ಮೊನೆ ಮಾತು ಚುಚ್ಚಿದ್ದು ಹೌದು
ಗಾಯ ಒಣಗಿ ಉದುರಿ ಹೊಸ ಚರ್ಮ
ಕಲೆಯೂ ಕಾಣದಾಗಿದೆ.
ಆದರೆ
ಮಾತಾಡದೆ ಎದ್ದು ಹೋದದ್ದು,
ಬಂದ ಸಿಟ್ಟು ನುಂಗಿ ಮುಖ ತಿರುಗಿಸಿದ್ದು
ಇರುವುದನ್ನೇ ಮರೆತು ಹೋಗಿದ್ದು
ಸೇತುವೆಯ ಮೇಲೆ ಘನೀಭವಿಸುವ
ನಿರ್ವಾತ....
ಒಣಗಿದ ಗಾಯಕ್ಕೆ ಉಪ್ಪು ನೀರೂಡಿದ ಹಾಗಿತ್ತು.
ಸಮಾಜ, ವ್ಯವಸ್ಥೆ, ವ್ಯಕ್ತಿ-ಶಕ್ತಿ-ಸಮಷ್ಟಿ
ಪುಂಖಾನುಪುಂಖ ಲೇಖನಗುಚ್ಛಗಳಿವೆ
ಶೆಲ್ಫಲ್ಲಿ
ಜೀವನೋತ್ಸಾಹ ಯಾಕೋ
ನೇತಾಡುತ್ತಿದೆ ಔದಾರ್ಯದ
ಉರುಳಲ್ಲಿ.
ನಿಲ್ಲದೆ ನಡೆವ ಕಾಲದ
ಜತೆಗೇ ಓಡುತ್ತಾ
ತಿಳಿಯದೆ ಹೋಗಿರಬಹುದು
ಬದಲಾವಣೆ
ಅಥವಾ
ಓಡುತ್ತ ಓಡುತ್ತ ಹೋದವರಿಗೆ
ತಿಳಿಯಲು ಸಮಯ ಸಿಕ್ಕಿದ್ದೆಲ್ಲಿ!
ನಿಲ್ದಾಣ ಬಯಸದೆ ಪಯಣವನೆ ಧ್ಯಾನಿಸಿದವರಿಗೆ
ನಿಲ್ದಾಣ ಮತ್ತು ತಂಗುದಾಣದ
ವಿಳಾಸದ ಹಂಬಲು ಬಂದಿದ್ದು
ವಯಸ್ಸಾಗಿ ಹೋದದ್ದರ ಲಕ್ಷಣ
ಎಂಬಿತ್ಯಾದಿ
ಜಾಣ-ಜಾಣೆಯರು ಮಾತಾಡಿಕೊಂಡಿದ್ದಾರೆ.
ಓದಿ ಅಹ ಅಹ ಅಂದುಕೊಂಡ
ಸಾಲುಗಳೆಲ್ಲ
ಇದ್ದಕ್ಕಿದ್ದಂಗೆ ಇಲ್ಲೆ ಪಕ್ಕದಲ್ಲಿ
ಘಟಿಸುವುದು ಬಹುಶಃ
ದಾರಿ ಸಾಗಿಬಂದ ದೂರವಿರಬೇಕು
ಚೋದ್ಯವೆಂದರೆ
ಈಗ
ಅಹ ಎನ್ನುವುದಿರಲಿ
ಉಸಿರು ಸಿಕ್ಕಿಕೊಳ್ಳುವುದು
ಮಾತು ಉಕ್ಕಡಿಸಿ ಬಂದೂ
ಬಾಯಿ ಕಟ್ಟುವುದು
ಕಣ್ಣ ನೀರು ಹನಿಯದ ಹಾಗೆ
ತಡೆದು
ಕಿರಿನಗು ಚೆಲ್ಲುವುದು..
ನೋವಿನ ಕಹಿ
ಕಳೆಯುವ ಬಗೆ
ಅರಿಯಲು
ಕದಳೀವನವೆ ಬೇಕು
ಎಚ್ಚರದ ಬದುಕು ಸೋಸಿ
ಕನಸು ಬನಿಯಿಳಿಯಬೇಕು.