Tuesday, November 19, 2019

ಹೊಳ್ಳಿ ಹೋಗಲು ಬರದ ಹಾದಿ

ಸಿಟ್ಬಂತು, ಖುಶಿಯಾಯ್ತು
ಅಳು ಒತ್ತಿಹಿಡಿದಿರುವೆ
ಆತಂಕದಲ್ಲಿ ನರಳಿರುವೆ
ಮನದ ಮಾತು ತುಟಿಗೆ ಬರದ ಹಾಗೆ ತಡೆದಿರುವೆ
ಓಹ್ ಕೂಡಲೆ ಹೊರಟೆ
ನನ್ನ ರಹಸ್ಯತಾಣಕ್ಕೆ
ಅಕ್ಷರಗಳ ಪಾಕವಿಳಿಸಿ
ಲಹರಿಗಳ ಸಾಲಲ್ಲಿ ಇರಿಸಿ
ಹಗುರಾಗಿ, ಮೆದುವಾಗಿ
ಬಿರಿದ ಗಾಯಕ್ಕೆ ಮುಲಾಮು ಸವರಿ
ಮತ್ತೆ ನನ್ನ ಜಗಲಿಗೆ, ಮನೆಗೆ ವಾಪಸ್.

ನೀನು ಒಮ್ಮೆ ಇದೆಲ್ಲ ಓದಿ
ಎಷ್ಟು ಚಂದಿದೆ ಹೇಳಿ
ಸ್ಪರ್ಧೆಗೆ ಕಳಿಸಿ...

ಈಗ ಬಹುಮಾನದ ಮೇಲೆ ಬಹುಮಾನ
ಯಾವುದೇ ಸಾಲು ಮೂಡಿದ ಕೂಡಲೆ
ಅದನ್ನ ವಿಮರ್ಶಿಸಿ
ಬರೆದ ಸಾಲುಗಳ ನಡುವಿನ ಮೌನವನ್ನು
ಆಡದೆ ಉಳಿದ ಮಾತುಗಳನ್ನು
ತುಂಡರಿಸಿ ಚೆಂದಗೆ ಅಲಂಕರಿಸಿ
ನಿಲ್ಲಿಸುತ್ತಾರೆ ಎಲ್ಲರೂ.

ನಾನು ಈಗ ಎಲ್ಲ ಕಡೆಯೂ
ಕುದಿಯುತ್ತಿರುತ್ತೇನೆ
ಬಿಗಿದಿಟ್ಟ ತಂತಿಯ ವಾದ್ಯದ ಹಾಗೆ
ಚೀರುತ್ತೇನೆ
ಅರಳುಮೊಗ್ಗು ಸುಮ್ಮನೆ ಗಾಳಿಗೆ ಹಾಗೆ ಕದಲಿದರೆ
ಸಿಟ್ಟುಕ್ಕಿ ಸಿಡಾರನೆ ದೂಡಿ ನಡೆದುಬಿಡುತ್ತೇನೆ.
ನನ್ನ ಮನಸು ನನಗೂ ಅರ್ಥವಾಗದಷ್ಟು ಗೋಜಲಾಗಿದ್ದೇನೆ :(

ಇದು ಹೊಳ್ಳಿ ಹೋಗಲು ಬರದ ಹಾದಿ.

Monday, May 6, 2019

ಮಾತು, ಮೌನದ ಗೆರೆಯ ನಡುವೆ..

ಮಾತನಾಡುತ್ತ ಆಡುತ್ತ ,
ನೀನು ಹೂಂಗುಡುವ ಹೊತ್ತು
ಕೇಳುವ ನನಗೆ ಗೊತ್ತು:
ನುಗ್ಗಿ ನುರಿಯಾದ ಚಿತ್ತ
ಈಗಿಲ್ಲ ಇತ್ತ;
ಬೇಸರದಿ ಮುದುಡುತ್ತ,
ಒಳಗೊಳಗೆ ಸರಿಯುತ್ತ,
ಹರಿವು ಬಂದತ್ತ ಹರಿಯುತ್ತ,
ಮಾತು ಮರೆತಿರುವ ಹೊತ್ತು.
ಉಳಿದ ಮಾತು ನೆನಪಾದರೆ ನಾಳೆಯಿದೆಯೆನ್ನುತ್ತ
ಫೋನಿಡುವ ಮನದ ಹುತ್ತ-
-ವೊಡೆದರೆ ಶೋಕಭರಿತ ಕಾವ್ಯ ಉನ್ಮತ್ತ.

ಯಾರು ಜೀವವೇ ಯಾರು ಬರೆದವರು..?

ಮೊದಮೊದಲು ಬರೆದಾಗ ಅಂದುಕೊಂಡೆ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ
ಆಮೇಲಾಮೇಲೆ
  ಓದಿದವರ ಆಹಾ...ಚೆನಾಗಿದೆ ಕೇಳಲು ಬರೆಯುತಿರುವೆ
  ನಾನು ಮೆಚ್ಚುವವವರು ಮೆಚ್ಚಲು ಬರೆಯುತಿರುವೆ
  ಇಂದು ನನ್ನ ಲೇಖನಿ ಕಸಿಯುವವಳು ಎಂದಾದರೂ ಓದಲೆಂದು ಬರೆಯುತಿರುವೆ
  ಎಳೆಬೆನ್ನ ಮೇಲೆ ಸೆಳೆದ ನನ್ನದೇ ಕೈಯ ಹಕೀಕತ್ತು ನನಗೇ ಗೊತ್ತಾಗಲು ಬರೆಯುತಿರುವೆ
   ....
ಮತ್ತೆ ಈಗೀಗ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ;
ಆರುವುದೋ, ತೀರುವುದೋ..ಮತ್ತೆ ಹೊತ್ತಿ ಉರಿಯುವುದೋ
ತಿಳಿದವಳಲ್ಲ.
ದುಗುಡವಾರಲೆಂಬ ಹಂಬಲ ಮತ್ತು ಅಸಹಾಯಕತೆ
ಯಲಿ ಮುಳುಗಿ ಬರೆವ ಕ್ಷಣಗಳಲಿ ನಾನು ನಾನಲ್ಲ.
ಬರೆವಾಗ ಇರುವವಳು
ಕರೆದಾಗ ಬರದವಳು
ಬರೆದ ಮೇಲೆ ಇರುವವಳಲ್ಲ.

Monday, February 11, 2019

ವ್ಯಾಕರಣ

ನೀನು ನನ್ನ ಬದುಕಿನ ಮಹಾಪ್ರಾಣ
ಅನ್ನುವುದೆಲ್ಲ ನಿಜ.
ಆದರೆ ಬದುಕಿನ ಕಾಗುಣಿತದಲ್ಲಿ
ತಲೆಗಟ್ಟು, ಇಳಿ, ಕೊಂಬು,
ದೀರ್ಘ, ಅನುಸ್ವಾರ, ವಿಸರ್ಗ,
ಅರ್ಕಾವತ್ತು, ಮತ್ತು ಒತ್ತಕ್ಷರಗಳ
ಹಿಂಡೇ ಇದೆ.
ನಾನು ಬದುಕೆಂಬ ಭಾಷೆಯನ್ನು ಹಿಂಡುತ್ತ ಇರುವಾಗ
*ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು*
ಎಂದು ಕೆ.ಎಸ್.ನ. ಕವಿತೆ ಓದಿದೆ.
ಈಗ ಭಾಷೆಯನ್ನು ಮರೆತಿರುವೆ
ಹಿಂಡುವ ಬದುಕಿನ ತಿರುಗಣಿಗೆ
ನನ್ನನು ನಾನೇ ಒಪ್ಪಿಸಿಕೊಂಡಿರುವೆ
ಒಮ್ಮೊಮ್ಮೆ ಗಾಳಿ ಬೀಸುವುದು
ಕಥೆ ಕವಿತೆ ಇಂಪುಲಿ ಮತ್ತು ಮಕ್ಕಳನಗೆಯಂತೆ.
ಮರೆತಿದ್ದರೂ ಎಲ್ಲ ವ್ಯಾಕರಣ
ತಿರುಗತಲಿಹುದು ಗಾಣ
ಅದಕೆ ನೀನೇ ಕಾರಣ.
ಗತಿ ನಿರ್ಧರಿಸದೆ ಅತ್ತಿತ್ತ ತಿರುಗುವ ಹೆಜ್ಜೆ
ನಿಂತುಬಿಟ್ಟಿತು:
ಇನ್ನೇನು-
ಹನಿಯಿಳಿಯಲು ಅಣಿಯಾದ ಬನಿಸಂಜೆ
ಗಿಜಿಗಿಟ್ಟುವ ಬೀದಿ, ಪಾದಪಥ, ಅಂಗಡಿ ಮುಂಗಟ್ಟೆ
ಕೊಳ್ಳುವಿಕೆಯಿಂದ ಬೀಗುವ ಚೀಲದ ಹೊಟ್ಟೆ
ಸರಸರನೆ ಸರಿವ ನೂರಾರು ಚಹರೆ
-ಗಳ ನಡುವೆ ದಿಟ್ಟಿಸಿ ನೋಡುತ ನಿಂತವನ
ನೋಡುತನಿಂತುಬಿಟ್ಟಿತು
ಹೆಜ್ಜೆ, ಕಣ್ಣು, ಯೋಚನೆ, ಕಾಲ
ಮರೆತವು ಎಲ್ಲ
"ಬಿಚಿ" "ಡಿಚಿ" ರಂಪ ರಾದ್ಧಾಂತ
ಜತೆಹಾದಿಯ ಪಯಣಾಂತ್ಯ :(
ಹೇಗಿದ್ದೀ ಎಂದಿಷ್ಟು
ಮಣಮಣಿಸಿ
ಮಾತು ಮರಣಿಸಿ, 
ಮೌನ ತಳಮಳಿಸಿ
..................ಕೈಬೀಸಿ
ಪಟಪಟನೆ ಹೆಜ್ಜೆ ಹೊರಟಿತು-
ಹೆಜ್ಜೆ, ಕಣ್ಣು, ಯೋಚನೆ, ಕಾಲ
ಚಲಿಸತೊಡಗಿ
ಹನಿಯುದುರುವ ಸಂಜೆ
-ಯಲ್ಲಿ ಬಜಾರು ಬೀದಿಯಲ್ಲಿ ಓಡಾಡುವ
ಖುಷಿ ಕರಗಿ ನೀರಾಗಿ;
ದಿನಪತ್ರಿಕೆಯಲ್ಲಿ ಸುದ್ದಿ ಬಂತು-
"60ಮಿ.ಮೀ ಮಳೆ, ರಸ್ತೆ ತುಂಬ ಹರಿದ ಕೊಳೆ."