Monday, February 6, 2017

ಮಾರ್ದವ

ವಾಷಿಂಗ್ ಮಶೀನಿನ ಫಿಲ್ಟರಲ್ಲಿ
ಒಂದಿಷ್ಟು ನೂಲುಕಸ ಕೂತಿರುತ್ತೆ
ವಾರಕ್ಕೊಮ್ಮೆ ತೆಗೆದು ತೊಳೆದು
ಮತ್ತದರದೇ ಜಾಗದಲ್ಲಿ ಫಿಲ್ಟರ್ ಕೂರಿಸುವುದು
ಬಟ್ಟೆ ಒಗೆಯುವಷ್ಟೇ ಮುಖ್ಯ.
ಇವತ್ತು ಕಸ ತೆಗೆಯುವಾಗ
ಪ್ರಪಂಚದಾದಿಯಿಂದ ಇರುವ ಅಚ್ಚರಿ
ನನ್ನ ಕಣ್ಣಳತೆಯಲ್ಲಿ!!!
"ಕಸದ ಮಧ್ಯೆ ಪಚ್ಚೆಮೊಳಕೆ"
ಎಲ್ಲ ಸೃಷ್ಟಿಕ್ರಿಯೆಗೂ ಬೇಕಿರುವುದು
ಒಂದಿಷ್ಟು ತೇವ.
ಅಂತಃಕರಣ..

ಇದೆಲ್ಲ ಮೇಲಿನ ವಿಷಯ
ಒಳಗಿನ ಮಾತೇನು?!!

ಎವೆ ದಾಟಿ ಕೆಳಗಿಳಿಯಿದ
ನನ್ನ ಕಣ್ಣಿನ ತೇವ
ನಿನ್ನ ಬಿರಿದ ಮನದಲ್ಲಿ
ಒರತೆಯುಕ್ಕಿಸಿರಬಹುದೆ
ಎಂದು ಅನಿಸುತ್ತಿರುವ ಈ ಕ್ಷಣ
ತುಸುದೂರವಿದ್ದರೆ ಮಾತ್ರ ಮೂಗಿಗಡರುವ
ರಾತ್ರಿರಾಣಿಯ ಘಮದಲ್ಲಿ ತೋಯ್ದಿದೆ
ಶ್!! ಎಂದು ಬಾಯ ಮೇಲೆ ಬೆರಳಿಟ್ಟಿದೆ.

Tuesday, January 17, 2017

ಸಂಪಿಗೆಸರ

ಸಾಗರದ ಬಸ್ನಿಲ್ದಾಣ,
ಗಿಜಿಗುಟ್ಟುವ ಬಸ್ಸು
ಒಂದು ಕಾಲೂರಿ
ಪಕ್ಕದ ಕಂಬಿಗಾತು ನಿಂತ ಪಯಣ
ಹೆದ್ದಾರಿಯಾಸಿ ನಿಲ್ಲಿಸುವರು:
ಯಾರ್ರೀ ಸಂಪ್ಗೆಸರ, ಸಂಪ್ಗೆಸರ.
ಇಳಿಜಾರಿನ ಮಣ್ಣರಸ್ತೆಯಲ್ಲಿ
ಪುಟುಪುಟು ಹೆಜ್ಜೆ
ಕೊನೆಯಾಗುವಾಗ
ದೊಡ್ಡ ದಣಪೆಯಾಚೆ ಹರವಿದ ಅಂಗಳಕ್ಕೆ
ಕಟ್ಟಿದ ಮನೆಯ ಚಿಟ್ಟೆಯಲ್ಲಿ
ಬಂದ್ಯನೇ ಅಮೀ.. ಬರ್ರೇ ಆಸ್ರಿಗೆಂತು
ಸಡಗರಿಸುವ ಜೀವ.
ಮುಳುಗಡೆಯಾದ ಬದುಕನ್ನು
ಅಬ್ಗತ್ತಿ ನಿಂತು ಮೇಲೆತ್ತಿಸಿದ ಗಟ್ಟಿ ಜೀವ-
-ದ ಮನಸು ಹೂಮೆತ್ತಗೆ
ಕಿಲಿಕಿಲಿಸಿ ನಕ್ಕು ಬಾಳೆತುಂಬ ಬಡಿಸಿ
ಹಪ್ಳ ತಿನ್ನು, ಮನ್ಯಷ್ಟೇ ಮಾಡಿದ್ದು
ಎಂದು ಕರಿಕರಿದು ಬಡಿಸಿ
ಸಂಜ್ಯಾಗುತ್ಲೂ
ಅಮೀ ಒಬ್ಳೆ ಓದ್ತ್ಯಲೆ, ಎಂಗಕ್ಕೂ ಹೇಳೆ,
ಮುಚುಕುಂದ ಗುಹೆಯಲ್ಲಿ
ಕೃಷ್ಣನ ಗೆಲುವು ಕೇಳುತಲೆ
ಕಣ್ಣೀರು ಸುರಿಸಿ....
ನಸುನಕ್ಕ ಬಾಯಿ ಬೊಚ್ಚಾಗಿ
ಬೆನ್ನು ಬಾಗಿ,
ಕಣ್ಣದೀಪ ಮಸುಕಾಗಿ,
ಅರಿವು ಮರೆವಾಗಿ
ನೂರ್ಹತ್ತು ವರುಷಗಳು ಮೊದಲ ತೊದಲಾಗಿ
ಮಲಗಿದ ಸಂಪ್ಗೆಸರದ ಅಮ್ಮಮ್ಮ
ನಿನ್ನೆ ರಾತ್ರಿ ಬಂದಲ್ಲಿಗೇ ಹೋದಳು.
-*-

ಕಥೆ ಕೇಳುವವರ ರುಚಿ ಮತ್ತು ಉಲ್ಲಸದ ಅರಿವು ನನಗೆ ಮೂಡಿಸಿದ ಅಮ್ಮಮ್ಮಾ ಹಗ್ಸ್.


Tuesday, November 8, 2016

ಗಾಳಿ ಹೆಜ್ಜಿ ಹಿಡಿದ ಸುಗಂಧ...

ಎಷ್ಟೋ ಬಾರಿ ನಕ್ಕು ಕಲೆತು
ಮತ್ತೆಷ್ಟೋ ಪ್ರಶ್ನೋತ್ತರಗಳು ಕುಳಿತು
ಜೊತೆಜೊತೆಗೆ ನಡೆವಾಗ
ಮಾತು ಮಾತಿಗೆ ಮಲೆತು
ಹಾಗೀಗೇ ಓಡಾಡಿಕೊಂಡಿದ್ದ
ಇವೆರಡು ಕಣ್ಣು
ಅವತ್ಯಾಕೋ
ಎಚ್ಚರ ತಪ್ಪಿ ಬಿದ್ದೆದ್ದು
ನಿನ್ನ ಕಣ್ಣ ಕಾಳಜಿಯ
ಕೊಳದಲ್ಲಿ ಹೊಕ್ಕು
ಮತ್ತೆಂದೂ ತೊರೆಯದ ಹಾಗೆ...

ಮತ್ತೆ ಮತ್ತೆ ನೋಟದ ಕರೆಂಟು
ಹರಿದು....
ಫಿಲಮೆಂಟು ಉದುರಿದ ಬಲ್ಬಿನಲ್ಲೂ
ದೀಪ ಉರಿದ ಜಾದು

ಇವತ್ತು ನೀನು ರಾಗವಾಗಿ ಹಾಡುತ್ತೀ...
"ಪ್ರಣತಿ ಇದೆ. ಬತ್ತಿ ಇದೆ.
ಜ್ಯೋತಿ ಬೆಳಗುವೊಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ..." ಎಂದು..

(ಪ್ರಣತಿ ಇದೆ ಬತ್ತಿ ಇದೆ... ಇದು ಅಲ್ಲಮನ ವಚನ. ವೆಂಕಟೇಶ ಕುಮಾರರ ದನಿಯಲ್ಲಿ ಹರಿದ ಸುಧೆ.)

Tuesday, October 25, 2016

ಉಪ ನಿಷತ್

ಹತ್ತಿರವಿರು
ಇಲ್ಲೆ ಬಳಿಯಲ್ಲಿ,
ದೂರವಿರಲಿ
ಮಾತು, ಹೊರನೆಗೆದಾಟ

ದನಿಯೊಡೆಯದೆಯೂ
ಕೇಳಬಲ್ಲೆನಾದರೆ,
ಮುಟ್ಟದೆಯೂ
ಅರಿಯಬಲ್ಲೆನಾದರೆ,
ನೋಡದೆಯೂ
ಕಾಣಬಲ್ಲೆನಾದರೆ,
ಅಷ್ಟು ಸಾಕು
ಈ ಬದುಕಿಗೆ.
ಉಳಿದದ್ದೆಲ್ಲ
ತಮ್ಮ ತಮ್ಮ ಪಾಡಿಗೆ
ಇರಲಿ ಹಾಗೆಯೇ ಚೆಂದಕೆ

ಎಳೆತನವೆ ಸೊಗಸು
ಮಾಗಿದ ಬದುಕಿಗೆ.

Tuesday, October 18, 2016

ಸರಸತಿಯ ಹೂದೋಟದಲ್ಲೊಂದು ಸುತ್ತು

ಬದಿಗಿಟ್ಟ ಚೀಲ
ಆರಿಸಿಟ್ಟ ಫೋನು
ಊರದಂತೆ ಇಟ್ಟ ಹೆಜ್ಜೆ
ಇವತ್ತಿನ ಮೋಡದಲ್ಲಿ
ಹನಿಯಿಳಿಯುತ್ತಿರುವ ಅವತ್ತು

ಸಾಲು ಸಾಲುಗಳಲ್ಲಿ
ಪೇರಿಸಿಟ್ಟ ಭಂಡಾರ
ಅಚ್ಚುಬೆಲ್ಲಕ್ಕೆ ಮುತ್ತಿದಂತೆ ಇರುವೆ
ಮೇಜದ ಸುತ್ತ ಜವಾನಿ,
ಶಬ್ಧ ಕೂಡದು,
ಕೂಡಿದ ಕಣ್ಣು ಕದಲದು,
ಬರಿದೆ ಪುಸ್ತಕ ಕೈಯಲ್ಲಿ ಪೆನ್ನು,
ಸ್ಕ್ಯಾನಾಗುತ್ತಿರುವ ಚಿತ್ರಗಳು,
ಹರವಿಕೊಂಡ ಪುಸ್ತಕಗಳ ಮುಂದೆ-
ಕುರ್ಚಿಗೊರಗಿದ ಬೆನ್ನು.

ಮಧ್ಯಾಹ್ನದ ಬಿಸಿಲಲ್ಲಿ
ರಸ್ತೆಯಲ್ಲಿ ಹೊಳೆದಂತೆ ಮರೀಚಿಕೆ
ಅಚಾನಕ್ ಭೇಟಿಯಲ್ಲಿ
ನೆನಪುಗಳೆಲ್ಲ ಮಿಂಚಿ ಮಸುಕಾಗುತ್ತಿರುವ
೨೦ ವರುಷಗಳ ಹಿಂದಿನ
ಸೆಂಟ್ರಲ್ ಲೈಬ್ರರಿ
ಕೆಂಪು ಕಟ್ಟಡದ
ಒಳಗೆ ಮುಟ್ಟಿಯೂ ಮುಟ್ಟದಂತೆ
ಸುಳಿದುಹೋದ ಎಳವೆಯ ನರುಗಂಪು.

Friday, October 14, 2016

ಹರಿಗೋಲು

ಕಡುಗತ್ತಲ ಹಿನ್ನೆಲೆಯಲ್ಲಿ
ಹೊಳಪಾಗಿ ನಗುವ ಬೆಳದಿಂಗಳು
ಆವರ್ತಕ್ಕೊಮ್ಮೆ ಬದಲಾಗುವ ಕಾಲ
ಬೆಳೆಯುವ ಕರಗುವ ಚಂದ್ರಬಿಂಬ
ಸದ್ದು ಮಾಡದೆ ಹರಿವ ಹೊಳೆಯ
ಜತೆಗೆ ಸರಿವ ಗಾಳಿ
ಬಾಗಿ ತೊನೆಯುವ ಮರಗಳು
ದಡದಿಂದ ದಡಕ್ಕೆ
ದಾಟಿಸುವ ಅಂಬಿಗನ ದೋಣಿ
ಸುಮ್ಮನೆ ದೂಡಿದಂತೆ ಅನಿಸುವ
ಹರಿಗೋಲು ಇಲ್ಲದೆ ದಾಟಬಹುದೆ
ಈಜಬಲ್ಲವರು ಬಹಳವಿದ್ದರೂ
ದಿನದಿನದ ಓಡಾಟಕಿದೆ ಸಹಜ
ಎನಿಸುವ ಊರಿನಂಚಿನ
ಬಯಲ ದಿಬ್ಬದಲಿ ನಾನು:
ಹರಿವ ಹೊಳೆ,
ಸರಿವ ಗಾಳಿ,
ತೊನೆವ ಮರ,
ಕಾಲ ಕೆಳಗೆ ಅಲುಗುವ ಹುಲ್ಲು,
ನಿಶ್ಚಲ ನೆಲದಲ್ಲಿಯೇ ಸರಿಯುವ ಮಣ್ಣು.

ಹರಿಗೋಲು ದೋಣಿಗೆ ಮಾತ್ರವೇ ಬೇಕೆ?

ಹೀಗೆಲ್ಲ ಯೋಚಿಸುವಾಗ ಇಂದು
ಕದ್ದಿಂಗಳ ರಾತ್ರಿ.
ಬೆಳ್ದಿಂಗಳಿಗಿಂತ ಮೋಹಕ
ಆಗಸದಲ್ಲಿ ಬೆರಳಿಡಲು ಜಾಗವಿಲ್ಲದಷ್ಟು ಮಿನುಗು ಚುಕ್ಕಿ
ವೈರುಧ್ಯಗಳಲ್ಲೂ ಎಷ್ಟೊಂದು ಸೊಗಸು.

ನದಿಯ ಮೇಲುದ ಸರಿಸಿದ ಗಾಳಿ
ಇಲ್ಲಿ ಕಾಲ ಕೆಳಗಿನ ಹುಲ್ಲನ್ನೂ ಅಲುಗಿಸುತ್ತಿದೆ.
ಹೊಳೆಹರಿದು ದಣಿವಾಗಿ ಬೆವರಿಳಿದಂತೆ
ನಿಂತವಳ ಹಣೆಯ ಮೇಲೆ ಸಾಲುಮಣಿ.