Tuesday, June 7, 2016

ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ

ಮಂಕಾದ ಹಗಲು
ಇಳಿಬಿದ್ದ ಹೆಗಲು
ತಿರುವಿನಲ್ಲಿ ಸಿಕ್ಕ ದಿನ
ಹೊರಟ ಪಯಣಕ್ಕೆ
ದಾರಿ ನೂರಿದ್ದವು
ಏರು ಹೆಜ್ಜೆ, ಬೆಟ್ಟ ಕೊಳ್ಳ
ತುಂಬಿ ಹರಿವ ಹಳ್ಳ
ಬಯಲು ಹೊಕ್ಕವರು
ಇಟ್ಟ ಹೆಜ್ಜೆಗಳ ಹಿಂದೆ
ದೂರದಾರಿ ಮಲಗಿದೆ
ನೆಲೆನಿಂತ ತಾವಿನ
ತುಂಬ ಕುಹೂಗೀತ
ಸ್ಥವಿರಗಿರಿಯ ಚಲನದಾಸೆಯೂ
ಬಿಸಿಯೇ ಘನವಾಗಿ ಸುರಿವ ತಣ್ಬನಿಯೂ
ಜತೆಜತೆಗೆ
ಹಿನ್ನೆಲೆಗೆ ಹೆದ್ದೆರೆಗಳ ಕಡಲು

ಮಂಕಾದ ಹಗಲು
ಇಳಿಬಿದ್ದ ಹೆಗಲು
ನಿನಗೆ ಅಲ್ಝಮೈರು
ನನಗೆ ಪಾರ್ಕಿನ್ಸನ್ನು
ಒಂದೇ ಉಸಿರಿಗೆ ಹತ್ತಿಳಿದ ಬೆಟ್ಟಮಗ್ಗುಲು
-ಗಳ ಮರೆತು ಈಗ ನೋಯಿಸುವ ಬೆನ್ನು

ಮಂಕಾದ ಹಗಲು
ಇಳಿಬಿದ್ದ ಹೆಗಲು
ಸುಖಾಸುಮ್ಮನೆ ನೋಯಿಸುವ ಗಿಬ್ರಾನು
ನಮ್ಮಿಂದಲೇ ಬಂದವರು ನಮ್ಮವರಲ್ಲ
ನಮ್ಮನ್ನ ತಂದವರು ನಮ್ಮವರಾಗಿಲ್ಲ
ದಾರೀಲಿ ನೆನೆದು ಕೈ ಕೈ ಹಿಡಿದವರು
ಧಾರೀಲಿ ನೆನೆದ ಕೈ ಕೈ ಹಿಡಿದವರು
ಜತೆಯಲಿದ್ದೂ ಜತೆಯಲಿಲ್ಲ.
ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ
ಎಲ್ಲ ಚಲನಶೀಲತೆಗೆ ಒಂದೇ ಮೂಲೆ - ದೇವ ಮೂಲೆ
ನುಡಿಯದಲೆ ಮುತ್ತಿನ ಹಾರದಂತಿರಬೇಕು
ಬಾಯಿಬಿಟ್ಟರೆ ಬಣ್ಣಗೇಡು.

ಹೀಗಾಗಿಯೇ..
ಮಂಕಾಗಿದೆ ಹಗಲು
ಇಳಿಬಿದ್ದಿದೆ ಹೆಗಲು

ಇನ್ನೇನು ಶಾಲೆಬಿಡುವ ಹೊತ್ತು
ಬಣ್ಣ ಬಣ್ಣಗಳ ಕಾಮನಬಿಲ್ಲು ಬರಬಹುದು ಇವತ್ತು.
ಮಂಕು ಹಗಲು ದಿಢೀರನೆ
ಓಕುಳಿ ಸಂಜೆಯಲ್ಲಿ ಜಾರಿ
ನೀಲಿಗಪ್ಪಾಗಿ ಹರಡಿ
ಮಳೆನಿಂತು ಮಿಂಚಬಹುದು ಅಲ್ಲಲ್ಲಿ ಒಂದೊಂದು ಮುತ್ತು.

[[[ ಬೇಂದ್ರೆಯಜ್ಜನ ಪ್ರಸಿದ್ಧ ಸಾಲು ದಾರಿಲೆ ನೆನೆದ ಕೈ ಹಿಡದಿ ನೀನು. (ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯಿಂದ) ಇದನ್ನು ನಾನು ಈ ಕವಿತೆಯ ಲಹರಿಗೆ ತಕ್ಕಂತೆ ಉಪಯೋಗಿಸಿದ್ದೇನೆ. ಅಲ್ಲಿ ಬೇರೇನೇ ಉಪಯೋಗಿಸಿದರೂ ಅರ್ಥನಷ್ಟವೆನಿಸಿದ್ದರಿಂದ.]]]

Monday, June 6, 2016

ಮರೀಚಿಕೆ ಕಂಡರೂ ಖುಶಿ

ತುಟಿಯಂಚು ಅಷ್ಟು ಹಿಗ್ಗಬಾರದೆ?,
ಆ ಕಿರಿಹಲ್ಲು ಹೊಳೆಯಿಸುವ ಒಂದು ಪುಟ್ಟ ನಗು..
ಯಾಕೆಂದರೆ?...
ಹೀಗೇ ಸುಮ್ಮನೆ,

ಯಾಕೋ ಈ ಹೊತ್ತು ಮನಸು ಬಿಮ್ಮನೆ,
ಹಗುರಾಗಿ ನಗೆದೋಣಿಯ ಮೇಲೇರಿ
ಒಳ ನದಿಯಲ್ಲೊಂದು ಯಾನ.. ಥಟಕ್ಕನೆ
ಇಳಿದುಬಂದು ಬಿಡಬಹುದು ತೀರ ಬೇಕೆನ್ನಿಸಿದೊಡನೆ.

ಏನಿದೆಲ್ಲ ಹುಚ್ಚಾಟ. ಕಿರಿಕಿರಿ;
ಸುಮ್ಮನಿರಬಾರದೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ಅಚ್ಚುಕಟ್ಟಾಗಿ
ಶಿಸ್ತಾಗಿ, ಧೂಳು ಹೊಡೆದು, ಮಡಿಕೆ ಮುದುರದೆ
ಇರುವ ಹಾಗೆ..

ನಗು ಎಂದರೆ ನಿನಗೆ ಹೇರಿಕೆ
ನೀ ನಗದಿದ್ದರೆ ನನಗೆ ಚಡಪಡಿಕೆ
ಶಿವನೇ ಇದೆಂಥ ಕ್ರೌರ್ಯ.
ಯೋಗಮುದ್ರೆಯಲ್ಲಿ ನಗುವಿಗೆ ಜಾಗವಿಲ್ಲವಲ್ಲ.
ಒತ್ತಾಯದ ಪರಮಾನ್ನದ ಗತಿ ಎಲ್ಲರಿಗೂ ಗೊತ್ತು.

ಅದು ಸರಿ.
ಈ ಉಸಿರುಗಟ್ಟಿಸುವ ಬದುಕಿನಲ್ಲಿ
ಒಂದು ನಗೆಬುಗ್ಗೆಗೆ ಕಾದವರು
ಮೌನದುಸುಬಿನಲ್ಲಿ ಹುಗಿದೇ ಹೋಗಬಹುದು.
ನಗಲು ಒತ್ತಾಯಿಸಿದರೆ ಹಿಂಸೆ
ನಗದೆ ಇದ್ದರೋ.. ಪ್ರತಿಹಿಂಸೆ. 
ಎರಡು ಸತ್ಯಗಳ ಮಧ್ಯೆ ಒಂದು ಸುಳ್ ಸುಳ್ಳೇ ನಗೆ
ಇಡೀ ಬದುಕಿನ ತುಂಬ ತುಂಟನಗು ಬೀರುತ್ತದೆ.

ಅದಕ್ಕೇ ಇರಬಹುದಾ..
ಮರೀಚಿಕೆ ಕಂಡರೂ ಖುಶಿ.

Monday, May 30, 2016

ಈ ವರ್ಷದ ಬೆಳಗು

ಇವತ್ತು ಬೆಳಗಿಗೊಂದು
ಹೊಸಪಾಠ;
ಹಿಡಿಬೆರಳು ಗಟ್ಟಿಯಾಗಿ
ಬಿಡದೆ ಹಿಡಿದು
ಕಣ್ ಬನಿ ಒರೆಸುತ್ತ
ನಡೆದ ದಾರಿಗಳೀಗ
ಅಗಲಗಲ,
ಮರಗಳಿಂದ ತೂಗುವ
ಹೂಗೊಂಚಲು ಎಡಬಲ,
ಮಳೆನಿಂತು ಹನಿವ
ಹಸಿರೊಳಳಗೆ ಹುದುಗಿ
ಹಾಡುವ ಕೋಕಿಲ,
ಹೊಸದಾಗಿ ಬೈಂಡ್ ಹಾಕಿಟ್ಟ ಪುಸ್ತಕಗಳ
ತುಂಬಿದ ಚೀಲ,
ಹೆಗಲಿಗೇರಿಸಿ...
ನೀ ಬರದಿದ್ದರೇನಂತೆ,
ವ್ಯಾನೇ ಆದರು ಪರವಾ ಇಲ್ಲ,
ಎಂದೋಡುವ
ಕಿನ್ನರ ಕಾಲ್ಗಳ ಒಡತಿ
-ಯ
ಕೈಗಳು
ಹೊರಡುವ ಮುಂಚೆ
ಬರಸೆಳೆದಿದ್ದು ಯಾಕೋ!!?
ಅಪ್ಪಿಕೊಂಡ 
ಹೊಟ್ಟೆಯೊಳಗೆ ತಳಮಳ.

ಇವತ್ತು ಬೆಳಗಿಗೊಂದು
ಹೊಸಪಾಠ;
ಬಿಟ್ಟೋಡುತ್ತ ಹರಿದ ಬದುಕಿಗೆ
ಇನ್ನು ಬಿಟ್ಟುಕೊಡಲು
ಕಲಿಯಬೇಕಿರುವ ಸಂಕಟ.

Tuesday, August 4, 2015

ಹಲವುತನದ ಮೈಮರೆಸುವಾಟವಿದು..

ಆಕಾಶದ ನೀಲಿಗೆ
ನನ್ನ ತೆಕ್ಕೆ
ಮೇಲೆತ್ತಿ ಎತ್ತಿ
ಚಾಚಿ ಇನ್ನೇನು
ಬೊಗಸೆಯಲ್ಲಿ ವಿಸ್ತಾರ
ಸಿಕ್ಕೇಬಿಟ್ಟಿತು
ಎನ್ನುವಷ್ಟರಲ್ಲಿ
ಕಡುನೀಲಿ ಮುಗಿಲು
ದಟ್ಟೈಸಿ
ಬೆಳಕು ಅಡಗಿ
ಈಗ ಮೂಡಣ ಪಡುವಣದಲ್ಲಿ
ಭೋರ್ ಮಳೆ
ಅಳಿದುಳಿದ ಚಿಕ್ಕೆ ಮೋಡಮರೆಯಲ್ಲೇ
ಮಿನುಗಿ
ಮೇಲೆತ್ತಿದ ತೆಕ್ಕೆ ಕೆಳಗಿಳಿಸುವಾಗ
ದಾರಿಯ ಮಣ್ಣೆಲ್ಲ ಕೊಚ್ಚೆ
ನೆಲದಲ್ಲೇ ಜಾರುವ ಹೆಜ್ಜೆ
ನೀಲಿ ವಿಸ್ತಾರ ಅಲ್ಲೆ ದೂರದಲ್ಲೆ
ಜಾರು ಹೆಜ್ಜೆ ಇಲ್ಲೆ ನಿಂತಲ್ಲೆ
ನಡೆಯದೆಯೇ ನಡೆದ ಹಾಗೆ.?!
ನಿಂತೂ ಮುಂದುವರೆದ ಹಾಗೆ ?!
ಇರಲಿ. ಪಾಡ್ಯದಲ್ಲಿ ಕತ್ತಲೆಯೇ.
ತದಿಗೆ ಎಂದಿಗೂ ಸುಂದರ.


(ಶೀರ್ಷಿಕೆ - ಅಡಿಗರ ಅಳುವ ಕಡಲೊಳು ಕವಿತೆಯ ಸಾಲು)

Monday, July 27, 2015

ಕಲಾಮಜ್ಜನಿಗೆ ನಮನ.

ನಮ್ಮ ಮಹಾನಗರದ ಶಾಲೆಗಳು
ತುಂಬ ಸೊಫೆಸ್ಟಿಕೇಟೆಡ್ದು.
ಅಗಲಿದ ಹಿರಿಚೇತನಕ್ಕೆ ನಮಿಸಿ
ಸರ್ಕಾರ ರಜೆ ಘೋಷಿಸಿದ್ದು
ಇವತ್ತು ರಾತ್ರಿಯೇ ಇನ್ಬಾಕ್ಸಿಗೆ ಬರುತ್ತೆ;
ಇವತ್ತು ಲೇಟಾಗಿ ಮಲಗಿದ ಪುಟ್ಟನಿಗೆ ನಾಳೆ ಬೇಗೆದ್ದರೂ ಶಾಲೆಯಿಲ್ಲ.

ನನ್ನೂರಿನ ಕೆರೆದಡದ ಶಾಲೆಗಳ ನಿಲುವೇನೋ ಗೊತ್ತಿಲ್ಲ;

ಹಳ್ಳಿಯೂರಿನ ಕನ್ನಡ ಶಾಲೆ ಹೇಗೋ ಗೊತ್ತಿಲ್ಲ.;
ಅಲ್ಲಾದರೂ ಇರಬಹುದು -
ನಿವೃತ್ತಿಯ ಹತ್ತಿರತ್ತಿರದ ಮೇಷ್ಟರು ಕೆಲವರು
ಅರ್ಧಕ್ಕೆ ಧ್ವಜ ಹಾರಿಸಿ
ಮೌನವಂದನೆ ಮಾಡಿಸಿ
ಬಂದವರಲ್ಲೇ ಒಬ್ಬಳ ಹತ್ತಿರ
ಆ ಚೇತನದ ಬಗ್ಗೆ ನಾಕಾರು ಮಾತಾಡಿಸಿ
ಮಕ್ಕಳಿಗೆ ಕಾಣಿಸದ ಹಾಗೆ ಕಣ್ಣೊರೆಸಿಕೊಳ್ಳುವವರು...ಅಲ್ಲಾದರೂ ಇರಬಹುದು..

ಅಲ್ಲಿವರೆಗೆ ಪಿಸುಗುಟ್ಟುತ್ತ
ಸರತಿ ಕೆಡಿಸಿ ಓಡಲು ಸಿದ್ಧ
ಪುಟ್ ಪುಟಾಣಿ ಕಣ್ಗಳು
ಇದನ್ನೆಲ್ಲ ಗಮನಿಸಿ
ಗಪ್ ಚಿಪ್ಪಾಗಿ ಸರತಿಯಲ್ಲಿ ನೆಟ್ಟಗೆ ನಿಲ್ಲಬಹುದು;
ಒಂದೆರಡು ಸಪೂರ ಜೀವಗಳ
ಕಣ್ಣು ಮಂಜಾಗಬಹುದು;
ಮುಂದೆಂದೋ ವಿಂಗ್ಸ್ ಆಫ್ ದಿ ಫೈರ್ ಆಗಿ ನಿಲ್ಲಬಹುದು.
ನಿಲ್ಲಲಿ.

ಮಹಾನಗರದ ಪುಟ್ಟನಿಗೆ ಇವೆಲ್ಲ ಸಿಗುವುದಿಲ್ಲ. ಬರಿಯ ರಜೆ.

ಎಲ್ಲದಕ್ಕೂ - ಗರಿಮೆಗೂ ಮತ್ತು ಅಂತಃಕರಣಕ್ಕೂ.

ಕಲಾಮಜ್ಜನಿಗೆ ನಮನ.

Tuesday, July 14, 2015

ಬದಲಾಗಲು ನಮಗೆ ಹೆದರಿಕೆ

ಬದಲಾಗಲು ನಮಗೆ ಭಯ. ಯಾಕೆಂದರೆ ಏನೆಲ್ಲ ಮಾಡಿದ ಮೇಲೂ, ಎಷ್ಟೆಲ್ಲ ಕಷ್ಟಪಟ್ಟರೂ ನಮಗೆ ನಮ್ಮ ಸುತ್ತಲ ಭವವೇ ಚೆನ್ನಾಗಿ ಗೊತ್ತಿರುವುದು.
ಅಷ್ಟೇ ಯಾಕೆ. ನಮಗೆ ನಾವಿರುವ ಸ್ಥಿತಿ ಅಂತ ಚೆನಾಗಿಲ್ಲ. ಇದೇ ಅಲ್ಟಿಮೇಟ್ ಅಲ್ಲ, ಇದು ಒಂಚೂರೂ ಚೆನಾಗೂ ಇಲ್ಲ, ನಮಗೆ ಯಾವ್ರೀತಿನೂ ಇಷ್ಟವೂ ಇಲ್ಲ ಅಂತಲೂ ಗೊತ್ತು. ಆದ್ರೆ ಇದು ಸರ್ವಕಾಲಕ್ಕೂ ಇದೇ ತರ. ಒಂದೇ ತರ.. ಯಾವುದೇ ಅನಿರೀಕ್ಷಿತಗಳಿಲ್ಲದೆ ಹಾಗೇ ಇರುತ್ತದೆ ಎಂಬ ಭರವಸೆಯೂ.
ಅದಕ್ಕಾಗಿಯೆ ನಾವು ನಮ್ಗೆ ಬೇಕೇ ಬೇಕಾದ ಕಡೆ ಒಂಚೂರು ಜರುಗಿ, ಸರಿಸಿ, ಸವರಿಸಿಕೊಂಡು ಒಂದು ಅಡ್ಜಸ್ಟ್ ಮೆಂಟಿನ ಬದಲಾವಣೆ ಬೇಕಿದ್ರೆ ಮಾಡ್ಕೊಂಡು ಇರ್ತೀವಿ. ಎಲ್ಲದೂ ಅದೇ ತರವೇ ಇರ್ಬೇಕು. ಅಂತ ಏನೂ ಬದ್ಲಾಗದ ಹಾಗೆ.. ಅದೇ ಸೂರ್ಯ ಅದೇ ಬೆಳಗು. ಅರ್ಜೆಂಟಾಗಿ ತಿರುಗುವ ಅದೇ ಗಡಿಯಾರ. ಸೆಲ್ಲು ವೀಕಾಗದ ಹಾಗೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ.
ದೂರದಲ್ಲಿ ಎತ್ತರಕ್ಕೆ ನಿಂತ ಹಸಿರುಬೆಟ್ಟಗಳು ನಮ್ಮ ಕಣ್ಣಿಗೆ ಮನಸ್ಸಿಗೆ ಖುಶಿಕೊಡುತ್ತವೆ. ಅಚಲ. ಶಕ್ತ. ಮತ್ತು ದೃಢತೆಯ ಉಪಮೆಯಾಗಿ ನಮಗವು ತುಂಬಾ ಇಷ್ಟವಾಗುತ್ತವೆ. ಅಲ್ಲಿನ ಎತ್ತರೆತ್ತರಕ್ಕೆ ಬೆಳೆದ ದೊಡ್ ದೊಡ್ಡ ಮರಗಳನ್ನು ನೋಡಿ ಕಣ್ ಕಣ್ ಬಿಡುತ್ತೇವೆ. ಒಂದು ಡೀವಿಯೇಟಿಂಗ್ ಆಲೋಚನೆ. ಅವುಗಳನ್ನ ಇದ್ದಲ್ಲಿಂದ ಕಿತ್ತು ಬೇರೆ ಕಡೆ ನೆಡುವ ಪ್ರಯತ್ನ ಮಾಡಿದಲ್ಲಿ ಬಹಳಷ್ಟು ಮರಗಳು ಸಾಯುತ್ತವೆ. ಒಳ್ಳೆಯ ನಾಟಗಳು. ಒಳ್ಳೆಯ ಬೆಲೆ.
ನಮಗೆ ಬೆಟ್ಟದಂತೆ ಇರುವಾಸೆ. ಎತ್ತರೆತ್ತರದ ದೊಡ್ಡ ಮರಗಳ ಹಾಗೆ ಬಾಳುವಾಸೆ. ದೃಢ ಮತ್ತು ಗೌರವಯುತ ಬದುಕು ಬೇಕು ನಮಗೆ.
ಹೀಗೆಲ್ಲ ಬೆಳಗಿಡೀ ಅನಿಸುತ್ತಿರುತ್ತೆ. ರಾತ್ರಿ ಕತ್ತಲ ಮಡಿಲಲ್ಲಿ ಕುಡಿಗಣ್ಣ ದೀಪದಲ್ಲಿ ಹೊರಗಣ್ಣು ಮುಚ್ಚುವಾಗ ಮಗ್ಗುಲು ಬದಲಾಗುತ್ತದೆ. ಬ್ರಾಂಡೆಡ್ ಹಾಸಿಗೆಗಳ ಗರಿ ಮುದುರದ ಹೊದಿಕೆಗಳ ಮೇಲಿನ ಬೆಚ್ಚನೆ ನಿದ್ದೆ ಮಧ್ಯದಲ್ಲಿ ಎಬ್ಬಿಸುವ ಕನಸಿನ ಕನವರಿಕೆಯೇ ಬೇರೆ.
"ಆ ಹಾರುಹಕ್ಕಿ ಎಷ್ಟ್ ಚೆಂದ. ಖಂಡಾಂತರ ಹಾರುತ್ತದೆ. ಎಲ್ಲಿ ಬೇಕೋ ಅಲ್ಲಿ ಕೂತು ಹಾಡುತ್ತದೆ. ಇವತ್ತು ಇಲ್ಲಿ. ನಾಳೆ ಬೇರೆ ಆಕಾಶ. ಮತ್ತೆ ಇನ್ನೊಂದಿನ ಹೊರಟ ಜಾಗಕ್ಕೇ ತಿರುಗಿ ಬಂದು. ಮಧ್ಯ ಮೊಟ್ಟೆ ಮರಿ... ಆಹಾ ಹೀಗಿರಬಾರದೆ ನಾನು?!
ಅಥವಾ
ಗಾಳಿಯಾಗಬಾರದೆ ನಾನು? ಎಲ್ಲಿಂದ ಬಂದೆ ತಿಳಿಯದ ಹಾಗೆ. ಎಲ್ಲಿಗೆ ಹೊರಟೆ ಎಂದು ಕೇಳದ ಹಾಗೆ. ತನಗೆ ಬೇಕಿದ್ದ ಕಡೆಗೆ ದಿಕ್ಕು ಬದಲಾಯಿಸುವ ಹಾಗೆ...ಯಾರಿಗೂ ಯಾವ ಸಮಜಾಯಿಷಿ ಕೊಡಬೇಕಿರದ ಹಾಗೆ... ?!"
ಕನಸಿನ ರಾತ್ರಿ ಮುಗಿಯುತ್ತಲೂ ಬೆಳಕು ಚಿಮ್ಮುವ ಬೆಳಗು.  ತಕ್ಷಣ ತಿಳಿವಿನ ಬೆಳಕಿನ ಪ್ರತಿಫಲನ ಎಲ್ಲೆಲ್ಲೂ.
"ವಲಸೆ ಹಕ್ಕಿಗಳು ತಮ್ಮ ನಿಜಪಯಣಕ್ಕಿಂತ ಜಾಸ್ತಿ, ಬೇಟೆಗಾರರ ಬಾಣಗಳನ್ನು ತಪ್ಪಿಸಲು ಹಾರುತ್ತಿರುತ್ತವೆ ಎಂದು. ಅವಿಟ್ಟ ಮೊಟ್ಟೆಗಳೆಲ್ಲವೂ ಮರಿಯಾಗಲಾರವೆಂದು. ಮತ್ತೆ ಯಾರಿಗೂ ಉತ್ತರ ಕೊಡಬೇಕಿರದ ಆ ಮೋಹಕ ಗಾಳಿ...ಸುಂಟರಗಾಳಿಯಾಗಿ ಬದುಕು ನುಚ್ಚು ನೂರಾಗಬಹುದು" ಎಂದು.
ಓಹ್ ಮತ್ತೆ ಸುರಕ್ಷಾ ವಲಯದೊಳಗೆ ಗಿರಕಿಹೊಡೆಯುತ್ತಿರುತ್ತೇವೆ.

ಹೌದು. ಕನಸು ಕಾಣುತ್ತಿರುವುದೇ ಒಳ್ಳೆಯದು. ಕನಸಿನ ಬನಿ ನನಸಿಗಿಳಿಸಲು ಇನ್ನೂ ತುಂಬ ದಿನ ಇದೆ. ನಾಳೆಗಳು ತುಂಬ ಇವೆ ಎಂದು ನಂಬುತ್ತಾ.. ಹಕ್ಕಿ ಹಾರಿದ ಊರಿಗೆ ಹೋಗಲು ಪಯಣ ಇಟಿನರರಿ ತಯಾರಿಸಲು ತುಂಬ ಸಮಯ ಇರುತ್ತದೆ. ಕನಸು ದುಬಾರಿಯಲ್ಲ. ಇವತ್ತು ರಾತ್ರಿ ಮಲಗಿದ ಕೂಡಲೇ ಹತ್ತಬಹುದು ಮಾಯಾಚಾಪೆ. ಎಷ್ಟೊಂದು ಟೈಮಿದೆ!!
ಕಷ್ಟಕ್ಕೆ ಬರುವುದು ಈ ಕನಸುಗಳನ್ನ ನನಸಿನ ಬೆಟ್ಟದ ಏರು ಹತ್ತಿಸುವಾಗ. ಮೊದಲ ಸುತ್ತಿಗೇ ಏದುಸಿರು. ಮರಳಿ ಮನೆಗೆ. ದಿನ ಕೊನೆಯಾಗಿ ಇರುಳು ತಬ್ಬುವಾಗ ಕನಸು ಕಂಡರೆ ಸಾಕು. ಸಾಹಸ ಯಾಕೆ ಬೇಕು? ರಿಸ್ಕು ತಗೊಳ್ಳುವುದು ಹಣಹೂಡಿಕೆಗೆ ಮಾತ್ರ ಎಂಬ ಸೂತ್ರಕ್ಕೆ ನಾವು ಬದ್ಧ.

ಕೊನೆಗೂ...ಬದಲಾಗಲು ನಮಗೆ ಹೆದರಿಕೆ. ನಮಗೆ ಬೇಕಾದ ಹಾಗೆ ಬದಲಾಗಲು ತುಂಬ ಹೆದರಿಕೆ.
ಅಚ್ಚರಿ ಅಂದ್ರೆ.. ಬದುಕು ಬದಲಾವಣೆಗಳ ಸರಮಾಲೆ. ಬೆಳವಣಿಗೆಯ ಮೂಲ ಸ್ರೋತವೇ ಬದಲಾವಣೆ. ಆದರೆ ಬದಲಾವಣೆಯನ್ನ ನಾವಾಗಿಯೇ ಬಯಸಿ ಹೊಂದಲು ಸಿಕ್ಕಾಪಟ್ಟೆ ಭಯ.
ನನ್ನ ನಡೆಗೆ ಇನ್ಯಾರದ್ದೋ ಜವಾಬ್ದಾರಿ ಇದ್ರೆ ಅಷ್ಟೇ ಅನುಕೂಲ ಅಂತ ಬಹುಶಃ ಎಲ್ರೂ ಅಂದ್ಕೋತಾ ಇರ್ತೀವೋ ಏನೋ..

ಪಾವ್ಲೋ ಕೊಯ್ಲೋನ ಈ ಲೇಖನ ಓದಿ .. ಪ್ರಯತ್ನಿಸಿದ ಭಾವಾನುವಾದ. http://paulocoelhoblog.com/2015/04/03/afraid-to-change-2/