Monday, November 22, 2010

ಸಾಗರ್ ಕಿನಾರೇ..

ರಜೆಯಲ್ಲಿ ಊರಿಗೆ ಹೋಗಿದ್ವಿ.ಹೋಗುತ್ತಾ ದಾರಿಯಲ್ಲಿ ಗೆಳೆಯರ ಊರು ಸುತ್ತಿ ಅವರ ಕುಟುಂಬವನ್ನು ಕಂಡು ನಲಿದು, ಗೆಳೆತನದ ಕಿನಾರೆಯಲ್ಲಿ ಒಂದು ಹೊತ್ತು ಕಳೆದು ಹೋದೆವು. ಆ ಸವಿಕ್ಷಣಗಳ ಮೆಲುಕನ್ನು ನನ್ನ ಮಗಳು ಸೃಷ್ಟಿ ಪದ್ಯ ಬರೆದಿದ್ದರೆ ಹೀಗೆ ಬರೆಯುತ್ತಿದ್ದಳೇನೋ ಎಂದು ಅವಳಮ್ಮನ ಕನವರಿಕೆ!

ಫೋಟೋಗಳ ಮುನ್ನೆಲೆಯಲ್ಲಿ ಸೃಷ್ಟಿ, ಅವಳ ಗೆಳತಿ ನೇಹಲ್, ಕಡಲು ಮತ್ತು ದಂಡೆ , ಅಲ್ಲಲ್ಲಿ ಗೆಳೆಯ ರಾಜೇಶ್ ನಾಯಕ್, ಅವರ ಪತ್ನಿ ಲೀನಾ, ಮತ್ತು ನಾನು,ನನ್ನ ಬಾಳಸಂಗಾತಿ. ಫೋಟೋ ತೆಗೆದವರು ನನ್ನವರು ಮತ್ತು ಲೀನಾ.
*******

ನಂಗೆ ಕೊಂಕಣಿ ಗೊತ್ತಿಲ್ಲ,
ನಿಂಗೆ ಕನ್ನಡ ಬರೋಲ್ಲ,
ಆದ್ರೇನಾಯ್ತು ನಮ್ಮಮ್ಮ ನಿಮ್ಮಪ್ಪ ಫ್ರೆಂಡ್ಸ್ ಅಲ್ವಾ,
ನಾವೂ ಆಟ ಆಡೋಣ,
ಜತೆಜತೆಗೇ ನಲಿಯೋಣ.
ನನ್ ಬಾಲ್ ತಗೋಬೇಡಾ ನೀನು
ನಿನ್ ಸೈಕಲ್ ತಗೋತೀನಿ ನಾನು -
ಸರಿ ಜಗಳ ಮುಗೀತೀಗ,
ಬಾ ಸುತ್ತು ತುಳಸಿಯ ಕಟ್ಟೆ,
ಕೆಮೆರಾಕ್ಕಿದೋ ಫೋಸ್ ಕೊಟ್ಟೆ!
ಅಂಬಲಪಾಡಿಯ ರಸ್ತೆಯಲ್ಲಿಳಿದ
ಬೈಕಿನ ದಾರಿ ಕಡಲಿನ ತಡಿಗೆ..
ಹೂಡಿಬೆಂಗ್ರೆಯ ಮರಳಿನಂಗಳದೆಡೆಗೆ
ನಿಮ್ಮನೆ ಹಿತ್ತಲ ಸಮುದ್ದದ ನೀರು
ಉಲಿಯುತಲಿಹುದು ಲುಲುಲುಲುಲು...ಈ ಸಲ ನೀರು ಮೊಣಕಾಲ್ ನೆಕ್ಕಿತು,
ಮತ್ತಿದೋ ಈಗ ಸೊಂಟದ ನೇರ,
ಆಆಆಅ ಈಗ ಕುತ್ತಿಗೆ ಮುಚ್ಚಿ,
ಬಾಯಿ ತುಂಬ ಉಪ್ಪಿನ ರುಚಿ.

ಬಂದೂ ಬಂದೂ ಕಾಲನು ತೋಯಿಸಿ
ಮರಳುವ ನೀರು ಎಷ್ಟುಳಿದಿದೆ
ತಿಳಿಯಲು ಎಂದು ಮುಳುಗಲು ಹೊರಟ
ಸೂರಿಯಾ ಮಾಮ.


ಜತೆಗೇ ತೇಲುತ
ನಾವೆಯ ಹಾಯಿ,
ಸುತ್ತಲು ಹಾರುವ ಹಕ್ಕಿಯ ಸಾಲು,
ಓ... ಚಂದದ ಊರಿದು,
ಚಂದದ ಕಡಲು.ಅಮ್ಮ ಅಂತಾಳೆ ಕತ್ತಲಾಯಿತು,
ಮಾಮ ಹೇಳಿದ್ರು ಹೋಗುವ ಬನ್ನಿ,
ಅಪ್ಪ ಇನ್ನೂ ಕೆಮೆರಾ ಹಿಂದೆ.ಕತ್ತಲೆ ಕವಿಯಲು ಬೆಳಕೇ ಇಲ್ಲ,
ದಂಡೆಯ ಮೇಲೆ ಏಡಿಯ ದಂಡು,
ಅಲ್ಲೆಲ್ಲೋ ಕೆಂಪಿ ಕಣ್ಣು,
ಅಮ್ಮ ಯಾಕೋ ಹೆದರ್ಸುವಳಲ್ಲ,
ಹೋಗಲಂತೂ ಮನಸೇ ಇಲ್ಲ,
ಕರೆವುದು ನೀರು ಇನ್ನೂ ಆಡು.
ನಾಳೆ ಬರುವುದು ನಿಜನಾ ಸುಳ್ಳಾ?

ಉಡುಪಿಯಲಿರುವನು ಕಡಗೋಲ್ ಕಿಶ್ಣ
ರಾಧೆಯೇ ಇಲ್ಲದೆ
ಒಬ್ಬನೆ ಪಾಪ,
ನೀಡಲು ಕಾಸು
ಸೊಂಡಿಲು ಇಡುವ
ಮಠದಾ ಆನೆ,
ಕೊಟ್ಟಿಗೆಯೊಳಗೆ
ಅಂಬಾ ಬೂಚಿ, ಪುಟ್ಟೀಕರ,
ಗೆಳತಿಯ ಮನೆಯ
ಹಿತ್ತಲ ದಂಡೆಲಿ
ಮೊರೆಯುವ ಕಡಲು..
ಹೀಗಿದೆ ನನ್ನ ಉಡುಪಿಯ ಪಯಣ-
ಏನೇ ಆದರೂ ಎಲ್ಲೇ ಹೋದರೂ
ನೆನೆವುದು ಮನವು ಸಮುದ್ದವನ್ನೆ
ಅಲೆಅಲೆಅಲೆಯೂ
ಲುಲುಲುಲುಲುಲು
ಎಂದುಲಿಯುತ ಕರೆವುದು ನನ್ನನ್ನೆ!

ಬಿಡುವೆನೆ ನಾನು, ಬರುವೆನು ಮತ್ತೆ,
ಕಾಯುತಲಿರು ನೇವಲ್ ನೀನು, (ಹ ಅನ್ನಲು ನಾಲಿಗೆ ಹೊರಳೋಲ್ಲ. ಗೆಳತಿಯ ಹೆಸರು ನೇಹಲ್!)
ಕೊಂಕಣಿಯನು ಕಲಿಯುವೆ ನಾನು,
ಕನ್ನಡವ ಕಲಿತಿರು ನೀನು ,
ಆಡುವ ಮತ್ತೆ ಮರಳತೀರದಲಿ,
ನೀರನು ಎರಚಿ ಕಾಲನು ಮುಳುಗಿಸಿ
ಕೈಕೈಹಿಡಿದು ಅಲೆಯುವ ನಾವೂ ಅಲೆಗಳ ಜತೆಗೆ !

ಬಂದೇ ಬರುವಳು ಗೆಳತಿಯು ಮತ್ತೆ
ಕಾಯಲೆ ಬೇಕು ನೋಡು ಮತ್ತೆ!
"ಬಾಇಲ್ಲಿ" ಎನ್ನಲು ನೀನು
" ಆಯಿಲೋ "ಎನ್ನುತ ಬರುವೆನು ನಾನು
ಬೆಂಗಳೂರಿಗೆ ವಾಪಸ್ ಬಂದು
ಕರೆಯುವೆ ನಿನ್ನ "ಹಂಗ್ಯೋ" ಎಂದು.