Wednesday, July 9, 2008

ಅರ್ಪಣೆ..

ಅರ್ಧರಾತ್ರಿಯಲ್ಲಿ ಮಾತನಾಡಿಸಿ, ಫ್ಲೈಯಿಂಗ್ ಹಗ್ ಕೊಟ್ಟವಳಿಗೆ...
ಪುಟ್ಟ ತುಂಬೆ ಹೂ,
ಬಿಳಿಬಿಳೀ ಇಬ್ಬನಿ,
ಸೂಸಿ ಬರುವ ತಂಗಾಳಿ,
ಅದರಒಳಗಣ
ಮಲ್ಲಿಗೆಯ ಘಮ,
ಎಳೇ ಬಿಸಿಲು,
ಹಕ್ಕಿ ಚಿಲಿಪಿಲಿ,
ಮೊದಲ ಮಳೆಹನಿ,
ಪುಟ್ಟಪುಟಾಣಿ ಪಾಪುವಿನ ಹೂನಗೆ,
ಎಲ್ಲ ಬೊಗಸೆಯಲ್ಲಿ ಹಿಡಿದು
ನಿಂತಿದೇನೆ ನಿನ್ನ
ಪ್ರೀತಿ,ನೇಹಗಳಿಗೆ ಮನಸೋತು..

Monday, July 7, 2008

ಹುಲಿರಾಯನ ಆಕಾಶವಾಣಿ..

ಕೆಲದಿನಗಳ ಹಿಂದೆ 'ಸದ್ದಡಗಿದ ಶಿಕಾರಿಕೋವಿ' ಎಂಬ ಪುಸ್ತಕವನ್ನು ಓದಿದೆ. ಡಾ ಪ್ರಭಾಕರ ಶಿಶಿಲ ಅವರು ಬಡ್ಡಡ್ಕ(ಸುಳ್ಯ) ಅಪ್ಪಯ್ಯಗೌಡರ ಶಿಕಾರಿಯ ನೆನಪನ್ನು ಮನಃಸ್ಪರ್ಶಿಯಾಗಿ ನಿರೂಪಿಸಿ ಬರೆದಿರುವ ಪುಸ್ತಕ. ಕನ್ನಡದ್ದೇ ಆದ ಶಿಕಾರಿಯ ಕತೆ, ಮತ್ತು ಆ ಕಾಲದ ಕಾಡು, ಪ್ರಾಣಿಗಳು, ಮತ್ತು ಇತರೇ ವನಸಂಪತ್ತು, ಜೀವನಶೈಲಿಯ ಬಗೆಗಿನ ಕುತೂಹಲದಿಂದ ಈ ಪುಸ್ತಕ ಓದತೊಡಗಿದೆ. ಒಂದೊಂದು ಸನ್ನಿವೇಶವನ್ನೂ ಕಣ್ಣಿಗೆ ಕಟ್ಟುವ ಹಾಗೆ, ಬದುಕು,ಬೇಟೆ,ಹಳ್ಳಿ ಜೀವನ ಮತ್ತು ಕಾಡನ್ನ ಸೂಕ್ಷ್ಮ ವಿವರಗಳನ್ನೂ ಬಿಡದೆ ಬರೆದಿದ್ದಾರೆ. ರೋಮಾಂಚಕವಾದ ಶಿಕಾರಿ ಕತೆಯನ್ನು ಓದುತ್ತ ಓದುತ್ತ ಮನಸ್ಸಿಗೆ ತುಂಬ ಬೇಜಾರಾಗಿಬಿಟ್ಟಿತು. ನಮ್ಮ ಸಾಕಷ್ಟು ಅನುಭವಿ ಮತ್ತು ದೊಡ್ಡ ಬೇಟೆಗಾರರೆಲ್ಲ, ನರಭಕ್ಷಕ ಅಥವಾ ಕಂಟಕಪ್ರಾಯವಾದ ಹುಲಿಗಳನ್ನೇ ಬೇಟೆಯಾಡಿರುವುದು ನಿಜವಾದರೂ, ನಾವು ಮನುಷ್ಯರು ವನ್ಯಜೀವಿಗಳ ನಿವಾಸವಾದ ಕಾಡನ್ನು ನಮ್ಮ ಪ್ರಗತಿಪರ ಉದ್ದೇಶ/ದುರುದ್ದೇಶಗಳಿಗೆ ಖಾಲಿ ಮಾಡುತ್ತ, ಅವು ತಮ್ಮ ಜಾಗದಿಂದ ಹೊರಬಂದು ಆಹಾರ ಹುಡುಕತೊಡಗಿದರೆ ಬೇಟೆಯಾಡಿ ಕೊಲ್ಲುವುದು ಎಷ್ಟು ನ್ಯಾಯ.. ? ಇದರ ಜೊತೆಜೊತೆಗೇ "ನೆಲ ಕಚ್ಚಿದ ಗುಬ್ಬಚ್ಚಿ" ಎಂಬ ಪಕ್ಷಿ ಶಾಸ್ತ್ರಜ್ಞ ಸಲೀಂಅಲಿಯವರ ಅನುವಾದಿತ ಜೀವನ ಚರಿತ್ರೆ ಓದಿದೆ. ಅನುವಾದಕರು ಎನ್.ಪಿ.ಶಂಕರನಾರಾಯಣ ರಾವ್. ಸಲೀಂ ಅಲಿಯವರ ಬದುಕು ಪಕ್ಷಿ ಸಂಕುಲದಷ್ಟೇ ಆಸಕ್ತಿಯುತವಾಗಿ ಓದಿಸಿಕೊಂಡುಹೋಯಿತು. ವಿವರಗಳು ಬದಿಗಿಟ್ಟು ಆ ಪುಸ್ತಕದಲ್ಲಿ ಓದಿದ ರಾಜರ, ರಾಜಮನೆತನಗಳ, ಜಮೀನುದಾರರ, ಬ್ರಿಟಿಶ್ ಅಧಿಕಾರಿಗಳನ್ನು ಮನತಣಿಸುವವರ ಬೇಟೆಯ ಕತೆಗಳು, ಪಕ್ಷಿಗಳ ಮಾರಣಹೋಮ ಇತ್ಯಾದಿ ಎಲ್ಲ ಓದಿ ಮನಸ್ಸು ಮುದುಡಿಹೋಯಿತು ಕೂಡಾ.
ಮನರಂಜನೆಗೆ ಇನ್ನೊಂದು ಜೀವಿಯನ್ನ ಕೊಲ್ಲುವ, ಹವ್ಯಾಸವಾಗಿ ಬೆಳೆಸಿಕೊಂಡಿರುವ ಒಂದೇ ಜೀವಪ್ರಬೇಧವೆಂದರೆ ಮನುಷ್ಯರು ಅಂತ ಕಾಣುತ್ತದೆ.
ಮತ್ತೆ ಮರುವಾರ ಪುಸ್ತಕದಂಗಡಿಗೆ ಹೋದೆ. ಪ್ರಾಣಿಗಳ ಬಗ್ಗೆ ಮತ್ತು ನಮ್ಮ ಉಲ್ಲಾಸಕಾರಂತರಂತಹ ವನ್ಯಜೀವಿಶಾಸ್ತ್ರಜ್ಞರ ಕೆಲಸ ಕಾರ್ಯಗಳ ಬಗೆಗೆ ಏನಾದರು ಪುಸ್ತಕ ಸಿಕ್ಕುತ್ತಾ ನೋಡಬೇಕು ಅಂತ. ನಾನು ಚಿಕ್ಕವಳಿದ್ದಾಗ ಕೆಲ ಪತ್ರಿಕೆಗಳಲ್ಲಿ ಹುಲಿಗಳಿಗೆ ಕಾಲರ್ ತೊಡಿಸಿದವರು ಎಂಬ ತಲೆಬರಹದಡಿಗಳಲ್ಲಿ ಇವರ ಬಗ್ಗೆ ಓದಿದ ನೆನಪು. ಎಲ್ಲ ಬಿಟ್ಟು ಇವರು ಹುಲಿಗೇಕೆ ಕಾಲರ್ ತೊಡಿಸಿದರೋ ಎಂಬ ಉಡಾಫೆಯಲ್ಲಿ ಅದನ್ನ ಓದಿರಲಿಲ್ಲ ನಾನು.
ಈಗ ಶಿಕಾರಿಗಳ ಬಗ್ಗೆ ಓದಿದ ನಂತರ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿತು. ಹುಲಿರಾಯನ ಬದುಕು, ಹುಲಿರಾಯನ ಆಕಾಶವಾಣಿ, ಎಂಬ ಎರಡು ಹುಲಿಗಳ ಬಗೆಗಿನ ಪುಸ್ತಕವೇ ಸಿಕ್ಕಿತು. ಎರಡರ ಮೂಲ ಸೆಲೆಯೂ ಉಲ್ಲಾಸ ಕಾರಂತರೇ. ಅವರ ಇಂಗ್ಲಿಷ್ ಪುಸ್ತಕದ ಅನುವಾದ ಮಾಡಿದವರು ಟಿ.ಎಸ್. ಗೋಪಾಲ್. ಮತ್ತೊಂದು ಪುಸ್ತಕದ ನಿರೂಪಣೆಯ ಹೊಣೆ ಹೊತ್ತವರೂ ಇವರೆ. ನನ್ನ ಕುತೂಹಲಕ್ಕೆ ಈ ಪುಸ್ತಕಗಳು ಬಹು ಒಳ್ಳೆಯ ಆಸರೆಯಾಗಿ ಒದಗಿಬಂದವು.

ಹುಲಿರಾಯನ ಬದುಕು ಓದಿಮುಗಿಸಿದ್ದೇನೆ. ತಳಮಳ ಸ್ವಲ್ಪ ಕಡಿಮೆಯಾಗಿದೆ. ಎಲ್ಲ ಮುಗಿದುಹೋಯಿತು ಎಂಬ ಶೂನ್ಯಭಾವ ಇಲ್ಲ ಈಗ. ಏನನ್ನೋ ಮಾಡಬಹುದು, ಮಾಡಬೇಕು ಎಂಬ ಅನಿಸಿಕೆ ದಟ್ಟವಾಗಿ ನಿಂತಿದೆ.
ತನ್ನ ಸಂಪೂರ್ಣ ಆವಾಸವಾದ ಕಾಡಿನ ಶೇಕಡಾ ಐದು ಭಾಗವಷ್ಟೇ ಈಗಿನ ಹುಲಿಗಳಿಗೆ ಉಳಿದಿದೆಯಂತೆ. ಉಳಿದಿರುವ ಅದರಲ್ಲೂ ಹೊರಗಣ ಕಾಡು ಮನುಷ್ಯರ ಸಂಚಾರ ಮತ್ತು ವ್ಯವಹಾರಗಳಿಗೆ ಪಕ್ಕಾಗಿದೆಯಂತೆ. ನಮ್ಮ ವನ್ಯಜೀವಿಗಳು ಎಲ್ಲಿ ಬದುಕಬೇಕು? ಸಂತ್ರಸ್ತ ಜನರನ್ನೇ ಕೇಳುವವರು ಗತಿಯಿಲ್ಲ. ಕಾಡು ಪ್ರಾಣಿಗಳು ಯಾರಿಗೆ ಬೇಕು?
ಸತ್ಯವೇನೆಂದರೆ, ನಾವು ಮನುಷ್ಯರು ಇಂದು ನಮಗೆ ಬೇಕಾದ ಗುರಿಗಳ ಹಿಂದೆ ನಾಗಾಲೋಟದಿಂದ ಓಡುವ ಎಲ್ಲ ಸೌಲಭ್ಯ, ಸವಲತ್ತೂಗಳೂ ನಾವು ಬದುಕಿದ್ದರೆ ಮಾತ್ರ ಕೆಲಸ ಮಾಡುತ್ತವೆ. ಭೂಮಿಯ ಮೇಲಿನ ಸೃಷ್ಟಿ ವೈವಿಧ್ಯತೆಯೇ ಭೂಮಿಯ ಫಲವತ್ತತೆ, ಋತುಮಾನ, ಜೀವ ನಿಯಂತ್ರಣ ಮತ್ತು ಜೀವೋತ್ಪಾದನೆಯ ಎಲ್ಲದರ ಬೆನ್ನೆಲುಬು. ನಾವು ಅದನ್ನೇ ನುಂಗಿ ನೀರು ಕುಡಿಯುತ್ತಾ ಕೂತ ಮರದ ಕೊಂಬೆ ಕಡಿಯುವ ಕೆಲಸದಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದೇವೆ.
ಬರಿಯ ಹುಲಿಯಿಂದ ಪ್ರಪಂಚ ನಡೆಯುತ್ತಿಲ್ಲ. ಮನುಷ್ಯನಿಂದಂತಲೂ ಖಂಡಿತ ಅಲ್ಲ. ಎಲ್ಲ ಜೀವವೈವಿಧ್ಯಗಳ ಒಂದರೊಡನಿನ್ನೊಂದರ ಹೊಂದಾಣಿಕೆಯೇ ನಮ್ಮ ಜೀವರಹಸ್ಯ. ಹುಲಿಗಳು ಈ ರಹಸ್ಯ ಬಿಡಿಸುವ ಮತ್ತು ವೈವಿಧ್ಯತೆ ಕಾಪಾಡುವ ಮುಖ್ಯ ಕೊಂಡಿಗಳು. ಒಂದು ಹುಲಿಯ ಉಳಿವು, ಅದರ ಸುತ್ತಲಿನ ಆಹಾರ/ಬೇಟೆಪ್ರಾಣಿಗಳ ಉಳಿವಿನ ಮೇಲೆ ನಿಂತಿರುತ್ತದೆ. ಆ ಬೇಟೆ ಪ್ರಾಣಿಗಳು ಕಾಡಿನ/ಸಸ್ಯ ಸಮೃದ್ಧತೆಯ ಮೇಲೆ ಅವಲಂಬಿಸಿರುತ್ತವೆ. ಕಾಡು ಮಳೆ/ಬಿಸಿಲುಗಳ ಮೇಲೆ. ಈ ಎಲ್ಲವೂ ನಮ್ಮ ಮೇಲೆ ಮಾಡುವ ಪರಿಣಾಮವನ್ನು ಪ್ರತ್ಯೇಕವಾಗಿ ತೋರಿಸಿಕೊಡಬೇಕಾದ್ದಿಲ್ಲ ಅಲ್ಲವೇ? ಇದು ಈ ಪುಸ್ತಕದಿಂದ ನಾನು ಕಲಿತ ಪಾಠ.

ಈ ಬಗೆಗಿನ ಹೆಚ್ಚಿನ ಮಾಹಿತಿ, ನಾವು ಮಾಡಬಹುದಾದ ಸಣ್ಣ ಸಣ್ಣ ಆದರೆ ಅತ್ಯವಶ್ಯಕ ಜೀವನಶೈಲಿಯ ಬದಲಾವಣೆಗಳು, ಸಾಧ್ಯವಾದಾಗ ವನಜೀವನ ಸಂರಕ್ಷಣ ಕಾರ್ಯದಲ್ಲಿ ತೊಡಗಿರುವವರಿಗೆ ನೀಡಬಹುದಾದ ಸಹಾಯ ಎಲ್ಲವನ್ನೂ ಈ ಪುಸ್ತಕ ಪ್ರೀತಿಯಿಂದ ಹೇಳಿಕೊಡುತ್ತದೆ.ಸಮಯಾವಕಾಶವಾದಾಗ ದಯವಿಟ್ಟು ಈ ಪುಸ್ತಕ ಕೊಂಡು ಓದಿ. ಇಲ್ಲಿ ಆಳ ಅಧ್ಯಯನ ಮತ್ತು ಪರಿಶೀಲನೆಯ ಸಾರಸರ್ವಸ್ವವಿದೆ.

ನಮ್ಮ ವನ್ಯಜೀವನ ಸಂರಕ್ಷಣೆಯ ಬಗೆಗಿನ ಹೆಚ್ಚು ಮತ್ತು ನಿಖರ ಮಾಹಿತಿಗಳು ಈ ವೆಬ್ ಸೈಟಿನಲ್ಲಿ ಸಿಗುತ್ತವೆ. http://www.wildlifefirst.info/about.htm

ಅವನ ಹಾಡು..


ಆ ಉದ್ದ ಜಡೆಯನ್ನ ಬಿಂಕವಾಗಿ ಹೊತ್ತು ತಿರುಗುವ
ಮೊದ್ದುತನದ ಮೇರುತಲೆಗೆ ಎರಡು ತಟ್ಟುತ್ತಾ;
ಜಗದ ಎಲ್ಲ ಚಲನೆಯನ್ನ ಹೊತ್ತು ಸುಳಿವ
ತುಂಟ ಕಣ್ಣುಗಳ ಕೊಳದಲ್ಲಿ ಬಿದ್ದು ಈಜುತ್ತಾ;
ಸಾಗರದಷ್ಟು ಮಾತು ತುಂಬಿ ತುಳುಕುವ
ಪುಟ್ಟ ಬಾಯಿಗೆ ನನ್ನ ಮೌನದೊಲವ ಕುರುಹ ಹಚ್ಚುತ್ತಾ;
ಚಕ್ರ ಕಟ್ಟಿದಂತೆ ತಿರುಗುವ ಕಾಲ ಹಾದಿಯ
ಹಿಂಬಾಲಿಸಿ ಹಿಂಬಾಲಿಸಿ ಸುಸ್ತಾಗುತ್ತಾ;
ಮಾಡಿದಡುಗೆ ಘಾಟು ಘಾಟಾಗಿದ್ದರೂ
ಅಮ್ಮನಡುಗೆಯಂತೇ ಇದೆ ಎಂದು ಭಾವಿಸಿ ತಿನ್ನುತ್ತಾ,
ನಡೆಯದೇ ಓಡುತ್ತ ಎಡವಿಬಿದ್ದಾಗ
ಮೇಲೇಳಲು ಕೈ ನೀಡುತ್ತಾ;
ಎಲ್ಲ ನಿಯಮಗಳ ಮೀರಿದ-ಯಾವ ಅಳತೆಗೂ ಸಿಗದ
ಸಿಟ್ಟು ಮಾಡಿದರೆ ಮುದುಡುವ,
ಮುದ್ದು ಮಾಡಿದರೆ ಚಿಗುರುವ
ನಿನ್ನ ಚೈತನ್ಯದ ಹರಿವು
ನೋಡಿ ನೋಡಿ ಅವಾಕ್ಕಾಗುತ್ತಾ;
ನನ್ನಲಿಲ್ಲದ, ನನಗೆ ತುಂಬ ಬೇಕಿರುವ ಎಲ್ಲದೂ
ನಿನ್ನಲಿರುವುದ ನೋಡುತ್ತ
ಪುಳಕಗೊಂಡು
ಮತ್ತೆ ಮತ್ತೆ ಬಿಗಿದಪ್ಪುತ್ತಾ;
ನಿನ್ನ ಮಾತಿನ ತಾಳಕ್ಕೆ
ನನ್ನ ಮೌನರಾಗ
ಜತೆಯಾಗಿ
ಬದುಕಿನ ಕವಿತೆಗೆ
ಸಂಜೀವನ ಸಂಗೀತದ ಸಂಯೋಜನೆ..