Thursday, April 24, 2014

ಕು ಹೂ ಗೀತ

ಇವಳು
"ಸ್ಥವಿರಗಿರಿಯ ಚಲನದಾಸೆ",
ಇವನು
"ಗಂಗಾವತರಣ".
ಇವಳು
ಕಲರವದ ಮರುದನಿ ಹಕ್ಕಿ.
ಇವನು
ಹಕ್ಕಿ ಕೂತ ರೆಂಬೆ.
ಇವಳು
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ.
ಇವನು
ಎಮ್ಮೇ ನಿನಗೆ ಸಾಟಿಯಿಲ್ಲ.
ಇವಳು
ದೊಡ್ಡವರೆಲ್ಲ ಜಾಣರಲ್ಲ.
ಇವನು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ.
ಇವಳು
ದಂಡೆಗೆ ಹುಲಿಮುದ್ದು
ಮಾಡಿ ಮತ್ತೆ ಮತ್ತೆ ಬರುವ
ಸಮುದ್ರೆ.
ಇವನು
ಸಮುದ್ರೆಗೆ
ಕಾದು ಕೂತ
ದಂಡೆ.
ಇವರಿಬ್ಬರ ಸಂಗಾತ
ದಲ್ಲಿ
ನಾವು
ತೆರೆಯಿಳಿತ ತೆರೆಯೇರು,
ಸಂಭ್ರಮದ ಈಜುಮುಳುಗು,
ಒಮ್ಮೊಮ್ಮೆ
ನೀರು ಕುಡಿದು ನೆತ್ತಿ ಹತ್ತಿ,
ಮತ್ತೆ ನಗುನಗುತ್ತ
ಅಳುನುಂಗಿದ

ಮೆರ್ರಿ ಗೀತ. 

ಪುತಿನ ಅಂದ ಹಾಗೆ
ಕೂ ಗೀತ. ಹೂ ಗೀತ. ಕುಹೂ ಗೀತವು.


Monday, April 21, 2014

ಸಾಂತ್ವನ

ನೀನು,
ನಿನ್ನೆ,
ಪೇಟೆಬೀದಿಯ ಮಧ್ಯೆ,
ನನ್ನ ಹರುಕುಬಟ್ಟೆಯನ್ನೂ ಕಿತ್ತೊಗೆದು
ಚಪ್ಪಲಿಯಲ್ಲಿ ಹೊಡೆದುಬಿಟ್ಟೆ.
ಒಂದು ಕಣ್ಣಿನಲ್ಲಿ ನೀರು ಸುರಿದವು-
ಅವಮಾನಕ್ಕೆ,
ಮುಚ್ಚಿಟ್ಟುಕೊಂಡಿದ್ದು
ಬಯಲಾದ ಅಸಹಾಯಕತೆಗೆ,
ಹೊದಿಸಿದ ನೀನೇ
ಕಿತ್ತೊಗೆದ ವಿಪರ್ಯಾಸಕ್ಕೆ.
ಇನ್ನೊಂದು ಕಣ್ಣಲ್ಲಿ ಹನಿಗಳೊಡೆದವು-
ಜನ ಬಂದು,
ಮೈಮುಚ್ಚಿ,
ಕಣ್ಣಲ್ಲೇ ಛೇ ಪಾಪ
ಎಂದಿದ್ದಕ್ಕೆ.

ಪಯಣವೆಂದು
ಭ್ರಮಿಸಿ
ನಿಂತಲ್ಲೇ ನಿಂತಿದ್ದಕ್ಕೆ
ಇದೇ ತಕ್ಕ ಮರ್ಯಾದೆ.

ಕೃತಜ್ಞತೆ ಕೈಕಟ್ಟುತ್ತದೆ.
ದನಿ ಮೂಡದ
ಮಾತುಗಳ
ಬಳ್ಳಿಸಾಲು
ಕಾಗದವಲ್ಲದ ಕಾಗದದಲ್ಲಿ
ಬೆಂಕಿ ಹಚ್ಚುತ್ತದೆ.
ಹೊಗೆಯಿಲ್ಲ,
ಬರಿಯ ಉರಿ ಮಾತ್ರ,
ಕಿಡಿಯೂ ಮರಳದ
ಹಾಗೆ.. ಬೂದಿ ಕೂಡ ಇಲ್ಲ,
ಒಮ್ಮೊಮ್ಮೆ

ಉರಿಯೇ ಸಾಂತ್ವನ.