Wednesday, January 18, 2012

ದೀಪಕ ರಾಗ

ದೀಪು - ನನ್ನ ತಮ್ಮನ ಸ್ನೇಹಿತ. ನಮ್ಮ ಆತ್ಮೀಯ ಬಳಗ.
ಎಲ್ಲ ಸೌಕರ್ಯಗಳ ನಗರೀಕರಣದ ಬದುಕಲ್ಲಿ ಯಾವಾಗಲೂ ಹಳ್ಳಿಯೂರಿನ ನೆನಪಿನ ನಾವೆಯಲ್ಲಿ ತೇಲಿಹೋಗುವ ನನಗೆ ದೀಪು ಈ ಅಂತರಾಳದ ಮಾಸ್ಟರ್ ಕಾಪಿ ಸೀಡಿ ಕೊಟ್ಟಾಗ ತುಂಬ ಖುಶಿಯಾಯ್ತು. ಇದು ದೀಪುನ ಮೊದಲ ಪ್ರಯತ್ನ. ಏನಾರೂ ಮಾಡ್ಬೇಕು ಅಕ್ಕಾ, ಸುಮ್ನೆ ಸಾಫ್ಟ್ವೇರ್ ಕೆಲ್ಸ ಮಾತ್ರ ಮಾಡ್ಕೊಂಡು ಸಾಕಾಗೋಗಿದೆ ಅಂತ ಈಗೊಂದು ವರ್ಷದ ಹಿಂದೆ ಅವನು ಅಂದಾಗ ನಾನು ನಕ್ಕಿದ್ದೆ. ಎಲ್ರಿಗೂ ಹಾಗೆ, ಆಮೇಲಾಮೇಲೆ ಅದೇ ಅಭ್ಯಾಸ ಆಗಿ ಸುಮ್ನಾಗ್ತಾರೆ ಅಂತ ಅಂದೂ ಇದ್ದೆ. ಅದಕ್ಕೆ ಅವನು ಇಲ್ಲಾ ಅಕ್ಕಾ, ನಾನು ಮ್ಯೂಸಿಕ್ಕಲ್ಲಿ ಏನಾರು ಮಾಡ್ಬೇಕು ನಮ್ಮ ಬದುಕು ತುಂಬಿಕೊಳ್ಳೋಕೆ ಬೇಕಾದಷ್ಟು ದಾರಿ ಇದ್ದೇ ಇರತ್ತೆ. ನಂಗೆ ಸಂಗೀತ.. ಅಂದಾಗ ನಂಗೆ ದೇಜಾ-ವೂ ಅನ್ಸಿದ್ದು ನಿಜ. ಎಳೇ ಕಣ್ಣಿನ ಕನಸುಗಳನ್ನ ಭಂಗಗೊಳಿಸುವ ಇಷ್ಟ ನಂಗೆ ಚೂರೂ ಇರಲಿಲ್ಲ.

ಅವನು ಗಿಟಾರ್ ಕಲಿಯುವುದು, ಕೀ ಬೋರ್ಡ್ ಕಲೀತಿರೋದು, ಈ ಮ್ಯೂಸಿಕ್ ಆಲ್ಬಂ ಮಾಡ್ಬೇಕಿದ್ರೆ ಏನೇನ್ ಮಾಡ್ಬೇಕು ಹೀಗೆಲ್ಲ ಹಂತಗಳಲ್ಲೂ ನನಗೆ ಒಂದೊಂದು ಅಪ್ ಡೇಟ್ ಸಿಗ್ತಾ ಇತ್ತು. ಈ ಕನಸುಗಳ ಹಾದಿಯ ಹೂ ಮೊಗ್ಗುಗಳ ಪರಿಚಯ ಸಿಕ್ಕಿದ್ದೇ ಆಗ ನಂಗೆ.
ನಮ್ಮೂರಿನ ಹುಡುಗ, ತಮ್ಮನ ಗೆಳೆಯ, ಎಳೆಯ ಚೈತನ್ಯ ಎಂಬೆಲ್ಲ ವಾತ್ಸಲ್ಯವನ್ನು ಮೀರಿದ ಒಂದು ಮೆಚ್ಚುಗೆ ನಂಗೆ ಅವನ ಮೇಲೆ.


ಥ್ಯಾಂಕ್ ಗಾಡ್ ಇಟ್ ಈಸ್ ಫ್ರೈಡೇ ಅಂತೇಳಿ ಸೊಂಟಕ್ಕೆ ಗೆಳತಿಯ ಕೈ ಸಿಕ್ಕಿಸಿಕೊಂಡು ರಾಜಧಾನಿಯ ರಸ್ತೆಗಳಲ್ಲಿ ಬೈಕು ಹತ್ತಿ ಹೊಗೆಯೆಬ್ಬಿಸುವ ಸಾಧ್ಯತೆಯ ಅಸಂಖ್ಯಾತ ಯುವಕರ ಮಧ್ಯೆ, ತನ್ನ ಸಂಜೆಗಳನ್ನ ತಾನು ಕಂಡ ಕನಸಿಗೆ, ತಾನು ಅನುಭವಿಸಬೇಕಿರುವ ಹುಚ್ಚಿಗೆ ಮೀಸಲಿಟ್ಟು, ಇವೆಲ್ಲದರ ನಡುವೆ ಗೆಳತಿಯ ಮಾತುಕತೆಗಿಷ್ಟು ಸಮಯ ಕೊಟ್ಟು ಏನೋ ಮಾಡಬೇಕು ಎಂಬಲ್ಲಿನ "ಬ್ಲಾಂಕ್ ಸ್ಪೇಸು"ಗಳಲ್ಲಿ ಸಂಗೀತದ ನೋಟುಗಳನ್ನ ತುಂಬಿಸುವುದು ನಿಜಕ್ಕೂ ವಿಶಿಷ್ಟ ಪ್ರಯತ್ನ.


ಅಕ್ಷರ, ಸಾಹಿತ್ಯ, ಸಂಗೀತ, ಲಯ ಎಲ್ಲವೂ ತುಂಬ ಪರಿಶ್ರಮ ಬೇಡುತ್ತವೆ. ಕರೋಕೆ ಸೀಡಿಗಳನ್ನಿಟ್ಟು ಕವಿತೆ ತುಂಬಿಸುವುದು, ಎಲ್ಲೆಲ್ಲಿಂದಲೂ ಕದ್ದ ರಾಗಗಳನ್ನಿಷ್ಟು ಮಿಸಳ್ ಭಾಜಿ ಮಾಡುವುದು ಹೊಸದೇನಲ್ಲ. ಎಲ್ಲರೂ ಅನಂತಸ್ವಾಮಿ,ಅಶ್ವತ್ಥ ಆಗುವುದಿಲ್ಲ. ಎಲ್ಲ ಅಸಂಗತ ಕವಿತೆಗಳೂ ಗೋಪಿ ಮತ್ತು ಗಾಂಡಲೀನ ಎನಿಸುವುದಿಲ್ಲ. ದೂರದ ನಕ್ಷತ್ರದಟ್ಟ ಕಣ್ಣು ನೆಟ್ಟವನ ಕೈಗಳಲ್ಲಿ ಮನೆಯ ಸುತ್ತಲಿನ ಕತ್ತಲಿಗೆ ಒಂದು ಹಣತೆ ಬೆಳಗುವ ಕೆಲಸ ಮಾಡಬೇಕೆಂಬ ತೀವ್ರತೆ ಎಲ್ಲರಿಗೂ ಅನಿಸುವುದೂ ಇಲ್ಲ. ದೀಪು ಮಾಡಿದ್ದು ಇಂತಹ ಪ್ರಯತ್ನ. ಊರಿಂದ ಬಂದು ಇಲ್ಲಿ ನೆಲೆಸಿದವರ ಹಾಗೆ ಹಳಹಳಿಕೆಗೆ ಬಲಿಯಾಗದೆ, ಯುವ ಸಹಜ ಉತ್ಸಾಹವನ್ನ ಮೊಟಕುಗೊಳಿಸದೆ ತನ್ನ ಚೈತನ್ಯಕ್ಕೊಂದು ಹರಿವನ್ನ ತಾನೇ ಒದಗಿಸಿಕೊಂಡ ಈ ಪ್ರಯತ್ನವನ್ನ ಮೆಚ್ಚಲೇಬೇಕು. ಅಭಿನಂದಿಸಲೇಬೇಕು.


ಇಷ್ಟಕ್ಕೂ ಇವನು ಮಾಡಿದ್ದು ಏನು?
ಅನಿಸಿದ ಕೂಡಲೆ ಸಂಗೀತ ಕಲಿಯಲು ಹೊರಟಿದ್ದು.
ಗಿಟಾರು ಕೊಂಡಿದ್ದಲ್ಲದೇ, ಕೀ ಬೋರ್ಡನ್ನೂ ಕಲಿತಿದ್ದು,
ಗೆಳೆಯ-ಗೆಳತಿಯರ ಗುಂಪಲ್ಲಿ ಕವಿತೆ ಹುಡುಕಿದ್ದು
ಮಾತುಗಳ ಸೇತುವೆಯಲ್ಲಿ ಆಲ್ಬಂ ಮಾಡಲು ಬೇಕಿರುವ ನಂಟು ಹುಡುಕಿದ್ದು
ಸ್ಟುಡಿಯೋ,ರೆಕಾರ್ಡಿಂಗ್, ಕೋ-ಆರ್ಡಿನೇಶನ್, ಗಾಯಕ-ಗಾಯಕಿಯರ ಆಯ್ಕೆ ಮತ್ತು ಮನವೊಲಿಕೆ,ಓಡಾಟ, ಹೊಂದಾಣಿಕೆ, ಕಾರ್ಯಕ್ಷಮತೆ ಎಲ್ಲವನ್ನೂ ನಿಭಾಯಿಸಿದ್ದು.
ಇದೆಲ್ಲದರ ಒಟ್ಟು ಮೊತ್ತವೇ - ಒಂಬತ್ತು ಭಾವದಲೆಗಳ ಮೆಲುದನಿಯನ್ನ ಸೀಡಿಯಲ್ಲಿ ಮೆಲೋಡಿಯಾಗಿ ಕೇಳಿಸಿದ್ದು.

ಇಷ್ಟೇನಾ ಇದು ಸ್ವಲ್ಪ ಎಫರ್ಟ್ ಹಾಕಿದ್ರೆ ಎಲ್ರೂ ಮಾಡ್ಬೋದು ಅನ್ನಿಸಿದ್ರೂ.. ಒಂದು ನೆನಪಿರಲಿ.
ಅಸ್ಪಷ್ಟ ಕನಸೊಂದು ತೀವ್ರ ಹಪಾಹಪಿಯಾಗಿ ಪ್ರಾಮಾಣಿಕ ಪ್ರಯತ್ನವಾಗಿ ಹಿಡಿದ ಗುರಿಯಾಗಿ ಮೂಡುವ ದಾರಿಯ ಸೆಳೆತಗಳು,ಅಡೆತಡೆಗಳು, ಸೋಮಾರಿತನ ಇದೆಲ್ಲವನ್ನೂ ಮೆಟ್ಟಿ ಮುಂದುವರಿಯುವ ಛಲ ಎಲ್ಲರಲ್ಲೂ ಇಲ್ಲ. ಹೋಗಲಿ ಬಿಡು ಅನ್ನುವುದು ಸುಲಭದ ದಾರಿ. ಈ ಹುಡುಗ ತನ್ನ ತೀವ್ರತೆಯನ್ನ ಕಳೆದುಕೊಳ್ಳದೇ ಅಂದುಕೊಂಡ ದಾರಿಯ ಮೊದಲ ಮೊಗ್ಗು ಅರಳಿಸಿಯೇ ಬಿಟ್ಟಿದ್ದಾನೆ.
ಇಂಪಿನ ದೂರ ದಾರಿಯನ್ನ ಸಾಗುವ ಚೈತನ್ಯ, ಸಂಗಾತಿಯ ಜೊತೆ ಇವನಿಗಿದೆ. ಗೆಳೆಯರ ಬಳಗವಿದೆ, ಎಲ್ಲರನ್ನೂ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಪ್ರಾಮಾಣಿಕವಾದ ಫ್ರೆಶ್ ಆದ ಮನಸ್ಸಿದೆ.
ಅಂತರಾಳದಲ್ಲಿ ಭಾವಜೀವಿಯೊಬ್ಬನ ಮೆಲ್ದನಿಗಳ ಹಾಯಿದೋಣಿಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ದೋಣಿ, ದೊಡ್ಡ ನಾವೆಯಾಗಿ ಭಾವ-ಗೀತೆಗಳ, ಸುಗಮ ಸಂಗೀತದ ಸಮುದ್ರದಲ್ಲಿ ತೇಲಲಿ ಎಂಬುದು ನನ್ನ ಹಾರೈಕೆ.
ಸುಲಭ ಪುನರಾವರ್ತಿತ ಪದಗಳ ಹಂಗನ್ನು ಮೀರಿ, ಟ್ಯೂನುಗಳಿಗೆ ಕವಿತೆಯನ್ನು ಹೊಂದಿಸುವ ಅವಶ್ಯಕತೆಯನ್ನು ದಾಟಿ, ನಮ್ಮ ಹಿರಿಯ, ಮತ್ತು ಇತ್ತೀಚಿನವರೆಗಿನ ಕವಿಗಳ ಕವಿತಾ ಸಂಗ್ರಹಕ್ಕೆ ದೀಪು ಸಂಗೀತ ಸಂಯೋಜಿಸುವಂತಾಗಲಿ. ಕನ್ನಡ ಬರಿಯ ನಾಡ ಉತ್ಸವಗಳಲ್ಲಿ ಬಿಕರಿಯಾಗುವ ಮಾಲು ಎಂಬ ಮಾತುಗಳನ್ನು ಸುಳ್ಳು ಮಾಡುವ, ನೆಟ್ ಯುಗದ ಯುವ ಕನ್ನಡ ಮನಕ್ಕೆ ಸೇತುವೆಯಾಗುವ ಕೆಲಸವು ದೀಪುವಿನಿಂದ ಮತ್ತವನ ಗೆಳೆಯರ ಬಳಗದಿಂದ ಆಗಲಿ ಎಂದು ಬಯಸುತ್ತೇನೆ.

ಒಳಿತೇ ಹಾಡಾಗುವ ದಾರಿಯಲ್ಲಿ ದೀಪಕ ರಾಗ ನುಡಿಸಿದ ಈ ಕಿರಿಯ ವಯಸ್ಸಿನ ತುಂಬು ಚೈತನ್ಯಕ್ಕೆ ನನ್ನ ಮೆಚ್ಚುಗೆ,ಅಭಿನಂದನೆ.
ಅಂತರಾಳ ಧ್ವನಿಮುದ್ರಿಕೆ(ಅಡಕಮುದ್ರಿಕೆ)ಯನ್ನು ನೀವೂ ತಗೊಂಡು, ಕೇಳಿ, ಬೆನ್ತಟ್ಟಬೇಕು.