ಅವನು ಅಳುವುದನ್ನು ನನಗೆ ನೋಡಲಾಗಲಿಲ್ಲ. ನನ್ನ ಕೈಗೆ ಅವನ ಕಣ್ಣೀರನ್ನೊರೆಸುವ ಶಕ್ತಿ ಇಲ್ಲ. ನನ್ನ ಅಸಹಾಯಕ ಕ್ಷಣಗಳ ಆ ಯಾತನೆಯನ್ನು ವಿವರಿಸುವುದು ಕಷ್ಟ.
ಅವನು ಕಷ್ಟಪಟ್ಟು ಓದಿದ್ದ. ನಿಜವಾಗ್ಲೂ ಕಷ್ಟಪಟ್ಟು. ಅವನ ಓದಿಗೆ ನೆರವಾಗಲು ಅಮ್ಮ ಮಾಡಿಕೊಡುವ ಬಿಸಿ ಬಿಸಿ ಚಹಾ ಇಲ್ಲ. ಅರ್ಥವಾಗಿದ್ದನ್ನು ಮತ್ತೆ ಮತ್ತೆ ಕಲಿಯಲು ಟ್ಯೂಷನ್ ಇಲ್ಲ. ಓ ಆ ಕಥೆ ಬರೆದವನ ಹೆಸರು ಮರೆತೋಯ್ತಲ್ಲ ಅಂದರೆ ತಕ್ಷಣ ಪುಟ ತಿರುಗಿಸಿ ನೋಡಿ ನೆನಪಿಸಿಕೊಳ್ಳಲು ಕಣ್ಣಿಲ್ಲ. ಯಾರಾದರೂ ಸ್ನೇಹಿತರು ಬಂದು ಓದಿ ಹೇಳಿದರೆ ಮಾತ್ರ ಸಾಧ್ಯ.
ಅಂತಹ ಅವನು ಇವತ್ತು ಪರೀಕ್ಷೆ ಮುಗಿದ ಕೂಡಲೆ ಅತ್ತುಬಿಟ್ಟ. ಕೊನೆಯ ಸೆಮಿಸ್ಟರಿನ ಇಂಗ್ಲಿಷ್ ಪೇಪರ್ ಕಷ್ಟವಿತ್ತು. ಎಲ್ಲ ವಿಷಯಗಳನ್ನೂ ಕಲಿತಿದ್ದರೂ ಬೇಕಾದ ಸಮಯಕ್ಕೆ ಸರಿಯಾಗಿ ಎಲ್ಲ ನೆನಪಾಗಲಿಲ್ಲ. ಅವನು ಪಾಸ್ ಆಗುತ್ತಾನೆ. ಅದಕ್ಕೇನಿಲ್ಲ. ಆದ್ರೆ ಅವನಿಗೆ ಚೆನ್ನಾಗಿ ಮಾಡಿ, ಫಸ್ಟ್ ಕ್ಲಾಸ್ ತೆಗೆದು, ಕೆಲಸಕ್ಕೆ ಸೇರುವಾಸೆ.
ಯಾರಿಗಿರಲ್ಲ ಅಲ್ವಾ? ಇವನು ವಿಶಿಷ್ಟ. ನಂಗೆ ಕಣ್ಣಿದ್ದೂ ಓದಿ ಬರೆಯಲು, ನೂರಾ ಎಂಟು ಅವಶ್ಯಕತೆ, ಅನುಕೂಲ ಬೇಕು.
ಇವನು, ಕಣ್ಣಿಲ್ಲದೆ, ಕಷ್ಟಪಟ್ಟು ಯಾರದೋ ಕೈಯಲ್ಲಿ ಉತ್ತರ ಬರೆಸಿ... ಹೋಗಲಿ ಬಿಡಿ.
ಅವನಿಗೆ ಕಣ್ಣಿಲ್ಲ ಅಷ್ಟೇ. ದುಡಿದು ಬದುಕಬೇಕೆಂಬ ಛಲ, ಹೇಗಾದರೂ ಸಾಧಿಸುವೆನೆಂಬ ಪ್ರಯತ್ನ, ಎಲ್ಲ ಸಾಮರ್ಥ್ಯ ಇರುವ ನಮಗಿಂತ ಚೆನ್ನಾಗೆ ಇದೆ. ಇವತ್ತು ಅವನು ಅತ್ತಿದ್ದು ಆ ಛಲಕ್ಕೆ ಬಿದ್ದ ಮೂಗೇಟಿನಿಂದ. ಆ ಪ್ರಯತ್ನಕ್ಕೆ ಸಿಕ್ಕ ಅಡ್ಡಗಾಲಿನಿಂದ.
ಎಲ್ಲ ಇರುವ ನನಗಿಂತ ಬೇಗ ಚೇತರಿಸಿಕೊಂಡು ನಾಡಿದ್ದಿನ ಪರೀಕ್ಷೆಗೆ ಸಿದ್ಧವಾಗುತ್ತಾನೆ ಅವನು ನನಗ್ಗೊತ್ತು.
ಆದರೆ ಮೂಗೇಟು ತಿಂದ ಅವನ ಬೆಳಕಿರದ ಕಣ್ಣಲ್ಲಿ ಹರಿದ ನೀರು ನನ್ನ ಚೈತನ್ಯವನ್ನ ಅಲ್ಲಾಡಿಸಿಬಿಟ್ಟಿದೆ. (ಚೈತನ್ಯವೆಂದು ಕರೆದುಕೊಳ್ಳಲೂ ನಾಚಿಕೆ ನನಗೆ)
ಏನು ಬರೆದು ಏನು ಉಪಯೋಗ ? ಅಲ್ಲಿ ಅವನಿಗೆ ನೆನಪಾಗದಾಗ, ಏನೂ ಬರೆಯಲು ತೋಚದೆ ಕುಳಿತುಕೊಂಡಂತೆ ಇಲ್ಲಿ ಕುಳಿತುಕೊಳ್ಳಲೂ ಏನು ಧಾಡಿ ನನಗೆ?
ನೀವು ಮನೆಗ್ ಹೋಗ್ ಬಿಡಿ, ಲೇಟಾಗುತ್ತೆ. ನಾನು ನಿಧಾನವಾಗಿ ಸಂಭಾಳಿಸಿಕೊಂಡು ಹೋಗುತ್ತೇನೆ ಅಂತ ವಿಷಾದದ ಬೋಲ್ ಗಳನ್ನ ನೆನಪಿಸಿಕೊಳ್ಳುತ್ತ ನನ್ನನ್ನು ಒತ್ತಾಯವಾಗಿ ಮನೆಗೆ ಕಳಿಸಿದ ಈ ಪ್ರತಿಭಾವಂತನ ಮೊಬೈಲ್ ಇನ್ನೂ ಆಫ್ ಆಗೆ ಇದೆ. ದೇವರೆ ಅದು ಬೇಗ ಆನ್ ಆಗಲಿ. ಇವತ್ತಿನ ಸಂಕಟವನ್ನ, ತನ್ನ ಕಣ್ಣಿಲ್ಲದ ಸಂಕಟದ ಜೊತೆಗೆ ಸೇರಿಸಿ ಬದಿಗಿಟ್ಟು, ಅವನು ನಾಡಿದ್ದಿನ ಪರೀಕ್ಷೆಗೆ ತಯಾರಾಗಲಿ.