ನಾನೊಬ್ಬ ಅಕೆಡೆಮಿಕ್ ಅಲ್ಲದ ಸಾಮಾನ್ಯ ಕನ್ನಡ ಓದುಗಳು. ಕಾವ್ಯ, ಕವಿತೆ ಇವು ನನ್ನಿಷ್ಟದ ಆಯ್ಕೆ.
ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಗಳು ನನ್ನ ಬಾಳಿನುದ್ದಕ್ಕೂ ಒದಗಿದ ಕೈಯಾನಿಕೆಗಳು, ತುಂಬ ನೊಂದು ನಿಂತಾಗ ಸಾವರಿಸಿಕೊಳ್ಳಲು ಸಹಾಯ ಮಾಡಿದ ಮಿನುಗುಚುಕ್ಕಿಗಳು.
ಹಾಗಾಗಿ ಕೆ.ಎಸ್.ನರಸಿಂಹಸ್ವಾಮಿ ನನ್ನ ಪಾಲಿಗೆ "ಪ್ರೇಮಕವಿ" ಅಲ್ಲ. ಅವರು ಒಲವಿನ ಕವಿ. ಜೀವನಪ್ರೀತಿಯ ಕವಿ.
ನವಿರಾದ ಪ್ರೇಮಗೀತೆಗಳು, ದಾಂಪತ್ಯಗೀತೆಗಳು ಎಂದು ಕರೆಸಿಕೊಂಡು ಮನೆಹಾಡುಗಳಾದ ಅವರ ಕೆಲವು ಕವಿತೆಗಳನ್ನ ಕೇಳಿದವರಿಗೆ ಮಾತ್ರ ಅವರು ಪ್ರೇಮಕವಿ ಎನ್ನಿಸುವುದು ಸಹಜವಾದರೂ, ಅವರ ಮಾಗಿದ ಜೀವನದೃಷ್ಟಿ ತುಂಬಿದ ಅವರ ಎಲ್ಲ ಕವಿತೆಗಳನ್ನು ಓದುತ್ತ ಹೋದರೆ ಬದುಕಿನೊಡನೆ ಅವರ ಸೃಜನಶೀಲ ಅನುಸಂಧಾನ ಥಟ್ಟನೆ ಓದುವವರ ಅರಿವಿಗೆ ಬರುತ್ತದೆ.
ಇವರ ಕವಿತೆಗಳ ಗುಣವಿಶೇಷವೆಂದರೆ ಆಡಂಬರವಿಲ್ಲದ ಸರಳ ಭಾವಸ್ರೋತ.
ಎಲ್ಲ ಚಿತ್ರಗಳಾಚೆಗೆ ಇನ್ನೊಂದು ಚಿತ್ರವಿರುತ್ತದೆ, ಇರಬಹುದು, ಇರಬೇಕು.. ಅದನ್ನ ನೋಡಲಿಕ್ಕೆ ನಮಗೆ ಮನಸು ಬೇಕು. ಕಣ್ಣು ತೆರೆದಿರಬೇಕು ಎಂದು ಬರೆದವರು ಕೆ.ಎಸ್.ನ. ಜೀವನಾನುಭವದ ರಸಪಾಕ ಅವರ ಕವಿತೆಗಳು ಎನ್ನುವುದು ನನ್ನ ಭಾವನೆ.
ಬರಿ ನನ್ನ ಮಾತುಗಳು ಯಾಕೆ. ಅವರ ಕಿರಿಯ ಕವಿಗೆ ಎಂಬ ಕವಿತೆಯಿಂದ ಈ ಸಾಲು ಓದಿ.
ಅಗ್ಗಿಷ್ಟಿಕೆಯ ಕೆಂಡ ಹೊತ್ತಿಕೊಳ್ಳುವ ತನಕ
ಒಲೆಯ ಮೇಗಡೆ ಪಾತ್ರೆ ಇರಿಸಬೇಡ.
ಒಂದೆರಡು ಹೂಗಳನು ಗಿಡದ ಮೇಲೆಯೆ ಬಿಟ್ಟು
ಉಳಿದವನು ಕಿತ್ತುಕೋ ಎನುವೆ ನಾನು;
ಕವಿತೆಗಸ್ಪಷ್ಟತೆಯು ಒಂದು ಚೆಲುವು.
ಇವು ಕೆ.ಎಸ್.ನ ಅವರ "ಕಿರಿಯ ಕವಿಗೆ" ಕವಿತೆಯಿಂದ ಆಯ್ದ ಸಾಲುಗಳು. ನನ್ನ ಗೆಳತಿಯೊಬ್ಬಳು ಕೆ.ಎಸ್.ನ ಅವರ ಕವಿತೆಗಳ ಬಗ್ಗೆ - ನಮ್ಮ ತಲೆಮಾರಿಗೆ ಕೆ.ಎಸ್.ನ ಬರೆದ ಎಷ್ಟೋ ಸಂಗತಿಗಳ ನೇರ ಅನುಭವ ಮತ್ತು ಸ್ಪಂದನ ಗೊತ್ತೇ ಇಲ್ಲ ಎಂದು ಬರೆದಿದ್ದಳು. ಅವರ ಸಮಗ್ರ ಸಂಕಲನವನ್ನೊಮ್ಮೆ ತಿರುವಿ ಹಾಕಿದರೆ ಅದು ಎಷ್ಟೊಂದು ನಿಜ ಎನಿಸುತ್ತದೆ. ಈಗ ಇಂಡಕ್ಷನ್ ಮತ್ತು ಗ್ಯಾಸ್ ಸ್ಟೋವಿನ ಕಾಲದ ನಾವು ಮತ್ತು ನಮ್ಮ ಮಕ್ಕಳಿಗೆ ಅಗ್ಗಿಷ್ಟಿಕೆಗಳ ಬಗ್ಗೆ ತಿಳಿಯ ಹೇಳುವುದು ಮತ್ತು ರಿಲೇಟ್ ಮಾಡಿಸುವುದು ಕಷ್ಟ.
ಆದರೆ ಯಾವ ಕಾಲಕ್ಕೂ ಸಲ್ಲುವ ಒಂದು ಸತ್ಯವನ್ನ ಕೆ.ಎಸ್.ಎನ್ ಅಕ್ಷರವಾಗಿಸಿದ್ದಾರೆ ಅವರ ಕವಿತೆಗಳಲ್ಲಿ. ಕೆಂಡದ ಅಗ್ಗಿಷ್ಟಿಕೆಗಳ(ಒಲೆಯ) ಮೇಲೆ ಅಡಿಗೆಗೆ ಪಾತ್ರೆ ಇರಿಸಬೇಕಿದ್ದರೆ ಅದರೊಳಗೆ ಬೆಂಕಿ ಚೆನ್ನಾಗಿ ಹೊತ್ತಿಕೊಂಡಿರಬೇಕು. ಇಲ್ಲವಾದರೆ ಹೊತ್ತಿಕೊಳ್ಳುವುದಕ್ಕೆ ಮುಂಚಿನ ಹೊಗೆ ವಾಸನೆಯು ಮಾಡಿದಡುಗೆಯ ರುಚಿ ಕೆಡಿಸುತ್ತದೆ. ಕಾದದ್ದು ಹೊಳೆಯುವುದು, ಪಕ್ವವಾಗಿದ್ದು ರುಚಿಯಾಗುವುದು ಎಂಬ ಭಾವವನ್ನು ಕೆ.ಎಸ್.ನ ಅಂದಿನ ಜನಜೀವನದ ಸಂಗತಿಯಾಗಿ ಇಲ್ಲಿ ಭಾವಗೀತೆಯಾಗಿ ಉದಾಹರಿಸಿದ್ದಾರೆ. ಇದು ಅವರ ಕವಿತೆಗಳ ಗುಣವೂ ಹೌದು.
ಒಂದೆರಡು ಹೂವನು ಗಿಡದ ಮೇಲೆಯೆ ಬಿಡುವ ಜೀವನಾನುಭವ, ರಸದೃಷ್ಟಿ, ಮುಂದೆ ಬರುವುದಕ್ಕೆ ಕೊಡಮಾಡುವ ಮನಸ್ಸು, ಪರಾಗಸ್ಪರ್ಷಕ್ಕೆ ಮುಂದುವರಿಕೆಗೆ ಹೂವುಳಿಯಲಿ ಎಂಬ ವೈಚಾರಿಕ ನಿಲುವು ಅವರ ಕವಿತೆಗಳ ವಿಶೇಷತೆ ಎನಿಸುತ್ತದೆ ನನಗೆ. ಅದನ್ನೇ ಅವರು ಕಿರಿಯ ಕವಿಗಳಿಗೆ ಕಿವಿಮಾತಾಗಿ ಹೇಳಿದ್ದಾರೆ.
ಕಾಲಕಾಲಕ್ಕೆ ಕೆ.ಎಸ್.ನ ಅವರಲ್ಲಿದ್ದ ಕವಿ ಬದಲಾದರು ಎಂದಿರುವರು ಹಿರಿಯರು, ಸಹೃದಯರು ಮತ್ತು ಓದುಪ್ರೀತಿಯ ಹಲವರು. ಒಟ್ಟಿಗೇ ಅವರ ಸಮಗ್ರವೋದಿದರೆ ಮೊದ ಮೊದಲ ಕವಿತೆಗೇ ಕಣ್ಣು ಹನಿಯುತ್ತದೆ. ಯುವ ಕವಿಯ ಒಳಗಿನ ಭಾವದ ಗಾಢತೆ... ಕೊನೆ ಕೊನೆಯ ಕವಿತೆಯವರೆಗೂ ಹೇಗೆ ಬಂತು, ಕಣ್ಣು ಕಾಣುವುದಿಲ್ಲ ಎಂಬ ಚಿಂತೆ ನನಗೆ ಎನ್ನುವ ಮಾಗಿದ ಕವಿಯ ಇಳಿ ಸಂಜೆಯ ಹಾಡುಗಳಲ್ಲಿ ಕವಿತೆಯೇ ಹೇಗೆ ದೃಶ್ಯ ಕಾಣಿಸಿತು ಎಂಬಲ್ಲಿಗೆ ಆ ಮೊದಮೊದಲ ಕವಿತೆಗಳಲ್ಲಿದ್ದ ಒಲವು ಚೆಲುವಿನ ಜೀವನದೃಷ್ಟಿ ಅವರ ಕಾವ್ಯ ಕೃಷಿಯುದ್ದಕ್ಕೂ ಬದಲಾದ ಕಾಲ, ಧರ್ಮ, ಮತ್ತು ಪೀರ್ ಪ್ರೆಷರುಗಳಲ್ಲೂ ಹೇಗೆ ಮತ್ತಷ್ಟು ಅರಳುತ್ತ ವಿಸ್ತರಿಸುತ್ತ ಹೋಯಿತು ಎಂಬುದು ಅರ್ಥವಾಗುತ್ತದೆ.
ಅವರ ಕೊನೆಯ ಸಂಕಲನ ದೀಪಸಾಲಿನ ನಡುವೆಯಲ್ಲಿ "ಮಧುಗಿರಿಯಲ್ಲಿ ಕಂಡಾಗ" ಕವಿತೆಯ ಈ ಸಾಲುಗಳು ಅವರ ಒಲವಿನ ಸಾಕ್ಷಾತ್ಕಾರಕ್ಕೆ ಪ್ರಭಾವಳಿಯಾಗಿವೆ.
ಒಲವು ಬರುವುದೆ ಹೀಗೆ; ಮೊದಲು ಸುಂಟರಗಾಳಿ,
ಬಳಿಕ ಪರಿಮಳಭರಿತ ತಂಪಿನೆಲರು;
ಒಲವು ಮುಟ್ಟಿತು ನನ್ನ, ನಿನ್ನ ನೋಡಿದೆ ನಾನು
ಗಾಳಿಗಾರುವುದಿಲ್ಲ ಒಲವ ಸೊಡರು.
ಒಲವಿನ ಹಾಡು ಹಾಡುತ್ತ ನೊಂದ ನೋವನ್ನ ನೇವರಿಸುವ ಕವಿಯು, ಚೌಕಟ್ಟಿನಾಚೆಗಿನ ಚಿತ್ರದ ಬಗ್ಗೆ ಮತ್ತೆ ಮತ್ತೆ ಬರೆದಿದ್ದಾರೆ. ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರವಿರುವುದನ್ನ ಸಾಲು ಸಾಲುಗಳಲ್ಲಿ ಕಂಡರಿಸಿದ್ದಾರೆ.
ಮಾತು ಜ್ಯೋತಿರ್ಲಿಂಗವಾಗಿ ಹೊಳೆಯಿತು ನನಗೆ,
ಕಟ್ಟು ಹಾಕಿದ ಪಟವ ನಾನು ಕಂಡೆ;
ಚೌಕಟ್ಟಿನಾಚೆಗೂ ಅರ್ಥವಿಹುದೆನ್ನುವರು,
ಹಿಡಿತಕ್ಕೆ ಸಿಕ್ಕಿತ್ತು ನನ್ನ ಮಾತು.
-ಕವಿತೆಯಾಯಿತು ನನಗೆ ನನ್ನ ಮಾತು.
ತನ್ನ ಅನುಭವಗಳನ್ನ ಮಾತಿಗೆ ಮೀರಿದ ದನಿಯಲ್ಲಿ ಕಟ್ಟಿ ಕೊಡುವ ಈ ಕವಿಯ ಪ್ರತಿಮೆಗಳು ಒಂದಕ್ಕಿಂತ ಒಂದು ಸೊಗಸಾಗಿವೆ. ಅವರ ಅನುಭವಗಳ ಮೂಲಕ ಕಲಿತದ್ದನ್ನ ಓದುಗರೆದೆಗೆ ನೇರ ದಾಟಿಸುವ ಈ ಪರಿಗೆ ಮಾರುಹೋಗದವರುಂಟೆ?!
ನಮಗೆ ಆದದ್ದಷ್ಟೆ ಅನುಭವವೆಂದು ತಿಳಿಯುವುದು
ದಾರವಿಲ್ಲದ, ಕಣ್ಣೆ ಇರದ ಸೂಜಿಯ ಹಾಗೆ.
ಇವರ ಪ್ರಯೋಗ ಸರಳ ಸಹಜ ಕನ್ನಡವಷ್ಟೇ ಅಲ್ಲ! ಗಹನ ಕನ್ನಡವೂ. ಅವರೆ ಹಿಂದೊಮ್ಮೆ ಬರೆದ ಹಾಗೆ..
ಕನ್ನಡ ಮಾಧ್ಯಮವಾದರೆ ಸಾಲದು ಕೇವಲ ಮಕ್ಕಳಿಗೆ, ಮೊದಲಾಗಲಿ ಕವಿಗಳಿಗೆ!
ದೀಪ ಸಾಲಿನ ನಡುವೆ ಸಂಕಲನದ - "ಕೆಲವು ಅನುಭವ ಹೀಗೆ" ಕವಿತೆಯ ಒಂದೆರಡು ಸಾಲೋದಿ..:
ತಿಳುವಳಿಕೆಗಿಂತ ತಿಳಿಯದೆ ಇರುವುದೆ ಲೇಸು,
ಕಾದಿಹುದು ಬಲುಹಿಂದಿನನುಭವದ ಸೊಗಸು,
ಸೂರ್ಯೋದಯದ ಬಳಿಕ ಚಂದ್ರೋದಯ!
"ಕಾದಿಹುದು" ಎಂಬುದು ಕಾಯುತ್ತಿರುವುದು, ಪೊರೆಯುತ್ತಿರುವುದು ಎಂಬ ಭಾವದಲ್ಲಿ ಬಂದಿದೆ. ಈ ಸೊಗಸು, ಈ ಹೊಳವು ಮತ್ತೆ ಮತ್ತೆ ಓದಿಯೇ ದಕ್ಕುವುದು.
ಇರುವಂತಿಗೆ ಸಂಕಲನದ "ಸಣ್ಣ ಸಂಗತಿ" ಎಂಬ ಕವಿತೆಯಲ್ಲಿ ಆಗಷ್ಟೇ ಮಳೆ ಬಂದು ನಿಂತು ಇನ್ನೂ ಸೂರಹನಿ ಬೀಳುತ್ತಿರುವ ತಂಪು ರಾತ್ರಿಯಲಿ ತಾಯಿ ಹೇಗೆ ತನ್ನ ನಿದ್ದೆಯ ನಡುವೆಯೂ ಒಂದು ತಾಯೆಚ್ಚರದಲ್ಲಿ ಮಗುವಿನ ಹೊದಿಕೆ ಸರಿಮಾಡುತ್ತಲೇ ಇರುವಳು ಎಂಬ ಚಿತ್ರಣವಿದೆ. ಅದರಲ್ಲಿ ಮಳೆಹನಿಗಳಿಗೆ ಅವರ ಬಳಕೆ, ನೀರ್-ತುಂಬಿಗಳು.
ಒಂದೊಂದು ಸಣ್ಣ ಆದರೆ ಮುಖ್ಯ ಸಂಗತಿಯನ್ನೂ ಹೀಗೆ ಸೊಗಸಾಗಿ ಕಂಡರಿಸುವ ಸೂಕ್ಷ್ಮ ಕುಸುರಿ ಒಬ್ಬ ಸೂಕ್ಷ್ಮ ಹೃದಯದ ಕವಿಗೆ ಮಾತ್ರ ಸಾಧ್ಯ.
ಬಹಳ ವರ್ಷಗಳ ಹಿಂದೆ ಕೆಎಸ್.ನ ಅವರು ಇದ್ದಾಗ, ಅವರನ್ನು ಮನೆಯಲ್ಲಿ ಮಾತನಾಡಿಸುವ ಒಂದು ಅವಕಾಶ ಬಂದಿತ್ತು ನನ್ಗೆ. ಅವರ ಮುಂದೆ ಮೊದಲ ಬಾರಿಗೆ ಶಾಲೆಯಲ್ಲಿ ಟೀಚರ್ ನೋಡಿ ತಬ್ಬಿಬ್ಬಾದ ಆತಂಕಮಿಶ್ರಿತ ಎಕ್ಸೈಟುಮೆಂಟಲ್ಲಿ ಕೂತು ಅವರನ್ನ ಮಾತು ಮರೆತೇ ನೋಡುತ್ತ ಇದ್ದೆ.
ಜೊತೆಗಿದ್ದ ಸ್ನೇಹಿತರ ಕೈಯಲ್ಲಿ ವಿಡಿಯೋ ಕೆಮೆರಾ ಇತ್ತು. ಒಳಮನೆಯಿಂದ ಅವರ ಕೈಹಿಡಿದು ಕರೆತಂದು ಹಾಲಲ್ಲಿ ಕೂರಿಸಿದ ವೆಂಕಮ್ಮನವರು ನಮ್ಮೊಡನೆ ಅದೂ ಇದೂ ಮಾತನಾಡುತ್ತ ಇದ್ದರು.
ಕವಿ ಅವರ ಕನ್ನಡಕದ ಕಣ್ಣಲ್ಲಿ ಎಲ್ಲರನ್ನೂ ಒಮ್ಮೆ ನೋಡಿ, ಅವರ ಕವಿತೆಯ ಯಾವುದೋ ಒಳದನಿಗೆ ಮೈಯೆಲ್ಲ ಕಿವಿಯಾಗಿ ಸುಮ್ಮನೆ ಕೂತು ಬಿಟ್ಟರು.
ಸ್ನೇಹಿತರು ಕೆಮೆರಾ ಆನ್ ಮಾಡಿದ ಕೂಡಲೇ ಲೋಕಾಭಿರಾಮವಾಗಿ ಲೌಕಿಕ ಮಾತನಾಡುತ್ತಿದ್ದ ವೆಂಕಮ್ಮನವರು ಒಂದ್ನಿಮಿಷ ಇರೀ ಅಂದು, ತಿದ್ದಿ ತೀಡಿಸಿ ಕೂತಿದ್ದ ಕೆ.ಎಸ್.ನರ ಹತ್ತಿರ ಹೋಗಿ, ತಮ್ಮ ಸೊಂಟದಲ್ಲಿ ಸಿಕ್ಕಿಸಿಟ್ಟುಕೊಂಡಿದ್ದ ಪುಟ್ಟ ಬಾಚಣಿಗೆ ಹೊರತೆಗೆದು, ಕವಿಯ ಮುಂದಲೆಯಲ್ಲಿ ಹುಡುಗಾಟವಾಡಿಕೊಂಡಿದ್ದ ಬಿಳಿಗುರುಳುಗಳನ್ನು ತೀಡಿದರು. ಹೂಂ ಈಗ ತಗೋಳಿ ಅಂದು ದೂರದಲ್ಲಿ ಸೈಡಿಗೆ ಹೋಗಿ ನಿಂತರು. ನಾನು ವೆಂಕಮ್ಮನವರನ್ನ ನೋಡುತ್ತ ನಿಂತೆ. ಈ ದಾಂಪತ್ಯ ಗೀತವು ಬಹುಶಹ ಕೆ ಎಸ್. ನ ಬರೆದ ಎಲ್ಲ ಕವಿತೆಗಳೂ ಕಿವಿಗೊಟ್ಟು ಕೇಳಿಸಿಕೊಂಡ ಹಾಗೆ ರೂಪಿತಗೊಂಡಿವೆ ಅನ್ನಿಸಿತು.
ಇಷ್ಟಲ್ಲದೆ ಅಂತರ್ಮುಖಿ ಕವಿಯ ವ್ಯಾವಹಾರಿಕತೆಯನ್ನ ಈ ಕವಿಪತ್ನಿಯು ನಿಭಾಯಿಸಿದ ಪರಿಯನ್ನು, ಕವಿಯ ಮನಃಶಾಂತಿಯನ್ನು ಕಾಪಿಟ್ಟ ಪರಿಯನ್ನು ಹತ್ತಿರದಿಂದ ಕಂಡು ಕೇಳಿದ್ದೆನೆ. ಕೆ.ಎಸ್.ನ ಅವರ ಸಂದರ್ಶನದಲ್ಲೂ ಈ ಬಗ್ಗೆ ಹೇಳಿದ್ದನ್ನ ಕೇಳಿದ್ದೆನೆ.
ಅವರ ಬಹುಚರ್ಚಿತ ಗಡಿಯಾರದಂಗಡಿಯ ಮುಂದೆ ಕವಿತೆಯ ಬಗ್ಗೆ ನನಗೆ ಅದು ಅರ್ಥವಾದ ಪರಿಯನ್ನ, ಇಲ್ಲಿ ಬರೆಯುತ್ತೇನೆ.
ಬದುಕು ನಮ್ಮ ಮುಂದೆ ನೂರೆಂಟು ಗಡಿಯಾರಗಳನ್ನಿಡುತ್ತದೆ. ಒಂದೊಂದು ಹಾದಿಗೆ ಅದರದರದೇ ಟೈಮ್ ಝೋನು..! ನನಗೆ ಆ ಕ್ಷಣಕ್ಕೆ ಸರಿಕಂಡ ಸಮಯವನ್ನ ನನ್ನ ಕೈಯಿನ ಗಡಿಯಾರಕ್ಕೆ ಹೊಂದಿಸಿಕೊಂಡೆ. ಏನೋ ಕೆಲಸ್, ಮತ್ತೇನೋ ಹಳವಂಡ. ಹೋಗಿ ಮುಗಿಸಿ ಮತ್ತೆ ಗಡಿಯಾರದಂಗಡಿಯ ಮುಂದೆ.
ಈಗ ಅವತ್ತಿನ ಕುಣಿತ ಹೆಜ್ಜೆಯಲಿಲ್ಲ. ಕಣ್ಣ ಮಿಂಚಿಗೆ ಚಾಳೀಸಿನದೇ ಹಂಬಲು. ಇವತ್ತು ಅವತ್ತಿನ ಸಮಯ ಯಾಕೋ ಸರಿಹೊಂದುತಿಲ್ಲ. ಈ ಕ್ಷಣದ ಅನುಕೂಲಕ್ಕೆ ಗಡಿಯಾರ ಹೊಂದಿಸಿಕೊಳ್ಳಬೇಕು. ಇದು ಮುಖವಾಡವಲ್ಲ. ಬದಲಾವಣೆ. ಕಾಲದ ಹಾದಿಯಲ್ಲಿ ಮುಂದೆ ಇಟ್ಟ ನೂರೆಂಟು ಸ್ಟಾಂಡರ್ಡುಗಳ(ಅಳತೆಗೋಲುಗಳ) ನಡುವೆ ನಮ ನಮಗೆ ಸರಿಕಂಡಿದನ್ನು ಆರಿಸಿಕೊಳ್ಳುತ್ತ, ಅಥವಾ ಬಿಟ್ಟು ಬಿಡುತ್ತಾ, ಹಾದಿ ಮುಂದುವರಿದಂತೆ, ಬೇರಿನ್ನೊಂದಕ್ಕೆ ಬದಲಾಗುತ್ತಾ """""" ಹೊತ್ತ ಮೂಟೆಗಳೇನು. ಹಿಡಿದ ಗಿಂಡಿಗಳೇನು.. ಹೆಜ್ಜೆ ಸಾಲಿನ ಪಯಣ ನಾರಾಯಣ.. ಅಲ್ಲವೆ ಅನ್ನಿಸಿಬಿಡುತ್ತದೆ.
ಅವರೇ ಬರೆದ ಹಾಗೆ...
ತೆರೆದ ಬಾಗಿಲು ಸಂಕಲನದ "ಋತುವೈಭವ" ಕವಿತೆಯ ಈ ಸಾಲುಗಳು ಅವರ ಕವಿತ್ವಕ್ಕೆ ಸಲ್ಲುವುದು.
ಮೃದು ವಸಂತ ಮುಗಿಯಿತೆನಲು
ಗ್ರೀಷ್ಮ ಬಂದೆನೆನುವುದು
ಗ್ರೀಷ್ಮದುರಿಯು ನಂದಿತೆನಲು
ವರ್ಷ ನುಗ್ಗಿ ಬರುವುದು
ಮಳೆಯ ಹಿಂದೆ ಶರತ್ಕಾಲ
ಬಿಳಿಯ ಹೆಜ್ಜೆಯಿಡುವುದು
ಹೇಮಂತದ ಹಿಂದೆ ಶಿಶಿರ
ಕಾಲವೀಣೆ ಮಿಡಿವುದು.
ಅವರ ಕಾವ್ಯದ ವೀಣೆ ಅನಾದಿ ಕಾಲಕ್ಕೂ ಸಲ್ಲುವ ವಾದ್ಯ. ನುಡಿಸಲು ಕಲಿತವರೆಷ್ಟೋ... ತಂತಿಯ ಬರಿದೆ ಮಿಡಿದವರೆಷ್ಟೋ.. ಮುಟ್ಟಿದರೆ ಝುಂ ಎನ್ನಿಸುವ ನಾದ ಎಂದಿಗೂ ಹೊಮ್ಮುವ ಹದಕ್ಕೆ ಅದನ್ನ ಶ್ರುತಿ ಮಾಡಿ ಹೋದ ಕವಿಗೆ:
ನನ್ನ ಹೂನಮಮನ, ನುಡಿನಮನ, ಅಡ್ಡಡ್ಡ ಉದ್ದುದ್ದ ಬಿದ್ದ ಸಾಲು ಸಾಲು ನಮನ.
ಇದೇ ಸಂದರ್ಭದಲ್ಲಿ ನಾಳೆ ೨೫ ಭಾನುವಾರ ಮಂಡ್ಯದ ಲೇಡೀಸ್ ಕಾಲೇಜಿನಲ್ಲಿ "ಅನೇಕ" ಗೆಳೆಯರ ಬಳಗ ಹೂಬುಟ್ಟಿ - ಕೆ.ಎಸ್.ನ ಕವಿತೆಗಳ ಹೊಸ ಓದು ಎನ್ನುವ ಪುಸ್ತಕ ಬಿಡುಗಡೆ, ಅವರ ಕವಿತೆಗಳ ಬಗ್ಗೆ ಸಂವಾದ, ಸಾಕ್ಷಚಿತ್ರ, ಮತ್ತು ಕವಿತಾವಾಚನ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಕೆ.ಎಸ್.ನ ಅವರ ಕೆಲಿಡೋಸ್ಕೋಪಿಕ್ ಕವಿತೆಗಳ ಇನ್ನಷ್ಟು ನೋಟ. ಅಲ್ಲೆ ಹತ್ತಿರವಿರುವವರು, ಬರಲು ಆಗುವವರು ದಯವಿಟ್ಟು ಬನ್ನಿ.