Tuesday, December 4, 2018

ಹಬ್ಬವೆಂಬ ರೂಪಕ

(2018ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ನನ್ನ ಲೇಖನ.)

ಪ್ರತೀ ದೀವಳಿಗೆಯಲ್ಲೂ ಕತ್ತಲಿನಿಂದ ಬೆಳಕಿನೆಡೆಗೆ ಅಜ್ಞಾನದಿಂದ ತಿಳುವಳಿಕೆಯೆಡೆಗೆ ನಡೆಯುವ ಪ್ರತಿಮೆಯಾಗಿ ಈ ಹಬ್ಬವನ್ನು ಎಲ್ಲರೂ ವಿವರಿಸುತ್ತಿರುತ್ತಾರೆ. ನಗರಕೇಂದ್ರಿತ ಕೆಲಸ,ಬೊಗಸೆ ಮತ್ತು ವಲಸೆಯ ಈ ಕಾಲದಲ್ಲಿ ಬೆಳಕು ಚೆಲ್ಲಾಡುತ್ತಲೆ ಇದೆ. ಪ್ರಪಂಚದೆಲ್ಲೆಡೆಯ ಜ್ಞಾನ ಟೀವಿ ಮೊಬೈಲುಗಳಿಂದ ವಿಂಗಡಿಸಲು ಅಸಾಧ್ಯವಾಗುವಷ್ಟು ಬೇಗ ನಮ್ಮ ಮುಂದೆ ಶೇಖರಣೆಯಾಗುತ್ತಿದೆ. ಯಾವ ಜ್ಞಾನ ಯಾರಿಗೆ ಬೇಕು ಎಂಬುದರ ವಿವೇಕ ಮಾತ್ರ ಈ ಎಲ್ಲ ಝಗಮಗದ ತೀವ್ರ ಕೋರೈಸುವಿಕೆಯನ್ನು ತಡೆಯಲಾಗದೆ, ಕತ್ತಲ ಆಳದಲ್ಲಿ ಮರೆಯಲ್ಲಿ ಕೂತು ಕಣ್ಣು ನೇವರಿಸಿಕೊಳ್ಳುತ್ತಿದೆ.
ದೀಪಾವಳಿಯೆಂದರೆ ಸುಗ್ಗಿ, ಭೂಮಿ ಪೂಜೆ, ನೀರು ಪೂಜೆ, ಆಕಾಶ(ಬೆಳಕು) ಪೂಜೆ, ಆದ ಈ ಹಬ್ಬ ಇವತ್ತು ಬರಿದೆ ಹೊಸಬಟ್ಟೆ, ಹೊಸವಸ್ತು, ಮತ್ತು ಹೊಸಹೊಸ ಸೆಲ್ಪೀಗಳ ಸಂಭ್ರಮವಾಗಿ ಬದಲಾಗುತ್ತಿರುವುದನ್ನು ಕಂಡಾಗ ಮನಸ್ಸು ಮ್ಲಾನವಾಗುತ್ತದೆ. ನಗರದ ಬದುಕಿನಿಂದ ತೀವ್ರ ಪ್ರಭಾವಿತವಾದ ಹಳ್ಳಿಗಳಲ್ಲೂ ಈಗ ಹಬ್ಬ ಹೋಗಿಬಿಟ್ಟಿದೆ. ಪೂಜೆ ಮತ್ತು ಆಚರಣೆ ಮಾತ್ರ ಉಳಿದುಬಿಟ್ಟಿದೆ. ಆದರೂ ಹಳ್ಳಿಗಳಲ್ಲಿ ನಮ್ಮ ವಿದ್ಯುದ್ಮಂಡಳಿಯ ಕೃಪೆಯಿಂದಾಗಿ ಕತ್ತಲಿನ ಸಂಜೆಗಳು ಸಿಗುತ್ತವೆ ಹಚ್ಚಿದ ದೀಪದ ಪುಟ್ಟ ಬೆಳಕಿನಲ್ಲಿ ಒಂದು ಮಾತಿಗೆ ಮೀರಿದ ಸಾಂತ್ವನ ಮಿನುಗುತ್ತದೆ. ಇದು ಬೇಕಿಲ್ಲದೆ, ಗೊತ್ತಿಲ್ಲದೆ ಸಿಗುವ ಸಾಂತ್ವನವಾದ್ದರಿಂದ ಎಲ್ಲರ ಬಯ್ಗುಳಗಳಲ್ಲೆ ಈ ಬೆಳಕು ಮತ್ತು ಕತ್ತಲೆ ತೃಪ್ತಿ ಪಡಬೇಕಿದೆ.
ಒಳ್ಳೆಯ ಮಳೆ ಬಿದ್ದು, ಭೂಮಿಹೊಲಗಳೆಲ್ಲ ಫಲವತ್ತಾಗಿ ಬೀಗುವಾಗ ಮಳೆ ಕಳೆದು ಚಳಿಗಾಳಿಯ ಹೊಡೆತ ಶುರುವಾಗುವ ಮೊದಮೊದಲ ವಾರಗಳಲ್ಲಿ ಬರುವ ಈ ಹಬ್ಬದ ಸುತ್ತಲೂ ಸಮುದಾಯದ ಇಡೀ ವರ್ಷದ ಬದುಕು ಮತ್ತು ಸಂಭ್ರಮ ಸುತ್ತಿಕೊಂಡಿರುತ್ತಿದ್ದ ಕಾಲವೊಂದಿತ್ತು. ಪ್ರಕೃತಿಯ ಬದಲಾವಣೆಗೆ ತನ್ನನ್ನು ಹೊಂದಿಸಿಕೊಂಡು ಅದರಿಂದಲೆ ತನ್ನ ಒಳಿತನ್ನು ಹೂಡಿಕೆ ಮಾಡಿ ಅದರ ಬಡ್ಡಿ ದೀಪದ ಬೆಳಕಲ್ಲಿ ಮಿನುಗುವ ಈ ಹಬ್ಬದ ಗ್ರಾಮ್ಯ ಪರಿಭಾಷೆ ಇವತ್ತು ಗ್ಲೋಬಲ್ ವಿಲೇಜಿನ ತನಗೆ ಬೇಕಾದಂತೆ ಮಾರ್ಪಡಿಸಿಕೊಂಡು ತನ್ನ ಸಮಯಕ್ಕೆ ತಕ್ಕಂತೆ ಹೊಂದಿಸಿಕೊಂಡು ಸಾಲದ ಬಡ್ಡಿ ಕಟ್ಟುತ್ತಾ ಮತಾಪು ರಾಕೆಟ್ಟುಗಳನ್ನು ಹಾರಿಸುತ್ತಾ ಝಗಮಗಿಸುವ ದೀಪದ ಸಾಲುಗಳನ್ನು ಕಟ್ಟುವ ನಗರದ ಪ್ರಗತಿಯ ಪರಿಭಾಷೆಯಾಗಿ ಬದಲಾಗಿದೆ. ಭೂಚಲನೆಯನ್ನು, ಗ್ರಹತಾರೆಗಳ ಚಲನೆಯನ್ನು ತನ್ನ ಮನಸ್ಸಿಗೆ ಬಂದಂತೆ ಬದಲಾಯಿಸಬಹುದಾದ ವಿಪರೀತ ಪರಿಸ್ಥಿತಿಯಿಲ್ಲದೆ ಇರುವುದರಿಂದಾಗಿ ಮಳೆ,ಗಾಳಿ,ಹೊಳೆ, ಬೆಳಕು ಇವು ತನ್ನ ಪಾಡಿಗೆ ಹೇಗೋ ನಡೆದುಕೊಂಡಿದೆ. ಇದೆಲ್ಲ ಯಾರೂ ತಡೆಯಲಾಗದ, ತಡೆಯಲೂಬಾರದ ಬೆಳವಣಿಗೆಯೆ. ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿರುವ ಜಗತ್ತು ಒಂದು ಕ್ಷಣವನ್ನೂ ಪೋಲು ಮಾಡದೆ ಬದಲಾಗುತ್ತಲೆ ಇರುತ್ತದೆ. ಬದಲಾವಣೆಗಳನ್ನ ತಡೆಯಲಾಗುವುದಿಲ್ಲ ಎನ್ನುವುದು ಎಷ್ಟು ನಿಜವೋ ಆ ಬದಲಾವಣೆಗಳ ಜತೆಗೆ ನಾವೂ ಹೋಗದೆ ಇದ್ದರೆ ನಿಂತನೀರಿನ ಹಾಗೆ ಕೊಳೆತುಹೋಗುತ್ತೇವೆ ಎನ್ನುವುದೂ ಅಷ್ಟೆ ನಿಜ. ಬದಲಾವಣೆಗಳ ಜೊತೆಗೆ ಸಾಗುವಾಗ ಹಳೆಯ ವಿವೇಕವನು ಮರೆಯದೆ, ನಮ್ಮ ಅಂತರಂಗದಲಿ ಕತ್ತಲಲಿ ಹಣತೆಯೊಂದನು ಹಚ್ಚಿಕೊಳ್ಳುವುದನ್ನು ನಾವು ಕಲಿಯಬೇಕಿದೆ. ಹಂಬಲವಿದ್ದರೆ ಮಾತ್ರ ಸಾಧ್ಯವೇನೋ. ಹಂಬಲವಿದ್ದರೆ ಪ್ರಕೃತಿಯೂ ಜೊತೆಗೂಡುತ್ತದೆಯೇನೋ.
 
ಮೊದಲಿನಿಂದ ಹೇಳುವುದಾದರೆ ಆದಿಕವಿಯ ರೂಪಕವೊಂದನ್ನ ನೋಡುವ. ತನ್ನ ತಂದೆಯು ತಾಯಿ ಕೈಕೇಯಿಗೆ ಕೊಟ್ಟ ಮಾತಿನ ಸತ್ಯವನ್ನು ಉಳಿಸಲು ರಾಮ ಕಾಡಿಗೆ ಹೋಗುತ್ತಾನೆ. ಈ ಎಲ್ಲ ಘಟನೆಗಳೂ ಭರತನಿಗೆ ರಾಮ ಕಾಡಿಗೆ ಹೋದ ಮೇಲೆ, ತಂದೆ ದಶರಥ ತೀರಿಕೊಂಡ ಮೇಲೆ ತಿಳಿದುಬರುತ್ತದೆ. ಅಜ್ಜನಮನೆಯಿಂದ ಬಂದ ಭರತನಿಗೆ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಈ ರಾಜ್ಯ, ರಾಜ್ಯಭಾರ, ಅಣ್ಣ, ಅಪ್ಪ, ಅಮ್ಮ ಎಲ್ಲರೂ ಎಲ್ಲವೂ ಬದಲಾಗಿಹೋಗಿದೆ. ಬೇಡದೆ ಆದ ಬದಲಾವಣೆಯನ್ನು ಅರಗಿಸಿಕೊಳ್ಳಲಾಗದ ಭರತನೂ ಕಾಡಿಗೆ ಹೊರಡುತ್ತಾನೆ. ಅಣ್ಣನ ಮನವೊಲಿಸಿ ವಾಪಸ್ ಕರೆತರುವ ಆಶೆಯಲ್ಲಿ. ಚಿತ್ರಕೂಟದಲ್ಲಿ ಪರಿಪರಿಯಾಗಿ ಕೇಳಿಕೊಳ್ಳುವ ಅವನಿಗೆ ತನ್ನ ಪ್ರಯತ್ನದ ನಿರರ್ಥಕತೆ ಗೊತ್ತಾಗುತ್ತದೆ.
ತಂದೆಯ ಮಾತಿನ ಸತ್ಯವನ್ನು ಮಗನಾಗಿ ಉಳಿಸಬೇಕಾದ ತನ್ನ ಜವಾಬ್ದಾರಿ, ಮತ್ತು ತಂದೆಯಿಲ್ಲದಿರುವಾಗ ರಾಜನಿಲ್ಲದೆ ಅರಾಜಕವಾದ ರಾಜ್ಯದ ಹೊಣೆಯನ್ನು ರಾಜನಾಗಿ ನಿರ್ವಹಿಸಬೇಕಾದ ಭರತನ ರಾಜಧರ್ಮ ಇವನ್ನು ರಾಮನು ಭರತನಿಗೆ ತಿಳಿಸುತ್ತಾನೆ. ಭರತನೂ ವಿವೇಕವಂತ, ತಿಳಿವಳಿಕೆಯುಳ್ಳವ ಮತ್ತು ಸಮರ್ಥ ರಾಜಕುವರನೇ. ಎಷ್ಟು ಹೇಳಿದರೂ ಅವನ ಮನಸ್ಸು ರಾಮನಿಲ್ಲದ ರಾಜ್ಯವನ್ನು ಕಲ್ಪಿಸಿಕೊಳ್ಳಲೂ ಒಪ್ಪುವುದಿಲ್ಲ. ರಾಮನಿಗೆ ಅವನ ದಾರಿ ಸ್ಪಷ್ಟವಾಗಿದೆ. ತಂದೆಯ ಮಾತನ್ನು ಪಾಲಿಸುವುದು ಮತ್ತು ವನವಾಸ.
ಭರತನಿಗೆ ಸಂದಿಗ್ಧ. ಮನಸಿನ ಮಾತಿಗೆ ಕಿವಿಗೊಡುವ ಅವನಿಗೆ ರಾಜಧರ್ಮವನ್ನು ಬಿಡಲೂ ಆರ. ತಾನು ರಾಜನಾಗಲೂ ಆರ. ಅವನು ರಾಮನ ಜೊತೆಗೆ ಕಾಡಿಗೆ ಹೋಗಲಾರ. ಬೇಡವೆಂದು ಬಿಟ್ಟು ಬಂದ ಅಯೋಧ್ಯೆಯ ರಾಜತ್ವಕ್ಕೆ ಮರಳಲೂ ಆರ. ಕವಿ ವಾಲ್ಮೀಕಿ ಇಲ್ಲಿ ನಂದಿಗ್ರಾಮವನ್ನು ಸೃಷ್ಟಿಸುತ್ತಾರೆ. ತಾನು ರಾಜನಾಗದೆ, ರಾಜಧರ್ಮವನ್ನೂ ಬಿಡದೆ, ತನ್ನ ಮನಸ್ಸಿಗೆ ವಿರುದ್ಧವಾಗದ ಹಾಗೆ ರಾಮನನ್ನೆ ಮುಂದಿಟ್ಟು ಬಯಸದೆ ಬಂದ ರಾಜತ್ವವನ್ನು ಬದಿಗಿಟ್ಟು ಗ್ರಾಮರಾಜ್ಯವನ್ನು ಭರತ ನಿರ್ವಹಿಸುವ ಹಾಗೆ ಮಾಡುತ್ತಾರೆ.
ನಾವು ನಮ್ಮ ಗ್ರಾಮಕ್ಕೆ ಮೂಲಕ್ಕೆ ಹೋಗಲಾರೆವು. ನಗರದ ಝಗಮಗ ಪ್ರಗತಿಯಲ್ಲಿ ಬಾಳಲೂ ಬಯಸೆವು. ಆದರೆ ಮಧ್ಯದ ಒಂದು ನಂದಿಗ್ರಾಮವನ್ನು ಇವೆರಡರ ನಡುವಿನ ಸೇತುವೆಯನ್ನು ಕಟ್ಟಲಾರೆವೇ? ಗೊಲ್ಲ ಕೃಷ್ಣ ಗೋಕುಲದಿಂದ ಮಥುರೆಯ ರಾಜಬೀದಿಗೆ ಬಂದಮೇಲೆ ಅವನು ಗೊಲ್ಲನಾಗಿ ಉಳಿಯಲೇ ಇಲ್ಲ. ಕೊಳಲ ತೊರೆದ, ಚಕ್ರ ಧರಿಸಿದ ಎಂದು ಓದಿದ್ದೇವೆ. ನಿಜಕ್ಕೂ ಹೌದೆ? ಅವನು ಮಥುರೆಯಲ್ಲಿ ಗೋಕುಲದ ಛಾಯೆ ತರಲಿಲ್ಲವೆ? ಅಣ್ಣತಮ್ಮಂದಿರ ಕಚ್ಚಾಟದ ರಾಜ್ಯಗಳಲ್ಲಿಯೂ ಅವನು ಒಳಿತಿನ ಬೀಜ ಬಿತ್ತಲಿಲ್ಲವೆ?
ಗರ್ವದಿಂದ ಮೆರೆವ ರಾಜರ ತೊಡೆ ಮುರಿವ, ಕತ್ತು ಸೀಳುವ ಕೃಷ್ಣ ಅಲ್ಲಲ್ಲೆ ಭಾವಸೇತುವೆಯ ಕಟ್ಟುತ್ತ ಮಡದಿಯರ ಮನವನ್ನು ಕದಿಯಲಿಲ್ಲವೆ? ಭಕ್ತಿಯಿಂದ ಕರೆದವರ ಒಲುಮೆಗೆ ಕಟ್ಟು ಬೀಳಲಿಲ್ಲವೆ? ಲೋಕಪ್ರಸಿದ್ಧ ದ್ಯೂತವನ್ನು ದೇವರೇ ಆದ ಶ್ರೀಕೃಷ್ಣ ನಿಲ್ಲಿಸಿ, ಚಕ್ರ ತೋರಿಸಿ ಸೀರೆಸೆಳೆವವರನ್ನು, ನಕ್ಕವರನ್ನು ಹೆದರಿಸಿ ದ್ರೌಪದಿಯನ್ನು ಕಾಪಾಡಬಹುದಿತ್ತು ಆದರ ಅಕ್ಷಯವಸನವನ್ನೇಕೆ ಕೊಟ್ಟ? ಈ ಎಲ್ಲ ಆಟಾಟೋಪಗಳ ಮಧ್ಯೆದಲ್ಲಿ ಒಂದು ವೃಂದಾವನವಿದೆ ಎಂದು ಸೂಚಿಸುತ್ತಿಲ್ಲವೆ? ಅದರ ದಾರಿ ಬೇಕಾದವರು ಮಾತ್ರ ಹುಡುಕಿಕೊಳ್ಳುತ್ತಾರೆ. ದ್ರೌಪದಿಯ ಆರ್ತತೆ, ಕುಂತಿಯ ದೈನ್ಯ, ತ್ರಿವಕ್ರೆಯ ಶರಣ್ಯ, ವಿದುರನ ನಮ್ರತೆ, ಅಥವಾ ಭೀಷಣವಾಗಿ ಕಾದುತ್ತಲೆ ಆ ಮೂರುತಿಯನ್ನೆ ತನ್ನ ಕಣ್ಣ ನೋಟವಾಗಿಸಿಕೊಂಡ ಕರ್ಣ ಮತ್ತು ಭೀಷ್ಮ, ಮತ್ತು ಅವನಿಲ್ಲದೆಯೂ ತನ್ನ ಭಾವಲೋಕದಿ ತಾನೆ ತೂರಿಕೊಳುವ ರಾಧೆ.. ನಂದಿಗ್ರಾಮದಲಿ ಗ್ರಾಮರಾಜ್ಯ ನಡೆಸಿದ ಭರತನ ಹಾಗೆ.
ಇದೆಲ್ಲ ರೂಪಕಗಳ ಮಾತಾಯಿತು. ಎಲ್ಲಿ ಒಂಚೂರು ಹಿಮ್ಮೊಗ ನೆನಪು ಮಾಡಿಕೊಳ್ಳಿ. ಹಳ್ಳಿಗಳಾದರೆ ಹಬ್ಬಕ್ಕೆ ವಾರವಿರುವಾಗಲೆ ಮನೆಯನ್ನು ಕೊಟ್ಟಿಗೆಯನ್ನು ಚೊಕ್ಕಟಗೊಳಿಸಿ, ಪಾತ್ರೆಪಡಗಗಳನ್ನು ಅಣಿಗೊಳಿಸಿ, ಹಬ್ಬದ ಬಟ್ಟೆಗಳನ್ನ ಬಿಸಿಲಿಗೆ ಹಾಕಿ, ಅಂಗಳ ಬಳಿವ ಕೆಲಸ ಆರಂಭವಾಗುತ್ತಿತ್ತು. ಎಲ್ಲೆಲ್ಲೋ ಹೋದ ಹಕ್ಕಿಗಳೆಲ್ಲ ಗೂಡಿಗೆ ಮರಳಿದ ಹಾಗೆ ಕೆಲಸ, ಓದು, ಮದುವೆ ಇತ್ಯಾದಿಗಾಗಿ ದೂರದೂರದಲ್ಲಿರುವ ಮನೆ ಮಕ್ಕಳೆಲ್ಲ ಎರಡು ದಿನ ಮುಂಚೆಯೆ ಮನೆಗೆ ಬಂದು ನೀರುತುಂಬುವ ಹಬ್ಬದ ಹಂಡೆಗೆ ಕಹಿಂಡಲ ಕಾಯಿ ಬಳ್ಳಿ ಕಟ್ಟುತ್ತಿದ್ದರು. ನೀರು ತುಂಬುತ್ತಿದ್ದರು. ಕಟ್ಟಿಗೆ ಒಟ್ಟಿ ಉರಿ ಕೊಡುತ್ತಿದ್ದರು. ಹಬ್ಬದ ಸಿಹಿ ಹೋಳಿಗೆಗಳು, ಚಕ್ಕುಲಿಗಳು ಮನೆಯ ಹಿರಿಹೆಂಗಸರ ಉಸ್ತುವಾರಿಯಲ್ಲಿ ಹದದಲ್ಲಿ ಸಿದ್ಧವಾಗುತ್ತಿದ್ದವು. ಮನೆಯ ಚಂದ, ಬಣ್ಣ, ರಂಗೋಲಿಗಳು, ಬಾವಿಗೆ ಬಳಿಯುವ ಶೇಡಿ ಕೆಲಸ ಮಧ್ಯದವರ ಪಾಲಿಗೆ. ಮಕ್ಕಳು ಪರಿಚಾರಿಕೆಗೆ ನಿಂತು ಹೂ, ಹಣ್ಣುಗಳ ತರುವ ಕೆಲಸ. ಇಡೀ ಮನೆಯು ಜೀವ ಬಂದ ಹಾಗೆ ಮಿಡಿಯುತ್ತ ಎಲ್ಲರ ಮಾತು, ಕತೆ, ನಗು, ಗಲಾಟೆಗಳಲ್ಲಿ ಕಂಪಿಸುತ್ತಿತ್ತು. ಕೊಟ್ಟಿಗೆಯ ಜೀವಗಳ ಅಂಬಾಗಳಲ್ಲಿ ಬದುಕು ಮಾರ್ನುಡಿಯುತ್ತಿತ್ತು. ಹೊರಗೆ ಅಂಗಳದ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ, ಗದ್ದೆ ತೋಟಗಳಲ್ಲಿ ತೊನೆವ ತೆನೆ, ಸಿಂಗಾರಗಳು. ಮಳೆ ಕಡಿಮೆಯಾಗಿ ತೆಳ್ಳಗೆ ಹರಿವ ಹಳ್ಳದಲಿ ಕಾಲಾಡಿಸುವ ಮಕ್ಕಳು. ಪೇಟೆ ಊರಿನ ಹಬ್ಬವೇನೂ ಕಡಿಮೆಯಿರಲಿಲ್ಲ. ಮನೆ ಅಂಗಳಗಳು ಮನೆಯ ಎಲ್ಲರ ಸಹಕಾರದಲಿ ಚೊಕ್ಕವಾಗಿ, ಹಣತೆಯಿಡುವ ಜಾಗಗಳು ನಿಗದಿಯಾಗಿ, ಹೊಸಬಟ್ಟೆಗಳು ಇಸ್ತ್ರಿಯಾಗಿ, ವರ್ತನೆಯ ಹೂಗಳಿಗೆ ಬೇಡಿಕೆ ಹೆಚ್ಚಾಗಿ, ಹಬ್ಬದ ಸಿಹಿಗಳ ರೆಸಿಪಿಗಳು ರಿವೈಸಾಗಿ ಹಿಟ್ಟಿನ ಗಿರಣಿಗಳಲ್ಲಿ ಉದೂದ್ದ ಕ್ಯೂ ಇರುತ್ತಿತ್ತು. ಚೀಟಿ ಕಟ್ಟಿದ ಪಟಾಕಿಗಳು ಅವರವರ ಸಂಬಳಕ್ಕೆ ತಕ್ಕಂತೆ ವಾರಮೊದಲೆ ಪ್ಯಾಕುಗಳಲ್ಲಿ ಬಂದು ಬಿಸಿಲಿಗೆ ಒಣಗಿಸಿಕೊಂಡು ಮಕ್ಕಳ ಹಂಚಿಕೆಯಲ್ಲಿ ಖಾಲಿಯಾಗುತ್ತಿದ್ದವು. ಸ್ನಾನ, ಶುಚಿ, ಹಿರಿಯರಿಗೆ ದೇವರಿಗೆ, ತಮಗೆ ಸಿಕ್ಕಿದ್ದಕ್ಕೆ ನಮಿಸಿ ನಂತರ ಹಬ್ಬದೂಟ ಮುಗಿಸಿ ಆಟ, ಪಟಾಕಿ, ಸಂಭ್ರಮ.
ಸರಿ ಈವತ್ತಿಗೆ ಬನ್ನಿ. ಈಗ ಹಳ್ಳಿಯ ಮನೆಮನೆಗಳಲ್ಲಿ ವಯಸ್ಸಾದ ಹಿರಿಯರು ಬಾಣಗಳೆಲ್ಲ ಖಾಲಿಯಾದ ಬತ್ತಳಿಕೆಗಳ ಹಾಗೆ ಕಾಯುತ್ತ ಕೂತಿರುವರು. ಕೊಟ್ಟಿಗೆ ನಡೆಸಲು ಸೊಂಟ ಸಹಕಾರ ಕೊಡುವುದಿಲ್ಲವಾಗಿ ಈಗ ಕೊಟ್ಟಿಗೆಗಳು ಎತ್ತಂಗಡಿಯಾಗಿವೆ. ಬೆಳಿಗ್ಗೆ ಬರುವ ಬಸ್ಸಿನಲ್ಲಿ ಅಥವಾ ವ್ಯಾನಿನಲ್ಲಿ ಪ್ಯಾಕೆಟ್ ಹಾಲು ಬರುತ್ತದೆ. ಮಕ್ಕಳು ಒಂದು ದಿನ ರಜೆ ಸಿಕ್ಕರೆ ಬಂದರೂ ಬರಬಹುದು. ಮೂರ್ನಾಕು ದಿನ ರಜೆ ಇದ್ದರೆ ಪ್ಯಾಕೇಜು ಟೂರ್ ಹೋದರೂ ಹೋಗಬಹುದು. ವರ್ಷಕಟ್ಟಳೆಯ ಹಬ್ಬವೆಂದು ಬಾವಿಗೆ ನಾಲ್ಕು ಗೀಟು ರಂಗೋಲಿ ಎಳೆಯಲಾಗಿದೆ. ಪಂಪಿನಿಂದ ಕರೆಂಟು ಇರುವಾಗಲೇ ನೀರೆತ್ತಿ ಮೇಲಿನ ಟ್ಯಾಂಕಿಗೆ ತುಂಬಲಾಗಿದೆ. ಪೂಜೆಯ ಹೊತ್ತಿಗೆ ಮಾತ್ರ ಒಂದು ಬಿಂದಿಗೆ ನೀರು ಬಾವಿಯಿಂದ ಸೇದಲಾಗುವುದು. ಟೈಲುಗಳೆಲ್ಲ ಕೊಳೆಯಾಗುವುದೆಂದು ಎಣ್ಣೆಯ ದೀಪವು ವಾಸ್ತುಬಾಗಿಲಿನ ಅಕ್ಕ ಪಕ್ಕಕ್ಕೆ ಮಾತ್ರ. ಉಳಿದೆಲ್ಲ ಕಡೆ ಸೀರಿಯಲ್ ಲೈಟುಗಳನ್ನ ನೇತುಹಾಕಲಾಗಿದೆ. ಏನೋ ಮ್ಯಾಜಿಕ್ ಆಗಿ ಮೊಮ್ಮಕ್ಕಳೇನಾದರೂ ಬಂದರೆ ಇರಲಿ ಅಂತ ಮೊಂಬತ್ತಿಗಳ ಪ್ಯಾಕೆಟ್ಟನ್ನು ಅಜ್ಜಿ ತೆಗೆದಿಟ್ಟಿದ್ದಾಳೆ. ಜನರಿಲ್ಲದ ಹಬ್ಬಕ್ಕೆ ಶಾಸ್ತ್ರಕ್ಕೊಂದು ಪಾಯಸ, ಚಿತ್ರಾನ್ನ, ಕೋಸಂಬರಿ, ಅಷ್ಟು ಖಾಯಿಷು ಬಂದರ ಪೇಟೆಯ ಬೇಕರಿಯಲ್ಲಿ ಸಿಗುವ ಹೋಳಿಗೆಯ ಪ್ಯಾಕೆಟು ತರಲೂಬಹುದು.
ಪೇಟೆಗಳಲ್ಲಿ, ನಗರಗಳಲ್ಲಿ ಕೇಳಲೇಬೇಡಿ. ಇದು ಖರೀದಿಯ ಹಬ್ಬ, ದಿವಾಳಿಯ ಹಬ್ಬ. ಬೇಕು ಬೇಕೆಂದಿದ್ದನ್ನೆಲ್ಲ ಆನ್ ಲೈನಿನಲ್ಲಿ ಇ.ಎಂ.ಐಗಳಲ್ಲಿ ಕೊಂಡರೂ ಪಟಾಕಿಗಳು ಮಾತ್ರ ಅಂಗಡಿಯಲ್ಲಿಯೇ ಖರೀದಿಯಾಗುತ್ತಿವೆ. ಹಬ್ಬಕ್ಕಿಂತ ಮೊದಲೆ ಹಾರಿಸಿದ ಪಟಾಕಿಗಳ ಕಸದ ರಾಶಿಯಲ್ಲಿ ಇನ್ನೂ ಸಿಡಿದಿರಲಾರದ, ಹೊತ್ತಿರಲಾರದ ಪಟಾಕಿಗಳ ಆಯುವ ಪುಟ್ಟ ಕೈಗಳು ಆರಿಸಿ ಆರಿಸಿ ಅವನ್ನ ತಮ್ಮ ಹಬ್ಬದ ಸಂಜೆಗೆ ಎತ್ತಿಡುತ್ತಿವೆ. ಹೀಗೆ ಎಲ್ಲ ವೈರುಧ್ಯಗಳ ಬೆಳಕಿನ ಕೋಲುಗಳು ಒಂದಕ್ಕೊಂದು ಢಿಕ್ಕಿಯಾದರೂ ಇಲ್ಲಿ ಹೊರಗೆ ಕತ್ತಲೇ ಇಲ್ಲ. ದೀಪ ಹಚ್ಚಬೇಕು ಹೇಗೆ ಮತ್ತು ಯಾಕೆ ಎಂದು ಯೋಚಿಸಲು ಸಮಯವೂ ಇಲ್ಲದೆ ಎಲ್ಲ ಮನೆಗಳ ಮುಂದೆ ತೂಗುಬಿದ್ದಿರುವ ಎಲೆಕ್ಟ್ರಿಕ್ ಆಕಾಶಬುಟ್ಟಿ ಕಣ್ಣು ಮಿಟುಕಿಸುತ್ತಿದೆ. ಸ್ನಾನ ಸಂಜೆಗೆ ಮಾಡಿದರೂ ನಡೆಯುತ್ತದೆ. ಗ್ರಾಮೀಣ ಥೀಮಿನ ಹೋಟೆಲುಗಳಿಂದ ಆನ್ಲೈನು ಊಟ ಆರ್ಡರಾಗುತ್ತದೆ. ಟೀವಿ ಕಾರ್ಯರ್ಕ್ರಮಗಳೂ, ಸಿನಿಮಾಗಳು, ಮ್ಯಾಚಿಂಗಾಗಿರುವ ದಿರಿಸಿನಲ್ಲಿ ತೆಗೆದ ಫೋಟೋವನ್ನು ಅರ್ಜಂಟಾಗಿ ಎಫ್ಬಿ,ಇನ್ ಸ್ಟಾ ಗ್ರಾಮು, ವಾಟ್ಸಪ್ಪಿಗೆ ಕಳಿಸಬೇಕಿದೆ. ಆಮೇಲೆ ಉಳಿದಿದ್ದು. ಸಂಭ್ರಮಿಸುತ್ತೇವೆಯೋ ಬಿಡುತ್ತೇವೆಯೋ ಆಚರಿಸುವುದು ಮುಖ್ಯ. ಮತ್ತು ಆ ಆಚರಣೆಯನ್ನು ತೋರಿಸುವುದು ಇನ್ನೂ ಮುಖ್ಯ ಎಂಬ ದೊಡ್ಡ ಬಿಸಿಗಾಳಿಯ ಬಲೂನಿನಲ್ಲಿ ನಾವು ಮೇಲೇರುತ್ತಿದ್ದೇವೆ. ಗಾಳಿ ಕಡಿಮೆಯಾಗುವುದೋ ಅಥವಾ ಅಗತ್ಯಕ್ಕಿಂತ ಹೆಚ್ಚು ಬಿಸಿಯೇರುವುದೋ ಅದು ನಾವು ನಡೆಸಿಕೊಂಡ ಹಾಗೆ. ಒಟ್ಟಿನಲ್ಲಿ ಕೆಳಗೆ ಬೀಳುವುದು ಪುಡಿಯಾಗುವುದು ಮಾತ್ರ ಗ್ಯಾರಂಟಿ. ಥೇಟ್ ಬದುಕಿನ ಹಾಗೆ.
 
ಕೊನೆಗೂ ಮತ್ತು ನಿಜಕ್ಕೂ ಇಷ್ಟೆಯೆ ಅಂತ ಯೋಚಿಸುವಾಗ ಅನಿಸುತ್ತದೆ. ಎಲ್ಲವನ್ನೂ ಅನುಕೂಲಗಳನ್ನಾಗಿ ಪರಿವರ್ತಿಸಿಕೊಳ್ಳುತ್ತ ಇಲ್ಲದಿರುವಾಗ ಇರಸರಿಸಿಕೊಳ್ಳುವ, ಬೇರೆಯವರ ಕಷ್ಟದಲ್ಲಿ ಭಾಗಿಯಾಗುವ, ಸ್ಪಂದಿಸುವ ಮೂಲಮನುಷ್ಯ ಗುಣವನ್ನೆ ಅದುಮಿಟ್ಟು ಮೇಲಕ್ಕೆ ಚಿಮ್ಮುತ್ತಾ ಇದ್ದೇವೆ ಅಂತ. ಒಂದು ಕ್ಷಣ ನಿಂತು ಯೋಚಿಸಿದರೆ ಸುಲಭವಾಗಿ ಸೇತುವೆ ಕಟ್ಟಬಹುದಾದ, ಎಲ್ಲಸೇರಿ ಬದುಕಬಹುದಾದ ಭೂಮಿಯ ದಾರಿ ನಮ್ಮ ಮುಂದೆಯೇ ಇದೆ. ನಾವು ಸ್ವಕೇಂದ್ರಿತ ಸ್ವರ್ಗದಲ್ಲಿ ಒಬ್ಬೊಬ್ಬರೇ ನಿಂತು ಇನ್ನೊಬ್ಬರ ಸ್ವರ್ಗಕ್ಕೆ ನೆಟ್ವರ್ಕ್ ಸಿಗಲೀ ಎಂದು ಕಾಯುತ್ತಿದ್ದೇವೆ.
 
ಹಿಂದೆಲ್ಲ ಜನ ಬಿಡುವಾಗಿದ್ದರೆ? ಈಗಿನ ಪುರುಸೊತ್ತಿಲ್ಲದ ಬದುಕು ಆಗಿರಲಿಲ್ಲವೆ ಅಂತ ಯೋಚಿಸದರೆ ಹೊಳೆಯುತ್ತದೆ. ಹಿಂದೆಯೂ ಅವರಿಗೆಲ್ಲ ಕೈತುಂಬ ಕೆಲಸಗಳಿದ್ದವು. ಪುರುಸೊತ್ತಿರಲಿಲ್ಲ. ಆದರೆ ಈ ಕೈತುಂಬುವ ಕೆಲಸಗಳಿಂದ ಆಗೀಗ ಪುರುಸೊತ್ತು ಮಾಡಿಕೊಳ್ಳದೆ ಹೋದರೆ ಬದುಕಿನ ರುಚಿಯನ್ನು ಸವಿಯುತ್ತಿರುವ ಅರಿವೇ ಆಗದೆ ಹೋಗುತ್ತದೆ ಎಂಬ ತಿಳುವಳಿಕೆ ಅವರಿಗಿತ್ತು. ಅದಕ್ಕೆ ಹಬ್ಬಗಳು ಸರಿಯಾದ ಉಪಾಯವಾಗಿದ್ದವು. ವ್ರತ,ನೇಮದ ಹೆಸರಲ್ಲಿ ದಿನದಿನದ ಯಾಂತ್ರಿಕ ಕೆಲಸಗಳಿಂದ ದೂರವಾಗಿ ಮನೆಯನ್ನ, ಮನಸ್ಸನ್ನ, ಕುಟುಂಬವನ್ನ, ಜತೆಗಿರುವುದನ್ನ ಸಂಭ್ರಮಿಸುವ ದಾರಿ ಹಬ್ಬಗಳಾಗಿದ್ದವು. ಹೊರಬದುಕಿನ ಯಾಂತ್ರಿಕತೆಯ ಗಾಣದ ಬಯಲಿನ ಗಡಿಬಿಡಿ ಮತ್ತು ಹಗಲಾಟಾಗಳ ನಡುವಿನಿಂದ ಸುಮ್ಮನಿರುವ, ಕತ್ತಲ ಒಳಮನೆಗೆ ತಿರುಗಿ ಅಲ್ಲೊಂದು ಯೋಚನೆಯ, ತಿಳಿವಿನ ಹಣತೆ ಹಚ್ಚುವ ಅವಕಾಶಕ್ಕೆ ಸೇತುವೆಯಾಗುವ ಹಾಗೆ ಹಬ್ಬಗಳೆಂಬ ನಂದಿಗ್ರಾಮವೊಂದು ಕಾಯುತ್ತಿತ್ತು. ಈಗಲೂ ಇರಬಹುದು. ಹೋಗೋಣವೇ? ಅಶ್ವಯುಜ ಮಾಸದ ಕೊನೆಯ ಪಕ್ಷದ ಅಮಾವಾಸ್ಯೆ ಭೂಮಿಗೆ ಅತಿ ಕತ್ತಲದಿನವಂತೆ. ತನ್ನ ಪರಿಭ್ರಮಣದಲ್ಲಿ ಸೂರ್ಯನಿಗೆ ಅತಿ ಹೆಚ್ಚು ದೂರದಲಿರುವ ದಿನವನ್ನೆ ನಾವು ದೀಪ ಬೆಳಗಲು ಆರಿಸಿಕೊಂಡ ಈ ಹಬ್ಬದ ರೂಪಕಕ್ಕೆ ನಾನು ಮನಸೋತೆ. ಬೆಳಕು ಬೆಳಗಲು ಕತ್ತಲಿನ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿ ಇದೆಯಲ್ಲವೆ?
ಕತ್ತಲಿನ ತಾಯಿ ಮಡಲಿನಲಿ ಸುಮ್ಮನೆ ಕೂತು ತಂದೆಗಣ್ಣ ದೀಪವ ಹಚ್ಚೋಣವೇ. ಮಕ್ಕಳ ನಕ್ಷತ್ರ ಮಿನುಗುವುದು ಕಾಣಬಹುದಾದ ಕತ್ತಲೆಯು ಬೇಕು. ಗಾಳಿ ಬೀಸುವ ಅಂಗಳದಲಿ ಹಣತೆಯೊಂದನ್ನ ಹಚ್ಚಿ ಕೈಯ ಮರೆಯಿಡಬೇಕು ಎನಿಸುತ್ತಿರುವಾಗ ಗೋಪಾಲಕೃಷ್ಣ ಅಡಿಗರ ಈ ಪದ್ಯದ ಪ್ರಸ್ತುತತೆ ಎದ್ದು ಕಾಣುತ್ತಿದೆ. ಓದಿದ ನಿಮಗೆ ಕತ್ತಲ ಹಂಬಲು ಬಂದರೆ ಅಲ್ಲಿ ಕಿರುಹಣತೆಯು ಬೆಳಗುವ ಕ್ಷಣ ದೂರವಿಲ್ಲ ಎಂದು ನನ್ನ ನಂಬಿಕೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
 
ಮಾಡಬೇಕಾದ್ದೆಷ್ಟೋ ಇದೆ; ಮೂಲ ಕತ್ತಲಿನಲ್ಲಿ
ಮುಳುಗಿ ಹೋಗುತ್ತಿರುವ ಪರಂಪರಾಗತ ತಿಳಿವ
ನೆತ್ತುವುದು, ಎತ್ತಿ ಪುರಾತನ ಮಗುವ
ಇತ್ತಕಡೆ ಕರೆತಂದು ಅಂತರಂಗದಲಿಟ್ಟು, ಕಾಪಿಟ್ಟು
ಹೊಸಗಾಳಿಯಲ್ಲುಸುರು ಬಿಟ್ಟ ನಡೆಯುವ ಹಾಗೆ
ಆಧುನಿಕಗೊಳಿಸುವುದು, ಆರಾಧಿಸುವುದು, ದೀಪ ಹಚ್ಚಿಟ್ಟು
ಮರೆಯಾದವರ, ತನ್ನ ಕಿರುಹಣತೆಗಳ
ಬೀಸುಗಾಳಿಗೆ ಮರೆಯೊಳಿಟ್ಟು ಆರಯ್ಯುವುದು (ಇದನ್ನು ಬಯಸಿರಲಿಲ್ಲ (ಸಂಕಲನ)ದಿಂದ *ದೆಹಲಿಯಲ್ಲಿ* ಕವಿತೆ by ಅಡಿಗ ) 
  

Wednesday, October 3, 2018

"ಗಾಂಧಿ"

(ಗಾಂಧಿಯವರು ಹುಟ್ಟಿ 150 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ವಿಜಯಕರ್ನಾಟಕದ ಭಾನುವಾರದ ಪುರವಣಿಯಲ್ಲಿ ನನ್ನ ಲೇಖನ (30.09.2018))

There is no such thing as ‘Gandhism,’ and I do not want to leave any sect after me. I do not claim to have originated any new principle or doctrine. I have simply tried in my own way to apply the eternal truths to our daily life and problems…The opinions I have formed and the conclusions I have arrived at are not final. I may change them tomorrow. I have nothing new to teach the world. Truth and nonviolence are as old as the hills. • Gandhi
ಇವತ್ತು, ಗಾಂಧಿ ಜಯಂತಿ ಎನ್ನುವುದು ಬೇಕೋ ಬೇಡವೋ ಎಂಬಂತಹ ಚರ್ಚೆಗಳನ್ನ ಹುಟ್ಟುಹಾಕುತ್ತಿರುವ ನಮ್ಮ ರಾಜಕೀಯಕೃಪಾಪೋಷಿತ ಯುವಸಮುದಾಯಗಳು ಹುಟ್ಟುಹಾಕುತ್ತಿರುವ ಹೊತ್ತಿನಲ್ಲಿ ಈ ಮಾತು ಎಂದಿಗಿಂತ ಉಜ್ವಲವಾಗಿ ಹೊಳೆಯುತ್ತಿದೆ.
ಮಹಾತ್ಮಾ ಎಂಬ ಹೆಸರನ್ನು ಕೊಟ್ಟ ಸಂದರ್ಭದಲ್ಲಿ ಅದನ್ನು ನಿರಾಕರಿಸುವ ಗಾಂಧೀಜಿ ಹೇಳುತ್ತಾರೆ. ಲಂಪಟ ಎನ್ನುವ ಹೆಸರು ನನಗೆ ಮಹಾತ್ಮಾ ಎಂಬ ಹೆಸರಿಗಿಂತ ಹೆಚ್ಚು ಸೂಕ್ತ. ದಯವಿಟ್ಟು ನನ್ನನ್ನು ಮಹಾತ್ಮಾ ಎನ್ನಬೇಡಿ, ನಾನು ಸಾಮಾನ್ಯ ರಾಗದ್ವೇಷಗಳ ಮನುಷ್ಯ. ಅಹಿಂಸೆ ಮತ್ತು ಸತ್ಯವನ್ನು ಪಾಲಿಸುವ ವ್ರತದ ದಾರಿಯಲ್ಲಿ ನಡೆಯುತ್ತಿರುವುದಷ್ಟೇ ನನ್ನ ಹಾಗಿನ ಎಲ್ಲರಿಗಿಂತ ನಾನು ಮಾಡುತ್ತಿರುವ ಭಿನ್ನ ಕೆಲಸ. ಎಂದರು. ಗಾಂಧೀಜಿಯನ್ನು ಎಲ್ಲ ಆಯಾಮಗಳಲ್ಲಿ ವೈಭವೀಕರಿಸುವ ಅಥವಾ ಧಿಕ್ಕರಿಸುವ ಮುನ್ನ ಅವರ ಕೆಲವು ಕೆಲವೇ ಕೆಲವು ನೇರ ಮತ್ತು ಸರಳ ಪತ್ರಗಳನ್ನ ಓದಿದರೆ ಸಾಕು ನಮ್ಮ ಆರಾಧನೆ ಅಥವಾ ಅಸಹ್ಯದ ವ್ಯರ್ಥತೆ ಅರ್ಥವಾಗುತ್ತದೆ.
 
ನಾವು ಸ್ವತಂತ್ರ ಭಾರತದ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳು. ಹೆಚ್ಚಿನ ಮಕ್ಕಳು ಈಗ ರಂಗದ ಮೇಲಿರುವವರ ಆಟಾಟೋಪಗಳನ್ನು ನೋಡುತ್ತ ಹಿಂದಿನದನ್ನು ಮೆಲುಕು ಹಾಕುತ್ತ ತೆರೆಮರೆಯಲ್ಲಿ ಉಳಿದಿದ್ದಾರೆ. ಕೆಲವೇ ಕೆಲವು ಪ್ರಿವಿಲೇಜ್ಡ್ ಮೊಮ್ಮಕ್ಕಳು ಸ್ವತಂತ್ರ ಭಾರತವೆಂಬ ಸ್ವರ್ಗವನ್ನ ಒಂದೊಂದೇ ಹೆಜ್ಜೆ ನರಕವನ್ನಾಗಿಸುತ್ತ ತಮ್ಮ ಮಕ್ಕಳಿಗೆ ಅಥವಾ ಸ್ವತಂತ್ರ ಭಾರತದ ಮರಿಮಕ್ಕಳ ಹೆಸರಲ್ಲಿ ದಾಖಲು ಮಾಡುತ್ತಿದ್ದಾರೆ. ಜಾಗದಲ್ಲಿ ದಾಖಲಾಗದಿರುವುದನ್ನ ಹೊರದೇಶದ ಬ್ಯಾಂಕುಗಳಲ್ಲಿ ಕೇಜಿಗಟ್ಟಲೆ ಬಂಗಾರದಲ್ಲಿ ಕಣ್ಣುಕುಕ್ಕುವ ವೈಭವೋಪೇತ ಜೀವನಶೈಲಿಯಲ್ಲಿ ಸಿಕ್ಸ್ ಲೇನ್ ಹೆದ್ದಾರಿಗಳಲ್ಲಿ ಯಾರ ಜೀವದ ಹಂಗೂ ಇಲ್ಲದೆ ಯಮವೇಗದಲ್ಲಿ ಓಡುವ ಐಷಾರಾಮಿ ಕಾರುಗಳಲ್ಲಿ ಕಟ್ಟಿಡುತ್ತಿದ್ದಾರೆ. ಒಂದಷ್ಟು ಜನ ಮೊಮ್ಮಕ್ಕಳು ಈ ಸ್ವತಂತ್ರದ ಹಂಗೇ ಬೇಡವೆಂದು ಚೆನ್ನಾಗಿ ಓದಿ ಈ ಕಕ್ಷೆಯಿಂದಾಚೆಗೆ ಜಿಗಿದಿದ್ದಾರೆ. ಅವರ ಮಕ್ಕಳು ಈಗ ಇನ್ನಾವುದೋ ಸ್ವತಂತ್ರ ದೇಶಗಳ ಮೀಸಲು ನೌಕರರು. ಇಲ್ಲೆ ಇರುವ ಎಲ್ಲಿಗೂ ಹೋಗಲರದ ಕೆಲವು ಮೊಮ್ಮಕ್ಕಳು ಹಳೆಯ ಮತ್ತು ಹೊಸತರ ಕೊಂಡಿಯಾಗಿರುವುವವರು ಐಷಾರಾಮವನ್ನು ಬಯಸದೆ ಅದನ್ನು ಬಿಡಲೂ ಆಗದೆ ಹಳಹಳಿಕೆಯಿಂದ ತಮ್ಮ ಮಕ್ಕಳನ್ನು ತಮ್ಮ ಪರವಾಗಿ ಹೆದೆಯೇರಿಸಿ ಬಾಣ ಬಿಡುತ್ತಿದ್ದಾರೆ. ಈ ಎಲ್ಲದರ ನಡುವೆ ದೇಶದ ಬಹುಪಾಲು ಜನ ಸ್ವತಂತ್ರ ಭಾರತದ ಭವ್ಯ ಬದುಕು ಆಕಾಶಕ್ಕೆ ನೇತುಬಿಟ್ಟ ಅತ್ತಿಂದಿತ್ತ ತೂಗುವ ವಿಶಾಲ ಉಯ್ಯಾಲೆಯಂತೆ ಜೀಕುತ್ತಿರುವುದನ್ನ ನೋಡುತ್ತಾ, ಒಂದು ಕಾಲು ನೋಯ್ದಾಗ ಅದನ್ನ ತುಸ ಮೇಲೆತ್ತಿ ಇನ್ನೊಂದು ಕಾಲಿನ ಮೇಲೆ ಹೆಚ್ಚಿನ ಭಾರ ಬಿಡುತ್ತಾ ಅದು ನೋಯ್ದಾಗ ಮತ್ತೆ ಕಾಲು ಬದಲಾಯಿಸುತ್ತಾ ನಿಂತಿದ್ದಾರೆ. ಆಗಾಗ ಇವರಿಗೆ ಸ್ವಾತಂತ್ರ್ಯದ ಎಷ್ಟನೆಯದೋ ಆಚರಣೆ, ಮಹಾತ್ಮನ ದಿನ, ಇನ್ಯಾವುದೋ ಹೋರಾಟದ ನೆನಪಿನ ಸುವರ್ಣ ಸಂಭ್ರಮಗಳ ಅಕ್ಷತೆಕಾಳು ತಲೆ ಮೇಲೆ ಬೀಳುತ್ತದೆ. ಒಲೆಯ ಮೇಲಿನ ಪಾತ್ರೆಯಲ್ಲಿ ಬರಿದೆ ನೀರು ಮರಳುತ್ತಿದೆ ಅಕ್ಕಿಯಿಲ್ಲ.
ಬಾಚಿಕೊಳ್ಳುವವರ, ತಲೆತಲಾಂತರಗಳಿಗೆ ಮೆತ್ತನೆಯ ಕುರ್ಚಿಯ ಮೇಲಿನ ಝರಿ ಶಾಲು ಮಾಸದ ಹಾಗೆ ಬುಕ್ ಮಾಡಿ ಇಡುವ ನಾಯಕರ, ಪಕ್ಷಪಾತಿಗಳ ನಡುವೆ, ಒಂದೇ ಒಂದು ಗಾಂಧಿಯ ನೆರಳೂ ಇಲ್ಲದೆ ಇರುವ ಈ ಹೊತ್ತಿನಲ್ಲಿ ಗಾಂಧಿಜಯಂತಿ ಮತ್ತು ಅವರ ನೆನಪು ಹೆಚ್ಚು ಪ್ರಸ್ತುತ.
ನನ್ನ ದೇಶದ ಬಹುಪಾಲು ಜನರ ಮೈಗೆ ಅವರ ನಗ್ನತೆಯನ್ನು ಮುಚ್ಚುವಷ್ಟೂ ಬಟ್ಟೆಯಿಲ್ಲ. ಹಾಗಾಗಿ ನಾನು ಅರ್ಧ ಮೈ ಬಟ್ಟೆ ತೊಡುತ್ತೇನೆ ಎಂದು ಘೋಷಿಸಿ, ಕಡೆಯವರೆಗೆ ಅದಕ್ಕೆ ಬದ್ಧನಾಗಿ ಬದುಕಿದ ಗಾಂಧಿಯೆಲ್ಲಿ? ಸರಳ ಎಂಬುದು ಬ್ರಾಂಡುಗಳ ಹೆಸರಾಗಿ, ವಿಶ್ವಮಾನ್ಯತೆಯ ಮಾರಾಟದ ಸರಕಾಗಿ ಸಾವಿರ ಲಕ್ಷಗಳಲ್ಲಿ ಬಿಕರಿಯಾಗುತ್ತಿರುವ
ಈ ಹೊತ್ತು ವಾಲಂಟರಿ ಸಿಂಪ್ಲಿಸಿಟಿ ಅಥವಾ ಐಚ್ಚಿಕ ಸರಳತೆ ಎಂಬ ಮೌಲ್ಯವನ್ನು ನಂಬಿ ಬದುಕಿದ ಗಾಂಧಿಯ ಬದುಕಿನ ಕುರಿತ ಬರಹಗಳ, ವಿವರಗಳ ಒಂದು ಕಿರುನೋಟಕ್ಕೆ ಕೆಲಸಮಯ ಮೀಸಲಿಡಲು ಈ ದಿನವನ್ನು ಗಾಂಧಿಜಯಂತಿಯನ್ನು ಆಚರಿಸಬೇಕು. ಗಾಂಧಿ ಬದುಕಿದ (ಬರಿಯ ಬೋಧನೆಗೆ ಸೀಮಿತವಲ್ಲದ) ಮೌಲ್ಯಗಳನ್ನು ಕಡೆಯ ಪಕ್ಷ ಓದಬೇಕು ಮತ್ತು ನಮ್ಮ ಮಕ್ಕಳು ಓದುವಂತೆ ಮಾಡಬೇಕು. ಓದಿದ್ದೆಲ್ಲ ಗ್ರಹಿಕೆಗೆ ದಕ್ಕುವುದಿಲ್ಲ. ಗ್ರಹಿಕೆಗೆ ದಕ್ಕಿದ್ದರಲ್ಲಿ ಎಲ್ಲವೂ ಆಚರಣೆಗೆ ಬರುವುದೂ ಇಲ್ಲ.
ಆದರೆ ನಾನು ಅನುಕೂಲದ ತುತ್ತ ತುದಿಯಲ್ಲಿ ಆನಂದತುಂದಿಲಳಾದ ಕ್ಷಣದಲ್ಲಿ ಆ ತುದಿಯ ಇನ್ನೊಂದು ಕೊನೆಯಲ್ಲಿ ದಿನನಿತ್ಯದ ಅವಶ್ಯಕತೆಗಾಗಿ ದಿನಗಟ್ಟಲೆ ಕಾದುಕೂರುವ ಜನ ಇದ್ದಾರೆ ಎಂಬ ಅರಿವು ನನಗೆ ಆದರೆ ಸಾಕು. ಆ ಅರಿವು ನನ್ನನ್ನು ಮುನ್ನಡೆಸುವ ಬೆಳಕಾಗುತ್ತದೆ. ಆದರೆ ಇಷ್ಟು ಮಟ್ಟಿನ ಓದನ್ನೂ, ಹೀಗೆಲ್ಲ ಇದೆ, ಇತ್ತು ಎಂಬುದನ್ನೂ ನಾವು ಗಮನಿಸದೆ ಹೋದರೆ, ನಮ್ಮ ಮಕ್ಕಳಿಗೆ ಹೇಳದೆ ಹೋದರೆ ಲಕ್ಷಾಂತರ ಜನ ಜೀವ ಕೊಟ್ಟು, ಮನೆಮಾರು ಬಿಟ್ಟು, ಓದು ಕೆಲಸ ಬಿಟ್ಟು...ಹೋರಾಡಿ ನಮ್ಮದಾಗಿಸಿದ ಸ್ವಾತಂತ್ರ್ಯವನ್ನು ನಾವೇ ತಟ್ಟೆಯಲ್ಲಿ ಇಟ್ಟು ಲಾಲಸೆಗಳಿಗೆ, ಮಾರಾಟಕೋರರಿಗೆ ಕೊಡುವ ದಿನ ದೂರವಿಲ್ಲ.
1869 ಅಕ್ಟೋಬರ್ 2ರಂದು ಹುಟ್ಟಿದ ಮೋಹನದಾಸ ಕರಮಚಂದ ಗಾಂಧಿ ಎಂಬ ಹುಡುಗ, ಮುಂದೊಂದು ದಿನ ಮನುಕುಲದ ಹೋರಾಟಗಳಲ್ಲಿ ತನ್ನ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡು, ಅದರಿಂದ ತನ್ನ ಜನ್ಮಭೂಮಿಯ ಬಾಂಧವರ ಬದುಕನ್ನು ಉತ್ತಮಗೊಳಿಸುತ್ತ ಹೋದ ಕಥೆ, ತನ್ನ ಶೋಧನೆಯಲ್ಲೇ ತಾನು ತಳಮಳಿಸುತ್ತ ದಾರಿ ಸಾಗಿದ ಕಥೆಯನ್ನು ಓದಲು ಈ ದಿನ ಬೇಕಲ್ಲವೆ. ಅಥವಾ ಕನಿಷ್ಟ ಪಕ್ಷ ಅವರ ಬದುಕಿನ ಕೆಲವು ಅತ್ಯುನ್ನತ ಮೌಲ್ಯಗಳ ಇಣುಕುನೋಟ ನಾವು ನಿಂತ ನೆಲವನ್ನೂ ಮುಟ್ಟಬಹುದಾದ ಎತ್ತರವನ್ನೂ ದೊರಕಬಹುದಾದ ವೈಶಾಲ್ಯವನ್ನೂ ತೋರಿಸುತ್ತದೆ ಎಂಬ ನಂಬಿಕೆ ನನ್ನದು.
ಇಂತಹ ಒಬ್ಬ ಮನುಷ್ಯ ಈ ಭೂಮಿಯ ಮೇಲೆ ನಡೆದಿದ್ದ ಎಂಬುದನ್ನೂ ನಂಬದ ಕಾಲವೊಂದು ಮುಂದೆ ಬರುತ್ತದೆ ಎಂದು ಅಲ್ಬರ್ಟ್ ಐನ್ ಸ್ಟೀನ್ ಗಾಂಧೀಜಿಯ ಕುರಿತು ಉದ್ಘರಿಸಿದ್ದು ನಿಜವಾಗುವ ಕಾಲವಿದು. ಒಂದು ಗುಂಪು ಅವನು ಮನುಷ್ಯನಲ್ಲ ದೇವರು ಎಂದು ವಿಜೃಂಭಿಸುತ್ತಿದೆ. ಇನ್ನೊಂದು ಅವನೊಬ್ಬ ಮನುಷ್ಯನೇ ಎಂದು ಕೀಳುಗರೆಯುತ್ತಿದೆ. ಸತ್ಯ ಇವೆರಡರ ಮಧ್ಯದಲ್ಲಿ ಹಿಂಸೆ ಅನುಭವಿಸುತ್ತಿದೆ. ಅಹಿಂಸೆಯನ್ನು ಅದರ ತಾತ್ವಿಕ ರೂಪದಿಂದ ಅದರ ಪರಿಣಾಮಕಾರೀ ಕಾರ್ಯರೂಪಕ್ಕೆ ಎತ್ತರಿಸಿದ ಗಾಂಧೀಜಿಗೆ ಇದು ನಾವು ಮಾಡುವ ದೊಡ್ಡ ಅವಮಾನ.
 
ಒಬ್ಬ ರಾಜಕೀಯ ನಾಯಕನಾಗಿ ನಾನು ನನ್ನ ಮನೆಯವರಿಗೆ, ಮಕ್ಕಳಿಗೆ ಪರವಾಗಿ ನಿಲ್ಲುವುದಿಲ್ಲ, ಅವರ ಬೆನ್ನು ಕಟ್ಟುವುದಿಲ್ಲ ಎಂದು ನಿಂತ ಈ ನಾಯಕನ ಚೂರುಪಾರು ನೆರಳಾದರೂ ನಮ್ಮ ರಾಜಕೀಯದ ನಾಯಕರ ಮೇಲೆ ಬೀಳಲಿ.
ಇಂದಿಗೂ ಗಾಂಧೀಜಿ ಬದುಕಿದ ಸರಳ ಜೀವನದ ಪಳೆಯುಳಿಕೆಗಳಾಗಿ ಹಲವು ಸೇವಾಗ್ರಾಮಗಳಿವೆ. ಅಲ್ಲಿ ಹಳೆಯ ತಲೆಮಾರೊಂದು ಈ ನಾಯಕನ ಹಿಂದೆ ತಲೆತಗ್ಗಿಸಿ ನಡೆದುಹೋಗಿ ನಿಂತುಬಿಟ್ಟಿರುವುದು ಕಾಣುತ್ತದೆ. ಆದರೆ ಪ್ರಾಮಾಣಿಕತೆ ಎಂಬುದು ಹೊರಗಿನ ಆಚರಣೆಯಾಗದೆ ಜೀವನದ್ರವ್ಯವನ್ನೇ ಆಗಿಸಿಕೊಂಡ ಗಾಂಧಿಯ ಬದುಕು ಮತ್ತು ದಾರಿ ನಡೆಯಲು ಹೋದ ಇವರೆಲ್ಲರೂ ತಮ್ಮ ದಾರಿಯನ್ನು ತಾವು ಶೋಧಿಸುವುದರಲ್ಲಿ ಸ್ವಲ್ಪ ಕಂಗೆಟ್ಟರೇನೋ ಎಂಬಂತೆ ಕಾಣಿಸುತ್ತಾರೆ. ಆದರೂ ಆ ಸರಳಚೇತನದ ಸವಿಯುಂಡ ಈ ಗುಂಪು ಈಗ ತನ್ನ ಪಾಡಿಗೆ ತಾನು ತಲೆತಗ್ಗಿಸಿ ನೇಯುತ್ತ ಕೂತಿದೆ. ದಣಿದ ಕೈಗಳನ್ನ ನೇವರಿಸಿ ಬಲುಹಿನ ಕೈಗಳನ್ನ ಸೇರಿಸುವ ಯುವ ಸಮುದಾಯದ ಪ್ರಾಮುಖ್ಯತೆ ಬೇರೆಯದೇ ಇದೆ. ಆ ಪ್ರಾಮುಖ್ಯತೆಯನ್ನು ರೂಪಿಸಿದ ಜವಾಬ್ದಾರಿ ಅವರ ಅಪ್ಪ ಅಮ್ಮಂದಿರದು. ಮುಂದೆ ನಮ್ಮ ಮಕ್ಕಳು ನೀನೇಕೆ ಇವುಗಳನ್ನು ನನ್ನ ಮುಂದಿಟ್ಟೆ ಎಂದು ನಮ್ಮನ್ನು ಬಯ್ಯದೆ ಇರಲು ನಾವು ಗಾಂಧಿಯ ಬದುಕಿನ ಬರಹಗಳನ್ನು ಆಶ್ರಯಿಸಬೇಕಿದೆ. ಅವರ ಆರಾಧಕರನ್ನಲ್ಲ. ಅವರ ಟೋಪಿ ಮತ್ತು ಚರಕಾದ ಜಾಹೀರಾತನ್ನಂತೂ ಖಂಡಿತ ಅಲ್ಲ.
ಈ ಮನುಷ್ಯನ ತೀವ್ರ ಪ್ರಾಮಾಣಿಕ ಪ್ರಯತ್ನಕ್ಕೆ ದಾಸ್ಯದಲ್ಲಿದ್ದ ಭಾರತದ ಲಕ್ಷಾಂತರ ಜನ ಅದೇ ತೀವ್ರತೆಯಲ್ಲಿ ಪ್ರತಿಸ್ಪಂದಿಸಿದರು. ಆ ತೀವ್ರತೆ ಮತ್ತು ಪ್ರಾಮಾಣಿಕತೆ ಒಂದು ಕ್ಷಣದ್ದಲ್ಲ. ಕ್ಷಣದಲ್ಲಿ ಗಳಿಸಿದ್ದೂ ಅಲ್ಲ. ಹೊರಗಿನ ವೇಷ,ಪೋಷಾಕು,ನಡವಳಿಕೆಗೆ ಅತ್ಯಂತ ಬೆಲೆಕೊಡುವ ಹೈಫೈ ನಾಯಕರುಗಳು, ಪ್ರಪಂಚದಾದ್ಯಂತ ಈ ತುಂಡುಡುಗೆಯ ಮನುಷ್ಯನ ಮಾತನ್ನು ಕೇಳಿದರು.
ಹಿಟ್ಲರ್ ನಂತಹ ಹಿಟ್ಲರನಿಗೆ ಪ್ರಿಯ ಸ್ನೇಹಿತನೇ ಎಂದು ಬಹಿರಂಗ ಪತ್ರಬರೆಯಬಹುದಾದ ನೈತಿಕತೆ ಮತ್ತು ಪ್ರಾಮಾಣಿಕತೆ, ತನ್ನದೇ ಮಗನ ಅನ್ಯಾಯಗಳನ್ನು ಸಹಿಸದೆ ದೂರವಿಟ್ಟ ನ್ಯಾಯಪರತೆ, ನಾಯಕನಾಗಿ ನಡೆಯುವಾಗ ಕುಟುಂಬದ ಪ್ರಾಮುಖ್ಯತೆ ಗೌಣವಾಗಿಸಿ, ಅವರು ಕಷ್ಟದಲ್ಲಿ ನೊಂದರೆ ತಾನು ಒಳಗೆ ಬೆಂದು, ಹೊರಗೆ ನಗುತ ನಿಲ್ಲುವ ನಿಷ್ಠುರತೆ, ತನ್ನ ಮಾನವಸಹಜ ದೌರ್ಬಲ್ಯಗಳನ್ನು ಸಾರ್ವಜನಿಕವಾಗಿ ತೆರೆದಿಡಬಲ್ಲ ಸರಳತೆ ಇದೆಲ್ಲವನ್ನೂ ನಾವು ನಂಬಲು ಅಸಾಧ್ಯವಾಗುವಷ್ಟು ತೀವ್ರತೆಯಲ್ಲಿ ಬದುಕಿದ ಈ ಮನುಷ್ಯ ಗಾಂಧಿಯೆಂದರೆ ನನಗೆ ಪ್ರೀತಿ, ಅಚ್ಚರಿ ಮತ್ತು ಅಪಾರ ಗೌರವ.
ಫಾಧರ್ ಆಫ್ ದಿ ನೇಷನ್, ಮತ್ತು ಭಾರತ ಸ್ವತಂತ್ರ ಹೋರಾಟದ ನೇತಾರ, ಮತ್ತು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಎಂಬ ಅತ್ಯಂತ ಸೀಮಿತ ಚೌಕಟ್ಟಿನಲ್ಲಿ ನಿಲ್ಲಿಸಿರುವ ಗಾಂಧಿ ಅಸಹಾಯಕತೆಯಿಂದ ಚಡಪಡಿಸುತ್ತಿದ್ದಾರೆ. ಹೊರಗೆ ಬರೋಣವೆಂದರೆ ಅವರ ಕೈಯ ಕೋಲನ್ನು ಆ ಭಾರೀ ಚೌಕಟ್ಟಿಗೆ ಅಂಟಿಸಲಾಗಿದೆ, ಮಾತನಾಡಿ ತಿಳಿಸೋಣವೆಂದರೆ ಮಕ್ಕಳ ಕಿವಿಯಲ್ಲಿ ಗ್ಯಾಜೆಟ್ಟುಗಳ ಇಯರ್ ಫೋನಿದೆ. ಕೊನೆಯ ಪಕ್ಷ ಇದೊಂದು ದಿವಸ ನಾವು ಮಹಾತ್ಮನನ್ನು - ಬಾಪುವಾಗಿಸೋಣ, ಮಕ್ಕಳು ನಿಜವಾದ ಮಮತೆಯಲ್ಲಿ ಅವರನ್ನು ಬಾಪೂಜಿ ಎಂದು ಕರೆಯುವಷ್ಟು ಹತ್ತಿರ ಹೋಗೋಣ. 

Wednesday, September 19, 2018

ಥೋಡೀ ಸೀ..

ಮೇರೇ ಘರ್ ಕೇ ಆಂಗನ್ ಮೇ, ಛೋಟಾ ಸಾ ಝೂಲಾ ಹೋ
ಸೋಂಧೀ ಸೋಂಧೀ ಮಿಟ್ಟೀ ಹೋಗಿ, ಲೇಪಾ ಹುವಾ ಚೂಲಾ ಹೋ
ಥೋಡಿ ಥೋಡಿ ಆಗ್ ಹೋಗೀ..ಥೋಡಾ ಸಾ ದುವಾಂ...
(ಗುಲ್ಜಾರ್ ಕವಿತೆ, ಭೂಪಿಂದರ್ ಮತ್ತು ಲತಾ ಹಾಡುಗಾರಿಕೆ)

ಒಂದು ಉಲಿ ಮೆಲ್ಲನೆ ಹರಿಯುತ್ತಿದೆ ಸ್ಟೀರಿಯೋದಿಂದ.. ಅದು ಅಲ್ಲಿಂದ ಹೊರಗೆ ಬಂದಿದ್ದಲ್ಲ. ಬಹುಶಃ ನಮ್ಮೊಳಗಿನ ಹಂಬಲಗಳೇ ಆ ಪದಗಳಲ್ಲಿ ತುಂಬಿ ಹಾಡಲ್ಲಿ ಹರಿದಿರಬಹುದು...ನನ್ನ ಮಾತು ಕೇಳಿ ನಿನ್ನ ಪುಟ್ಟ ಬಾಯಿ ಕಿರುನಗುತ್ತದೆ.
ಬಾಯ ತುದಿಯಿಂದ ಅದು ಹೇಗೋ ಆ ನಗು ನಿನ್ನ ಕಣ್ಣಿಗೆ ಜಿಗಿದು ನನ್ನ ಕಣ್ಣ ತುಂಬ ಬೆಳದಿಂಗಳು ಸುರಿದು
ಮಾತೆಲ್ಲ ಮೂಕವಾಗಿ ಸುಮ್ಮನೆ ಬೆರಳಿಗೆ ಬೆರಳು ಬೆಸೆದು, ಕಣ್ತುಂಬಿದ ನೋಟವನ್ನ ಬಿಡಲಿಷ್ಟವಿಲ್ಲದೆ ಕಣ್ಣೊಳಗೇ ಮುಚ್ಚಿಕೊಂಡು ಆಗಸಕ್ಕೆ ಮುಖ ಮೇಲೆತ್ತಿ ಕೂತುಬಿಡುವೆ.

ಚಿಕ್ಕ ಉಯ್ಯಾಲೆಯಲ್ಲಿ ಜೀಕುತ್ತ ಕಣ್ಣು ಬಿಟ್ಟು ನೋಡುತ್ತೇನೆ. ಅಂಗಳವನ್ನು ಮೆಟ್ಟಿ ಜೀಕಿದ ಉಯ್ಯಾಲೆ ಕೆಳಗಿಳಿಯದೆ ಹಾಗೆ ಮೇಲೇರಿ..ಬೆಟ್ಟ ಗುಡ್ಡ ಹಾದು, ಮೋಡ ಮಳೆಗಳಲಿ ನೆನೆದು, ಸಮುದ್ರದ ಉಪ್ಪು ಗಾಳಿ ಕುಡಿದು...ನಿಧಾನಕ್ಕೆ ಇಳಿಯುತ್ತಿದೆ ಅಂಗಳದಿಂದ ದೂರ, ಬಯಲುಗಳಾಚೆಗೆ ಕಿಕ್ಕಿರಿದ ಮಹಾನಗರದ ಚೆಲುವಾದ ಬೀದಿಯ ಸೊಗಸಾದ ಮನೆಯೊಂದರ ಛಾವಣಿಗೆ.

ಅದೇ ಆಗಸ, ಅದೇ ಚಂದ್ರ. ನೋಡುವ ಪಾತಳಿಯೇ ಬೇರೆ.
ಚಂದ್ರನಿಳಿಯಲಾರ ಇಲ್ಲಿ ನೇವರಿಸಲಾರ ಕೆನ್ನೆ ಬೆಸೆಯುವುದಿಲ್ಲ ಬೆರಳು...
ದಾರಿಯೇ ಹೊರಳು. ತುಂಬಿನಿಂತ ಕೊರಳು.
ಥೋಡೀ ಸೀ..ಎಂದು ಕೊಳ್ಳುವುದೂ ಕೂಡ ಎಷ್ಟು ಭಾರಿಯಾಗಿ ಹೋಗಿ ನಿಲುಕದೆ ಇದ್ದು ಬಿಡಬಹುದು ಎಂದು ಅರ್ಥವಾಗುತ್ತಿರುವ ದಿನಗಳು.

Tuesday, July 17, 2018

ಎರಡು ಮೆದುದಿಂಬುಗಳ
ನಡುವಿನ ಹಳ್ಳದಲಿ
ತಲೆಯಿಟ್ಟು ಮಲಗುವುದೆ
ತಾಯ್ತನ!

Tuesday, July 10, 2018

"ಕರೆದ ದಾರಿ ಬೇರೆ, ಮತ್ತೆ
ಹಿಡಿದ ದಾರಿ ಬೇರೆಯೆ!
ಹಾತೊರೆದು ನಡೆವರನ್ನು
ಹಾದಿಗೆಡಿಸುತಾರೆಯೆ?"
 - ದಿಗ್ಭ್ರಾಂತ ಕವಿತೆ - ಗಂಗಾಧರ ಚಿತ್ತಾಲ


ಇವತ್ತು ಈ ಕವಿತೆ ಓದಿ ಒಂದು ವಿಚಿತ್ರ ಮನಸ್ಥಿತಿ ಉಂಟಾಯಿತು. ಎಲ್ಲೆಲ್ಲಿಯದೋ ಯಾವಯಾವದೋ ವಿಷಯಗಳು ಕನೆಕ್ಟ್ ಆಗಿಬಿಟ್ಟಿತು.
ಒಂದೊಳ್ಳೆಯ ಕವಿತೆ ಅಂದ್ರೆ ಹೀಗೆ ಅಲ್ಲವೆ? ನಾನು ಹುಟ್ಟುವುದಕ್ಕೂ ಮೂವತ್ತು ವರುಷಗಳಿದ್ದಾಗ ಬರೆದ ಕವಿತೆ ನಾನು ಹುಟ್ಟಿ ನಲವತ್ತು ವರುಷದ ಮೇಲೆ ನನ್ನನ್ನು ಅಲುಗಾಡಿಸುವ ಈ ಕಾವ್ಯಾನುಸಂಧಾನಕ್ಕೆ ಮನಸೋತಿರುವೆ.
ಪು.ತಿ.ನ ಬರೆದ ಹಾಗೆ "ಕಥೆಗಳ ಬರೆಯುವ ಕಥೆಗಾರ ನಿನ್ನ ಕಲೆಗೆ ಯಾವುದು ಪಾರ.."

ಇದೇ ಹುಕಿಯಲ್ಲಿ ನನ್ನದೊಂದು ಸೊಲ್ಲು ತಡೆದರೂ ಮತ್ತೆ ಬಂದು ಬರೆಸಿಕೊಂಡಿತು.

ಬದಲಾದ ಹಾದಿ, ಹೆಜ್ಜೆ,
ಜತೆಪಯಣದ ವಜ್ಜೆ
ನೋಡುತ್ತಲೆ ಕಳೆದ ದಿನಗಳ
ನಿಲ್ದಾಣದಿಂದ ಹೊರಟು
ನೋಡದಿದ್ದರೂ ನಡೆದೀತೆಂಬ
ನಿಲುಗಡೆಗಳ ದಾರಿ
ತುಟಿಮುಚ್ಚಿದ ಕಣ್ರೆಪ್ಪೆಗಳು ಉದುರಿವೆ
ತುಟಿ ಮುಟ್ಟಲಾರದೆ ಅದುರಿದೆ
ನೀನು ನಡೆದುಬಿಟ್ಟಿದ್ದೀ
ನಾನು ಹೊರಳಿಬಿಟ್ಟಿರುವೆ
ಆದರೂ
ಆ ನೀನು
ಕಾಲವಳಿಸದ ನಿಜ
ನನ್ನ ನೆನಪಿನಲ್ಲಿ,
ಒಂದೇ ಹಾದಿಯ, ಹೆಜ್ಜೆ-ಮೇಲೆ-ಹೆಜ್ಜೆಯೇ ಕನಸಿನಲ್ಲಿ.

Friday, July 6, 2018

ಉಮ್ಮತ್ತಿ

ಇರಬಹುದೆ
ರಸ,ಹಣ್ಣು,ಕಾಯಿ,ಬೇರು..
ಉಮ್ಮತ್ತಿ ಕಾಯಿಯ ಹಾಗೆ?
ಎರಡು ದಿನ ಹಚ್ಚಿದ ಮೇಲೆ
ಕೂದಲುದುರಿ ನುಣ್ಣಗಾಗಿ
ಫಣಿಯ ಮಂಡೆ ಬೋಳಾದ ಹಾಗೆ
ಗಂಟಲ ಸಮುದ್ರದೊಳಗಿಂದ
ಉಕ್ಕಿ ಬರುವ ಮಾತಿನಲೆಗಳ
ಅಡಗಿಸಿ, ಮಲಗಿಸಿ,
ಮೌನದಂಡೆಗೆ ಮರಳಿಸುವ
ಮಾಯಕದ ರಸ, ಹಣ್ಣು, ಕಾಯಿ, ಬೇರು?
ಇರಬಹುದೆ
ಸಿಗಬಹುದೆ
ಜೀವವುಳಿಯಬಹುದೆ?

Friday, June 8, 2018

ಮಳೆಯಾಗುವ ಮೊದಲು..

ವಿಷಯ ತಿಳಿಯಿತು.
ಹಾಂ ಇಲ್ಲ, ಹೂಂ ಇಲ್ಲ,
ಬೇಕಿತ್ತೋ ತಿಳಿಯಲಿಲ್ಲ.
ಬೇಕಾಗಿರಲಿಲ್ಲವೋ ಗೊತ್ತಾಗಲಿಲ್ಲ!

ಇನ್ನೊಂದು ವಾರ,
ಮತ್ತೊಂದು ಸ್ಕ್ಯಾನು,
ಮತ್ತೆ ನಾಕು ಹೃದಯ,
ಕಣ್ಣರಳಲಿಲ್ಲ, ನಗು ಅರಳಲಿಲ್ಲ,
ಕೈಲಿ ಹರಿಯತ್ತಾ ಎಂಬ ಪ್ರಶ್ನೆ
ತುಟಿಯ ಬದಿಗೆ ಬಿರಿದೂ...
ಮಾತಾಗಲಿಲ್ಲ.  :(

ಎರಡು ಜೀವದ
ಬಯಕೆ,
ಸುತ್ತ ಹಬ್ಬಿದ ಜಗಕೆ-
ತಿಳಿಯಲಿಲ್ಲ.

ಎಲ್ಲರ ಕಣ್ಣಿಗೂ ಅವರವರದೆ ಕನ್ನಡಕ.

ಒಂದು ಪುಟ್ಟ ಜೀವ ಮಾತ್ರ
ದಿವಾನ ಏರಿ ನಿಂತು
"ಈಗೆತ್ತಿಕೋ ಅಮ್ಮ
ಕೆಳಗಿಂದ ಎತ್ತಲು ಕಷ್ಟವಾಗುತ್ತೆ" ಅಂತು. 
ಆ ಜೀವದ "ನೆನಕೆ,
ಆಶೆ, ಹೊಟ್ಟೆಕಿಚ್ಚು, ಮತ್ತು ಮುದ್ದುಗರೆಯುವಿಕೆಯೇ
ನಿನ್ನ ಬದುಕಿನ ಹರಕೆ"
ಎಂದು ನಾನು ಇಂದು ಹೇಳಿದರೆ ನಿನಗೆ ತಿಳಿಯುವುದಿಲ್ಲ.

ಎಲ್ಲರ ಕನ್ನಡಕದ ಪವರ್ ಬದಲಾಗಿದೆ.
ಅಂಗಳದಿ ಅರಳಿದ ಹೂವು ಎಲ್ಲರ ಮನವರಳಿಸಿದೆ.
ಹೊಕ್ಕಳ ಬಳ್ಳಿಗೆ ಮಾತ್ರ ಯಾವುದೇ ಕನ್ನಡಕವಿಲ್ಲ, ಲೆನ್ಸು ಇಲ್ಲ.
ಅದೇ ಆಶೆ, ಅದೇ ಬಯಕೆ, ಜೀವದಾಳದಲಿ ಮಮತೆ.

Sunday, June 3, 2018

ಕಿಟಕಿಯಾಚೆಗಿನ ಆಕಾಶ

ಮೋಹದಾ ಹೆಂಡತಿ ತೀರಿದ ಬಳಿಕ...
ಅವನು ಹೋಗಬಹುದು
ಎಳೆಗಳ ರೇಷಿಮೆಯ ಕತ್ತರಿಸಬಹುದದು
ಲೋಕರೂಢಿ

ಮೋಹ ಹರಿದರೂ
ಇವಳು ಮಾತ್ರ...

ಅವನ ಮನೆಯ ಗಟ್ಟಿ ದಿಂಬ (ಗೋಡೆ)
ಅತ್ತೆ ಮಾವರ ದಿಟ್ಟಿ ಕಂಬ
ಮಕ್ಕಳ ಹೊಟ್ಟೆ ತುಂಬ
ಜೀವರಸ ಪಾಕ ಹದಗೊಳಿಸದೆ
ಹೊರಟು
ಮುರಿದರೆ ರೂಢಿ
ಸಮಾಜಕ್ಕೆ ರಾಡಿ.


ಒಳಗಿನ ಬಗ್ಗಡ
ರಾಚದಂತೆ
ನೋವ ನೂಲು
ಕಾಣದಂತೆ
ಬದುಕ ನೇಯ್ಗೆ ನೇಯುವಂತೆ
ಇವಳಿಗೆ ಕಲಿಸಲಾಗಿದೆ.
ಇಲ್ಲದ ಗೂಟಕೆ
ಒಲ್ಲದ ಹಗ್ಗಕೆ
ಒಡ್ದಿ ಇವಳು ನಿಲ್ಲಬೇಕಿದೆ.

ಮೋಹದ ಹೆಂಡತಿ ತೀರಿದ ಬಳಿಕ ಅವನು
ಸ್ವಚ್ಭ ಆಕಾಶದಿ ತೇಲುವ ಹಕ್ಕಿ.
ಒಂದೊಂದು ಸಲ ಆಕಾಶವೂ ಆಗಿಬಿಡಬಹುದು.

ಇವಳು ಬರೀ
ದಿಟ್ಟಿ ಹರಿಸಬಹುದು
ಕಿಟಕಿಯಾಚೆಗಿನ ಆಕಾಶಕೆ.

Tuesday, May 8, 2018

ಮಳೆ ಮೋಡ (ಮಾತ್ರ)..


ಮೊಣಕಾಲುದ್ದ ನೀರಿನ ಹೊಳೆಯಲ್ಲಿ ಆಡುವ ಮಕ್ಕಳು
ಬಿಸಿಬಿಸಿ ಕಲ್ಸೋಪಾನದ ಅಂಚಿಗೆ ನೆರಳಾಡುವ ಅರಳಿಮರ
ಬಿರು ಬೇಸಿಗೆಯ ಮಧ್ಯಾಹ್ನದಿ ಮಳೆ ಮೋಡ.
ಈಗೀಗ,
ಬರಬೇಕಾದ ಮಳೆ, ಮೋಡ ತುಂಬಿಯೂ ಬರುವುದಿಲ್ಲ
ಆಸೆ ತೋರಿಸಿ ಕರಗುವುದನ್ನು ಮೋಡಗಳು ಕಲಿತಿವೆ;
ಕರಗಿದ, ಪುಡಿಯಾದ, ಆಸೆಬೆಟ್ಟದ ತಪ್ಪಲಿನವಳು ಮಾತ್ರ
ಕಲಿಯಲಾರದೆ ಕಾಯುತ್ತಲೇ ಇರುವಳು.

(ದೋಣಿಯೊಳಗೆ ನೀನೂ....)
ನೀನು ಒಬ್ಬನೇ ನಿಲ್ಲಬಯಸಿದೆ.
(ಕರೆಯ ಮೇಲೆ ನಾನೂ...)
ನಾನು ಒಬ್ಬಳೇ ಆಗಿಬಿಟ್ಟೆ.
ಸುತ್ತ ಮಕ್ಕಳು, ನದಿ, ಆಕಾಶ, ಮಳೆ ಮೋಡ, ಬಿಸಿಲು, 
ಸೋಪಾನ, ಅರಳಿ ಮರ, ಮತ್ತು ಊರೊಳಗೆ ಹೋಗುವ ಹಾದಿ.

Friday, April 6, 2018

ನಡೆಯುತ್ತ ನಡೆಯುತ್ತ...

ಮಲ್ಲಿಗೆಯಿಂದ ಮಲ್ಲಿಗೆಗೆ,
ಕನಸಿನಿಂದ ಕನಸಿಗೆ,
ದಾಟುತ್ತ ದಾಟುತ್ತ,
ಈಗ ನನಸಿನ ಬಯಲು,
ಸ್ವಪ್ನ ಹರಡಿದ ಮುಗಿಲು,
ವಸಂತದ ಗಂಧ ಗಾಳಿ ಹೂಗೊಂಚಲು
ಎಂದಿನ ಹಾಗೆ ಚೆಲುವರಿದೂ,
ಕೇಳದಿದೆ ಕೋಗಿಲೆಯ ಕುಕಿಲು,
ನೆರಳಿಗಿಂತಲೂ ಉದ್ದದ ಬಿಸಿಲು.

ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿಕೂತು
ಯಾರಿಗೂ ಹೇಳದ ಪಯಣ-
-ದ ದಾರಿ ಬದಲಾಗಿ
ಸಮಾಹಿತ-
-ದ ನಿರ್ವಾತ,
ಝಗಮಗಿಸುವ ಸೂರ್ಯನೇ
ಬೆಚ್ಚಿ ಬೆಮರುವ ಕಪ್ಪುಕುಳಿ ಬದುಕಿನ
ಅವಕಾಶದಿ,
ಬಗೆಬಗೆಯ ಉಲ್ಕಾಪಾತ.
ಈಗ ಮಲ್ಲಿಗೆ ಬಳ್ಳಿ ಡೆಸ್ಕ್ ಟಾಪಿನ ಸ್ಕ್ರೀನ್ ಸೇವರಲ್ಲಿದೆ,
ರಾತ್ರಿ ರಾಣಿಯ ಬೊನ್ಸಾಯ್ ಕಿಟಕಿ ಪಕ್ಕದ ಕುಂಡದಲ್ಲಿದೆ,
ಮಕ್ಕಳ ಕೈಗೆ ಸಿಕ್ಕಿ ತುದಿ ಹರಿದ-
ಜತೆಪಯಣದ ಚೊಲೋ ಚಿತ್ರವ ಫ್ರೇಮಲ್ಲಿ ಸಿಕ್ಕಿಸಲಾಗಿದೆ.

ಕೆ.ಎಸ್.ನ ಹೇಳಿದಂತೆ
"ಕವಿತೆ ಕರವಸ್ತ್ರ"
ಮತ್ತು ಚಿಕಿತ್ಸೆ ಕೂಡ.
ಲಘು ಗುರು ಮಾತ್ರೆಗಳ ಬಲವೇ ಬಲ.
ಬೇಂದ್ರೆ ಅಜ್ಜ ಬೇಜಾರಾಗಬ್ಯಾಡ್ರಿ
ನೀವು ಹೇಳಿದ ಹಾಗೆ
"ಕವಿಗೆ ಏನು ಬೇಕು
ಹೂತ ಹುಣಸೀಮರ ಸಾಕು"
ಬದುಕಿನ ಮರದೆದೆಗೆ ಕವಿತೆಯ ಹನಿ ಹನಿ ಬೇಕು.
ಆದರೂ ಕೊನೆಗೆ ಒಂದು ಮಾತು ಹೇಳಲು
ಅಡಿಗರೇ ಸೂಕ್ತ..
"ಮುಗಿಲು ಮಿಂಚಿನ ತತ್ತಿ
ತಳಕ್ಕೆ ಬೆಳಕಿನ ಮರಿಗಳಿಳಿಯಲಿಲ್ಲ.
ಅಷ್ಟೊಂದು ಮಿಂಚು ಮಿಂಚಿದ್ದಕ್ಕೂ
ಅಡಿಗೆಮನೆಯ ತರಗೆಲೆ ಹೊತ್ತಲಿಲ್ಲ."
ಪಯಣ ಪೂರ್ಣದೆಡೆಗೇ ಇದ್ದರೂ
ಪುಡಿಯಾಗುವುದು ನಿಯಮ.

Monday, March 12, 2018

ಕವಿ ಮಿತಿ

ನೆಲ ಹೇಳಿತು
ಮುಗಿಲು ಕಿವಿಗೊಟ್ಟಿತು
ಮಧ್ಯದ ಜನಸಂಕುಲ ಗಾಬರಿಯಾಯಿತು
ಒಂದು ತುಂತುರು ಮಳೆ
ಮಳೆ ನಿಂತ ತಂಗಾಳಿ, ಹಕ್ಕಿ ಕುಕಿಲು
ಎಂದಿನ ಹಾಗೆ ಟ್ರಾಫಿಕ್ಕು, ಕೆಲಸ, ಶಬ್ಧ,
ತುಂಬಿ ತುಳುಕುವ ಸಾರಿಗೆ,ಆಸ್ಪತ್ರೆ, ಹೋಟೆಲು,
ಹನಿ ತುಳುಕದ ಹಾಗೆ ಎಚ್ಚರದ ಬಾಟಲು.

ಆಗಸ ಪಿಸುನುಡಿಯಿತು
ಭುವಿ ಕಿವಿಯಾಯಿತು
ಮಧ್ಯದ ಜನಸಂಕುಲ ಕುಮ್ಹಿಟಿಬಿದ್ದರು
ಆತಂಕ, ಸಾಶಂಕ, ದೇಗುಲಗಳಲ್ಲಿ ಪರಿಪರಿಯ ಅರ್ಚನೆ ತಳ್ಳಂಕ
ಮತ್ತೊಂದು ಸುರಿಮಳೆ
ತೊಳೆದ ಕೊಳೆ, ಮುರಿದು ಬಿದ್ದ ರೆಂಬೆ ಕೊಂಬೆ
ಪಕ್ಕದ ಮರದಲ್ಲಿ ಗೂಡು ಸಿದ್ಧಗೊಳ್ಳುತ್ತಿರುವ ಸಂಜೆ
ಬೆಳಕು ಚೆಲ್ಲಿದ ಪಾದಪಥ, ಕಿವಿ ತುಂಬುವ ಹಾರ್ನುಗೀತ
ಮತ್ತದೇ ಟ್ರಾಫಿಕ್ಕು, ಕಿಕ್ಕಿರಿದ ಸಿಗ್ನಲು,
ಉದ್ದ ಕ್ಯೂಭರಿತ ಸಾರಿಗೆ, ಆಸ್ಪತ್ರೆ, ಹೋಟೆಲು
ಒಂದೆರಡು ಹನಿ ತುಳುಕಿಯೂ ತುಳುಕದ ಬಾಟಲು.

ಮಧ್ಯೆ ಟೆಕ್ನಾಲಜಿ
ಪತ್ರ,ಮೆಸೇಜು,ಚಿತ್ರ, ಎಮೋಜಿ
ಎಲ್ಲ ಸ್ತಬ್ಧ.
ಶಬ್ಧದೊಳಗಣ ನಿಶ್ಯಬ್ಧ
ದೊಳಗೆ
ಅಮೃತವಾಹಿನಿಯೊಂದು
ಹರಿಯುತ್ತಲೆ ಇರಲಿ
ಎಂದಷ್ಟೆ ಬಯಸುವುದು
ಕವಿಯ ಭಾಗ್ಯ.

ಇರಬಹುದೆ...

ಜತೆಗಿಳಿದ ದಾರಿ ಬಿಟ್ಟು
ತಿರುಗಿ ಹೊರಟೆ
ಸಕ್ಕತ್ತಾಗಿ ಕೈಕೊಟ್ಲು ಗುರೂ
ಲೋಕವೆಂದಿತು.
ಎಲ್ಲಿ ಕೈಯಿಟ್ಟೆ, ಎಲ್ಲಿ ಬಿಟ್ಟೆ
ಎಲ್ಲಿ ಕಟ್ಟಿದೆ, ಎಲ್ಲಿ ಒಡೆದೆ ಅಂತ
ಅದಕ್ಕೇನು ಗೊತ್ತು
ಪ್ಚ್ ಪ್ಚ್ ಅನ್ನುತ್ತದೆ.


ಬಿದ್ದು ಪುಡಿಯಾಗುವವಳಿದ್ದೆ
ಒಂದು ಕಿರಿಬೆರಳು ಹಿಡಿದೆತ್ತಿ ನಿಲ್ಲಿಸಿತು
ನೋಡ್ದಾ.. ಗೊತಿತ್ತು ನಂಗೆ
ಎಂದು ಹಲವರಿಯಿತು ಲೋಕ
ಏನು ಸಿಕ್ಕಿತು ಏನು ದಕ್ಕಿತು
ಎದ್ದು ನಿಂತಿದ್ದು ಹೇಗೆ
ಅದಕ್ಕೇನು ಗೊತ್ತು
ಮುಸಿನಗೆ ನಗುತ್ತದೆ.


ಹೇಳಿದ ಮಾತು ಕೇಳಲಿಲ್ಲ
ದೊಡ್ಡವರ ದಾರಿ ಸಾಗಲಿಲ್ಲ
ಬೆನ್ನು ಹತ್ತದಿರದೆ ಪಾಪ
ಕಳೆಯಬಹುದೆ ಶಾಪ
ಹೊರೆಸುತ್ತದೆ ಲೋಕ
ಏನು ಕೇಳಿದೆ, ಎಲ್ಲಿ ಹೋದೆ
ಬೆನ್ನೇರಿದ್ದು ಏನು
ಇಳಿಸಿದ್ದು ಏನು
ಶಾಪವೋ ವರವೋ
ಅದಕ್ಕೇನು ಗೊತ್ತು
ಉಪದೇಶ ಮಾಡುತ್ತದೆ.


ಎಲ್ಲ ತಿರುವುಗಳೂ ಒಂದು ದಾರಿಯಲ್ಲಿ
ಒಟ್ಟಾಗಿ ಕರಗುವಾಗ
ಅನಿಸುತ್ತದೆ
ಹೊರಳುದಾರಿ, ಕಿರುಬೆರಳು,
ಎಡವು ನಡೆ, ಎದ್ದ ನಿಲುವು
ಶಾಪ, ಉಶ್ಯಾಪ, ಪಶ್ಚಾತ್ತಾಪ, ಪರಿಹಾರ
ಎಲ್ಲ ನಿಶ್ಚಿತವಾಗಿದ್ದು ಆ ನದೀಮೂಲದಲ್ಲೆ
ಇರಬಹುದೆ?!!
ಎಲ್ಲವೂ ಕರಗುವುದೆ ಒಂದೇ ನಿರಾಳದಲ್ಲಿ...?!
ಮಡಕೆಯೊಳಗಿನ ನೀರು ಸಮುದ್ರದೊಡನೆ ಸೇರುವಲ್ಲಿ!

Monday, January 29, 2018

ಮುಗುಳ್ನಗೆಯ "ಚೆಲುವ"

ಸುತ್ತೆಲ್ಲ ಕತ್ತಲೆ,
ಮುಚ್ಚಿಟ್ಟ ಬಾಗಿಲು,
ತೆರೆಯದ ಕಿಟಕಿ,
ಒಳಗುಡಿಯಲಿ
ಪದ್ಮಾಸನದಲಿ
ಧ್ಯಾನಮಗ್ನ ಶಿಲೆ.

ಚಿಕ್ಕ ಸೊಡರಿನ ದೀಪ-
ಕಣ್ಣ ಬಳಿ ಹಿಡಿಯೆ
ಮೆಲ್ನಗುವಿನ ಪ್ರತಿಫಲನ;
ಗದ್ದದ ಬಳಿ ಹಿಡಿಯೆ
ಗಂಭೀರ ಶಾಂತ ವದನ;
ಎದೆಯ ಬಳಿ
ಹೃದಯ ಮಿಡಿತದ ಬಳಿ ಹಿಡಿಯೆ
ಅರೆನಿಮೀಲಿತ ಧ್ಯಾನ!

ತುಸುದೂರದಿ ನಿಲ್ಲೆ
ಹಲವು ಸತ್ಯಗಳ ಅನೇಕಾಂತವಾದದ
ಮೂರ್ತರೂಪ;
ಬೆಳಕು ಚೆಲ್ಲೆ
ಪುನರುದ್ಧರಿಸಿದ ಗುಡಿಯ ಶಿಲಾ ನೈಪುಣ್ಯ.
ಎಷ್ಟು ಬೇಕೋ ಅಷ್ಟು ಹರಿಸೆ
ಮೆಟ್ಟಿಲು ಮೆಟ್ಟಿಲಾದ
ಬದುಕಿನ ಪಾಠ.

ನಿಖರ ಬಣ್ಣನೆಯ ನಿಶ್ಚಿತ ಉಕ್ತಿಗಳಲ್ಲಿ
ಪ್ರಜ್ವಲಿಸುವ ಸತ್ಯವು
ಅನುಕ್ತ ಆಕಾಶದಲ್ಲೆಲ್ಲ ಹರಡಿದೆ
ಎಂದು ಕೂತಿರುವ
ಮುಗುಳ್ನಗೆಯ "ಚೆಲುವ"ನಿಗೆ ಮನಸೋತೆ.
ಮತ್ತೆ ಬರುವೆ.

ಅವ ಹೇಗಿದ್ದನೋ!
ಏನಂದನೋ!
ಉಳಿಗೆ ಸಿಕ್ಕಿದ ಕಲ್ಲನು ಕೆತ್ತಿದವನ
ಎದೆಯೊಳಗಿನ ಆಕಾಶ
ನನ್ನ ಕಣ್ಣ ತುಂಬಿತು.



Wednesday, January 17, 2018

ಮಡಕೆ

ಕನಸುಗಾತಿ
ಮಡಕೆ ಕೊಂಡಳು
ಅವನು ಹಸುವಿನ ಬಗ್ಗೆ ಮಾತನಾಡಿ ಮುಗಿಸುವಷ್ಟರಲ್ಲಿ
ಇವಳು ಸಂತೆಗೆ ಹೋಗಿ
ಮಡಕೆ ತಂದಾಯಿತು
ಹಾಲಿಗೆ, ಮೊಸರಿಗೆ, ಬೆಣ್ಣೆಗೆ, ತುಪ್ಪಕ್ಕೆ
ಇಷ್ಟಲ್ಲದೆ ಮಿಗುವ ಹಾಲನ್ನು ತುಂಬಿಸಿಡಲಿನ್ನೊಂದು ಮಡಕೆ

ಅರಿವಿದೆಯೆ ನಿನಗೆ
ಕನಸಿನ ಹಸುವಿನ ಮಧುರ ಹಾಲಿಗೆ
ಕಣ್ಣೆತ್ತಿ ನಿಂದವಳೆ
ಕನಸು ಮುಗಿಯುತ್ತದೆ
ಎಚ್ಚರಾದಾಗ
ಹಸು, ಹಾಲು, ಮಾತು, ಮೌನ,
ಬೆಣ್ಣೆ ಮತ್ತು ತುಪ್ಪ
ಯಾವುದೂ ಇರದ
ಬದುಕಿನ ಮಡಿಕೆ
ಬೋರಲು ಬಿದ್ದಿದೆ

ಮಡಕೆಗಳ ಹಸಿಯೊಡಲಿನಲಿ ಬರಿದೆ ಕನಸು.
ತುಂಬಿದರೂ ತುಂಬದಿದ್ದ ಹಾಗೆ
ಅವು ಎಂದಿಗೂ ಖಾಲಿ.

ಥೇಟ್ ಬದುಕಿನ ಹಾಗೆ
ಕನಸೂ ಇದ್ದು ಬಿಟ್ಟರೆ
ಏನು ಮಾಡುವುದು?
ಕೊಳಲನೂದುವ ಗೋವಳ 
ಸುಮ್ಮನಿರುವನು
ಕನಸಿನ ವಾಸ್ತವಕ್ಕೆ ಬೆದರಿ.