Friday, May 18, 2007

ಹೊಸ ಹರಿವಿನಲ್ಲಿ ಜೀವದ ನಾವೆ...

ಒಂದು ಚಂದದ ಜಾಗ, ಹ್ಯಾಗೆ ಚಂದ ಅಂತ ಯಾರಾದ್ರೂ ಕೇಳಿದ್ರೆ ವಿವರಿಸಲಿಕ್ಕೆ ಬರದು ತನಗೆ. ಭೂಮಿಯೋ,ಮೋಡವೋ, ನೀರೋ ಗೊತ್ತಾಗ್ತಿಲ್ಲ. ಮನಸ್ಸಿಗೆ ಮಾತ್ರಾ ಎಂಥದೋ ಖುಷಿ ಖುಷಿ. ಆಗ ತುಂಬ ಹಿಂದೆ ಜಯಕ್ಕನ ಮನೆಯಿಂದ ಕಡ್ಡಿ ಸೇವಂತಿಗೆ ಸಸಿ ತಂದು ನೆಟ್ಟು ನಮ್ಮನೆ ಅಂಗಳದಲ್ಲಿ ಅದರ ಮೊದಲ ಮೊಗ್ಗು ಮೂಡಿದಾಗ ಆದ ಹಿಗ್ಗಿನಂತಹುದು ಅಂತ ಹೇಳಬಹುದು. ಓಹೋ ಈ ಹಿಗ್ಗಿನ ಮೂಲ ಈಗ ಗೊತ್ತಾಯಿತು. ಅದೋ ಅಲ್ಲಿ ಅವರು ನಿಂತಿದ್ದಾರೆ. ಗದ್ದೆಯಂಚಿನ ಕೆಸರು ಸಿಡಿದು ಕೆಂಪಾದ ಪಂಚೆ,ಬಲಗಡೆಯ ಜೇಬು ಹೊಲಿಗೆ ಬಿಟ್ಟ ಗಿಡ್ಡ ತೋಳಿನ ಖಾದಿ ಅಂಗಿ,ಚೌಕಚೌಕದ ನೀಲಿ ಟವಲ್ಲು ಹೆಗಲ ಮೇಲೆ, ಇಲ್ಲೇನೂ ಬಿಸಿಲಿಲ್ಲ ಆದರೂ ಆ ಗಾಂಧಿ ಟೋಪಿ ಮಾತ್ರ ಹಣ್ಣಾದ ಕೂದಲ ಜೊತೆ ಹರಟೆ ಹೊಡೀತಾ ತಲೆಯ ಮೇಲೆ ಕೂತಿದೆ. ಎಂದಿನಂತೆ ಎಲೆ ಅಡಿಕೆ ಬಾಯಲ್ಲಿದೆ. ಕಣ್ಣು ಮಾತ್ರ ಅದೇ ನಸುನಗುವಿನೊಂದಿಗೆ ನನ್ನತ್ತಲೇ ಬೇಗ ಬೇಗ ಬಾ ಅನ್ನುತ್ತಿದ್ದಾರೆ ಅನಿಸುವಂತೆ.. ನಾನೂ ತಡ ಮಾಡಲಿಲ್ಲ - ಹತ್ತಿರ ಹೋದೆ. ಅಯ್ಯೋ ಈ ಹಾಳು ಅಳು ಈಗಲೇ ಬರಬೇಕೆ? ಸೆರಗಿನ ತುದಿಯಿಂದ ಕಣ್ಣು ಮೂಗೊರಸಿಕೊಂಡು, ಎಂತದಿದು ಈಗ ಇಷ್ಟು ವರ್ಷದ ಮೇಲೆ ನನ್ನ ನೆನಪಾತಾ ನಿಮ್ಗೆ? ನೀನಿಲ್ಲದೆ ಜೊತೆ ಸಾಗದಿಲ್ಯೆ, ನಂಜೊತೀಗೆ ಇರು ಅಂತ ಯಾವಾಗ್ಲೂ ಹೇಳ್ತಾ ಇದ್ದೋರು ಅವತ್ತು ಮಾತ್ರ ನಂಗೆ ಹೇಳದೆ ಕೇಳ್ದೆ ಹೊರಟೇ ಬಿಟ್ರಲ್ಲ.. ಓ ಮತ್ತೆ ಅಳು, ಸಿಂಬಳ ಬೇರೆ... ಅವರ ಕಣ್ಣಲ್ಲಿ ಮಾತ್ರ ಅದೇ ನಸುನಗೆ..

ಹಸಿರೆಲೆಗಳ ನಡುವೆ ಬೆಳ್ಳಗೆ ಬಿರಿದು ಇಬ್ಬನಿಯಲಿ ತೋಯ್ದ ನಿತ್ಯಪುಷ್ಪದಂತ ಆ ನಗುವನ್ನು ನೋಡುತ್ತ ನೋಡುತ್ತ ನನ್ನ ಅಳು, ಮಾತೆಲ್ಲ ಕಟ್ಟಿ ಹೋಯಿತು. ಶಬ್ದದ ತೀರದಿಂದ ಬದುಕಿನ ನಾವೆ ನಿಧಾನವಾಗಿ ಲಂಗರು ಕಳಚಿದ ಅನುಭವ. ಭಾವದ ಮೌನ ಹರಿವಿನಲ್ಲಿ ನಾವೆ ತನ್ನಷ್ಟಕ್ಕೆ ತಾನೆ ಚಲಿಸಿ... ನಾನು ತುಂಬ ಸಣ್ಣವಳಿದ್ದಾಗ ಸತ್ತು ಹೋದ ಅಮ್ಮನ ಮಡಿಲು ನೆನಪಾಯಿತು. ಕೊನೆಯ ಮಗಳು ಎಡವು ಹೆಜ್ಜೆ ಇಟ್ಟು ಕೈ ಮುಂದೆ ಮಾಡಿ 'ಮ್ಮಾ' ಅಂತ ಮುಂದೆ ಬಂದ ನೆನಪಾಯಿತು. ಅವತ್ತು ರಂಗಪ್ಪನ ಗುಡ್ಡ ಹತ್ತುವಾಗ ತಲೆತಿರುಗಿ ನಾನು ಕುಸಿದು, ಅವರು ಟವೆಲ್ಲಿನಿಂದ ಗಾಳಿ ಬೀಸಿ ಹಾಯೆನಿಸಿದ ನೆನಪಾಯಿತು. ಮೊಮ್ಮಕ್ಕಳು ಕತೆ ಕೇಳು ಕೇಳುತ್ತಾ ತೊಡೆಗೊರಗಿ ನಿದ್ರಿಸಿದ ಮೆತ್ತನೆ ಸ್ಪರ್ಶದ ನೆನಪಾಯಿತು. ಅರೇ ಇದೇನು ಬೇಸರವೆಲ್ಲಾ ಕಳೆದೇ ಹೋಯಿತಲ್ಲ. ಜೀವದ ನಾವೆ ನಲಿವಿನ ಹೊಳವಿಗೆ ಸಿಕ್ಕ ಅನುಭವ.


ಅವರ ಕಣ್ಣಲ್ಲಿ ಮತ್ತದೇ ನಸುನಗು. ಎಲ್ಲ್ ಹೋಯ್ದಿ ನಾನು, ನಿಂಜೊತೀಗೆ ಇದ್ನಲ ಸುಶೀಲಾ! ನೀನು ಕಣ್ಣು ಮುಚ್ಚಿದಾಗೆಲ್ಲ ನಾನೆ ತಾನೆ ಇದ್ದಿದ್ದು, ಕಣ್ತೆರೆದಾಗ ನಿನ್ ಮಕ್ಳು, ಮೊಮ್ಮಕ್ಕಳು, ಗಿಡ, ನೀರು, ಮಳೆ ಎಲ್ಲ ಕಡೀಗೂ ಇದ್ನಲೇ. ನೀನು ನನ್ನ ನೋಡ್ತಲೇ ಇದ್ದೆ. ಮತ್ತಿನ್ಯಾಕೆ ಬೇಜಾರು? ... ವಾಕ್ಯ ಮುಗಿಯುವಾಗ ತುಟಿಯಂಚಲಿ ಅದೇ ಹೂನಗೆ - ಹಸಿರು ಪೊದೆಯಲ್ಲಿ ತೆಳುಹಳದಿ ಸಂಜೆಮಲ್ಲಿಗೆ ಅರಳಿದಂತೆ. ಅದೂ ಮತ್ತೆ... ಏನೋ ಹೇಳ ಹೊರಟೆ, ಒಂದು ತಣ್ಣನೆಯ ಗಾಳಿಯ ಕುಳಿರು ಸುಳಿಯಿತು. ಮುಖದ ಮೇಲೆ ಹನಿಯೂ ಬಿತ್ತು. ಕಣ್ಬಿಟ್ಟೆ.. ಅಯ್ಯೋ ತಾನು ಇಲ್ಲೆ ಬೆಂಗಳೂರಿನ ಮನೆಯ ಮಂಚದ ಮೇಲೆ ಮಲಗೇ ಇದೀನಿ. ಕಿಟಕಿಯ ಪಕ್ಕವೇ ಮಂಚ, ಹೊರಗೆ ಸಣ್ಣಕೆ ಮಳೆ ಹನಿಯುತ್ತಲೇ ಇದೆ. ಕಿಟಕಿಗೆ ಆನಿಕೊಂಡು ಹಬ್ಬಿದ್ದ ಮಲ್ಲಿಗೆ ಬಳ್ಳಿಯ ಮೇಲಿನ ನೀರಹನಿ ಕುಳಿರ್ಗಾಳಿಗೆ ಮುಖದ ಮೇಲೆ ಬಿದ್ದು ಎಚ್ಚರಾಗಿ ಹೋಯಿತು. ಛೇ ಎಷ್ಟು ಚಂದದ ಕನಸು.


'ಅಮ್ಮಾ ಹಾಲೂ...' ಓ ಹಾಲಿನವಳು ಬಂದೇ ಬಿಟ್ಟಳು, ಅಂದ್ರೆ ಗಂಟೆ ಆರೂ ಕಾಲೆ? ಮೋಡ ಕವ್ಕೊಂಡ್ರೆ ಟೈಮಾಗಿದ್ದೆ ಗೊತ್ತಾಗದಿಲ್ಲೆ. ಸೊಸೆ ಗೀತಾ ಬಾಗಿಲು ತೆರೆದು ಹಾಲು ಹಾಕಿಸಿಕೊಂಡಳು. ಚೂರೂ ನೀರ್ ಬೀಳದ ಹಂಗೆ ತಂದಿದೀನ್ರ.. ದಿನಾ ಕೊಡೋ ಗಟ್ಟಿ ಎಮ್ಮೆ ಹಾಲೆ ಇದು. ಐ ಬುಡಿ, ನಿಮ್ಗೊಳ್ಳೆ ತಮಾಸೆ... ಅಂತ ಗೊಣಗುತ್ತ ಹಾಲಮ್ಮ ಮುಂದಿನ ಮನೆಗೆ.ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಗೀತ ಬಿಸಿಬಿಸಿ ಕಾಫಿ ಕೈಗಿಟ್ಟಳು. ಅಡುಗೆ ಮನೆಯ ಸ್ಟಾಂಡಿನಿಂದ ಅವಳ ರೇಡಿಯೋ ಹಾಡುತ್ತಿತ್ತು. ಒಂದು ಬಾರಿ ಸ್ಮರಣೆ ಸಾಲದೇ...? ಮತ್ತೆ ಕನಸಲ್ಲಿ ಕಂಡ ನನ್ನವರ ನಸುನಗೆ ನೆನಪಾಯಿತು.


ಪೇಪರಿನವನು 'ಪೇಪಾಆಆರ್ ' ಎಸೆದು ಹೋದ. ಟೀವಿಯ ಹಿಂದೆ ತುಂಟ ಮೊಮ್ಮಗಳು ಧನ್ಯಳ ಕೈಗೆ ಸಿಗದಂತೆ ಅಡಗಿಸಿಟ್ಟಿದ್ದ ಕನ್ನಡಕ ಎತ್ತಿಕೊಂಡೆ. ಮುಖಪುಟದ ತುಂಬ ಕ್ರಿಕೆಟ್ಟು, ಅಪಘಾತ, ಸಚಿವರ ಮೇಲಿನ ಆರೋಪ, ರೈತರ ಆತ್ಮಹತ್ಯೆ.. ಅದೇ ಸುದ್ದಿಗಳೆ ದಿನದಿನವೂ ಹೊಸದಾದ ಅಕ್ಷರಗಳಲ್ಲಿ, ಗಾಢವಾದ ಮಸಿಯಲ್ಲಿ, ಒಮ್ಮೊಮ್ಮೆ ಕುಂದಿದ ಪೋಟೋಗಳಲ್ಲಿ ಮತ್ತೆ ಮತ್ತೆ. ನಾವೋ ಆಧುನಿಕ ಜನ. ಹಳತನ್ನ ತಣ್ಣಗಿಟ್ಟು ಬಿಸಿಯಾಗಿಸಿ ಸವಿಯುವ ಮಂದಿ. ಪೇಪರ್ ನೋಡಿದರೆ ಯಾಕೆ ಓದಲು ಕಲಿತೆನೋ ಅನ್ನಿಸಿಬಿಡುತ್ತದೆ...

ಅಷ್ಟರಲ್ಲಿ ಮೊಮ್ಮಗಳು ದಿವ್ಯ ಎದ್ದು ಬಂದು ತೊಡೆಗಾತು ಕೂತಳು. ಏನಮ್ಮಮ್ಮಾ ತುಂಬ ಯೋಚ್ನೆ.. ಎಲೆಕ್ಷನ್ ನಿಲ್ಲನಾ ಅಂದ್ಕತ್ತ ಇದ್ಯ? ಅಂತ ತನ್ನ ಎಂದಿನ ತುಂಟು ನಗೆ ಬೀರಿದಳು. ಹುಚ್ಚುಡುಗಿ. ೨೪ ತುಂಬಿ, ಜವಾಬ್ದಾರಿಯುತ ಕೆಲಸ, ಒಳ್ಳೆಯ ಸಂಬಳ ಇದ್ದರೂ, ಇಲ್ಲಿ ಬಂದು ಕೂತ ಕೂಡಲೆ, ಹಳೆಯ ತುಂಟಿಯಾಗಿ ಬಿಡುತ್ತಾಳೆ. ಎಷ್ಟೇ ನಿಂದು ತಲೆಹರಟೆ ಅಂತ ಬಯ್ಯಬೇಕು ಅಂದ್ಕೋತೀನಿ, ಅಷ್ಟರಲ್ಲೆ ಅಮ್ಮಮ್ಮ ಬಾ ಈ ಕತೆ ಓದಿ ಹೇಳ್ತೀನಿ ಅಂತ ಒಂದು ಚಂದದ ಕತೆ ಹೊಸೆಯುತ್ತಾಳೆ. ನನ್ನನ್ನ ಭಾವಲೋಕದ ದೋಣಿಯಲ್ಲಿ ಸುತ್ತಾಡಿಸಿ, ಅವರ ನೆನಪಿನ ತೀರದಲ್ಲಿ ಇಳಿಸಿ, ತಾನು ತನ್ನ ಯೋಚನೆಯ ಅಲೆಗಳಲ್ಲಿ ಮುಳುಗಿ ತೇಲುತ್ತಾಳೆ. ಅವಳ ಕತೆಗಳು ಖಾಲಿಯಾದ ಸಂಜೆಗಳಲ್ಲಿ, ನಿನ್ನ ಕತೆ ಹೇಳು ಅಂತ ಕೂರುತ್ತಾಳೆ. ಇವಳಿಗೆ ಎಷ್ಟು ಕತೆ ಹೇಳಲೂ ನಂಗೆ ಇಷ್ಟವೇ. ನಾನು ಕಣ್ಣು ಮುಚ್ಚಿ ಕನವರಿಸುವುದನ್ನೆಲ್ಲ ತಾನೂ ಕೇಳಿಸಿಕೊಳ್ಳುತ್ತಾ, ನಾನು ಎಂದೋ ಸರಿದು ಬಂದ ದಾರಿಯಲ್ಲಿ, ತನ್ನ ಅರಳು ಕಣ್ಗಳ ಹೊಳಪು ಬೀರುತ್ತಾ, ಅಲ್ಲಿಯ ಮೌನವನ್ನ ಹಾಗೇ ಹಿಡಿದಿಡುತ್ತಾ, ನನ್ನ ಲಹರಿಯ ಜೊತೆಜೊತೆಗೂ ಸಾಗುತ್ತಾಳೆ.


ಇವತ್ತು ಅವರು ಕಂಡಿದ್ದನ್ನ ಹೇಳಲಾ ಬ್ಯಾಡವಾ ಅಂತ ಯೋಚನೆ ಮಾಡಿದೆ. ಅಷ್ಟರಲ್ಲಿ ಅವಳು ಅಮ್ಮಮ್ಮ ಇವತ್ತು ಬೇಗ ಹೋಗವು ನಾನು ಆಫೀಸಿಗೆ ಅಂತ ಎದ್ದು ಸ್ನಾನಕ್ಕೆ ಹೋದಳು. ಸಂಜೆಗೆ ನೋಡೋಣ..


ತುಂಬಿದ ಮನೆ, ಮೂವರು ಮಕ್ಕಳ ಸಂಸಾರ, ಮೊಮ್ಮಕ್ಕಳು.. ಎಲ್ಲರೂ ಆಫೀಸ್, ಕಾಲೇಜು, ಶಾಲೆ, ನರ್ಸರಿ ಅಂತ ಹೋಗಿ ಆಯಿತು. ಪುಟ್ಟ ಮೊಮ್ಮಗಳು ಧನ್ಯ ಕಣ್ಣಿಗೆ ಬರುವ ಜೊಂಪೆಗೂದಲನ್ನು ತಳ್ಳುತ್ತ ಟಾಟಾ ಮಾಡಿ ನರ್ಸರಿಗೆ ಹೋದ ಮೇಲೆ ಮನೆಯಲ್ಲಿ ತಾನು ಮತ್ತು ಕೊನೆಯ ಸೊಸೆ ಗೀತ ಇಬ್ಬರೆ. ಅವಳು ತನ್ನ ಪಾಡಿಗೆ ಅಡಿಗೆ, ಹೊಲಿಗೆ, ಕೊಳಲು ಕಲಿಯುವುದು ಎಲ್ಲ ಮಾಡುತ್ತಿರುತ್ತಾಳೆ. ಮಧ್ಯೆ ಇಬ್ಬರೂ ಕೂತು ಹೊಸರುಚಿ ನೋಡುತ್ತೇವೆ ಟೀವಿಯಲ್ಲಿ. ಇವತ್ತು ಅದೇನೋ ಕರೆಂಟಿಲ್ಲ. ಹಾಗೇ ಆರಾಮ ಕುರ್ಚಿಯಲ್ಲೊರಗಿದೆ. ಕಣ್ಣು ಮುಚ್ಚಿದ ಕೂಡಲೆ ಅವರು ಎದುರಿಗೆ ಬರಬೇಕಾ. ಎಲ್ಲಿದ್ದರೋ ಇಷ್ಟು ಹೊತ್ತು. ಅಲ್ಲಿ ಕಂಪೌಂಡ್ ಹೊರಗಿನ ಹೊಂಗೆ ಮರದ ನೆರಳಲ್ಲಿದ್ದರೇನೋ ಖಾದಿ ಟೋಪಿಯ ಮೇಲೆ ನಾಲ್ಕಾರು ಹೂಗಳು..


ಪೇಪರ್ ಓದಲು ಹೋಗಿ, ಓದಲು ಕಲಿತಿದ್ದಕ್ಕೇ ಬೇಜಾರೇನೇ ಅನ್ನುತ್ತ ತೂಗುಮಂಚದ ಮೇಲೆ ಕೂತು ನಕ್ಕರು. ಹಳೆಯ ನೆನಪುಗಳ ಮಧುರ ಎಳೆಯೊಂದು ಬಿಚ್ಚಿಕೊಂಡಿತು. ಅಮ್ಮನಿಲ್ಲದೆ ಸೋದರ ಮಾವನ ಮನೆಯಲ್ಲಿ ಕೆಲಸದ ಹೊತ್ತಿಗೆ ಕೆಲಸ ಆಟದ ಹೊತ್ತಿಗೆ ಆಟವಾಡಿಕೊಂಡಿದ್ದ ಎಳೆಹುಡುಗಿಯನ್ನು ಈ ಚಂದಗಂಭೀರ ಶ್ರೀನಿವಾಸ ಮದುವೆಯಾಗಿ ಹಳ್ಳಿಯಿಂದ ತಾಳಗುಪ್ಪೆ ಪೇಟೆಗೆ ಕರೆದುತಂದಿದ್ದರು.


ಅಮ್ಮನ ಛಾಪು ಮನದ ಮೆತ್ತೆಯಲ್ಲಿ ಊರುವ ಮೊದಲೆ ಅಮ್ಮ ಸತ್ತೋಗಿದ್ದಳು ತನಗೆ. ಅಪ್ಪನ ಛಾಪಿರಲಿ, ನೆನಪು ಕೂಡ ಇಲ್ಲ. ಇಬ್ಬರು ಅಕ್ಕಂದಿರು,ಒಬ್ಬ ಅಣ್ಣನ ನಂತರ ಹುಟ್ಟಿದ ಹುಡುಗಿ.. ಊರು ಹೊಸಬಾಳೆಯಂತೆ.. ಹೊಸ ಬಾಳು, ಹೊಸತರದ ಬಾಳು, ಹೊಸದಾಗಿ ಬಾಳು ಅಂತ ಆ ಹೆಸರಿಟ್ಟರಾ? ಯೋಚನೆ ಮಾಡಿದರೆ ಕಚಗುಳಿಯಾಗುತ್ತದೆ. ಚಿಕ್ಕಂದಿನಲ್ಲಿ ಊರಿನ ಹೆಸರು ಕೇಳಿದ ಮಾತ್ರಕ್ಕೆ ಅಳು ಬಂದು ಬಿಡುತ್ತಿತ್ತು, ಮದುವೆಯಾದ ಮೇಲೆ ಒಂದು ಮಧುರ ನೆನಪು, ಆಮೇಲಾಮೇಲೆ ಕತ್ತಲಲ್ಲಿ ದೂರದಲಿ ಮಿನುಗುವ ಚುಕ್ಕಿಯ ಅನುಭೂತಿ, ಈಗ ಇಳಿವಯಸ್ಸಿನಲ್ಲಿ "ನಮ್ಮದೇನಿದೆ, ಎಲ್ಲ ಇಷ್ಟೆ" ಅಂತ ಬುದ್ಧನ ಹಾದಿ ತುಳಿವಾಗ ಊರ ಹೆಸರು ಹುಡುಗಾಟಕ್ಕೆ ಹಚ್ಚುತ್ತದೆ. ಹೆಸರಲ್ಲೇನಿದೆ ಅನಿಸುತ್ತದೆ.

ಅಮ್ಮ ಸತ್ತಾಗ ಅಕ್ಕಂದಿರಿಬ್ಬರಿಗೆ ಮದುವೆಯಾಗಿತ್ತು. ತನಗೋ ೭ ರಿಂದ ಎಂಟಂತೆ.ಸೋದರತ್ತೆ ಮಾವ ಅಚ್ಛೆಯಿಂದ ಕರೆದುಕೊಂಡು ಹೋಗಿ ಸಾಕಿದ್ದರು. ಅವರ ಮನೆಮಗಳಂತೆ ಬೆಳೆದೆ. ಸಿರಿವಂತಿಕೆಯ ಬದುಕಲ್ಲ. ಹಳ್ಳಿಮನೆಯ ಪುಟ್ಟ ಆವರಣದ ಬೆಚ್ಚನೆಯ ಬದುಕು. ಮನೆಕೆಲಸ ಒಂದೊಂದಾಗಿ ಕಲಿತೆ. ಸಮಯವಿದ್ದಾಗ ಅತ್ತೆಯ ಮತ್ತು ಪಕ್ಕದ ಮನೆಗಳ ಓರಗೆಯ ಮಕ್ಕಳೊಂದಿಗೆ ಆಟ. ಪಕ್ಕದ ಮನೆಯ ಲಲಿತೆಯ ಅಮ್ಮನ ಹತ್ತಿರ ಘಮಘಮ ಎನ್ನುವ ಪೌಡರಿತ್ತು. ಆಗೆಲ್ಲ ಎಲ್ಲರ ಮನೆಯಲ್ಲೂ ಸೋಪು, ಪೇಸ್ಟು,ಪೌಡರ್ ಇತ್ಯಾದಿ ಇರುತ್ತಿರಲಿಲ್ಲ. ಅಪರೂಪದ ಸ್ವರ್ಗದಿಂದ ಜಾರಿಬಿದ್ದ ವಸ್ತುಗಳಂತೆ ಅವು ನಮಗೆ. ನನಗೆ ಅದನ್ನು ಹಚ್ಚಿಕೊಂಡು ಪರಿಮಳ ಮೂಸುವಾಸೆ. ಅದೂ ಬಿಳೀಕಿದ್ದಿದ್ದರಿಂದ ಹಚ್ಚಿಕೊಂಡು ಬೆಳ್ಳಗೆ ಹೊಳೆಯುವಾಸೆ. ಯಾರನ್ನು ಕೇಳಲಿ. ದೊಡ್ಡವಳಲ್ಲವಾದರೂ, ತಾಯಿಯಿಲ್ಲದ ಹುಡುಗಿಯನ್ನು ಇವರು ಸಾಕಿಕೊಂಡಿರುವುದರ ಜವಾಬ್ದಾರಿಯ ಪೂರ್ಣ ಅರಿವಿತ್ತು. ಹೊಟ್ಟೆ ತುಂಬ ಬಡಿಸುತ್ತಾರೆ, ಲಂಗ ಹರಿದರೆ ಬೇರೆ ತರುತ್ತಾರೆ, ಆದರೆ ಪೌಡರ್ ಬೇಕೆಂದು ಹೇಗೆ ಕೇಳಲಿ? ಅತ್ತೆಯೇ ಹಚ್ಚುವುದಿಲ್ಲ! ಈ ಶೋಕಿ ಬೇರೆ ಅಂತ ಹುಲಿಮೀಸೆಯ ಮಾವ ಬಯ್ದರೆ ಅವಮಾಆಆನ. ಏನು ಮಾಡಲಿ. ಕೂತರೂ ನಿಂತರೂ ಕಣ್ಣ ಮುಂದೆ, ಚಿತ್ರಚಿತ್ರದ ತಗಡಿನ ಡಬ್ಬಿ ಮತ್ತು ಆ ಪರಿಮಳ ಭರಿತ ಬಿಳೀ ಪುಡಿ.
ಅವತ್ತು ರಾತ್ರೆಯೂ ಮಲಗುವಾಗ ಅತ್ತೆಯೊಡನೆ ಕೇಳಲಾಗದ ನಿರಾಸೆ, ಹೊದಿಕೆಯನ್ನು ಹೊದ್ದೊಡನೆ ಕಣ್ಣೀರಾಗಿ ಇಳಿಯಿತು. ಅಮ್ಮನನ್ನು ಕನವರಿಸಿದೆ. - ಈಗ ನಗು ಬರುತ್ತದೆ. ಅತ್ತೆಯಾದರೂ ಅಮ್ಮನಿಲ್ಲದವಳು ಎಂಬ ಕನಿಕರದಿಂದ ಹೇಗಾದ್ರು ಒಂಚೂರು ಪೌಡರ್ ಕೊಡಿಸ್ತಿದ್ದಳೇನೋ, ಅಮ್ಮ ಈ ಶೋಕಿ ಆಲೋಚನೆಯನ್ನು ಸಹಿಸದೆ ನಾಲ್ಕು ಗುದ್ದುತ್ತಿದ್ದಳು ಮಗಳೆಂಬ ಸಲಿಗೆಯಿಂದ. ಆದರೂ ದುಃಖವೆಂದರೆ ಅದಕ್ಕೆ ಅಮ್ಮನ ಮಡಿಲೇ ಬೇಕು. ಅವಳಿಲ್ಲದಿದ್ದರೆ ಅವಳ ನೆನಪೂ ಸಾಕು.

ಬೆಳಿಗ್ಗೆ ಎದ್ದು ಬಚ್ಚಲೊಲೆಯ ಬೂದಿ ಬಳಿದು ಹಿತ್ತಲ ಕೊನೆಗೆ ಸುರಿದೆ. ಬಚ್ಚಲೊಲೆಯ ಉರಿ ಹಿರಿದಾಗುವಷ್ಟರಲ್ಲಿ ಅತ್ತೆ ಎದ್ದಿದ್ದಳು. ನಾನು ಮುಖ ತೊಳೆದು ಎಂದಿನಂತೆ, ಹಿತ್ತಲ ಸಂಪಿಗೆ ಮರದಡಿ ಹೋದೆ. ಮರದ ತುಂಬ ಘಮಘಮ ಹೂಗಳು.. ಆಹ್.. ಉಪಾಯ ಹೊಳೆದು ಬಿಟ್ಟಿತು. ದಿನಾ ಪೂಜೆಯಾದ ಮೇಲೆ ಎಸೆಯುವ ಸಂಪಿಗೆ ಹೂಗಳನ್ನೆಲ್ಲ ಒಣಗಿಸಿ, ಪುಡಿ ಮಾಡಿ, ಆಗಲೇ ನುಣ್ಣಗಾಗಿರುವ ಬೂದಿಯನ್ನು ಮತ್ತು ನುಣ್ಣಗಾಗಿಸಿ, ಅದಕ್ಕೆ ಸೇರಿಸಿಬಿಟ್ಟರೆ ಘಮಘಮ ಪೌಡರ್ ಆಗತ್ತೆ. ಯಾರನ್ನೂ ಕೇಳುವ ಹಂಗೇ ಇಲ್ಲ.. ನನ್ನ ಬುದ್ಧಿವಂತಿಕೆಗೆ ನನಗೇ ಖುಷಿಯಾಯಿತು. ನಾಲ್ಕು ದಿನದಲ್ಲಿ ಪೌಡರ್ ಕೂಡ ತಯಾರಾಯಿತು. ಅತ್ತೆ ಪಕ್ಕದ ಮನೆಗೆ ಮಾತಿಗೆ ಹೋದ ಸಮಯ ನೋಡಿ, ಚೂರೇ ಚೂರು ಪೌಡರ್ ನ ಹಿಡಿದು, ಮಾವ ಊಟ ಮಾಡುವ ಪಳಪಳ ಹೊಳೆಯುವ ಸ್ಟೀಲ್ ತಟ್ಟೆಯಲ್ಲಿ ಮುಖ ನೋಡಿಕೊಳ್ಳುತ್ತಾ ಸವರತೊಡಗಿದೆ. ಓಹ್ ಬೆಳ್ಳಗಾಗಿಬಿಟ್ಟಿದೆ! ಸಂಪಿಗೆಯ ಪರಿಮಳ ಕೂಡಾ! ಬೂದಿಯ ಹಸಿ ವಾಸನೆ ಚೂರು ಇದ್ರೂ ಆ ಸಂಭ್ರಮದಲ್ಲಿ ಗೊತ್ತಾಗಲಿಲ್ಲ.


ನೋಡುತ್ತ ನಿಂತವಳಿಗೆ - ಕನ್ನಡಿ ಮುಂದಷ್ಟು ಹೊತ್ತೂ ಬರೆಯದಿರುವ ಕವನ... - ಮಾವ ಹಿಂದೆ ಬಂದು ನಿಂತಿದ್ದು ಗೊತ್ತಾಗಲಿಲ್ಲ. ಮೀಸೆಯಂಚಲ್ಲೇ ನಗು ತಡೆ ಹಿಡಿದು ಅತ್ತೆ ಎಲ್ ಹೋದ ಸುಶೀಲಾ ಬೇಗ ಬರಕ್ಕೇಳು ಯಾರೋ ಬರ್ತ ಈಗ ಮನೀಗೆ ಅಂದನು ಮಾವ.. ನಾನು ಸಧ್ಯ ಬಯ್ಯಿಸಿಕೊಳ್ಳಲಿಲ್ವಲ್ಲಾ ಎಂಬ ಸಮಾಧಾನದಲ್ಲಿ, ಪೌಡರ್ ಹಚ್ಚಿಕೊಂಡ ಸಂಭ್ರಮದಲ್ಲಿ ಆಚೆ ಮನೆಗೆ ಓಡಿದೆ ಅತ್ತೆಯನ್ನು ಕರೆತರಲು.


ಮನೆಗೆ ಬಂದು ಮಾವನ ಜೊತೆ ಗುಸುಗುಸು ಮಾತಾಡಿದ ಅತ್ತೆ ಅಡಿಗೆಮನೆಯಲ್ಲಿ ತಯಾರಿಗೆ ತೊಡಗಿದಳು. ನಾನಿನ್ನು ಪರಿಮಳದ ಲೋಕದಿಂದ ನೆಲಕ್ಕಿಳಿದಿರಲಿಲ್ಲ.


ಅವರ್ಯಾರೋ ಬಂದರು. ಚಂದ ಗಂಭೀರ ಮನುಷ್ಯ, ತಲೆಯ ಮೇಲೊಂದು ಬಿಳೀ ಟೋಪಿ. ಮಾವ ಸಡಗರದಿಂದ ಕೂರಿಸಿ, ಅತ್ತೆಯನ್ನು ಕರೆದ. ಶಿರಾ - ಹಾಲು ಸಮಾರಾಧನೆಯಾದ ಮೇಲೆ, ಮಾವ ನನ್ನನ್ನು ಹತ್ತಿರಕ್ಕೆ ಕರೆದ. ಓಡಿ ಹೋದ ನನ್ನನ್ನು ಅವರಿಗೆ ತೋರುತ್ತಾ - ಇದೇ ನಮ್ಮನೆ ಕೂಸು, ನಿಂಗ ನೋಡಲ್ ಬಂದಿದ್ದು, ಅಡ್ಡಿಲ್ಯಾ, ಅಂದ. ನನಗೆ ಭಯ ನನ್ಯಾಕೆ ಇವರು ನೋಡಲು ಬಂದಿದ್ದಾರ್‍ಎಂದು.. ಪಿಳಿ ಪಿಳಿ ಕಣ್ ಬಿಟ್ಟೆ. ಆ ಚಂದದ ಮನುಷ್ಯನ ಕಣ್ಗಳು ಒಮ್ಮೆ ನನ್ನ ನೋಡಿ ಆ ಕಡೆ ಹೊರಳಿದವು. ಮಾತಾಡಾಣ, ಅವಳನ್ನ ಒಳಗೆ ಕಳಿಸಿ ಎಂದರು. ಆಮೇಲೆ ಮಾವ ಅವರ ಜೊತೆ ಗದ್ದೆ ಹಾಳಿಯಲ್ಲಿ ಓಡಾಡುತ್ತ ಏನೇನೋ ಮಾತಾಡಿ, ಅವರನ್ನ ಕೂಡು ದಾರಿಯವರೆಗೆ ಕಳಿಸಿ ಬಂದ. ಮುಖದಲ್ಲಿ ಸಂತೋಷ. ಬಂದವನೆ, ನನ್ನ ಗಲ್ಲ ಸವರಿ, ಸುಶೀಲಾ ನಿನ್ನ ಅದೃಷ್ಟ ಅಂದ್ಕೋ. ಒಳ್ಳೇ ಜನ, ಒಪ್ಕ್ಯಂಡಾತು, ಮುಂದಿನ ತಿಂಗಳೇ ಮದುವೆ... ನನಗೆ ಗಾಬರಿ, ಅತ್ತೆಗೆ ಖುಷಿ.


ಮದುವೆ ಚಂದವಾಗಿ ಮುಗಿಯಿತು. ಮದುವೆಯಾಗಿ ಕೆಲದಿವಸ ನಾನು ಮಾವನ ಮನೆಯಲ್ಲೆ ಇದ್ದೆ. ಅತ್ತೆ ಅಡುಗೆಯ ಹಲಕೆಲ ವಿಷಯಗಳನ್ನು ಹೇಳಿಕೊಟ್ಟಳು. ಶ್ರಾವಣದೊಂದು ಮಧ್ಯಾಹ್ನ ಮೋಡಗಳೊಡನೆ ಆಡುವ ಸೂರ್ಯನ ಕಣ್ಣಾಮುಚ್ಚಾಲೆ ನೋಡುತ್ತ ಕೂತಿದ್ದೆ. ಅವರು ಬಂದರು. ನೋಡಿ ನಾಚಿಕೆ. ಆದ್ರೂ ಕಾಲ್ ತೊಳೆಯಲು ನೀರಿಟ್ಟು ಒಳಗೋಡಿದೆ, ಅತ್ತೇ ಅವರು ಬಂದಿದ್ದಾರ್‍ಎ ಅನ್ನುತ್ತ. ಒಂದೆರಡು ದಿನ ಅಲ್ಲಿ ಉಳಿದರು. ಅತ್ತೆ ನನಗೇ ಬಡಿಸಲು ಹೇಳಿದಳು. ಸ್ನಾನಕ್ಕೆ ನೀರು ತೋಡಲೂ.. ಒಂದು ಮಧ್ಯಾಹ್ನ ಊಟವಾದ ಮೇಲೆ, ಅತ್ತೆ ಕಾಫಿ ಕೊಟ್ಟು ಅವರಿಗೆ ಕೊಡಲು ಹೇಳಿದಳು. ತಗೊಂಡು ಹೋಗಿ ಅವರ ಕೋಣೆಯಲ್ಲಿ ನೋಡಿದರೆ ಅವರಿಗೆ ಜೋರು ನಿದ್ದೆ. ಹಾಗೇ ತಿರುಗೆ ಬಂದೆ. ಅತ್ತೆಗೆ ನಗು, ಅವರನ್ನು ಮೈ ಮುಟ್ಟಿ ಎಬ್ಬಿಸಿ ಕೊಡು ಅಂತ ಮತ್ತೆ ಕಳಿಸಿದಳು. ನನಗೋ ಮೈಯೆಲ್ಲ ಬೆವರು. ಅಲ್ಲಿ ಹೋಗಿ ನೋಡಿದರೆ ಸಧ್ಯ ಅವರೆದ್ದು ಮಂಚದ ಮೇಲೆ ಕೂತಿದ್ದರು. ನಿಧಾನವಾಗಿ ಹೋಗಿ ಅಲ್ಲಿದ್ದ ಸ್ಟೂಲಿನ ಮೇಲೆ ಕಾಫಿ ಲೋಟ ಇಟ್ಟೆ. ಮತ್ತೆ ತಿರುಗಿ ಓಡಬೇಕು ಅಷ್ಟರಲ್ಲಿ ಅವರು ಕರೆದರು. ಇರು ಸುಶೀಲಾ, ಲೋಟ ಕೊಡುತ್ತೇನೆ ಅಂತ, ತಲೆ ತಗ್ಗಿಸಿ ನಿಂತೆ. ಲೋಟ ತಗೊಂಡು ಒಂದೇ ಹಾರಿಗೆ ಮೆತ್ತಿ ಮೆಟ್ಟಲಿಳಿದು ಓಡಿದೆ.


ಮರುದಿನ ಅವರ ಜೊತೆಯಲ್ಲಿ ಅವರ ಮನೆಗೆ ಹೋಗಬೇಕಿತ್ತು. ಬೆಳಿಗ್ಗೆ ಎದ್ದ ಕೂಡಲೆ ಅಮ್ಮ ನೆನಪಾದಳು. ದುಃಖವಾಯಿತು. ಯಾರಿಗೆ ಹೇಳುವುದು.. ಸ್ನಾನ ಮಾಡಿ ಸೀರೆಯುಟ್ಟು ಕುಳಿತೆ. ನಮಸ್ಕರಿಸಿ ಹೊರಡುವಾಗ ಮಾವ - ಇನ್ಮುಂದೆ ಇವರೆ ನಿನಗೆ ಎಲ್ಲ ಸುಶೀಲಾ, ಸರಿಯಾಗಿ ನಡೆದುಕೋ, ಅವರ ಮನಸ್ಸನ್ನ ನೋಯಿಸಬೇಡ ಎಂದನು. ಅತ್ತೆಯ ಕಡೆ ನೋಡಿದೆ. ಕಂಬನಿತುಂಬಿದ ಅವಳ ಕಣ್ಣು ನೋಡಿ ನನಗೂ ದುಃಖ ತಡೆಯಲಾಗುತ್ತಿಲ್ಲ. ಆದ್ರೂ ಹೇಗೋ ಮೂಗೇರಿಸುತ್ತ, ನನ್ನ ಪುಟ್ಟ ಚೀಲವನ್ನ ಹೊಟ್ಟೆಗೆ ಅಮುಕಿ, ಅವರ ಹಿಂದೆ ಹೋಗಿಬಿಟ್ಟೆ.


ಚಿಕ್ಕ ಹಳ್ಳಿಯಿಂದ ತಾಳಗುಪ್ಪಾದಂತಹ ದೊಡ್ಡ ಊರಿಗೆ ಬಂದ ಒಂದೆರಡು ದಿನ, ಮನೆ ಬಾಗಿಲ ಸಂದಿಯಿಂದ ರಸ್ತೆಯಲ್ಲಿ ಓಡಾಡುವ ವಾಹನ, ಜನಗಳನ್ನು ನೋಡುವುದೇ ಒಂದು ಕೆಲಸವಾಗಿತ್ತು. ಅವರದ್ದು ಮನೆಗೇ ಅಂಟಿಕೊಂಡಿದ್ದ ಕಿರಾಣಿ ಅಂಗಡಿ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಂಗಡಿಯಲ್ಲೆ.ಮಧ್ಯಾಹ್ನ ಊಟ ಮತ್ತು ನಿದ್ದೆಗೆ ಸ್ವಲ್ಪ ಹೊತ್ತು ಬಾಗಿಲು ಹಾಕಿ ಒಳಗೆ ಬರುತ್ತಿದ್ದರು. ಮೊದಲು ಕೆಲವು ದಿನ ನಾನು ಮಾಡಿದ ಅಡುಗೆಯಲ್ಲಿ ಉಪ್ಪು,ಕಾರ,ಹುಳಿ ಎಲ್ಲ ಹೆಚ್ಚುಕಡಿಮೆಯಾಗಿರುತ್ತಿತ್ತು. ಒಬ್ಬಳೇ ಮಾಡಿ ಗೊತ್ತಿಲ್ಲದ ೧೫ರ ಪೋರಿ ನಾನಾಗ. ಅವರು ಅನುಸರಿಸಿಕೊಂಡು ಹೋದರು. ಆ ಮೊದಲವಾರದಲ್ಲಿ ಉಪ್ಪಿನಕಾಯಲ್ಲೇ ಊಟವಾಯಿತು ಅಂದರೇ ಸರಿ.ನಿಧಾನವಾಗಿ ಅಡಿಗೆ ಕಲಿತೆ.ಅಡುಗೆ ಮಾಡುತ್ತ ಮಾಡುತ್ತ ಕೈ ಹದ ಕಂಡುಕೊಂಡಿತು. ನನ್ನವರ ಅಣ್ಣನ ಮಕ್ಕಳು ಇಬ್ಬರು, ತಾಳಗುಪ್ಪದಲ್ಲೇ ಓದಲು ಬಂದರು. ಈಗ ಜೊತೆಗೆ ಮಾತಿಗೆ ಜನ ಸಿಕ್ಕರು.


ಒಂದಿನ ಮಧ್ಯಾಹ್ನ ನನ್ನ ಊಟ ಮುಗಿದು ಗೋಮೆ ಮಾಡುವಷ್ಟರಲ್ಲಿ ಎದ್ದ ಅವರು, ಕೈಗೆ ಒಂದು ಪುಸ್ತಕ ಕೊಟ್ಟು ಬಿಡುವಾದಾಗ ಕೂತು ಇದನ್ನ ಓದು, ಒಳ್ಳೆಯದು ಅಂದರು. ಪುಸ್ತಕ ಕೈಯಲ್ಲಿ ಇಟ್ಟುಕೊಂಡ ನಾನು ಗಲಿಬಿಲಿಯಾಗಿ ಅವರನ್ನು ನೋಡಿದೆ. ಗಮನಿಸಿದ ಅವರಿಗೆ ಗೊತ್ತಾಯಿತು ನನಗೆ ಓದು ಬರುವುದಿಲ್ಲ ಅಂತ. ಸಂಜೆ ಮಕ್ಕಳು ಅಭ್ಯಾಸ ಮಾಡುವಾಗ ನೀನೂ ಕುಳಿತು ಅಕ್ಷರ ಕಲಿ ಅಂದರು. ಅಯ್ಯೋ ನಾನೇನು ಓದು-ಬರಾ ಕಲಿತು ಮಂತ್ರಿಯಾಗಬೇಕಾ ಅದೆಲ್ಲ ನಂಗ್ಯಾಕೆ ಅಂದುಬಿಟ್ಟೆ. ಅವರಿಗೆ ನಗು, ಓದು ಬರಹದಿಂದ ಬೇರೆ ಉಪಯೋಗವೂ ಇದೆ. ಏನೂ ಇಲ್ಲದ ಮನುಷ್ಯನ ಜೊತೆಗೇ ನಡೆದು ಬರುವುದು ಕಲಿತ ಓದು ಮಾತ್ರ. ನೀನೂ ಕಲಿ. ಒಳ್ಳೆಯದು ಅಂದರು. ಅರೆ ಮನಸ್ಸಿನಿಂದಲೇ ನನ್ನ ವಿದ್ಯಾಭ್ಯಾಸ ಶುರುವಾಯಿತು.ಸಂಜೆ ಮಕ್ಕಳು ಒಂದು ಸ್ಲೇಟಿನಲ್ಲಿ ಅ ಆ ಬರೆದು ತಿದ್ದಿಸತೊಡಗಿದರು. ಮಕ್ಕಳು ಓದುವಾಗ ಪಕ್ಕದಲ್ಲೇ ಕೂತು ಚಿತ್ರ ನೋಡತೊಡಗಿದೆ. ಮೊದಮೊದಲು ರಗಳೆಯೆಂದು ಕೊಂಡಿದ್ದು ಬರಬರುತ್ತಾ ಇಷ್ಟವಾಗತೊಡಗಿತು. ಅವರು ದಿನವೂ, ರಾತ್ರಿ ಮಲಗುವ ಮೊದಲು ಕಾಲು ಗಂಟೆ ಅವತ್ತು ನನಗೆ ಕೊಟ್ಟಿದ್ದ ಪುಸ್ತಕ ಓದಿ ಹೇಳುತ್ತಿದ್ದರು. ಅದು ಗಾಂಧೀ ಚರಿತ್ರೆ. ಅವರ ಬಿಳಿ ಟೋಪಿಗೆ ಈಗ ಹಲವು ಅರ್ಥ ಹೊಳೆಯತೊಡಗಿದವು.


ಆತಾ ನೆನಪು ಮಾಡ್ ಕ್ಯಂಡಿದ್ದು.. - ನಕ್ಕರು ತೂಗುಮಂಚದ ಮೇಲೆ ಕುಳಿತ ನನ್ನವರು. ನನಗೂ ನಗು, ಅವತ್ತಿನ ಎಡಬಿಡಂಗಿ ಸುಶೀಲಳನ್ನು ನೆನಪಿಸಿಕೊಂಡು ನನಗೂ ನಗು ಬಂತು. ಅಷ್ಟರಲ್ಲಿ ಹೋದ ಕರೆಂಟು ಬಂತೆಂದು ಕಾಣುತ್ತೆ. ಫ್ಯಾನ್ ತಿರುಗತೊಡಗಿತು. ಅವರು ಅಲ್ಲೇ ಕರಗಿದರು.


ಗೀತಾ ಊಟಕ್ಕೆ ತಯಾರಿ ನಡೆಸಿದಳು. ನುಗ್ಗೆಸೊಪ್ಪಿನ ಪಲ್ಯ, ಕೊಡಸಿನ ಹೂ ತಂಬುಳಿ, ಕಚ್ಚಿಕೊಳ್ಳಲು ಮಾವಿನಮಿಡಿ ಉಪ್ಪಿನಕಾಯಿ ಊಟ ರುಚಿಯಾಗಿತ್ತು. ಇವತ್ತು ರಾತ್ರೆ ಗೀತಾ,ಮಗ ಮೂರ್ತಿ,ಮೊಮ್ಮಗಳು ಧನ್ಯ ಒಂದುವಾರದ ಮಟ್ಟಿಗೆ ಊರಿಗೆ ಹೊರಡುವವರಿದ್ದರು. ಗೀತಳ ಊರು ನೇಗಿಲೋಣಿ, ಪಶ್ಚಿಮ ಘಟ್ಟಗಳ ತಪ್ಪಲಿನ ಚಂದದ ಹಳ್ಳಿ. ಹತ್ತಿರದಲ್ಲೇ ಹರಿಯುವ ಶರಾವತಿ.. ಅಲ್ಲಿಯ ಮಳೆಗಾಲ ತುಂಬ ಚಂದ. ಮೊಮ್ಮಗಳು ಹುಟ್ಟಿದ್ದು ಅಂತಹ ಒಂದು ಮಳೆಗಾಲದಲ್ಲೆ. ಇಲ್ಲೆ ಬೆಂಗಳೂರಲ್ಲಿ ಹುಟ್ಟಿದ ಅವಳನ್ನು ಅಮ್ಮನ ಜೊತೆಗೆ ಬೆಚ್ಚಗೆ ಅವರಮ್ಮನ ಮನೆಗೆ, ಮಗ ಮೂರ್ತಿಯ ಜೊತೆ ಒಂದು ಜಡಿಮಳೆಯ ದಿನವೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದೆವು. ಒಂದು ೮-೯ ಗಂಟೆಯ ಹಾದಿ. ಪ್ರಯಾಣದ ಜೂಗರಿಕೆಯಿಂದ ಕಣ್ತೆಗೆದು ಕಿಟಕಿಯಿಂದಾಚೆ ನೋಡಿದಾಗೆಲ್ಲ ಕಂಡ ನೋಟ ಹಚ್ಚಗಿತ್ತು. ಮಲೆನಾಡಿನ ಹಳ್ಳಿಮನೆಯಲ್ಲಿ ನಾವೂ ನಾಲ್ಕು ದಿನ ಇದ್ದು ಬಂದಿದ್ದೆವು.


ಊಟ ಮುಗಿಸಿದ ಗೀತ, ರಾತ್ರಿಯ ಪ್ರಯಾಣಕ್ಕೆ ಸವರಿಸಲು ಹೊರಟರೆ ನಾನು ನಮ್ಮನೆಯ ಪುಟ್ಟ ನಾಯಿ ಪಿಟ್ಕಿಯ ಊಟೋಪಚಾರ ಮಾಡಿದೆ. ಈ ನಾಯಿಯೇ ಪುಟ್ಟಗೆ. ಅದೆಂತದೋ ಡ್ಯಾಶುಂಡ್ ಅಂತ ಮೊಮ್ಮಗಳು ದಿವ್ಯಾ ಹೇಳುತ್ತಾಳೆ, ನಂಗೆ ಅದನ್ನು ಸರಿಯಾಗಿ ಹೇಳಲು ಬರೋಲ್ಲ. ಅದಕ್ಕೆ ನಾಲ್ಕು ಇಲಿಮರಿಯಂತಹ ಮರಿಗಳು. ಕಾದೂ ಕಾದೂ ಮಳೆ ಶುರುವಾದ ಮೇಲೆ ಮರಿ ಹಾಕ್ಕೊಂಡಿದೆ ಮಳ್ಳು. ಇನ್ನೂ ಎರಡೇ ದಿನಗಳಾಗಿವೆ. ಹತ್ತಿರ ಹೋಗಲು ನನ್ನನ್ನು ಮತ್ತು ದಿವ್ಯಳನ್ನು ಮಾತ್ರ ಬಿಡುತ್ತದೆ. ಪುಟ್ಟ ಕಪ್ಪು ನಾಯಿ, ಮುದ್ದು ಮಾತಾಡಿಸಿ ತಲೆಸವರಿ ಕರೆದು ಊಟವಿಡದೆ, ಹಾಗೇ ತಟ್ಟೆಯಲ್ಲಿಟ್ಟರೆ ಊಟವೇ ಮಾಡುವುದಿಲ್ಲ. ಮಗುವಿನಂತೆ ಸ್ವಭಾವ. ದಿವ್ಯ ಬಂದು ಗೇಟು ತೆಗೆದರೆ ಹಿತ್ತಲ ಗೂಡಿನಲ್ಲಿ ಇರುವ ಇದಕ್ಕೆ ಗೊತ್ತಾಗಿ ಕುಂಯಿಗುಡುತ್ತದೆ. ಅವಳು ಬಂದವಳೆ ಹತ್ತಿರಹೋಗಿ ಮುದ್ದಾಡದೆ ಜಗುಲಿಯಲ್ಲಿ ಕೂತರೆ, ಅವಳು ಅಲ್ಲಿ ಹೋಗುವವರೆಗೂ ಕುಂಯ್ ಕುಂಯ್ ರಾಗ. ತುಂಬ ದಿನಗಳು ನೋಡದೆ ಇದ್ದರೆ ಮನುಷ್ಯರೇ ಮರೆತು ಹೋಗುತ್ತಾರೆ. ನಾಯಿ ಮಾತ್ರ ಹಾಗಲ್ಲ. ಎಂದೋ ಯಾರೋ ತೋರಿಸಿದ ಆಪ್ತತೆಗೆ - ಅದು ಅನ್ನ ಹಾಕಲೇ ಬೇಕೆಂದಿಲ್ಲ, ಅದು ಹತ್ತಿರ ಬಂದಾಗ ತಲೆ ಸವರಿ, ಕತ್ತಿನ ಕೆಳಗೆ ನೇವರಿಸಿದರೂ ಸಾಕು - ಇನ್ನೆಂದೂ ಋಣಿಯಾಗಿರುತ್ತದೆ. ಮತ್ತೆ ಬಂದಾಗ ಬಾಲವಲ್ಲಾಡಿಸುತ್ತದೆ.


ಇತ್ತೀಚೆಗೆ ನಾಯಿಗಳು ಉಗ್ರಗೊಂಡು ಪುಟ್ಟ ಮಕ್ಕಳನ್ನ ಕಚ್ಚುವ, ಕೊಲ್ಲುವ ಸುದ್ದಿ ಎಲ್ಲೆಲ್ಲೂ.. ಮನಸ್ಸು ಕುದಿಯುತ್ತದೆ. ಮಕ್ಕಳ ಕನ್ನಡ ಪುಸ್ತಕದಲ್ಲಿ ನಾಯಿ ಮನುಷ್ಯನ ಪ್ರಾಮಾಣಿಕ ಗೆಳೆಯ ಅಂತ ಓದಿದ್ದು ಸುಳ್ಳು ಮಾಡುವ ಮಟ್ಟಿಗೆ ನಮ್ಮ ನಾಗರಿಕತೆ ಮುಂದುವರೆಯಿತಲ್ಲಾ ಅಂತ. ನಮಗೆ ತಿನ್ನಬೇಕು ಅಂತ ಮಾತ್ರ ಗೊತ್ತು. ತಿಂದು ಕೈ ತೊಳೆಯುವಾಗ ಹೊಟ್ಟೆ ತುಂಬಿರುತ್ತದೆ. ಕಸ ಒಟ್ಟು ಮಾಡಿ ಬಿಸಾಕಲು ಕಾಲು ಕೈ ಕೇಳುವುದಿಲ್ಲ. ಬೀದಿಯ ತುಂಬಾ ನಾಯಿಗಳು ಓಡಾಡುವಾಗ, ಪ್ರಾಣಿ ದಯಾ ಸಂಘಗಳು ತುಂಬ ಕರುಣೆಯಿಂದ ಅವರವರ ಕಟ್ಟಡದಲ್ಲಿ ನಿದ್ದೆ ಹೋಗಿರುತ್ತಾರೆ. ಲೆಕ್ಕದ ಪುಸ್ತಕದಲ್ಲಿ ಮಾತ್ರ ಪಡೆದ ಫಂಡುಗಳಿಗೆ ಗತಿ ಕಾಣಿಸಿ, ಮನೆಯ ಸಂಪತ್ತು ಮಾಳಿಗೆಯೇರುತ್ತದೆ. ಸರ್ಕಾರಕ್ಕೇನು ಬೇಕು. ನಿನಗರ್ಧ ನನಗರ್ಧ. ಈ ವಿಷಯದಲ್ಲಿ ಮಾತ್ರ ಸಮಾನತೆಯೇ! ಎಲ್ಲ ಶಂಕುಸ್ಥಾಪನೆ ಮಾಡುತ್ತ, ಸಮಾನತೆಯ ಫಂಡು ಬಿಡುಗಡೆ ಮಾಡುತ್ತಾ, ಆಗಾಗ ನೇಣು ಬಿಗಿದುಕೊಳ್ಳುವ ರೈತರ ಮನ ಸಂತೈಸುವ ನಾಲ್ಕು ಮಾತಾಡಿ ಸುಮ್ಮನಾಗಿಬಿಡುವುದು. ನನಗೆ ರಾಜಕಾರಣಿಗಳೆಂದ್ರೆ ಹಿಂಸೆ, ಕಂಡರಾಗುವುದಿಲ್ಲ. ನಮ್ಮ ತಲೆಮಾರಿನ ಸಾವಿರಗಟ್ಟಲೆ ದೇಶಪ್ರೇಮಿಗಳು ಮನೆ,ಮಾರು,ಜೀವ ಬಲಿಗೊಟ್ಟು ಬರೆದಿಟ್ಟ ಸ್ವತಂತ್ರ ಭಾರತದ ಮ್ಯಾಪಿನ ತುಂಬ, ಈ ರಾಜಕೀಯದ ಒರಲೆಗಳು ಎಬ್ಬಿಸಿದ ಹುತ್ತ.


ಪಿಟ್ಕಿ ಊಟ ಮುಗಿಸಿ, ಬಾಲವಲ್ಲಾಡಿಸುತ್ತ, ಕಾಲುಗಳನ್ನು ಸವರಿಕೊಂಡು ಹೋಗಿ ತನ್ನ ಗೂಡಲ್ಲಿ ಮಲಗಿತು. ನಾನು ಕೈತೊಳೆದು, ಮಧ್ಯಾಹ್ನದ ನಿದ್ದೆಗೆ ಅಣಿಯಾದೆ. ಇನ್ನೇನು ಹೊದಿಕೆಯೆಳೆದುಕೊಳ್ಳಬೇಕು ಅಷ್ಟರಲ್ಲಿ - ಚೌಕಚೌಕದ ಹಸಿರುಕಪ್ಪು ಹೊದಿಕೆಯ ನೇಯ್ಗೆಯಿಂದ ಮೂಡಿ ಬಂದರು ಅವರು, ಅಲ್ಲೇ ಮಂಚದ ಮೇಲೆ, ಕಿಟಕಿಗೆ ಆನಿ ಕೂತು, ನಸುನಕ್ಕರು - ಎಷ್ಟು ಹರಿದುಹೋದರೂ ಈ ಹೊದಿಕೆಯನ್ನು ಬಿಡಲ್ಯಲಾ ಇನ್ನೂ ನೀನು ಅಂತ.


ಅವತ್ತು ನೀವು ಹೇಳದೆ ಕೇಳದೆ ಹೊರಟ ಮೇಲೆ, ನಿಮ್ಮ ಸ್ಪರ್ಶದ ನೆನಪಾಗಿ ಉಳಿದಿರುವುದು ಇದೊಂದೆ ನನಗೆ - ಉತ್ತರಿಸುತ್ತ ಅವತ್ತಿನ ನೆನಪು ಒತ್ತರಿಸಿ ಬಂತು.

ಯಾವುದೋ ಹಬ್ಬಕ್ಕೆ ಹೋಗಿದ್ದೆವು ಹೂಗೊಪ್ಪಲಿನ ಅಕ್ಕ-ಭಾವನ ಮನೆಗೆ. ಬೆಳಿಗ್ಗೆ ತಿಂಡಿ ತಿನ್ನುವಾಗ ಉಪ್ಪಿಟ್ಟು ಗಂಟಲಿಗೆ ಸಿಕ್ಕಿದ್ದೆ ನೆವ.. ಹಾಗೇ ಗೋಡೆಗೊರಗಿದರು, ನನಗೆ ಗಾಬರಿ ಅಳು ಎರಡೂ.. ಅಲ್ಲೆ ದೇವರ ಕೋಣೆಯಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದ ಭಾವಯ್ಯನನ್ನು ಕರೆದರೆ.. ಅವರು ಮುಗಿಸಿ ಬಂದೆ ಇರು ಎಂದು ಸನ್ನೆ ಮಾಡಿ, ಪೂರ್ತಿ ಜಪ ಮುಗಿಸಿ ಬರುವಾಗ ಸಾಕಷ್ಟು ಸಮಯ. ಇವರಿಂದ ಸ್ಪಂದನವೇ ಇಲ್ಲ. ಡಾಕ್ಟರನ್ನ ಕರೆಸಿ ನೋಡಿದರೆ, ಇವರು ನಮ್ಮನ್ನೆಲ್ಲ ಬಿಟ್ಟು ದೂರ ಸಾಗಿದ್ದರು. ಕೂಡಲೆ ಮಲಗಿಸಿ ಎದೆ ನೀವಬಾರದಿತ್ತೇನಮ್ಮಾ ಅಂತ ಡಾಕ್ಟರು ಕೇಳಿದ್ದರು. ನನಗೆ ನನ್ನನ್ನೆ ಕೊಂದುಕೊಳ್ಳುವಷ್ಟು ಬೇಜಾರಾಗಿ ಹೋಯಿತು. ನಾನು ಮೂಢೆ, ಇದೂ ಗೊತ್ತಾಗಲಿಲ್ಲವಲ್ಲ, ಸ್ವಲ್ಪ ಓದಿಕೊಂಡಿದ್ದರೆ ತಿಳಿಯುತ್ತಿತ್ತೇನೋ ಅನ್ನಿಸಿತ್ತು. ಅವರು ಸಾಯುತ್ತ ಬಿದ್ದಿದ್ದರೂ ಎದ್ದು ಬರದೆ ಜಪಿಸುತ್ತ ಕೂತ ಭಾವನೆಂದರೆ ಬೇಸರವಾಗಿತ್ತು. ಯಾವ ತಪ್ಪೂ ಮಾಡದೆ ದಿನವೂ ಭಕ್ತಿಯಿಂದ ನಮಿಸಿ, ನಂಬಿಕೊಂಡ ದೇವರು, ನನ್ನ ಬೆನ್ನಿಗ್ಯಾಕೆ ಇರಿದ ಎಂದು ದೇವರ ಮೇಲಿನ ನಂಬಿಕೆ ಹೋಯಿತು. ಮಕ್ಕಳು ಹೇಳುವ ವಿಜ್ಞಾನವಷ್ಟೇ ನಿಜವೆನ್ನಿಸಿತು.


ಈಗಲೂ ಸಿಟ್ಟು ಬರುತ್ತದೆ ನನಗೆ ಯಾರಾದರೂ ದೇವರನ್ನು ಸಮರ್ಥಿಸಿ ಮಾತಾಡಿದರೆ - ಜೊತೆ ಮನುಷ್ಯನ ಸಂಕಟಕ್ಕೆ ಒದಗುವ ಒಳ್ಳೆಯತನವಿಲ್ಲದೆ, ಯಾವ ವೇಷ ಹಾಕಿ ಯಾವ ಜಪ ಮಾಡಿದರೇನು ಫಲ - ಎನ್ನಿಸುತ್ತದೆ. ಅದೇ ದುಮ್ಮಾನ - ಸಿಟ್ಟು ಮುಖದ ಮೇಲೆ ಬಂದಿತ್ತೇನೋ, ಅವರು ಮೃದುವಾಗಿ ನುಡಿದರು. ಇಲ್ಲ ಸುಶೀಲಾ ದೇವರಿದ್ದಾನೆ..

ನಾನೇನೋ ಹೇಳಲು ಬಾಯ್ತೆಗೆದೆ. ತಲೆಯಲ್ಲಾಡಿಸಿದ ಅವರು ಹೇಳಿದರು. ತೇರಿನಲ್ಲಿ, ಲಕ್ಷ ದೀಪೋತ್ಸವಗಳಲ್ಲಿ, ಆರಾಧನೆಯ ಉತ್ಸವಗಳಲ್ಲಿ, ಹೋಮ-ಹವನದ ಧೂಪಗಳಲ್ಲೇ ದೇವರಿದ್ದಾನೆ ಅಂತ ಹೇಳುವುದು ಹೇಗೆ ತಪ್ಪೋ, ಹಾಗೆಯೇ, ನಮ್ಮ ಕಣ್ಣಿಗೆ ಕಾಣುವ, ನಮ್ಮರಿವಿಗೆ ಬಂದ ಕಷ್ಟಗಳಲ್ಲಿ ನೆರವಾಗಲಿಲ್ಲ ಅಂತ ದೇವರಿಲ್ಲ ಅನ್ನುವುದೂ ಅಷ್ಟೇ ತಪ್ಪಲ್ಲವೇನೇ? ಎಷ್ಟು ನೋಯಿಸಿದರೂ-ಮತ್ತೆ ನೇವರಿಸುವ ಅಮ್ಮನಲ್ಲಿ, ಯಾವ ಲಾಭವೂ ಇಲ್ಲದೆಯೂ-ನೆರವಿಗೆ ಬಂದ ಗೆಳೆತನದಲ್ಲಿ, ನಾವು ಅಗೆದು,ತುಳಿದರೂ - ಊಟ ಕೊಡುವ ನೆಲದಮ್ಮನಲ್ಲಿ, ಒಂದು ಚೊಂಬು ನೀರು ಕುಡಿದು - ಮೈತುಂಬ ಹೂಬಿಡುವ ಬಳ್ಳಿಯಲ್ಲಿ, ನಾವು ಹೊಗೆ ತುಂಬಿಸಿಯೂ - ಬೀಸಿ ಬರುವ ತಂಗಾಳಿಯಲ್ಲಿ, ನಾವು ಬೆಂಗಾಡು ಮಾಡಿದರೂ - ತೋಯ್ದು ತೊಳೆವ ಮಳೆಯಲ್ಲಿ, ಎಲ್ಲ ಒಳ್ಳೆಯತನವೂ ಸತ್ತಿದೆ ಅಂದ್ಕೊಂಡು ಬೆನ್ನು ತಿರುಗಿಸಿ ನಡೆವಾಗ - ತಿರುವಿನಲ್ಲಿ ಸಿಕ್ಕುವ ಮಗುವಿನ ಹೂನಗೆಯಲ್ಲಿ.. ಎಲ್ಲಿ ಇಲ್ಲ ಹೇಳು ದೇವರು. ನಾವು ನೋಡಿದಲ್ಲಿ ದೇವರಲ್ಲವಾ?! ನಾವು ಕಣ್ತೆರೆಯದೆ, ಮನದ ಕದ ತೆರೆದಿಡದೆ, ದೇವರಿಲ್ಲ, ದೇವರು ಎನಗಿಲ್ಲ ಎಂದರೆ ಹೇಗೆ?

ಅನುಕೂಲ ಸಿಂಧು ಮನುಷ್ಯರು ನಾವು - ನಮಗೆ ಬೇಕಾದ ಹಾಗೆ, ಬೇಕಾದ್ದನ್ನು ಗ್ರಹಿಸುವುದನ್ನು ಬದುಕಿನ ರೀತಿಯಾಗಿಸಿಕೊಂಡಿದ್ದೇವೆ. ಇದು ಹೀಗೆಯೇ ಯಾಕೆ, ಇದರೊಳಗೇನಿದೆ, ಅಂತ ಯೋಚನೆ ಮಾಡಲಿಕ್ಕಲ್ಲವಾ ನಮಗೊಂದು ಮನಸ್ಸಿರುವುದು - ರಾಮಮಂದಿರದ ರಾಮ ಸುಳ್ಳಿರಬಹುದು, ಸ್ವಾತಂತ್ರ್ಯಕ್ಕೆ ಹೋರಾಡಿದ ಸಾವಿರಗಟ್ಟಲೆ ಜನ ಆರಾಧಿಸಿದ ಗಾಂಧಿ ಮಹಾತ್ಮನ 'ಎಲ್ಲರಿಗೂ ಸನ್ಮತಿ ನೀಡುವ' ರಾಮ ಸುಳ್ಳಾ? ಸಭೆ ಕರೆದು ಮಂಟಪ ಕಟ್ಟಿ ಪೂಜಿಸಿದ ಕಾಮಧೇನುವಿನ ಪ್ರತಿಮೆ ಪುರಾಣದ ಸಂಕೇತವಷ್ಟೇ ಆಗಿರಬಹುದು, ಜಾತಿಬೇಧವಿಲ್ಲದೆ ನಾವೆಲ್ಲ ಓದಿ ಕಣ್ಣೀರಿಟ್ಟ ಪುಣ್ಯಕೋಟಿ, ಅವಳ ಸತ್ಯ, ಆ ಸತ್ಯ ಬೆಳಗಿದ ನಮ್ಮ ಸಂಸ್ಕೃತಿ ಸುಳ್ಳಾ? ನಾವು ಮನುಷ್ಯರ ಮನದಾಳದಲ್ಲಿ ಒಳಿತಿನ ಒರತೆ ಒಸರದೆ, ತಿಳಿವಿನ ಬೆಳಕು ಹತ್ತದೆ ಮಾಡುವ ಎಲ್ಲ ಹೊರ ಆಡಂಬರಗಳೂ ವ್ಯರ್ಥ. ಪತ್ರಿಕೆಗಳಿಗೆ, ಟೀವಿ ಮಾಧ್ಯಮಗಳಿಗೆ ತಮ್ಮ ಜಾಹೀರಾತನ್ನು ಹೆಚ್ಚಿಸುವ ಹೊಸ ಹೊಸ ವಿಧಾನಗಳು ಅಷ್ಟೆ. ಯಾರದೋ ಆಟಕ್ಕೆ ನಮ್ಮ ಮುಗ್ಧ ರೈತರನ್ನು, ಹಳ್ಳಿಯ ಸಜ್ಜನ ಮನಸ್ಸುಗಳನ್ನು ಬಳಸಿಕೊಳ್ಳುವ ಡಂಭಾಚಾರ ನೋಡಿ ನಿನಗೆ ಬೇಸರ ಸಹಜ. ಆದರೆ ಈ ಎಲ್ಲ ಕೃತಿಗಳ ಮೂಲಕ ಎಲ್ಲೋ ನಾಲ್ಕು ತಿಳಿವಿನ ದೀಪ ಹತ್ತಿದರೆ, ಹತ್ತೆಂಟು ಮನಸ್ಸುಗಳು ಮೃದುವಾದರೆ ಅಷ್ಟೆ ಸಾಕು ಅನ್ನಿಸೋಲ್ಲವೇನೆ?


ನಿಜ, ಡಂಭಾಚಾರದ ಸ್ವಾರ್ಥ ಆಸ್ತಿಕತೆಗಿಂತ, ಸಹಜೀವಿಗಳ ಕಷ್ಟಕ್ಕೆ ಮರುಗುವ ನಾಸ್ತಿಕತೆ ದೊಡ್ಡದೆನ್ನಿಸುವುದು ಹೌದು. ಆದರೆ ಎಲ್ಲ ನಾನೇ ಅನ್ನುವ ಅಹಂಭಾವ ಕರಗುವುದು ಹೇಗೆ? ನೂರೆಂಟು ಕಷ್ಟಗಳ ನಡುವೆ ದೇವರಿದ್ದಾನೆ ಎಂಬ ಭಾವ ಕೊಡುವ ಸಮಾಧಾನವನ್ನು ಯಾವ ಮನಶ್ಯಾಸ್ತ್ರದಿಂದ ನೀಡಬಹುದು? ಎಲ್ಲ ಕಳೆದುಕೊಂಡಾಗಲೂ ಹೊಸದೊಂದನ್ನು ಹುಡುಕಿ ಹೋಗುವ ಜೀವನ್ಮುಖಿ ಚೈತನ್ಯದ ಒರತೆಯೇನು, ಎಲ್ಲಿದೆ?

ನಿನ್ನೆ ನೀನು ಮತ್ತು ದಿವ್ಯ ಕೇಳುತ್ತ ಕುಳಿತಿದ್ದಿರಲ್ಲಾ ಆ ಹಾಡು..

ಬಾಂದಳ ಚುಂಬಿತ ಶುಭ್ರ ಹಿಮಾವೃತ ತುಂಗ ಶೃಂಗದಲಿ ಗೃಹವಾಸಿ..

ದೀನ ಅನಾಥರ ದುಃಖಿ ದರಿದ್ರರ ಮುರುಕು ಗುಡಿಸಿಲಲಿ ಉಪವಾಸಿ..

ಅವನಲ್ಲವಾ ನಮ್ಮ ದೇವರು? ಆಕಾಶದಲ್ಲಿ ಸಿಂಗರಿಸಿದ ತೇರಿನಲ್ಲಿ ಮೆರವಣಿಗೆ ಹೊರಡುವ ಅವನೇ ಅಲ್ಲವೆ, ಕಣ್ಣ ನೀರಿನಲಿ, ಮಣ್ಣ ಧೂಳಿನಲಿ ಹೊರಳುವ ನಮ್ಮ ಜೊತೆಗೇ ಬರುವವನು?

ಜಿ.ಎಸ್.ಶಿವರುದ್ರಪ್ಪನವರ ಕವಿಹೃದಯ ಈ ಸತ್ಯವನ್ನು ತಾನೂ ಉಂಡು ನಮಗಾಗಿ ಎಷ್ಟು ಚಂದವಾಗಿ ಬರೆದಿಟ್ಟಿದೆ.. ನಾನು ನಿನಗೆ ಅವತ್ತು ಓದಲು ಕಲಿ ಅಂದದ್ದು ಇದಕ್ಕೆ. ಮಂತ್ರಿಯಾಗಲಲ್ಲ..


ನಾವೇ ಪ್ರಯತ್ನಿಸಿ ತಿಳಿಯಲು ತುಂಬ ಅವಕಾಶ ಸಮಯ ಬೇಕು. ಅಥವಾ ತಿಳಿದವರು ಬರೆದ ಸಾರವನ್ನು ಹೀರಿ ಬೆಳೆಯಬೇಕು. ಇಂಥ ತಿಳಿವಳಿಕೆಗಳು ಕಷ್ಟದ ಸಮಯದಲ್ಲಿ ಸಹನೆಯಿಂದಿರಲು, ಎಲ್ಲವನ್ನು ಎದುರಿಸಲು, ಸಹಾಯವಾಗುತ್ತದೆ.


ಚಿಕ್ಕಂದಿನಿಂದ ಮಲೆಕಾಡಲ್ಲಿ ಬೆಳೆದ ನಿನಗೆ ಮರಗಳ ಬಗ್ಗೆ ಹೇಳಿಕೊಡಬೇಕಿಲ್ಲ.. ಕಾಡಲ್ಲಿ ತಾನಾಗೇ ಮೂಡಿದ ಚಿಕ್ಕ ಸಸಿಗೆ ನೀರೆರೆಯುವರು ಯಾರು, ಅದು ಮಳೆ ಬಂದಾಗ ಹೀರಿ ಬೆಳೆಯುತ್ತದೆ. ನೆಲದಲ್ಲಿ ಯಾವ ಕಡೆ ನೀರಿನ ಸೆಲೆಯಿದೆಯೋ ಆ ಕಡೆಗೆ ಬೇರು ಬೆಳೆಸುತ್ತದೆ. ಆಳಕ್ಕಿಳಿಯುತ್ತದೆ, ಯಾಕೆ ಹೇಳು, ಆಕಾಶದೆತ್ತರಕ್ಕೆ ಬೆಳೆದು ಚಿಗುರಲಿಕ್ಕೆ. ಕತ್ತರಿಸಿದಂತೆಲ್ಲ ಚಿಗಿತು ನಿಲ್ಲಲಿಕ್ಕೆ. ನಾವು ಆ ಮರಗಳನ್ನು ನೋಡಿ ಕಲಿಯಬೇಕಲ್ಲವಾ ಬದುಕಲಿಕ್ಕೆ?!


ಅವ್ವಾ ಹಾಲು.., ಹಾಲಮ್ಮ ಸಂಜೆ ಹಾಲು ಹಾಕಲು ಬಂದಿದ್ದಳು, ಆಗಲೇ ನಾಲ್ಕೂವರೆ! ಅವರು ನಸುನಗುತ್ತ, ಕಿಟಕಿಯಿಂದಾಚೆಗೆ ದುಂಡು ಮಲ್ಲಿಗೆಯ ಮೊಗ್ಗೊಳಗೆ ಸೇರಿಹೋದರು.. ಗೀತಾ ಹೋಗಿ ಹಾಲು ಹಾಕಿಸಿಕೊಂಡು ಬಂದು, ಕಾಫಿ ಮಾಡಿ ಕೈಗಿಟ್ಟಳು..


ನನಗೆ ಅವರ ಜೊತೆಯಲ್ಲಿ ಮಾತಾಡಿ ಧನ್ಯ ಭಾವ, ಸುತ್ತೆಲ್ಲ ಹೂಬಿರಿದ ಹಿತ್ತಿಲಲ್ಲಿ, ಎತ್ತರದ ಹಲಸಿನ ಮರಕ್ಕೆ ಬಾವಿ ಹಗ್ಗ ಕಟ್ಟಿ ಜೋಕಾಲಿಯಾಡಿದ ಉಲ್ಲಸ.. ಆಗಷ್ಟೆ ಮಳೆ ಬಂದು ನಿಂತ ಸಂಜೆಯಲ್ಲಿ, ಮರದ ಮರೆಯಲ್ಲಿ ಕೂತು ಕೂಗುವ ಕೋಗಿಲಿಯ ಇಂಪುಲಿ ಕಿವಿಯಲ್ಲಿಳಿದು ಮನವನ್ನೆಲ್ಲ ತುಂಬುವ ಹಿತ..


ಮೊಮ್ಮಗಳು ಮೊನ್ನೆ ಒಂದು ಕವಿತೆ ಓದಿ ಹೇಳಿದಳಲ್ಲ, ನರಸಿಂಹ ಸ್ವಾಮಿಯವರದ್ದು, - ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರವಿದೆ.. ನಾನು ಕಂಡದ್ದರಾಚೆಗಿದೆ ಬೆಳಕಿನ ಲೋಕ.. ಆ ಸಾಲುಗಳಿಗೆ ನೂರು ಅರ್ಥ ಹೊಳೆದು, ಕಿಟಕಿಯಾಚೆ ನೋಡಿದೆ.. ಅಲ್ಲಿ ಅರೆ ಬಿರಿದ ಮೊಗ್ಗು ಮೊಗ್ಗಿನಲ್ಲು ಅವರ ಮೆಲ್ನಗೆ, ಭರವಸೆಯ ನೋಟ..

೧೫ ರ ತಬ್ಬಲಿ ಸುಶೀಲಳನ್ನ ಸಹಚಾರಿಣಿಯನ್ನಾಗಿಸಿಕೊಂಡು,ಸಲಹಿದ, ಚಂದ ಗಂಭೀರ ಶ್ರೀನಿವಾಸ, ಸುಕ್ಕು ನೆರಿಗೆಯ ನಿನ್ನ ಬಿಟ್ಟು ಹೋದೇನೇ ನಾನು, ಜೊತೆಗಿದ್ದೇನೆ ಇಲ್ಲೆ ಎಂಬ ಅಕ್ಕರೆಯ ಪ್ರಭಾವಳಿಯೊಂದಿಗೆ... ಮೊಮ್ಮಗಳು ದಿವ್ಯ ಬೇಗ ಬಂದಿದ್ದಳು, ಅಮ್ಮಮ್ಮ ಬಾ ಈ ಹಾಡು ಕೇಳು, ಪಲ್ಲವಿ ಹೇಳಿದ್ದು ಅಂತ ಸಿ.ಡಿ ಹಾಕಿದಳು. ಕಿನ್ನರ ಕೊರಳಿನಲ್ಲಿ ಹಾಡು ತೇಲಿಬಂದಿತು.. ಕರುಣಾಳು ಬಾ ಬೆಳಕೆ.. ಮುಸುಕಿದೀ ಮಬ್ಬಿನಲಿ.....

******************
ಆಗಾಗ ತನ್ನ ಒಳನೋಟಗಳನ್ನ, ನಾನು ತುಂಬ ಚಿಕ್ಕವಳಾದರೂ ನನ್ನೊಡನೆ ಗೆಳತಿಯಂತೆ ಹಂಚಿಕೊಂಡ ಪ್ರೀತಿಯ ಸುಶೀಲಮ್ಮಮ್ಮನನ್ನು ಕೃತಜ್ಞತೆಯಿಂದ ಇಲ್ಲಿ ನೆನೆಯುತ್ತೇನೆ. ತುಂಬುಸಂಸಾರದ ಬೆನ್ನೆಲುಬಾಗಿ, ಮನೆಯ ಮಕ್ಕಳಿಗೆ ದೇವರಾಗಿ - ಅಕ್ಷರಶಃ ನಮ್ಮೆಲ್ಲ ಸಂತಸ-ಸಂಕಟಗಳಲ್ಲಿ ಸಹಚಾರಿಣಿಯಾಗಿ, ಸದಾ ನೆಮ್ಮದಿಯ ನೆರಳಾಗಿ ಬಂದಿರುವ ಅಮ್ಮಮ್ಮ ನಮ್ಮನೆಯ ದಿವ್ಯಾಂಬರಸಂಚಾರಿ. ಅವಳ ಕಣ್ಣಲ್ಲಿ ಬದುಕನ್ನು ನೋಡುವ ಒಂದು ಚಿಕ್ಕ, ನಮ್ರ ಪ್ರಯತ್ನ ಇದು. ಅವಳಿಗೆ ಇಷ್ಟವಾಗಬಹುದು ಅಂದುಕೊಂಡಿದೀನಿ.. ಚಂದ ಗಂಭೀರ ಶ್ರೀನಿವಾಸಜ್ಜನನ್ನು ಕರೆದುಕೊಂಡುಬಂದಿದೀನಲ್ಲ.. :)