Monday, February 5, 2007

ಸಂತೆಯಲ್ಲೊಂದು Amrutha ಮೌನ

ಮೊನ್ನೆ ಶನಿವಾರ ಸಾಹಿತ್ಯ ಪರಿಷತ್ ಪುಸ್ತಕ ಸಂತೆಗೆ ಹೋಗಿದ್ದೆ. ಹುಚ್ಚು ಅಂತೀರೇನೋ.. ನಂಗೆ ಹಳೆಯ ಪುಸ್ತಕಗಳೆಂದರೆ ಹೊಚ್ಚ ಹೊಸ ಪುಸ್ತಕಗಳಿಗಿಂತ ಒಂದು ವೀಸೆ ಹೆಚ್ಚಿನ ಪ್ರೀತಿ. ಬಣ್ಣಗಟ್ಟಿದ, ಕಿವಿ ಬಂದಿರುವ, ಅಲ್ಲಲ್ಲಿ ಹುಳು ತಿಂದಿರುವ, ಬಹಳ ಸಾರಿ ಮುಖಪುಟ,ಹಿಂಪುಟಗಳೆರಡೂ ಕಿತ್ತೇ ಹೋಗಿರುವ, ಅದೇನೋ ಅವ್ಯಕ್ತ ಪರಿಮಳ ಹೊಂದಿರುವ ಈ ಪುಸ್ತಕಗಳು, ನವಿರು ನವಿರಾದ, ಚಂದದ ಚಿತ್ತಾರಗಳ ಮುಖಪುಟ,ಹಿಂಪುಟ ಹೊಂದಿರುವ, ಮುಟ್ಟಿದರೆ ಧೂಳಾಗುತ್ತೇನೋ ಅನ್ನಿಸುವಂತಹ ಗರಿಗರಿಯಾದ ಹೊಸ ಪುಸ್ತಕಗಳಿಗಿಂತ ಆಪ್ತವಾಗುತ್ತವೆ... ಹೀಗಾಗಿ ನಾನು ಹಳೆ ಪುಸ್ತಕದಂಗಡಿ, ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಅಂಗಡಿಗಳಿಗೆ ಸಮಯ ಸಿಕ್ಕಾಗೆಲ್ಲ ಹೋಗುತ್ತಿರುತ್ತೇನೆ.ನನ್ನ ಸಂಗಾತಿ ನನ್ನ ಈ ಅರೆಹುಚ್ಚಿಗೆ ನಕ್ಕರೂ, ಜೊತೆಯಾಗಿ ಬರುತ್ತಾನೆ. ಹಳೆಯದೇನನ್ನೋ ಅರಸುವ ನನ್ನ ಹುಡುಕಾಟದಲ್ಲಿ, ಹೊಸಬೆಳಕಾಗಿ ದಾರಿ ಸಾಗುತ್ತಾನೆ.

ಪುಸ್ತಕ ಸಂತೆಯಲ್ಲಿ ಹೊಸ,ಹಳೆಯ ಪುಸ್ತಕಗಳೆರಡೂ ಸಿಗುತ್ತವೆ. ಪ್ರತಿ ಶನಿವಾರ ಮೂರರಿಂದ ಆರರವರೆಗೆ ಸಂತೆ ನಡೆಯುತ್ತದೆ.
ಸಂತೆಯೆಂದರೆ ಇದು ಸಂತೆಯಲ್ಲ; ಅಜ್ಜನೊಬ್ಬನು ದಾರಿ ತಿರುವಿನ ಮೋರಿ ಕಟ್ಟೆಯ ಮೇಲೆ ಆಗಲೋ ಈಗಲೋ ಬರಬಹುದಾದ ತನ್ನ ಒಂದೆರಡು ಸ್ನೇಹಿತರಿಗೆ ಕಾಯುವಂತೆ, ಕನ್ನಡದ ಈ ಪುಸ್ತಕಗಳು ಕೊಳ್ಳುವವರಿಗೆ ಕಾಯುತ್ತ ಧ್ಯಾನಸ್ಥವಾಗಿರುತ್ತವೆ.ಸಂತೆಯ ಧೂಳಿಲ್ಲ, ಧಾವಂತ ಮೊದಲೆ ಇಲ್ಲ.ಸಂತೆಯಿದೆ ಪರಿಷತ್ತಿನ ಆವರಣದಾಚೆಗಿನ ರಸ್ತೆಯಲ್ಲಿ, ಟ್ರಾಫಿಕ್ ಮಧ್ಯದಲ್ಲಿ ಪಾರ್ಕಿಂಗ್ ಮಾಡಿ ನಿಂತ ಲಾರಿಗಳ ಸಮೂಹದಲ್ಲಿ, ಎಲ್ಲೆಲ್ಲೂ.. ಬಹಳ ಸಾರಿ ಪರಿಷತ್ತಿನಲ್ಲಿ ಹಾಕಿರುವ 'ಪುಸ್ತಕ ಸಂತೆ' ಬ್ಯಾನರ್ ತುಂಟ ಲೇಖಕನ ವಿಡಂಬನೆಯೋ ಅನ್ನಿಸುವುದುಂಟು.

ಮೊನ್ನೆ ಹೀಗಾಯಿತು. ನಮಗೆ ಇಷ್ಟವಾದ ಒಂದ್ನಾಲ್ಕು ಪುಸ್ತಕಗಳನ್ನು ಆರಿಸಿ ಇನ್ನೇನು ಬಿಲ್ ಮಾಡಿಸಬೇಕೆನ್ನುವಾಗ,ಜನರೆ ಇಲ್ಲ ಸಾರ್, ದಯವಿಟ್ಟು ಬನ್ನಿ ಅಂತ 'ಸಂತೆ'ಯ ಸಭಾಂಗಣಕ್ಕೆ ನಮ್ಮನ್ನು ಹೆಚ್ಚು ಕಡಿಮೆ ದಬ್ಬಿದರು. ಅಯ್ಯೋ ಸಿಕ್ ಹಾಕ್ಕೊಂಡೆವಲ್ಲ ಅಂತ ಯೋಚಿಸುತ್ತಾ ಹೋಗಿ ಇದ್ದಿದ್ದರಲ್ಲೆ ಹಿಂದಿನ ಸಾಲಲ್ಲಿ ಕೂತೆವು. ಮೊದಲ ಎರಡು ಸಾಲಲ್ಲಿ ಮೂರೂ ಮತ್ತೊಂದು ಜನರಿದ್ದರು.. :)

ಸಂಘಟಕರು,ಭಯಂಕರ ಕನ್ನಡದಲ್ಲಿ ಆರ್ಭಟಿಸುತ್ತ ಕಾರ್ಯಕ್ರಮ ವಿವರಣೆ ನೀಡಿದರು. ಅವರ ಪರಿಚಯ ಭಾಷಣ ಕೇಳಿ ನನ್ನ ತಲೆ ತಿರುಗಿ ಹೋಯಿತು.ಮೊದಲು ಕನ್ನಡವನ್ನ ಹಿಗ್ಗಾ ಮುಗ್ಗ ಎಳೆದಾಡಿ, ಬರೆದುಕೊಂಡಿದ್ದ ಪರಿಚಯನುಡಿಗಳಿಗೆ ಎಲ್ಲೆಲ್ಲೋ ಪಾಸ್ ಕೊಟ್ಟು, ಮುಖ್ಯ ಅತಿಥಿಗಳನ್ನು ಪರಿಚಯಿಸುವಾಗ ನನಗೆ ಅಳು ಬರುವಷ್ಟಾಗಿತ್ತು. ಅತಿಥಿಗಳಿಗೇನಾಗಿತ್ತೋ ನಂಗೊತ್ತಿಲ್ಲ. ಇದೆಲ್ಲ ಬಿಡಿ. ನಮ್ಮ ಖಣ್ಣಡ ಉಳಿದು ಬಂದಿರುವುದೇ ಹೀಗೆ.

ಅವರು ಮುಖ್ಯ ಅತಿಥಿಗಳು ವಿಶಿಷ್ಟವಾಗಿದ್ದರು.ಎಲ್ಲಿಯೋ ಹೊಳೆದಂಡೆಯಲ್ಲಿ, ಮರದ ಕೆಳಗೆ ಕೂತು ಹಕ್ಕಿ ಪಿಕ್ಕಿಗಳ ಮೆಲ್ಲುಲಿ ಕೇಳುತ್ತ, ಹೊಳೆಯೋಟ ನೋಡುತ್ತ ಕುಳಿತಿರುವಂತಿದ್ದರು. ಸಾದಾ ಪಂಚೆ, ಹಳೆ ಶರಟು, ಮೇಲೊಂದು ನೀಲಿ ವಸ್ತ್ರ, ಹಾಗೆ ಬೆಳೆಯಲು ಬಿಟ್ಟ ಗಡ್ಡ, ಮುಗ್ಧವಾಗಿ ಹೊಳೆಯುವ ಕಣ್ಗಳು. ಅದರಲ್ಲೇನ್ ವಿಶೇಷ ನಮ್ ಕನ್ನಡದಲ್ಲಿ ಸಂತರೆಷ್ಟೋ ಜನ ಅಂದ್ಕೋಬೇಡಿ. ಇವರು ಮೌನಿ ಕೂಡಾ! ಸಂಘಟಕರು ಮೊದಲು ನಾಡಗೀತೆ,ನಂತರ ಅಧ್ಯಕ್ಷರ ಮಾತು, ಆಮೇಲೆ ಮುಖ್ಯ ಅತಿಥಿಗಳ ಮಾತು ಅಂತ ಊದುತ್ತಲೇ ಇದ್ದರು. ನಾನೂ ಗೆಳೆಯ ಇಬ್ರೂ ಮುಖ ಮುಖ ನೋಡಿಕೊಂಡ್ವಿ. ಮೌನಿಯೆನ್ನುತ್ತಾರೆ, ಮಾತು ಹೇಗೆ?!

ಅಷ್ಟರಲ್ಲಿ ಇಬ್ಬರು ಪುಟಾಣಿಗಳಿಂದ ನಾಡಗೀತೆ ಎಂದು ಅನೌನ್ಸ್ ಮಾಡಿದರು. ಸಭಿಕರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರದೆ ಇದ್ದಾಗ, ದಯವಿಟ್ಟು ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿ ಅಂದರು. ನಂಗೆ ಸಿಕ್ಕಾಪಟ್ಟೆ ಬೇಜಾರಾಯ್ತು, ಛೇ ಅವರು ಹೇಳುವವರೆಗೆ ಎದ್ದು ನಿಲ್ಲಲು ತೋಚಲಿಲ್ವಲ್ಲ ಅಂತ ನನ್ಮೇಲೆ ನಂಗೆ ಸಿಟ್ಟು ಬಂತು.ಮಕ್ಕಳು ಚಂದವಾಗಿ ಹೇಳಿದರು. ನಾನು ಆಲ್ ಮೋಸ್ಟ್ RVV ಶಾಲೆಯ ಪ್ರಾರ್ಥನೆ ಸಾಲಿನಲ್ಲಿ ಸೇರಿಹೋಗಿದ್ದೆ. ಅಷ್ಟರಲ್ಲಿ ಗೀತೆ ಮುಗಿದು ಮತ್ತೆ ಸಂಘಟಕರು ಆರ್ಭಟಿಸಲು ಶುರು ಮಾಡಿದರು.

ನಂತರ ಅಧ್ಯಕ್ಷ ಜರಗನಹಳ್ಳಿ ಶಿವಶಂಕರ್ ಅವರು ಮಾತಾಡಿದರು. ಒಂದು ಒಳ್ಳೆಯ ಭಾಷಣ,ಸವಿಯಾದ ಕನ್ನಡ,ಸಮಕಾಲೀನ ವಿಷಯಗಳು ಕೇಳಲು ಹಿತವಾಗಿತ್ತು.ನಮ್ಮಲ್ಲೂ ವಿಚಾರದ ಅಲೆಯೆಬ್ಬಿಸಿದವು. ಅವರು ಮೌನಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಅವರ ಹೆಸರು Amrutha, ಒಬ್ಬ ಹಿರಿಯ ನಾಗರಿಕರು, ವಿದ್ಯಾವಂತರು (ಎಂ.ಎ), ಸುಶಿಕ್ಷಿತರು. ಗಾಂಧಿಯವರ ಸತ್ಯಾಗ್ರಹದಲ್ಲಿ ಹೆಚ್ಚಿನ ನಂಬಿಕೆ ಇಟ್ಟವರು.ಪ್ರಸ್ತುತ ಅವರದ್ದು ಬಾಟಲ್ಡ್ ವಾಟರ್ ವಿರುದ್ಧದ ಹೋರಾಟ. ನಮ್ಮ ನೀರನ್ನೆ ಬಾಟಲಿಯಲ್ಲಿ ತುಂಬಿ ನಮಗೇ ಮಾರುವ ಗ್ಲೋಬಲ್ ಕಂಪನಿಗಳು, ತಮಗೆ ಹೇಗೂ ಬಾಟಲಿಯಲ್ಲಿ ತುಂಬಿಟ್ಟ ಶುದ್ಧ ನೀರು ಸಿಗುತ್ತದೆಂದು, ಅಗಾಧ ಪ್ರಮಾಣದ ಕೊಳಚೆ, ಮಲಿನ ನೀರನ್ನ, ಮೂಕವಾಗಿ ಸ್ವೀಕರಿಸುವ ಭೂಮಿಗೆ, ಲೇಔಟುಗಳಾಗಿ ಬದಲಾಗುತ್ತಿರುವ ಕೆರೆಗಳಿಗೆ ಬಿಟ್ಟು ವಾತಾವರಣ ವಿಷಗೊಳಿಸುವ ಸ್ವಹಿತಕೇಂದ್ರಿತ ವ್ಯಕ್ತಿ,ವ್ಯವಸ್ಥೆ,ಸಂಸ್ಥೆ ಗಳ ವಿರುದ್ಧ ಈ Amrutha ಎಂಬ ಸಂತನ ಮೌನ ಹೋರಾಟ.

ನಮ್ಮ ಎಲ್ಲ ಸಮಾಜದ್ವೇಷಿ,ಪರಿಸರ ದ್ವೇಷಿ ಸಮಸ್ಯೆಗೆಳನ್ನ ಹುಟ್ಟಿ ಹಾಕಿದವರಲ್ಲಿ, ಸಮಸ್ಯೆಗಳು ಬೆಳೆಯುವಾಗ ಅನುಕೂಲ ಮಾಡಿಕೊಟ್ಟು ಮುಖ ತಿರುವಿ ನಿಂತು ತಮ್ಮ ಹೊಟ್ಟೆ ತುಂಬಿಸಿಕೊಂಡವರಲ್ಲಿ, ಈ ಎಲ್ಲ ಸಮಸ್ಯೆಗಳ ಪರಿಹಾರದ ಹೆಸರು ಹೇಳಿ ಗೆದ್ದು ಬಂದ ಸರ್ಕಾರಗಳಲ್ಲಿ, ಮಾತು ವ್ಯರ್ಥ, ಕೊಟ್ಟ ಮಾತು ಮರೆಯುವವರಲ್ಲಿ ಮಾತನಾಡಿದರೆ ಧ್ವನಿ ಜೀವ ಬಿಟ್ಟೀತು,ನಮ್ಮ ಮಾತು ಮನಕ್ಕೆ ಸೇತುವೆಯಾಗದೆ ಶೂನ್ಯದ ಬುಟ್ಟಿ ತುಂಬುವ ಕಸವಾಗುವುದಾದರೆ ಆ ಮಾತೆ ಬೇಡ ಎಂದು ಮೌನಕ್ಕೆ ಮೊರೆ ಹೊಕ್ಕವರು ಇವರು.

ನಾನು ಇಂತವರು ಇನ್ನು ಇದ್ದಾರಲ್ಲ ಎಂದು ಅಚ್ಚರಿಯಲ್ಲಿ ಮುಳುಗಿಹೋದೆ. ಸಂತನೊಬ್ಬನ ಸಮೀಪ ದರ್ಶನದಿಂದ ಮೈ ನವಿರೆದ್ದಿತು. ಅವರು ತಮ್ಮ ವಿಚಾರಗಳನ್ನ ಶುದ್ಧ ಕನ್ನಡದಲ್ಲಿ ಒಪ್ಪಾಗಿ ಬರೆದು ಕೊಟ್ಟಿದ್ದರು, ಶಿವಶಂಕರ್ ಓದಿ ಹೇಳಿದರು. ಗೊತ್ತಾಗದೆ ಹೇಗೆ ಒಳಸುಳಿಯಲ್ಲಿ ಸಿಕ್ಕಿಬಿದ್ದಿದ್ದೇವೆ ಅಂತ ಚಡಪಡಿಕೆಯಾಯಿತು. ನಮಗೆ ಯಾವ ಕೆರೆ ಬತ್ತಿದರೂ, ಯಾವ ಜಲಾಶಯ ಕಲುಷಿತವಾದರೂ ಚಿಂತಿಲ್ಲ. ಆಫೀಸ್ ನಲ್ಲಿ ಕುಡಿಯಲು ಶುದ್ದವಾದ ಬಾಟಲಿ ನೀರು ಸಿಗುತ್ತದೆ, ಮನೆಯಲ್ಲಿ ಝೀರೋ ಬಿ, ಅಕ್ವಾಗಾರ್ಡ್ ಇದೆ. ಪ್ರಯಾಣ ಮಾಡುವಾಗ 14 ರೂ ಕೊಟ್ಟರೆ ಒಂದು ಲೀಟರ್ ಬಾಟಲಿ ಸಿಗುತ್ತದೆ, ಇಳಿಯುವ ಸಮಯಕ್ಕೆ ಅದನ್ನು ಬಿಸಾಕಿ ಅಲ್ಲಿನ ನೆಲಕ್ಕಿಷ್ಟು ವಿಷ ಉಣ್ಣಿಸುತ್ತೇವೆ.

ಆದರೆ ಇಲ್ಲೆ ಆ ಕಡೆ ಬೀದಿಯಲ್ಲಿ, ಹತ್ತಿರದ ಸ್ಲಮ್ಮಿನಲ್ಲಿ, ಕನ್ನಡ ಶಾಲೆಯಲ್ಲಿ, ಮಾರ್ಕೆಟ್ಟಿನ ದಿನ ನಿತ್ಯದ ಸಂತೆಯಲ್ಲಿ,ಸಾಮಾನ್ಯ ಜನಜೀವನದಲ್ಲಿ ಎಲ್ಲಿದೆ ಶುದ್ಧ ನೀರು? ಎಲ್ಲ ಶ್ರೀಮಂತ, ಅಫರ್ಡಬಲ್ ಜನ ಬಳಸಿ ಬಿಟ್ಟ ಮಲಿನ ನೀರು,ಮಲಿನ ಗಾಳಿ,ಮಲಿನ ಪರಿಸರ ಅವರ ಪಾಲಿಗೆ? ಶುದ್ದ ನೀರು ಬೇಕಾ? ಬರೇ 14 ರೂಪಾಯಿ ಒಂದು ಲೀಟರ್ ಗೆ.ಸರ್ವೆ ಹೇಳುತ್ತದೆ, ನಮ್ಮ ದೇಶದ ನಗರವಾಸಿಗಳ ದಿನನಿತ್ಯದ ಖರ್ಚಿನ ಆವರೇಜ್ 9ರಿಂದ 11 ರೂಪಾಯಂತೆ. ಹೌದು ಶ್ರೀ ಸಾಮಾನ್ಯನ ಬದುಕಿದು, ಮೇಲ್ವರ್ಗದ ಎಲೈಟ್ ಕುಟುಂಬಗಳದ್ದಲ್ಲ. ನಮಗೆ ಸಾಫ್ಟ್ ವೇರ್ ನವರಿಗೆ, ಅಪ್ರೈಸಲ್ ನಲ್ಲಿ 0.5 % ಕಡಿಮೆ ಬಂದರೆ ಕಂಪನಿ ಬಿಟ್ಟು ಬೇರೆ ಕಡೆ ಹೋಗುವ ಯೋಚನೆ. ಇವರಿಗೋ ಕುಡಿಯಲೊಂದು ತೊಟ್ಟು ಶುದ್ಧ ನೀರಿಲ್ಲ.

ಸ್ವಲ್ಪ ಹೊತ್ತು ನನ್ನ ತಲೆ ಧಿಂ ಎಂದಿತು. ಹೌದಲ್ಲ, ಹೀಗೆ ಯೋಚಿಸಿಯೇ ಇರಲಿಲ್ಲ. ಸಾವಕಾಶವಾಗಿ ಸುತ್ತಲ ನಲಿವನ್ನ ಹೆಕ್ಕಿ ಬದುಕುತ್ತ ನಾನು ಅಲ್ಲೆ ಬಿಕ್ಕುತ್ತ ನಿಂತ ಅಳಲನ್ನ ಹೇಗೆ ಮರೆತೆ? ಇಷ್ಟು ದೂರ ಸಾಗಿದ ಜಾರು ದಾರಿಯಲ್ಲಿ ನಾನು ಹೇಗೆ ಮೇಲೇರಬಲ್ಲೆ? ನನ್ನ ಕಿಂಚಿತ್ ಸೇವೆ ಏನು? ಏನು ಮಾಡಿ ಪ್ರಾಯಶ್ಚಿತ್ತ ಮಾಡಬಲ್ಲೆ? ಅಳುಕಾಯಿತು.

Amrutha ಅವರ ವಿನಂತಿ ಹೀಗಿತ್ತು. ದಯವಿಟ್ಟು ನೀವು ಬಾಟಲ್ ನೀರು ಉಪಯೋಗಿಸಬೇಡಿ, ಅದರ ಉಪಯೋಗಕ್ಕೆ ಮನ್ನಣೆ ಕೊಡಬೇಡಿ, ಇದ್ದ ನೀರನ್ನು ದುಂದು ಮಾಡಬೇಡಿ, ಅಗತ್ಯವಿದ್ದಷ್ಟೆ ಬಳಸಿ. ನೆಲ,ಜಲ,ಗಾಳಿ ಎಲ್ಲರದು, ಅದಕ್ಕೆ ಸುಂಕವೇಕೆ? ಅವರು ತಮ್ಮ ಮೌನ ಮುರಿದು ಮಾರ್ಚಿಯಲ್ಲಿ ತಮ್ಮ ಹೋರಾಟವನ್ನ ಇನ್ನೂ ಬಲವಾಗಿ ಮುಂದುವರಿಸಲಿದ್ದಾರೆ. ಅದಕ್ಕೆ ನಮ್ಮೆಲ್ಲರ ಸಹಕಾರ,ಬೆಂಬಲ ಬೇಕು. ಶಿವಶಂಕರ್ ಓದಿ ಮುಗಿಸಿದರು. ಮೌನಿಯ ನಮ್ರ ನೋಟ ಆ ವಿನಂತಿಯನ್ನು ಅನುಮೋದಿಸಿತು.

ಸುತ್ತೆಲ್ಲ ನಡೆದ ಸಂತೆ, ಚಣಕಾಲ ಸ್ಥಬ್ದವಾಯಿತು. ಅವರ ಮೌನ ನನ್ನ ಮನಸ್ಸಿನೊಂದಿಗೆ ನೇರ ಸಂವಾದಕ್ಕಿಳಿದಿತ್ತು. ಮಾತು ಕೊಡಲು ಭಯಪಟ್ಟೆ.
ಮಾತು ಅರ್ಥ ಎಲ್ಲ ಶೂನ್ಯವಾಗಿ, ಮೌನ ಹಬ್ಬಿತು
. ಇಲ್ಲ ನಾನು ಅವರೆಲ್ಲ ಸಲಹೆಯನ್ನ ಈಡೇರಿಸುವ ಎಂದಿನ ರೆಸಲ್ಯೂಷನ್ ತಗೊಳ್ಳಲಿಲ್ಲ. ನನ್ನ ಪ್ರತಿ ನೀರಿನ ಬಳಕೆಯಲ್ಲು ಈ ಮೌನ ಸಂವಾದವನ್ನ ನೆನಪಿಸಿಕೊಳ್ಳುವ, ನೀರಿನ ಬಳಕೆಯನ್ನ ಆದಷ್ಟು ಸಂಕ್ಷಿಪ್ತಗೊಳಿಸುವ, ಸಾಧ್ಯವಾದಷ್ಟೂ ಬಾಟಲಿ ನೀರನ್ನು ಬಳಸದಿರುವ ನಿರ್ಧಾರಕ್ಕೆ ಬಂದೆ. ಎಷ್ಟರ ಮಟ್ಟಿಗೆ ಇದನ್ನ ಸಾಧಿಸುತ್ತೇನೋ ಗೊತ್ತಿಲ್ಲವಾಗಲೀ ಹೋರಾಟದ ಸಾಗರಕ್ಕೆ ನನ್ನದೊಂದು ಕೊಡ ನೀರಾಗಲಿ ಅಂದುಕೊಂಡಿದ್ದೇನೆ.

ಅವರ ತಿಳುವಳಿಕೆಗೆ, ಬ್ರಹ್ಮ ಸ್ವರೂಪಿ ಮೌನಕ್ಕೆ, ಮೌನ ಹೋರಾಟಕ್ಕೆ, ಮಾತಿಲ್ಲದೆಯೇ ಬೆಳಕು ತೋರಿದ ಚೇತನಕ್ಕೆ ನನ್ನ ಮೌನ ನಮನಗಳು. ಈ ಮೌನ ಸಂತನನ್ನ ನಮಗೆ ಪರಿಚಯಿಸಿದ ಸಂತೆಯ ಆರ್ಭಟಕರಿಗೆ ನನ್ನ ಧನ್ಯವಾದಗಳು. ಮೊದಲು ಕೇವಲವಾಗಿ ತೋರಿದ ಗದ್ದಲದ ಸಂತೆಯ ಮೌನ ದರ್ಶನಕ್ಕೆ, Amrutha ಸ್ವರೂಪಕ್ಕೆ ಬೆರಗಾದೆ.

ಈ ನನ್ನ ಬರಹ, ಓದಿದ ನಿಮ್ಮಲ್ಲೊಂದು ಹೊಸ ಚಿಂತನೆ ಹುಟ್ಟಿಸಿದರೆ,ನೀರಿನೆಡೆಗೆ ಕಾಳಜಿ ಹುಟ್ಟಿಸಿದರೆ, ನಮಗೆ ಬದುಕಿತ್ತ ಧರಣಿಯೆಡೆಗೆ ನಮ್ಮ ಜವಾಬ್ದಾರಿಗಳನ್ನು ನೆನಪಿಸಿದರೆ, ನಾನು kruthajne.

ಪ್ರೀತಿಯಿರಲಿ.

ನೀರು amoolya.
ಲಕ್ಷ್ಮೀ ನಾರಾಯಣ ಭಟ್ಟರ ಒಂದು ಕವಿತೆ ಇಲ್ಲಿ ಅತ್ಯಂತ ಪ್ರಸ್ತುತ:
ಮೇಲೆ ನೀಲಿ ಆಗಸ, ಕೆಳಗೆ ತಾಯಿ ಭೂಮಿ;
ದೇವರಿತ್ತ ಗಾಳಿ ನೀರು, ಹಂಗೆಲ್ಲಿದೆ ಸ್ವಾಮಿ.....


(ಅಲ್ಲಲ್ಲಿ ಕನ್ನಡ ಕನ್ೞರ್ಷನ್ ಸರಿಯಾಗಿ ಆಗದ ಕಾರಣ ಕೆಲವು ಇಂಗ್ಲಿಷ್ ಪದಗಳನ್ನ ಹಾಗೇ ಬಳಸಿದ್ದೇನೆ. ಮುಖ್ಯವಾಗಿ Amrutha ಅವರ ಹೆಸರು..
:( )