Thursday, November 6, 2014

"ಪಾರಿಜಾತ"

ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ ನನ್ನ "ಪಾರಿಜಾತ" ಕಥೆಗೆ ಎರಡನೇ ಬಹುಮಾನ ಬಂತು.
ಹೆಣ್ಮಕ್ಕಳಿಗಾಗಿ ಇರುವ ಈ ಸ್ಪರ್ಧೆಗೆ ಕಥೆ ಹವ್ಯಕ ಭಾಷೆಯಲ್ಲಿರಬೇಕು. ಮೊದಲ ಬಾರಿ ಪೂರ್ಣಪ್ರಮಾಣದ ಹವ್ಯಕ ಭಾಷೆಯಲ್ಲೆ ಕತೆ ಬರೆದ ಪ್ರಯತ್ನಕ್ಕೆ ಈ ಪುರಸ್ಕಾರ ನಂಗೆ ಖುಶಿಯಾಯ್ತು.
ನಿಮ್ಮ ಜೊತೆಗೆ ಹಂಚಿಕೊಳ್ಳುವ ಅಂತ ಇಲ್ಲಿ:

ಹವ್ಯಕ ಭಾಷೆಯಲ್ಲಿ ಬರೆಯದು ಮತ್ತು ಓದದು ಎರಡೂ ಮಾತಾಡುವುದಕ್ಕಿಂತ ಕಷ್ಟ. ಹವ್ಯಕ ಭಾಷೆ ಬರದ ನನ್ನ ಸ್ನೇಹಿತರಲ್ಲಿ ಕ್ಷಮೆ ಕೋರುತ್ತಾ ಈ ಬರಹ ನಿಮ್ಮ ಓದಿಗಾಗಿ.


"ಪಾರಿಜಾತ

ಯಾವತ್ತೂ ಕರಕರೆ ಮಾಡದ, ಗೌಂಜು ಅಂಬದೆ ಗೊತ್ತಿಲ್ದೆ ಇಪ್ಪ ಪಾವನಿಯ ಕಣ್ಣಲ್ಲಿ ನೀರು ಸುರೀತಾನೆ ಇದ್ದು. ಮಲಗಿಪ್ಪ ಅಲ್ಲೆ ಶಣ್ಣಕೆ ಮುಲುಗಾಟ. ಆ ಕಡೆ ಮೂಲ್ಯಾಗೆ ಫಳ್ಳಗೆ ಮಿಂಚ್ವ ಎರಡು ಕಣ್ಗಳಿಗೆ ಈ ನಳ್ಳಾಟದ ಸೂಚನೆ ಸಿಕ್ಕಿದ್ದೇಯ ಹೊಟ್ಯಲ್ಲಾ ತೊಳಸಕ್ಕೆ ಹೊಂಡ್ತು.
ಪಾವನಿಯ ಬೆನ್ಹುರಿಯಾಗೆ ಹರಡ್ತಾ ಇಪ್ಪ ನೊಂವು ಶ್ರಾವಣಿಗೆ ಹಂಗೇ ಗೊತ್ತಾಗೋತು. ಅವಳಿಗ್ ಗೊತ್ತಿದ್ದು. ಇನ್ ಸ್ವಲ್ಪ ಹೊತ್ತಿಗೆ ಅವ್ಳಿಗೆ ಹಿಂಗೆ ಸುಮ್ನೆ ಮಲಗಲಾದಿಲ್ಲೆ. ಹೂಂಕರ್ಸ್ಲೇಬೇಕು. ಎದ್ ನಿಂತ್ರೇ ಅನ್ಕೂಲ. ಆದ್ರೆ ಅದನ್ನ ತಾಂ ಹೇಳದ್ ಹೆಂಗೆ. ಗೊತ್ತಿಲ್ಲೆ. ಅವಳು ಹತ್ರಕ್ಕೂ ಇಲ್ಲೆ. ಆದ್ರೆ ಸುಮ್ನೆ ನೋಡ್ಕ್ಯಂಡು ನಿಂತ್ಗಂಬ ಹಂಗೂ ಇಲ್ಲೆ. ಹೊರ್ಗಡೆ ಭೋರು ಮಳೆ. ಆಕಾಶ್ವೆ ಹರ್ಕಂಡ್ ಬೀಳ್ತನ ಕಾಣ್ತು. ಒಂದೊಂದ್ಸಲ ಜಡಿಯಲೆ ಶುರುವಾದ್ರೆ ಇವತ್ತು ಕಳ್ದು ನಾಳೆ ಬಿಸ್ಲು ಮುಳ್ಗ ತಂಕ ಹೊಯ್ದ್ರೂ ಹೊಯ್ತೆ. ಅವತ್ತೆಲ್ಲ ಎತ್ಲಾಗೂ ಹೋಗಾ ಹಂಗೇ ಇಲ್ಲೆ. ಇಲ್ಲೆ ಮೂಲೆನೇ ಗತಿ.
ನೊಂವ್ವು ಕೆರಳಿ ಅವಳು ಒದ್ದಾಡಿ ಗಲಾಟೆ ಮಾಡಿದ್ ಮ್ಯಾಲಷ್ಟೇ ಒಳ್ಗಡೆ ಮಲ್ಗಿಪ್ಪ ಜನಕ್ಕೆ ಅವಳ ಗತಿ ಗೊತ್ತಾಗದು ಅಂತ ಶ್ರಾವಣಿಗೆ ಗೊತ್ತಿದ್ದು. ಈಗಿನ್ನೂ ಎರಡ್ ತಿಂಗಳಿತ್ಲಾಗೆ ತಂಗಾದ ಅವಸ್ಥೆ ಅವಳಿಗೆ ಮರ್ತೋಗದಿಲ್ಲೆ. ಒಂದರ್ಧ ಗಂಟೆ ಮುಂಚೇ, ಬರೀ ಒಂದರ್ಧ ಗಂಟೆ ಮುಂಚಿಗೆ ಡಾಕ್ಟ್ರು ಬಂದಿದ್ರೆ ಹಿಂಗಾಗ್ತಿರ್ಲೆ ಅಂತ ಮನೇವೆಲ್ಲ ಮಾತಾಡ್ಕ್ಯಂಡಿದ್ದು ಕೇಳಿಸ್ಕಂಡ್ ಮೇಲೆ ಕಳ್ಕಂಡ್ ನೋವು ಇನ್ನೂ ಚೂರು ಹೆಚ್ಚಾಗೆ ನೋಯಿಸ್ತಿತ್ತು. ಅದು ಇವತ್ತು ಪಾವನಿಗೆ ಆಗ್ಲಾಗ. ಎಂತಾರು ಆಗ್ಲಿ ಅಂದ್ಕಂಡವಳೇ ಅಡ್ಗೆ ಮನೆ ಕಡಿಗೆ ಮುಖ ಮಾಡಿ ಜೋರಾಗಿ ಹೂಂಕಾರ ಹಾಕೇ ಬಿಟ್ಟ. ಆ ಶಬುದಕ್ಕೆ ಅವಳ ಮೈಯೆಲ್ಲ ಬಿಗ್ ಕ್ಕಂಡೇ ಹೋತು. ಅಕ್ಕ ಪಕ್ಕದಾಗೆ ಸುಮ್ನೆ ಮಲ್ಕ್ಯಂಡಿದ್ದವೆಲ್ಲ ಒಂದ್ಸಲ ಗಾಬ್ರಿಯಾಗಿ ಬಾಲ ಬಡ್ದ. ಈ ಕೂಗು ಮಳೆ ದಾಟ್ಕ್ಯಂಡು ಮನೆ ಒಳಕ್ಕೆ ಹೊಗ್ತೋ ಇಲ್ಯೋ ಗೊತ್ತಾಗಲ್ಯಲ ಅಂದಕತ್ತಾ ಇತ್ತು ಶ್ರಾವಣಿ. ಆದ್ರೆ ಪಾವನಿ ಕಡಿಗೆ ನೋಡಿದ್ ಕೂಡ್ಲೇ ಈ ಅಂದಾಜು ಎತ್ಲಾಗಾರು ಹಾಳಾಗ್ ಹೋಗ್ಲಿ ಅಂದ್ ಕಂಡು ಮತ್ತೆ ಮತ್ತೆ ಹೂಂಕರಿಸಕ್ಕೆ ಶುರು ಮಾಡ್ಕ್ಯಂಡ. ಈಗ ಮಳೇಲಿ ಸೊಪ್ಪಿನ ಕಾವಲ್ಲೆ ಬೆಚ್ಚಗೆ ಮಕ್ಕಂಡಿದ್ದ ಪುಟ್ ಪುಟಾಣಿ ಹನುಮ, ತುಳಸಿ, ಅರುಂಧತಿ, ಸುಕನ್ಯ ಎಲ್ಲವೂ ಕೂಗಕ್ಕೆ ಶುರು ಮಾಡ್ಜ. ಈ ಕೂಗಿನ ಆವುಟ ಹೆಚ್ಚಾಗ ಹೊತ್ತಿಗೆ ಅಲ್ಲಿ ಪಾವನಿ ತನ್ನ ನಾಕೂ ಕಾಲೂ ನೀಡ್ಕ್ಯಳಕ್ಕೆ ಶುರು ಮಾಡ್ಚು. ಬೆನ್ನು ಹುರಿಯಾಗೆ ಹರಡ್ಕ್ಯೋತಿದ್ದಿದ್ ನೊಂವ್ವು ಈಗ ಅಲ್ಲೆ ಒಂದೇ ಕಡಿಗೆ ಹಾಕ್ಯಂಡು ಒತ್ತಲೆ ಶುರು ಮಾಡಿದ್ದು. ಕಣ್ಣಾಗೆ ನೀರು ಸುರಿಯದು ನಿಂತೋಯ್ದು. ಆದ್ರೆ ಮೂಗಾಗೆ ಬಾಯಾಗೆ ಇಳಿತಾ ಇದ್ದು. ಭುಸುಗುಡಕ್ಕೆ ಶುರುವಾಯ್ದು. ಅಷ್ಟೊತ್ತಿಗೆ ಅಡಿಗೆ ಮನೆ ಹಿಂದಿನ್ ಲಾಯದ ಬಾಗ್ಲು ಕಿರ್ರಂತು. ಒಳಾಗಡೆಯಿಂದನೂ ಹಿಂದಿನ್ ತಂಕ್ಲೂ ಲೈಟಿನ ಬೆಳಕು ಹರಕಂಡ್ ಬಂತು. ಕೊಟ್ಗೆ ಮನೆ ಕಿಟಕೀಲಿ ನೋಡಾ ಶ್ರಾವಣಿಗೆ ಲಾಯದ ಬಾಗ್ಲಾಗೆ ಬ್ಯಾಟ್ರಿ ಕಯ್ಯಾಗೆ ಹಿಡ್ಕಂಡು ಸ್ವೆಟರ್ ಹಾಕ್ಯಂಡು ಬೆಚ್ಚಗೆ ನಿಂತ್ಕಂಡ ಶ್ರೀಮತಕ್ಕನ ಆಕಾರ ಕಂಡ್ಚು. ಈಗ ಹೂಂಕಾರದ ಆವುಟ ಕಡ್ಮೆ ಮಾಡಿ ಬೇಡಿಕೆಯ ಕೂ ಹಾಕಕ್ಕೆ ಶುರು ಮಾಡ್ಚು ಶ್ರಾವಣಿ. ಅದ್ ಕೇಳ್ತಿದ್ದಂಗೆ ಶ್ರೀಮತಕ್ಕ ಅಲ್ಲೇ ಬಾಗ್ಲಾಗೆ ನಿಂತ್ಕಂಡೆ.. ಕೂಯ್... ಕೇಳ್ಚಾ... ಪಾವ್ನೀಗೆ ಬ್ಯಾನೆ ಶುರ್ವಾದಂಗೆ ಕಾಣ್ತು. ಆ ವೆಟ್ನೀ ಡಾಕ್ಟ್ರ ಮೊಬಾಯಿಲಿಗೊಂದು ಫೋನ್ ಹಚ್ಚಿಕ್ಕಿ ನಿಂಗವು ಬಂದು ಇಲ್ಲಿ ನಿಂತ್ಕಳಿ. ಕೇಳ್ಚಾ... ಅಂತ ಹೇಳಿಕ್ಕೆ ಕೊಟ್ಟಿಗೆ ಮನಿಗ್ ಬಂದು ಪಾವ್ನಿ ಹತ್ರ ಕುಂತ್ಕಂಡು ಗಂಗೆದೊಗ್ಲಿಗೆ ಕೈ ಹಾಕಿ ನೀವಿದ್ದೂ ನೀವಿದ್ದೇ. ಪಾವ್ನೀ ಮಗ್ಳೇ ಆಗೋತ್ತು. ಡಾಕ್ಟ್ರು ಬಂದೇ ಬಿಟ ಅಕಾ, ಅಳಡ. ನೋಯ್ತನೇ... ಇಲ್ನೋಡು ಆಂ ಇಲ್ಲೆ ಇದ್ದಿ. ಇಕಾ ಚೂರು ನೀರು ಸೊರ್ಗುಡುಸು. ಸೇರದಿಲ್ಲೆ ಗೊತ್ತಿದ್ದು ಆದ್ರೂ ಚೂರ್ ತಗಾ, ಹೇಳಿದ್ ಕೇಳ್ತ್ಯಾ ಇಲ್ಯಾ... ತಗ ಮಗಾ.. ನೋವು ಇನ್ ಸ್ವಲ್ಪೊತ್ತಿಗೆ ಹೋಗ್ತು. ಪುಟ್ಟಿ ಕರ ಬತ್ತಲೆ.. ಹೇಳಿ ಮಾತಾಡಿಸ್ಕ್ಯೋತ ಪಾವ್ನಿಯ ಹೊಟ್ಟೆ ಸವರಿ ಸವರಿ ತಲೆ ಎಲ್ಲಿದ್ದು, ಕಾಲು ಎಲ್ಲಿದ್ದು, ಎಲ್ಲ ನೋಡ್ಕ್ಯೋತ ಮುಟ್ತಾ ಇದ್ದ. ಅಷ್ಟೊತ್ತಿಗೆ ರಾಘಣ್ಣನೂ ಬಂದಾತು. ಡಾಕ್ಟ್ರು ಬತ್ವಡ. ಮಳೆ ಆದ್ರೂ ಅಡ್ಡಿಲ್ಲೆ ಬತ್ತಿ ಹೇಳ್ದ. ಗನಾ ಡಾಕ್ಟ್ರೇ ಅಂವ. ಶ್ರೀಮ್ತೀ.. ನೀ ಹೋಗಿ ಹಂಡೆಲಿಂದ ಒಂದ್ ಬಕೀಟು ಬಿಸಿ ನೀರು ತಗಂಬಾ ನೊಡನ. ಪಾವ್ನೀ..ಎಂತೇ. ಸ್ವಲ್ಪ ಹೊತ್ತೇ ಮಾರಾಯ್ತೀ. ಪುಟ್ಟಿ ಕರ ಬಂದ್ ಮೇಲೆ ನೋವೆಲ್ಲ ಹೋಗೇ ಹೋಗ್ತು. ಅಂತ ಮುಟ್ಟಿ ಮುಟ್ತಿ ಮಾತಾಡಿಸಕ್ಕೆ ಶುರು ಮಾಡ್ದ. ಶ್ರಾವಣಿಗೆ ಹೊಟ್ಟೆಯೊಳಗೆಲ್ಲ ಗುಡುಗುಡು. ನಿಂತಲ್ಲಿ ನಿಲ್ಲಕ್ಕೆ ಆಗ್ತಾ ಇಲ್ಲೆ. ಒಂದೆರಡ್ ಸಲ ಕೊಂಬನ್ನ ಮುಂದ್ಗಡೆ ಕಟ್ಟೆಗೆ ಸಮದೂ ಸಮ್ದ. ರಾಘಣ್ಣ. ಶ್ರಾವ್ಣೀ ನಿಂದ್ ಎಂತಕೆ ಗಲಾಟೇ? ಒಹೋ ಗೆಳತೀಗೆ ನೊಂವ್ವಾತು ಅಂತ್ಲೋ. ಅದ್ಕೇ ಹೇಳದು ಜಾನ್ವಾರೇ ಅಡ್ಡಿಲ್ಲೆ ಮನ್ಷರಗಿಂತಾ ಅಂತ. ಹೇಳ್ಕ್ಯೋತ ಪಾವ್ನಿಯ ಬೆನ್ನು ಸವರ್ತಾ ನಿಂತಿದ್ದ. ಶ್ರೀಮತಕ್ಕ ನೀರು ತಗಂಡ್ ಬಂತು. ಮಳೇಲಿ ಬಿಸಿಬಿಸಿ ನೀರಿನ ಬಕೆಟ್ಟಿನಿಂದ ಹಬೆ ಮೇಲೇರ್ತಾ ಇದ್ದು. ಶ್ರೀಮತಕ್ಕನೂ ಶ್ರಾವಣಿ ಕಡಿಗೆ ನೋಡಿದ್ದೆ ಹತ್ರ ಬಂದು ಒಂದ್ಸಲ ಅವ್ಳ ಬೆನ್ ಮೇಲೂ ಕೈಯಾಡಿಸ್ಚು. ಅಷ್ಟಲ್ದೆ ಹೆಣ್ಣು ಹೇಳ್ತ್ವನಾ ಹಂಗರೆ, ಅವಳಿಗೆ ಅವಳ ಕರದ್ ನೆನ್ಪಾಗ್ತಾ ಇದ್ದು ಕಾಣ್ಚು. ಎಂತ ಮಾಡದು ಶ್ರಾವ್ಣೀ ನಿನ್ ಕರ ಉಳಸ್ಕ್ಯಳಕ್ಕೇ ಆಗಲ್ಯಲೇ ಮಗಾ. ಹೆಂಗೋ ನೀ ಉಳ್ದಿದ್ದೇ ಹೆಚ್ಚು ಹೇಳಿ ಹೇಳ್ದ ಡಾಕ್ಟ್ರೂ. ಅವು ಹೇಳಿದ್ ದಿನಕ್ಕಿಂತ ಮುಂಚೆ ಆದ್ರೆ ನಂಗನಾರೂ ಎಂತ ಮಾಡದು. ಅದೇ ಟೈಮಾಗೆ ಶಣ್ಣಮ್ಮಿ ಕೂಶಿಂದು ನಾಮಕರಣ ಬ್ಯಾರೆ ಬಂಧೋಗಿ, ನಿನ್ ಮೇಲೆ ನಿಗಾನೂ ಮಾಡಕ್ಕಾಗಲ್ಲೆ ಎಂಗವಕ್ಕೆ. ಕ್ಷಮುಸ್ ಬುಡೇ ಶ್ರಾವ್ಣಿ ಅಂತ ಹೇಳಾ ಹೊತ್ತಿಗೆ ಶ್ರೀಮತಕ್ಕನ್ ಕಣ್ಣಾಗೆ ನೀರೇ ಬಂತು. ಇದೆಲ್ಲ ಗೊತ್ತಿದ್ದು ಶ್ರಾವಣಿಗೆ. ಮಕ್ಳ ಹಂಗೇ ನೋಡ್ಕ್ಯಳ ಯಜಮಾನ ಯಜಮಾನಿ ಇರದು ಹೌದು. ಆದ್ರೆ ಹೊಟ್ಟೆಲಿ ಹುಟ್ಟಿದ್ ಮಕ್ಳು ಮನ್ಶಾಂಗೆ ಯಾವಗ್ಳು ಮುಂದೆ. ಮನ್ಶಂಗೆಂತು ಜಾನವಾರಕ್ಕೂ ಅಷ್ಟೇಯ ಹಂಗಾಗೆ ಅಲ್ದ. ಪಟ್ರೆ ಒಡ್ಕಂಡು ಹುಟ್ಟಿದ ಕರ ಇವತ್ತಿಗೂ ನೆನಪಾದ್ರೆ ರುಚಿರುಚಿಯಾಗಿ ಮುಂದಿಟ್ಟ ಅಕ್ಕಚ್ಚಿನ ಬಾನಿ ಕಡೆ ಶ್ರಾವಣಿ ತಿರ್ಗದೂ ಇಲ್ಲೆ. ಈಗ್ಲೂ ಪಾವನಿಯ ನೋವು ನೋಡ್ತಾ ಇದ್ರೆ ಶ್ರಾವಣಿಗೆ ತನ್ನ ಹೊಟ್ಟೆಯ ನೋವೇ ಮತ್ತೆ ಮರುಕಳ್ಶಿದಂಗೆ ಆಗಿರದು ಮಾತ್ರ ಮನ್ಶರಿಗೂ ಮೀರಿದ ನಿಜ. ಅವ್ಳ ಗಂಗೆದೊಗಲಲ್ಲಿ ಕೈಯಾಡಿಸ್ತ ನಿಂತ್ಕಂಡ ಶ್ರೀಮತಕ್ಕನ ಕಿವಿಗೆ ಡಾಕ್ಟ್ರ ಬೈಕಿನ ಸದ್ದು ಬಿದ್ದೇ ಬಿತ್ತು. ತರಾತುರಿಲಿ ಓಡ್ಕ್ಯಂಡು ಹೋಗಿ ವಾಸ್ತು ಬಾಗ್ಲು ತೆಗ್ದು, ಚಿಟ್ಟೆ ಬಾಗ್ಲನ್ನ ಕಿರ್ಗುಡಿಸಿ ತೆಗ್ದ. ಅಂಗಳಕ್ಕೆ ಹಾಕಿದ್ ಫ್ಲಡ್ ಲೈಟಲ್ಲಿ ಡಾಕ್ಟ್ರು ಎಲ್ಲೂ ಜಾರ್ ಬೀಳ್ದೆ ಅಡಿಕೆ ಪಟ್ಟೆ ದಾರೀಲಿ ಹುಷಾರಾಗಿ ಬಂದ. ಅವರ ರೈನ್ ಕೋಟ್ ತಾನೇ ಒಂದು ಮೋಡ್ವೇನೋ ಅಂಬಾ ತರ ನೀರು ಸುರುಸ್ತಿತ್ತು. ಅದ್ನ ಅಲ್ಲೆ ಬಾಗ್ಲ ಬದೀಲಿ ಇಪ್ಪ ಗೂಟಕ್ಕೆ ನೇತ್ ಹಾಕಿ ಶ್ರೀಮತಕ್ಕನ ಹಿಂದ್ಕೆ ತಲೆ ತಗ್ಗ್ಸ್ ಕ್ಯಂಡು ಒಳಗ್ ಬಂದ. ಹಿತ್ಲ್ ಬಾಗ್ಲು ದಾಟಾವರೀಗೂ ಡಾಕ್ಟ್ರು ತಲೆ ಎತ್ತಿದ್ರೆ ಕೇಳಿ. ಮುಂಚ್ ಮುಂಚೆ ಬಂದಾಗೆಲ್ಲ ತಲೆ ಎತ್ತಿ ನಡ್ದು ಹೊಡಸ್ಕ್ಯಂಡ ಎಲ್ಲ ಬಾಗ್ಲ ಪಟ್ಟೇನೂ ಡಾಕ್ಟ್ರಿಗೆ ಚೆನಾಗ್ ನೆನ್ಪಿತ್ತು. ಆ ನೋವಂತೂ ಮೂರ್ ಮೂರ್ ದಿನ ಇದ್ದಿತ್ತು. ಈಗೀಗ ಡಾಕ್ಟ್ರು ಈ ದೊಡ್ ದೊಡ್ಡ ಹಳ್ಳೀ ಮನೆಒಳ್ಗೆ ಓಡಾಡಲೆ ಹುಶಾರಾಯ್ದ. ಮುಂದ್ಗಡೆ ಬಾಗ್ಲಾಗೆ ತಗ್ಸಿದ್ ತಲೇನ ಹಿತ್ಲಕಡೆ ಬಾಗ್ಲು ದಾಟಿ ಕೊಟ್ಗೆ ವರಿಗೆ ಬರಾವರಿಗೂ ಎತ್ಲಾಗ ಅನ್ನದು ಅವರು ಕಲ್ತ ಪಾಠ.

ಕೊಟ್ಗೆ ಮನೆ ಒಳ್ಗೆ ಇಪ್ಪ ಲೈಟು ಸಾಕಾಗದಿಲ್ಲೆ ಅಂತ ಆಷ್ಟೋತ್ತಿಗೆ ರಾಘಣ್ಣ ಒಂದು ಎಮರ್ಜೆನ್ಸಿ ಲ್ಯಾಂಪ್ನೂ ತಂದಿಟ್ಟಿದ್ದ. ಡಾಕ್ಟ್ರು ಬಂದವ್ರೆ ಪಾವ್ನೀನ ನೋಡಿ ಒಳ್ಳೆ ಕೆಲ್ಸ ಮಾಡಿದ್ರಿ ರಾಘಣ್ಣ, ಇನ್ ಟೈಮಿಗೆ ಕರ್ಸಿದೀರಿ ಅಂದ. ಏಳು ಏಳು ಅಂತಿದ್ ಹಾಂಗೆ ಅಲ್ಲೀವರಿಗೆ ಮಲಕ್ಯಂಡಿದ್ದ ಪಾವನಿ ದೇವ್ರ ಹಾಂಗೆ ಎದ್ ನಿಂತೇಬಿಡ್ಚು. ಡಾಕ್ಟ್ರು ಅವ್ರ ಕೆಲ್ಸ ಅವ್ರು ಶುರು ಮಾಡ್ದ. ಶ್ರೀಮ್ತಕ್ಕ ರಾಘಣ್ಣ ಇಬ್ರೂ ಕೈನೆರ್ವಿಗೆ ಇದ್ದೇ ಇದ್ದ. ಒಂದೆರಡು ನಿಮ್ಶದಾಗೆ ಸುರ್ಳೀತ ಕರ ಹೊರ್ಗೇ ಬಂತು. ಗುಳ್ ಗುಳ್ಳೆಯಾಗಿ ಮಾಸೂ ಬಂತು. ಹಿಡ್ಕಂಡ್ರೆ ಜಾರಿ ಬಿದೋಗ್ತಿದ್ದ ಕರನ ಶ್ರೀಮ್ತಕ್ಕ ಸಂಭ್ರಮದಿಂದ ಬಿಸ್ನೀರಾಗೆ ತೊಳ್ದು ಬೈಹುಲ್ ಹಾಸ್ಗೆ ಮೇಲೆ ಹಾಕ್ದ. ಪಾವ್ನಿ ಸುಸ್ತಾಗಿ ಕೆಳಗೆ ಬಿದ್ಕಂಡು ಕರಾನ ಎರ್ಡ್ ಸಲ ನೆಕ್ಕಿ, ಕಣ್ ಮುಚ್ಚ್ ಕ್ಯಂಡು ಕೂರ್ಚು. ಅದಕ್ಕೆ ಮುಂಚೆ ಶ್ರಾವ್ಣಿ ಕಡಿಗ್ ತಿರ್ಗಿ ಒಂದ್ಸಲ ಅಂಬಾ ಅನ್ನಲೆ ಮರೆಯಲ್ಲೆ. ಶ್ರಾವ್ಣಿಗೆ ಈಗ ಮತ್ತೆ ಗುಡುಗುಡು ಹೊಟ್ಟೇಲೆಲ್ಲ. ಪಾವ್ನಿಗೆ ಕರ ಹುಟ್ಟಾವರಿಗೂ ತಾಯಿ ಮೇಲಿ ಇದ್ದಿದ್ ನೆದರು ಈಗ ಪುಟ್ಟೀ ಕರದ್ ಕಡಿಗೆ ಬಿದ್ ಮೇಲೆ ತನ್ ಹೊಟ್ಟೇ ಸಂಕಟ ದುಪ್ಪಟ್ಟಾಗಿ ವಾಪಸ್ಸಾತು. ಪಾವ್ನಿಯ ನೋವೇ ತನ್ನ ನೊಂವ್ವೇನೋ ಅನ್ನ ಹಂಗೆ ದುಸಮುಸ ಮಾಡ್ತಾ ಇದ್ದಿದ್ದ ಶ್ರಾವಣೀನ ಡಾಕ್ಟರೂ ನೋಡಿದ್ದೇ ಹತ್ರ ಬಂದ್ರೆ ಹಾಯಕ್ಕೇ ಹೋತು. ಡಾಕ್ಟ್ರು ಪಾಪ ಒಳ್ಳೇ ಜನ. ತಪ್ಪಾಯ್ತು ಅಮ್ಮಾ. ಆದ್ರೆ ಇನ್ನೊಂದ್ ಸ್ವಲ್ಪ ಮುಂಚೆ ಕರ್ಸಿದ್ರೆ ಹೆಂಗಾರೂ ಕರಿನ ಉಳ್ಸಬೋದಿತ್ತು. ನಿನ್ ಉಳಸ್ಕ್ಯಂಡಿದ್ದೂ ಪವಾಡ ಅಂದವ್ರೇ ಕೊಟ್ಗೆ ಹೊರಗೆ ನೆಡ್ದೇ ಬುಟ. ಅಷ್ಟೊತ್ತಿಗೆ ಕತ್ಲು ಹರಕಂಡು ಬೆಳಕಿನ ಕೋಲು ಬಂದೇ ಬಂತು. ಜಾರಿ ಜಾರಿ ಬೀಳ್ಕ್ಯೋತ ಪುಟ್ಟಿ ಕರ ಎದ್ ನಿಂತಗಂಡು ತಾಯಿ ಮೊಲೆಹಾಲು ಹುಡುಕ್ತು. ಶ್ರೀಮ್ತಕ್ಕ ಬಂದು ಬಾರೇ ಪುಟ್ಟಕ್ಕಾ ಎಂತ ಹೆಸ್ರಿಡವಾತೇ ಮಾರಾಯ್ತೀ ನಿಂಗೆ. ಇಲ್ನೋಡು, ಇಲ್ಲಿದ್ದು ಮುಕ್ಕು ತಗಾ ಅಂತ ಒಂದು ತೊಟ್ಟಲ್ಲಿ ಸೊರ ಹಿಡ್ದು ಕೊಟ್ರೆ ಪುಟ್ಟಿಕರ ತಿರ್ಗಿ ನೋಡಿದ್ರೆ ಕೇಳಿ. ಹಾಲು ಸೋರಿಸ್ಕ್ಯೋತ ಅದು ಕುಡಿಯಾ ಚಂದ ನೋಡಲೆ ಎರಡು ಕಣ್ಣು ಸಾಲದು. ಪಾವ್ನಿ ಸುಮ್ನೆ ಆ ಕರದ ಹಿಂಬದಿನ ನೆಕ್ಕಿ ನೆಕ್ಕಿ ಚೊಕ್ಕ ಮಾಡ್ತಾ ನಿಂತಿದ್ದು. ಶ್ರಾವಣಿ ಮಾತ್ರಾ ಜೋರಾಗೀ ಹೂಂಕರ್ಸವು ಅನ್ಸಿದ್ರೂ ಹೊಟ್ಟೇಲಿ ಒತ್ತಿ ಹಿಡ್ಕಂಡು ಶಣ್ಣಕೆ ಅಂಬಾ ಅನ್ಕೋತ ನಿತ್ತಿದ್ದು.

ಶ್ರೀಮ್ತಕ್ಕ ಬಾಣಂತಿ ಕೆಲ್ಸ್ ಮುಗ್ಸಿದವ್ಳೇ ಬ್ಯಾರೆ ದನದ್ದು ಹಾಲು ಕರ್ಯೋ ಕೆಲ್ಸಕ್ಕೆ ಶುರು ಮಾಡ್ಕ್ಯಂಡ. ಸುಮ್ಮನೆ ಮಲ್ಗಿದ್ದ ಪುಟ್ ಕರ ರಾಜೀವನ್ನ ಮುದ್ ಮಾಡಿ ಎಬ್ಸಿ ಅವ್ರಮ್ಮನ ಹಿಂದ್ಗಡೆ ಬಿಟ್ಟ. ಒಂದೆರಡು ಸಲ ಮುಕ್ಕಿದ್ನೋ ಇಲ್ಯೋ ಅತ್ತೆ ಅವ್ನ ಕುತ್ತಿಗೆ ಕಣ್ಣಿ ಎಳ್ದು ಆಚೆಕಡೆ ತಾಯಿ ಮುಂದ್ಕೆ ನಿಲ್ಸಿ ತಂಬಿಗೆ ಹಿಡ್ದು ಕೂತೇ ಬುಟ. ತಂಬ್ಗಿಗೆ ಹಚ್ ಕ್ಯಂಡಿದ್ ತುಪ್ಪನ ಹೆಬ್ಬೆಟ್ನಾಗೆ ಮುಟ್ಕ್ಯಂಡು ಸೊರಸೊರನೆ ನೊರೆ ನೊರೆ ಹಾಲು ಕರ್ದು ತಂಬಿಗೆ ಗಟ್ಲೆ ತುಂಬ್ತಾ ಇದ್ರೆ ರಾಜೀವನ ಹೊಟ್ಟೆ ಚುರುಗುಡ್ತಾ ಇದ್ದು. ತಾಯಿ ಎಷ್ಟೇ ನೆಕ್ಕಿ ಸಮಾಧಾನ ಮಾಡಿದ್ರೂ ಅಂವ ಸುಮ್ನಾಗ. ಕೊನೀಗೆ, ಒಂದ್ ಮಲೆ ಹಾಲು ಬಿಟ್ಟಿದ್ನೋ ಮಾರಾಯಾ ಅಷ್ಟ್ನೂ ಕರ್ಯಲ್ಲೆ ಹೇಳ್ಕೋತ ಶ್ರೀಮ್ತಕ್ಕ ಅಂವನ್ನ ಮತ್ತೆ ಅಮ್ಮನ ಮಲಿಗೆ ಕೊಡದೆ ತಡ ಅಂವ ಅಚ್ಚೀಚಿಗೆ ಮಾಡ್ದೆ ಕುಡ್ದ.

ಇದ್ನೆಲ್ಲ ಎಂಗೆ ನೋಡಲೆ ಸಿಕ್ಕಿದ್ದು ಈ ಸಲ ದೀಪಾವಳಿ ಹಬ್ಬಕ್ಕೆ ಮೊದ್ಲೆ ನಾಕ್ ದಿನ ರಜ ಜಾಸ್ತಿ ತಗಂಡು ಸಂಪಿಗೆಸರದ ಸ್ವಾದರತ್ತೆ ಮನಿಗೆ ಹೋಗಿದ್ದಕ್ಕೆ. ಈ ಬೆಂಗಳೂರ್ ಪ್ಯಾಟೆ ಸೇರಿದ್ ಮೇಲೆ ಕೂಸೆ, ಅತ್ತೆ ಮನಿಗೆ ಬರದೇ ನಿತ್ತೋತಲೇ ಅಂತ ಯಾವಾಗ್ಲೂ ಬೈಸ್ಕ್ಯಂಡು ಬೈಸ್ಕ್ಯಂಡು ಸಾಕಾಗಿ ಹೋಗಿತ್ತು ಎಂಗೂ. ಅದ್ಕೆ ಈ ಸಲ ಭೂರೆ ಹಬ್ಬಕ್ಕೆ ಬೆಂಗಳೂರಿಂದ ನೆಟ್ಟಗೆ ಇಲ್ಲಿಗೇ ಬರಾ ಹಂಗೆ ರಜ ಅಡ್ಜಸ್ಟು ಮಾಡ್ಕ್ಯಂಡು ಬಂದಾತು. ನಾಳಿಗೆ ಭೂರೆ ಮುಗ್ಸಿ ಸಂಜೆ ಬಸ್ಸಿಗೆ ಊರಿನ ದಾರಿ. ಅತ್ತೆ ಮನೆ ಕೊಟ್ಗೆ ನೋಡಲೇ ಚಂದ. ಒಪ್ಪ ಇಟ್ಟಿರ್ತ. ಮಾವ ಅತ್ತೆ ಇಬ್ರಿಗೂ ಜಾನ್ವಾರ್ಗಾ ಅಂದ್ರೆ ಜೀಂವ. ಇಬ್ರೇ ಇಪ್ಪದು. ಹೆಣ್ ಮಕ್ಳಿಬ್ರೂ ಮದ್ವೆ ಆಗಿ ಗಂಡನ್ ಮನೇಲಿದ್ದ. ಮಗಾ ದಿಲ್ಲೀಲಿ ಲೆಕ್ಚರ್ರು. ಹಂಗಾಗಿ ಅವ್ರ ಮಾತುಕತೆ ಎಲ್ಲಾ ಜಾನ್ವಾರು, ನಾಯಿ, ಬೆಕ್ಕಿನ್ ಜೊತಿಗೇ. ಈಗೀಗ ಮಾಂವ ಮಗರಾಯ ತಂದ್ಕೊಟ್ಟಿರೋ ಕ್ಯಾಮರಾ ಸಿಕ್ ಹಾಕ್ಯಂಡು ಹಕ್ಕಿ ಭಾಷೇನೂ ಕಲ್ತಗಂಡು ಎನ್ ಮನೇಲಿ ಒಬ್ಳೇ ಬಿಟ್ಟಿಕ್ ಹೋಗ್ತ ಅನ್ನದು ಅತ್ತೆ ಕಂಪ್ಲೇಂಟು.
ಅತ್ತೆ ತಿಂಡಿ ತಿನ್ನರತೀಗೂ ಪಾವ್ನಿ ಶ್ರಾವ್ಣಿ ಕತೆ ಹೇಳಿದ್ದೇ ಹೇಳಿದ್ದು. ಈಗ ಎಂಗೊಂದು ಚೊಲೋ ಹೆಸ್ರು ಹುಡುಕ್ಯೊಡು ಪುಟ್ಟಿಕರಕ್ಕೆ. ಈ ಸಲ ಧಾರ್ವಾಹಿ ಹೆಸ್ರು ಬ್ಯಾಡ. ಎಲ್ರ ಮನೇಲೂ ಅದೇ ನಮ್ನಿ ಹೆಸರಿಡ್ತ. ಎಂಗೆ ಬ್ಯಾರೆ ತರದ್ದು ಬೇಕು ಅಂದಿದ್ದಕ್ಕೆ, ಈ ಸಲ ಪುಟ್ಟೀಕರಕ್ಕೆ ಸೈನಾ ಅಂತ ಹೆಸ್ರಿಡೇ, ನಮ್ ದೇಶದ್ ಮಹಿಳಾ ಬ್ಯಾಡ್ಮಿಂಟನ್ ರಾಣಿ ಅವ್ಳು ಅಂದಿದ್ಕೆ ಅತ್ತಿಗೆ ಖುಶ್ಯೇ ಆತು. ಅಡ್ಡಿಲೆ ತಗ ಅದ್ನೇ ಇಡ್ತೀ. ಇಲ್ದೆ ಇದ್ರೆ ನಿನ್ ಮಾವ ಮಾಯಾವತಿ ಅಂತ ಇಟ್ರೂ ಇಟ್ವೇ. ನೆಡಿ ನೆಡಿ ನೆಗ್ಯಾಡಿದ್ದು ಸಾಕು. ಈಗ ನಾಳಿನ್ ಕೊಟ್ಟೆ ಕಡ್ಬಿಗೆ ಹಿಟ್ಟು ಬೀಸ್ಕ್ಯಳ ಕೆಲ್ಸಿದ್ದು. ಅಂಗ್ಳ ಬಳಿಯವು. ಬಾವಿಕಟ್ಟೆ ಚೊಕ್ ಮಾಡವು. ಶೇಡಿ ಬಳ್ಯವು ಒಂದಾ ಎರ್ಡಾ.. ಅಂತ ಗಡಿಬಿಡಿ ಮಾಡ ಅತ್ತೆಯ ಮಲ್ಟಿ ಟಾಸ್ಕಿಂಗ್ ನೋಡಿ ಎಂಗೆ ಒಂತರಾ ವಿಚಿತ್ರ ಖುಶಿ ಮೆಚ್ಗೆ ಅನ್ನುಶ್ಚು.

ಮಧ್ಯಾನ್ನದ್ ಊಟ ಮುಗ್ಸಿ, ಮಾವನ್ ಜೊತಿಗ್ ಒಂದು ಶೀಂಕವ್ಳ ಹಾಕಿ ಹೊರ್ಗಡೆ ಜಗಲಿ ಕಟ್ಟೆ ಮೇಲೆ ಮಲ್ಗಿದ್ದಷ್ಟೇ ನೆನ್ಪು. ಯೋಳಕ್ಕಿದ್ರೆ ಸಂಜ್ಯಾಗೋಜು. ಘಮ್ಮನೆ ಸಾರ್ಸಿದ್ ಅಂಗ್ಳದಾಗೆ ಅತ್ತೆಯ ರಂಗೋಲಿ ಹೂಗೊಂಚ್ಲು. ಹಿಂದ್ಗಡೆ ಕೊಟ್ಗೇಲಿ ಅಂಬಾರಾಗ. ಒಳ್ಗಡೆ ಅಡ್ಗೆ ಮನೇಳಿ ಕಡ್ಬಿನ ಹಿಟ್ಟು ಬೀಸ್ತಾ ಇರ ಒಳ್ಳಿನ ಗಡಗಡ ತಾಳ. ಎದ್ದು ನೋಡಿದ್ರೆ ಮಾಂವ ತ್ವಾಟದಿಂದ ಅರಶ್ಣದ್ ಎಲೆ ಕಿತ್ಗಂಡು ಬರ್ತಾ ಇದ್ದ. ಕೊಟ್ಟೆ ಕಟ್ಟಲೆ. ಎಂಗೆ ಒಂದ್ ಚಂದದ ಕನ್ಸಿಂದ ಇನ್ನೊಂದು ಚಂದದ್ ಕನ್ಸಿಗೆ ಸಾಗಿ ಹೋದ್ ಹಂಗೆ ಅನುಸ್ತಾ ಇದ್ದು.

ಅಷ್ಟೊತ್ತಿಗೆ ಒಳ್ಗಡೆ ಫೋನು ರಿಂಗಾತು. ಆನೆ ಎದ್ ಹೋಗಿ ತಗಂಡ್ರೆ ಆ ಕಡೇಲಿ ಹರ್ಷಭಾವ. ದಿಲ್ಲೀ ಫೋನು. ಲೋಕಾರೂಢಿ ಮಾತು ಮುಗಿಯ ಹೊತ್ತಿಗೆ ಪಕ್ಕಕ್ಕೆ ಬಂದ್ ನಿತ್ತ ಮಾವಂಗೆ ಕೊಟ್ಟಿ ರಿಸೀವರ್ರು. ಇಬ್ರೂ ಭಾಳ ಹೊತ್ತು ಮಾತಾಡ್ ಕ್ಯಂಡ. ಎಂಗೆ ಇದೆಲ್ಲ ಹೇಳಡ ಮಾರಾಯಾ. ಅವ್ಳ್ ಹತ್ರೇ ಮಾತಾಡು ಅಂದ ಮಾವ ಶ್ರೀಮ್ತೀ.. ಕೇಳ್ಚಾ...(ಒಳ್ಳಿನ ಗಡ ಗಡ ನಿಲ್ಚು) ಅಪ್ಪಿ ಫೋನು. ಮಾತಾಡಕ್ಕಡ ಬಾ. ಒಳ್ಳಿಗೆ ಒಂಚೂರು ಕೈತೊಳ್ದ ಹಂಗೆ ಮಾಡಿ ಕೈ ವರ್ಶಿಕೋತ ಅತ್ತೆ ಬಂದು ರಿಸೀವರ್ ಇಸಕಳ್ಚು. ಹೂಂಗುಡ್ತಾ ನಿಂತ ಮಖದಾಗೆ ಶಣ್ಣಕೆ ಬೆವರ ಹನಿ. ನಿಂಗ್ ಸರಿ ಕಂಡಿದ್ ಮಾಡಾ ಅಪಿ. ಎಂಗಳ್ ಮಾತ್ ಕೇಳವು ಯಾರು ಹೇಳು. ...ಹಂ.....ಹೋಗ್ಲಿ ಬಿಡು. ಹಬ್ಬಕ್ ಬಪ್ದಿಲ್ಯನಾ? ಹಾಂ ಅಚ್ಚಲ ಬೆಂಗ್ಳೂರಿಂದ ಇಲ್ಲಿಗೇ ಬೈಂದು. ಭೂರೆ ಮುಗ್ಸಿಕ್ ಮಗೆಗಾರಿಗೆ ಹೋಗ್ತಡ. ಒಬ್ಳೇ. ಗಂಡಂಗೆ ಅಷ್ಟೆಲ್ಲಾ ರಜೆ ಇಲ್ಯಡ.ಅಂವ ದೊಡ್ ಹಬ್ಬದ್ ದಿನ ಅಲ್ಲಿಗೇ ಬತ್ನಡ. ಸರಿ. ಹೇಳ್ತಿ. ನೀ ಹೆಂಗಾರು ಬರಕ್ಕಾಗ್ತಾ ನೋಡು. ಆಗ್ದೆ ಇದ್ರೆ ಎಂತ ಮಾಡದು. ಮತ್ ಮುಂದಿನ್ ಸಲ ಇದ್ದಲೋ. ಸರಿ. ಹುಷಾರಿಲಿರು. ಇಡ್ತಿ....

ಕೊನೆಕೊನೆಯ ಮಾತಿಗೆ ಸ್ವಲ್ಪ ದನಿ ಬಂದಿತ್ತು. ಅಲ್ಲೆ ನಿಂತಿದ್ ಮಾವನ್ ಕಡಿಗೆ, ಸ್ವಲ್ಪ ದೂರದಾಗಿದ್ ನನ್ ಕಡಿಗೆ ನೋಡಿದ್ ಅತ್ತೆ. ಇನ್ನೆಂತದು ಅದೇ ಮಾತುಕತೆ. ನೆಡ್ರಿ. ಹಬ್ಬದ ತಯಾರಿ ಪೂರೈಸಿ, ಊಟ ಮಾಡಕ್ಕಿರೆ ಮಾತಾಡಿರ್ ಆತಪ. ಅಂದು ಒಳಗೆ ಹೋತು. ಮಾವ ಬೇಜಾರದಾಗೆ ತಲೆ ಅಲ್ಲಾಡಿಸ್ಕ್ಯೋತ ಕೊಟ್ಗೆ ಕಡಿಗೆ ಹೊರಟ. ಬೆಕ್ಕು ಶೂರಿ.. ಮಾವನ್ ಕಾಲಿಗೆ ಮೈ ತಿಕ್ಯೋತ ಅವನ್ ಹಿಂದ್ ಹಿಂದಕ್ಕೇ ಹೋಗದು ನೋಡ್ತಾ ಕೂತ ಎನಗೆ ಎಲ್ಲದೂ ಪೂರ್ತಿ ಸರಿ ಇಲ್ಲೆ ಅನ್ಸಿದ್ದು ಹೌದು. ಸಂಜೆಗನಸಿನ ಚಂದವೆಲ್ಲ ರಾತ್ರೆಯ ಕತ್ಲಾಗೆ ನಿಧಾನಕ್ಕೆ ಕರಗಿದ ಹಂಗೆ...!
ರಾತ್ರೆ ಊಟಕ್ಕೆ ಕೂರಕ್ಕಿರೆ ಯಾವತ್ತಿನಂಗೆ ಕರೆಂಟಿರ್ಲೆ. ದೀಪಾವಳಿ ಟೈಮಿಗಾದ್ರೂ ಹಿಂಗ್ ಮಾಡ್ದೆ ಇದ್ರೆ ಬೆಳಕಿನ ಹಬ್ಬ ಹೇಳಿ ಕರೀಲಾಗಿತ್ತು ಅಂದ ಮಾವ. ದಿವಿ ಹಲ್ಸಿನ ಹುಳಿ ಜೊತಿಗೆ ಬಡ್ಸಿದ್ ಹಲ್ಸಿನ ಹಪ್ಪಳ ಮುರೀತಾ ಆನು ನಿಧಾನಕ್ಕೆ ಅಂದಿ..
ಪೂರ್ತಿ ಕತ್ಲಾಗಿರೋ ಅಂಗಳದ ತುಳಸಿಕಟ್ಟೇಲಿ ಪುಟ್ ಪುಟಾಣಿ ಎಣ್ಣೆ ದೀಪ ನೋಡಕ್ಕೇ ರಾಶಿ ಚಂದ, ಸೀರಿಯಲ್ ಲೈಟಾಗಿ ಈ ಕತ್ಲಲ್ಲಿ ಬೆಳಗೋ ದೀಪದ್ ಚಂದ ಕಳ್ದೋಗ್ತು ಅಲ್ದನಾ..
ಅಂವ ನಗ್ಯಾಡ್ದ. ಕೂಸೆ ಪ್ಯಾಟೆಲಿಪ್ಪವಕ್ಕೆ ಒಂದೆರಡ್ ದಿನಕ್ಕೆ ಬಪ್ಪವಕ್ಕೆ ಈ ಕತ್ಲು ಬೆಳಕಿನ ಚಂದ ಗೊತ್ತಾಗ್ತು ಅಷ್ಟೇಯ. ಇಲ್ಲೆ ಉಳ್ಕಂಡವಕ್ಕೆ ಈ ಚಂದ ನೋಡಲೆ ಪುರಸೊತ್ತೂ ಇರದಿಲ್ಲೆ, ಮನೆ ಒಳ್ಗಡೆ ಕತ್ಲಿಗೆ ಹಚ್ಚಾ ಚಿಮಣೇ ಬುಡ್ಡೇ ಸಮ ಮಾಡ್ಕ್ಯಳ ಹೊತ್ತಿಗೆ ದೀಪಾವಳಿ ರಾತ್ರೆ ಕಳ್ದೋಗ್ತು.. ಭೂರೇಲಂತೂ ಕಳ್ರಿಗೆ ಒಳ್ಳೇ ಪರಮಾಯ್ಶಿ..
ಈ ಮಾತ್ಕತೆ ಯಾವ್ದೂ ತಂಗಲ್ಲ ಅಂಬ ಹಂಗೆ ನಿಂತಿದ್ದ ಶ್ರೀಮತತ್ತೆ ಮೊಸರನ್ನ ಬಡ್ಸಿ ಆದ್ ಮೇಲೆ ನಿಧಾನಕ್ಕೆ ಅಂತು. ಅಪ್ಪಿ ಈ ಸಲ ದೀಪಾವಳಿಗೆ ಬಪ್ದಿಲ್ಲೆ. ನಾಕ್ ಜಾತ್ಕ ಕಳ್ಸಿದ್ಯ ಯಾವುದೂ ಇಷ್ಟ ಆಗಲ್ಲೆ. ಇಲ್ಲೆ ಯಾರ್ನಾರೂ ಹುಡ್ಕ್ಯಂಡ್ರೆ ಅಡ್ಡಿಲ್ಯಾ ಅಮಾ ಅಂದ. ಎಂತ ಮಾಡವು ಅಚ್ಲಾ.. ನಂಬದಿ ಚೊಲೋ ಇಪ್ಪ ಹೆಣ್ ಮಕ್ಳು ಎಲ್ರಿಗೂ ಇಂಜಿನೀಯರ್ರೆ ಆಗವು. ಬ್ಯಾಂಗ್ಳೂರಾಗೆ ಇರವು. ಇಲ್ದೆ ಇದ್ರೆ ಫಾರಿನ್ನಿಗೆ ಹೋಗವಡ. ಡೆಲ್ಲಿ, ಉತ್ತರ ದೇಶ ಅಂದ್ರೆ ಅಪ್ಪ ಅಮ್ಮನೇ ಒಪ್ಪದಿಲ್ಲೆ. ಹೋಗಿ ಬಂದು ನೋಡಕ್ಕಾಗದಿಲ್ಲೆ ಅಂತ. ಲೆಕ್ಚರ್ರು ಅಂದ್ರೆ ಒಳ್ಳೆ ಪಗಾರ ಅಂದ್ರೆ ಗೌರ್ಮೆಂಟ್ ಕೆಲ್ಸಲ್ದಲಾ. ಅಂದ್ ಬುಡ್ತ. ಎಂತ ಹೇಳಕ್ಕು ಹೇಳೆ ಗೊತಾಗದಿಲ್ಲೆ. ಎನ್ ಮಕ್ಳೂ ಮದ್ವೆ ಆಗಕ್ಕಿರೆ ಬೆಂಗ್ಳೂರೇ ಆಗವು ಹೇಳಿ ಆಗಿದ್ವಲೆ....ಎಷ್ಟೆಷ್ಟು ಗನಾ ಜನನ್ನ ತೋರ್ಸಿರೂ ಬೆಂಗ್ಳೂರು ಬೆಂಗ್ಳೂರು ಹೇಳೇ ಕೂತಿಕ್ಕಿದ್ದ. ಈಗ್ ನೋಡು ಊರಿಗೆ ಬರದು ಸಸಾರವಲೆ. ಮೂರ್ ವರ್ಷಕ್ಕೊಂದ್ಸರೆ ಬತ್ತ. ಅಪ್ಯೇ ಅಡ್ಡಿಲ್ಲೆ. ಡೆಲ್ಲೀಲಿದ್ಕಂಡೂ ಮೂರ್ನಾಕ್ ಸರೆ ಬತ್ತ. ಎಂಗಕ್ಕೆ ಇನ್ನೂ ಎಷ್ಟ್ ದಿನ ನೆಡೀತು ಹೇಳಲೆ ಗೊತ್ತಾಗದಿಲ್ಲೆ. ಈಗೀಗ ಆಳಿನ್ ಸಮಕ್ಕೂ ನಿಂತಕಂಡು ತ್ವಾಟದ್ ಕೆಲ್ಸ ಮಾಡಲಾಗದಿಲ್ಲೆ ಇವ್ರಿಗೆ. ಮುಂಚೆ ಕೊನೆ ಕೊಯ್ಯವ ಬರ್ದೇ ಇದ್ರೂ ಇವೇ ಮಾಡಿದ್ದೂ ಇದ್ದು. ಈ ಕಗ್ಗಾಡಿನ್ ಮೂಲೆ ಹಳ್ಳಿ ಅಂದ್ರೆ ಆಳ್ ಮಕ್ಕಗೂ ಈಗ್ ಸಸಾರವೇಯ. ಎಮ್ಮನೆ ತ್ವಾಟಕ್ಕ್ ಬರಾ ನಾಕ್ ಆಳಿನ ಮಕ್ಕವೂ ಕಾಲೇಜ್ ಮೆಟ್ಲು ಹತ್ತದವೇಯ. ಹಂಗಂತ ಬರಕತ್ತೇನ್ ಆಗಲ್ಲೆ. ಅಲ್ಲೇ ನಗ್ರದಾಗೆ ಪ್ಯಾಟೆ ತಿರಗ್ ಕ್ಯಂಡೇ ಕಾಲ ಕಳೀತ.

ಎಂಗವಾದ್ರೂ ಎಷ್ಟೋ ಅಡ್ಡಿಲ್ಲೆ. ಆ ಆಳ್ ಗಳ್ ಗತಿ ಯಾರಿಗೂ ಬ್ಯಾಡ. ದುಡ್ಡೆ ತಿಂದ್ ತಿಂದೇ ಕರಗ್ ಹೋಗ್ತು. ಕುಡ್ತ ಬೇರೆ. ಹುಶಾರಿಲ್ಲೆ ಅಂದ್ರೆ ಅಡ್ವಾನ್ಸ್ ಇಸ್ಕಂಡ್ ಮೇಲೇ ಡಾಕ್ಟ್ರ ಮನೆ ಕಡೆ ಹೊಂಡದು. ಮಳೇಲಿ ಮಣ್ಣಾಗೆ ಕೆಲ್ಸ ಮಾಡ್ ಮಾಡ್ ಕಾಲಂತೂ ಎಂತಕೂ ಬರದಿಲ್ಲೆ. ಸೊಂಟ ಮಾತೇ ಕೇಳದಿಲ್ಲೆ. ಹೆಂಗೋ ಮುಂಚಿಂದ ಕೆಲ್ಸ ಮಾಡಿದ್ ಅಭ್ಯಾಸದಾಗೆ ಮಾಡ್ಕ್ಯೋತ ಕಾಲ ತಳ್ತಾ ಇದ್ದ. ದೊಡ್ಡ ರೋಗ ಎಂತಾರೂ ಬಂದ್ರೆ ಹಂಗೇ ಕಾಡಿನ್ ಕಡೆ ಮುಖ ಮಾಡದು ಅಂತ್ಲೇ ಅರ್ಥವಡ. ನಮ್ ಕೊಟ್ಗೆ ಕೆಲ್ಸಕ್ಕೆ ಬಪ್ಪಾ ತಿಮ್ಮಿ ಹೇಳ್ತಿತ್ತು.ಅವ್ರ್ ಮಕ್ಕಾಗೂ ಮದ್ವೆ ಇಲ್ಲೆ. ಹೆಣ್ ಮಕ್ಕ ಇದ್ದವೆಲ್ಲ ಓದ್ದವು ಪ್ಯಾಟೇಲಿ ಕೆಲ್ಸಕ್ ಸೇರ್ಕ್ಯಂಡ್ ಹಂಗೇ ಯಾರ್ ಯಾರನ್ನೋ ಮದ್ವೆ ಆಗ್ ಬುಟಿದ. ಕೆಲ್ಸ ಇಲ್ದೆ ಅಲ್ಕೋತ ಇರ ಈ ಗಂಡ್ ಮಕ್ಕಕ್ಕೆ ಮದ್ವಿಗೆ ಯಾರೂ ಸಿಕ್ತ್ವಿಲ್ಲೆ.. ವಯಸ್ಸೇನೋ ಆಯ್ದು. ಒಬ್ಬಂವಾ ಅದೇನೋ ರೇಪ್ ಕೇಸ್ನಾಗೆ ಜೈಲಿಗೂ ಹೋಗ್ ಬಂದಾತು.. ಕಾಲ ಹಾಳಾಗೋಯ್ದು. ಇಷ್ಟ್ ಮಾತ್ರ ಗೊತ್ತಿದ್ದು. ಎಂತಕೆ ಹೆಂಗೆ ಸಮ ಮಾಡವು ಅಂತ್ ಮಾತ್ರ ಅರ್ಥನೇ ಆಗದಿಲ್ಯೆ.
ಚೆನಾಗಿ ಓದಿ ಬರ್ದು ಕೆಲ್ಸಕ್ಕೆ ಸೇರ್ಕ್ಯಂಡ ಗಂಡ್ ಮಕ್ಕಳಿಗೂ ಹೆಣ್ ಸಿಗದಿಲ್ಲೆ.
ಸರ್ಕಾರಿ ಸಬ್ಸಿಡಿಲೀ ಶಾಲೆ ಮುಗ್ಸಿ, ಲಾಚಾರಾದವಕ್ಕೂ ಸಿಗದಿಲ್ಲೆ

ಹೋಗ್ಲಿ ಸುಮ್ನೆ ನಮ್ ಪಾಡಿಗ್ ನಾವಿದ್ಕಂಬುಡನ ಅಂದ್ರೆ ವಯಸ್ಸೊಂದು ಹೆದರ್ಸ್ ಕೋತ ಹೋಗ್ತು..ಯಾವ ರಾಮ, ಬುದ್ದ ಬರವೋ ಗೊತ್ತಾಗದಿಲ್ಲೆ. ಬೌಶ ಇದಕ್ಕೇ ಕಲಿಗಾಲ ಅಂತ ಹೇಳ್ತಿದ್ವೇನ ಹಿಂದಿನವು... ಮಾತು ತುಂಡರಿಯಿತು.

ಶೂರಿ.. ಮಿಯಾಂವನ್ಕೋತ ಅತ್ತೆ ಕಾಲು ಬಳಸಕ್ಕೆ ಶುರು ಮಾಡ್ತು. ಇದೊಂದಿದ್ದಲೇ ದಿನ ತಳ್ಳಕ್ಕೆ ಕಷ್ಟ ಆಗದಿಲ್ಲೆ ತಗ.. ಬಾರೆ ಶೂರಮ್ಮ.. ಹಾಯಿ ಹಾಕ್ತಿ ಅಂದ್ಕೋತ ಒಂದ್ ಕೈಯಾಗೆ ಹಾಲಿನ್ ದಬರಿ ಇನ್ನೊಂದ್ ಕೈಯ್ಯಾಗೆ ಎಮರ್ಜೆನ್ಸಿ ಲ್ಯಾಂಪ್ ಹಿಡ್ಕಂಡು ಶ್ರೀಮ್ತತ್ತೆ ಮುಂದೆ ಮುಂದೆ ಕತ್ಲೆ ಸೀಳ್ಕ್ಯೋತ ಲಾಯದ್ ಕಡೆ ಹೋದ. ಅವಳ್ ಹಿಂದೆ ಶೂರಿ ನೆರಳಾಗಿ ಬಾಲ ಅಲ್ಲಾಡಿಸ್ಕ್ಯೋತ ವಯ್ಯಾರದಾಗೆ.. ಹೋತು.

ಸುಮ್ನೆ ಅವ್ಳ ಮಾತಿನ್ ಮಳೇಲಿ ತೋಯ್ಸಿಕೋತ ಕೂತಿದ್ದ ಮಾವ ಅಂದ. ಪ್ಯಾಟೇ ಜನ ಅಪ್ಪಿ ಫ್ರೆಂಡ್ಸು ಇಲ್ಲಿಗ್ ಬಂದ್ರೆ ಎಷ್ಟು ಖುಶ್ಯಾಗಿ ಇದ್ಕಂಡ್ ಹೋಗ್ತ. ನಿಮ್ಮನೆ ಹೋಮ್ ಸ್ಟೇಗೆ ಹೇಳಿ ಮಾಡ್ಸಿದ್ ಜಾಗ ಅಂದಿಕ್ ಹೋಗ್ತ. ಎಲ್ಲೀ ಹೋಮು ಎಲ್ಲೀ ಸ್ಟೇ ಕೂಸೆ ಹಿಂಗೇ ಆದ್ರೆ ನಂಗವೇ ಯಾವ್ದಾದ್ರೂ ಓಲ್ಡ್ ಏಜ್ ಹೋಮಿಗೆ ಸೇರವು ಕಾಣ್ತು.. ಅವನ್ ತಮಾಶಿನೇ ಅವನ್ ಗೋಳು ಹೊಯ್ಕ್ಯಂಡ್ ಹಂಗೆ ಮಾವ ಸುಮ್ನಾದ.

ಮನ್ಯಾಗೆ ಅಮ್ಮ ಅಪ್ಪಯ್ಯಂದು ಇದೇ ಲೈನಾಗೆ ಬಪ್ಪ ಮಾತುಕತೆ ನೆನ್ಪಾತು. ಹಳ್ಳಿಮನೆಯ ಚಂದಗಂಭೀರ ಅಣ್ಣಗೆ ಅತ್ತಿಗೆ ಒಬ್ಳು ಸಿಗದೇ ಹೋಗಿರುವುದು ನೆನ್ಪಾಗಿ ರಾತ್ರೆಯ ಕತ್ತಲೆಯೇ ಅಪ್ಯಾಯ ಅನ್ಸಕ್ಕೆ ಶುರುವಾತು.
ಕನೆಕ್ಷನ್ ತಪ್ಪದು ಎಲ್ಲಿ. ಓದಿದ್ರಲ್ಲೋ ಓದ್ದೇ ಇರೋದ್ರಲ್ಲೋ, ಓದಿ ಕೆಲ್ಸಕ್ಕೆ ಸೇರೋದ್ರಲ್ಲೋ, ಹಳ್ಳೀ ಮನೇಲಿ ಇರೋದ್ರಲ್ಲೋ.. ಜಗತ್ತಿನ ವಾಸನೆಗಳಿಗೆ ಮೂಗೊಡ್ಡೋದ್ರಲ್ಲೋ ಅಥ್ವಾ ಹಳ್ಳಿಮನೆಯ ಬೇಲಿಯೊಳಗೆ ಹಿತ್ತಲು ಮಾಡ್ಕ್ಯಂಡು ಕೊಟ್ಟಿಗೆ ನೋಡ್ಕ್ಯಂಡು ನಿತ್ತ್ ಬುಡೋದ್ರಲ್ಲೋ.. ರೀಸರ್ಚುಗಳಲ್ಲಿ ತುಂಬ್ಸಿ ಬಿಸಾಕುವ ಹೆಣ್ಣು ಗಂಡು ರೇಶ್ಯೋದಲ್ಲೋ, ಟೀವಿ ನೆಟ್ಟುಗಳ ಮೂಲ್ಕ ಒಳಗೊಳಗೇ ಗೆದ್ದಲು ಹಿಡ್ದೋಗಿರೋ ಜೀವನದೃಷ್ಟೀಲೋ...ಯಾವ್ದೂ ಅರ್ಥವಾಗದ ಗೋಜಲು. ಎಲ್ಲ ಅಂದ್ಕಂಡ್ ಹಂಗೇ ನಡ್ದ ನಂಗೇ ಇಷ್ಟು ಗೋಜ್ಲು ಆಪ್ ದಾರೆ ಈ ಅತ್ತೆ ಮಾವಂಗೆ, ಎನ್ ಅಮ್ಮ ಅಪ್ಪಯ್ಯಂಗೆ, ಹಿಂಗೇ ಹಳ್ಳಿಗಳ್ ತುಂಬ ಉಳ್ಕೋತ್ ಹೋಗಿರೋ ಹಿರೇ ಜೀವಗಳಿಗೆಲ್ಲರಿಗೂ ಇನ್ನೆಷ್ಟು ಗೋಜ್ಲು, ನೋವ್ವು ಆಗಿರ್ಲಾಗ. ಅಷ್ಟೇ ಅಲ್ಲ ಅತ್ತೆ ಹೇಳ್ದಂಗೆ ಈಗ್ ಮುದ್ಯಾಗ್ತಾ ಇರ ಆಳ್ ಮಕ್ಕಳ್ ಗತಿ ಎಂತು..ಎಲ್ಲದೂ ಅರ್ಥ ಕೊಡದ ಉತ್ತರ ಮೂಡ್ಸದ ಪ್ರಶ್ನೆಗಳೇ.. ಅಯ್ಯೋ ರಾತ್ರೆಯೇ ಹೆದರ್ಸೋ ಬೆಳ್ಗೆಗಿಂತ ನೀನೇ ಚಂದ.. ಅಂದುಕೊಳ್ತ ಎದ್ದು ಹೋಗಿ ಹಿತ್ಲಲ್ಲಿ ಕೈತೊಳ್ದು ಮುಗ್ಸ ಹೊತ್ತಿಗೆ ಮತ್ತೆ ಮಳೆ ಹಿಡ್ಕಂಡ್ಚು. ಕತ್ಲೆಲಿ ಮುಳುಗಿದ್ ಮನೆ ನೀರಲ್ಲೂ ಮುಳುಗ್ಲಕ್ಕು ಅನ್ಸ ಅಷ್ಟು ಜೋರಾಗಿ ಮಳೆ.
ಕೊಟ್ಗೆಯೊಳಗೆ ದನಕರ ಬಾಯಾಡಾ ಸದ್ದು. ಮನ್ಸಿಗೆ ಬದ್ಕಿಗೆ ಒಳಗೊಳಗೇ ಗೆದ್ಲು ಹಿಡೀತಾ ಇದ್ರೂ, ಕೊಟ್ಗೆಲಿಪ್ಪ ಜೀವಗಳ್ನ ಹೊಟ್ಟೇಲುಟ್ಟಿದ್ ಮಕ್ಳು ಅಂಬ ಹಂಗೆ ನೋಡ್ಕ್ಯಳ ಈ ಅತ್ತೆ ಮಾವನ್ನ, ಇವ್ರಂಗೆ ಬದುಕ್ತಾ ಇರಾ ಸಾವ್ರಾರು ಹಳ್ಳಿಜೀವಗಳ್ನ ನೆನ್ಸಿ ಒಳಗೆಲ್ಲಾ ಒದ್ದೊದ್ದೆ.

ಎಲ್ಲ ಸೌಕರ್ಯ ಇದ್ಗಂಡೂ, ಟ್ರಾಫಿಕ್ಕಲ್ಲಿ ಕೆಂಪ್ದೀಪ ಬರಕ್ಕಿರೆ ಸಿಗ್ನಲ್ಲಿಗೆ ಬಂದು ನಿಂತ್ರೆ, ಒಂದಿನ ನೀರು ಬರ್ದೆ ಹೋದ್ರೆ, ಎರಡು ಗಂಟೆ ಲೋಡ್ ಶೆಡ್ಡಿಂಗ್ ಆದ್ರೆ, ಅಂದ್ಕಂಡ್ ದಿನ ಸಿನ್ಮಾ ನೋಡಕ್ಕೆ ಹೋಗಕ್ಕೆ ಆಗ್ದೆ ಇದ್ರೆ, ಅಪ್ರೈಸಲ್ಲು ಇಳಿಮುಖ ಆದ್ರೆ, ಬದುಕೇ ಮುಗ್ದೋದಂಗೆ ಎರಡ್ ಮೂರ್ ದಿನ ಸಿಡಿಸಿಡಿ ಮಾಡ್ಕ್ಯಂಡು, ಯಾವ ಕೆಲ್ಸಾನೂ ಮನ್ಸಿಟ್ಟು ಮಾಡ್ದೆ ಇರೋ ನನ್ನ ಜಮಾನಾದ ಕಲರ್ ಫುಲ್ ಬ್ರೈಟ್ ಲೈಫು - ಈ ಜಲವರ್ಣದ ಮೆದು ನೀಲಿಯಲ್ಲಿ, ಹಸಿರಲ್ಲಿ, ತೊಟ್ಟಿಕ್ಕುವ ಜೀವನಪ್ರೀತಿಯಲ್ಲಿ ಕರಗಿ ಫೇಡ್ ಆಗೋತು.

ಲಾಯದ್ ಬಾಗ್ಲ ಹತ್ರ ಬರಕ್ಕಿರೆ ಒಂದ್ ಮಿಂಚ್ ಬೇರೆ ಮಿಂಚ್ತು. ಅಲ್ಲೆ ಪಕ್ದಾಗೆ ದಿಪ್ಪಾಗಿ ಹೂತುಂಬಿ, ಎಲ್ಲ ಹೂವ್ನೂ ಕೆಳಮುಖ ಮಾಡಿ ನಿತ್ಕಂಡಿದ್ ಪಾರಿಜಾತ ಗಿಡ ನಕ್ಷತ್ರ ಕಡ್ಡಿ ಹಂಗೆ ಹೊಳತ್ತು. ನಾಳೆ ಬೆಳ್ಗೆ ಮಳೆ ನಿಂತ್ ಮೇಲೆ ಎನ್ ಚಂದ ನೋಡು.. ಅಂಬ ಹಂಗೆ.

ಬಿರ್ಸಾಗಿ ಬೀಳ ಮಳಿಗೆ ಬಗ್ ನಿಂತ್ಕಂಬದೊಂದೇ ಪರಿಹಾರ ಅಂತ ಹೇಳ್ತಾ ಇದ್ದೋ ಏನೋ ಅದು.