Tuesday, June 7, 2016

ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ

ಮಂಕಾದ ಹಗಲು
ಇಳಿಬಿದ್ದ ಹೆಗಲು
ತಿರುವಿನಲ್ಲಿ ಸಿಕ್ಕ ದಿನ
ಹೊರಟ ಪಯಣಕ್ಕೆ
ದಾರಿ ನೂರಿದ್ದವು
ಏರು ಹೆಜ್ಜೆ, ಬೆಟ್ಟ ಕೊಳ್ಳ
ತುಂಬಿ ಹರಿವ ಹಳ್ಳ
ಬಯಲು ಹೊಕ್ಕವರು
ಇಟ್ಟ ಹೆಜ್ಜೆಗಳ ಹಿಂದೆ
ದೂರದಾರಿ ಮಲಗಿದೆ
ನೆಲೆನಿಂತ ತಾವಿನ
ತುಂಬ ಕುಹೂಗೀತ
ಸ್ಥವಿರಗಿರಿಯ ಚಲನದಾಸೆಯೂ
ಬಿಸಿಯೇ ಘನವಾಗಿ ಸುರಿವ ತಣ್ಬನಿಯೂ
ಜತೆಜತೆಗೆ
ಹಿನ್ನೆಲೆಗೆ ಹೆದ್ದೆರೆಗಳ ಕಡಲು

ಮಂಕಾದ ಹಗಲು
ಇಳಿಬಿದ್ದ ಹೆಗಲು
ನಿನಗೆ ಅಲ್ಝಮೈರು
ನನಗೆ ಪಾರ್ಕಿನ್ಸನ್ನು
ಒಂದೇ ಉಸಿರಿಗೆ ಹತ್ತಿಳಿದ ಬೆಟ್ಟಮಗ್ಗುಲು
-ಗಳ ಮರೆತು ಈಗ ನೋಯಿಸುವ ಬೆನ್ನು

ಮಂಕಾದ ಹಗಲು
ಇಳಿಬಿದ್ದ ಹೆಗಲು
ಸುಖಾಸುಮ್ಮನೆ ನೋಯಿಸುವ ಗಿಬ್ರಾನು
ನಮ್ಮಿಂದಲೇ ಬಂದವರು ನಮ್ಮವರಲ್ಲ
ನಮ್ಮನ್ನ ತಂದವರು ನಮ್ಮವರಾಗಿಲ್ಲ
ದಾರೀಲಿ ನೆನೆದು ಕೈ ಕೈ ಹಿಡಿದವರು
ಧಾರೀಲಿ ನೆನೆದ ಕೈ ಕೈ ಹಿಡಿದವರು
ಜತೆಯಲಿದ್ದೂ ಜತೆಯಲಿಲ್ಲ.
ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ
ಎಲ್ಲ ಚಲನಶೀಲತೆಗೆ ಒಂದೇ ಮೂಲೆ - ದೇವ ಮೂಲೆ
ನುಡಿಯದಲೆ ಮುತ್ತಿನ ಹಾರದಂತಿರಬೇಕು
ಬಾಯಿಬಿಟ್ಟರೆ ಬಣ್ಣಗೇಡು.

ಹೀಗಾಗಿಯೇ..
ಮಂಕಾಗಿದೆ ಹಗಲು
ಇಳಿಬಿದ್ದಿದೆ ಹೆಗಲು

ಇನ್ನೇನು ಶಾಲೆಬಿಡುವ ಹೊತ್ತು
ಬಣ್ಣ ಬಣ್ಣಗಳ ಕಾಮನಬಿಲ್ಲು ಬರಬಹುದು ಇವತ್ತು.
ಮಂಕು ಹಗಲು ದಿಢೀರನೆ
ಓಕುಳಿ ಸಂಜೆಯಲ್ಲಿ ಜಾರಿ
ನೀಲಿಗಪ್ಪಾಗಿ ಹರಡಿ
ಮಳೆನಿಂತು ಮಿಂಚಬಹುದು ಅಲ್ಲಲ್ಲಿ ಒಂದೊಂದು ಮುತ್ತು.

[[[ ಬೇಂದ್ರೆಯಜ್ಜನ ಪ್ರಸಿದ್ಧ ಸಾಲು ದಾರಿಲೆ ನೆನೆದ ಕೈ ಹಿಡದಿ ನೀನು. (ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯಿಂದ) ಇದನ್ನು ನಾನು ಈ ಕವಿತೆಯ ಲಹರಿಗೆ ತಕ್ಕಂತೆ ಉಪಯೋಗಿಸಿದ್ದೇನೆ. ಅಲ್ಲಿ ಬೇರೇನೇ ಉಪಯೋಗಿಸಿದರೂ ಅರ್ಥನಷ್ಟವೆನಿಸಿದ್ದರಿಂದ.]]]

2 comments:

sunaath said...

ಪೂರ್ವಸೂರಿಗಳ ಪದಪುಂಜಗಳನ್ನಾಗಲಿ, ವಾಕ್ಯಗಳನ್ನಾಗಲಿ ನಮ್ಮ ಸಾಹಿತ್ಯದಲ್ಲಿ ಸೇರಿಸಿಕೊಳ್ಳುವುದು, ಅವರನ್ನು ಕೃತಜ್ಞತೆಯಿಂದ ನೆನೆಯುವ ಒಂದು ಅಪ್ರತ್ಯಕ್ಷ ರೀತಿಯೇ ಆಗಿದೆ. ಇದನ್ನು ಸ್ವತಃ ಬೇಂದ್ರೆಯವರ ಹಾಗು ಬಸವಣ್ಣನವರ ಸಾಹಿತ್ಯದಲ್ಲಿ ನೋಡಬಹುದು. ಬೇಂದ್ರೆಯವರ ಕಾವ್ಯದಲ್ಲಂತೂ, ಅನೇಕ ಪೂರ್ವಸೂರಿಗಳು ವೇಷ ಬದಲಿಸಿಕೊಂಡು, ಮತ್ತಷ್ಟು ಚೆಲುವಾಗಿ ಮಿಂಚಿದ್ದಾರೆ. ಈ ರೀತಿಯು ಸರಿಯಾದ ರೀತಿಯೇ ಆಗಿದೆ. ಇದನ್ನು ಸಾಧಿಸುವುದು ಸುಲಭವೇನಲ್ಲ. ನಿಮ್ಮನ್ನು ನಾನು ಖುಶಿಯಿಂದ ಅಭಿನಂದಿಸುತ್ತೇನೆ.

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ,
ನಿಮ್ಮ ಈ ಅನಿಸಿಕೆಗಳಿಗೆ ನಾನು ಋಣಿ ಇದ್ದೇನೆ.
ನನ್ನ ಕವಿತೆಗಳ ಸ್ಫೂರ್ತವಾದ ವೈಯಕ್ತಿಕ ಅನುಭವಗಳ ಕಂಟೆಕ್ಸ್ಟ್ ಅದರ ಮಿತಿಯೇ ಇರಬಹುದೆ ಅನ್ನಿಸುತ್ತಿರುತ್ತದೆ ನನಗೆ.
ನಿಮ್ಮ ಜೊತೆಗೆ ಮಾತನಾಡಲಿಕ್ಕೆ ಎಷ್ಟೆಲ್ಲ ಇದೆ. ಎಂದು ಬರಲಾಗುವುದೋ ನಿಮ್ಮ ಬಳಿಗೆ ಅನಿಸುತ್ತಿದೆ.
ಪ್ರೀತಿಯಿಂದ,
ಸಿಂಧು