ಅನುತ್ಸಾಹದ ಮಾತು ಕೂಡ ಇದು ಸ್ವಲ್ಪ ನನ್ನ ತಲೆಯ ಮೇಲೆ ಹೋಗುವ ಪುಸ್ತಕ ಎಂಬ ಭಾವವನ್ನೇ ಹುಟ್ಟಿಸಿತ್ತು.
ಮಾಲಿನಿ ಬುದ್ಧಚರಣದ ಕುರಿತು ಬರೆಯಲು ಹೊರಟಾಗ ನನ್ನನ್ನು ಬಗಲಿಗೆ ಸಿಕ್ಕಿಸಿಕೊಂಡು ಬರೆದ ಪರಿಗೆ ಈ ಸೊಗಸಾದ ಮಹಾಕಾವ್ಯದ ಘಮ ನನ್ನ ಮೊಂಡು ಮೂಗಿಗೂ ಬಂದಿತು.
ರಾತ್ರಿ ರಾಣಿ ಹೂಗಳಿಗೆ ತೀಕ್ಷ್ಣ ಪರಿಮಳವಿದ್ದರೂ ನೀವು ಆ ಬಳ್ಳಿಯಲ್ಲಿ ಬಿಟ್ಟ ಹೂಗೊಂಚಲಿಗೆ ಮೂಗೊಡ್ಡಿದರೆ ಅದರ ಪರಿಮಳದ ಲೋಕ ತೆರೆಯುವುದಿಲ್ಲ. ತುಸು ದೂರದಲ್ಲಿರಬೇಕು. ಮೆಲುವಾಗಿ ಗಾಳಿ ಬೀಸಬೇಕು. ಅಷ್ಟೆ.. ಮನಸ್ಸು ಆ ಪರಿಮಳದ ನಶೆಯಲ್ಲಿ ತೇಲುತ್ತ ಹಗುರಾದ ಭಾವ ತುಂಬುತ್ತದೆ. ಈ ಬುದ್ಧಚರಣವೆಂಬ ಮಹಾಕಾವ್ಯಕ್ಕೆ ಆ ಗುಣವಿದೆ ಎಂದು ನನಗಾದ ಅನುಭವ. ಮಾಲಿನಿ ಲೇಖನವನ್ನು ಮುತ್ತುಮಾಲೆಯಾಗಿ ಪೋಣಿಸುವಾಗ ಮಧ್ಯೆ ಮಧ್ಯೆ ಬೇಕಿದ್ದ ಬಿಡುವಿನಲ್ಲಿ ನನ್ನ ಜೊತೆಗೆ ಕೆಲ ಮಾತುಕತೆ ಆಡುತ್ತಿದ್ದರು. ಮಾಲಿನಿಯ ಲೇಖನದ ಒಳನೋಟಗಳು ನನ್ನನ್ನು ಈ ಮಹಾಕಾವ್ಯದ ಮೊದಲ ಪುಟ ತೆರೆಯಲು ವಿಶ್ವಾಸ ತುಂಬಿದವು.

ಮೊದಲ ಪುಟ ಓದಿದ ಮೇಲೆ ಎಷ್ಟು ಪುಟಗಳಾದವು ಎಂದು ಎಣಿಸುವ ಪ್ರಮೇಯ ಅಥವಾ ಇದು ಮಹಾಕಾವ್ಯ, ಇದು ನನ್ನ ಅಳವಿಗೆ ಹೇಳಿದ್ದಲ್ಲ ಎಂಬ ಆತಂಕ ಬರಲೇ ಇಲ್ಲ. ಈ ಪುಸ್ತಕದ ಪುಟಪುಟಗಳಲ್ಲೂ ಭಾವಗೀತೆಗಳನ್ನೇ ಕವಿ ಕಂಡರಿಸಿಬಿಟ್ಟಿದ್ದಾರೆ.
ಸುಮ್ಮನೆ ಮೊದಲಿಗೆ ಒಂದು ಸಾಲು ನೋಡಿ
ಸಿದ್ಧಾರ್ಥನ ತಾಯಿಮಾಯಾದೇವಿಯ ಮನಸ್ಸಿನ ಕೊಳದಲ್ಲಿ ಏಳುವ ಭಾವನೆಗಳ ಅನುಭಾವದ ಅಲೆಗಳ ಕುರಿತು ಹೇಳುತ್ತಾ ಕವಿ ಬರೆಯುತ್ತಾರೆ:

"ಯಾರ ಬೆರಳೋ ಬಿಡಿಸಿವೆ ನೀರಿನಂಗಣದಿ
ಬೆಳಕಿನೆಳೆಬಟ್ಟನ್ನು| ಮೈತುಂಬ ದೀಪ ಮುಡಿಸಿರುವ
ಕಾಲ್ದೀಪವೆಂಬಂತೆ ಕಾಣುವಳು ಆ ಪುಣ್ಯವತಿ...."

ದುರಂತವೊಂದರ ಮುನ್ನುಡಿ ಬರೆಯುವಾಗಲೂ ಕವಿಯ ಕೈಯಲ್ಲಿ ಅದೇ ಮೆದುವಾದ ದನಿ. ಮಗು ಸಿದ್ದಾರ್ಥನ ತಾಯಿ ಎಳೆ ಬಾಣಂತಿ ಮಾಯಾದೇವಿ ಸಾಯುವ ಮುನ್ನಿನ ಗಳಿಗೆಗಳು ಹೀಗೆ ಸಾಲಾಗಿ ಬಂದಿವೆ. ಹರಿತವಾದ ಸಾಲೊಂದನ್ನು ಬರೆಯುವಾಗ ಕೈ ನಡುಗಿದರೂ ಸ್ಪಷ್ಟವಾಗಿ ಬರೆಯುತ್ತಾರೆ

"ಹತ್ತಿಬತ್ತಿಗೂ ಉರಿವ ದೀಪಕ್ಕೂ ನಂಟು ಕಳಚಿದ ಹಾಗೆ..." ಬಸಿರಿನ ಮೊದಲಲ್ಲಿ ಮೈತುಂಬ ದೀಪ ಹೊದ್ದ ಕಾಲ್ದೀಪದ ಉಪಮೆಯನ್ನು ನೆನಪು ಮಾಡಿಕೊಳ್ಳಿ. ಅದೇ ದೀಪದ ಉಪಮಾನ ಈಗ ಬದುಕಿನ ನಂಟು ಕಳಚುವುದಕ್ಕೂ ಬಂದಿದೆ.

"ಸುರಿಮಳೆಯ ಮುಸುಕಲ್ಲಿ ಬರಸಿಡಿಲು ಕಾಯುತಿದೆ
ಹಸಿಮರವ ನೋಡುತ್ತ ಮಸೆದಲಗು ಕಣ್ಣಲ್ಲಿ"

ಸಿಡಿಲಿನ ಮಸೆದಿಟ್ಟ ಕಣ್ಣಿನಲಗು ಹಸಿಯಾದ ಮರವನ್ನೆ ನಿಟ್ಟಿಸುವ ಈ ಸಾಲಿನ ಚಿತ್ರಕ ಶಕ್ತಿಗೆ ನಾನು ಮನಸೋತೆ.

ಸಿದ್ಧಾರ್ಥ ಯಶೋಧರೆಯ ನೋಡಿದ ಮೊದಲ ಕ್ಷಣವನ್ನು ಚಿತ್ರಿಸುವಾಗ ಬರೆಯುತ್ತಾರೆ.

"ನೀಲಿ ನೆಲದಲ್ಲಿ ಲೀನವಾಯಿತೆ?
ಎಲರು ಮಲರ ಗಲ್ಲವ ಮೆಲ್ಲ
ಗಲುಗಿಸಿತೆ ಮುಟ್ಟಿ ಮುಟ್ಟದ ಹಾಗೆ ಹಗುರವಾಗಿ?"

ಆಕಾಶ ಭುವಿಯೊಡನೆ ಸೇರಿದ ಗಂಡು ಹೆಣ್ಣಿನ ಹಲವಾರು ಚಿತ್ರಣಗಳು ನಮ್ಮ ಕವಿತೆ, ಹಾಡುಗಳಲ್ಲಿವೆ. ಇದು ಹೊಸದಾಗಿ ಚಿಕ್ಕದಾಗಿ ಚೆಲುವಾಗಿ ಹಿಡಿದ ಸಾಲು. ನೀಲಿಯು ನೆಲದಲ್ಲಿ ಲೀನವಾಯಿತೆ ಅಥವಾ ಗಾಳಿಯ ಅಲೆ ಪರಿಮಳದ ಗಲ್ಲವನ್ನ ಮೆಲ್ಲಗೆ ಮುಟ್ಟಿಯೂ ಮುಟ್ಟದ ಹಾಗೆ ಮೆಲ್ಲಗೆ ಅಲುಗಿಸಿತು ಅಷ್ಟೆಯೇ? ಇದನ್ನು ಸಿದ್ಧಾರ್ಥನೇ ಬಲ್ಲ.

ಯಾವುದು ನಿಜವೋ ಯಾವುದು ಕಣ್ಣಿಗೆ ಕಾಣಲು ನಿಜವೋ, ಅದು ಅಷ್ಟೇಯೇ ಅಲ್ಲದೆ ಆಳದಲ್ಲಿ ಅದರ ವಿರುದ್ಧ ಅರ್ಥವೂ ಇದ್ದಿರಬಹುದು ಎಂಬ ಹುದುಗಿಸಿದ ಅರ್ಥವಿರುವ ಸಾಲುಗಳು ಈ ಕಾವ್ಯದ ಉದ್ದಕ್ಕೂ ಚೆಲುವಾದ ಬಣ್ಣ ಬಣ್ಣದ ಹೊಸಹೊಸದಾದ ರೆಕ್ಕೆಗಳಲ್ಲಿ ಪಟಪಟಿಸುವ ಭೃಂಗದ ಹಾಗೆ ಸಾಕಷ್ಟು ಇವೆ.

ಇದೊಂತರ ಒಡಪು ಎಂದುಕೊಂಡರೆ ಒಡಪು. ಅದಿಲ್ಲವೋ ಹಾಗೆಯೇ ಮೇಲಿನಿಂದ ಸವರಲು ಬಲು ಚೆಲುವಾದ ಚಿತ್ತಾರ. ಚಿಟ್ಟೆಯ ಪಟಪಟಿಸುವ ಬಣ್ಣದ ರೆಕ್ಕೆ, ಸ್ವತಂತ್ರ ಹಾರಾಟ ಎಷ್ಟು ನಿಜವೋ ಅಷ್ಟೇ ನಿಜ ನೋಡಲು ಮುಟ್ಟಲು ಅಸಹ್ಯವಾದ ಕಂಬಳಿ ಹುಳು ಮತ್ತು ಕೋಶದೊಳಗೆ ಬಂಧಿಯಾದ ಪ್ಯೂಪಾ.

ಸಿದ್ಧಾರ್ಥ ಹುಟ್ಟಿದಾಗ ನೋಡಬಂದ ಹಿರಿಯಋಷಿ ಭವಿಷ್ಯ ನುಡಿದಿರುತ್ತಾರೆ. ಈ ಮಗು ಮುಂದೆ ಲೋಕದ ಅಳಲಿಗೆ ಅರ್ಥ ಹುಡುಕಿಕೊಡುವ, ನೆಮ್ಮದಿಗೆ ದಾರಿ ತೋರುವ ಸಂನ್ಯಾಸಿಯಾಗುತ್ತಾನೆ ಎಂದು. ಆ ಆತಂಕದಲಿ ತಾಯ್ತಂದೆಯರು ಹೊರಗಿನ ಕಾವು ತಟ್ಟದ ಹಾಗೆ ಮಗನನ್ನು ಬೆಳೆಸಿ, ಎಳೆ ಯವ್ವನದಲ್ಲೆ ಅವನೇ ಮೆಚ್ಚಿದ ಯಶೋಧರೆಯೊಡನೆ ಮದುವೆ ಮಾಡಿ ಆ ಎಳೆ ಜೋಡಿಗಳನ್ನು ನೋಡುತ್ತ ನಿಟ್ಟುಸಿರು ಬಿಡುತ್ತಾರೆ. ಆದರೆ ಲೋಕದ ಅವಶ್ಯಕತೆ ಬೇರೆಯದೇ ಇದೆ. ಮಳೆಗಾಲ ಮತ್ತು ಬೆಳೆಗಾಲ ಮುಗಿಯುತ್ತಲೆ ಚಳಿಗಾಲ ಕಾಲಿಡಲೇಬೇಕಲ್ಲ. ಎಲೆಯುದುರಲೇಬೇಕಲ್ಲ. ಎಂಥ ಕಟ್ಟೆಚ್ಚರದ ನಡುವೆಯೂ ಪ್ರಕೃತಿಯ ಚಕ್ರ ತಿರುಗುವ ಅರಿವನ್ನ ಗಮನಿಸುವ ಜೀವದ ಹಕ್ಕಿಗೆ ದೊಡ್ಡ ಬಯಲೂ ಪಂಜರವೇ. ಸಿದ್ದಾರ್ಥನ ಮನದ ತಳಮಳವನ್ನ ಕವಿ ಕಣ್ಕಟ್ಟುವಂತೆ ಚಿತ್ರಿಸಿದ್ದಾರೆ. ಅಂಥ ಒಂದು ಚಿತ್ರಣ ಇಲ್ಲಿದೆ.

"ಮರಗಳಡಿ ಹುಲ್ಲು ಅದುರುತ್ತಿರಲು,
ಸಣ್ಣ ಗಾಳಿಯ ನೆಪಕೆ ಕಾಯುತ್ತಿದ್ದಂತೆ
ಹಣ್ಣೆಲೆಗಳುದುರುತ್ತಾವೆ ತಲೆ ಮೇಲೆ ಮಳೆಯಂತೆ!"
"ಹಸಿರೆಲೆಗಳಿಂದ ಇಡಿಕಿರಿದಿದ್ದ ಅರಳಿ ಮರ
ಈಗ ನೋಡಿದರೆ ಎಲೆಯಿರದ ರೇಖಾ ಚಿತ್ರ!
"ಬಿದ್ದ ಎಲೆಗಳನ್ನೆತ್ತಬಹುದು ಕಾವಲ ಮಂದಿ
ಬೋಳು ಮರವನ್ನೆತ್ತಬಹುದೆ ಉಪವನದಿಂದ?
ಒಮ್ಮೊಮ್ಮೆ ಖುದ್ದು ತಾನೂ ಒಂದು ಮರವೆಂದು
ಭ್ರಮಿಸುವನು! ಉದುರತೊಡಗುತ್ತಾವೆ ತೋಳಿಂದ
ತಲೆಯಿಂದ ಕಣ್ಣ ರೆಪ್ಪೆಗಳಿಂದ ಒಣಗಿದೆಲೆ!

ಮರುಪುಟದಲಿ ಬರುವ

" ಅಡಕೆಯ ಮೆಣಸು ಮೈಸುತ್ತಿ ಕುಡಿಚಾಚುವಂತೆ ತುಟಿಯೊತ್ತಿ ನೀಳ್ದೋಳಿಗೆ" ಜೀವಸಖಿ ಯಶೋಧರೆ ಸಿದ್ಧಾರ್ಥನ ಜೊತೆಗಿರುವುದನ್ನು ವರ್ಣಿಸುವ ಕವಿಸಾಲು ಸಿದ್ದಾರ್ಥ ಅನುಭವಿಸುತ್ತಿರುವ ವಿವಿಧ ಭಾವಗಳಿಗೆ ರೂಪ ಕೊಡುತ್ತ ಹೋಗಿವೆ.

ತನ್ನ ನೆಮ್ಮದಿಗಾಗಿಯೇ ರೂಪಿಸಲ್ಪಟ್ಟ ಎಲ್ಲವೂ ತನ್ನ ನೆಮ್ಮದಿಯನ್ನೇ ಕದಡುವುವಾಗಿ ಬದಲಾಗುವ ವಿಷಮ ರೂಪಾಂತರವನ್ನು ಗಳಿಗೆಗಳಿಗೂ ಅನುಭವಿಸುವ ಅವನ ತೊಳಲಾಟಗಳು ಈ ಅಷ್ಟಪದಿಗಳಲ್ಲಿ ಚಿತ್ರಿಸಲ್ಪಟ್ಟಿವೆ. ವಿಶೇಷವೆಂದರೆ ಅವನ ತೊಳಲಾಟಗಳು ನಮ್ಮ ತೊಳಲಾಟಗಳಂತೆಯೇ ಭಾಸವಾಗುವ ಕಾವ್ಯಸೇತುವನ್ನ ಕವಿ ನಮಗೆ ಬುದ್ಧಚರಣದ ಮೂಲಕ ಕಟ್ಟಿಕೊಟ್ಟಿದ್ದಾರೆ.


"ಒಳಮನೆಯ ಕಥೆ ಬೇರೆ; ಹೊರಜಗಲಿ ಕಥೆ ಬೇರೆ.
ಮನೆ ಬಯಲ ನೋಡುವುದು ಕಿಟಕಿಗಳ ಕಣ್ತೆರೆದು.
ಮತ್ತೆ ಕಣ್ಮುಗಿದು ಒಳಗಲ್ಲೆ ಉಳಿಯುವ ಯತ್ನ.
ಹೊರಬಿಸಿಲು ಒಳನೆರಳಿಗೂ ಧಗೆಯ ನೀಡುವುದು.
......

ಬೇಡವೆಂದರು ಕಾಡುವುದು ಬಾಹ್ಯ ಜಗತ್ತು.
ಸುಮ್ಮನಿರಗೊಡದೆ ಒಳಗನ್ನು ಯಾವಾಗಲೂ.
...ಏಕಾಂತಕ್ಕೆ ಲೋಕಾಂತದಾವರಣ
...... ಹೊರಗ ಬಿಟ್ಟೊಳಗಿಲ್ಲ, ಒಳಗನ್ನು
ಒಳಗೊಳ್ಳದಿರುವ ಹೊರಗಿಲ್ಲ ಈ ಬದುಕಲ್ಲಿ.. "

ಬದುಕಿನ ಸತ್ಯವನ್ನು ಹೇಳುವ ರೀತಿಗಳು ಬೇರೆ ಬೇರೆ ಇರುತ್ತವೆ. ಇಲ್ಲಿ ಆ ಸತ್ಯ ಸೊಗಸಾದ ಕಾವ್ಯದ ಬಳುಕಲ್ಲಿ ಮಿಂಚುತ್ತಿದೆ. ಮನೆಯೆಂಬ ಒಳಾವರಣ ತನ್ನ ಕಿಟಕಿಗಳ ಕಣ್ಣನ್ನು ತೆರೆಯುತ್ತ ಬಯಲಿನ ಹೊರಾವರಣವನ್ನು ನೋಡುವುದಂತೆ.

ಮತ್ತೆ ಕಣ್ಮುಚ್ಚಿ, ಒಳಗಲ್ಲೆ ಉಳಿಯುವ ಪ್ರಯತ್ನ. ಒಳಗೆಲ್ಲ ತುಂಬಿದ ನೆರಳಿನಲ್ಲೂ ಹೊರಗಣ ಧಗೆ ಹಾಯ್ದೇ ಹಾಯುವುದು.

ಇಲ್ಲಿ ಸಿದ್ದಾರ್ಥನ ಬದುಕಿನ ಉದ್ದೇಶದೊಂದಿಗೆ ನಮ್ಮ ನಿತ್ಯದ ಲೌಕಿಕಗಳೂ ಬೆರೆತುಬಿಡುತ್ತವೆ. ಜೊತೆಗೆ ಒಳಗೆ ಹೊರಗನ್ನ ಸಂಭಾಳಿಸುತ್ತ ಸಾಗುವ ನಮ್ಮ ಪರಿಯೂ ಬರುತ್ತದೆ.

ಹಾಗಂತ ಈ ಯಾವುದೂ ಅರ್ಥ ಮಾಡಿಕೊಳ್ಳಲು ಕಷ್ಟವಾಗುವ ಭಾಷೆಯಲ್ಲಿ ಇಲ್ಲ, ಓದಲು ತೊಡಕಾಗುವ ರಚನೆ ಇಲ್ಲ. ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು ಎಂಬ ಸಾಲಿನ ಲಾಲಿತ್ಯ, ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಹೆಣ್ಣು ಎಂಬ ಸಾಲಿನ ರಮ್ಯವಿಷಾದ, ಅಥವಾ ಉತ್ತರಾಯಣದಲ್ಲಿ ಬರುವ ಎಲ್ಲರಿಗೂ ಊಟ ಬಡಿಸಿ ಕಡೆಯಲ್ಲಿ ಉಣ್ಣುತ್ತಿದ್ದ ನಿನಗೆ ಇಂದು ಮೊದಲು ಬಡಿಸಿದೆ ಎಂಬ ನೋವಿನ ಸೊಲ್ಲು - ಈ ರೀತಿಯಲ್ಲಿಯೇ ಈ ಮಹಾಕಾವ್ಯದ ಅಷ್ಟಪದಿಗಳು ಇವೆ. ಹೌದು ಕೆಲವೊಂದು ಕಡೆ ಸ್ವಲ್ಪ ಈಗಿನ ಆಡುನುಡಿಯಲ್ಲಿ ಅಷ್ಟಾಗಿ ಇಲ್ಲದ ಕನ್ನಡ ಪದಗಳು ಇವೆಯಾದರೂ ಆ ಪದಗಳ ಭಾವಕ್ಕೆ, ಸೊಬಗಿಗೆ, ಅದು ಅಲ್ಲಿ ಬರದೆ ಇದ್ದರೆ ಆಗುತ್ತಿದ್ದ ಅರ್ಥನಷ್ಟಕ್ಕೆ ಯಾವ ಓದುಗನೂ ಒಪ್ಪಲೇ ಬೇಕು ಹಾಗೆ ಬಂದಿವೆ.

ಇದೆಲ್ಲ ನಾನು ಬುದ್ಧಚರಣದ ಸೊಗಸನ್ನು ಎತ್ತಿ ಹಿಡಿಯಲು ಹೇಳಿದೆ. ಈ ಸೊಗಸಾದ ರಚನೆ ಮಹಾಕಾವ್ಯ ಎಂಬ ಪ್ರಕಾರದ ಹೆಸರಿನ ಭಾರದಿಂದಾಗಿ ಎತ್ತರದ ಸಾಲಿಗೆ ಸೇರಿ ನಾವು ಸಾಮಾನ್ಯ ಓದುಗರ ಕೈಗೆ ಎಟುಕದೆ ಹೋಗುವಂತಾಗದೆ ಇರಲಿ, ಕನ್ನಡ ಕವಿತೆಗಳನ್ನ ಓದಿ ಸಂತಸಪಡುವ ನಮಗೆಲ್ಲರಿಗೂ ಸವಿಯಲು ಸಿಗಲಿ ಎಂಬ ಆಶೆಯಲ್ಲಿ ಹೇಳಿದೆ.

ಇದಲ್ಲದೆ ಈ ಮಹಾಕಾವ್ಯದಲ್ಲಿ ಕವಿಯು ವರ್ತಮಾನದ ವಿಚಾರ ಘಟನೆ ವರ್ತನೆಗಳನ್ನು ಒಳಸೇರಿಸಿರುವ ಪರಿ ನನ್ನನ್ನು ಬಹುವಾಗಿ ಪ್ರಭಾವಿಸಿತು. ಎಂದೋ ಶತಮಾನಗಳಾಚೆ ಬರೆದ ಕುಮಾರವ್ಯಾಸ ಭಾರತದಲ್ಲಿ ಆಗಿನ ಕಾಲದ ಸಾಮಾಜಿಕ ಸಂಗತಿಗಳು, ಜನಜೀವನ ಹೇಗೆ ಪ್ರಭಾವ ಬೀರಿರಬಹುದು, ರಾಮಾಯಣ ದರ್ಶನಂ ನಲ್ಲಿ ಹೇಗೆ ಕುವೆಂಪು ಅವರ ಮಲೆನಾಡಿನ ಹಿನ್ನೆಲೆ, ಅಲ್ಲಿನ ಬದುಕು ಪ್ರಭಾವ ಬೀರಿ ಕಾವ್ಯದಲ್ಲಿ ಮಿಳಿತವಾಗಿದೆ ಎಂದು ಚರ್ಚಿಸುವ ನಮಗೆ ನಮ್ಮ ಕಣ್ಣೆದುರಿಗೇ ಇಂದು ಮಹಾಕಾವ್ಯವೊಂದು ಮೈದಳೆದಿದೆ. ಅದೂ ನಾವು ಓದಬಹುದಾದ ಸರಳಗನ್ನಡದಲ್ಲಿ. ಮತ್ತು ಸೊಗಸಾಗಿ ಓದಿಸಿಕೊಂಡು ಹೋಗುವಂತೆ, ಹೆಚ್ಚಿನ ವ್ಯಾಖ್ಯಾನ ಬಯಸದಂತೆ ಸಿಕ್ಕಿದೆ. ಹೀಗಿರುವಾಗ ನಮ್ಮ ವರ್ತಮಾನ, ಜನಪದ, ಜನಜೀವನವು ಈ ಕಾವ್ಯದಲ್ಲಿ ಹೇಗೆ ಮೈಗೊಂಡಿರಬಹುದು ಎಂದು ಓದುತ್ತ ಗ್ರಹಿಸಲು ಸಿಕ್ಕಿರುವುದು ನನಗೆ ಬಹಳ ಇಷ್ಟವಾಯಿತು. ಈ ಅವಕಾಶ ಅಪರೂಪವೇ. ನಾವು ಹಳೆಯ ಮಹಾಕಾವ್ಯಗಳನ್ನು ಈಗ ಓದುವಾಗ ಆ ಕುರಿತು ಬಂದ ವ್ಯಾಖ್ಯಾನಗಳೋ, ವಿಮರ್ಶೆಗಳೋ, ಲೇಖನಗಳೋ ಅವುಗಳನ್ನು ಆಧಾರವಾಗಿಟ್ಟು ಕೊಂಡು ಇದು ಹೀಗಿರಬಹುದು ಅದು ಹಾಗಿರಬಹುದು ಎಂದು ಅಂದಾಜಿಸುತ್ತೇವೆ. ಈ ಬುದ್ಧಚರಣ ಮಹಾಕಾವ್ಯದಲ್ಲಿ ಆ ರೀತಿಯ ಉಪಕರಣಗಳ ಅವಶ್ಯಕತೆ ಇಲ್ಲದೆ ಬರಿದೆ ನಮ್ಮ ಓದು ಮತ್ತು ನಮಗಿರುವ ವರ್ತಮಾನದ ತಿಳುವಳಿಕೆಗಳ ಮೂಲಕವೇ ಅದನ್ನು ಗ್ರಹಿಸಬಹುದಾಗಿದೆ.

ಈ ಕಾವ್ಯದಲ್ಲಿ ಸಿದ್ದಾರ್ಥನು ಅರಮನೆ ತ್ಯಜಿಸುವ ಮುನ್ನ ನಡೆಯುವ ಎರಡು ರಾಜ್ಯಗಳ ಮಧ್ಯದ ಬಿಕ್ಕಟ್ಟನ್ನು ಕವಿ ಗ್ರಹಿಸಿ ನಮಗಾಗಿ ಕಟ್ಟಿಕೊಟ್ಟ ರೀತಿಯನ್ನು ನೋಡಿ.

"ಈ ಇತ್ತ ಶಾಕ್ಯ; ಆ ಅತ್ತ ಕೋಲಿಯ ರಾಜ್ಯ.
ನಡುವೆ ಜುಳುಜುಳನೆ ಮುಗ್ಧತೆಯಲ್ಲಿ ರೋಹಿಣಿ.
ಕೃಷಿಯ ಕಸುಬೇ ಮುಖ್ಯ ಎರಡು ರಾಜ್ಯಗಳಲ್ಲು.
ನದಿಯ ನೀರಿನ ಹಂಚಿಕೆಗಾಗಿ ಸತ್ತೆಗಳ
ನಡುವೆ ಎಡೆಬಿಡದೆ ಪ್ರತಿ ವರ್ಷವೂ ನಡೆಯುವುದು
ಕಿತ್ತಾಟ. ದಾನಕ್ಕೆ ಕೊಟ್ಟ ದಟ್ಟಿಯ ತಮ್ಮ
ಹಿತ್ತಲಲ್ಲಳೆಯುವರು ಮಾರುಗೈ ಆಡಿಸುತ."
ನಿಮಗೆ ಪ್ರತೀವರ್ಷವೂ ನಡೆಯುವ ಚೆಕ್ ಡ್ಯಾಂ ಪ್ರಹಸನಗಳೂ, ನದೀ ತಿರುವು ಯೋಜನೆಗಳು, ಕಡತಗಳಲ್ಲಿ ಕೋಟಿಗಟ್ಟಲೆ ನುಂಗಿರುವ ಸಾವಿರಾರು ಎಕರೆ ಕೆರೆ ಪುನರುಜ್ಜೀವನ ಕಾಮಗಾರಿಗಳು ನೆನಪಾಗದೆ ಇದ್ದರೆ ಕೇಳಿ.

ಇಲ್ಲಿ ನಾನು ಈ ಕುರಿತು ಇರುವ ಹನ್ನೊಂದು ಹನ್ನೆರಡು ಅಷ್ಟಪದಿಗಳನ್ನೂ ಬರೆಯುವುದಿಲ್ಲ. ಆದರೆ ನೀವು ಇದನ್ನು ಓದಬೇಕು. ಮೆಲುದನಿಯಲೇ ಆದರೂ ವಾಸ್ತವವನ್ನು ಸ್ಪಷ್ಟವಾಗಿ ನಿಖರವಾಗಿ ತೆರೆದಿಟ್ಟಿರುವ ಹೆಚ್ಚೆಸ್ವೀಯವರ ವರ್ತಮಾನ ಪ್ರಜ್ಞೆ ಮತ್ತು ಅದನ್ನು ಹೇಳುವ ರೀತಿಗೆ ನಾನು ಮನಸೋತಿರುವೆ. ಇಲ್ಲಿ ಕಾವ್ಯ ವರ್ತಮಾನದ ಕಹಿಯನ್ನು ತನ್ನದೇ ರೀತಿಯಲ್ಲಿ ಓದುವ ಮನಸ್ಸಿಗೆ ಔಷಧದಂತೆ ದಾಟಿಸುತ್ತದೆ.

"ಅನಿವಾರ್ಯವಾಗಿ ಆಡಳಿತ ನಡೆಸುವ ಮಂದಿ
ಉದ್ವಿಗ್ನಕಾರಿ ಹೇಳಿಕೆಯನ್ನು ನೀಡುವರು.
ರೋಹಿಣಿಯು ನಮ್ಮದೂ! ನಮ್ಮದೂ! ಎನ್ನುತ್ತ
ಹರಿವು ತಗ್ಗಿದ ನದಿಯ ಸೆರಗನ್ನು ಜಗ್ಗುತ್ತ
ಬೆತ್ತಲಾಗಿಸುತ್ತಾರೆ ಹತ್ತು ಮಂದಿಯ ನಡುವೆ."
ರೋಹಿಣಿ ಎಂಬಲ್ಲಿ ಕಾವೇರಿಯೋ, ಕೃಷ್ಣೆಯೋ, ನೇತ್ರಾವತಿಯೋ, ಎತ್ತಿನಹೊಳೆಯೋ, ಶರಾವತಿಯೋ ಹಾಕಿದರೆ ಏನೂ ವ್ಯತ್ಯಾಸವಾಗುವುದಿಲ್ಲವಷ್ಟೆ!

"ನಲುಗುವಳು ತಾಯಿ. ನದಿ ನೀರು ಕಣ್ಣೀರಾಗಿ
ಹೊತ್ತಿ ಉರಿವುದು ನೀರ್ಗಿಚ್ಚು ಉಲ್ಬಣಗೊಂಡು.
ಈ ವರ್ಷ ಕೂಡ ಮಳೆ ಕಮ್ಮಿ. ಸೋತಿದೆ ಮಾತು.
... ಭತ್ತ ಕಬ್ಬಿನ ಗದ್ದೆ ಒಣಗುವುದು. ಒಣಗಿದರೆ
ಎದೆಯ ಆರ್ದ್ರತೆ ಕೂಡ ಒಣಗುವುದು. ಕಿತ್ತಾಟ
ಶುರುವಾಗುವುದು..."

ಇದರ ಜೊತೆಜೊತೆಗೇ ಯುದ್ಧೋನ್ಮಾದ, ದ್ವೇಷ ಮತ್ತು ಕೋಪದ ಕೈಗೆ ಸಿಕ್ಕ ಅರಸೊತ್ತಿಗೆಯ ಕುರಿತು ರಾಜಕುಮಾರ ಸಿದ್ಧಾರ್ಥನಾಡುವ ಮಾತು ಒಬ್ಬರಿನ್ನೊಬ್ಬರ ಮೇಲೆ ಕೆರಳಿ ಕೆಂಡವಾಗಿರುವ ಜನಕ್ಕೆ ಸೇನಾಧಿಪತಿಗಳಿಗೆ ರುಚಿಸುವುದಿಲ್ಲ.

"ಯುದ್ಧ ಪ್ರತಿಯುದ್ಧವನ್ನು ಹುಟ್ಟಿಸುವುದರಿಯಿರಿ
ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೆ?
.. ಬಲವುಳ್ಳ ಮಂದಿ ದುರ್ಬಲರನ್ನು ಮುಗಿಸುವರು...
ಯುದ್ಧದಲಿ ಕಾದುವವರು ಯಾರು? ನವತರುಣರು.
ಬಾಳಿ ಬದುಕುವ ಕನಸ ಕಟ್ಟಿಕೊಂಡಂಥವರು.
...ಮರಣ ಮನೆಗೋಡೆಗಳ ಮಾಡುವುದು ದುರ್ಬಲ..
...ಕೋಪದಲಿ ಕೊಯ್ದ ಬೆಳೆ ಚಿಗುರಲಾರದು ಮತ್ತೆ...

ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರಿಗಳು, ರಾಜ್ಯಪ್ರಮುಖರು ಒಪ್ಪುವುದಿಲ್ಲ ಶಾಂತಿಗೆ.
ಇಂದು ನಮ್ಮ ಕಾಲದ ಮಹಾಯುದ್ಧಕ್ಕೆ ಮೂಕ ಪ್ರೇಕ್ಷಕರಾಗಿರುವ ನಮಗಲ್ಲದೆ ಇನ್ಯಾರಿಗೆ ಇದು ಹೆಚ್ಚು ಅರ್ಥವಾಗಬಹುದು?!

ಏನೆಲ್ಲ ತೊಳಲಾಟಗಳ ನಡುವೆ ತನ್ನ ಮೂಲ ಸ್ಥಾಯೀಭಾವವಾದ ವೈರಾಗ್ಯಕ್ಕೆ ಸಲ್ಲುವ ಸಿದ್ಧಾರ್ಥ ಹಲವು ಪ್ರಯತ್ನಗಳ ನಂತರ ಒಂದು ರಾತ್ರಿ ಜೀವಸಖಿಯನ್ನೂ ಅವಳ ಮಗ್ಗುಲಲ್ಲಿ ಕನಸಿನಂತೆ ಇರುವ ಎಳೆಗೂಸನ್ನೂ ಕ್ಷಣಮಾತ್ರ ನೋಡಿ ಮನಸ್ಸು ಗಟ್ಟಿಯಾಗಿಸಿ ಹೊರಟುಬಿಡುತ್ತಾನೆ. ನಿದ್ದೆಯಲ್ಲಿರುವ ಪ್ರಿಯೆಯ ಅಲುಗುವ ರೆಪ್ಪೆಯ ನೆನಪನ್ನು ಕಷ್ಟಪಟ್ಟು ಹಿಂದಕ್ಕೆ ಸರಿಸುತ್ತಾ ತನ್ನ ಪರಿಚಿತ ಲೋಕದಿಂದ ದೂರದೂರಕ್ಕೆ ಸಾಗುವ ಸಿದ್ಧಾರ್ಥ ಹಲವು ಅನುಭವಗಳ ನದಿಯ ದಾಟಿ, ಹಲವು ದರ್ಶನಗಳ ಬೆಟ್ಟ ತಪ್ಪಲು ಹಾಯುತ್ತಾನೆ. ಎಷ್ಟೆಲ್ಲ ಸಾಧನೆಗಳ ಹಾದಿಯಲ್ಲಿ ಹಾಯುವವನಿಗೆ ಅರ್ಥವಾಗುವುದೊಂದು ಸತ್ಯ. ಏನೆಲ್ಲ ಮಾಡಿದರೂ "ಮನ ನಿಲ್ಲಬೇಕು ತನುವಲ್ಲ" ಎಂಬುದನ್ನ ಕವಿ ಬಹಳ ಸೊಗಸಾಗಿ ಹೇಳುತ್ತ ರಾಜಕುವರನು ಬುದ್ಧನಾಗುವ ಹಾದಿಯ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಕುರಿತು ಇರುವ ಕೆಲ ಸಾಲುಗಳ ಹೈಲೈಟು ನೋಡಿ.

"ನಿಂತಲ್ಲಿಯೇ ನಿಂತು ಉರಿಯುವನು ಭಾಸ್ಕರ
ಇರುವಲ್ಲಿಯೇ ಇದ್ದು ಅಲೆಯುವುದು ಮಾನಸ" ಬಯಲಲ್ಲಿ ಕುಳಿತು ಬೆಳಗು ಸಂಜೆಗಳನ್ನ ಏಕತ್ರ ಧ್ಯಾನಿಸುವ ಸಂತನ ಅನುಭಾವದ ಮೆಟ್ಟಿಲುಗಳನ್ನ ಹತ್ತಲು ಈ ಕಾವ್ಯ ಕೈಗೋಲಾಗಿ ಒದಗುತ್ತದೆ.

"...ಒಡಲ ಕಾಳಗ ಮುಗಿದರೂನು ಒಳಮನದ
ಕಾಳಗವು ಮುಗಿದಿಲ್ಲ.."
"..ಮನೆಯ ಕಟ್ಟುವ ಮಂದಿ ಯಾರು ಎಂಬುದ ಅರಿತೆ!
ಮತ್ತೆ ಈ ಮನೆಯ ಕಟ್ಟೋಣ ಸಾಧ್ಯವೆ ಇಲ್ಲ.
ನಾಶವಾಗಿದೆ ಮನೆಯ ನಿರ್ಮಾಣ ಸಾಮಗ್ರಿ!

ಬುದ್ಧನಾಗುವ ಹಂತ ಹಂತದ ಕುರಿತ ಈ ಅಷ್ಟಪದಿಗಳು ಆಧ್ಯಾತ್ಮದ ಉತ್ತುಂಗ ಒಳನೋಟಗಳನ್ನು ಹಾಯಿಸುತ್ತ ಇವೆ. ಕೆಲವು ಪದ್ಯಗಳಂತೂ "ಕಂಡವರಿಗಷ್ಟೆ, ಕಂಡವರಿಗಲ್ಲ, ಸಿಕ್ಕವರಿಗಷ್ಟೆ, ಸಿಕ್ಕವರಿಗಲ್ಲ" ಎಂಬಂತಹ ರಚನೆಗಳು. ಮೇಲುಮೇಲಕ್ಕೆ ಕಥನದ ಓಘಕ್ಕೆ ಸೊಗಸಾಗಿ ಒದಗುತ್ತವೆ. ಆಳಕ್ಕಿಳಿದರೆ ಆ ಮಾತೇ ಬೇರೆ.

ಬುದ್ಧನಾದ ನಂತರ ತನಗೆ ಒದಗಿದ ಜ್ಞಾನೋದಯವನ್ನ ಲೋಕಕ್ಕೆ ಹಂಚುವ ಬುದ್ಧನನ್ನ ಕವಿ ವರ್ಣಿಸುವ ಪರಿ ನೋಡಿ.
"ತೆರಳಿದ್ದ ಬತ್ತಿ, ಮರಳಿದೆ ಸ್ವಚ್ಛ ಬೆಳಕಾಗಿ.." ಇದಕ್ಕಿಂತ ಸರಳವಾಗಿ ಸೊಗಸಾಗಿ ಹೇಳಬಹುದೆ ಪರಿವರ್ತನೆಯನ್ನ?!

ಕಪಿಲವಸ್ತುವಿಗೆ ಬಂದ ಬುದ್ಧಗುರುವನ್ನು ನೋಡಲು ಹೊರಟ ಯಶೋಧರೆಯ ಮನದ ವಿಪ್ಲವಗಳಂತೂ ವಿಷಾದಭರಿತ ಭಾವಗೀತಗಳ ಧಾರೆಯಾಗಿವೆ ಕವಿಯ ಕೈಯಲ್ಲಿ.

"..ಅಲೆಗಳ ವಿಪ್ಲವ. ಮಧ್ಯೆ ಮುಗಿದ ತಾವರೆ ಮೊಗ್ಗು.
ಕಂಬನಿಗಳ ಕೊಳದಲ್ಲಿ ಸ್ತಬ್ಧ ದೋಣಿಯ ಕಣ್ಣು..."
ಬುದ್ಧ ಮತ್ತು ಯಶೋಧರೆಯ ಭೇಟಿ ಓದುವವರ ಮನವನ್ನು ಮಿಡಿಸುತ್ತದೆ.


"ಕಣ್ಣೆತ್ತಿ ನೋಡುವಳು..
ಮೀನು ಕಲಕಿದೆ ಕೊಳವ. ಅಲೆಯು ಮೆಲ್ಲಗೆ ಬಂದು
ತಾಗುತಿದೆ ದಂಡೆಯನು.
...ಎಲ್ಲ ಸುಖದಲು ಜತೆಯಲ್ಲೆ ಇದ್ದವನು ಮುಕ್ತಿ ಸುಖದಲಿ ಅಗಲಿದೆಯೇಕೆ..."

ಎಂಬ ದುಃಖದ ಪ್ರಶ್ನೆಗೆ ಬುದ್ಧ ಉತ್ತರಿಸುತ್ತಾನೆ....


ಮನೆಯಲ್ಲೆ ನಿಂತ ತಾಪಸಿ ನೀನು.
ಬೆಳಕನರಸುತ ನಾನು ತೊರೆದೆನೀ ಮನೆಯನ್ನ.
ನೀನು ನಂದಾದೀಪ ಆದೆ ಈ ಮನೆಯಲ್ಲೆ...!

ಇದಕ್ಕಿಂತ ಮಿಗಿಲಾದ ಉತ್ತರವ ಬಯಸದ ಆ ಹೆಣ್ಣುಜೀವ ಬುದ್ಧಚರಣಕ್ಕೆ ಶರಣಾಗುತ್ತದೆ.

ಬುದ್ಧನ ಬೋಧನೆಗಳು ಈ ಕಾವ್ಯದಲ್ಲಿ ಉಪನ್ಯಾಸಗಳ ಸಾಲುಗಳಾಗಿ ಬಂದಿಲ್ಲ. ಜೀವನಾನುಭವದ ಇಂಕಿನಲ್ಲಿ ಅದ್ದಿ ತೆಗೆದ, ಯಾರಿಗೂ ಅರ್ಥವಾಗಬಹುದಾದ ಸೊಗಸಾದ ಕವಿತೆ ಸೊಲ್ಲುಗಳಾಗಿ ಬಂದಿವೆ.

"ಬುದ್ಧ ನಿರ್ವಾಣ ಮಾರ್ಗಕ್ಕೆ ಕೈಮರ ಮಾತ್ರ.
ನಡೆಯುವುದು ನೀವೆ; ನೋಡುವುದು ನಿಮ್ಮದೆ ನೇತ್ರ."
"ಗಾಳಿಯಲಿ ಕರಗುವುದು ಅಗರುಬತ್ತಿಯ ಧೂಪ
ಬಯಲಲ್ಲಿ ಏನನೋ ಬರೆಯುತ್ತ ಇರುವಂತೆ;
ಬರೆದದ್ದ ಕೈಯಾರೆ ಅಳಿಸುತ್ತ ಇರುವಂತೆ."
"ಇದ್ದಷ್ಟು ದಿನ ನಾವು
ಬದುಕೋಣ ನಮ್ಮಂತೆ ಇರುವ ಮಂದಿಯ ನಂಬಿ.
ನಮ್ಮಂತೆಯೇ ಕಣ್ಣು ಕಣ್ಣೀರ ಉಳ್ಳವರು
ನೋಡೋಣ ಹೇಗೆ ಕೆಂಗಣ್ಣರಾಗುವರೆಂದು."

ಬುದ್ಧನ ಈ ಮಾತಿನ ಮುಂದಿನ ಸಾಲಲ್ಲಿಯೇ ಸೇರಿಸುತ್ತಾರೆ ಕವಿ

ಕೇಳಲಿಕ್ಕೇನೋ ಹಿತ, ಆಚರಣೆಗಿದು ಕಷ್ಟ.

ಬುದ್ಧನ ಪ್ರಿಯ ಶಿಷ್ಯ ಆನಂದನೊಡನೆ ಬುದ್ಧನ ಮಾತನ್ನ ಕವಿ ಕಂಡರಿಸುವ ಪರಿ ನೋಡಿ.

ಆನಂದ ಹೇಳುತ್ತಾನೆ; ಭಂತೆ,
ನಿನ್ನೆದುರು ನಾನೇನು ನುಡಿದೇನು? ಕಡಲೆದುರು ನಿಂತ ಬೊಗಸೆಯ ಚಿಪ್ಪು."
ಬುದ್ಧ ನುಡಿಯುತ್ತಾನೆ. "ಚಿಪ್ಪಲ್ಲೆ ಮುತ್ತುಂಟು!" ಇದು ಬುದ್ಧನ ವಿಧಾನ.
"ಇರುಳ ಚೆಲುವೆಗೆ ತೆಗೆದ ನೇರ ಬೈತಲೆಯಂತೆ ಬುದ್ಧನ ನುಡಿ.
ನೆಮ್ಮದಿಯ ಸಂಚಾರ ಮನದೊಳಗೆ."
"ನೆರಳು ಬಿಸಿಲಿನ ನಂಟು, ಬಿಡಿಸಲಾಗದ ಗಂಟು.
ಬಿಸಿಲಿರದೆ ನೆರಳಿಲ್ಲ.!.." ಬದುಕಿನ ಏರುಪೇರನ್ನು ಸೈರಿಸುವ ವಿಧಾನಗಳನ್ನು ಕವಿ ಬುದ್ಧನ ಮೂಲಕ ಹೇಳಿಸುತ್ತಿರುವರು.

ಊರಿಂದ ಊರಿಗೆ ತಿರುಗುವ ಬುದ್ಧಗುರು, ದಾರಿಯಲ್ಲೇ ನಡಿಗೆಯಲ್ಲೇ ಪಯಣದಲ್ಲೇ ಬದುಕಿನ ಸತ್ಯವನ್ನು ಜೊತೆಗಾರರಿಗೆ ಮನನ ಮಾಡಿಸುವ ರೀತಿ ಹೆಚ್ಚೆಸ್ವೀಯವರ ನುರಿತ ಭಾಷೆಯಲ್ಲಿ

ಬಿಸಿಲಹಾದಿಯಲ್ಲಿ ಕುಡಿಯಲು ಸಿಗುವ ಮಜ್ಜಿಗೆಯಂತೆ ತಂಪೊದಗಿಸುತ್ತದೆ.
"ಬಿಸಿಲ ಹೂ ನೆರಳಿನಲ್ಲಿ ಚದುರಿಬಿದ್ದಂತೆ ಕಾಣುತ್ತ ಇದೆ.
..ಈಗ ಇದೆ, ಮರುಗಳಿಗೆ ಇರುವುದೆನುವಂತಿಲ್ಲ.
ಇರುವಾಗ ನೋಡು. ಇರದಿರುವಾಗ ಹಲುಬದಿರು.."


ಕೊನೆಯ ಪಯಣವೊಂದರ ಚಿತ್ರಣವನ್ನೇ ನೋಡಿ.

"ಹೊತ್ತಿನ್ನು ಮೂಡಿಲ್ಲ. ಸುರಿಯುತಿದೆ ಹುಡಿಮಂಜು.
ಇಬ್ಬನಿಯ ಹೊದ್ದ ಕಾಷಾಯ ಪಡೆ ನಡೆಯುತಿದೆ.
ಮಾತಿರದ ಮೌನದಲಿ ಜಪಮಣಿಯನೆಣಿಸುತ್ತ.
ಮುಂದೆ ಗುರು, ನುಣ್ಣನೆಯ ಊರುಗೋಲೂರುತ್ತ."

ಈ ಚಿತ್ರ ಕಣ್ಣ ಮುಂದೆ ಸ್ಪಷ್ಟವಾಗಿ ಮೂಡದಿದ್ದರೆ ಕೇಳಿ.

ಹುಟ್ಟಿದ ವೈಶಾಖ ಪೂರ್ಣಿಮೆಯಂದೆ ಅಸ್ತಮಿಸಿದ ಬುದ್ಧನ ನಿರ್ವಾಣ ಕ್ಷಣ ಕವಿಯ ಸಾಲಿನಲ್ಲಿ ಹೀಗೆ ಮೈದೋರಿದೆ.

"ಚಂದ್ರ ಮುಳುಗುತ್ತಾನೆ ತನ್ನ ಬೆಳ್ದಿಂಗಳಿನಲಿ ತಾನು."
"ದೀಪ ನಂದಿತು ದೀಪದಲ್ಲಿ, ಮುಳುಗಿತು ನೀರು ನೀರಲ್ಲಿ"
ತೊಂಗಲಲಿ ತೂಗುತಿದೆ ಬಣ್ಣದಿರುಗಿದ ಹಣ್ಣು ಎಂಬ ಸಾಲಲ್ಲಿ ಸಾವಿನ ಸಹಜತೆ, ಪ್ರಕೃತಿಯ ಚಕ್ರ ಎಲ್ಲವೂ ಆಪ್ತವಾಗಿ ಮೂಡಿವೆ.


ಇಡೀ ಕೃತಿಯಲ್ಲಿ ಕವಿಯ ಆಶಯವಾದ ಮಧ್ಯಮಮಾರ್ಗ ಬುದ್ಧಬೋಧನೆಯಾದ ಮಧ್ಯಮಮಾರ್ಗ ಎರಡೂ ಮಿಳಿತವಾಗಿ ಬುದ್ಧ ಕಥನವಾಗಿ ಹರಿದಿದೆ.
ಬರುವುದೆಲ್ಲಾ ಬರಲಿ, ಹೋಗಲಿ ಹರಿದು,
ಇರುವೆ ನಾನಿರುವಂತೆ.
ಇರಲಿ ಸಮಶ್ರುತಿ, ಸ್ವಸ್ಥ ಚಿತ್ತ.
ನೆಲೆಸಿರಲೆದೆಯಲ್ಲಿ ಸ್ವಸ್ತಿ... ಎಂಬ ಆರಂಭಕಾಂಡದ ಸಾಲುಗಳು ಈ ಇಡೀ ಮಹಾಕಾವ್ಯದ ಅಂತಃಸ್ರೋತವಾಗಿ ಹರಿದಿವೆ.

ಅಗಲಿಕೆಯ ಶೋಕಸಾಗರವನ್ನು ದಾಟುವ ಜ್ಞಾನವ ಗಳಿಸಿದ ಬುದ್ಧನ ದಾರಿಯೇ ಕವಿಗೆ ತನ್ನ ಬದುಕಿನಲ್ಲಿ ಅನುಭವಿಸಿದ ಅಗಲಿಕೆಯ ಶೋಕದ ಹರಿವನ್ನು ದಾಟಲು ಸರಿಯಾದ ಆಯ್ಕೆ ಎಂದು ಶುರುವಾಗುವ ಮಹಾಕಾವ್ಯ, ಈ ಆಯ್ಕೆ ಬರಿದೆ ಕವಿಯ ವೈಯಕ್ತಿಕಕ್ಕಷ್ಟೆ ಅಲ್ಲ ಸಮಸ್ತರಿಗೂ ಅನ್ವಯಿಸುವುದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ರಚಿಸಿರುವ ಚಿತ್ರಕ ಸಾಲುಗಳ ಅಷ್ಟಪದಿಯ ಮೂಲಕ ಮತ್ತೆ ಮತ್ತೆ ಮನದಟ್ಟಾಗುತ್ತದೆ.

ಈ ೩೦೦ ಪುಟಗಳ ಪುಸ್ತಕದಲ್ಲಿ ಅಲ್ಲಿಲ್ಲಿ ಬಹಳ ಅಪರೂಪಕ್ಕೆ ಪಿಟಕಗಳ ಕೆಲವು ಶ್ಲೋಕಗಳು ಬರುವಲ್ಲಿ, ಈ ಶ್ಲೋಕಗಳ ಭಾವಾರ್ಥ ಅಥವ ವಾಚ್ಯಾರ್ಥವನ್ನು ಟಿಪ್ಪಣಿಯಾಗಿ ಕೊಟ್ಟಿದ್ದರೆ ಚೆನ್ನಿತ್ತು ಎನಿಸಿತು. ಅಲ್ಲದೆ ನಾವು ಇಂದಿನ ಕನ್ನಡದವರು ಬಳಸದೇ ಇರುವ ಹಲವಾರು ಕನ್ನಡಪದಗಳು ಹೊಸ ಪೀಳಿಗೆಗೆ ಎಷ್ಟು ದಕ್ಕೀತು ಎಂದು ಹೇಳಲು ನನಗೆ ಗೊತ್ತಾಗುವುದಿಲ್ಲ. ಹಾಗಾಗಿ ಕೆಲವು ಅಪರೂಪದ ಪದಗಳ ಕೈಪಿಡಿಯೊಂದು ಪುಸ್ತಕದಲ್ಲೇ ಅಡಿಟಿಪ್ಪಣಿಗ್ಯಾಗಿದ್ದರೆ ಒಳ್ಳೆಯದು. ಹಾಗಂತ ಈ ಬಗೆಯವು ತುಂಬ ಇಲ್ಲ. ಬಹಳ ಅಪರೂಪಕ್ಕೆ ಇವೆ. ಉಳಿದ ಎಲ್ಲವೂ ನಮ್ಮ ಆಡುಭಾಷೆಯನ್ನೆ ಕುಸುರಿಕೆತ್ತಿ ಕಾವ್ಯಕ್ಕೆ ಒಗ್ಗಿಸಿದ್ದಾರೆ.

ಈ ಕಾವ್ಯವನ್ನು ಓದುವಾಗ ನನಗೆ ಇನ್ನೊಂದು ಅನುಭವವಾಯಿತು. ಕೆ.ಎಸ್.ನರಸಿಂಹಸ್ವಾಮಿಯವರ ಕಾವ್ಯವೆಂದರೆ ನನಗೆ ತುಂಬ ಇಷ್ಟ. ನರಸಿಂಹಸ್ವಾಮಿಯವರೇ ಈ ಕವಿತೆಗಳನ್ನು ಬರೆದಿರಬಹುದೆ ಎಂಬಂತಹ ಲಾಲಿತ್ಯ, ನಿಖರವಾಗಿದ್ದನ್ನು ಮೆತ್ತಗೆ ಹೇಳುವ ಮೆದು ದನಿ, ವಿಷಯ ಹೀಗಿದೆ ಎಂದು ಕಥನಕ್ಕೆಳೆಸುವ ಚಿತ್ರಕ ಶಕ್ತಿ ಈ ಕಾವ್ಯ ಓದುತ್ತ ಅನುಭವಿಸಿ ಬೇರೆಯದೇ ಲೋಕಕ್ಕೆ ಹೋಗಿಬಿಟ್ಟೆ.

ಈ ಮಹಾಕಾವ್ಯವನ್ನು ನಮಗೆ ಓದುಗರಿಗೆ ರಸಧಾರೆಯಾಗಿ ಸೃಷ್ಟಿಸಿ ಕೊಟ್ಟ ಕವಿ ಶ್ರೀ ಹೆಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ನನ್ನ ನಮನಗಳು. ಬುದ್ಧಚರಣವೆಂಬ ಮಹಾಕಾವ್ಯದ ಆನೆಯನ್ನ ಮುಟ್ಟಿ ನೋಡಿದ ನನ್ನ ಕುರುಡುನೋಟವನ್ನು ಇಲ್ಲಿ ಹಂಚಿಕೊಂಡಿದ್ದೇನೆ ಅಷ್ಟೆ.

ಬುದ್ಧಚರಣ ಸ್ಪಂದನ ಪುಸ್ತಕಕ್ಕೆ ಬರೆದ ಲೇಖನ. (2023)

No comments: